ಮಾಸಿದ ಹಾಸಿಗೆ (ಧಾರಾವಾಹಿ)
– ಎಸ್.ಎಮ್.ಜನವಾಡಕರ್. ಬೀದರ
(ಹಿಂದಿನ ಸಂಚಿಕೆಯಿಂದ..)
ಅಧ್ಯಾಯ-4.
ಜರತಾರಿ ಅಂಚು, ಟೋಪ ಸೆರಗಿನ ಇಳಕಲ್ ಸೀರೆ ಉಟ್ಟು
ಮನೆಯ ಅಂಗಳದ ಬೇವಿನ ಮರದ ಕಟ್ಟೆಯ ಮೇಲೆ ಕುಳಿತ ಸಿದ್ದಮ್ಮಾ ಬದಿಯಲ್ಲಿಟ್ಟುಕೊಂಡ ಎಲೆ ಚೆಂಚಿ (ತಾಂಬುಲ್ಯಾದ ಚೀಲ) ದಿಂದ ವೀಳ್ಯದೆಲೆ ತೆಗೆದು ಅದರ ಬೆನ್ನಿಗೆ ಸುಣ್ಣ ಸವರಿ ಮೇಲೆ ಕಾಚಿನ ಪುಡಿ ಸುರಿದು ನಾಲ್ಕು ಮಡಿಚಿಕೆ ಹಾಕಿ ಬಾಯಲ್ಲಿ ನಿಧಾನವಾಗಿ ಇಟ್ಟುಕೊಂಡು
ತಾಂಬುಲ್ಯ ಸವಿಯುತ್ತಿದ್ದಳು. ಮಧ್ಯಮ ವಯಸ್ಸಿನ ಸಿದ್ದಮ್ಮಾ ತನ್ನ ವಯೋಮಾನದಲ್ಲಿ ಜೀವನದ ಹಲವಾರು ಸಾಮಾಜಿಕ ಏಳು-ಬೀಳು ಕಂಡಿದ್ದಳು. ಆರ್ಥಿಕವಾಗಿ ಬಡತನದಲ್ಲಿ ಬೆಳೆದು ಬಾಳುತಿದ್ದ ಸಿದ್ದಮ್ಮಾ ಸಾಮಾಜಿಕ ಅವ್ಯವಸ್ಥೆಯ ಕೀಳು ಸಂಸ್ಕೃತಿಯ ದುರ್ಬಲತೆಯಲ್ಲಿ ಬೆಂದು ಬಾಳಿದವಳು.
ಬಾಲ್ಯತನದ ತನ್ನ ಸಿಹಿ ನೆನಪಿನಲ್ಲಿ ಕಹಿ ಪ್ರಸಂಗ ಸೇರಿದ
ಬಗೆಯನ್ನು ಅವಳ ಸ್ಮರಣಪಟಲದ ಮೇಲೆ ಹಾದು ಹೋಗುತ್ತಿದ್ದವು. ದೇವಿಯ ಹೆಸರಿನಲ್ಲಿ ನಡೆಯುತ್ತಿರುವ ಸಾಮಾಜಿಕ ಅಹಿತಕರ ಘಟನೆಯಲ್ಲಿ ಸಿಲುಕಿ ನರಳಿದ್ದ ಸಿದ್ದಮ್ಮನ ತಾಯಿ ಬಸಮ್ಮಾ ತನ್ನ ಜೀವನದ
ದಾಂಪತ್ಯತನವನ್ನು ಅನುಭವಿಸಿದ ಊರಿನ ಮಲ್ಲಣ ಗೌಡನ ಉಪಪತ್ನಿಯಾಗಿ ದೇವದಾಸಿಯ ಜೀವನ ನಡೆಸಿದವಳು. ಗೌಡ ತನ್ನ ತೃಪ್ತಿಗಾಗಿ
ಬಸಮ್ಮಾಳನ್ನು ಬಳಸಿಕೊಂಡಿದ್ದನು. ಆದರೆ ಅವಳ ಉದರದಲ್ಲಿ ಜನಿಸಿದ.
