ಮಂಡ್ಯ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು.ಚನ್ನಬಸಪ್ಪ ಆಯ್ಕೆ.
ಕನ್ನಡದ ಜಾನಪದ ಸಾಹಿತಿ ಹಾಗೂ ಸಂಘಟಕರಾದ ಗೊ.ರು. ಚನ್ನಬಸಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20,21,23 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೋ.ರು.ಚನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ ಗ್ರಾಮದ ರುದ್ರಪ್ಪಗೌಡ ಮತ್ತು ಅಕ್ಕಮ್ಮ ದಂಪತಿಗಳಿಗೆ ದಿನಾಂಕ 18-5-1930ರಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು 18ನೇ ವಯಸ್ಸಿಗೆ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದರು.
ಸರ್ಕಾರಿ ಸೇವೆಯ ಜತೆ ಜತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ.
ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊರುಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ಗಳಿಗೆ ಹೆಡ್‍ಕ್ವಾರ್ಟರ್ಸ್ ಕಮೀಷನರ್ ಆಗಿ ದುಡಿದಿದ್ದಾರೆ. ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.
ಪತ್ರಿಕಾವೃತ್ತಿ ಅನುಭವ ಹೊಂದಿದ ಇವರು ‘ಜಾನಪದ ಜಗತ್ತು’, `ಪಂಚಾಯತ್ ರಾಜ್ಯ’, `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಅನೇಕ ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
1992 ರಿಂದ 1995ರವರೆಗೆ ಕನ್ನಡ ಸಾಹಸಂಜೀವಕುಮಾರತ್ತಿನ 18ನೇ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ (1993), ಮಂಡ್ಯ (1994), ಮುಧೋಳಗಳಲ್ಲಿ (1995) 62,63,64ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರ ಅವಧಿಯಲ್ಲಿ ಅನೇಕ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಹಲವಾರು ಪುಸ್ತಕ ಪ್ರಕಟಿಸಿರುವ ಇವರ ಕೃತಿಗಳು ಹೀಗಿವೆ :
ಕರ್ನಾಟಕ ಪ್ರಗತಿಪಥ, ಸಾಕ್ಷಿಕಲ್ಲು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನ ಬಿತ್ತೇವು ನೆಲಕೆಲ್ಲ, ಇತ್ಯಾದಿಗಳಿವೆ. ಗೊರುಚ ರವರು ಹಲವಾರು ವಿಷಯಗಳಲ್ಲಿ ತಮ್ಮದೆ ಆದ ಸಾಧನೆ ಮಾಡಿದ್ದಾರೆ.
ಅಮೃತನಿಧಿ ಯೋಜನೆ : ಪರಿಷತ್ತು ತನ್ನ ಕಾಲಮೇಲೆ ನಿಲ್ಲಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಯೋಜನೆ ನಿರೂಪಿಸಿದವರಲ್ಲಿ ಗೊರುಚ ಕೂಡ ಒಬ್ಬರು.
ಡಾ.ಹಾಮಾನಾ ಅವರು ಬೀದರ್ ಸಮ್ಮೇಳನದಲ್ಲಿ 1985ರಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಪರಿಷತ್ತಿನ ಆರ್ಥಿಕ ಸ್ವಾವಲಂಬನೆಗಾಗಿ, “ಒಬ್ಬ ಕನ್ನಡಿಗ – ಒಂದು ರೂಪಾಯಿ” ಘೋಷಣೆ ಮೊಳಗಿಸಿದರು. ಇದಕ್ಕನುಸಾರವಾಗಿ ಅಮೃತನಿಧಿ ಚೀಟಿಗಳನ್ನು ಮುದ್ರಿಸಿ ಮಾರಾಟ ಮಾಡಿ ಹಣ ಸಂಗ್ರಹ ಮಾಡಲು ಹಂಪನಾ ಪ್ರಾರಂಭಿಸಿದರು. ಗೊರುಚ ಅವರ ಅವಧಿಯಲ್ಲಿ 25 ಲಕ್ಷರೂ.ಗಳಷ್ಟು ಅಮೃತನಿಧಿ ಸಂಗ್ರಹವಾಯಿತು.
