ಮೊದಲ ಗಿರಾಕಿ. (ಕತೆ)
ಶಾರಿ ಕಣ್ಣು ತೆರೆದಾಗ ರೈಲು ಬೆಂಗಳೂರು ತಲುಪಿತ್ತು. ಅಕ್ಕಪಕ್ಕ ನೋಡಿದರೆ ಜನ ಸಾಲುಗಟ್ಟಿ ಇಳಿಯುತ್ತಿದ್ದರು. ತನ್ನ ಜೋತೆಗಿದ್ದ ಮಲತಾಯಿ ಮತ್ತು ಮಲಸಹೋದರರು ಕಾಣಲಿಲ್ಲ. ಕೆಳಗಿಳಿದಿರಬೇಕೆಂದು ಹುಡುಕಲಾರಂಭಿಸಿದ್ಪಳು. ಎಲ್ಲಿಯೂ ಕಾಣಲಿಲ್ಲ.
ಜನ ಮಾತ್ರ ಸ್ಟೇಷನ್ನಿನ್ ಹೊರ ಹೋಗಲು ತರಾತುರಿಯಲ್ಲಿದ್ದರು. ಇರುವೆಯಂತಹ ಜನರ ಸಾಲುಗಳ ಮಧ್ಯೆ ಎಲ್ಲೆಂಬುದು ತಿಳಿಯಲಿಲ್ಲವಾದ್ದರಿಂದ ಆಕೆ ಎದೆ ಒಡೆದುಕೊಂಡು, ನೀರ ಬಿಟ್ಟ ಮೀನಿನಂತೆ ಚಡಪಡಿಸಿ ಈ ಬೆಂಗ್ಳೂರು ಸಿಟಿಯಲ್ಲಿ ಅನಾಥೆಯಾದಳು.
ಶಾರಿ ಹದಿನೆಂಟರ ಹರೆಯದ ಹುಡುಗಿ. ಅಷ್ಟೇನು ಚಲುವೆಯಾಗಿರಲಿಲ್ಲ. ಆದರೂ ಮೈ ಕೈಯಿಂದ ತುಂಬಿಕೊಂಡಿದ್ದಳು. ಅವಳಲ್ಲಿ ಯೌವನಕೇನು ಕೊರತೆಯಿರಲಿಲ್ಲ. ಹಾಗಂತಲೆ ಏನೋ! ನಡೆದಲ್ಲೆಲ್ಲ ಕಾಮುಕರ ದೃಷ್ಟಿ ಇವಳೆಡೆಗೆ ಹಾಯ ತೊಡಗಿತ್ತು.
ಇದ್ಯಾವುದೂ ಲೆಕ್ಕಿಸದೆ ಶಾರಿ “ಹೇ ದ್ಯಾವ್ರೇ” ನನ್ ಚಿಕ್ಕಮ್ಮ ಹೀಗೇಕೆ ಮಾಡಿದ್ಳು? ನನ್ನನ್ಯಾಕೆ ಬಿಟ್ಟು ಹೋದ್ಳು . ನಾನೇನಂತ ತಪ್ಪ ಮಾಡ್ದೆ” ಅಂತ ಮನದಲ್ಲಿ ನೊಂದುಕೊಂಡು ಕಣ್ಣಿರಿಟ್ಟಳು. ಇರ‍್ಲಿ, ಈ ಶಾರಿ ಯಾರು? ಬೆಂಗಳೂರಿಗೆ ಯಾಕ ಬಂದ್ಳು ಅನ್ನೋದು ಹೇಳಬೇಕಾದ್ರೆ ಅದೊಂದು ಬೇರೆ ಕತೆಯೇ ಇದೆ.
