ಮುಗಿಲ ಮರೆಯ ಮಿಂಚು.(ಪುಸ್ತಕ ಪರಿಚಯ)
– ಮಚ್ಛೇಂದ್ರ ಪಿ.ಅಣಕಲ್.
ಸಾಹಿತಿ ವೀರಶೆಟ್ಟಿ ಬಾವುಗೆಯವರು ವಿರಚಿತ ಕೃತಿ `ಮುಗಿಲ ಮರೆಯ ಮಿಂಚು’ ಎಂಬ ಆಧುನಿಕ ವಚನಗಳ ಸಂಕಲನವು ನಾನು ತಡವಾಗಿ ಓದಲು ಕೈಗೆತ್ತಿಕೊಂಡರು ಅದು ಒಂದೇ ಸಲಕ್ಕೆ ಬಿಡದೆ ಓದಿಸಿಕೊಂಡಿತ್ತು. ಉತ್ತಮವಾದ ಸರಳ ಸಲಿಲ ಪದಗಳಿಂದ ಕೂಡಿರುವ ಈ ಕೃತಿಯು ೮೮ ಪುಟಗಳು ಒಳಗೊಂಡಿದ್ದು, ಇದರಲ್ಲಿ ಒಟ್ಟು ೧೫೦ ಆಧುನಿಕ ವಚನಗಳು ಇವೆ.
ಈ ಕೃತಿಯ ಮೊದಲಿಗೆ ಭಾಲ್ಕಿಯ ಪೂಜ್ಯ.ಶ್ರೀ. ಡಾ.ಬಸವಲಿಂಗ ಪಟ್ಟದೇವರು ಸಂದೇಶ ನುಡಿಯ ಮೂಲಕ ಹಾರೈಸಿದ್ದಾರೆ. ಮತ್ತು ಇಳಕಲ್‌ದ ಚಿತ್ತರಗಿ ಸಂಸ್ಥಾನ ಮಠದ ಪೂಜ್ಯರಾದ ಶ್ರೀ.ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ವಚನ ನುಡಿಯ ಮೂಲಕ ಲೇಖಕರಿಗೆ ಶುಭ ಕೋರಿದ್ದಾರೆ. ಅಷ್ಟೇಯಲ್ಲದೆ ದಾವಣಗೆರೆಯ ಬಸವ ಬಳಗದ ಬಸವ ಮಹಾಮನೆಯ ಶರಣರಾದ ಸಾಹಿತಿ ವಿ.ಸಿದ್ದರಾಮಣ್ಣನವರು ಲಿಂಗನುಡಿ ಮೂಲಕ ಈ ಕೃತಿಯ ಬಗ್ಗೆ ಮತ್ತು ಲೇಖಕರ ಕುರಿತು ಶರಣರ ವಚನಗಳೊಂದು ಸೋದಾರಣವಾಗಿ ವಿವರಿಸಿದ್ದಾರೆ. ಮತ್ತು ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆಯವರು ಚೆನ್ನುಡಿ ಬರೆದು ಹರಸಿದರೆ, ಖ್ಯಾತ ಶರಣ ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟೆಯವರು ಈ ಕೃತಿಗೆ ಮುನ್ನುಡಿ ಬರೆದಿರುವುದು ವಿಶೇಷವಾಗಿದೆ.
ಈ `ಮುಗಿಲ ಮರೆಯ ಮಿಂಚು’ ಕೃತಿಯಲ್ಲಿ ಲೇಖಕರು ಸಾಮಾಜಿಕ ವಿಷಯಗಳಾದ ಮೋಸ ವಂಚನೆ, ಕೋಲೆ ಸುಲಿಗೆ, ಅನೈತಿಕತೆ, ಸಂಶಯ, ಕಾಮ, ಕ್ರೋಧ, ಮೊದಲಾದ ಕೆಟ್ಟ ಪದ್ದತಿಗಳ ಕುರಿತು ಜನಸಾಮಾನ್ಯರಿಗೆ ತಿಳಿ ಹೇಳುವಂತೆ ಸರಳವಾಗಿ ವಚನಗಳ ಮೂಲಕ ಹಿಡಿದಿಟ್ಟಿದ್ದಾರೆ.
‘ಕುಂತರು ನಿಂತರು ಸಂಶಯ
ನೋಡಿದರು, ಮಾತನಾಡಿದರು ಸಂಶಯ
ಸಂಶಯ ಎಂಬುದು ಮುಳ್ಳಿನ ಹಾಸಿಗೆ
ಯಾವ ಮಗ್ಗುಲು ಹೊರಳಿದರೂ ಚುಚ್ಚುವುದೇ ಅದರ ಕೆಲಸವಯ್ಯಾ !