ಮೂಲ ಹಣವನ್ನು ಬಳಸದೆ ಬಡ್ಡಿಯನ್ನು ಮಾತ್ರ ಕಾರ್ಯಕ್ರಮಗಳಿಗೆ ಬಳಸಲು ನಿಯಮವನ್ನು ರೂಪಿಸಲಾಗಿದೆ.
ದತ್ತಿನಿಧಿ ಸಾಧನೆ : ಪರಿಷತ್ತಿನಲ್ಲಿ ವರ್ಷಾದ್ಯಂತ ಕಾರ್ಯಕ್ರಮಗಳು ನಡೆಯಲು, 30 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯಲು ಮುಖ್ಯಾಧಾರ ದತ್ತಿನಿಧಿಗಳು ಎಂದರೆ ತಪ್ಪಲ್ಲ. ಮೂಲನಿಧಿಯನ್ನು ಬಳಸದೆ ಬಡ್ಡಿಯನ್ನು ಬಳಸುವುದರಿಂದ ಪ್ರತಿವರ್ಷವೂ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ.
ಸರ್ಕಾರದ ಸಾರ್ವಜನಿಕರ ಕೊಡುಗೆ ಅನುದಾನಗಳು ಬಂದರೂ ಬರದಿದ್ದರೂ ಕಾರ್ಯಕ್ರಮಗಳನ್ನು ನಡೆಸಬಹದು. ದತ್ತಿನಿಧಿಯ ಮಹತ್ವವನ್ನು ಅರಿತ ಗೊರುಚ ಅವರು ಇದರ ಸಂಗ್ರಹಕ್ಕೆ ಆದ್ಯ ಗಮನವಿತ್ತು 20 ಲಕ್ಷದಷ್ಟು ಹಣದ ಮೊತ್ತದ ದತ್ತಿನಿಧಿಗಳನ್ನು ಸಂಗ್ರಹಿಸಿ ದಾಖಲೆ ಸ್ಥಾಪಿಸಿದರು.
ವರ್ಷವಿಡಿ ಕಾರ್ಯಕ್ರಮಗಳು ನಡೆಯುವಷ್ಟು ದತ್ತಿನಿಧಿಗಳನ್ನು ಸಂಗ್ರಹಿಸುವುದು ಅವರ ಗುರಿಯಾಗಿತ್ತು. ಅವರು ಮಾಡಿದ ಇನ್ನೊಂದು ಕೆಲಸ ಎಂದರೆ ದತ್ತಿನಿಧಿಗಳ್ನು ಸುವ್ಯವಸ್ಥೆಗೊಳಿಸಿದ್ದು. 1500ಕ್ಕೂ ಮಿಕ್ಕ ದತ್ತಿಗಳನ್ನು ಜಿಲ್ಲಾವಾರು ವರ್ಗೀಕರಿಸಿ ಹಂಚುವುದರ ಜತೆಗೆ. ಪುಸ್ತಕ ಬಹುಮಾನ ದತ್ತಿ, ಪುಸ್ತಕಪ್ರಕಟನೆ ದತ್ತಿ, ಇತ್ಯಾದಿ ವರ್ಗೀಕರಿಸಿ ದತ್ತಿನಿಧಿಗಳ ಪುಸ್ತಕವನ್ನೇ ಪ್ರಕಟಮಾಡಿದರು.
