ಮಾತೃ ಹೃದಯ.
– ಸಾಧನಾ ರಂಜೋಳ್ಕರ್. ಬೀದರ.
“ನಾನು ಉದ್ದೇಶಪೂರ್ವಕವಾಗಿ ಅಪರಾಧ ಮಾಡಿಲ್ಲ . ಮಗುವಿನ ತುಂಟಾಟಕ್ಕೆ ಬೇಸತ್ತು, ಕಿರಿಕಿರಿಯುಂಟಾಗಿ ಹೊಡೆದೆ ಆದರೆ ನಾನು ಕನಸು ಮನಸ್ಸಿನಲ್ಲಿ ಯೋಚಿಸಲಿಲ್ಲ, ಯೋಚಿಸಲಿಲ್ಲ. ” ಎಂದು ಕತೆ, ಕತೆಯಲ್ಲಿ ನಿಂತ ಶೈಲಾ ಒಂದೇ ಸಮನೆ ರೋದಿಸುತ್ತಿದ್ದಳು.
“ಓರ್ವ ಶಿಕ್ಷಕಿಯಾಗಿ ಈ ರೀತಿ ಕ್ರೂರವಾಗಿ ವರ್ತಿಸೋದಾ? ನಿನ್ನ ಕೋಪಕ್ಕೆ ನನ್ನ ಕಂದನ ಬಲಿ ತೆಗೆದುಕೊಂಡೆಯಲ್ಲ ಪಾಪಿ. ನನ್ನ ಒಂಟಿ ಬಾಳಿಗೆ ಆಧಾರ ಆಶ್ರಯಿಸಿದೆ. ನಾನು ಹೇಗೆ ಬದುಕಲಿ? ಯಾರಿಗೋಸ್ಕರ ಬದುಕಲಿ? ಪತಿಯ ಆಸರೆ ನನಗಿಲ್ಲ. ನನ್ನ ಮಗು ಹೊಟ್ಟೆಯೊಳಗೆ ಇರುವಾಗಲೇ ಅಪಘಾತದಲ್ಲಿ ತೀರಿಹೋದರು.” ಲಾಲನೆ ಪಾಲನೆಯಲ್ಲಿಯೇ, ಕಂದನ ಭವಿಷ್ಯದ ಕನಸು ಕಾಣುತ್ತಾ ಜೀವನ ಸಾಗಿಸ್ತಾ ಇದ್ದೆ ?.
ಕೋರ್ಟಿನಲ್ಲಿ ಕಿಕ್ಕಿರಿದು ತುಂಬಿದ್ದ ಜನ ಆ ತಾಯಿಯ ಕಂಡು ತಮಗರಿವಿಲ್ಲದೆಯೇ ರೋದಿಸ ತೊಡಗಿದ್ದರು.
“ಮಾನ್ಯರೆ ನನ್ನ ತಪ್ಪನ್ನು ಮನ್ನಿಸಿ. ನನಗೆ ಶಿಕ್ಷೆ ಆದರೆ ನನ್ನ ಹನ್ನೊಂದು ತಿಂಗಳ ಮಗುವಿನ ಗತಿ? ಗದ್ಗದಿತಳಾಗಿ ಹೋಗುತ್ತಾಳೆ.
“”ಯಾಕೆ ಮಗುವಿನ ತಂದೆ ಇಲ್ವೆ ? ‘ನ್ಯಾಯವಾದಿಗಳು ತಕ್ಷಣ ಪ್ರಶ್ನಿಸದೆ ಇರುತ್ತಾರೆ.
“”ಕುಡುಕ, ಮಧ್ಯವೆಸನಿ… ಪತಿ ಇದ್ದು ಇಲ್ಲದಂತೆ, ” ಎಂದು ರೋದಿಸ ತೊಡಗಿದಳು.
ಕ್ಷಣ ಹೊತ್ತು ಮೌನ ಆವರಿಸಿತು.
