ಮಾಸಿದ ಹಾಸಿಗೆ (ಧಾರಾವಾಹಿ)
– ಎಸ್.ಎಂ.ಜನವಾಡಕರ್.
(ಹಿಂದಿನ ಸಂಚಿಕೆಯಿಂದ.)
ಅಧ್ಯಾಯ- 2
ರಂಗೂ, ಏ ರಂಗೂ, ಏನ್ ಮಾಡ್ತಾ ಇದ್ದಿಯಾ ?
ರ್ರೀ! ಬಂದೆ. ಅಯ್ಯೋ ಇಷ್ಟಾಕೆ ಅವಸರ ? ಅಲ್ಲೆ ಎಲ್ಲಾದರು ಮರದ ಕೆಳಗೆ ನಿಲ್ಲಬಾರದಿತ್ತಾ ! ತುಂಬ ಜೋರಾದ ಮಳೆ, ಮೈಯೆಲ್ಲ ತೊಯ್ದು
ಒದ್ದೆಯಾಯಿತಲ್ಲ. ಶರೀರದಿಂದ ನೀರ್ ಸೋರ್ತಾ ಇದೆ. ಎಂತಹ ಅವಸರ
ನಿಮ್ಮದು. ಅಲ್ಲಾ, ರಂಗು ನಿಲ್ಲಬೇಕೆಂದಿದ್ದೇ. ಆದರೆ “ಮಳೆಯಲ್ಲಿ ಮರದ
ಕೆಳಗೆ ನಿಲ್ಲಬಾರದು ಸಿಡಿಲುಗಳು ಮರದ ಮೇಲೆ ಹೆಚ್ಚಾಗಿ ಬೀಳುತ್ತಿರುತ್ತವೆ”
ಎಂದು ಅಮ್ಮ ಹೇಳಿಕೊಟ್ಟ ಮಾತು ನೆನಪಿಗೆ ಬಂತು. ಏನು ಹೇಳಲಿ
ರಂಗು, ತುಂಬ ಕಪ್ಪಾದ
ಮೋಡ, ಗುಡುಗು, ಸಿಡಿಲು-ಮಿಂಚುಗಳಿಂದ
ಕೂಡಿದ ಆರ್ಭಟ ಮಳೆ. ಆಕಾಶ ಬಿರಿದು ಬರುತ್ತಿರುವ ಸಿಡಿಲು, ಗಗನವೇ
ಮುರಿದು ಬೀಳುವಂತಹ ಗುಡುಗು, ಅದಕ್ಕಾಗಿ ಹೊಲ ಉಳುವುದನ್ನು
ನಿಲ್ಲಿಸಿ ಎತ್ತುಗಳು ಹೊಡೆದುಕೊಂಡು ಬಂದೆ. ಕೊಟ್ಟಿಗೆಯಲ್ಲಿ ಎತ್ತುಗಳು
ಕಟ್ಟುವಾಗ ಆ ಸಾಹುಕಾರನ ಕಿರಿಕಿರಿ ಬೇರೆ. ರಂಗು ಏನ್ ಮಾಡದು
ಎಂದನು. ಅದಕ್ಕೆ ಏಕೆ ? ಏನಾಯಿತು. ಸಾಹುಕಾರನು ಏನಾದರೂ
ಬೈದಿರುವನಾ ? ಇಲ್ಲ. “ಮಳೆಯಿದ್ದರೂ ಅಲ್ಲಿಯೇ ಸ್ವಲ್ಪ ಹೊತ್ತು ತಡೆದು,
ಮತ್ತೆ ಮಳೆ ಕಡಿಮೆಯಾದ ನಂತರ ಕಾಲುವೆ-ಕಟ್ಟೆ ಏನಾದರೂ ಕೆಲಸ
ಮಾಡೊದು ಬಿಟ್ಟು ಈಗಲೇ ಎತ್ತುಗಳು ಹೊಡೆದುಕೊಂಡು ಮನೆಗೇಕೆ
ಬಂದೆ” ಎಂದು ಒದರುತ್ತಿದ್ದನು ಎಂದನು.
ಏನ್ ಮಾಡದು, ಈ ಸಮಾಜದ ವರ್ಗ ವ್ಯವಸ್ಥೆಯೇ ಹಾಗಿದೆ.
