ಮನಮೋಹಕ ಉದ್ಯಾನವನ ಕಲಬುರಗಿ.
–ಮಚ್ಚೇಂದ್ರ ಪಿ ಅಣಕಲ್.ಕಲಬುರಗಿ
ಕಲಬುರಗಿ ನಗರದ ಮಧ್ಯಭಾಗದಲ್ಲಿರುವ ಉದ್ಯಾನ ವನವು ಇತ್ತತ್ತಲಾಗಿ ತುಂಬ ಸುಂದರ ಹಾಗೂ ಆಕರ್ಷಕವಾಗಿ ಬೆಳೆಯುತ್ತಿದೆ.
ಇದು ಜಗತ್ ಸರ್ಕಲ್ ದಿಂದ ತಿಮ್ಮಾಪುರಿ ಕಡೆಗೆ ಬರುವ ರಸ್ತೆಯ ಬಲಬದಿಯಲ್ಲಿ ಇದ್ದು ಇಲ್ಲಿ ಆರು ಉದ್ಯಾನವನಗಳು ಕಂಡು ಬರುತ್ತವೆ.
ಮಹಾನಗರ ಪಾಲಿಕೆಯ ಆವರಣದಲ್ಲಿರುವ ಉದ್ಯಾನವನವು ಕೂಡ ಆಕರ್ಷಕವಾಗಿದ್ದು ಇದರ ಪಕ್ಕದಲ್ಲಿ ಬಸವೇಶ್ವರ ಪುತ್ತಳಿ ಮತ್ತು ಡಾ.ಅಂಬೇಡ್ಕರ್ ಪುತ್ತಳಿ ಇರುವ ಚಿಕ್ಕ ಚಿಕ್ಕ ಉದ್ಯಾನವು ಪ್ರವಾಸಿಗರಿಗೆ ಹೆಚ್ಚು ಉಪಯುಕ್ತ ಮತ್ತು ಆಕರ್ಷಕ ತಾಣಗಳಾಗಿ ಕಂಡು ಬರುತ್ತಿವೆ. ಹಾಗೆ
ಮಹಾನಗರ ಪಾಲಿಕೆಯ ಕಚೇರಿ ಕೆಳಗಡೆಯಲ್ಲಿ ಇರುವ ನಾಲ್ಕು ಉದ್ಯಾನಗಳು ಕೂಡ ಅಷ್ಟೇ ಸುಂದರವಾಗಿ ಕಂಗೋಳಿಸುತ್ತವೆ.
ಇಲ್ಲಿಯ ಆಕಾಶವಾಣಿ ಹತ್ತಿರದಲ್ಲಿ ಇರುವ ಉದ್ಯಾನವು ಹಚ್ಚ ಹಸುರಿನಿಂದ ಕೂಡಿದ್ದು, ಇದರಲ್ಲಿ ಹುಲ್ಲು, ಬಿದಿರು ಬಳ್ಳಿ ಹಾಗೂ ಗಿಡಮರಗಳು ಅಷ್ಟೇ ದಟ್ಟವಾಗಿ ಬೆಳೆದಿವೆ.
ಈ ವನದಲ್ಲಿ ಮನಮೋಹಕದಿಂದ ಕೂಡಿದ ಡೈನೋಸಾರ್ ಮೂರ್ತಿ ಇರುವುದು ಶಾಲಾ ಮಕ್ಕಳಿಗೆ ಬಹು ಮನರಂಜನಾ ತಾಣವಾಗಿದೆ.
ಈ ಗಾರ್ಡನ್ ನಲ್ಲಿ ಯೋಗ ಧ್ಯಾನ ಮಾಡಲು ಅಲ್ಲಲ್ಲಿ ಸಾರ್ವಜನಿಕರಿಗೆ ಕಟ್ಟೆಗಳ ವ್ಯವಸ್ಥೆಯು ಮಾಡಲಾಗಿದೆ. ಇದರ ಪಕ್ಕದ ವನವು ಕೂಡ ಇತ್ತೀಚೆಗೆ ಬಹುಸುಂದರವಾಗಿ ನಿರ್ಮಿಸಲಾಗಿದೆ.
