ಮನದ ನೋವು ಹಿತಕರವೆ ? ಅಹಿತಕರವೆ ?
– ಸಿಕಾ
ಕೆಲವೊಮ್ಮೆ ಎಲ್ಲಾ ಮರೆತು, ನೋವು ಕೊಟ್ಟವರಿಗೆ ಹಿಂತಿರುಗಿ ನೋವು ಕೊಟ್ಟು ಬಿಡುತ್ತೇವೆ. ಹಾಗೆಯೇ ಮನಸಿಗೆ ಅಗೋಚರ ಸಮಾಧಾನ ಪಡೆದು ನಿರಾಳವಾಗುತ್ತೇವೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಆಂತರಿಕ ಶಕ್ತಿ ಉಡುಗಿ, ಗಲಿಬಿಲಿಗೊಂಡು ಅಸಮಾಧಾನವಾದುದು ಗಮನಕ್ಕೇ ಬರುವುದಿಲ್ಲ.
ನೋವು, ಯಾತನೆ, ಸಂಕಟಗಳಿಂದ ಒದ್ದಾಡಿದೆ. ಅದೆಷ್ಟೇ ಪ್ರಯತ್ನಪಟ್ಟರೂ ಇತರರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂದು ತಿಳಿದರೂ ಮತ್ತೆ ಮತ್ತೆ ಅದೇ ಪ್ರಯತ್ನದಲ್ಲಿ ಸೋಲುತ್ತೇನೆ. ಸಹನಶೀಲೆ, ಶಾಂತಮಯಿ ಎನ್ನುವ ಧಿಮಾಕು ಅಣಕಿಸಿತು. ಒಲ್ಲೆ ಒಲ್ಲೆ ಎಂದರೂ ಆ ಘಟನೆ ಇನ್ನಿಲ್ಲದಂತೆ ಕಾಡುತ್ತಿದೆ. ಏನು ಮಾಡುವುದು? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಒಳಗಿನ ಬೇಗುದಿಗೆ ಅಂತ್ಯ ಹಾಡಲು ಸಾಧ್ಯವಾಗದೆ ತೊಳಲಾಡಿದೆ. ಇನ್ನು ಎಷ್ಟು ದಿನ ಅಂತ ಈ ಕೀಸರನ್ನು ಇಟ್ಟುಕೊಂಡು ಹೀಗೇ ಮುಂದುವರಿಯುವುದು? ಇದನ್ನು ಮನೋಪಟಲದಿಂದ ಅಳಿಸಿ ಹಾಕುವ ತುರ್ತು ಈ ಕ್ಷಣದ್ದು. ಏನು ಮಾಡಲಿ? ಕ್ಷಣಗಳು, ಗಂಟೆಗಳು, ದಿನಗಳು ಉರುಳಿದವು. ಅನೇಕ ಹಿತಕರ ಮತ್ತು ಅಹಿತಕರ ಘಟನೆಗಳು ಹಾದು ಹೋದವು. ಆದರೆ ಆ ನೋವಿನ ಕ್ಷಣ, ಕರುಳು ಕಿವುಚಿದ ಸಮಯ, ಕಣ್ಣಿರ ಹನಿಯುದುರಿದ ಹೊತ್ತು, ಹೇಗೆ ಮರೆಯಲಿ? ಈ ಮರೆವಿನ ಹುಡುಕಾಟದಲ್ಲಿ ಧ್ಯಾನಕ್ಕೆ ಕುಳಿತಾಗ ಮುಚ್ಚಿದ ಕಂಗಳು ತುಂಬಿ, ಕಣ್ಣೆವೆಗಳನ್ನು