ಸಿದ್ಧಮ್ಮಳನ್ನು ತನ್ನ ಮಗಳೆಂದು ಸ್ವೀಕರಿಸಿರಲಿಲ್ಲ. ದೇವದಾಸಿಯರಿಗೆ ಏಕ ಪತಿತ್ವ ಇಲ್ಲ. ಅದಕ್ಕಾಗಿ ಸಿದ್ಧಮ್ಮ ಯಾವ ಗಂಡಿಗೆ ಜನಿಸಿದವಳು ಎಂದು ತಿರಸ್ಕರಿಸಿದ್ದನು. ಏನು ಅರಿಯದ ತಾನು ತನ್ನ ತಾಯಿಯ ಜೀವನದ
ದಾರಿಯಲ್ಲಿ ನಡೆಯುವ ಘಟನೆಗೆ ತುತ್ತಾಗುವ ಪರಸ್ಥಿತಿ ಒದಗಿ ಬಂದ ಘಳಿಗೆಗಳು ನೆನೆಯುತ್ತಿದ್ದಳು. ಮುರುಕಲು ಗುಡಿಸಲು, ನೈರ್ಮಲ್ಯ ಕಾಣದ ಮನೆಯ ಪರಿಸರದಲ್ಲಿ ಬೆಳೆದ ಸಿದ್ದಮ್ಮ “ಹೊದಿಕೆ ಹರಿದ ಚಪ್ಪರ ಮನೆಯ
ಗಳಗಳು ಎಣಿಸುವಂತೆ” ತನ್ನ ಜೀವನದ ಬರಿದಾದ
ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು.
ಓರಿಗೆಯರೆಲ್ಲರೂ ಓಣಿಯಲ್ಲಿ ನಲಿದು, ಕುಣಿದು ಆಟವಾಡಿದ ನೆನಪುಗಳು, ಅಂದಿನ ಜೀವನದ ಸಿಹಿತನವನ್ನು ಕಹಿ ಘಟನೆಯ ಸ್ಮರಣೆಯಲ್ಲಿ ಬೆರೆಸಿ
ಬೇವು ಬೆಲ್ಲದ ಯುಗಾದಿಯನ್ನು ತಂದೊಡ್ಡುತಿದ್ದವು. ಎಲ್ಲ ಗೆಳೆತಿಯರಲ್ಲಿ ಕೆಲವರು ಮದುವೆ ಮಾಡಿಕೊಂಡು ಪತಿಯ ಮನೆಯಲ್ಲಿ ದಾಂಪತ್ಯ ಜೀವನ ಸಾಗಿಸುತ್ತಿದ್ದರು. ಅವರಲ್ಲಿ ಹಲವರು ತಮ್ಮ ತಾಯಿಯ ಮೌಡ್ಯತೆ ಸಾಮಾಜಿಕ ಕಟ್ಟು ಸಂಪ್ರದಾಯದ ಬಲಿಗೆ ಸಿಲುಕಿ ದಾಸಿ ಪೂಜೆಯೊಂದಿಗೆ
ತಮ್ಮ ಸುಂದರ ಜೀವನದ ಕನಸು ಮುರಿದುಕೊಂಡಿದ್ದರು.
ಮುತ್ತೈದೆತನದ ಭಾಗ್ಯವಂತಿಕೆಯನ್ನು ಅರಿಯದ
ಜೀವಗಳು ಕ್ಷಣಿಕ ದೈಹಿಕ ಸಂಬಂಧದೊಂದಿಗೆ ಅನಿಷ್ಠ
ಪದ್ಧತಿಯ ಬಲೆಯಲ್ಲಿ ಬಿದ್ದು “ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುವ ಅನೇಕ ಪ್ರಸಂಗಗಳು ಅವರ ಮುಪ್ಪಿನ ಕಾಲದಲ್ಲಿ ಒಂದೊದಗುತ್ತಿದ್ದವು”. ಅನೇಕರು ಗಂಡಿನ ಆಧಾರವೆಂಬ ಪದದಿಂದ ದೂರ ಸರಿದು ಪರಾವಲಂಬಿಗಳಾಗಿ ತಮ್ಮ ಕೊನೆಯ ಕಾಲ
