ಮೌನ ಹೂವಾಗಿ ಅರಳಿದಾಗ..!
– ಎಂ.ಜಿ.ದೇಶಪಾಂಡೆ. ಬೀದರ
ಮಾನವಿ ದುರ್ದೈವಿ ಹೆಣ್ಣು. ಇವಳು ಒಂದು ಬಡ ಕುಟುಂಬದಲ್ಲಿ ಜನಿಸಿದಳು. ತಂದೆ ಸಿದ್ದಪ್ಪ ಓರ್ವ ರೈತ. ತಾಯಿ ರಮಾ ಸದಾ ಕಾಲ ಬಡತನದಲ್ಲೂ ನಗುನಗುತ್ತಾ ಜೀವನ ಮಾಡುತ್ತಿದ್ದಳು. ಇವರಿಗೆ ಎರಡು ಎಕರೆ ಭೂಮಿ ಇದ್ದು ಇದರಲ್ಲಿಯೇ ಬದುಕು ಸಾಗಿಸುತ್ತಿದ್ದರು. ಮಾನವಿ ಇವರಿಗೆ ದೊಡ್ಡ ಪುತ್ರಿಯಾದರೆ ರವಿ ಮತ್ತು ರಾಜ ಸಿದ್ದಪ್ಪನಿಗೆ ಗಂಡು ಮಕ್ಕಳು. ಮಾನವಿ ಹುಟ್ಟಿದಾಗಿನಿಂದಲೂ ದುರ್ದೈವೆಂಬಂತೆ ಹುಟ್ಟಿನಿಂದಲೇ ಮೂಕಿ ಮತ್ತ ಕಿವುಡಿಯಾಗಿದ್ದಳು. ಗಂಡು ಮಕ್ಕಳಲ್ಲಿ ಇಂತಹ ಯಾವುದೇ ಕೊರತೆಗಳು ಇಲ್ಲದಿದ್ದರೂ ಮಾನವಿಗೆ ಮಾತ್ರ ಯಾವ ಜನುಮದ ಅಭಿಶಾಪವೋ ಹೀಗೆ ಆಗಿತ್ತು. ತನಗೆ ತಿಳುವಳಿಕೆ ಬಂದಾಗ ಮಾನವಿ ತಾನು ಮಾತನಾಡಲು ಮತ್ತು ದನಿ ಕೇಳಲು ಅಸಮರ್ಥಳೆಂದಾಗ ತುಂಬ ನೊಂದುಕೊಂಡಿದ್ದಳು. ತಂದೆ ತಾಯಿಯರಿಗೂ ಇವಳು ಹೊರೆಯಾಗ ತೊಡಗಿದಳು. ತನ್ನೊಳಗಿನ ವಿಚಾರಗಳನ್ನು ಹೇಳುವುದಾಗಲಿ, ಸ್ಪಂದಿಸುವುದಾಗಲಿ ಇಲ್ಲದಿದ್ದಾಗ ಇದರಿಂದ ಪಾಲಕರಿಗೆ ತುಂಬಾ ದುಃಖವಾಗುತ್ತಿತ್ತು.ಇಂತಹ ಅಂಗವಿಕಲ ಸಮಸ್ಯೆ ಮತ್ತು ಅದು ಮಾನವಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಇವಳಿಗೆ ಶಿಕ್ಷಣ ಹೇಗೆ ಕೊಡಿಸುವುದು ಹೇಗೆ, ಮದುವೆ ಮಾಡುವುದು ಹೇಗೆ? ಎಂಬ ಚಿಂತೆಯಲ್ಲಿ ಪಾಲಕರು ಕೊರಗುತಿದ್ದರು. ಮಾನವಿ ಏಕಾಂತದಲ್ಲಿ ತುಂಬಾ ಆತ್ತಿದ್ದಳು. ತನ್ನಲ್ಲಿ ಇರುವ ಅನೇಕ ಭಾವನೆಗಳಿಗೆ ಬಾಯಿ ಇಲ್ಲದೆ ಸತ್ತು ಹೋಗುತ್ತಿದ್ದವು. ಮಾನವಿಯ ಜೊತೆಗಿದ್ದ ಹುಡುಗಿಯರು ಆಟ ಪಾಠದಲ್ಲಿ ತಲ್ಲೀನರಾಗಿ ಕುಣಿದುಕುಪ್ಪಳಿಸುತ್ತಿದ್ದರು. ಆದರೆ ಮಾನವಿ ಅವರೊಂದಿಗೆ ಇದ್ದರೂ ನಿರಾಶೆ ಭಾವದಲ್ಲಿ ಇರುತ್ತಿದ್ದಳು. ದೇವರು ತನಗೇಕೆ ಹುಟ್ಟಿಸಿದನು? ಎಂದು