ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ತರುವ ಶಕ್ತ್ಯಾಯುಧಗಳು
ತನ್ನ ಪಾಲಕರು ತನ್ನನ್ನು ಪ್ರಶಂಸಿಸಬೇಕು ಎಂಬುದು ಪ್ರತಿ ಮಗುವಿನ ಕನಸು… ಹಾಗೆಯೇ ತಮ್ಮ ಮಕ್ಕಳ ನಡವಳಿಕೆ ನಾಲ್ಕು ಜನ ಮೆಚ್ಚುವ ಆಗಿರಬೇಕು ಎಂಬುದು ಪಾಲಕoರ ಆಶಯ. ಮಕ್ಕಳ ಕ್ರಿಯೆಗಳನ್ನು ಅವಹೇಳನ ಮಾಡದೆ, ಶಿಕ್ಷೆ ಕೊಡದೆ ಭಾವನಾತ್ಮಕವಾಗಿ ಅವರಲ್ಲಿ ಶಿಸ್ತನ್ನು ತರುವ, ಆತ್ಮವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಪಾಲಕರು ಕಾರ್ಯನಿರ್ವಹಿಸಲೇಬೇಕು ಎಂದು ಖ್ಯಾತ ಲೇಖಕಿ ಸಾರಾ ಓಕ್ವಲ ಸ್ಮಿತ್ ಹೇಳುತ್ತಾಳೆ.
ನಿಜವಲ್ಲವೇ ಆಕೆಯ ಮಾತುಗಳು.
ಪ್ರೀತಿಯ ಮಾತು, ವಾತ್ಸಲ್ಯದ ಸಿಂಚನ, ಮಮತೆಯ ಮಡಿಲುಗಳು ಮಕ್ಕಳನ್ನು ಭಾವನಾತ್ಮಕವಾಗಿ ಒಳಗೊಳ್ಳುವ ಮೂಲಕ ಅವರಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು.
ಮಕ್ಕಳ ಮಾನಸಿಕತೆಯನ್ನು ಅರಿಯುವ ಮೂಲಕ ಮಕ್ಕಳ ನಡವಳಿಕೆಯಲ್ಲಿ ತರಬಹುದಾದ ಬದಲಾವಣೆಗಳು ಇಂತಿವೆ
ಪಾಲಕರು ಮತ್ತು ಮಕ್ಕಳ ನಡುವೆ ಭಾವನಾತ್ಮಕ ಸಂಬಂಧ ಬಲವಾಗಿರಬೇಕು. ಭಾವನಾತ್ಮಕ ಬಂಧವು ಮಕ್ಕಳಲ್ಲಿ ನಂಬಿಕೆ, ಸುರಕ್ಷಿತ ಮನೋಭಾವವನ್ನು ಮೂಡಿಸುವ ಮೂಲಕ ಮಕ್ಕಳು ತಮ್ಮ ಪಾಲಕರ ಸಲಹೆ ಮತ್ತು ಶಿಸ್ತು ಬದ್ದತೆಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ.
ಮಗುವಿನ ದೈಹಿಕ ಬೆಳವಣಿಗೆಯ ಹಂತಗಳು ಪಾಲಕರಿಗೆ ಖಂಡಿತವಾಗಿಯೂ ಗೋಚರವಾಗುತ್ತದೆ ಆದರೆ ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಅರಿಯುವುದರ ಜೊತೆಗೆ ಯಾವ ವಯಸ್ಸಿನಲ್ಲಿ ಮಕ್ಕಳಿಂದ ಏನನ್ನು ನಿರೀಕ್ಷಿಸಬಹುದು ಮತ್ತು ಹೇಗೆ ಪ್ರತಿಕ್ರಿಯಿಸಬಹುದು ಎಂಬುದರ ಅರಿವನ್ನು ಹೊಂದಿರುವುದು ಅತ್ಯವಶ್ಯಕ
ಮಕ್ಕಳಲ್ಲಿ ಧನಾತ್ಮಕ ಬಲವರ್ಧನೆಯನ್ನು ರೂಢಿಸುವುದು.. ಮಕ್ಕಳನ್ನು ಶಿಕ್ಷಿಸದೆ ಅವರಲ್ಲಿ ಧನಾತ್ಮಕತೆಯನ್ನು ರೂಢಿಸಿ ಅವರ ಒಳ್ಳೆಯ ನಡವಳಿಕೆಯನ್ನು ಪ್ರಶಂಸಿಸಬೇಕು.. ಮುಕ್ತವಾದ ಧನಾತ್ಮಕ ಪ್ರಶಂಸೆಯು ಮಕ್ಕಳನ್ನು ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ ಮತ್ತು ಹೊಂದಾಣಿಕೆಯ ಮನೋಭಾವವನ್ನು ಸೃಷ್ಟಿಸುತ್ತದೆ.
ಮಕ್ಕಳೊಂದಿಗೆ ಸಹಾನುಭೂತಿಯಿಂದ ವರ್ತಿಸಿ… ನಮಗೆ ಕ್ಷುಲ್ಲಕ ಮತ್ತು ತಮಾಷೆ ಎಂದೆನಿಸುವ ಎಷ್ಟೋ ಕೆಲಸಗಳು ಮತ್ತು ಕ್ರಿಯೆಗಳು ಮಕ್ಕಳ ಬದುಕಿನಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂತಹ ಸಮಯದಲ್ಲಿ ಮಕ್ಕಳನ್ನು ತಮಾಷೆ ಮಾಡಿ ಹೀಗಳೆಯದೆ ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಿ. ಮಕ್ಕಳಿಗೆ ನೀವು ಹಾಕುವ ಮಿತಿಗಳು ಕೂಡ ಅವರಿಗೆ ಹೊರೆ ಎಂದೆನಿಸದಂತೆ ಜಾಗೃತಿ ವಹಿಸಿ. ಈ ರೀತಿ ಪ್ರೀತಿ ಮತ್ತು ಗೌರವ ಪೂರ್ವಕ ಮಿತಿಗಳನ್ನು ಹಾಕುವುದರಿಂದ ಮಕ್ಕಳು ಒಪ್ಪಿಕೊಳ್ಳುವ ಮೂಲಕ ಹೊಂದಾಣಿಕೆಯ ಮನೋಭಾವವನ್ನು ತೋರುತ್ತಾರೆ.
ಸ್ವಾಭಾವಿಕವಾದ ಮತ್ತು ಪರಿಣಾಮಕಾರಿ ವಿಧಾನಗಳನ್ನು ಬಳಸಿ ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು. ತಮ್ಮ ಕ್ರಿಯೆಗಳ ಪರಿಣಾಮವನ್ನು ಅರಿಯುವ ಮಕ್ಕಳು ಹೆಚ್ಚು ಜವಾಬ್ದಾರಿಯುತರಾಗಿ ವರ್ತಿಸುತ್ತಾರೆ. ತಮ್ಮ ತಪ್ಪು ಆಯ್ಕೆಗಳು ಹೇಗೆ ತಮ್ಮ ಬದುಕಿದ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬುದರ ಕುರಿತು ಶಿಕ್ಷೆಯನ್ನು ಅನುಭವಿಸದೆ ಪಾಠ ಕಲಿಯುತ್ತಾರೆ.
‘ ನೀರಿಗಿಳಿಯದ ಹೊರತು ಈಜು ಬಾರದು’ ಎಂಬ ಮಾತು ಸತ್ಯ ಅಲ್ಲವೇ. ಬದುಕೆಂಬ ನೀರಿಗೆ ಇಳಿಯುವ ಮಕ್ಕಳು ಅದರ ಆಳ, ಅಗಲ, ಒತ್ತಡ, ಹರವನ್ನು ಅರಿಯುವ ಜಾಣ್ಮೆಯನ್ನು ತಮ್ಮದಾಗಿಸಿಕೊಳ್ಳಲಿ… ನೀವು ಸೆಕ್ಯೂರಿಟಿ ಗಾರ್ಡ್ ಗಳಂತೆ ಅವರನ್ನು ನೋಡುತ್ತಿರಿ… ಅವಶ್ಯಕತೆ ಬಿದ್ದಾಗ ಮಾತ್ರ ಸಹಾಯ ಮಾಡಿರಿ.
ಎಡವದ ಹೊರತು ಮನುಷ್ಯ ನಡೆಯಲು ಕಲಿಯಲು ಸಾಧ್ಯವಿಲ್ಲ… ನಮ್ಮ ಮಕ್ಕಳು ತಪ್ಪೇ ಮಾಡಬಾರದು ಎಂಬ ಅತಿಯಾದ ಸುರಕ್ಷತಾಭಾವ ಮಗುವಿನ ಮಾನಸಿಕ ಬೆಳವಣಿಗೆಯನ್ನು, ಯೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ
ಮಕ್ಕಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿ. ಮಕ್ಕಳು ಹೀಗೆಯೇ ಮಾಡಬೇಕು ಎಂದು ಹೇಳಿಕೊಡುವ ಬದಲು ಏನು ಮಾಡಬೇಕು ಎಂಬುದರ ಕುರಿತು ಅವರೇ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸಲಹೆ ನೀಡಿ. ಇದು ಮಕ್ಕಳಲ್ಲಿ ತಾರ್ಕಿಕ ಶಕ್ತಿಯನ್ನು ಮತ್ತು ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸುತ್ತದೆ.