ಈ ವನಕ್ಕೆ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಹೆಚ್ಚು ಜನ ಬೇಟಿ ನೀಡುತ್ತಾರೆ.
ಇಲ್ಲಿ ವಾಯು ವಿಹಾರಕ್ಕಾಗಿ ಬರುವ ಸಾರ್ವಜನಿಕರಿಗೆ ಯೋಗ, ಧ್ಯಾನ ಮಾಡಲು ಬಹು ಅನುಕೂಲಕರ ವಾಗುವಂತೆ ಛತ್ರಿಯಂತೆ ಹೊಲುವ ಕಟ್ಟಗಳು ಅಲ್ಲಲ್ಲಿ ನಿರ್ಮಾಣ ಮಾಡಿರುವುದು ಬಹು ಉಪಯುಕ್ತವಾಗಿವೆ.
ಈ ವನದಲ್ಲಿ ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆಯು ಸಾಕಷ್ಟು ಅನುಕೂಲಕರವಾಗಿ ಮಾಡಲಾಗಿದೆ.
ಜನ ವಾಕ್ ಮಾಡಲು ನಡೆದಾಡಲು ಅನುಕೂಲವಾಗುವಂತೆ ಅಲ್ಲಲೆಲ್ಲ ಸಾಕಷ್ಟು ಸ್ವಚ್ಚತೆ ಮತ್ತು ಕಾಲುದಾರಿಯೂ ಉತ್ತಮವಾಗಿ ನಿರ್ಮಾಣ ಮಾಡಿದ್ದಾರೆ.
ಯುವಕರು ವಯಸ್ಕರರು ದೈಹಿಕವಾಗಿ ಬಾಡಿ ಬಿಲ್ಡ ಮಾಡಿಕೊಳ್ಳಲು ಕೆಲ ಸಾಮಾಗ್ರಿಗಳ ವ್ಯವಸ್ತೆಯು ಇಲ್ಲಿ ಮಾಡಿರುವುದರಿಂದ ದೈಹಿಕ ಕಸರತ್ತು ಮಾಡಲು ಹಿತವೆನಿಸುತ್ತದೆ.
ದೂರದೂರಿನಿಂದ ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಪ್ರವಾಸಕೆಂದು ಬರುವ ಪ್ರವಾಸಕರಿಗೆ ಸಾಕಷ್ಟು ಮರಗಿಡಗಳು ನೆಡಲಾಗಿದೆ.
ಅ ಮರಗಿಡಗಳು ಈಗ ಎತ್ತರ ಎತ್ತರಕ್ಕೆ ಬೆಳೆದು ತಂಪಾದ ಗಾಳಿ ಮತ್ತು ನೆರಳು ನೀಡುವಂತೆ ಮನಮೋಹಕದಿಂದ ಆಕರ್ಷಕವಾಗಿ ಕಂಗೋಳಿಸುತ್ತಲಿವೆ.
ಈ ಗಾರ್ಡನ್ ನಲ್ಲಿ ತೆಂಗು,ಮಾವು,ಬೇವು,ನೀಲಗಿರಿ, ಹುಣಚೆ,ಮೊದಲಾದ ಎತ್ತರದ ಗಿಡಗಳು ಇರುವುದರಿಂದ ಬೇಸಿಗೆಯಲ್ಲಿ ಪ್ರವಾಸಕೆಂದು ಬರುವವರಿಗೆ ಇಲ್ಲಿ ನೆರಳಿನ ಕೊರತೆಯಾಗದು.
ಈ ಉದ್ಯಾನದೊಳಗೆ ಹಚ್ಚ ಹಸುರಿನ ಹುಲ್ಲು ತುಂಬ ವಿಪುಲವಾಗಿ ಬೆಳೆದಿರುವುದರಿಂದ ಇಲ್ಲಿಗೆ ಬರುವ ಜನರಿಗೆ ಮಾನಸಿಕವಾಗಿ ತುಂಬ ಹಿತವನ್ನು ನೀಡುತ್ತದೆ.