ತನ್ನೊಳಗೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದಳು. ಮಾನವಿ ಆರು ವರ್ಷದವಳಾದಾಗ ಇವಳ ತಂದೆ ತಾಯಿ ಇವಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಇದೇ ಗ್ರಾಮದಲ್ಲಿ ಚಂದ್ರಪ್ಪ ಎಂಬ ಒಬ್ಬ ಇವರ ಮಿತ್ರರು ಶಿಕ್ಷಕರಾಗಿದ್ದರು. ಇವರು ಈ ಹಳ್ಳಿ ಹತ್ತಿರ ಇರುವ ನಗರದಲ್ಲಿ ಶಿಕ್ಷಕರಾಗಿ ಸರ್ಕಾರಿ ಶಾಲೆಯಲ್ಲಿ ಸೇವೆಮಾಡುತ್ತಿದ್ದರು. ಸಿದ್ದಪ್ಪರಿಗೆ ಚಂದ್ರಪ್ಪನವರು ಆತ್ಮೀಯ ಮಿತ್ರರಾಗಿದ್ದ ಕಾರಣವಾಗಿ ಇವರ ಮುಂದೆ ಮಾನವಿ ಯ ಕುರಿತು ಶಿಕ್ಷಣ ವಿಚಾರವಾಗಿ ಹೇಳಿಕೊಂಡು ಅತ್ತಿದ್ದರು. ಇದಕ್ಕೆ ಚಂದ್ರಪ್ಪ ಇವರಿಗೊಂದು ಉಪಾಯ ಹೇಳಿದರು. “ಸಿದ್ದಪ್ಪ ನೀನು ಚಿಂತೆ ಮಾಡಬೇಡ ಇದು ಆಧುನಿಕ ಕಾಲವಾಗಿದೆ, ಇವತ್ತು ಇಂತಹ ಅನೇಕ ಅಂಗವಿಕಲರಿಗೂ ಶಿಕ್ಷಣ ಕಲಿಸುವ ಪದ್ಧತಿಗಳು ಬಂದಿವೆ. ನಾನು ಶಿಕ್ಷಕ ಸೇವೆ ಮಾಡುತ್ತಿರುವ ನಗರದಲ್ಲಿ ಮೂಕ ಮತ್ತು ಕಿವುಡ ಮಕ್ಕಳಿಗೆ ಸರ್ಕಾರಿ ಶಾಲೆ ಇದೆ ಅಲ್ಲಿ ಮಾನವಿಗೆ ಸೇರಿಸೋಣ ಎಂದು ಅಭಯವನಿತ್ತರು.ಈಗ ಸಿದ್ಧಪ್ಪನಿಗೆ ತುಂಬಾ ಸಂತಸವಾಗಿತ್ತು. ಈ ವಿಷಯವನ್ನು ತನ್ನ ಮಡದಿಯಮುಂದೆ ಹೇಳಿ ಹಂಚಿಕೊಂಡು ಖುಷಿಯಾಗಿದ್ದನು. ಮನೆಯಲ್ಲಿನ ಈ ವಿಚಾರ ಮಾನವಿಗೆ ತಿಳಿದಾಗ ಸಂತೋಷ ತುಂಬಿ ಬಂತು. ಕೆಲವು ದಿವಸಗಳ ನಂತರ ಚಂದ್ರಪ್ಪ ಶಿಕ್ಷಕರ ಸಹಾಯದಿಂದ ಮಾನವಿಗೆ ನಗರದ ಅಂಗವಿಕಲ ಶಾಲೆಗೆ ಶಿಕ್ಷಣ ಪಡೆಯಲು ಸೇರಿಸಲಾಯಿತು. ಜೊತೆಗೆ ಸರ್ಕಾರದ ಅನುದಾನದೊಂದಿಗೆ ಇವಳಿಗೆ ಕನ್ಯೆಯರ ಹಾಸ್ಟೆಲ್ ನಲ್ಲಿ ಇಡಲಾಯಿತು. ಮಾನವಿಗೆ ಕಲಿಯುವ ಆತುರತೆ ತುಂಬಾ ಇತ್ತು. ಎಲ್ಲರಂತೆ ನಾನು ತುಂಬಾ ಕಲಿಯಬೇಕು ಸಮಾಜದಲ್ಲಿ ಉನ್ನತಿ ಪಡೆದು ಸರ್ಕಾರಿ ನೌಕರಿ ಮಾಡಿ ಗಳಿಕೆಮಾಡಿ ನಮ್ಮ ತಂದೆ ತಾಯಿಯವರಿಗೆ ಆಸರೆಯಾಗಬೇಕು ಮತ್ತು ಕೀರ್ತಿ ತರಬೇಕು ಎಂದುಕೊಂಡಿದ್ದಳು. ತನಗೆ ಬಂದಿರುವ ಅಂಗವಿಕಲ ಶಾಪವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಸಾಧಿಸಬೇಕೆಂದು ಅವಳ ಮನದೊಳಗೆ ಸಂಕಲ್ಪ ಚಿಗುರಿ ಹೂವಾಯಿತು. ಈಗ ಮಾನವಿಯ ಪಾಲಕರಿಗೂ ಖುಷಿಯಾಗಿತ್ತು. ತಮ್ಮ ಮಗಳು ಶಿಕ್ಷಣ ಕಲಿಯುತ್ತಾಳೆ ಎಂಬುದು ಕೇಳಿ ಅವರಿಗೆ ಹಬ್ಬವಾಯಿತು. ಮಾನವಿಯು ಪ್ರತಿವರ್ಗದಲ್ಲೂ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಹೆಚ್ಚೆಚ್ಚು ಅಂಕಗಳನ್ನು ಗಳಿಸುವ ಮೂಲಕ ಇಡೀ ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಕೀರ್ತಿಗೆ ಪಾತ್ರಳಾಗಿದ್ದಳು. ಜೊತೆಗೆ ಗಣಕಯಂತ್ರದ ಶಿಕ್ಷಣವನ್ನು ಕಲಿತು ಜಾಣೆಯಾಗಿದ್ದಳು. ಹತ್ತನೇ ವರ್ಗದಲ್ಲಿ ಇಡೀ ನಗರಕ್ಕೆ ಪ್ರಥಮ ರ್ಯಾಂಕ್ ಪಡೆದು ಮಾನವಿ ಎಲ್ಲರ ಗೌರವಕ್ಕೆ ಪಾತ್ರರಾದಳು. ಈಗ ಮಾನವಿ ತಾನು ಹೆಚ್ಚು ಶಿಕ್ಷಣ ಪಡೆದು ರಾಜ್ಯಮಟ್ಟದಲ್ಲಿಯೂ ಬೆಳೆಯಬೇಕೆಂದುಕೊಂಡಳು. ತನ್ನಗೆ ದೊರೆತ ಗೆಳತಿಯರೊಂದಿಗೆ ಬರೆದು ಮಾತನಾಡುವ ಮೂಲಕ ಎಲ್ಲರೊಂದಿಗೆ ತುಂಬಾ ಪ್ರೀತಿಯಿಂದ ಇರುತ್ತಿದ್ದಳು. ನಗುನಗುತ್ತ ಕಾಲ ಕಳೆಯತೊಡಗಿದ್ದಳು. ಇವಳು ಅತ್ಯಂತ ಪ್ರವೀಣೆ ಇದ್ದ ಕಾರಣವಾಗಿ ಇವಳ ಶಿಕ್ಷಣದ ವೆಚ್ಚವನ್ನು ಸಹ ಸರ್ಕಾರವೇ ಭರಿಸತೊಡಗಿತ್ತು. ಮಾನವಿ ನೋಡುವುದಕ್ಕೆ ತುಂಬಾ ಸುಂದರವಾಗಿದ್ದಳು. ಗುಂಗುರು ಕೇಶರಾಶಿ, ಗೋದಿ ಬಣ್ಣದ ಚೆಲುವೆ, ಬೆಳ್ಳಿ ಬಟ್ಟಲು ಕಂಗಳು ಎಂಥವರಿಗೂ ಆಕರ್ಷಿಸುವ ರೂಪ ಇವಳದು. ಈಗ ಪಾಲಕರು ಸಹ ಇವಳು ಹತ್ತನೆಯ ವರ್ಗದಲ್ಲಿ ಪ್ರಥಮ ರ್ಯಾಂಕಿನಲ್ಲಿ ಉತ್ತೀರ್ಣಳಾದರೂ ಇವಳ ಅಭ್ಯಾಸದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಲಿಲ್ಲ ಪಾಲಕರು. ಇವಳು ಹೆಚ್ಚಿನ ಶಿಕ್ಷಣ ಕಲಿಯಬೇಕೆಂದರೂ ಹಿರಿಯರು ಮಾತ್ರ ಇವಳ ಶಿಕ್ಷಣವನ್ನು ಮೊಟಕುಗೊಳಿಸಿದರು. ಅದೇ ನಗರದಲ್ಲಿದ್ದ ಓರ್ವ ಶ್ರೀಮಂತರ ಮಗ ಸುರೇಶ್ ಇವಳ ಚೆಲುವಿನ ರೂಪವನ್ನು ಕಂಡು ಮೋಹಿತಗೊಂಡು ತಾನು ಮಾನವಿಯನ್ನೆ ಮದುವೆಯಾಗುವುದಾಗಿ ನಿರ್ಧಾರ ಮಾಡಿದನು. ಸುರೇಶನ ತಂದೆ ತಾಯಿಯರು ಮಾನವಿಯ ಪಾಲಕರಿಗೆ ಭೇಟಿಯಾಗಿ ತಾವು ಮಾನವಿಯನ್ನು ತಮ್ಮ ಮಗ ಸುರೇಶನಿಗಾಗಿ ವರದಕ್ಷಿಣೆ ಇಲ್ಲದೆ ಮದುವೆ ಮಾಡಿಕೊಳ್ಳುವುದಾಗಿ ಕೋರಿಕೊಂಡರು. ಈಗ ಮಾನವಿಯ ಪಾಲಕರು ಸಹ ಮಾನವಿಯ ವಿಚಾರಗಳನ್ನು ಕೇಳದೆ ಇವಳಿಗೆ ಆ ಶ್ರೀಮಂತರ ಪುತ್ರ ಸುರೇಶನಿಗೆ ಕೊಟ್ಟರೆ ತಮ್ಮ ಮಗಳು ಸುಖವಾಗಿರಬಹುದೆಂದು ಆಲೋಚನೆ ಮಾಡಿದರು. ವಿಷಯ ಮಾನವಿಗೆ ತಿಳಿದಾಗ ತಾನು ಮದುವೆ ಮಾಡಿಕೊಳ್ಳಲಾರೆ, ಇನ್ನು ತಾನು ಹೆಚ್ಚಿನ ಶಿಕ್ಷಣ ಪಡೆಯಬೇಕೆಂದು ಪಾಲಕರಿಗೆ ಬೇಡಿಕೊಂಡಳು. ಆದರೆ ಇವಳ ಆಸೆ ಬೋರ್ಗಲ್ಲಿನ ಮೇಲೆ ನೀರು ಚೆಲ್ಲಿದಂತಾಯ್ತು. ಪಾಲಕರು ಇವಳ ಕೋರಿಕೆ ಕೇಳದೆ, ಒಪ್ಪದೆ ಮಾನವಿಗೆ ಸುರೇಶನಿಗೆ ಕೊಟ್ಟು ಮದುವೆ ಮಾಡಿದರು. ಆಗ ಇವಳಿಗೆ 20 ವಯಸ್ಸು ಮಾತ್ರ. ಕೇವಲ ಎರಡು ವರ್ಷಗಳು ಗಂಡ ಸುರೇಶನೊಂದಿಗೆ ಸುಖವಾಗಿದ್ದಳು. ಆದರೆ ಬರು ಬರುತ್ತ ಪತಿ ಸುರೇಶನು ತುಂಬಾ ಕಿರುಕುಳಕೊಡತೊಡಗಿದನು. ಜೊತೆಗೆ ಸುರೇಶನ ತಂದೆ ತಾಯಿಯರು ಸಹ ಮಾನವಿಗೆ ತುಂಬಾ ಕಾಟ ಕೊಟ್ಟು ಇವಳನ್ನು ತವರು ಮನೆಗೆ ಅಟ್ಟಿದರು. ಈಗ ಮಾನವಿಗೆ ದಿಕ್ಕು ತೋಚುದಾಯಿತು. ಈಗಾಗಲೇ ಮಾನವಿ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಳು. ಮಾನವಿಯ ಪಾಲಕರಿಗೆ ದುಃಖವು ಉಮ್ಮಳಿಸಿ ಬಂತು. ಇನ್ನೊಂದು ವಿವಾಹ ಮಾಡಬೇಕೆಂದರೂ ಯಾರು ಇವಳಿಗೆ ಮದುವೆಯಾಗಲು ಒಪ್ಪದೇ ದೂರ ಸರಿದರು. ತಾನು ಇಷ್ಟೆಲ್ಲಾ ಶಿಕ್ಷಣ ಕಲಿತು ವ್ಯರ್ಥವಾಯಿತು ಎಂದು ಒಳಗೊಳಗೆ ಚಿಂತನೆ ಮಾಡಿದಳು. ಏನಾದರೂ ಮಾಡಿ ತನ್ನ ದಾರಿಯನ್ನು ತಾನು ಹುಡುಕಿಕೊಳ್ಳಬೇಕೆಂದು ಅಚಲ ನಿರ್ಧಾರ ಮಾಡಿದಳು. ಅದೊಂದು ದಿನ ಯಾವುದೋ ನೆಪ ಹೇಳಿ ತಂದೆಯಿಂದ ಕೆಲವು ಹಣವನ್ನು ಪಡೆದು