ಮನೆಯೆಂಬ ಮೊದಲ ಪಾಠಶಾಲೆ
– ವೀಣಾ ಹೇಮಂತ್ ಗೌಡ ಪಾಟೀಲ್.
ಜೀವನದ ಸಣ್ಣ ಪುಟ್ಟ ಖುಷಿಗಳನ್ನು ಮನದುಂಬಿ ಅನುಭವಿಸುವುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಹುಟ್ಟು ಹಾಕುವುದು, ನಮಗಿಂತ ಹಿರಿಯರನ್ನು ಗೌರವಿಸುವ ಮತ್ತು ತಮಗಿಂತ ಕಿರಿಯರನ್ನು ಪ್ರೀತಿಸುವ, ದೀನ ದಲಿತರ ವೃದ್ಧರ ಸೇವೆ ಮಾಡುವ ಅವರ ಕುರಿತು ಕರುಣೆ ಅಂತಃಕರುಣೆಗಳನ್ನು ತೋರುವುದನ್ನು ಮನೆಯ ಮೊದಲ ಪಾಠಶಾಲೆಯಲ್ಲಿ ರೂಢಿಸಬೇಕು.
ಮಕ್ಕಳ ಮನಸ್ಸಿಗೆ ಒಳ್ಳೆಯ ವಿಚಾರಗಳನ್ನು ತುಂಬಬೇಕು, ಮಕ್ಕಳು ತೋರುವ ಉತ್ತಮ ನಡವಳಿಕೆಗಳನ್ನು ಪ್ರೋತ್ಸಾಹದ ನೀರು ಹಾಕಿ ಪೋಷಿಸಬೇಕು. ತಪ್ಪು ಯಾರೇ ಮಾಡಿರಲಿ ಕ್ಷಮೆ ಯಾಚಿಸುವ ಮೂಲಕ ವಿನಯವಂತಿಕೆಯನ್ನು ರೂಡಿಸಿಕೊಳ್ಳುವುದನ್ನು ಮನೆ ಎಂಬ ಪಾಠಶಾಲೆಯಲ್ಲಿ ಪಾಲಕರು ಕಲಿಸಲೇಬೇಕು.
ಹಿರಿಯರಲ್ಲಿ ಗೌರವವನ್ನು ತಂದೆ-ತಾಯಿಗಳಲ್ಲಿ ಪ್ರೀತಿ ವಿಶ್ವಾಸವನ್ನು ಒಡಹುಟ್ಟಿದವರಲ್ಲಿ ಅನ್ಯೋನ್ಯತೆ ಮತ್ತು ವಾತ್ಸಲ್ಯಗಳನ್ನು ಬಂಧು ಬಾಂಧವರಲ್ಲಿ, ಸುತ್ತಣ ಸಮಾಜದ ಜನರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುವುದನ್ನು ಮನೆಯೆಂಬ ಪಾಠಶಾಲೆಯಲ್ಲಿ ಮಕ್ಕಳು ಕಲಿಯಲೇಬೇಕು.
ಉತ್ತಮ ನಡೆ ನುಡಿಗಳನ್ನು, ಧಾರ್ಮಿಕ ನಂಬಿಕೆಗಳನ್ನು, ಪ್ರೀತಿ, ವಿಶ್ವಾಸ, ಕರುಣೆ, ಮಮತೆ, ಮಮಕಾರಗಳ ಅವಶ್ಯಕತೆಗಳನ್ನು ಮಕ್ಕಳಿಗೆ ಮನೆಯೆಂಬ ಪಾಠಶಾಲೆಯಲ್ಲಿ ಕಲಿಸಲೇಬೇಕು.
ತಪ್ಪು ಸರಿಗಳ ನಡುವಿನ ವ್ಯತ್ಯಾಸವನ್ನು, ಸುಳ್ಳು ಮತ್ತು ಸತ್ಯಗಳ ನಡುವಿನ ಅಂತರವನ್ನು ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಪರೀಕ್ಷಿಸಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಪಾಲಕರು ಮನೆ ಎಂಬ ಪಾಠಶಾಲೆಯಲ್ಲಿ ಕಲಿಸಿಕೊಡಲೇಬೇಕು.
ಬೇರೊಬ್ಬರೊಂದಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುವುದನ್ನು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಚಿಕ್ಕಂದಿನಿಂದಲೇ ಮಕ್ಕಳು ಕಲಿಯಬೇಕು.