ಕಳೆಯುತ್ತಿದ್ದರು. ಪತಿ ಕಾಣದ ಆ ಹೆಂಗಸರು ಮಗಳ ಸಂಬಂಧದಿಂದ ಅಳಿಯನನ್ನು ಕಾಣುತ್ತಿರಲಿಲ್ಲ. ಹಲವಾರು ಕುಟುಂಬಗಳು ಮೈ ಮಾರುವ ವ್ಯಾಪಾರದ ಕೇಂದ್ರಗಳಾಗಿ ಪರಿವರ್ತನೆಗೊಂಡು ತಾತ್ಕಾಲಿಕವಾಗಿ ವೈಭವದ
ಬಾಳ್ವೆಯಂತೆ ಮೆರೆಯುತ್ತಿದ್ದವು. ಕರ್ನಾಟಕ ರಾಜ್ಯದ
ವಾಯುವ್ಯ ಭಾಗದ ಜಿಲ್ಲೆಗಳಲ್ಲಿ ಬನದ ಹುಣ್ಣಿಮೆಯೆಂದರೆ ಅತಿ ವಿಜೃಂಭಣೆಯ ಹಬ್ಬ. ದೇವಿಯ ಜಾತ್ರೆಗಾಗಿ
ಸಂಭ್ರಮವೋ ಸಂಭ್ರಮ, ಎಲ್ಲೆಡೆ ಕುಂಕುಮ,
ವಿಜೃಂಬಣೆಯ ಹಬ್ಬ. ದೇವಿಯ ಜಾತ್ರೆಗಾಗಿ
ದೇವಿಯ ಭಕ್ತರು ಹರ್ಷೋಲ್ಲಾಸದಿಂದ, ಭಕ್ತಿ-ಭಾವದಿಂದ ತಮ್ಮ ಸೇವೆ ಭಂಡಾರದ ಸಡಗರ ಸಲ್ಲಿಸಲು ಅಣಿಯಾಗುತ್ತಾರೆ. ದೇವಿಯ ಹೆಸರಿನಲ್ಲಿ ಅವಳ ಸೇವೆಗೈಯಲು ದಾಸಿಯರನ್ನು ಬಿಡುವ ಸಂಪ್ರದಾಯಗಳು ಅವಿರತವಾಗಿ ಜರುಗುತ್ತವೆ.
ಸಾಹುಕಾರರು, ಶ್ರೀಮಂತ ಧಣಿಗಳು, ಪಡ್ಡೆ ಹುಡುಗರಿಗೆ ತಮ್ಮ ಸೊಬತಿ ಹೆಂಗಸರನ್ನು, ಹುಡುಗಿಯರನ್ನು ಜೊತೆಗೂಡಿ ಜೀವನ ನಡೆಸುವುದು ಖುಷಿಯೋ ಖುಷಿ, ಅರೆ ಬೆತ್ತಲೆ ಸೇವೆ, ಉರುಳು ಸೇವೆ, ಜೊಗಣಿಯರ ನರ್ತನೆ, ಚೌಡಕೆ ಹಾಡುಗಳ ಭರಾಟೆಯಲ್ಲಿ
ಜಾತ್ರೆಯಲ್ಲಿ ವಿಲಾಸಿ ಕುಂಕುಮ, ಭಂಡಾರ,
ದೇವದಾಸಿಯರು – ತಲೆಯ ಮೇಲಿನ ಬುಟ್ಟಿ ವೇದಿಕೆಯಲ್ಲಿ ದೇವಿಯ ಮೂರ್ತಿ ಇಟ್ಟು, ಬೇವಿನ ಸೊಪ್ಪು, ಅರಸಿಣ,
ಕವಡೆಯ ಮಾಳ, ದಿವಟಿಗೆ, ಬತ್ತಿ ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿ, ಬೀದಿbದೇವಿ ಭಕ್ತಯರ ದಂಡು ಬೀದಿಗಳಲ್ಲಿ ಓಡಾಡುವ ಸಾಮಾನ್ಯವಾಗಿರುತ್ತದೆ.ಅಂತಹ ಚೇಷ್ಟೆ ಘಟನೆಗಳು ನಡೆದಿರುತ್ತವೆ.