ಮನೆಯಲ್ಲಿ ಹೇಳದೆ ಕೇಳದೆ ಒಂದು ಬೆಳಿಗ್ಗೆ ತನ್ನ ಮಗುವನ್ನು ತೆಗೆದುಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸಿದಳು. ಮನೆಯಲ್ಲಿ ಮಾನವಿ ಕಾಣದೆ ಮರುದಿನ ಪಾಲಕರು ಎಲ್ಲೆಲ್ಲಿ ಹುಡುಕಿದರೂ ಮಾನವಿಯ ಸುಳಿವಿಲ್ಲ. ಇತ್ತ ಮಾನವಿ ಬೆಂಗಳೂರಿನಲ್ಲಿ ಸರ್ಕಾರಿ ಅನುದಾನದ ಕಾಲೇಜಿಗೆ ಸೇರಿಕೊಂಡು ಶಿಕ್ಷಣ ಮುಂದುವರಿಸಿದಳು. ಇವಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದು ಕಂಡು ಹಾಸ್ಟೆಲ್ನಲ್ಲಿಯೂ ಇವಳಿಗೆ ಮುಕ್ತವಾಗಿ ಇರುವುದಕ್ಕೆ ಅವಕಾಶ ಮಾಡಿ ಕಲಿಯುವುದಕ್ಕೆ ಅನುವು ಮಾಡಿಕೊಟ್ಟರು. ದಿನೇ ದಿನೇ ಶಿಕ್ಷಣದಲ್ಲಿ ಮಾನವಿ ಛಲದಿಂದ ವ್ಯಾಸಂಗ ಮಾಡುತ್ತ ಶಿಕ್ಷಣದಲ್ಲಿ ಎತ್ತರೆತ್ತರಕ್ಕೆ ಬೆಳೆದಳು. ಮುಂದೆ ಇವಳು ಐ.ಎ.ಎಸ್ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದಳು. ಎಲ್ಲ ಕಡೆಗೂ ಮಾನವಿಯ ಕೀರ್ತಿ ಪಸರಿಸಿತ್ತು. ಇಂತಹ ಸಂದರ್ಭದಲ್ಲಿ ಇವಳ ಸಹಪಾಠಿಯಾದ ಸುಂದರ ಶರ್ಮಾ ಐ.ಎ. ಎಸ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದನು. ಸಹಜವಾಗಿಯೇ ಮಾನವಿಗೆ ಪ್ರೀತಿಸಿದನು . ಮತ್ತೆ ತನಗೆ ಸರ್ಕಾರಿ ಹುದ್ದೆ ಲಭಿಸಿದ ಕೂಡಲೆ ಮಾನವಿಗೆ ಅವಳ ಒಪ್ಪಿಗೆಯಂತೆ ಮದುವೆ ಮಾಡಿಕೊಂಡನು. ಮಾನವಿಗೂ ಜಿಲ್ಲಾಧಿಕಾರಿಯ ಹುದ್ದೆ ಲಭಿಸಿತು. ಕೆಲವು ದಿವಸಗಳ ನಂತರ ಮಾನವಿಯ ಪಾಲಕರಿಗೆ ಇವಳ ಬಗ್ಗೆ ತಿಳಿದು ಬಂತು. ಮತ್ತು ಅವಳ ಬಗ್ಗೆ ತುಂಬ ಸಂತೋಷವಾಗಿತ್ತು. ಅವರು ಬೆಂಗಳೂರಿನ ಮಾನವಿಯ ವಿಳಾಸ ಪಡೆದುಕೊಂಡು ಅವಳ ಶ್ರೇಯತನಕ್ಕೆ ಅಪ್ಪಿಕೊಂಡರು. ಮಾನವಿಯು ಈಗ ಅಂಗವಿಕಲಾಗಿಯೂ ದಿಟ್ಟತನದಿಂದ ತನ್ನ ಬದುಕಿನ ಮಾರ್ಗವನ್ನು ತಾನೇ ಕಂಡುಕೊಂಡು ಸಾರ್ಥಕ ಬದುಕಿಗೆ ಮುನ್ನುಡಿ ಬರೆದಳು. ಅವಳ ಶ್ರಮದಿಂದಾಗಿ ಆಕೆಯ ಮೌನ ಹೂವಾಗಿ ಅರಳಿತು.
– ಡಾ. ಎಂ.ಜಿ.ದೇಶಪಾಂಡೆ
ಕವಿ ಪರಿಚಯ:
ಖ್ಯಾತ ಸಾಹಿತಿಗಳಾದ ಡಾ. ಎಂ. ಜಿ. ದೇಶಪಾಂಡೆಯವರು ಮೂಲತಃ ತೆಲಂಗಾಣದವರು ಬೀದರನಲ್ಲಿಯೇ ಹುಟ್ಟಿ ಬೆಳೆದು ಕನ್ನಡದಲ್ಲಿ ಬಿ.ಎ ಪದವಿಯವರೆಗೆ ಅಧ್ಯಯನ ಮಾಡಿ ಬೀದರ ಡಿಸಿಸಿ ಬ್ಯಾಂಕಿನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು, ಪ್ರಸ್ತುತ ಇಬ್ಬರು ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ಬಾಲ್ಯದಿಂದಲೂ ಕನ್ನಡ ಸಾಹಿತ್ಯ, ನಾಡು- ನುಡಿಯ ಮೇಲೆ ತುಂಬ ಆಸಕ್ತರಾಗಿ, ಕನ್ನಡ ಭಾಷೆ ಸಾಹಿತ್ಯವೇ ತಮ್ಮ ಜೀವದ ಉಸಿರಾಗಿಸಿಕೊಂಡು ಕತೆ ,ಕವನ ,ಕಾದಂಬರಿ, ಲಲಿತ ಪ್ರಬಂಧ, ಲೇಖನ ಮೊದಲಾದ ಸಾಹಿತ್ಯ ರಚಿಸಿ ನಾಡಿನಾದ್ಯಂತ ಖ್ಯಾತ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು 1977-79 ರಲ್ಲಿ ‘ ಕನ್ನಡಂಬೆ ‘ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ , ಪ್ರಸಾರಗೊಂಡಿವೆ. ಇವರು ಬರೆದ ಕೃತಿಗಳು:
ಆಶಾಕಿರಣ, ಮೀರಾಬಾಯಿ, ಗೀತ ಮಾನಸ ,ಪಾರಿಜಾತ’ ಭಕ್ತಿ ಕುಸುಮಾಂಜಲಿ, ಚಿಂತನ ಮಂದಾರ, ವಚನ ಚಂದ್ರಿಕೆ, ದೇವಯಾನಿ, ಶ್ರಾವಣಿ, ಚಂದ್ರಹಾರ, ಸಾಹಿತ್ಯ ರತ್ನಗಳು, ಒಡೆದ ಕನ್ನಡಿ, ಧವಳಗಿರಿ, ತವನಿಧಿ ಸೇರಿದಂತೆ ಕಥೆ, ಕಾದಂಬರಿ, ಕಾವ್ಯ, ಚುಟುಕು, ಅನುವಾದ, ನಾಟಕ, ಇತಿಹಾಸ’ ಲೇಖನ, ವ್ಯಕ್ತಿಚಿತ್ರ ,ಚರಿತ್ರೆ ಸಂಪಾದನೆ ಸೇರಿ ಒಟ್ಟು 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಗೆ ಬೀದರ ಜಿಲ್ಲೆಯಿಂದ ” ಸಾಹಿತ್ಯ ಮಂದಾರ ” ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಗೌರವಿಸಲಾಗಿದೆ. ಇವರಿಗೆ ನಾಡಿನಾದ್ಯಂತ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.