ಎಲ್ಲ ದುಡಿಯುವ ಆಳುಗಳಿಗೆ ಕವಡಿ ಕಿಮ್ಮತ್ತಿಲ್ಲ. ಹಗಲು ರಾತ್ರಿ ದುಡಿದರು
ಅವರಿಗೆ ಕರುಣೆ ಎಂಬುದೇ ಇಲ್ಲ. ನಸುಕಿನ ಜಾವ ಐದು ಗಂಟೆಗೆ ಎದ್ದು
ಎತ್ತುಗಳು ಹೊಡೆದುಕೊಂಡು ಹೋಗಿ ಇಡೀ ದಿನವೆಲ್ಲ ದುಡಿದು ರಾತ್ರಿ
ಮರಳಿ ಎಂಟು ಗಂಟೆವರೆಗೂ ಕೆಲಸ ಮಾಡಿದರೂ ಅವರಿಗೆ ನೆಮ್ಮದಿ
ಇರುವುದಿಲ್ಲ. ದಿನಬಿಟ್ಟು ದಿನ ರಾತ್ರಿ ಅವರ ಕೊಟ್ಟಿಗೆಯಲ್ಲಿ ಮಲಗಿ
ದನಕರುಗಳಿಗೆ ರಾತ್ರಿ ಮೇವು ಹಾಕಬೇಕು. ದುಡಿಯಲು ನೌಕರಿಗಾಗಿ
ಪಗಾರ ನೀಡಿದರೂ ಕೆಲಸದ ಸಮಯಕ್ಕೆ ಒಂದು ಮಿತಿ ಇರಬೇಡವೇ ?
ಜೀವವಿದೆ, ಆಸೆ, ಆಕಾಂಕ್ಷೆಗಳಿವೆ. ಹೆಂಡತಿ ಮಕ್ಕಳ
ಯೋಗಕ್ಷೇಮ, ಮನೆ ಸಂಸಾರ ನೋಡದು ಬೇಡವೇ ? ಎಂದಳು.
” ಇರಲಿ
ರಂಗೂ, ತಾ ಶಲ್ಯ ಕೊಡು, ತಲೆ ಮೈ ಒರೆಸಿಕೊಳ್ಳುವೆ ಎಂದನು ಮಾದಣ್ಣ.
ಆಯಿತು. ಇನ್ನೂ ಚೆನ್ನಾಗಿ ಮೈಯಲ್ಲಾ ಒರೆಸಿಕೊಳ್ಳಿ. ಒಲೆಯಲ್ಲಿ ಉರಿ
ಹೊತ್ತಿಸುವೆ. ತಲೆ ಕಾಯಿಸಿಕೊಳ್ಳಿ ಎಂದು ಒಲೆ ಹೊತ್ತಿಸಿದಳು. ಹಸಿಯಾದ
ಕಟ್ಟಿಗೆಯಿಂದ ಒಲೆ ಹೊತ್ತದೆ ಹೊಗೆ ಬರಲು ಪ್ರಾರಂಭಿಸಿತು. ಒಲೆ ಊದಿ
ಊದಿ ಕಣ್ಣಲ್ಲಿ ನೀರು ಬರುತ್ತಿತ್ತು. ಕೆಂಪಾದ ಮುಖ ಒರೆಸಿಕೊಳ್ಳುತ್ತ ತಲೆಯ
ಮೇಲಿನ ಸೆರಗು ಸರಿಪಡಿಸಿಕೊಂಡಳು.
ಅಪ್ಪಾ, ಈ ಕಡೆ ಇನ್ನೂ ನೀರಿದೆ. ಚೆನ್ನಾಗಿ ಒಣಗಲಿ, ಆ ಕಡೆ
ಬೆಂಕಿಯ ಕಡೆಗೆ ತಲೆ ಬಾಗಿಸು ಎಂದು ಹಿರಿಯ ಮಗಳು ಶಾಂತಿ
ಹೇಳುತ್ತಿದ್ದಂತೆ, ಎಂಟು ವರ್ಷದ ಕಾಂತಿ ಓಡಿ ಬಂದು ಅಮ್ಮನ ಹಿಂದೆ
ನಿಂತುಕೊಂಡಳು. ಮೈಯಲ್ಲ ಒಣಗಿದ ಮೇಲೆ ರಂಗಮ್ಮ ಒಲೆ ಉರಿಯದ
ಕಾರಣ ಅತಿ ಕಷ್ಟಪಟ್ಟು ನಾಲ್ಕಾರು ರೊಟ್ಟಿ, ಸಾರು ಸಿದ್ಧಪಡಿಸಿದಳು. ಅಷ್ಟರ
ಕಡಿಮೆಯಾಗಿರಬಹುದೆಂದು ಹೊರಗಡೆ ಮಾದಣ್ಣ
ಹೊತ್ತಿಗೆ ಮಳೆ
ಬಾಗಿಲಿನಿಂದ ಇಣುಕಿ ನೋಡಿದನು. ಮಳೆ ಇನ್ನೂ ಜೋರಾಗಿ
ಸುರಿಯುತ್ತಿತ್ತು. ಎಲ್ಲರೂ ಊಟ ಮುಗಿಸಿದರು.