ಸವಾಲುಗಳನ್ನು ಎದುರಿಸುವುದನ್ನು, ತಪ್ಪು ಮಾಡಿದಾಗ ಶಿಕ್ಷೆ ಖಂಡಿತ ಎಂಬ ಸತ್ಯವನ್ನು ಆತ್ಮಾಭಿಮಾನದ ಅರಿವನ್ನು ಮಕ್ಕಳು ಹೊಂದಿರಲೇಬೇಕು. ವಿಶ್ವಗುರು ಬಸವಣ್ಣನವರು ನಮಗೆ ಕೊಟ್ಟ ಸಪ್ತ ಸೂತ್ರಗಳು
“ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ
ಎಂಬ ಈ ವಚನದಲ್ಲಿ ಮನುಷ್ಯ ಏನನ್ನು ಮಾಡಬಾರದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಕಾಣಬಹುದಾಗಿದ್ದು ಈ ವಚನದ ಸಾರವನ್ನು ಮಕ್ಕಳ ಬದುಕಿನಲ್ಲಿ ಬಸಿದರೆ ಅವರ ಬಾಳು ನೈತಿಕತೆಯ ಮೌಲ್ಯಗಳ ಗೂಡಾಗುವುದರಲ್ಲಿ ಆಶ್ಚರ್ಯವಿಲ್ಲ ಅಲ್ಲವೇ?
ಸರಿಯಾದ ವಿಷಯಗಳಿಗೆ ಒತ್ತು ನೀಡುವುದು, ಪ್ರಾಪಂಚಿಕ ಬದುಕಿನಲ್ಲಿ ಒಳ್ಳೆಯ ನೆನಪುಗಳನ್ನು ಹೊಂದುವುದು, ಭಾವನೆಗಳನ್ನು, ಜೀವನದ ಸಣ್ಣ ಪುಟ್ಟ ಖುಷಿಗಳನ್ನು ಮನದುಂಬಿ ಅನುಭವಿಸುವುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಹುಟ್ಟು ಹಾಕುವುದು, ನಮಗಿಂತ ಹಿರಿಯರನ್ನು ಗೌರವಿಸುವ ಮತ್ತು ತಮಗಿಂತ ಕಿರಿಯರನ್ನು ಪ್ರೀತಿಸುವ, ದೀನ ದಲಿತರ ವೃದ್ಧರ ಸೇವೆ ಮಾಡುವ ಅವರ ಕುರಿತು ಕರುಣೆ ಅಂತಃಕರುಣೆಗಳನ್ನು ತೋರುವುದನ್ನು ಮನೆಯ ಮೊದಲ ಪಾಠಶಾಲೆಯಲ್ಲಿ ರೂಢಿಸಬೇಕು.
ಮತ್ತೊಬ್ಬರು ತೊಂದರೆಯಲ್ಲಿ ಸಿಲುಕಿದಾಗ ಅವರಿಗೆ ಸಹಾಯ ಹಸ್ತ ಎಸಗುವುದನ್ನು, ಒಳ್ಳೆಯ ಸಂವಹನ ಕಲೆಯನ್ನು, ದೈನಂದಿನ ಬದುಕಿನಲ್ಲಿ ಉತ್ತಮ ಪ್ರಗತಿಯನ್ನು ಮಕ್ಕಳಲ್ಲಿ ರೂಡಿಸಬೇಕಾದದ್ದು ಮನೆಯ ಮೊದಲ ಪಾಠಶಾಲೆಯಲ್ಲಿ.
ಪ್ರತಿದಿನ ಮನೆಯಲ್ಲಿ ಪೂಜೆ ಪುನಸ್ಕಾರ,ಪ್ರಾರ್ಥನೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡುವುದು, ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣವನ್ನು ಜೊತೆಯಾಗಿ ನಗುವ ಹರಟುವ, ಜೊತೆಯಾಗಿ ಬೆಳೆಯುವ ಕ್ಷಮಿಸುವ, ಪರಸ್ಪರ ಒಬ್ಬರಿಗೊಬ್ಬರು ಹೆಗಲೆಣೆಯಾಗುವ ಗುಣವನ್ನು ಮಕ್ಕಳಲ್ಲಿ ರೂಢಿಸುವುದು ಮನೆಯ ಮೊದಲ ಪಾಠಶಾಲೆಯಲ್ಲಿ.
‘ಹುಟ್ಟು ಗುಣ ಸುಟ್ಟರೂ ಹೋಗದು’ ಎಂಬ ಗಾದೆ ಮಾತಿನ ಹೇಳಿಕೆಯಂತೆ ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂಬ ಹಿರಿಯರ ಅನುಭವದ ನುಡಿಗಳು ಮನುಷ್ಯನ ಬದುಕಿನಲ್ಲಿ ಬಾಲ್ಯದ ಪ್ರಭಾವವನ್ನು ನಮಗೆ ಅರ್ಥೈಸುತ್ತವೆ.ಇಂತಹ ಬಾಲ್ಯದ ಬೇರುಗಳನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಲು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಸಮೃದ್ಧವಾಗಿಸುವ ಹೊಣೆಗಾರಿಕೆ ಪಾಲಕರ ಹೆಗಲ ಮೇಲಿದೆ.
ಅತ್ಯಂತ ಸನಾತನವಾದರೂ ನೂತನ ವಿಷಯಗಳನ್ನು ಸ್ವೀಕರಿಸುವ ನಮ್ಮ ಭಾರತೀಯ ಕೌಟುಂಬಿಕ ಪದ್ಧತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮನೆ ಮನೆಗಳಲ್ಲಿ ಪ್ರಯತ್ನ ಸಾಗಲಿ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.