ದೇವರ ಹೆಸರಿನಲ್ಲಿ, ಭಕ್ತಿಯ ನೆಪದಲ್ಲಿ ಮಹಿಳೆಯರ ಮೇಲೆ
ಪುರುಷರು . ಎಸಗುವ ಅತ್ಯಾಚಾರದ ಪ್ರಸಂಗಗಳು ಎದ್ದು ಕಾಣುತ್ತವೆ. ಗಂಡು-ಹೆಣ್ಣು ಸಮಾನ ಜೀವಿಗಳೆಂದು ಪ್ರಜ್ಞಾವಂತಿಕೆ ಸಾರುತ್ತಿದ್ದರು. ಪುರುಷರು ತಮ್ಮ ಕಾಮತೃಪ್ತಿಗಾಗಿ ಮಹಿಳೆಯರ ಮೇಲೆ ಪ್ರತಿನಿತ್ಯ
ನಿರಂತರವಾಗಿ ಅತ್ಯಾಚಾರಗಳು ನಡೆಸುತ್ತಿರುವ ಉದಾಹರಣೆಗಳು ಸಾವಿರ ಸಾವಿರಗಟ್ಟಲೆ ಇವೆ. ಸಮಾಜವು ಮಹಿಳೆಯರಿಗಾಗಿ ಯಾವ ಕೊಡುಗೆ ನೀಡಿದೆ ಎಂದು ಊಹಿಸಬಹುದಾಗಿದೆ. ವಿಶೇಷವಾಗಿ ದಲಿತ, ಹಿಂದುಳಿದಮಹಿಳೆಯರು ಈ ವ್ಯವಸ್ಥೆಗೆ ಬಲಿಯಾಗುತ್ತಿರುವುದು ಕಂಡರೆ ಸಮಾಜದ,
ಪ್ರತಿಷ್ಠಿತ ಜನಾಂಗದ, ಧನವಂತರು, ಸವರ್ಣೀಯರು ನಡೆಸುವ ದಲಿತ ಮಹಿಳೆಯರ ಶೋಷಣೆ ತುಂಬ ಶೋಚನೀಯವಾಗಿದೆ ಎಂಬುದು ನಿರ್ವಿವಾದವಾಗಿದೆ.
ಇದು ಸಮಾಜದ ವರ್ಗ ಶೋಷಣೆಯಲ್ಲದೆ ಗಂಡು-
ಹೆಣ್ಣುಗಳ ಸಮಾನತೆ ಅಂತರದ ಕಂದಕ ಇನ್ನೂ ಆಳವಾಗಿಸಿದೆ’ ಎಂದು ಸಿದ್ಧಮ್ಮ ತನ್ನ ಬಾಲ್ಯತನದಿಂದಲೂ ಕಂಡರಿಯದ ಘಟನೆಗಳು ನೆನೆಯುತ್ತ
‘ಬಾಯಿಯಲ್ಲಿನ ತಾಂಬುಲನವನ್ನು ಥೂ ‘ ಎಂದು ಉಗುಳಿದಳು.
(ಮುಂದುವರೆಯುವುದು….)
– ಎಸ್.ಎಮ್.ಜನವಾಡಕರ್.ಬೀದರ.
ಕವಿ ಪರಿಚಯ:
ಸಾಹಿತಿ ಎಸ್.ಎಂ.ಜನವಾಡಕರ್ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಎಂ.ಎ. ಬಿ.ಇಡಿಧರರು, ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಡಯಟ್‌ನ ಉಪನ್ಯಾಸಕರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ, 2008 ರಲ್ಲಿ ನಿವೃತ್ತರಾಗಿರುತ್ತಾರೆ.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ’ ಹಸಿರು ಕ್ರಾಂತಿ’ ಮತ್ತು ‘ಬುದ್ಧ ಗೆದ್ದ ಮಾರನ ಯುದ್ಧ’ (ನಾಟಕಗಳು) ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನಸಂಕಲನಗಳು) ಬಣ್ಣದ ನಂಟು ಬಿಡದೆ ಅಂಟಿಕೊಂಡವರು, ಮಾಸಿದ ಹಾಸಿಗೆ, ಬದುಕು ಕಾದ ಕಂಬನಿ (ಕಾದಂಬರಿಗಳು) ಧಮ್ಮಾವೃತ ಗೀತೆ, ತಥಾಗತ ಗಾಥೆಗಳು (ಬುದ್ಧ, ಧಮ್ಮ ಚರಿತ ಕಾವ್ಯಗಳು) ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ. (ವೈಚಾರಿಕ ಕೃತಿಗಳು) ಹಿಮ ಸಾಗರ (ಪ್ರವಾಸಕಥನ), ಕಲ್ಯಾಣ ಕಂಡ ಕಲ್ಯಾಣ (ಆಧುನಿಕ ವಚನ ಸಂಕಲನ) ಬೀದರ ಜನಪದ ಸಿರಿ (ಜಾನಪದ) ಬೆಡಗಿನ ಬೀದರ (ಐತಿಹಾಸಿಕ) ಎಂಬ ಕೃತಿಗಳನ್ನು ಪ್ರಕಟಿಸಲಾಗಿದೆ.