ಮೊಬೈಲ್ ಎಂಬ ಮಾಯಾಂಗನೆಯ ಸೆರೆಯಿಂದ ಮುಕ್ತರಾಗಲು ಕೆಲವು ಸಲಹೆಗಳು
ಅಯ್ಯೋ! ಈ ಮೊಬೈಲ್ ಕೈಯಲ್ಲಿ ಹಿಡ್ಕೊಂಡಿದ್ದೇ ಆಯ್ತು ಸಮಯ ಹೋದದ್ದೇ ಗೊತ್ತಾಗ್ಲಿಲ್ಲ… ಇನ್ನೇನು ಗಂಡ ಮಕ್ಕಳು ಮನೆಗೆ ಬರುವ ಸಮಯ ಅಡುಗೆ ಆಗಿಲ್ಲ, ಹಾಳಾದ್ದು ಇನ್ಮೇಲೆ ಈ ಮೊಬೈಲ್ ಸಹವಾಸವೇ ಬೇಡ ಎಂದು ಗೊಣಗುತ್ತಾ ಅಡುಗೆಮನೆಗೆ ಓಡಿದಳು ಆ ಗೃಹಿಣಿ.
ಇವತ್ತು ನಾನು ಮೊಬೈಲ್ ಮುಟ್ಟಲ್ಲಪ್ಪ.. ನಾಳೆನೇ ಪರೀಕ್ಷೆ ಇದೆ. ಆದ್ರೂ ಒಂದು ಸಾರಿ ಎಲ್ಲಾ ನೋಟಿಫಿಕೇಶನ್ ಕಡೆ ಕಣ್ಣಾಡಿಸಿ ಓದೋಕೆ ಕೂತ್ಕೊಂಡ್ ಬಿಡ್ತೀನಿ ಎಂದು ಹೇಳಿದ ಕಾಲೇಜ್ ವಿದ್ಯಾರ್ಥಿ ಸರಿ ಸುಮಾರು 2 ಗಂಟೆಗಳ ಕಾಲ ಮೊಬೈಲ್ ನಲ್ಲಿ ಮುಳುಗಿ ಅಲ್ಲೇ ತೂಕಡಿಸಿದ್ದನು.
ನಾಳೆ ಬೆಳಿಗ್ಗೆ ಕಸ್ಟಮರ್ ಜೊತೆ ತುಂಬಾ ಇಂಪಾರ್ಟೆಂಟ್ ಮೀಟಿಂಗ್ ಇದೆ.. ಎಲ್ಲ ಕೆಲಸನೂ ಬಾಸ್ ನನಗೆ ವಹಿಸಿದ್ದಾರೆ. ಬೇಗ ಎದ್ದು ರೆಡಿಯಾಗಿ ಪ್ರೆಸೆಂಟೇಶನ್ಗೆ ತಯಾರಾಗಬೇಕು ಎಂದು ತನಗೆ ತಾನೇ ಹೇಳಿಕೊಂಡ ಐ.ಟಿ.ನೌಕರ ಇಂದು ನೆಟ್ ಫ್ಲಿಕ್ಸಲ್ಲಿ ರಿಲೀಸ್ ಆಗಿರೋ ಹೊಸ ಮೂವಿ ನೋಡೋದಕ್ಕೆ ಕುಳಿತುಕೊಂಡು ರಾತ್ರಿ ಲೇಟಾಗಿ ಮಲಗಿದ ಪರಿಣಾಮವಾಗಿ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗದೆ ಪ್ರೆಸೆಂಟೇಶನ್ ಕೂಡ ತಯಾರು ಮಾಡಿಕೊಳ್ಳದೆ ಹಾಳಾದ ಮೊಬೈಲ್ ಎಂದು ಶಪಿಸುತ್ತಾ ಗಡಿಬಿಡಿಯಿಂದ ಆಫೀಸಿಗೆ ಓಡಿದ.
ರಿಟೈರ್ ಆಗಿದೆ, ಮನೇಲಿ ಆರಾಮಾಗಿ ಹೆಂಡ್ತಿ ಮಾಡಿ ಹಾಕಿದ್ದನ್ನು ತಿನ್ಕೊಂಡು ಜುಮ್ ಅಂತ ಟೈಮ್ ಪಾಸ್ ಮಾಡಬೇಕು ಅಂತ ಅಂದುಕೊಂಡ ವ್ಯಕ್ತಿ ಇಂದು ಮೊಬೈಲ್ ನ ದಾಸಾನುದಾಸನಾಗಿದ್ದಾನೆ.