ಹುಲ್ಲಿನ ಚಪ್ಪರದ ಮನೆ ಅಲ್ಲಲ್ಲಿ ಸೋರುತಿತ್ತು. ರಂಗಮ್ಮ
ಸೋರುವ ಜಾಗದಲ್ಲೆಲ್ಲ ಕಬ್ಬಿಣದ ಬುಟ್ಟಿ, ತಟ್ಟೆಗಳನ್ನು ಇಟ್ಟಳು. ನೀರು
ತುಂಬಿದ ಮೇಲೆ ಹೊರ ಚೆಲ್ಲುತ್ತ ಮಂದ ದೀಪದ ಬೆಳಕಿನಲ್ಲಿ ಬೆಚ್ಚಗಿದ್ದ
ಜಾಗದಲ್ಲಿ ಮಾದಣ್ಣ ಮತ್ತು ರಂಗಮ್ಮ ಕುಳಿತರು. ಮೂಲೆಯ ಒಂದು ಕಡೆ
ಮಕ್ಕಳಿಬ್ಬರು ಮಲಗಿಕೊಂಡರು.. ಇಡೀ ರಾತ್ರಿ ಆರ್ಭಟವಾಗಿ ಸುರಿದ
ಮಳೆಯಿಂದ ರಾತ್ರಿ ನಿದ್ದೆ ಮಾಡದೆ ಮಕ್ಕಳನ್ನು ಇರುವ ಅಲ್ಪ ಸ್ವಲ್ಪ
ಬೆಚ್ಚನೆಯ ಜಾಗದಲ್ಲಿ ಮಲಗಿಸಿ ತಾವು ಅಲ್ಲೇ ಒರಗಿ ಅರೆ ನಿದ್ದೆ ಮಾಡಿ
ರಾತ್ರಿ ಕಳೆದರು. ಬೆಳಗಿನ ಜಾವ ಐದು ಗಂಟೆಗೆ ಮಳೆ ಸುರಿಯುವುದು
ಕಡಿಮೆಯಾಗಿತ್ತು. ರಂಗಮ್ಮ ರಾತ್ರಿ ನಾಲ್ಕು ಗಂಟೆಗೆ ಎದ್ದು ಬೀಸುತ್ತಿದ್ದ
ಜೋಳದ ಹಿಟ್ಟನ್ನು ಬುಟ್ಟಿಯಲ್ಲಿ ತುಂಬಿದಳು. ಮಾದಣ್ಣನು “ರಂಗು,
ನಾನು ಹೊಲಕ್ಕೆ ಹೊರಡುವೆ. ನೀನು ಮಧ್ಯಾಹ್ನದ ಊಟ ತೆಗೆದುಕೊಂಡು
ಬಾ” ಎಂದು ಹೇಳಿದನು. ರಾತ್ರಿ ಉಳಿದ ತಂಗಳ ರೊಟ್ಟಿ ಮತ್ತು ಹಸಿ
ಮೆಣಸಿನಕಾಯಿ ಚಟ್ಟಿಯೊಂದಿಗೆ ಬುತ್ತಿ ಕಟ್ಟಿಕೊಟ್ಟಳು. ಅದನ್ನು
ತೆಗೆದುಕೊಂಡು ಹೊರಟನು. ಶಾಂತಿ ಮತ್ತು ಕಾಂತಿ ಎದ್ದು ಮುಖ
ತೊಳೆದುಕೊಂಡರು. ರಂಗಮ್ಮ ಮನೆ ಗೂಡಿಸಿದಳು. ತುಂಬ ಮಳೆಯಾದ
ಕಾರಣ ಅಂಗಳದಲ್ಲೆಲ್ಲ ನೀರು, ಕೆಸರು ತುಂಬಿತ್ತು. ಅದರಲ್ಲಿಯೇ ಅಲ್ಲಲ್ಲಿ
ನೀರಿನಿಂದ ಹರಿದು ಬಂದು ಶೇಖರವಾಗಿದ್ದ ಕಸ-ಕಡ್ಡಿಗಳನ್ನು ಗೂಡಿಸಿ
ಸ್ವಚ್ಛಗೊಳಿಸಿದಳು. ನಂತರ ಅಡುಗೆ ಮುಗಿಸಿ ಮಾದಣ್ಣನಿಗೆ ಬುತ್ತಿಕೊಟ್ಟು
ತಾನು ಕೂಲಿ ಕೆಲಸಕ್ಕೆ ಹೋಗಲು ಸಿದ್ಧಳಾದಳು.