ವೀಪ್ರಬಾಧ ಪ್ರಿಯ ವರಗುರು ಬಸವೇಶ
ಸಂಶಯ ಎಂಬುದು ಮನೋರೋಗ
ಇದಕ್ಕೆ ಯಾವ ಔಷಧಿ ಇಲ್ಲವಯ್ಯಾ ’’ ಎಂದು ಸಂಶಯ ಪಡುವ ಜನರ ಬಗ್ಗೆ ತುಂಬ ಚನ್ನಾಗಿ ತಮ್ಮ ವಚನದ ಮೂಲಕ ತಿಳಿ ಹೇಳುವ ಅವರು ಅನೈತಿಕತೆಯ ಕುರಿತು
‘ಚಾರಿತ್ರವಿಲ್ಲದ ಶಿಕ್ಷಕ ಎಷ್ಟೇ ಸುಂದರವಾದರೂ
ಶಾಲೆಗೆ ನಿಜ ಶಿಕ್ಷಕನಲ್ಲ, ಮಗುವಿಗೆ ಗುರುವಲ್ಲ,
ಪಾಲಕರಿಗೆ ಹಿತೈಷಿಯಲ್ಲ,
ಪ್ರೇಮದ ಸೂಳೆ ಎಷ್ಟೇ ಸುಂದರಿಯಾದರೂ
ಮನೆಗೆ ನಿಜ ಸೊಸೆಯಲ್ಲ, ವಂಶಕ್ಕೆ ತಾಯಿಯಲ್ಲ
ಸೂಳೆಯ ಸಹವಾಸ ಬಾಳೆಲ್ಲ ನರಕವೆಂದ
ವೀಪ್ರಬಾಧ ಪ್ರಿಯ ವರಗುರು ಬಸವೇಶ!!
ಎಂದು ನೈತಿಕತೆಯಿಂದ ಅನೈತಿಕತೆಯೆಡೆಗೆ ದಾರಿ ತಪ್ಪುವ ಜನರಿಗೆ ಈ ವಚನ ಚಾಟಿ ಏಟು ನೀಡಿದಂತ್ತಿದೆ. ಹೀಗೆ ಕೆಲ ವಚನಗಳಲ್ಲಿ ಸಾಮಾಜಿಕ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಲೇಖಕರು ಸಾಮಾಜಿಕ ಸ್ವಾಸ್ಥö್ಯ ಕಾಪಾಡಲು ಬಯಸಿದ್ದಾರೆ. ಮತ್ತು ಅವರು `ಕುಡಿಯುವುದು’ ಎಂಬ ವಚನದಲ್ಲಿ
” ಪ್ರಾತಃಕಾಲ ಎದ್ದು ಬಿಸಿನೀರು ಕುಡಿಯುವುದು
ಮಧ್ಯಾಹ್ನದ ಊಟದ ನಂತರ ಮಜ್ಜಿಗೆ ಕುಡಿಯುವುದು
ರಾತ್ರಿ ಊಟದ ನಂತರ ಹಾಲನ್ನು ಕುಡಿಯುವುದು
ಈ ರೀತಿ ದಿನಾಲು ಯಾರು ಕುಡಿಯುವರೋ
ಅವರ ಹತ್ತಿರ ರೋಗ ಸುಳಿಯದೆಂದ
ವಿಪ್ರಬಾಧ ಪ್ರಿಯ ವರಗುರು ಬಸವೇಶ !”
ಎಂಬ ವಚನದಲ್ಲಿ ಸರಳವಾಗಿ ದ್ರವ ಪದಾರ್ಥವನ್ನು ಸೇವಿಸುವ ವಿಧಾನ ತಿಳಿಸಿದರೆ. ಆಹಾರ ಸೇವಿಸುವ ಪದ್ದತಿಗಾಗಿ ಈ ಕೆಳಗಿನ ವಚನದಲ್ಲಿ ವೈಜ್ಞಾನಿಕವಾಗಿ ರಚಿಸಿದ್ದಾರೆ.
“ಉದರ ಅರ್ಧಭಾಗ ಆಹಾರ
ಕಾಲು ಭಾಗ ನೀರು
ಉಳಿದ ಕಾಲುಭಾಗ ವಾಯುವಿಗಾಗಿ ಬಿಡಬೇಕಯ್ಯ
ಋತುವಿಗನುಸಾರ ಆಹಾರ ಸೇವಿಸುವುದರಿಂದ
ರೋಗಗಳು ಹತ್ತಿರ ಸುಳಿಯದೆಂದ
ವೀಪ್ರಬಾಧ ಪ್ರಿಯ ವರಗುರು ಬಸವೇಶ !