ಶಾಲೆಯಲ್ಲಿ 3 ವರುಷದ ತುಂಟು ಬಾಲಕನ ತುಂಟಾಟಕ್ಕೆ ಬೇಸತ್ತ ಶಿಕ್ಷಕಿ ಶೈಲಾ ಕೋಪಾವೇಶದಿಂದ ಮಗುವಿನ ಕಪಾಳಕ್ಕೆ ಬೀಸಿ ಹೊಡೆದಾಗ ಏಟಿನ ರಭಸಕ್ಕೆ ಮಗುವಿನ ಕಿವಿಯಿಂದ ರಕ್ತ ಚಿಮ್ಮಿ ಮಗು ನಿಂತಲ್ಲಿಯೇ ಕುಸಿದು ವಿಲಿವಿಲಿ ಒದ್ದಾಡಿ ಅಸುನೀಗಿತ್ತು.
ಕೊನೆಗೂ ಈ ಕೇಸು ಕೋರ್ಟು ಮೆಟ್ಟಲೇರಿತು.
ಸಾಕ್ಷಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ, ವಾದ, ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಶೈಲಾ ಅಪರಾಧಿ ಎಂದು ಪರಿಗಣಿಸಿ ಜೀವವಿಧಿ ಶಿಕ್ಷೆ ವಿಧಿಸಲಾಗಿದೆ. ಶೈಲಾ ಅದೆಷ್ಟೇ ಕಂಬನಿಮಿಡಿದರು, ಪರಿ, ಪರಿಯಾಗಿ ಬೇಡಿಕೊಂಡರೂ, ಅಂಗಲಾಚಿದರೂ ಯಾವುದೇ ಪ್ರಯೋಜನವಾಗಲಿಲ್ಲ.
“”ಅಯ್ಯೋ ಇನ್ನು ಮುಂದೆ ನನ್ನ ಮಗುವಿನ ಪರಿಸ್ಥಿತಿ, ಗತಿ ಏನೆಂದು ಭಯ ಭೀತಳಾಗಿ , ಮಗುವಿನ ಭೀಕರ ಭವಿಷ್ಯ ನೆನೆದು ಗೋಳಾಡತೊಡಗಿದಳು.
ತನ್ನ ಮಗುವಿನ ಅಗಲಿಕೆಯ ಸಾಗರದಲ್ಲಿ ಮುಳುಗಿ ತೇಲುತ್ತಿದ್ದ “ಮೀನಾ “ಇದೆಲ್ಲನಿ ತುಂಬಿದ ಕಂಗಳಿನಿಂದ ಗಮನಿಸಿ.
” ಮಾನ್ಯ ನ್ಯಾಯಾಧೀಶರೇ ನನ್ನದೊಂದು ಕೋರಿಕೆ, ಬೇಡಿಕೆ ದಯವಿಟ್ಟು ಪೂರ್ಣಗೊಳಿಸಿ ” ಕಳಕಳಿಯಿಂದ ಮನವಿ ಮಾಡಿಕೊಂಡಳು.
ನ್ಯಾಯಾಧೀಶರು “ಏನು?””ಎಂದು ಆಶ್ಚರ್ಯದಿಂದ ಪ್ರಶ್ನಿಸಿದರು.
ಆ ಕ್ಷಣ ಕೋರ್ಟಿನ ಹಾಲ್ ನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ ಆವರಿಸಿತು.