ಮಾದಣ್ಣ ಮತ್ತು ರಂಗಮ್ಮ ಅನಕ್ಷರಸ್ಥರಾಗಿದ್ದರು. ತಮ್ಮ ಮಕ್ಕಳು
ಕಲಿತು ವಿದ್ಯಾವಂತರಾಗಲಿ’ ಎಂಬ ಅರಿವಿನಿಂದ ವಂಚಿತರಾಗಿದ್ದರು.
ಹಳೆಯ ಸಂಪ್ರದಾಯ ತುಂಬಿ ತುಳುಕುವ ಕಾಲವದು. ಗಂಡು ಮಕ್ಕಳಿಗೆ
ಓದಲು ಅವಕಾಶವಿಲ್ಲದ ಸಮಯದಲ್ಲಿ, ಹೆಣ್ಣು ಮಕ್ಕಳನ್ನು ಓದಿಸುವುದು
ತುಂಬ ಅಪರೂಪದ ಮಾತು. ಅನೇಕ ಹಿರಿಯ ಮಹಿಳೆಯರು “ಅಲ್ಲಾ
ರಂಗು ಹೆಣ್ಣು ಮಕ್ಕಳಿಗೆ ಶಾಲೆಗೆ ಕಳಿಸಿದರೆ ಏನು ಗತಿ ? ಅವರ ಶೀಲ
ರಕ್ಷಣೆ ಹೇಗೆ ? ಹೆಣ್ಣು ಓದುಬಾರದು. ಮನೆಯಲ್ಲಿ ತಾಯಿ ಹೇಳಿದ
ಮಾತು ಕೇಳಿಕೊಂಡು ಅವಳ ಕೆಲಸದಲ್ಲಿ ನೆರವಾಗಿ ನಂತರ ಮದುವೆ
ಮಾಡಿಕೊಂಡು ಗಂಡನ ಮನೆ ಸೇರುವುದು ನಮ್ಮ ಸಂಸ್ಕೃತಿಯಲ್ಲವೇ?
ಎಂದು ರಂಗಮ್ಮಳಿಗೆ ಅಂದಿನ ಕಾಲದ ಅವರವರ ಮುಟ್ಟದ
ಮಾರ್ಗದರ್ಶನ ನೀಡುತ್ತಿದ್ದರು. ರಂಗಮ್ಮ ಮತ್ತು ಮಾದಣ್ಣ
ದಂಪತಿಗಳಾಗಿದ್ದರು. ತಮ್ಮ ಮಕ್ಕಳ ಬಗ್ಗೆ ಅದರಲ್ಲಿಯೂ ಹೆಣ್ಣು ಮಕ್ಕಳ
ವಿದ್ಯಾಭ್ಯಾಸ ಕುರಿತು ಮಾತನಾಡುವುದು ಅಪರಾಧವೆಂದೇ ನಂಬಿದ್ದರು,
ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ, ರಂಗಮ್ಮ
ತಾನು ಕೂಲಿ ಮಾಡುತ್ತಿದ್ದ ಪಕ್ಕದ ಹೊಲದಿಂದ ಊಟದ ಬಿಡುವು
ಮಾಡಿಕೊಂಡು ಮಾದರಿಗೆ ಬುತ್ತಿ ಕೊಡಲು ಸಾಹುಕಾರನ ಹೊಲಕ್ಕೆ
ನಡೆದು ಬಂದಳು. ರಂಗಮ್ಮ ಬರುವುದನ್ನು ಕಂಡ ಮಾದಣ್ಣ ನೇಗಿಲು
ಹೊಡೆಯುವುದನ್ನು ನಿಲ್ಲಿಸಿದನು, ಎತ್ತುಗಳ ಕೊರಳು ಬಿಟ್ಟು ಮರದ ಕೆಳಗೆ
ಕಟ್ಟಿದನು. ಒಂದು ಸೂರು ಕೋಳದ ಕಣಕಿಯನ್ನು ಎತ್ತುಗಳಿಗೆ ತಿನ್ನಲು
ಹಾಕಿ “ಬಾ ರಂಗು ಈ ಕಡೆಗೆ ಬುತ್ತಿ ತೆಗೆದುಕೊಂಡು, ಇಲ್ಲಿ ಮರದ
ನೆರಳಲ್ಲಿ ಕುಳಿತು ಊಟ ಮಾಡೋಣ” ಎಂದು ಹೆಂಡತಿಯನ್ನು ಕರೆದನು.