ಶಾರಿ ಬೀದರಿನವಳು. ಪಾಪ್! ಮೂರು ವರ್ಷದವಳಿದ್ದಾಗಲೆ ತಾಯಿಯನ್ನು ಕಳೆದುಕೊಂಡ ದುರಾದೃಷ್ಟೆ. ಮುಂಬೈಯಲ್ಲಿದ್ದ ಶಾಮಣ್ಣ ತನ್ನ ಹೆಂಡ್ತಿಯ ಆಕಸ್ಮಿಕ ಸಾವಿನಿಂದ ದುಃಖಿತನಾಗಿ ಚಿಕ್ಕ ಮಗಳ ಭವಿಷ್ಯಕ್ಕೊಸ್ಕರ ಎರಡನೇ ಮದ್ವೆಯಾಗಬೇಕಾದ ಅನಿವಾರ್ಯತೆ ಬಂತು. ಯಲಹಂಕದ ರಾಚಪ್ಪ ಮುಂಬೈ ಜೋಪಡ ಪಟ್ಟಿಯಲ್ಲಿ ವಾಸವಾಗಿದ್ದ. ಅವನ ಮಗಳೆ ಕಮಲಿ. ಶಾಮಣ್ಣನ ಮಗಳಿಗೆ ತಾಯಿಯಾಗಿ ಬಂದಳು. ರಾಚಪ್ಪ ಮಗಳ ಮದುವೆ ಮಾಡಿ ಬೆಟ್ಟದ ಹೊರೆ ಇಳಿಸಿಕೊಂಡವನಂತೆ ಅಲ್ಲಿಂದ ತಿರುಗಿ ಯಲಹಂಕಕ್ಕೆ ಕುಟುಂಬ ಸಮೇತ ವಾಪಸ್ಸಾಗಿದ್ದ.
ಕಮಲಿಗೆ ಮದ್ವೆಯಾಗಿ ವರ್ಷಕ್ಕೊಂದರಂತೆ ಎರಡು ಗಂಡು ಮಕ್ಳಾಗಿದವು. ಆಗ ಆಕೆಗೆ ಶಾರಿಯ ಮೇಲಿನ ಪ್ರೀತಿ ಕಡಿಮೆಯಾಗತೊಡಗಿತು. ಹೇಗೋ ! ಶಾರಿ ಬೆಳೆದು ದೊಡ್ಡವಳಾದಳು. ಶಾಮಣ್ಣನು ಮಗಳ ಮದ್ವೆ ಮಾಡಿ ಮಲತಾಯಿ ಕಷ್ಟದಿಂದ ದೂರ ಮಾಡಬೇಕೆಂದು ಕೊಂಡಿದ್ದ. ಆದರೆ ವಿಧಿಯಾಟವೆ ಬೇರೆಯಾಗಿತ್ತು. ಶಾಮಣ್ಣ ಇದ್ದಕ್ಕಿದ್ದಂತೆ ‘ಹಾರ್ಟ್ ಅಟ್ಯಾಕ್” ಆಗಿ ಇಹಲೋಕ ತ್ಯೆಜಿಸಿದರಿಂದ ಆಸರೆಯಾಗಿ ನಿಂತ ಮರವೆ ಬಿರುಗಾಳಿಗೆ ನೆಲಕಪ್ಪಳಿಸಿದಾಗ ಬಳ್ಳಿಗಾದ ಗತಿಯೇ ಶಾಮಣ್ಣನ ಹೆಂಡ್ತಿ ಮಕ್ಕಳಿಗಾಯಿತು. ಈಗ ಕಮಲಿಗೆ ಬದುಕೆ ದುಸ್ತರವಾದಾಗ ಶಾರಿಯ ಮದ್ವೆ ಮಾಡುವುದು ಹೇಗೆ? ಎಂಬ ಪ್ರಶ್ನೆ ಕಾಡಿತ್ತು. ಆದ್ದರಿಂದ ಹೇಗಾದರೂ ಮಾಡಿ ಅವಳಿಂದ ದೂರ ಸರಿಯಲು ಒಳಸಂಚು ಹೂಡಿದಳು.
ಒಂದಿನ ಕಮಲಿ ಶಾರಿಯ ಹತ್ತಿರ ಬಂದು
“ಶಾರದಾ, ನಮಗೀಗ ಈ ಮುಂಬೈ ಬದುಕು ಸಾಕು. ನಾವೀಗ ಬೆಂಗ್ಳೂರಿಗಿ ಹೋಗೋಣ ನನ್ ಜೋತೆ ಬರ‍್ತಿಯಾ?” ಅಂತ ಕೇಳಿದಾಗ ಆಕೆಗೆ ಬೇರೆ ದಾರಿಯೇ ಇಲ್ಲದ ಮೇಲೆ ‘ಹೂಂ’ ಅಂದಳು. ಆಗ ಕಮಲಿ ತನ್ನೆರಡು ಮಕ್ಕಳೊಂದಿಗೆ ಶಾರೀನ ಕರೆದುಕೊಂಡು ರೈಲು ಹತ್ತಿದಳು.