ನಿಧಾನಕೆ ಸೀಳಿಕೊಂಡು ಕಂಬನಿ ಜಾರಲಾರಂಭಿಸಿತು. ಆದರೂ ಅದೇ ಧ್ಯಾನ, ಅದೇ ಭಂಗಿ ಮುಂದುವರಿಯಿತು. ಮನಸು ಹಗುರಾಗಿ ಹಿತವೆನಿಸಿತು. ಮೆಲ್ಲ ಮೆಲ್ಲನೆ ಮನದಾಳಕೆ ನೆನಪುಗಳಿಟ್ಟ ದಾಂಗುಡಿಯಿಂದ ಆಕ್ರಮಿಸಿತು. ಅದೆಷ್ಟೋ ವರ್ಷಗಳ ಹಿಂದಕ್ಕೋಡಿ ಬಾಲ್ಯದ ದಿನಗಳ ತಲುಪಿದ್ದೆ…
ಆಗ ಚಿಕ್ಕವಳಿದ್ದಾಗ ಕೆಲವು ವರ್ಷಗಳ ಕಾಲ ಮೈಸೂರಿನ ಪಡುವಾರಹಳ್ಳಿಯಲ್ಲಿ ಕಳೆಯಬೇಕಾಯಿತು. ಅಲ್ಲಿ ಅನೇಕ ಸಾರ್ವಜನಿಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಅವುಗಳಲ್ಲಿ ಹರಿಕತೆ, ಪುರಾಣ, ಪ್ರವಚನಗಳೂ ಇದ್ದವು. ಹೀಗೊಮ್ಮೆ ಕೇಳಿದ ಕತೆ ಇನ್ನೂ ಸ್ಮೃತಿಪಟಲದಲ್ಲಿ ಹಸಿರಾಗಿ ಉಳಿದಿದೆ…
ಒಬ್ಬ ಸಾತ್ವಿಕಜೀವಿ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದನು. ಅವನು ಊರಿಂದ ಊರಿಗೆ ಸಾಗುತ್ತ, ಸಾಧ್ಯವಾದಷ್ಟು ಜನರಿಗೆ ಒಳ್ಳೆಯ ಸಂದೇಶ ನೀಡುವುದು, ಮನಸು ಪರಿವರ್ತಿಸುವುದು, ಇತ್ಯಾದಿ ಪರೋಪಕಾರ ಮಾಡುತ್ತಿದ್ದನು. ಹೀಗೆ ಹೋಗುವಾಗ ಒಂದು ದಿನ ಬಾಯಾರಿದಾಗ ನೀರು ಕುಡಿಯಲು ನದಿಯ ಬಳಿಗೆ ಹೋಗುತ್ತಾನೆ. ನೀರಿಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲೊಂದು ಚೇಳು ಕಾಣಿಸುತ್ತದೆ. ಅದೇ ತಾನೆ ನೀರಿಗೆ ಬಿದ್ದು ಒದ್ದಾಡುತ್ತಿರುವಂತೆ ಭಾಸವಾಗುತ್ತದೆ. ಕೂಡಲೆ ಈ ಸಾತ್ವಿಕಜೀವಿ, ಒಂದು ಎಲೆಯನ್ನು ತೆಗೆದುಕೊಂಡು ಚೇಳಿಗೆ ಅನುವಾಗುವಂತೆ ಹಿಡಿಯುತ್ತಾನೆ. ಆಗ ಚೇಳು ಎಲೆಯ ಮೇಲೆ ಬರುತ್ತದೆ. ಅವನ ಕೈಯನ್ನು ಕುಟುಕುತ್ತ, ರಭಸದಿಂದ ಮತ್ತೆ ನೀರಿನೊಳಗೆ ಬಿದ್ದು ಒದ್ದಾಡಲು ಆರಂಭಿಸುತ್ತದೆ. ಸಾತ್ವಿಕಜೀವಿ ಮತ್ತೆ ರಕ್ಷಣೆಗೆ ಮುಂದಾಗುತ್ತಾನೆ. ಹೀಗೇ ಮುಂದುವರಿದು ಮೂರು ಬಾರಿ ಚೇಳು ಕುಟುಕುತ್ತದೆ. ನಂತರ ಸಾತ್ವಿಕಜೀವಿ ತನ್ನ ಹಠ ಬಿಡದೆ ಆ ಚೇಳನ್ನು ಬಂಡೆಯ ಮೇಲೆ ಬಿಟ್ಟು, ನೀರು ಕುಡಿದು, ತನ್ನ ಕರವಸ್ತ್ರದಿಂದ ಭುಜಕ್ಕೆ ಗಟ್ಟಿಯಾಗಿ ಬಿಗಿದು, ವಿಷ ಏರದಂತೆ ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗ, ಇದನ್ನು ಗಮನಿಸುತ್ತಿದ್ದ ಯಾತ್ರಿಕನೊಬ್ಬ ಬಂದು ಕಟ್ಟುತ್ತಾನೆ. ಆಗ ಆ ಯಾತ್ರಿಕನನ್ನು ಧನ್ಯತಾ ಭಾವದಿಂದ ಸಾತ್ವಿಕಜೀವಿ ನೋವಿನಲ್ಲೂ ನೋಡಿ ತಲೆಬಾಗುತ್ತಾನೆ. ಯಾತ್ರಿಕನಿಗೆ ಆಶ್ಚರ್ಯವಾಗಿ ಕೇಳುತ್ತಾನೆ,
“ಅಲ್ಲಯ್ಯ ನೀನು ಸಾತ್ವಿಕಜೀವಿ ಎನ್ನುವುದು ನನಗೆ ತಿಳಿಯುತ್ತದೆ. ಆದರೆ ಚೇಳು ಕುಟುಕುತ್ತದೆ, ಅದರ ಬಾಲದ ಕೊಂಡಿಯಲ್ಲಿ ವಿಷವಿರುತ್ತದೆ, ಕುಟುಕಿಸಿಕೊಂಡರೆ ನೋವಾಗುತ್ತದೆ, ಇದು ಸಾಮಾನ್ಯ ಜ್ಞಾನ, ಆದರೂ ಅದನ್ನು ರಕ್ಷಿಸುವ ಪ್ರಮೇಯವೇನಿತ್ತು? ಸಾಧು ಪ್ರಾಣಿಯಾದರೆ ರಕ್ಷಿಸಬಹುದಿತ್ತು. ಆದರೆ ಚೇಳನ್ನು ರಕ್ಷಿಸುವ ಅಗತ್ಯವಿತ್ತೆ?”
ಆಗ ನೋವಿನಿಂದ ಕೈಯನ್ನು ಝಾಡಿಸುತ್ತ ಸಾತ್ವಿಕಜೀವಿ ಹೇಳಿದ, “ಕುಟುಕುವುದು ಚೇಳಿನ ಹುಟ್ಟು ಗುಣ. ರಕ್ಷಿಸುವುದು ಮನುಷ್ಯನ ಮಾನವೀಯ ಗುಣ” ಎಂದು ನೋವಿನಲ್ಲೂ ತಿಳಿನಗೆ ಬೀರುತ್ತ ಹೇಳಿದಾಗ, ಯಾತ್ರಿಕ ಮೂಕವಿಸ್ಮಿತ!
“ಇನ್ನೇನು ಮುಂದಿನ ಊರು ಬರುತ್ತದೆ. ನಾಟಿ ವೈದ್ಯರನ್ನು ಕಂಡು ಉಪಶಮನ ಮಾಡಿಕೊಳ್ಳುವೆ, ಚಿಂತಿಸ ಬೇಡಿ.”