ದತ್ತಿದಾನಿಗಳು ದತ್ತಿಕೊಡುವಾಗ ತಮಗೆ ತೋಚಿದಂತೆ ಪತ್ರ ಬರೆದು ಕೊಡುತ್ತಿದ್ದರು ಎಷ್ಟೋ ವೇಳೆ ಅಗತ್ಯ ಮಾಹಿತಿಗಳೇ ಇರುತ್ತಿರಲಿಲ್ಲ. ಅದಕ್ಕಾಗಿ ದತ್ತಿಪತ್ರ ಮಾದರಿಯನ್ನು ಹಾಗೂ ದತ್ತಿ ನಿಯಮಾವಳಿಗಳನ್ನು ರಚಿಸಿದರು. ದತ್ತಿ ಮೊತ್ತ ಕಡಿಮೆ ಇದ್ದ ಕಾರಣದಿಂದ ನೂರಾರು ದತ್ತಿಗಳ ಬಡ್ಡಿಯಿಂದ ಇಂದು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿಲ್ಲ ಹೀಗಾಗಿ ಹಲವಾರು ದತ್ತಿಗಳ ಬಡ್ಡಿಯನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಆಚರಣೆಯ ನಿದರ್ಶನ: ಪರಿಷತ್ತಿನ ಹಲವು ಅಧ್ಯಕ್ಷರು ಪರಿಷತ್ತಿನ ಆರ್ಥಿಕ ಪ್ರಗತಿಗೆ ಶ್ರಮಿಸುವಾಗ ತಮ್ಮ ಕೊಡುಗೆಯಿಂದ ಕೆಲವು ತ್ಯಾಗಗಳನ್ನು ಪರಿಷತ್ತಿಗಾಗಿ ಮಾಡಿದ್ದಾರೆ. ಸರಳ ವ್ಯಕ್ತಿತ್ವದಿಂದ ಮೆರೆದಿದ್ದಾರೆ. ಗೊ.ರು.ಚ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ, ಉಪಸಮಿತಿಸಭೆಗಳಲ್ಲಿ ತಮಗೆ ಕೊಡುತ್ತಿದ್ದಂಥ ಸಭಾ ಭತ್ಯವನ್ನು ಪರಿಷತ್ತಿಗೆ ಹಿಂದಿರುಗಿಸುತ್ತಿದ್ದರು.
ಸಮಾವೇಶಗಳು : ಸಾಹಿತ್ಯದ ಪ್ರಚಾರ, ಸಾಹಿತ್ಯದ ವಿಚಾರ, ಸಾಹಿತ್ಯದ ವಿಮರ್ಶೆ, ಸಾಹಿತ್ಯದ ರಸಾನುಭವ ಉಂಟು ಮಾಡುವ ಕಾರ್ಯಕ್ರಮಗಳು ಸಾಹಿತ್ಯಾಸಕ್ತರಿಗೆ ಪ್ರಿಯವಾದ ಕಾರ್ಯಕ್ರಮಗಳು. ಇವುಗಳ ಸಭೆಗಳಲ್ಲಿ ಬಹುಮಟ್ಟಿಗೆ ಏಕಮುಖಿ ನಿರೂಪಣೆ ಕಾಣುತ್ತೇವೆ ಎಂದರೆ ಉಪನ್ಯಾಸ ವಿಚಾರಮಂಡನೆ ಅನಂತರ ಒಮ್ಮೊಮ್ಮೆ ಒಂದೆರಡು ನಿಮಿಷಗಳ ಕಾಲ ಕೆಲವರ ಪ್ರತಿಕ್ರಿಯೆ ಕಾಣುತ್ತೇವೆ. ಸಹೃದಯರ ಪ್ರತಿಕ್ರಿಯೆಗೆ, ವಾದ-ಸಂವಾದಗಳಿಗೆ ಸಾಕಷ್ಟು ಅವಕಾಶವಿರುವುದಿಲ್ಲ. ಗೊರುಚ ಅವರು ಇದನ್ನು ಮನಗಂಡು ಸಾಕಷ್ಟು ಪ್ರತಿಕ್ರಿಯೆಗಳಿಗೆ ಅವಕಾಶವಿರುವ ರೀತಿಯಲ್ಲಿ ಸಾಹಿತ್ಯ ಸಮ್ಮೇಳನಗಳ ಹಾಗೆಯೇ ಊರೂರುಗಳಲ್ಲಿ ನಾಟಕ, ಶಿಕ್ಷಣ, ಹಾಸ್ಯ, ಅನುಭಾವ, ವಿಜ್ಞಾನ, ಸಂಶೋಧನ, ಮಹಿಳೆ, ಚಾರಣ, ಸಮೂಹ ಮಾಧ್ಯಮ ಕೀರ್ತನ ಮೊದಲಾದ ಸಾಹಿತ್ಯ, ಕಲೆ, ವಿಜ್ಞಾನ ಕ್ಷೇತ್ರಗಳ ಮಹತ್ವದ ವಿಷಯಗಳನ್ನು ಕುರಿತು ತೌಲನಿಕವಾಗಿ ಚರ್ಚೆ ಮಾಡುವ ರೀತಿಯಲ್ಲಿ ಕಲೆ, ಸಾಹಿತ್ಯ ಸಮಾವೇಶಗಳನ್ನು ಏರ್ಪಡಿಸಿದರು.