ಹೀಗೆಯೇ ಆಹಾರ ಮತ್ತು ಆರೋಗ್ಯದ ಕಾಳಜಿ ಹೊಂದಿದ ಲೇಖಕರು ಯೋಗ ಧ್ಯಾನ ತಪಸ್ಸುಗಳ ಕುರಿತು ಅಧ್ಯಾತ್ಮಿಕ ದೃಷ್ಠಿಕೊನದಿಂದ ಹಲವಾರು ವಚನಗಳು ರಚಿಸಿದ್ದಾರೆ. ಅವುಗಳಲ್ಲಿ `ಯೋಗ’ ಎಂಬ ವಚನದಲ್ಲಿ
“ಯೋಗ ಯೋಗ ಎಂದು ಬಡಿದಾಡುವ ಅಣ್ಣಾಗಳಿರಾ
ಯೋಗ ಎಂದರೇನು ಹೇಳಬಲ್ಲಿರಾ ?
ಹೇಳದಿದ್ದರೆ ಕೇಳಿರಣ್ಣ
ಯೋಗವೆಂದರೆ ಜೋಡಿಸು, ಸೇರಿಸು, ಎಂಬರ್ಥವಯ್ಯ
ಯೋಗವೆಂದರೆ ಸಮಾಧಿ, ಉಪಾಯ,ಸಾಧನ ಎಂಬರ್ಥವಯ್ಯ
ಯೋಗವೆಂದರೆ ಯೋಗಶ್ಚಿತ್ತ ವೃತ್ತಿ ನಿರೋಧ ಮಾಡುವುದಯ್ಯ
ಯೋಗವೆಂದರೆ ದೇಹದ ಜೋತೆ ಮನ, ಮನ ಬುದ್ಧಿ, ಭಾವನೆ
ಆತ್ಮ ಕೂಡಿಸುವುದಯ್ಯ
ವಿಪ್ರಬಾಧ ಪ್ರಿಯ ವರಗುರು ಬಸವೇಶ ! ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ ! ’’
ಎಂಬ ವಚನದ ಮೂಲಕ ಯೋಗ ಎಂದರೇನು ? ಎಂಬ ಪರಿಕಲ್ಪನೆಯನ್ನು ಓದುಗರಿಗೆ ಈ ವಚನದ ಮೂಲಕ
ತಿಳಿ ಹೇಳಿದ್ದಾರೆ. ಅಷ್ಟೇಯಲ್ಲದೇ ಬಸವಣ್ಣನವರು `ಕಾಯಕವೇ ಕೈಲಾಸ’ ಎಂದು ಸಾರಿದಂತೆ ಲೇಖಕರು ಕೂಡ ಕಾಯಕದ ಕುರಿತು
“ಸತ್ಯಶುದ್ಧವಿಲ್ಲದ……
ಶಿಕ್ಷಕರ ಕೆಲಸ, ವೈದ್ಯರ ಕೆಲಸ ಕಾಯಕವಲ್ಲವಯ್ಯಾ
ಸೈನಿಕರ ಕೆಲಸ, ಪೋಲಿಸರ ಕೆಲಸ ಕಾಯಕವಲ್ಲವಯ್ಯಾ
ರೈತರ ಕೆಲಸ, ಕಾರ್ಮಿಕರ ಕೆಲಸ ಕಾಯಕವಲ್ಲವಯ್ಯಾ
ಸ್ವಾಮಿಗಳ ಕೆಲಸ, ಜನಪ್ರತಿನಿಧಿಗಳ ಕೆಲಸ ಕಾಯಕವಲ್ಲವಯ್ಯಾ
ವೀಪ್ರಬಾಧ ಪ್ರಿಯ ವರಗುರು ಬಸವೇಶನಲ್ಲಿ
ತನು-ಮನ-ಭಾವದಿಂದ ಸತ್ಯ ಶುದ್ಧ ಮಾಡುವ
ಯಾವುದೇ ಕೆಲಸವು ಕಾಯಕವಾಗುವುದಯ್ಯಾ !
ಎಂಬ ವಚನದಲ್ಲಿ ಉತ್ತಮ ಕಾಯಕವೆಂದರೆ ಯಾವುದು ? ಎಂಬುದರ ಬಗ್ಗೆ ಸರಳವಾಗಿ ತಿಳಿಸಿದ್ದಾರೆ.
