ಮುಗಿಯದ ಬದುಕಿನ ಬವಣೆಗಳು
– ವೀಣಾ ಹೇಮಂತ್ ಗೌಡ ಪಾಟೀಲ್.
ಕೆಲ ತಿಂಗಳ ಹಿಂದೆ ಅಲ್ಲೆಲ್ಲೋ ಚಂಡಮಾರುತ ಬೀಸಿದ ಪರಿಣಾಮವಾಗಿ ನಮ್ಮ ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದ ಒಂದು ದಿನ ಸಂಜೆ ಇಬ್ಬರು ಹೆಣ್ಣು ಮಕ್ಕಳು ನಮ್ಮ ಮನೆಗೆ ಬಂದರು. ಅವರ ತಂದೆ ನಮ್ಮ ಹೊಲದ ಮ್ಯಾನೇಜರ್ ಆಗಿದ್ದ.
ಚಹಾ ಕುಡಿದ ನಂತರ ತಮಗೆ ಕೋರ್ಟಿನಿಂದ ಬಂದ ಕಾಗದವನ್ನು ತೋರಿದ ಅವರು ಅದುವರೆಗೂ ತಡೆದಿಟ್ಟಿದ್ದ ದುಃಖವನ್ನು ತೋಡಿಕೊಂಡರು.
ನಡೆದದ್ದಿಷ್ಟೇ…. ಅವರ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗ. ಎಲ್ಲ ಹೆಣ್ಣು ಮಕ್ಕಳು ಮದುವೆಯಾಗಿ ತಮ್ಮ ಗಂಡನ ಮನೆಯಲ್ಲಿ ಇದ್ದರು. ಕೆಲವು ವರ್ಷಗಳ ಹಿಂದೆ ಒಬ್ಬಾಕೆಯ ಪತಿ ತೀರಿ ಹೋಗಿ ಆಕೆ ತವರು ಮನೆ ಸೇರಿದರೆ ಇನ್ನೊಬ್ಬಾಕೆ ಶಾಲೆಯೊಂದರಲ್ಲಿ ಅಡುಗೆ ಸಹಾಯಕಿ ಆಗಿದ್ದು ಗಂಡನ ಅತಿಯಾದ ಸಂಶಯದ ನಡೆಯಿಂದ ಬೇಸತ್ತು ತನ್ನ ಮಗಳೊಂದಿಗೆ ತವರು ಸೇರಿದಳು. ಇದು ಆಕೆಯ ತಂದೆಗೆ ಬೇಸರವನ್ನುಂಟು ಮಾಡಿದ್ದರೂ ಹೆಣ್ಣು ಮಕ್ಕಳು ನನ್ನ ಕಣ್ಣ ಮುಂದೆ ಚೆನ್ನಾಗಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭರವಸೆ ಇತ್ತು. ಕೊನೆಯ ಹೆಣ್ಣು ಮಗಳು ತನ್ನ ಎರಡನೇ ಮಗುವನ್ನು ಹೆತ್ತು ಆರೈಕೆಯಾಗಿ ಗಂಡನ ಮನೆಗೆ ಹೋಗಿ ಕೆಲ ದಿನಗಳಾಗಿತ್ತಷ್ಟೇ. ಆ ದಿನ ಗಂಡ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡತೊಡಗಿದ. ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಅಲ್ಲೇ ನೇತು ಹಾಕಿದ್ದ ಕುಡುಗೋಲನ್ನು ತೆಗೆದುಕೊಂಡು ಆಕೆಯ ಮತ್ತು ಮಗುವಿನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಕೊಂದು ಹಾಕಿಬಿಟ್ಟ. ರಕ್ತದ ಮಡುವಿನಲ್ಲಿದ್ದ ಆ ತಾಯಿ ಮಗು ಅಲ್ಲಿಯೇ ಪ್ರಾಣಬಿಟ್ಟರು. ದೂರದಲ್ಲಿ ನಿಂತು ಅಪ್ಪ ಮಾಡಿದ ಕೃತ್ಯವನ್ನು ನೋಡಿದ ಪುಟ್ಟ ಹೆಣ್ಣು ಮಗು ಓಡಿಹೋಗಿ ಬೇರೊಬ್ಬರ ಮನೆಯಲ್ಲಿ ಅವಿತಿಟ್ಟುಕೊಂಡಿತು.
ಮುಂದೆ ಪೊಲೀಸರು ಬಂದು ಮುಂದಿನ ಕ್ರಮಗಳೆಲ್ಲ ಜರುಗಿ ಸಿಟ್ಟಿನ ಭರದಲ್ಲಿ ಆತನೇ ಹೆಂಡತಿ ಮತ್ತು ಮಗುವನ್ನು ಕೊಂದು ಹಾಕಿದನೆಂದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಹೆಣ್ಣು ಮಗುವಿನ
ಜವಾಬ್ದಾರಿಯನ್ನು ಮಗುವಿನ ಹೆಣ್ಣಜ್ಜ ಮತ್ತು ಇಬ್ಬರು ದೊಡ್ಡಮ್ಮಂದಿರು ತೆಗೆದುಕೊಂಡರು. ಇದಾಗಿ ಹಲ ವರ್ಷಗಳೇ ಕಳೆದು ಹೋಗಿವೆ.