ಕಮಲಿಯ ತವರೂರು ಯಲಹಂಕವಾದ್ದರಿಂದ ತನ್ನೆರಡು ಮಕ್ಕಳೊಂದಿಗೆ ಶಾರಿ ನಿದ್ರೆಯಲ್ಲಿದ್ದಾಗ ಅಲ್ಲೆ ಇಳಿದು ಅವಳಿಂದ ಮುಕ್ತಿ ಪಡೆದಳು. ಶಾರಿಗೆ ಕಮಲಿಯ ತವರು ಮನೆ ಬೆಂಗಳೂರು ಎಂದು ತಿಳಿದಿತ್ತು. ಆದ್ರೆ ಪೂರ್ತಿ ವಿಳಾಸ ತಿಳಿದಿರಲಿಲ್ಲ. ಚಿಕ್ಕಮ್ಮನ ಮೇಲೆ ಆಕೆಗೆ ಪೂರ್ತಿ ವಿಶ್ವಾಸವಿತ್ತು. ಆದ್ರೆ ಅವಳೀ ರೀತಿ ಮೋಸ ಮಾಡ್ತಾಳೆಂದುಕೊಂಡಿರಲಿಲ್ಲ.
ಅವಳು ಮಾಡಿದ ದ್ರೋಹಕ್ಕೆ ಶಪಿಸಿದಳು. ತಿರುಗಿ ಮುಂಬೈಗೆ ಟೀಕೆಟಿಲ್ಲದೆ ಪ್ರಯಾಣಿಸಬೇಕೆಂದರೆ ಅಲ್ಲಿ ತನ್ನವರಾರು ಇರ‍್ಲಿಲ್ಲ. ತನ್ನ ಸ್ವಂತ ಊರು ಬೀದರಕ್ಕೆ ಹೋಗಬೇಕಾದ್ರೆ ಅಲ್ಲಿಯೂ ತನ್ನವರ ಸಂತತಿ ಇಲ್ಲದ ಮೇಲೆ ಆಶ್ರಯ ಬಯಸುವುದಾದರೂ ಯಾರಿಗೆ? ಇನ್ನೂ ಇಲ್ಲೆ ಉಳಿದು ಚಿಕ್ಕಮ್ಮಳಿಗೆ ಹುಡುಕಿದ್ರೆ ಎಷ್ಟೋ ವಾಸಿ” ಅಂತ ಗಟ್ಟಿ ಮನಸ್ಸು ಮಾಡಿ ಹುಡುಕಿ ಸುಸ್ತಾದಳು. ಹಸಿವು ಹೆಚ್ಚಾಗಿ ಹೊಟ್ಟೆಯೆಂಬುದು ಬೆನ್ನಿಗಂಟಿತ್ತು. ಏನಾದ್ರೂ ತಿನ್ನಬೇಕಾದ್ರೆ ಕೈಯಲ್ಲಿ ಕಾಸಿರಲಿಲ್ಲ. ಮೈಯಲ್ಲಿ ಕಸುವಿರಲಿಲ್ಲ. ಬರೀ! ನೀರು ಕುಡಿದು ದಣಿವಾರಿಸಿಕೊಂಡಳು. ಆಗ ರಾತ್ರಿ ಒಂಭತ್ತು. ಕತ್ತಲಾಗಿದ್ದರಿಂದ ಅಲ್ಲೆ ಮೆಜೆಸ್ಟಿಕ್ ಕಂಬಗಳ ಕೆಳಗೆ ಮಲಗಿದರಾಯಿತು ಎಂದು ನಿರ್ಧರಿಸಿದಳು. ತಿರುಗುವ ಜನ ಕಡಿಮೆಯಾಗಲಿಲ್ಲ. ಹೇಗೋ ! ಹೊಟ್ಟೆ ಹುರಿ ಹಾಕ್ಕೊಂಡು ಮೂಲೆಯೊಂದರಲ್ಲಿ ನಿಂತಳು. ಅಲ್ಲೆಲ್ಲ ಕೆಂಪು ದೀಪಗಳ ಕೆಳಗೆ ಹೆಂಗಸರು, ಹುಡುಗಿಯರು ತಮ್ಮನ್ನು ತಾವೆ ಮಾರಿಕೊಳ್ಳುವ ರಾತ್ರಿ ಎಂಗೇಜಿನ ಮಾತಾಡತೊಡಗಿದರು. ಶಾರಿ ಮುಂಬೈ ಶಹರದಲ್ಲಿ ಬೆಳೆದವಳಾದ್ದರಿಂದ ಈ ಹೆಂಗಸರ ದಂಧೆ ಆಕೆಗೆ ಹೊಸದೇನು ಅನಿಸಲಿಲ್ಲ. ಆದರೂ ತನಗೆ ಅನುಭವವಿಲ್ಲವೆಂದು ಸುಮ್ಮನಾದಳು. ಆಕೆ ನಿಂತಲೆಲ್ಲ. 15 ವರ್ಷದ ತರುಣರಿಂದ 50 ವರ್ಷದ ಮುದುಕರವರೆಗಿನ ಜನ ಕಾಮದೃಷ್ಟಿಯಿಂದ ನೋಡುತ್ತಿದ್ದರು. ಆಕೆ ಅಲ್ಲಿಂದ ದೂರ ಸರಿದು ಸಿಟಿ ಬಸ್ ನಿಲ್ದಾಣದಲ್ಲಿ ಆ ರಾತ್ರಿ ಕಾಲ ಕಳೆದಳು.
