ಮತ್ತೆ ನೀನು ಮರಳಿ ಬಾ
ಜನ್ಮ ಜನ್ಮದ ಪ್ರೀತಿಗೆ ಮುನ್ನುಡಿ ಬರೆದಾಕೆ ನೀನು
ಹೇಳದೇ ಹೋದೆಯಲ್ಲ ನನ್ನ ಅಗಲಿ ಬಹು ದೂರ
ಮತ್ತೊಮ್ಮೆ ನಿ ಮರಳಿ ಬರಬಾರದೇ!
ನಿನ್ನ ಸಾಮಿಪ್ಯದಲ್ಲಿ ನಾನು ಅಮಿತ ಕನಸು ಕಂಡೆ
ಗಗನದ ಮೇಲೆ ಪ್ರೀತಿ ಹೂವು ಬಿರಿಸಿದೆ
ಬದುಕೊಂದು ಹೂ ಹಾಸಿಗೆ ಇತ್ತು ಮುಳ್ಳಾಗಿರಲಿಲ್ಲ
ನಿನ್ನ ತೊರೆದು ಲೋಕದಲಿ ಇನ್ನೇನು ಕಂಡಿರಲಿಲ್ಲ
ಮತ್ತೊಮ್ಮೆ ನಿ ಮರಳಿ ಬರಬಾರದೇ!
ಪ್ರೀತಿಯ ಬಾಗಿಲಿಗೆ ತೋರಣವನ್ನು ಕಟ್ಟಿ ಮೆರೆದೆ
ವಿರಹ ಏನೆಂಬುದು ನಾ ಸ್ವಪ್ನದಲಿ ತಿಳಿದರಲಿಲ್ಲ
ಕಷ್ಟಗಳೆಲ್ಲ ಬಿಡಾರ ಬಿಟ್ಟರೂ ಹೆದರಲಿಲ್ಲ
ನನ್ನ ನೋವುಗಳಿಗೆ ಅಡ್ಡಗೋಡೆಯಾಗಿ ನೀ
ಮತ್ತೊಮ್ಮೆ ನಿ ಮರಳಿ ಬರಬಾರದೇ!
ಯಾರ ದೃಷ್ಟಿ ನಮ್ಮ ಮೇಲೆ ಬೆಂಕಿಯಂತೆ ಕಾಡಿತ್ತೊ
ಕಾಲನ ಮೊನಚುಗತ್ತಿ ನಮ್ಮ ಬಾಂಧವ್ಯಕ್ಕೆ ಇರಿಯಿತೋ
ನೀರ ಮೇಲಿನ ಗುಳ್ಳೆಯಂತೆ ಚಣದಲ್ಲಿ ಒಡೆಯಿತೋ
ಜೀವನ ನಿಂತ ನೀರಾಗಿ ನೆನಪಿನ ಕಸದಿ ಪಾಚಿಗಟ್ಟಿದೆ
ಮತ್ತೊಮ್ಮೆ ನಿ ಮರಳಿ ಬರಬಾರದೇ!
ಡಾ. ಎಂ.ಜಿ.ದೇಶಪಾಂಡೆ.
ಕವಿ ಪರಿಚಯ:
ಖ್ಯಾತ ಸಾಹಿತಿಗಳಾದ ಡಾ. ಎಂ. ಜಿ. ದೇಶಪಾಂಡೆಯವರು ಮೂಲತಃ ತೆಲಂಗಾಣದವರು ಬೀದರನಲ್ಲಿಯೇ ಹುಟ್ಟಿ ಬೆಳೆದು ಕನ್ನಡದಲ್ಲಿ ಬಿ.ಎ ಪದವಿಯವರೆಗೆ ಅಧ್ಯಯನ ಮಾಡಿ ಬೀದರ ಡಿಸಿಸಿ ಬ್ಯಾಂಕಿನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು, ಪ್ರಸ್ತುತ ಇಬ್ಬರು ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ಬಾಲ್ಯದಿಂದಲೂ ಕನ್ನಡ ಸಾಹಿತ್ಯ, ನಾಡು- ನುಡಿಯ ಮೇಲೆ ತುಂಬ ಆಸಕ್ತರಾಗಿ, ಕನ್ನಡ ಭಾಷೆ ಸಾಹಿತ್ಯವೇ ತಮ್ಮ ಜೀವದ ಉಸಿರಾಗಿಸಿಕೊಂಡು ಕತೆ ,ಕವನ ,ಕಾದಂಬರಿ, ಲಲಿತ ಪ್ರಬಂಧ, ಲೇಖನ ಮೊದಲಾದ ಸಾಹಿತ್ಯ ರಚಿಸಿ ನಾಡಿನಾದ್ಯಂತ ಖ್ಯಾತ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು 1977-79 ರಲ್ಲಿ ‘ ಕನ್ನಡಂಬೆ ‘ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ , ಪ್ರಸಾರಗೊಂಡಿವೆ. ಇವರು ಬರೆದ ಕೃತಿಗಳು:
ಆಶಾಕಿರಣ, ಮೀರಾಬಾಯಿ, ಗೀತ ಮಾನಸ ,ಪಾರಿಜಾತ’ ಭಕ್ತಿ ಕುಸುಮಾಂಜಲಿ, ಚಿಂತನ ಮಂದಾರ, ವಚನ ಚಂದ್ರಿಕೆ, ದೇವಯಾನಿ, ಶ್ರಾವಣಿ, ಚಂದ್ರಹಾರ, ಸಾಹಿತ್ಯ ರತ್ನಗಳು, ಒಡೆದ ಕನ್ನಡಿ, ಧವಳಗಿರಿ, ತವನಿಧಿ ಸೇರಿದಂತೆ ಕಥೆ, ಕಾದಂಬರಿ, ಕಾವ್ಯ, ಚುಟುಕು, ಅನುವಾದ, ನಾಟಕ, ಇತಿಹಾಸ’ ಲೇಖನ, ವ್ಯಕ್ತಿಚಿತ್ರ ,ಚರಿತ್ರೆ ಸಂಪಾದನೆ ಸೇರಿ ಒಟ್ಟು 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಗೆ ಬೀದರ ಜಿಲ್ಲೆಯಿಂದ ” ಸಾಹಿತ್ಯ ಮಂದಾರ ” ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಗೌರವಿಸಲಾಗಿದೆ. ಇವರಿಗೆ ನಾಡಿನಾದ್ಯಂತ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.