ಯಾತ್ರಿಕನಿಗೆ ಇವನ ಒಳ್ಳೆಯತನ ಕಂಡು ಸಂಕಟವಾಗುತ್ತದೆ. “ಅಯ್ಯೋ ಈ ನೋವನ್ನು ಹೇಗೆ ತಡೆದುಕೊಳ್ಳುವಿ? ಬಾ ಬಾ ಬೇಗನೆ ಹೋಗೋಣ…”
ಅದಕ್ಕೆ ಸಾತ್ವಿಕಜೀವಿ ಹೇಳುತ್ತಾನೆ, “ಈ ನೋವು ಹಿತಕರವಾಗಿದೆ. ಪರೋಪಕಾರ ಮಾಡಿದ ಸಂತೃಪ್ತಿಯಿದೆ, ಚಿಂತೆ ಬೇಡ” ಎನ್ನುತ್ತ ಹೆಜ್ಜೆ ಹಾಕಿದ. ಇಬ್ಬರೂ ಊರು ತಲುಪಿದರು. ವೈದ್ಯರ ಭೇಟಿಯಾಗಿ ಶುಶ್ರೂಷೆ ಪಡೆದು, ನಿರಾಳವಾಗಿ ನಿಟ್ಟುಸಿರುಬಿಟ್ಟರು. ಆದರೆ ಸಾತ್ವಿಕಜೀವಿಯ ಮುಖ ಮಾತ್ರ ತನ್ನ ಪ್ರಸನ್ನತೆಯನ್ನು ಹಾಗೇ ಕಾಪಿಟ್ಟುಕೊಂಡಿತ್ತು.
“ಎಂಥ ಮನುಷ್ಯನಯ್ಯ ನೀನು!!! ನೋವಿನಲ್ಲೂ ಹಿತವ ಕಾಣುವ ನಿನಗೆ ಏನು ಹೇಳಬೇಕು?” ಎನ್ನುತ್ತ, ಕೂಡಲೆ ಕಾಲಿಗೆರಗಿ, “ನಿನ್ನಂತೆ ನನಗೂ ಸಹನೆ, ತಾಳ್ಮೆ, ಸಹಿಸುವಿಕೆ, ಪರೋಪಕಾರ ಮಾಡುವ ಗುಣ ಕಲ್ಪಿಸು” ಎಂದಾಗ ಅವನನ್ನು ಹಿಡಿದೆತ್ತಿ, “ಬೇಡುವುದಾದರೆ ಆ ಪರಮಾತ್ಮನಲ್ಲಿ ಬೇಡು” ಎಂದು ಹೇಳುತ್ತ, ಅಲ್ಲಿಂದ ಮುಂದೆ ಸಾಗುತ್ತಾನೆ.
ಈ ಕತೆ ಇಂದು ಧ್ಯಾನದಲ್ಲಿ ಬಹಳ ಕಾಡುತು. ಎಂದೋ ಬಾಲ್ಯದಲ್ಲಿ ಕೇಳಿದ್ದು ನೆನಪಾಗಬೇಕಾದರೆ, ಅಷ್ಟೇ ಬಲವಾದ ಕಾರಣವೂ ಇದೆ. ನೋವು ಕೊಟ್ಟವರಿಗೆ ಕೂಡಲೆ ನೋಯಿಸಿಬಿಡುವುದು ಮನುಷ್ಯನ ಸಹಜ ಗುಣ. ಆದರೆ ನೋಯಿಸಿದವರನ್ನು ಸಹಿಸಿಕೊಂಡು ಶಾಂತವಾಗಿ ಮುಂದೆ ಸಾಗುವುದು ಸಾತ್ವಿಕತನ. ಆದರೆ ಕೆಲವೊಮ್ಮೆ ಹೀಗೆ ಮಾಡಲು ಮರೆತು ಬಿಡುತ್ತೇವೆ. ಸ್ವಾಭಿಮಾನಕ್ಕಾಗಿ ಅಥವಾ ಆದ ಅವಮಾನಕ್ಕಾಗಿ ಮಾತಿಗೆ ಮಾತು ಬೆಳೆಸಿ, ನೋವು ಕೊಟ್ಟು, ನೋವು ಮಾಡಿಕೊಳ್ಳುತ್ತೇವೆ. ಇಂತಹ ಘಟನೆ ಜರುಗಿದಾಗ ಆತ್ಮಾವಲೋಕನಕ್ಕಾಗಿ ಮುಂದಾದೆ. ಆಗ ನೆನಪಾದುದೇ ಈ ಕತೆ.