ಬೆಳಗಾದಾಗ ಎದ್ದು ಮುಖ ತೊಳೆದುಕೊಂಡು ಬರಿ ನೀರು ಕುಡಿದಳು. ಹಸಿವು ಇಂಗಲಿಲ್ಲ. ಬದಲಾಗಿ ಹೊಟ್ಟೆಲಿ ಕರುಳು ಹಿಸುಕಿದಂತಾಗುತ್ತಿದ್ದತ್ತು. ಈ ಹಸಿವಿನ ಸುಳಿಯಲ್ಲಿ ಸಿಲುಕಿದ ಅವಳಿಗೆ ಕಮಲಿಗೆ ಹುಡುಕುವ ಉತ್ಸಾಹವೇ ಉಡುಗಿದಂತಾಗಿತ್ತು. ಹೇಗಾದ್ರು ಮಾಡಿ ಹೊಟ್ಟೆ ತುಂಬಿ ಕೊಳ್ಳಬೇಕೆಂಬ ಉದ್ದೇಶದಿಂದ
“ಪೈಲಾ ಪೆಟೋಬ ನಂತರ್ ವಿಠೋಬಾ” ಎಂಬ ಮರಾಠಿ ಉಕ್ತಿಯಂತೆ ಆಕೆಯೊಂದು ನಿರ್ಧಾರಕ್ಕೆ ಬಂದು ಮೆಜೆಸ್ಟಿಕ್‌ನ ಹೋಟೆಲೊಂದರ ಕಡೆಗೆ ಬಂದು “ಅಣ್ಣಾವ್ರೇ! ನಂಗೆ ಸ್ವಲ್ಪ ಊಟ ಕೊಡ್ರೀ! ಎಡ್ ದಿನದಿಂದ ಉಪಾಸ್ ಇದ್ದಿನಿ” ಅಂತ ಆಸೆಗಣ್ಣಿನಿಂದ ನುಡಿದಾಗ
“ಏ ನಡಿಯಮ್ಮಾ! ಊಟಾಂತ ಊಟ. ಇದೇನು ಧರ್ಮ ಛತ್ರನಾ ? ಪುಗಸಟ್ಟೆ ಕೊಡ್ಲಿಕ್, ನಡಿ ಮುಂದ್ ನಡಿ ! ನೋಡಿದ್ರೆ ಗುಂಡ ಕಲ್ಲಾಂಗ ಕಾಣ್ತಿಯಾ ಭೀಕ್ಷೆ ಬೇಡ್ಲಿಕ್ ನಾಚ್ಕೆಯಾಗಲ್ವಾ? ಬಂದು ಬಿಟ್ಳು ಬೆಳ್ಳಿಗ್ಗೆ ಬೆಳ್ಳಿಗ್ಗೆನೆ….! ಅಂತ ಹೋಟೆಲ್ ಮಾಲಿಕ ಗದರಿಸಿದರಿಂದ ಅವನ ಮಾತು ಆಕೆಗೆ ಈಟಿಯಂತೆ ನಾಟಿತ್ತು. ಆದ್ದರಿಂದ ಮುಂದೆ ಯಾವ ಹೋಟೆಲ್ ಮನೆಗಳಲ್ಲೂ ಭೀಕ್ಷಾನ್ನ ಕೇಳಲು ಅವಳಿಗೆ ಮನಸ್ಸಾಗಲಿಲ್ಲ. ಮತ್ತೆ ಅಲ್ಲಿಂದ ತಿರುಗಿ ಬಸ್ ನಿಲ್ದಾಣಕ್ಕೆ ಬಂದು ಅವೆ ನಲ್ಲಿ ನೀರು ಕುಡಿದಳು. ಅನ್ನವಿಲ್ಲದೆ ಹೊಟ್ಟೆಲಿ ನೀರು ‘ಡೊಳ್ಳಿಸಿ’ ತಲೆ ‘ದಿಂ’ ಅಂದು ಭೂಮಿ ಆಕಾಶ ಒಮ್ಮೆ ತಿರುಗಿದಂತಾಗಿ ನೆಲಕೆ ಕುಸಿದಳು. ಅಲ್ಲಿಯ ಜನ