ಹೀಗೆ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರತ್ಮಕವಾದ ನುಡಿಗಳನ್ನು ತಮ್ಮ ವಚನಗಳ ಮೂಲಕ ಬಹುಸುಂದರವಾಗಿ ಹಿಡಿದಿಟ್ಟಿದ್ದಾರೆ. ದೇಹ, ಮನಸ್ಸು, ಆತ್ಮ , ಅಧ್ಯಾತ್ಮೀಕತೆಯ ಮೂಲಕ ಅನೇಕ ವಿಚಾರಗಳು ವೈಜ್ಞಾನಿಕವಾಗಿ ರಚಿಸಿದ್ದಾರೆ. ಧರ್ಮ, ಜಾತಿಯತೆಯ ಎಲ್ಲೇಯನ್ನು ಮೀರಿ ಮಾನವ ಧರ್ಮಕ್ಕೆ ಒಳಿತನ್ನು ಬಯಸುವ ಸಂದೇಶ ಇವರ ವಚನಗಳಲ್ಲಿವೆ. ಮತ್ತು ನಾಡಿನ ಹಲವಾರು ಶರಣ, ಸಂತರನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಹಾಗೂ ಅವರ ಆದರ್ಶ ಜೀವನದ ಬಗ್ಗೆ ಬಹು ಸುಂದರವಾಗಿ ಅಕ್ಷರಗಳ ಮೂಲಕ ಹಿಡಿದಿಟ್ಟಿದ್ದಾರೆ. ಅವರುಗಳಲ್ಲಿ ಭಾಲ್ಕಿಯ ಪೂಜ್ಯ. ಶ್ರೀ ಚನ್ನಬಸವ ಪಟ್ಟದೇವರು, ಪೂಜ್ಯ.ಶ್ರೀ. ಡಾ. ಬಸವಲಿಂಗ ಪಟ್ಟದೇವರು, ನಾವದಗಿಯ ರೇವಪ್ಪಯ್ಯ ಅಜ್ಜನವರು, ಹುಲಸೂರಿನ ಪೂಜ್ಯ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ವಿ.ಸಿದ್ದರಾಮಣ್ಣ ಹಾಗೂ ಸಾಹಿತಿ ಪಾಟೀಲ್ ಪುಟ್ಟಪ್ಪ ಮೊದಲಾದ ಶರಣ ಹಾಗೂ ಸಾಹಿತಿಗಳ ಬಗ್ಗೆ ತಮ್ಮ ವಚನಗಳ ಮೂಲಕ ಅವರ ವ್ಯಕ್ತಿತ್ವವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಒಟ್ಟಿನಲ್ಲಿ ಇಲ್ಲಿಯ ಎಲ್ಲ ವಚನಗಳು ಸರಳವಾಗಿ ಗದ್ಯದಂತೆ ಓದಿಸಿಕೊಂಡರು ಕೂಡ ಸಾಮಾಜಿಕ ಸಂದೇಶವನ್ನು ಸಾರುವ ಸಾಲುಗಳು ಬಹು ಮೆಚ್ಚುವಂತಹದಾಗಿವೆ. ಕೆಲ ವಚನಗಳು ಓದುತ್ತಿದ್ದಾಗ ೧೨ನೇ ಶತಮಾನದ ಶರಣರ ವಚನಗಳು ಇವರ ಮೇಲೆ ದಟ್ಟವಾದ ಪ್ರಭಾವ ಬೀರಿರುವುದು ಕಂಡುಬರುತ್ತದೆ. ಈ ಕೃತಿ ಉತ್ತಮ ನೀತಿ ಭೋಧೆ ನೀಡುವ ಸಂಕಲನವಾಗಿದೆ. ಇವರ ಎಲ್ಲ ವಚನಗಳಲ್ಲಿ ಒಂದೊಂದು ಸಂದೇಶ ಅಡಗಿದೆ. ಹೀಗೇ ಇಂತಹ ವಚನಗಳು ಸಾಹಿತಿ ವೀರಶೆಟ್ಟಿ ಬಾವುಗೆಯರಿಂದ ಇನ್ನೂ ಹೆಚ್ಚು ಹೆಚ್ಚಾಗಿ ಮೂಡಿ ಬರಲೆಂದು ಹಾರೈಸುವೇ.
– ಮಚ್ಛೇಂದ್ರ ಪಿ.ಅಣಕಲ್.