ಈ ಹಿಂದೆ ಮುಂಜಾನೆ ಏಳುತ್ತಲೇ ಎರಡು ಕೈಗಳನ್ನು ಜೋಡಿಸಿ ಕಾಣದ ದೇವರಿಗೆ ಕೈ ಮುಗಿದು ತಮ್ಮ ದೈನಂದಿನ ಕೆಲಸಗಳನ್ನು ಪ್ರಾರಂಭಿಸುತ್ತಿದ್ದ ಜನರೀಗ
ಮುಂಜಾನೆ ದಿಂಬಿನ ಕೆಳಗೆ ಇಟ್ಟ ತಮ್ಮ ಮೊಬೈಲನ್ನು ತಡಕಾಡಿ ಕೈಯಲ್ಲಿ ಹಿಡಿದು ಒಂದೈದು ನಿಮಿಷ ಬಿಸಿ ನೀರು ಕಾಯೋವರೆಗೆ ಇಂಪಾರ್ಟೆಂಟ್ ಮೆಸೇಜ್ ಗಳನ್ನು ನೋಡಿ ಬಿಡ್ತೀನಿ ಎಂದವರು ಒಂದರ ಹಿಂದೊಂದರಂತೆ ಮೆಸೇಜ್ಗಳು, ರೀಲ್ಸ್ ಗಳನ್ನು ನೋಡುತ್ತಾ ಸಮಯ ಕಳೆದುಹೋದದ್ದರ ಪರಿವೇ ಇಲ್ಲದೆ ಗಡಬಡಿಸಿ ನಿತ್ಯ ಕರ್ಮಗಳಿಗೆ ಧಾವಿಸಿ ಹೋಗುವುದನ್ನು, ಮುಂದಿನ ಎಲ್ಲಾ ಕೆಲಸಗಳಿಗೆ ಅವಸರಿಸಿ ಹಾಳಾದ್ದು ಎಲ್ಲಾ ಈ ಮೊಬೈಲ್ನಿಂದಲೇ!! ಎಂದು ಬೈದುಕೊಳ್ಳುವುದು ಪ್ರತಿ ದಿನದ ಪ್ರತಿ ಮನೆಯಲ್ಲಿ ನಡೆಯುವ ಮೊಬೈಲಾಯಣದ ಕಥೆಯಾಗಿದೆ.
ಮೊಬೈಲ್ ನ ಕುರಿತಾದ ಹಲವಾರು ಜೋಕುಗಳು ಚಾಲ್ತಿಯಲ್ಲಿದ್ದು ಆಗ ತಾನೆ ಮಗುವನ್ನು ಹೆತ್ತ ತಾಯಿ ಆಸ್ಪತ್ರೆಯ ಹಾಸಿಗೆಯ ಮೇಲೆ ಗಾಬರಿಯಿಂದ ಏನನ್ನೋ ಹುಡುಕಾಡುವುದನ್ನು ಕಂಡ ನರ್ಸ್ ಬಹುಶಹ ಆಗ ತಾನೇ ಹುಟ್ಟಿದ ಮಗುವನ್ನು ಹುಡುಕುತ್ತಿರಬಹುದೆಂದು ಭಾವಿಸಿ ನಿಮ್ಮ ಮಗು ಇಲ್ಲಿದೆ ಎಂದು ತೋರಿಸಿದಾಗ ಆ ಹೆಣ್ಣು ಮಗಳು ಊಹೂಂ! ನಾನು ಹುಡುಕುತ್ತಿರುವುದು ನನ್ನ ಮೊಬೈಲನ್ನು ಎಂದು ಹೇಳಿದ ರೀತಿ ನಗೆಯನ್ನು ಉಕ್ಕಿಸುತ್ತದೆ.