ಗೀತ ಸಂಗೀತ ಕಾರ್ಯಕ್ರಮ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ನಾಡ ಗೀತೆಗಳ ಪರಿಚಯ ಮಾಡಿಸಲು ಖ್ಯಾತ ಸಂಗೀತಗಾರರಿಂದ ಹಾಡಿಸಿ ಹಚ್ಚೇವು ಕನ್ನಡದ ದೀಪ ಎಂಬ ಧ್ವನಿಸುರುಳಿಯನ್ನು ಹೊರತರಲಾಯಿತು. ಒಂದು ಕವಿತೆ ಜನಕ್ಕೆ ರಸಪೂರ್ಣವಾಗಿ ಮುಟ್ಟಬೇಕಾದರೆ ಆನಂದಾನುಭವ ಆಗಲು ಕವಿಯಿಂದ ಕವಿತಾ ವಾಚನ, ಅದಕ್ಕೆ ವಾದ್ಯಗೋಷ್ಠಿ ಯೋಜನೆ ಗಾಯಕನ ಹಾಡುವಿಕೆ ಸೇರಿದರೆ ಸಾಹಿತ್ಯ ಸಂಗೀತಗಳ ಸಂಗಮವಾಗುತ್ತದೆ.
ಕವಿ ಗಾಯಕರ ದರ್ಶನವಾಗುತ್ತದೆ. ಆಗ ಜನರಿಗೆ ನಿಜವಾದ ರಸಾನುಭವ ಆಗುತ್ತದೆ ಎಂಬ ಹಿನ್ನೆಲೆಯಲ್ಲಿ ಗೀತ ಸಂಗೀತ ‘ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಪ್ರಚಂಡ ಯಶಸ್ಸನ್ನು ಗಳಿಸಿತು. ಮುಂದೆ ಸಮ್ಮೇಳನಗಳಲ್ಲಿ ಖಾಯಂ ಆಗಿ ಈ ಬಗೆ ಕಾರ್ಯಕ್ರಮಗಳು ನಡೆದವು. ಕಾವ್ಯ ಕಾವೇರಿ ಕಾರ್ಯಕ್ರಮ ಈ ರೀತಿ ಹೊಸರೂಪ ತಳೆಯಿತು.
ಗೌರವ ಸದಸ್ಯತ್ವ ಪ್ರದಾನ : ಪರಿಷತ್ತಿನ ಅತ್ಯುನ್ನತ ಮನ್ನಣೆ ಎನ್ನಿಸಿದ ಗೌರವ ಸದಸ್ಯತ್ವನ್ನು ಗೊರುಚ ಅವರ ಅಧಿಕಾರವಧಿಯಲ್ಲಿ ಪು.ತಿ.ನ., ವಿ.ಕೃ.ಗೋಕಾಕ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ, ಶಾಂತಾದೇವಿ ಮಾಳವಾಡ, ಎಸ್. ವಿ. ಪರಮೇಶ್ವರ ಭಟ್ಟ ಅವರಿಗೆ ನೀಡಲಾಯಿತು. ಗೌರವ ಸದಸ್ಯರ ಒಂದೊಂದು ವಾಚಿಕೆಯನ್ನು ಪ್ರಕಟಿಸಲಾಯಿತು. ಆ ಪೈಕಿ ನವಿಲುಗರಿ, ಸಿಂಧುಶ್ರೀ, ವ್ಯಾಕರಣತೀರ್ಥ, ಶಾಂತಕಿರಣ ವಾಚಿಕೆಗಳು ಪ್ರಕಟವಾದವು.