ಈ ಉದ್ಯಾನ ವನದೊಳಗೆ ರಾತ್ರಿ ಹೊತ್ತಿನಲ್ಲಿ ವಾಟರ್ ಮ್ಯೂಸಿಕ್ ವ್ಯವಸ್ಥೆಯು ಮಾಡಲಾಗಿದ್ದು ಇದರಿಂದ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಇದು ಕೂಡ ಅಷ್ಟೇ ಮನಮೋಹಕವಾಗಿ ತಾಣವಾಗಿ ಕಂಡು ಬರುತ್ತಿದೆ.
ಇಲ್ಲಿಗೆ ಪ್ರವಾಸ ಬರುವ ಶಾಲಾ ಮಕ್ಕಳಿಗೆ ಆಟವಾಡಲು ಇಲ್ಲಿ ಜಾರು ಬಂಡಿಯ ವ್ಯವಸ್ಥೆಯು ಮಾಡಲಾಗಿದ್ದು, ಅದರೊಂದಿಗೆ ಕೆಲ ಆಟದ ಸಾಧನ ಸಲಕರಣೆಗಳ ವ್ಯವಸ್ಥೆಯು ಇಲ್ಲಿ ಮಾಡಲಾಗಿದೆ.
ಈ ಉದ್ಯಾನದ ಸುತ್ತಮುತ್ತಲಿನಲ್ಲಿ ಕೆಲ ಆಯುರ್ವೇದಕ ಬಳ್ಳಿ ಗಿಡಗಳು ನೆಡಲಾಗಿದೆ. ಅವುಗಳಲ್ಲಿ ಅಮೃತ ಬಳ್ಳಿ, ಕಾಮ ಕಸ್ತೂರಿ, ಮೊದಲಾದವು ಇಲ್ಲಿ ಹೆಸರಿಸಬಹುದು. ಈ ಆಯುವೇರ್ದಿಕ ಬಳ್ಳಿ ಗಿಡಗಳು ಇಲ್ಲಿ ಇರುವುದರಿಂದ ಅವು ಆರೋಗ್ಯಕ್ಕೆ ಬಹು ಉಪಯುಕ್ತವಾಗಿವೆ.
ಮುಂದಿನ ದಿನಗಳಲ್ಲಿ ಆ ಗಿಡಮರಬಳ್ಳಿಗಳು ಸಾರ್ವಜನಿಕರು ಕಡಿದುಕೊಂಡು ಹೋಗದಂತೆ ಎಚ್ಚರ ವಹಿಸಬೇಕಾಗಿದೆ.
ಈ ಉದ್ಯಾನ ವನದ ಪಕ್ಕದ ಇನ್ನೊಂದು ವನದಲ್ಲಿ ಕಾಮಗಾರಿ ನಡೆಯುತ್ತಿದ್ದು,.ಅದು ಇನ್ನೂ ಅಪೂರ್ಣವಾಗಿದೆ.
ಇದರಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವು ಇದ್ದು ಅದು ಈಗ ಪೂರ್ತಿಯಾಗಿ ಬಾಗಿಲು ಮುಚ್ಚಿರುತ್ತದೆ .ಆದ್ದರಿಂದ ನಗರದ ಓದುಗರಿಗೆ ಅನುಕೂಲ ವಾಗುವಂತೆ ಅದರ ಬಳಕೆ ಮಾಡಲು ಮೂಲಭೂತವಾಗಿ ವ್ಯವಸ್ಥೆ ಮಾಡಬೇಕಾಗಿದೆ.
ಈ ಗ್ರಂಥಾಲಯವು ಪುನಃ ಪ್ರಾರಂಭ ಮಾಡಬೇಕಾಗಿದೆ. ಈ ವನದಲ್ಲಿ ಮಧ್ಯಾಹ್ನದ ಸಮಯದಲ್ಲಿ ಕೆಲ ಕಾಲೇಜಿನ ಹುಡುಗ- ಹುಡುಗಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಅಸಭ್ಯ ವರ್ತನೆ ಮಾಡುತ್ತಿರುವುದು ಮತ್ತು ಎಲ್ಲೆಂದರಲ್ಲಿ ಕಿಸ್ಸು ಕುಡುತ್ತಾ ಕೂಡುತ್ತಿರುವುದು ಸಾರ್ವಜನಿಕರಿಗೆ ಮುಜುಗರವುಂಟು ಮಾಡುತ್ತಿದ್ದಾರೆ.