ಮತ್ತೊಂದೆಡೆ ಮೊಬೈಲ್ ನಲ್ಲಿ ಮುಳುಗಿದ್ದ ತಾಯಿ ತನ್ನ ಮಗುವನ್ನು ಫ್ರಿಜ್ಜಿನಲ್ಲಿ ಇಟ್ಟ ಹೃದಯ ಕಲಕುವ ವಿಡಿಯೋ
ಹೀಗೆ ಹತ್ತು ಹಲವು ವಿಡಿಯೋಗಳು ಮೊಬೈಲ್ನಂತಹ ಗ್ಯಾಜೆಟ್ ಗಳ ಕುರಿತ ಮನ ಕಲಕುವ ಸಂಗತಿಗಳನ್ನು ನಾವು ನೋಡುವುದು ಮತ್ತೆ ಅದೇ ಸಾಮಾಜಿಕ ಜಾಲತಾಣಗಳ ಮೂಲಕವೇ ಎಂಬುದು ವಿಪರ್ಯಾಸದ ಸಂಗತಿ. ಮೊದಲ ನೋಟಕ್ಕೆ ಮೊಬೈಲ್ ಗೆ ನಾವು ಎಷ್ಟು ಅಂಟಿಕೊಂಡಿದ್ದೇವೆ ಎಂಬುದನ್ನು ನಗೆಯುಕ್ಕಿಸುವಂತೆ ಹೇಳುವ ಈ ವಿಡಿಯೋಗಳ ಹಿಂದೆ ಆಳವಾದ ಎಚ್ಚರಿಕೆಯ ಸಂದೇಶವಿದೆ.
ಊಟದಲ್ಲಿ ಉಪ್ಪಿನಕಾಯಿ ಇರಬೇಕೇ ಹೊರತು, ಉಪ್ಪಿನಕಾಯಿಯೇ ಊಟವಾದರೆ ಏನು ಚೆನ್ನ ಅಲ್ಲವೇ? ಉಹೂಂ! ಉಪ್ಪಿನಕಾಯಿ ಎಂದೂ ಊಟವಾಗಲಾರದು.
ಹಾಗೆಯೇ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಭಾಗವಾಗಬೇಕೇ,ಹೊರತು ನಾವು ಅವುಗಳ ದಾಸರಾಗಬಾರದು. ಅಂಗೈಯಲ್ಲಿರುವ ಲಿಂಗದಂತೆ ಇದೀಗ ಎಲ್ಲರ ಕೈಯಲ್ಲೂ ಮೊಬೈಲಿದ್ದು ತಿಂಗಳಿಗಾಗುವಷ್ಟು ಮೊಬೈಲ್ ಡಾಟಾ ಇದ್ದರೆ ಆತನಷ್ಟು ಶ್ರೀಮಂತ ಬೇರಾರು ಇಲ್ಲ ಎಂಬ ಭಾವದಲ್ಲಿ ಮೊಬೈಲಿನ ಸ್ಕ್ರೀನನ್ನು ತೀಡಿದ್ದೇ ತೀಡಿದ್ದು.. ಮೊಬೈಲ್ ನಮ್ಮ ಶಕ್ತಿಸಾಮರ್ಥ್ಯಗಳನ್ನು, ಜಾಣ್ಮೆಯನ್ನು, ಉತ್ಪಾದಕತೆಯನ್ನು ಕಟ್ಟಿ ಹಾಕಿದೆ ಎಂದರೆ ತಪ್ಪಿಲ್ಲ ಅಲ್ಲವೇ?
‘ಬಿಟ್ಟೆನೆಂದರೂ ಬಿಡದೀ ಮಾಯೆ’ ಎಂಬಂತೆ ಮೊಬೈಲ್ ಫೋನ್ಗಳು ನಮ್ಮನ್ನು ಬೆನ್ನು ಬಿಡದ ಬೇತಾಳದಂತೆ ಆವರಿಸಿಕೊಂಡಿವೆ. ಕ್ಷಣ ಕಾಲ ಇದರಿಂದ ಹೊರಬರಬೇಕೆನ್ನುವ ಆಶಯ ಎಲ್ಲರಲ್ಲೂ ಇದ್ದರೂ ಹೇಗೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡುತ್ತದೆ.