ಸಂಶೋಧನಾ ಕೇಂದ್ರ : ಪರಿಷತ್ತು ಪಾಂಡಿತ್ಯ ಪೋಷಣೆಗೆ ಪ್ರಮುಖವಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪರಿಷತ್ತಿನ ನಿಬಂಧನೆಗಳಲ್ಲಿದೆ. ಈ ಬಗ್ಗೆ ವಿಶೇಷ ಗಮನವಿತ್ತ ಅಧ್ಯಕ್ಷರಲ್ಲಿ ಗೊರುಚ ಒಬ್ಬರು. ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದವರಿಗೆ ಹೆಚ್ಚಿನ ಅವಕಾಶ ಸೌಕರ್ಯಗಳನ್ನು ಕಲ್ಪಿಸಲು, ಎಂ. ಚಿದಾನಂದಮೂರ್ತಿ ಅವರನ್ನು ಗೌರವ ನಿರ್ದೇಶಕರನ್ನಾಗಿ ನೇಮಿಸಿ ಸಂಶೋಧನಾ ಕೇಂದ್ರವನ್ನು ಗೊರುಚ ಅವರು ಪ್ರಾರಂಭಿಸಿದರು. ಪ್ರತಿ ತಿಂಗಳು ಕೊನೆ ಗುರುವಾರದಲ್ಲಿ ಸಂಶೋಧನಾತ್ಮಕ ವಿಷಯಗಳಲ್ಲಿ ಉಪನ್ಯಾಸಗಳನ್ನು ಏರ್ಪಡಿಸಲಾಯಿತು.
ಪ್ರಚಾರ ಕಾರ್ಯಗಳು : ಯುವಜನರಿಗೆ ಸಾರ್ವಜನಿಕರಿಗೆ ತಲುಪುವ ರೀತಿಯಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಕಲಾಕಾರ್ಯಕ್ರಮಗಳನ್ನು ಏರ್ಪಡಿಸುವುದು ಅಗತ್ಯ. ಈ ಬಗೆಯ ಕೆಲಸಗಳನ್ನು ಪರಿಷತ್ತು ಸಮ್ಮೇಳನಗಳಲ್ಲಿ ಮಾಡಿಕೊಂಡು ಬರುವುದರ ಜತೆಗೆ ಇತರ ದಿನಗಳಲ್ಲಿ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥೆ ಮಾಡಿದೆ. ಇದರ ಅಂಗವಾಗಿ ಪ್ರದರ್ಶನ ಫಲಕಗಳ ಮೂಲಕ ಪರಿಷತ್ತನ್ನು ಪರಿಚಯಿಸಲು ವ್ಯವಸ್ಥೆ ಮಾಡಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಂಗಾಸಕ್ತಿ ಉಂಟುಮಾಡುವ ಕಾರ್ಯಕ್ರಮ-ಸ್ಪರ್ಧೆಗಳನ್ನು ರಾಜ್ಯಮಟ್ಟದಲ್ಲಿ ನಡೆಸಲಾಯಿತು.
ಉದಯೋನ್ಮುಖ ಸಾಹಿತಿಗಳಿಗೆ ಮಾರ್ಗದರ್ಶನ ಸ್ಫೂರ್ತಿ ದೊರಕಲು ಆಯ್ದ ವಿಷಯಗಳ ಬಗ್ಗೆ ಮಕ್ಕಳ ಸಾಹಿತ್ಯ ರಚನಾ ಕಮ್ಮಟ (ವರ್ಕ್‍ಷಾಪ್), ನಾಟಕ ರಚನಾ ಕಮ್ಮಟ, ಸಂಶೋಧನಾ ಕಮ್ಮಟ ಇತ್ಯಾದಿ ಕಮ್ಮಟಗಳನ್ನು ಆಯೋಜಿಸಿದ್ದು ಯುವಪೀಳಿಗೆಗೆ ನೆರವಾದ ಕಾರ್ಯಕ್ರಮಗಳಾದವು.