ಬಾಲ್ಯದ ಇನ್ನೊಂದು ಸಂಗತಿಯೂ ನೆನಪಾಗುತ್ತಿದೆ. ಕ್ರೈಸ್ತ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಾಗ ಬೈಬಲ್ ಮತ್ತು ಏಸು ಹತ್ತಿರವಾದರು. ನಿತ್ಯ ಪ್ರಾರ್ಥನೆಯ ಸಮಯದಲ್ಲಿ ಅನೇಕ ಹೊಸ ವಿಷಯಗಳು ತಿಳಿದು ಬರುತ್ತಿದ್ದವು. ಏಸುಕ್ರಿಸ್ತನು ಒಂದು ಕೆನ್ನೆಗೆ ಹೊಡೆದವರಿಗೆ, ಇನ್ನೊಂದು ಕೆನ್ನೆ ತೋರಿಸುವಂತೆ ಹೇಳುತ್ತಾನೆಂದು ಅಧ್ಯಾಪಕರ ಮಾತಿನಿಂದ ತಿಳಿಯಿತು. ಆಗ ಏಸು ಅಹಿಂಸೆಯನ್ನು ಅದೆಷ್ಟು ಸೂಕ್ಷ್ಮವಾಗಿ ತಿಳಿಸುತ್ತಾನಲ್ಲ! ಎಂದು ಆಶ್ಚರ್ಯಪಟ್ಟಿದ್ದೆ. ಅಂದಿನಿಂದ ಏಸು ನನಗೆ ಪ್ರಿಯವಾದ ವ್ಯಕ್ತಿಯಾದನು. ನನ್ನೊಳಗೆ ಮೊಟ್ಟಮೊದಲ ಬಾರಿಗೆ ಅಹಿಂಸೆಯ ಬೀಜ ಬಿತ್ತಿದವನು. ಹತ್ತನೇ ತರಗತಿ ಮುಗಿಸುವ ವೇಳೆಗೆ ಏಸು ನನ್ನ ಹೃದಯದಲ್ಲಿ ನೆಲೆಸಿದ್ದನು. ಜಗಳ, ತಂಟೆ, ರಗಳೆ, ಸಿಟ್ಟು, ಕೋಪ, ತಾಪಗಳನ್ನು ದೂರವಿರಿಸುತ್ತ, ಬೆಳೆಯುತ್ತ ಸೂಕ್ಷ್ಮ ಮನಸಿನವಳಾದೆ. ಎಲ್ಲರೂ ಪ್ರೀತಿಸುವುದು, ಎಲ್ಲರೂ ಹಿತನುಡಿಗಳನ್ನಾಡುವುದ ಕಂಡು ಬೀಗುತ್ತಿದ್ದೆ.