ಮೊಬೈಲ್ ನ ಈ ತೊಂದರೆಗಳಿಂದ ಹೊರಬರಲು ಇಲ್ಲಿವೆ ಕೆಲವು ಸಲಹೆಗಳು
*ದಿನಕ್ಕೆ ಇಂತಿಷ್ಟೇ ಸಮಯ ಮೊಬೈಲ್ ಬಳಸುತ್ತೇನೆ ಎಂದು ನಿಮಗೆ ನೀವೇ ಒಂದು ನಿಯಮಿತತೆಯನ್ನು ಹಾಕಿಕೊಳ್ಳಿ… ಯಾವುದೇ ಕಾರಣಕ್ಕೂ, ಒತ್ತಡಕ್ಕೂ ಈ ನಿಯಮವನ್ನು ಮುರಿಯದಿರಿ. ತಂತ್ರಜ್ಞಾನದ ಬಳಕೆಯನ್ನು ಅವಶ್ಯಕವಿದ್ದಷ್ಟೇ ಮಾಡುವುದು ಸಮರ್ಥನೀಯ.
*ಸಾಮಾಜಿಕ ಜಾಲತಾಣಗಳ ಬಳಕೆಗೆ ಸಮಯ ಮಿತಿಯನ್ನು ಹಾಕಿಕೊಳ್ಳುವುದು ಒಳಿತು.ರಿಮೈಂಡರ್
ಇಟ್ಟುಕೊಂಡು ಆ ಸಮಯದ ನಂತರ ಮೊಬೈಲ್ ಅನ್ನು ಉಪಯೋಗಿಸುವುದಿಲ್ಲ ಎಂದು ನಿಯಮಗಳನ್ನು ಹಾಕಿಕೊಳ್ಳುವುದು ಅಷ್ಟೇ ಅಲ್ಲ , ಪಾಲನೆ ಮಾಡಬೇಕು.
*ಟಾಯ್ಲೆಟ್ ಗೆ ಮೊಬೈಲ ಒಯ್ಯದಿರಿ.
ಸ್ಕ್ರೀನ್ ಟೈಮಿಂಗ್ ನಲ್ಲಿ ಬಳಸುವ ಸಮಯವನ್ನು ದೈಹಿಕ ಚಟುವಟಿಕೆಗಳಿಗೆ ಮೀಸಲಾಗಿರಿಸಿ. ಸ್ನೇಹಿತರೊಂದಿಗೆ ವಾಕಿಂಗ್ ಮಾಡಿ, ಮನೆ ಓರಣವಾಗಿ ಇಡುವಲ್ಲಿ ಸಹಾಯ ಹಸ್ತವನ್ನು ಎಸಗಿ, ಬಟ್ಟೆಗಳನ್ನು ಮಡಚಿಡುವುದು, ಐರನ್ ಮಾಡುವುದು, ಗಿಡಗಳಿಗೆ ನೀರುಣಿಸುವುದು ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
*ದೈನಂದಿನ ಸ್ಕ್ರೀನ್ ಬಳಕೆಯ ಸಮಯವನ್ನು ಕಡಿಮೆ ಮಾಡಿದ ನಂತರದ ಬೆಳವಣಿಗೆಗಳನ್ನು ಪುಸ್ತಕದಲ್ಲಿ ಗುರುತು ಹಾಕಿಕೊಳ್ಳಿ. ನಿಮ್ಮ ಭಾವನಾತ್ಮಕ ಸ್ಥಿತ್ಯಂತರಗಳು ಕಡಿಮೆಯಾಗಿ ನೀವು ಉಲ್ಲಸಿತರಾಗಿದ್ದರೆ,ಒಳ್ಳೆಯ ನಿದ್ರೆ ಮುಂತಾದ ಧನಾತ್ಮಕ ಪರಿಣಾಮಗಳ ಅರಿವು ಉಂಟಾದಾಗ ನಿಮಗೆ ನಿಮ್ಮ ಈ ಗ್ಯಾಜೆಟ್ಗಳಿಂದ ದೂರವಿರುವ ಕಾರ್ಯಕ್ಕೆ ಮುನ್ನಡೆ ಖಂಡಿತವಾಗಿಯೂ ಸಿಕ್ಕುತ್ತದೆ.