ಪರಿಷತ್ತು 80ನೇ ಮಹೋತ್ಸವ : ಯಾವುದೇ ವ್ಯಕ್ತಿ, ಸಂಸ್ಥೆಗೆ 80 ವರ್ಷಗಳು ತುಂಬುವುದು ಸಾಮಾನ್ಯ ಸಂಗತಿಯಲ್ಲ. ದೀರ್ಘಕಾಲದ ಬಾಳಿಕೆಗೆ ಅದೊಂದು ಸಾಂಕೇತಿಕ ವರ್ಷ. ವ್ಯಕ್ತಿ ಜೀವನದಲ್ಲಿ ಸಹಸ್ರಚಂದ್ರದರ್ಶನವೆಂಬ ಕಾರ್ಯಕ್ರಮ ನಡೆಸುತ್ತಾರೆ. ಹಾಗೆ 80ರ ಸಂಭ್ರಮ ಪರಿಷತ್ತಿಗೆ ಉಂಟಾಗಿದೆ ಎಂಬುದನ್ನು ಜನಕ್ಕೆ ತಿಳಿಸಲು ಗೊರುಚ ಅವರು `ಪರಿಷತ್ತು 80’ ಮಹೋತ್ಸವವನ್ನು 1995ಮೇ 3,4,5 ನೇ ತಾರೀಖುಗಳಲ್ಲಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಕನ್ನಡ ನುಡಿ ವಿಶೇಷ ಸಂಚಿಕೆಯನ್ನು `ಪರಿಷತ್ತು-80’ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಈ ಶತಮಾನದ ‘ಕನ್ನಡ ಕಾವ್ಯ’ವೆಂಬ ವಿಚಾರ ಸಂಕಿರಣ ಏರ್ಪಾಟಾಗಿತ್ತು.
ಪ್ರಕಟನೆಗಳು : ಸಾಮಾನ್ಯ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ವಿವಿಧ ವಿಷಯಗಳ ಬಗ್ಗೆ 100 ಪುಸ್ತಕಗಳನ್ನು ಪ್ರಕಟಿಸುವ ಸಮುದಾಯ ಸಾಹಿತ್ಯಮಾಲೆ ಪ್ರಾರಂಭವಾಗಿ ಕೆಲವು ಪ್ರಕಟನೆಗಳು ಹೊರಬಿದ್ದವು.
ಇವರ ಅವಧಿಯಲ್ಲಿ 25ಕ್ಕೂ ಮಿಕ್ಕ ಮಹಾಪ್ರಬಂಧಗಳ ಪ್ರಕಟನೆಯ ಜೊತೆಗೆ ಪರಿಷತ್ತಿನ ಪುಸ್ತಕಗಳ ಮರುಮುದ್ರಣಗಳು ನಡೆಯಿತು. ಬಹಳ ಚರ್ಚೆಗೆ ಒಳಗಾದ ಎ.ಎನ್. ಮೂರ್ತಿರಾಯರ ‘ದೇವರು’ ಪುಸ್ತಕದ ಇಂಗ್ಲಿಷ್ ಅನುವಾದ ಪ್ರಕಟನೆ ಆಯಿತು.
ಆರ್ಥಿಕೋನ್ನತಿ: ಜಿಲ್ಲಾ ಘಟಕಗಳಿಗೆ ಸ್ಥಳೀಯವಾಗಿ ಸಂಗ್ರಹಿಸುವ ದೇಣಿಗಳ ಜತೆಗೆ ಪರಿಷತ್ತಿನ ದತ್ತಿನಿಧಿ ಬಡ್ಡಿಯನ್ನು ಸ್ವಲ್ಪಮಟ್ಟಿಗೆ ನೀಡುವುದರಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಖಾಯಂ ಆಗಿ ಪ್ರತಿವರ್ಷ ಮಾಡುವುದು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಗೊರುಚ ಅವರು ರಾಜ್ಯಸರ್ಕಾರದೊಂದಿಗೆ ವ್ಯವಹರಿಸಿ ಪ್ರತಿವರ್ಷವೂ 1 ಲಕ್ಷರೂಗಳನ್ನು ಜಿಲ್ಲಾ ಘಟಕಗಳಿಗೆ ಅನುದಾನ ನೀಡುವಂತೆ ಮಾಡಿದರು. ಇದರಿಂದ ಜಿಲ್ಲಾಘಟಕಗಳೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಯಲು ಸಾಧ್ಯವಾಯಿತು.