ಇಷ್ಟೆಲ್ಲಾ ತಿಳಿದುಕೊಂಡರೂ ಸಾಮಾನ್ಯರಂತೆ ಕೆಲವೊಮ್ಮೆ ಎಲ್ಲಾ ಮರೆತು, ನೋವು ಕೊಟ್ಟವರಿಗೆ ಹಿಂತಿರುಗಿ ನೋವು ಕೊಟ್ಟುಬಿಡುತ್ತೇವೆ. ಹಾಗೆಯೇ ಮನಸಿಗೆ ಅಗೋಚರ ಸಮಾಧಾನ ಪಡೆದು ನಿರಾಳವಾಗುತ್ತೇವೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಆಂತರಿಕ ಶಕ್ತಿ ಉಡುಗಿ, ಗಲಿಬಿಲಿಗೊಂಡು ಅಸಮಾಧಾನವಾದುದು ಗಮನಕ್ಕೇ ಬರುವುದಿಲ್ಲ. ಆಲೋಚಿಸಿದರೆ ಎಲ್ಲವೂ ವಿಚಿತ್ರ… ಈ ಜಗತ್ತೇ ವಿಚಿತ್ರ… ಅದಕ್ಕೂ ಮೀರಿ ಚಿಂತಿಸಿದಾಗ ಸಮೂಹ ಜೀವನದ ಅಗತ್ಯ ಕಂಡು ಮನುಷ್ಯ ಮುಂದುವರಿಯಲೇ ಬೇಕು. ಅದಕ್ಕಾಗಿ ಒಂದಿಷ್ಟು ಸಹನೆ, ಸಂಯಮ ರೂಢಿಸಿಕೊಂಡರೆ ನಾವೇನೂ ಕಳೆದುಕೊಳ್ಳುವುದಿಲ್ಲ, ಬದಲಿಗೆ ಪಡೆದುಕೊಳ್ಳುತ್ತೇವೆ. ನೋವು ಕೊಟ್ಟವರಿಗೆ ನೋವನ್ನೇ ಹಿಂದಿರುಗಿಸದೆ, ಅವರಿಂದ ದೂರ ಸರಿದು, “ನೋವು ಹಿತಕರ, ಇದು ನನ್ನಲ್ಲೇ ಉಳಿಯಲಿ” ಎನ್ನುವ ತಟಸ್ಥ ಭಾವ ತಳೆದು, ಧ್ಯಾನದಿಂದ ಹೊರ ಬಂದಾಗ ಎಲ್ಲವೂ ಸುಂದರ. ಅದಕ್ಕಾಗಿ ಹೃದಯ ಗಟ್ಟಿಗೊಳಿಸಿ ಶಾಂತವಾಗಿರಲು ಪ್ರಯತ್ನಿಸೋಣ ಬನ್ನಿ.
ಆಗ ಖಂಡಿತ ಬದುಕು ಬದಲಾಗುತ್ತದೆ…
– ಸಿಕಾ.
ಲೇಖಕಿಯರ ಪರಿಚಯ :
‘ಸಿಕಾ‘ ಎಂಬ ಕಾವ್ಯನಾಮ ದಿಂದ ಬರೆಯುತ್ತಿರುವ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ರವರು ಕಲಬುರಗಿಯ ನಿವಾಸಿ ಯಾಗಿದ್ದು, ಮತ್ತು ಬೀದರ ಜಿಲ್ಲೆ ಔರಾದ ತಾಲೂಕಿನ ಸಾಹಿತಿಗಳಾದ ಬಿ.ಜಿ, ಸಿದ್ದಬಟ್ಟೆ ಮತ್ತು ಯಶೋದಮ್ಮ ಸಿದ್ದಬಟ್ಟೆಯವರ ಸುಪುತ್ರಿ. ಡಿ.ಇ.ಮತ್ತು ಸಿ.ಇ. ಎಂ.ಎ. ಸ್ನಾತಕೋತ್ತರ ಪದವೀಧರರು. ಇವರು ಹಲವಾರು ಕತೆ ಕವನ ಲೇಖನ ಕಾದಂಬರಿಗಳನ್ನು ಬರೆದಿದ್ದಾರೆ. ಇವರು ರಚಿಸಿದ ಕೃತಿಗಳೆಂದರೆ ‘ಪ್ರೇಮ ಕಾವ್ಯ’, ‘ಬೆಳಕಿನೆಡೆಗೆ’, ‘ಪ್ರಳಯದಲೊಂದು ಪ್ರಣತಿ’, ‘ಜೀವ ಜಗತ್ತಿಗೆ ‘ಜೇನಹನಿ’,’ ‘ಪಿಸುಮಾತುಗಳ ಜುಗಲ್’, ‘ಒಳ್ಳಲ್ಲ ಒಡಲು’, ‘ಬ್ಯಾಸರಿಲ್ಲದ ಜೀವ’ ಎಂಬ ಇತ್ಯಾದಿ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.