ಮನೆಯ ಊಟದ ಕೋಣೆ ಮತ್ತು ಮಲಗುವ ಕೋಣೆಯಲ್ಲಿ ಮೊಬೈಲ್, ಲ್ಯಾಪ್ಟಾಪ್, ಟಿವಿ ಇರದಂತೆ ನೋಡಿಕೊಳ್ಳುವ ಮೂಲಕ ಕೂಡ ಡಿಜಿಟಲ್ ಡಿಟಾಕ್ಸ್ ಮಾಡಬಹುದು. ಊಟದ ಟೇಬಲ್ಲಿಗೆ ಮೊಬೈಲನ್ನು ತರದಂತೆ ಕಡ್ಡಾಯವಾಗಿ
ನಿಷೇಧಿಸಬೇಕು.
ಯೋಗ,ದೀರ್ಘ ಉಸಿರಾಟ ಕ್ರಿಯೆಗಳು, ಧ್ಯಾನದಂತಹ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ತಾಂತ್ರಿಕ ಉಪಕರಣಗಳನ್ನು ಬಳಸದೆ ನಿಮ್ಮದೇ ಪುಸ್ತಕ ಇಲ್ಲವೇ ಡೈರಿಯಲ್ಲಿ ದೈನಂದಿನ ಪ್ರಗತಿಗಳನ್ನು ದಾಖಲು ಮಾಡುವ ಮೂಲಕ ಸ್ಪೂರ್ತಿ ಹೊಂದಬೇಕು.
ದೈಹಿಕ ಆರೋಗ್ಯಕ್ಕಾಗಿ ಉಪವಾಸವನ್ನು ಆಚರಿಸುವಂತೆಯೇ ತಾಂತ್ರಿಕ ಉಪಕರಣಗಳ ಬಳಕೆಯ ಉಪವಾಸವನ್ನು ಆಚರಿಸಬೇಕು. ದಿನಕ್ಕೆ ಕನಿಷ್ಠ ಒಂದು ಗಂಟೆಯಿಂದ ಎರಡು ಗಂಟೆ ಅವಧಿಯವರೆಗೆ ಕ್ರಮೇಣವಾಗಿ ವಿಸ್ತರಿಸುತ್ತಾ ಡಿಜಿಟಲ್ ಮಾಧ್ಯಮಗಳನ್ನು ದೂರವಿಡಬೇಕು. ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಡಿಜಿಟಲ್ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸದೇ ಇರಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗಬೇಕು.
ಮದ್ಯಪಾನ, ಧೂಮ್ರಪಾನ ಮತ್ತು ಮಾದಕ ವಸ್ತುಗಳ ಸೇವನೆಗಳನ್ನು ಮಾತ್ರ ದುಶ್ಚಟ ಎಂದು ಪರಿಗಣಿಸಬೇಕಾಗಿಲ್ಲ.ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವಿಕೆ ಕೂಡ ದುಶ್ಚಟ ಎಂದು ಪರಿಗಣಿಸುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮೊಬೈಲ್ ನ ವಿಪರೀತ ಬಳಕೆಯಿಂದ ಮಾನಸಿಕವಾಗಿ ಅಸ್ವಸ್ಥರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಮಹಾನಗರಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಡಿ ಅಡಿಕ್ಷನ್ ಸೆಂಟರ್ ಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯ ಅರಿವಾಗಬಹುದು.
ಕೇವಲ ಎರಡು ದಶಕಗಳ ಹಿಂದೆ ಮೊಬೈಲ್ ವಾಮನನಂತೆ ನಮ್ಮಲ್ಲಿ ಕಾಲಿರಿಸಿದ ಮೊಬೈಲ್ ಇಂದು ತ್ರಿವಿಕ್ರಮನಂತೆ ಜಗದಗಲ ಮುಗಿಲಗಲ( ಅಂಗೈಯಗಲ ) ಪಸರಿಸಿದೆ.
ಆರೋಗ್ಯ ಕಾಯ್ದುಕೊಳ್ಳಲು ಅವಶ್ಯವಿದ್ದಷ್ಟೇ ಆಹಾರ ಸೇವಿಸುವ, ಹಿತಮಿತವಾದ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೊಬೈಲ್ ಎಂಬ ಮಾಯಾಂಗನೆಯ ಸೆರೆ ಬಿಡಿಸಿಕೊಂಡು ಸಾರ್ಥಕ ಬದುಕನ್ನು ಸಾಗಿಸೋಣ ಎಂಬ ಸಂಕಲ್ಪದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್