ಇಬ್ಬರು ಊಟ ಮುಗಿಸಿ ತತ್ರಾಣಿಯಲ್ಲಿ ತಂದ ನೀರನ್ನು ಕುಡಿದರು.
ಆಯಿತು, ಹೊತ್ತು. ಇಳಿತಾ ಇದೆ. ಸೂರ್ಯ ನೆತ್ತಿ ಮೇಲಿಂದ
ಹೊರಳಿದ್ದಾನೆ. ನೀವು ನೇಗಿಲು
ನೇಗಿಲು ಕಟ್ಟಿ, ನಾನು ನನ್ನ ಕೆಲಸವನ್ನು
ಮಾಡುತ್ತೇವೆ ಎಂದು ರಂಗಮ್ಮ ಹೇಳಿ, ತನ್ನ ಕಳೆ ತೆಗೆಯುವ ಕೆಲಸಕ್ಕೆ
ಇತರೆ ಹೆಣ್ಣು ಮಕ್ಕಳೊಂದಿಗೆ ಸೇರಿಕೊಂಡಳು. ಕಳೆ ತೆಗೆಯುತ್ತ ಇಂಪಾಗಿ
ಹಾಡುತ್ತಿದ್ದ. ಹೆಂಗೆಳೆಯರ ಜನಪದ ಹಾಡನ್ನು ಆಲಿಸುತ್ತ ಮಾದಣ್ಣ
ನೇಗಿಲು ಹೊಡೆಯಲು ಪ್ರಾರಂಭಿಸಿದನು. ಎಲ್ಲ ಹೆಂಗಸರು ಕೆಲಸ ಮುಗಿಸಿ
ಸಾಯಂಕಾಲ ಮನೆಗೆ ತೆರಳಿದರು. ಮಾದಣ್ಣನು ತನ್ನ ದಿನ ನಿತ್ಯದಂತೆ
ಎತ್ತುಗಳು ಹೊಡೆದುಕೊಂಡು ಮನೆಗೆ ಬರುವಷ್ಟರಲ್ಲಿ ರಾತ್ರಿ ಸುಮಾರು
ಏಳು ಗಂಟೆಯಾಗಿತ್ತು.
(ಮುಂದುವರೆಯುವುದು…..)
– ಎಸ್.ಎಂ.ಜನವಾಡಕರ್.ಬೀದರ.
ಕವಿ ಪರಿಚಯ:
ಸಾಹಿತಿ ಎಸ್.ಎಂ.ಜನವಾಡಕರ್ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಎಂ.ಎ. ಬಿ.ಇಡಿಧರರು, ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಡಯಟ್‌ನ ಉಪನ್ಯಾಸಕರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ, 2008 ರಲ್ಲಿ ನಿವೃತ್ತರಾಗಿರುತ್ತಾರೆ.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ’ ಹಸಿರು ಕ್ರಾಂತಿ’ ಮತ್ತು ‘ಬುದ್ಧ ಗೆದ್ದ ಮಾರನ ಯುದ್ಧ’ (ನಾಟಕಗಳು) ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನಸಂಕಲನಗಳು) ಬಣ್ಣದ ನಂಟು ಬಿಡದೆ ಅಂಟಿಕೊಂಡವರು, ಮಾಸಿದ ಹಾಸಿಗೆ, ಬದುಕು ಕಾದ ಕಂಬನಿ (ಕಾದಂಬರಿಗಳು) ಧಮ್ಮಾವೃತ ಗೀತೆ, ತಥಾಗತ ಗಾಥೆಗಳು (ಬುದ್ಧ, ಧಮ್ಮ ಚರಿತ ಕಾವ್ಯಗಳು) ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ. (ವೈಚಾರಿಕ ಕೃತಿಗಳು) ಹಿಮ ಸಾಗರ (ಪ್ರವಾಸಕಥನ), ಕಲ್ಯಾಣ ಕಂಡ ಕಲ್ಯಾಣ (ಆಧುನಿಕ ವಚನ ಸಂಕಲನ) ಬೀದರ ಜನಪದ ಸಿರಿ (ಜಾನಪದ) ಬೆಡಗಿನ ಬೀದರ (ಐತಿಹಾಸಿಕ) ಎಂಬ ಕೃತಿಗಳನ್ನು ಪ್ರಕಟಿಸಲಾಗಿದೆ.