ಅಷ್ಟೇಯಲ್ಲದೆ ರಾತ್ರಿ ಹೊತ್ತಿನಲ್ಲಿ ಕೆಲವರು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿರುವುದಕ್ಕೆ ಈ ಉದ್ಯಾನ ವನದೊಳಗೆ ಅಲ್ಲಲ್ಲಿ ನಿರೋಧಗಳು ಬಿದ್ದಿರುವುದು ಕಂಡು ಬರುತ್ತಿವೆ.
ಮುಂಜಾನೆ ವಾಯುವಿಹಾರಕ್ಕೆಂದು ಬರುವ ಸಾರ್ವಜನಿಕರು ಇದನ್ನು ಕಂಡು ತುಂಬ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇಯಲ್ಲದೆ
ಈ ಉದ್ಯಾನ ವನದ ಸುತ್ತಲೂ ಧೂಮಪಾನದ ಹೋಗೆ ಸೊಪ್ಪುಗಳು,ಸಿಗರೇಟು ಮಾರಾಟವಾಗುತ್ತಿರುವುದು ಕಂಡು ಬರುತ್ತಿದೆ ಇದನ್ನು ತಡೆಯಬೇಕಾಗಿದೆ. ರಾತ್ರಿಯಲ್ಲಿ ಪೋಲಿಸರ ಗಸ್ತು ತಿರುಗುವಿಕೆಯಿಂದ ಉದ್ಯಾನ ವನಕ್ಕೆ ರಕ್ಷಣೆ ಬೇಕಾಗಿದೆ. ಇಲ್ಲಿಯ ಅಪೂರ್ಣವಾಗಿ ಉಳಿದ ಕಾಮಗಾರಿಗಳು ಬೇಗ ಪೂರ್ಣಗೊಳಿಸಿ ಜನರಿಗೆ ಮತಷ್ಟು ಆಕರ್ಷಕವಾಗಿ ರೂಪಿಸಬೇಕಾಗಿದೆ.
ಉದ್ಯಾನ ವನದ ದ್ವಾರ ಬಾಗಿಲು ಸೇರಿದಂತೆ ನಾನಾ ಕೆಲಸ ಕಾರ್ಯಗಳನ್ನು ಬಹುಬೇಗ ಪೂರ್ಣ ಮಾಡಬೇಕಾಗಿದೆ.
ಮತ್ತು ಕೆಲ ಆಸನಗಳುತುಂಬ ದಿನಗಳಿಂದ ಒಡೆದು ಹಾಳಾಗಿವೆ. ಅವುಗಳ ರಿಪೇರಿ ಕಾರ್ಯವು ಆಗಬೇಕಾಗಿದೆ. ಅಂದಾಗ ಮಾತ್ರ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
– ಮಚ್ಚೇಂದ್ರ ಪಿ ಅಣಕಲ್.
ಕವಿ ಪರಿಚಯ:
ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರು. ಎಂ.ಎ. ಎಂ.ಇಡಿ ಪತ್ರಿಕೋದ್ಯಮ, ಪದವಿಧರರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ ‘ಲಾಟರಿ’ಕತೆ ಬಹುಮಾನ ಪಡೆದಿದೆ. 2010ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಇವರ ‘ಡಾಂಬಾರು ದಂಧೆ’ ಕತೆ ಬಹುಮಾನ ಪಡೆದಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಬದುಕುತ್ತೇನೆ ಕತ್ತಲೆ ಮೊಟ್ಟೆ ಯೊಡೆದು’ (ಕವನ ಸಂಕಲನ) ಜ್ಞಾನಸೂರ್ಯ, ಜನಪದ ವೈದ್ಯರ ಕೈಪಿಡಿ (ಸಂಪಾದನೆ), ಲಾಟರಿ , ಮೊದಲ ಗಿರಾಕಿ, ಹಗಲುಗಳ್ಳರು ( ಕಥಾಸಂಕಲನಗಳು) ‘ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ (ಕವಿ ಪರಿಚಯ) ‘ಅಕ್ಕ ಸುಬ್ಬಕನ ಪ್ರವಚನ‘ (ಲಲಿತ ಪ್ರಬಂಧ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.