ಅನುಕಂಪದಿಂದ ಎಬ್ಬಿಸಿ ಕೂಡಿಸಿದರು. ಆಕೆ ತ್ರಾಣವಿಲ್ಲದಿದ್ದರೂ ಹೇಗೋ ಸುಧಾರಿಸಿಕೊಂಡಳು. ತನಗಾದ ಹಸಿವಿನ ಬಗ್ಗೆ ಯಾರಲ್ಲೂ ಹೇಳಿಕೊಳ್ಳದೆ ಅದೊಂದು ದಿನ ತಡೆದುಕೊಂಡಳು.
………….
ಹೊತ್ತು ಮುಳುಗಿ ಕತ್ತಲದ್ದರಿಂದ ಮೆಜೆಸ್ಟಿಕ್‌ನ ಕೆಂಪು ದೀಪಗಳು ಜಗ್ಗನೆ ಹೊತ್ತುಕೊಂಡವು. ಮತ್ತೆ ಅದೇ ಸ್ಥಳದಲ್ಲಿ ನಿನ್ನೆಯಂತೆ ಹೆಂಗಸರ ಮೈ ಮಾರಾಟದ ದಂಧೆ ನಡೆದಿತ್ತು. ಒಬ್ಬೊಬ್ಬರದು ಐದನೂರು, ಸಾವಿರದವರೆಗಿನ ರೇಟು ಕಂಡು ಶಾರಿ ನನ್ನ ಯೌನಕ್ಕೇನು ಕೊರತೆಯಿದೆ. ನಾನೇಕೆ ಈ ದಾರಿ ತುಳಿಯಬಾರದು ? ಬರಿ, ಶೀಲವಂತರಾಗಿ ಕುಳಿತರೆ ನಮ್ಮಂಥ ಅನಾಥರ ಗತಿಯೇನು? ತುತ್ತು ಅನ್ನಕ್ಕೂ ಆಶ್ರಯಕ್ಕೂ ದಾರಿ
ಸಿಗದಿದ್ರೆಬ ಮಾಡುವುದಾದರೂ ಏನು ? ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂತಾರಲ್ಲ! ಅವರೆಲ್ಲ ಮೈ ಮಾರಲು ಕಾರಣ ಇದೇ ಇರಬಹುದೇ ? ಅಂತ ತನ್ನತಾನೆ ಪ್ರಶ್ನಿಸಿಕೊಂಡಳು. ಎರಡು ದಿನ ಊಟವಿಲ್ಲದರಿಂದ ಮುಖ ಬಾಡಿತ್ತು. ತುಟಿಗಳು ಒಣಗಿದ್ದವು. ಉತ್ಸಾಹ ಕುಂದಿತ್ತು. ಕಣ್ಣು ಒಳ ಸೇರಿದವು. ಕೂದಲು ಎಣ್ಣೆ ಕಾಣದೆ ಇದ್ದವು. ಆದರೂ ಸರಿಪಡಿಸಿಕೊಂಡಳು. ಒಣಗಿದ ತುಟಿಗೆ ನಾಲಿಗೆಯಿಂದ ಸವರಿ ಹಸಿಗೊಳಿಸಿದಳು. ಅವಳ ಕಣ್ಣುಗಳಲ್ಲಿರುವುದೀಗ ಒಂದೇ ಆಸೆ ‘ಹಸಿವು’ ತಿರಿಸಿಕೊಳ್ಳುವುದು.