ಪುಸ್ತಕ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಗೆ ಪರಿಷತ್ತಿನ ಭವನದಲ್ಲಿ ಜಾಗವನ್ನು ಬಾಡಿಗೆಗೆ ಕೊಟ್ಟು ಪರಿಷತ್ತಿಗೆ ಮಾಸಿಕ ಆದಾಯ ಬರುವಂತೆ ಮಾಡಿದರು. ಈ ಹಣವನ್ನು ನಿರ್ವಹಣೆಯ ವೆಚ್ಚಕ್ಕೆ ಬಳಸಲಾಯಿತು.
ಸಮ್ಮೇಳನಗಳು: ಗೊರುಚ ಅವರ ಕಾಲದಲ್ಲಿ 3 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದವು.
ಕೆಲವು ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದರ ಜತೆಗೆ ಪರಿಷತ್ತಿನ ಆರ್ಥಿಕ ಭದ್ರತೆಗೆ ವಿಶೇಷ ಗಮನವನ್ನು ಕೊಟ್ಟಿದ್ದು ಗೊರುಚ ಅವರ ಅಧಿಕಾರಾವಧಿಯಲ್ಲಿ ಗಮನಿಸುವ ವಿಚಾರವಾಗಿದೆ.
ಪರಿಷತ್ತಿನಲ್ಲೇ ಹೆಚ್ಚು ವೇಳೆ ಇದ್ದು ರಜಾ ದಿನಗಳಲ್ಲೂ ಪರಿಷತ್ತಿನಲ್ಲಿ ಕಾರ್ಯ ನಿರ್ವಹಣೆ ಮಾಡಿದಂಥ ಕಾರ್ಯನಿಷ್ಠ ಕ್ರಿಯಾಶಾಲಿ ಅಧ್ಯಕ್ಷರಲ್ಲಿ ಒಬ್ಬರು ಗೊರುಚ ಅವರು. ಎಷ್ಟೋ ವೇಳೆ ಅನಾರೋಗ್ಯವನ್ನೂ ಲೆಕ್ಕಿಸದೆ ಪರಿಷತ್ತಿನ ಕಾರ್ಯ ನಿರ್ವಹಣೆಯಲ್ಲಿ ಭಾಗವಹಿಸಿರುವುದು ಅವರ ವೈಶಿಷ್ಟ್ಯವಾಗಿದೆ. ಜಿ. ನಾರಾಯಣರಂತೆ ತ್ರೈಮಾಸಿಕ ಯೋಜನೆಯನ್ನು ಸಿದ್ಧಪಡಿಸಿ ಪರಿಷತ್ತಿನ ಸೇವೆಗೆ ಅವರು ಕಾರ್ಯಪ್ರವೃತ್ತರಾಗಿದ್ದದ್ದು ಗಮನಾರ್ಹಸಂಗತಿಯಾಗಿದೆ.
–ಸಂಜೀವಕುಮಾರ ಕಾಂಬಳೆ.
ಪಂಚಶೀಲನಗರ ಕಲಬುರಗಿ
ಲೇಖಕರ ಪರಿಚಯ:
ಸಂಪಾದಕ, ಪತ್ರಕರ್ತ ಹಾಗೂ ಯುವ ಬರಹಗಾರರಾದ ಸಂಜೀವಕುಮಾರ ಕಾಂಬಳೆ ಯವರು ಕಲಬುರಗಿಯ ಪಂಚಶೀಲನಗರದವರು. ಇವರು 10-8-1976 ರಲ್ಲಿ ಜನಿಸಿದ್ದಾರೆ. ತಂದೆ ವೆಂಕಟರಾವ ತಾಯಿ ರತ್ನಬಾಯಿ ದಂಪತಿಗಳಿಗೆ ಚೊಚ್ಚಿಲ ಪುತ್ರರಾಗಿದ್ದು. ಇವರ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಅಧ್ಯಯನ ಮಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು ಎಂ.ಎ ಪತ್ರಿಕೋದ್ಯಮ ಪದವೀಧರರಾದ ಇವರು ಕಲಬುರಗಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಕ್ಲರ್ಕ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಸುಂದರ ರಾಷ್ಟ್ರ‘ ಎಂಬ ಪತ್ರಿಕೆಯ ಸಂಪಾದಕರು ಆಗಿದ್ದಾರೆ.