“”ನನ್ನ ಸರ್ವಸ್ವವಾಗಿತ್ತು, ಬದುಕಿನ ಆಧಾರವಾಗಿತ್ತು, ಜೀವದ ಜೀವವಾಯಿತು ಎನ್ನ ಕಂದನನ್ನು ಕೊಂದ ಅಪರಾಧಕ್ಕೆ ಶಿಕ್ಷೆ ಅನುಭವಿಸೋದು ಅನಿವಾರ್ಯ. ಅವಳಿಗೇನೋ ಶಿಕ್ಷೆ. ಇನ್ನು ನನ್ನ ಪಾಡು ಹೇಗೆ ? ಇನ್ನು ಮುಂದೆ ನಾನು ಯಾರಿಗೋಸ್ಕರ ಬಾಳಲಿ? ಒಂಟಿಯಾಗಿ ಹೇಗೆ ಬಾಳಲಿ? ಬದುಕಿ ಬಾಳಲು ನನಗೂ ಆಧಾರ ಬೇಕು. ಕುಡುಕ ತಂದೆಯ ಆಶ್ರಯದಲ್ಲಿ ಹಿಂಸೆ, ನೋವು, ಕಷ್ಟ ಅನುಭವಿಸುತ್ತಾ ಮಗು ಅನಾಥವಾಗಿ ಬಾಳೋದು ಬೇಡ. ಹೇಗೂ ಮಗುವಿನ ತಾಯಿಗೆ ಜೀವಾವಧಿ ಶಿಕ್ಷೆ ಕೊಟ್ಟಿದ್ದಾರೆ. ಅವಳ ಮುಂದಿನ ಭವಿಷ್ಯ? ಕೊಂಚ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಶೈಲಾಳ ಮಗು ನನಗೆ ಕೊಡಿ, ಪ್ರೀತಿ, ಮಮತೆ, ವಾತ್ಸಲ್ಯದಿಂದ ಯಾವುದೇ ಕೊರತೆ ಯಾಗದಂತೆ ನನ್ನ ಮಗುವಿನಂತೆ ಗುರುತಿಸಿ, ಒಳ್ಳೆಯ ಶಿಕ್ಷಣ ಕೊಟ್ಟು ಉತ್ತಮ ನಾಗರಿಕನನ್ನಾಗಿ ಮಾಡ್ತೀನಿ . ಏನೊಂದು ಅರಿಯದ ಮುದ್ದು ಮುಗ್ದ ಮಗು ವಿನಾಕಾರಣ ಬಾಳೆಲ್ಲ ಸಂಕಟ ನೋವು ಅನುಭವಿಸೋದು ಬೇಡ ನನ್ನ ಈ ಬರಿದಾದ ಮಡಿಲಿಗೆ 11ತಿಂಗಳು ಹುಟ್ಟು ಹಾಕಿ ” ಎಂದು ಮೀನಾ ತಡೆಯದೆ ರೋದಿಸುತ್ತ ಅಂಗಲಾಚಿದಳು.
ಆಗ ಅಲ್ಲಿದ್ದವರೆಲ್ಲ ದಿಗ್ಗನೆ ಎದ್ದು ನಿಂತು ಅಚ್ಚರಿಯಿಂದ, ಮಂತ್ರ ಮುಗ್ದರಾಗಿ ಅವಳನ್ನೇ ಎವೆಯಿಕ್ಕದೆ ದಿಟ್ಟಿಸಿ “ಓ, ಮಾತೃ ಹೃದಯವೇ ! ನಿನಗೆ ಸೆಲ್ಯೂಟ್, ನಿನಗೆ ನೀನೆ ಸರಿಸಾಟಿ ” ಎಂದು ನುಡಿದು ಕಂಬನಿ ತುಂಬಿದ ಕಂಗಳಿಂದ, ಕುತೂಹಲದಿಂದ ನ್ಯಾಯಾಧೀಶರನ್ನೆ ಎವೆಯಿಕ್ಕದೆ ದಿಟ್ಟಿಸುತ್ತಾ ನಿಂತು ಬಿಟ್ಟರು.
– ಸಾಧನಾ ರಂಜೋಳ್ಕರ್.ಬೀದರ
ಲೇಖಕಿಯರ ಪರಿಚಯ:
ಹೆಸರಾಂತ ಕತೆಗಾರ್ತಿ ಸಾಧನಾ ರಂಜೋಳಕರ್ ರವರು ಬೀದರ ಜಿಲ್ಲೆ ಯವರು ಇವರು ಗೃಹಿಣಿ ಯಾಗಿದ್ದುಕೊಂಡು ಹಲ ವಾರು ಕತೆ ಕಾದಂಬರಿ ಬರೆದಿದ್ದಾರೆ. ಇವರ ‘ಕಥೆಯೊಳಗೊಂದು’, ‘ಮುಗ್ಧ – ಬೆಸುಗೆ’, ‘ಸ್ವಪ್ನ- ಸಾಗರ, `ಲೇಖನಿ, ‘ಹೂವು-ದುಂಬಿ’ ‘ಸಿಡಿಲು’ (ಕಾದಂಬರಿಗಳು) ‘ವಾಸ್ತವ‘ (ಕಥಾ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಮತ್ತು ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.