ಶಾರಿ, ನಿಂತ ಸ್ಥಳ ಬಸ್ ಸ್ಟಾಂಡಿಗೋ! ರೈಲ್ವೆ ಸ್ಟೇಷನ್ನಿಗೋ! ಹೋಗುವ ದಾರಿಯಾಗಿದ್ದರಿಂದ ಅದೇಷ್ಟೋ ಜನ ಅವಳ ಮುಂದೆ ಹಾದು ಹೊಗುತಿದ್ದರು ಲೆಕ್ಕವಿಟ್ಟವರಾರು?
ಬರುವವರು ಹೋಗುವವರು ತಿರುಗಿ ನೋಡಿಯಾರು ಎಂಬ ಆಸೆಯ ಟಿಸಿಲು ಅವಳ ಕಂಗಳಿಗೆ.
ಜನ ತಿರುಗಿ ನೋಡಿದರೂ ನಿಲ್ಲುವವರು ಕಡಿಮೆ. ನಿಂತರು ಅವರಾಗಿಯೇ ಕೇಳಲಿ ಎಂಬ ಬಯಕೆ ಅವಳದ್ದು. ಪಾಪ! ಹೊಸ ಅನುಭವ ನಾಚ್ಕೆ ಇರಬೇಕು. ಕೊನೆಗೆ ಒಂದು ನಿರ್ಧಾರಕ್ಕೆ ಬಂದು ಮೆಜೆಸ್ಟಿಕನ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಕಂಬದ ಕೆಳಗೆ ನಿಂತಳು. ಅಂಥದರಲ್ಲಿ ಪೋಲಿಸರು ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಿದ್ದರಿಂದ ಗಿರಾಕಿಗಳು ಇವಳೆಡೆಗೆ ಸುಳಿಯಲ್ಲೊಲ್ಲರು. ಆಕೆ
ಅಲ್ಲಿಂದ ದೂರ ಸರಿದು ಮುಂದೆ ನಡೆದಳು. ಅಲ್ಲಿ ಅವಳಿಗಿಂತ ಸುಂದರವಾದ ಹುಡುಗಿಯರು ಹೆಂಗಸರು ಅದೇ ಕಾಯಕಕ್ಕಾಗಿ ತಿರುಗುತ್ತಿದ್ದ ಕಾರಣ ಆ ಗಿರಾಕಿಗಳು ಅವರೆಡೆಗೆ ನಾಯಿಗಳಂತೆ ಜೊಲ್ಲು ಸುರಿಸುತ್ತಾ ಹೋಗುತ್ತಿದ್ದರು. ಅಲ್ಲಿನ ವೇಶ್ಯೆಯರು ಚನ್ನಾಗಿ ತಿಂದು ಲವಲವಿಕೆಯಿಂದ ಶೃಂಗಾರಗೊಂಡು ನೋಡುವವರಿಗೆ ಆಕರ್ಷಕವಾಗಿ ಕಾಣುತ್ತಿದ್ದರಿಂದ ಇವಳನ್ನು ಇಷ್ಟಪಡುತ್ತಿರಲಿಲ್ಲ. ಆದ್ರೆ ಶಾರಿಗೆ ಅನುಭವವಾದದ್ದು ಇಷ್ಟೇ. ಈ ದಂಧೆಯಲ್ಲೂ ಸ್ಪರ್ಧೆ ಇದೆಯಲ್ಲಾ ! ಅಂತ ಆಕೆ ಒಮ್ಮೆ ಮೇಲೆ ಮುಖ ಮಾಡಿ “ಓ ದ್ಯಾವ್ರೇ!” ಅಂತ ಕಣ್ಣೀರು ಸುರಿಸಿದಳು. ರಾತ್ರಿ ಹನ್ನೋಂದಾದರೂ ಇವಳ
ವ್ಯಾಪಾರವಾಗಲಿಲ್ಲ. ಅನ್ನೋದಕ್ಕೆ ಇವಳು ಅಷ್ಟೇನು ಕುರುಪಿಯಲ್ಲ. ಹೊಟ್ಟೆ ತುಂಬ ಅನ್ನ, ಮೈ ತುಂಬ ಬಟ್ಟೆ ಇದ್ರೆ ಆ ವೇಶ್ಯೆಯರಿಗೆ ಸೈಡ್ ಹೊಡೆಯೋ ‘ಖಳೆ’ ಅವಳಲ್ಲಿದೆ. ಆದ್ರೆ ಎರಡು ದಿನದ ಉಪವಾಸದ ಕಾರಣ ಅವಳ ಮುಖದಲ್ಲಿ ಲವಲವಿಕೆ ಇಲ್ಲದ್ದರಿಂದ ಗಿರಾಕಿಗಳು ದೂರ ಸರಿಯುತ್ತಿದ್ದವು.