ಮಕ್ಕಳಲ್ಲಿ ಸ್ವಯಂ ನಿಯಂತ್ರಣ ಶಕ್ತಿಯನ್ನು ಬೆಳೆಸಿ…
ಖುದ್ದು ಪಾಲಕರು ತಮ್ಮ ಭಾವನೆಗಳ ಮತ್ತು ಪ್ರತಿಕ್ರಿಯೆಗಳ ಮೇಲೆ ಹತೋಟಿಯನ್ನು ಇರಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಒಳ್ಳೆಯ ನಡವಳಿಕೆ ಮೂಡಲು ಮಾದರಿಯಾಗಿ. ಪಾಲಕರು ಮಕ್ಕಳ ಮೇಲೆ ಮನೆಯ ಇತರ ಸದಸ್ಯರ ಮೇಲೆ ಪದೇ ಪದೇ ಕಿರಿಚಾಡುವುದು, ಹಲ್ಲೆ ಮಾಡುವುದನ್ನು ನೋಡುವ ಮಕ್ಕಳು ತಾವು ಕೂಡ ಹಾಗೆಯೇ ವರ್ತಿಸುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಮಕ್ಕಳ ಕುರಿತು ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಮಕ್ಕಳ ಮುಂದೆ ಮಾತ್ರ ಪಾಲಕರು ಏಕಾಭಿಪ್ರಾಯವನ್ನು ಹೊಂದಿರಬೇಕು.ಪಾಲಕರಲ್ಲಿ
ಒಬ್ಬರು ಮಕ್ಕಳನ್ನು ಅತಿಯಾಗಿ ಪೋಷಿಸಿ ಮತ್ತೊಬ್ಬರು ಅತ್ಯಂತ ಕಠಿಣವಾಗಿ ನಡೆದುಕೊಳ್ಳುವುದರ ಬದಲು ಸಮಾನ ಸ್ಥಾಯಿಯಲ್ಲಿ ಮಕ್ಕಳನ್ನು ಬೆಳೆಸುವುದು ವಿಹಿತ.
ಅಂತಿಮವಾಗಿ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಕಠಿಣವಾಗಿ ನಡೆಸಿಕೊಳ್ಳದೆ ಸೂಕ್ಷ್ಮವಾಗಿ ತಿಳಿ ಹೇಳಿ ಮತ್ತೆ ಬದುಕಿನ ಕಡೆ ಮುಖ ತೋರಬೇಕು.
ಪದೇ ಪದೇ ಅವರ ತಪ್ಪುಗಳನ್ನು ಹೀಯಾಳಿಸಿ ಹೇಳುವ ಮೂಲಕ ಅವರನ್ನು ಪಾಪಪ್ರಜ್ಞೆಗೆ ಗುರಿ ಮಾಡಬಾರದು.
ಸಂಜೆ ಪಶ್ಚಿಮದಲ್ಲಿ ಮುಳುಗಿದ ಸೂರ್ಯ ಮರುದಿನ ಮತ್ತೆ ಪೂರ್ವದಲ್ಲಿ ಮತ್ತಷ್ಟು ಪ್ರಕಾಶಮಾನವಾಗಿ ಉದಯಿಸಿ ಬರುತ್ತಾನೆ ಎಂಬ ಅರಿವಿನ ಪ್ರಜ್ಞೆಯನ್ನು ನಮ್ಮದಾಗಿಸಿಕೊಂಡು ಮಕ್ಕಳನ್ನು ಬೆಳೆಸುವಾಗ ಹೊಂದಿದ್ದು ನಮ್ಮ ಮಕ್ಕಳು ನಮ್ಮ ಮುಂದಿನ ಪೀಳಿಗೆಯ ನೇತಾರರು. ಉತ್ತಮ ಮಾನಸಿಕತೆ ಮತ್ತು ಒಳ್ಳೆಯ ನಾಗರಿಕ ಪ್ರಜ್ಞೆಯ ಮಕ್ಕಳನ್ನು ಈ ಜಗತ್ತಿಗೆ ಕೊಡ ಮಾಡುವ ಸೌಭಾಗ್ಯ ನಮ್ಮದಾಗಿದ್ದು ನಮ್ಮ ಕರ್ತವ್ಯದಲ್ಲಿ ಕಿಂಚಿತ್ತು ವಿಮುಖರಾಗದೆ ಈ ಮಹತ್ಕಾರ್ಯದಲ್ಲಿ ನಿರ್ವಹಿಸೋಣ .
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ.
ಗದಗ್ ಜಿಲ್ಲೆ