ಆಕೆ ಅದ್ಯಾವುದು ಲೆಕ್ಕಿಸದೆ ಬರುವವನಿಗಾಗಿ ನೀರಿಕ್ಷಿಸುತ್ತಿದ್ದಳು. ಅಲ್ಲಿನ ವೇಶ್ಯೆಯರು ಗಿರಾಕಿಗಳೊಂದಿಗೆ ಮನೆಗೋ, ಲಾಡ್ಜಿಗೋ ಹೋಗಿ ಬಿಟ್ಟಿದ್ದರು.
ಕೊನೆಯಲ್ಲಿ ಉಳಿದವಳು ಶಾರಿ ಒಬ್ಬಳೆ. ತನಗೀಗ ಯಾರು ಸ್ಪರ್ಧಿಗಳಿಲ್ಲವೆಂದು ಸ್ವಲ್ಪ ಸಂತಸಪಟ್ಟಳು. ಆದ್ರೆ ಗೀರಾಕಿಗಳ ಸುಳಿವೆ ಕಾಣಲಿಲ್ಲವಾದ್ದರಿಂದ ಬೇಸರವಾಗದೆ ಇರ‍್ಲಿಲ್ಲ. ನಿಂತು. ನಿಂತು ಸಾಕಾದ ಮೇಲೆ ಬಹಳ ಸಮಯದ ನಂತರ ಅದ್ಯಾರೊ ಒಬ್ಬ ದೃಡಕಾಯ ವ್ಯಕ್ತಿ ಸೀಗರೇಟಿನ ಹೊಗೆ ‘ಉಫ್ಽ’ ಅಂತ ಬಿಡುತ್ತಾ ಕಾಮದ ಹಸಿವೆಯಿಂದ ನೋಡತೊಡಗಿದ. ಈಗ ಶಾರಿಗೆ ಅರ್ಧ ಜೀವ ಬಂದಂತಾಯಿತು. ಹಸಿವು ತಾಳದೆ ನಾಚಿಕೆ ಬಿಟ್ಟು ಅವ ನಿಂತಲ್ಲಿಗೆ ನಡೆದಳು. ಆಕೆ ಬರುವುದನ್ನು ನೋಡಿ ಆತ ಕಿರುನಗೆ ನಕ್ಕ. ಶಾರಿಯು ಕೃತಕ ನಗೆ ಬೀರಿದಳು. ಆ ನಗು ಅವನಿಗೆ ಸುಂದರವಾಗಿ ಕಂಡಿರಬೇಕು. ಮರು ಕ್ಷಣವೇ ಗಂಟಲಿಗೆ ‘ಚುರ್”ಽ ಎಂದ ಸಿಗರೇಟು ಬಿಸಾಕಿ “ಹೂಂ. ಎಷ್ಟು ?” ಅಂತ ಅವಳ ರೇಟು ಕೇಳಿದ. ಆಗ ಆಕೆ ‘ತನಗ ಬೆಲೆ ಇದೆ’ ಅಂತ ಈ ಮೊದಲ ಗಿರಾಕಿಯಿಂದ ತಿಳಿದುಕೊಂಡಳು. ಆದರೂ ಎಷ್ಟು ಅಂತ ಹೇಳುವುದು ತಿಳಿಯಲಿಲ್ಲ. ಒಡನೆ ಆಕೆ “ನನಗೆ ಹಸಿವು. ಮೊದಲು ಊಟ ” ಅಂದಳು. ‘ಆಯಿತು ಬಾ” ಅಂತ ಕೈ ಸನ್ನೆ ಮಾಡಿದ. ಆಗ ಶಾರಿ ಎಲ್ಲಿ ಈ ಗಿರಾಕಿಯೂ ಕೈ ತಪ್ಪುತ್ತದೋ ! ಎಂಬ ಆತುರದಿಂದ ಅವನ ಹಿಂದೆ ನಡೆದಳು. ಈಗ ಅವಳಲ್ಲಿ ಉತ್ಸಾಹದ ಬುಗ್ಗೆ ಮೂಡಿ ಕಂಗಳಿಗೆ ಜೀವ ಬಂದಂತಾಗಿತ್ತು.
– ಮಚ್ಚೇಂದ್ರ ಪಿ.ಅಣಕಲ್.