ಈಗ ಒಮ್ಮಿಂದೊಮ್ಮೆಲೇ ಕೋರ್ಟಿನಿಂದ ಅವರಿಗೆ ಮಗುವಿನ ಸುಪರ್ದಿಯ ಕುರಿತು ಕಾಗದ ಬಂದಿದ್ದು ಅಷ್ಟೇನೂ ಸಾಕ್ಷರರಲ್ಲದ ಆ ಸಹೋದರಿಯರು ಗಾಬರಿಯಿಂದ ಕಾಗದ ಹಿಡಿದು ನಮ್ಮ ಮನೆಗೆ ಬಂದಿದ್ದರು. ಇದಕ್ಕೂ ಮುನ್ನ ಜೈಲಿನ ಅಧಿಕಾರಿಗಳು ಕರೆ ಮಾಡಿ ಇವರಿಗೆ ಮಾತನಾಡಲು ಪ್ರಯತ್ನಿಸಿದ್ದರು.
ಈ ಎಲ್ಲ ವಿಷಯಗಳು ಅವರನ್ನು ಗೊಂದಲಕ್ಕೆ ಸಿಲುಕಿಸಿ ಮುಂದೇನು ಮಾಡಬೇಕು ಎಂದು ನನ್ನ ಪತಿಯನ್ನು ಕೇಳಲು ಬಂದಿದ್ದರು.
ವಕೀಲರೊಬ್ಬರನ್ನು ಕರೆಸಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟು ಮರುದಿನ ಜಿಲ್ಲಾ ನ್ಯಾಯಾಲಯದಲ್ಲಿ ಮಗುವಿನ ಸುಪರ್ದಿಯನ್ನು ವಿಧವೆ ದೊಡ್ಡಮ್ಮ ತಾನೇ ತೆಗೆದುಕೊಳ್ಳುವುದಾಗಿ ಬರೆದು ಕೊಟ್ಟದ್ದಾಯಿತು. ಇನ್ನುಳಿದದ್ದು ಆ ಮಗುವಿನ ತಂದೆ ಸೆರೆಯಲ್ಲಿದ್ದ ಜೈಲಿನಿಂದ ಬಂದ ಫೋನ್ ಕರೆ.
ಅವರನ್ನು ಸಮಾಧಾನ ಪಡಿಸುತ್ತಾ ನಾನು ‘ಬಹುಶಹ
ಆತ ಪೆರೋಲ್ ಗೆ ( ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯ ಸನ್ನಡತೆಯನ್ನು ನೋಡಿ ಒಂದೆರಡು ವಾರ ಜೈಲಿನಿಂದ ಹೊರಗೆ ಮನೆಗೆ ಹೋಗಲು ರಜೆ ಕೊಡುವ ವಿಧಾನ)ಅರ್ಜಿ ಹಾಕಿದ್ದು ನಿಮ್ಮನ್ನು ಒಂದು ಮಾತು ಕೇಳಲು ಕರೆ ಮಾಡಿರಬಹುದು ಎಂದು ನಾನು ಹೇಳಿದೆ.
ಮುಂದಿನ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಜೈಲಿನಿಂದ ಕರೆ ಬಂದಿದ್ದು, ಆತ ರಜೆ ನೀಡಲು ಮನವಿಯನ್ನು ಮಾಡಿದ್ದು ಅದಕ್ಕೆ ಮಗುವಿನ ಪ್ರಸ್ತುತ ಪೋಷಕರ ಅಭ್ಯಂತರವೇನಾದರೂ ಇದೆಯೇ ಎಂದು ಜೈಲಿನ ಅಧಿಕಾರಿಗಳು ಕೇಳಲು ಈ ಹೆಣ್ಣು ಮಕ್ಕಳು ಮಗು ಕೊಲೆಯ ಪ್ರತ್ಯಕ್ಷ ದರ್ಶಿಯಾಗಿದ್ದು ಆಕೆಯೇ ಸಾಕ್ಷಿ ಹೇಳಿರುವ ಕಾರಣ ಆತನಿಗೆ ಆಕೆಯ ಮೇಲೆ ಕೋಪ ಇರಬಹುದು ಆದ್ದರಿಂದ ಆತನಿಗೆ ರಜೆ ನೀಡದಿರಿ ಎಂದು ಕೇಳಿಕೊಂಡರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆತನ ಪೆರೋಲ್ ಅರ್ಜಿಯನ್ನು ವಜಾ ಮಾಡಿತು ಎಂದು ಆಕೆ ನನಗೆ ಹೇಳಿದಳು.
ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುವ ಈ ಬದುಕಿನಲ್ಲಿ ಆ ಅಕ್ಕ ತಂಗಿಯರು ಅನಿವಾರ್ಯವಾಗಿಯಾದರೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬಾಕೆಯ ಮಗಳು ಈಗಾಗಲೇ ಪದವಿ ತರಗತಿಯಲ್ಲಿ ಓದುತ್ತಿದ್ದು, ಮತ್ತೊಬ್ಬಕೆಯ ಮಗಳು ಕೂಡ ಪಿಯುಸಿಯಲ್ಲಿ ಓದುತ್ತಿದ್ದಾಳೆ. ತಾಯಿಯನ್ನು ಕಳೆದುಕೊಂಡ ಮಗು ಆರನೇ ತರಗತಿಯಲ್ಲಿ ಓದುತ್ತಿದ್ದು ಅಜ್ಜ ಅಜ್ಜಿ ಇಬ್ಬರು ದೊಡ್ಡಮ್ಮಂದಿರು ಇಬ್ಬರು ಅಕ್ಕಂದಿರ ಪ್ರೀತಿಯ ರಕ್ಷೆಯಲ್ಲಿ ಬೆಚ್ಚಗಿದ್ದಾಳೆ. ಕಾಡುವ ಗಂಡನನ್ನು ಬಿಟ್ಟು ಬಂದ ಹೆಣ್ಣು ಮಗಳ ಮಗನು ಕೂಡ ಕಳೆದ ವರ್ಷ ತಾಯಿಯ ಬಳಿ ಮರಳಿದ್ದಾನೆ. ಇದು ತಾಯಿಗೆ ಬಹುದೊಡ್ಡ ಆಸರೆಯಂತೆ ಭಾಸವಾಗಿದೆ.
ಮೊದಲ ಹಲವಾರು ಭೇಟಿಗಳಲ್ಲಿ ಅವರ ಸಮಸ್ಯೆಯ ಕುರಿತಷ್ಟೇ ಕೇಳಿದ್ದ ನಾನು ನಮ್ಮ ಅಪ್ಪನಿಗೆ ನಾವು ಮಕ್ಕಳ ಬಾಳು ಹೀಗಾಯಿತು ಎಂಬುದೇ ಬಹುದೊಡ್ಡ ಚಿಂತೆಯಾಗಿದೆ ಎಂದು ಹೇಳಿದಾಗ ಯಾಕೆ ಏನಾಯ್ತು ಎಂದು ಕೇಳಲು ಆಕೆ ಹೇಳಿದ್ದು ಒಬ್ಬ ಮಗಳು ಗಂಡನ ಕುಡಿತದ ಶಿಕಾರಿಯಾದರೆ ಮತ್ತೊಬ್ಬ ಮಗಳು ಗಂಡನನ್ನೇ ಕಳೆದುಕೊಂಡಳು. ಮೂರನೆಯವಳಾದ ನಾನು ಗಂಡನನ್ನು ಬಿಟ್ಟು ಬಂದೆ ಎಂದು ತನ್ನ ಗಂಡನ ಸಂಶಯದ ವಿಷಯವನ್ನು ಹೇಳಿದಳು. ಯಾರೊಂದಿಗೆ ಮಾತನಾಡಿದರೂ, ಅಡುಗೆ ಕೆಲಸಕ್ಕೆ ಮನೆಯಿಂದ ಶಾಲೆಗೆ ಹೋಗುವಾಗ ಬರುವಾಗ ವಿನಾಕಾರಣ ಅನುಮಾನ ಮಾಡಿ ಬದುಕನ್ನು ಹೈರಾಣಗೊಳಿಸಿ, ಕೊನೆಗೆ ಗಂಡನ ಮನೆಯಿಂದ ತವರಿಗೆ ಮರಳಿದ್ದನ್ನು ಹೇಳಿದಳು.
ನಿನ್ನಪ್ಪನಿಗೆ ಹೋಗಿ ಹೇಳು ಗಂಡನ ಕುಡಿತಕ್ಕೆ ಒಬ್ಬ ಮಗಳಂತೂ ಬಲಿಯಾಗಿದ್ದಾಳೆ… ಮತ್ತೊಬ್ಬ ಮಗಳು ಸಂಶಯಕ್ಕೆ ಬಲಿಯಾಗದೇ ನಿನ್ನ ಕಣ್ಣ ಮುಂದೆ ಸ್ವತಂತ್ರವಾಗಿ ದುಡಿದು ತನ್ನ ಮಕ್ಕಳೊಂದಿಗೆ ಬದುಕುತ್ತಿದ್ದಾಳೆ. ನಮ್ಮ ಈ ಸಮಾಜದಲ್ಲಿ ಯಾವ ಹೆಣ್ಣೂ ಇಚ್ಛೆ ಪಟ್ಟು ಗಂಡನ ಮನೆಯಿಂದ ತಾನಾಗಿಯೇ ಹೊರ ಬರುವುದಿಲ್ಲ, ಪರಿಸ್ಥಿತಿಗಳು ಹಾಗೆ ಮಾಡಿಸುತ್ತವೆ ಎಂಬುದನ್ನು ಅವರಿಗೆ ಅರ್ಥ ಮಾಡಿಸು ಎಂದು ಹೇಳಿ ಕಳುಹಿಸಿದೆ.
ಸ್ನೇಹಿತರೆ, ಎಲ್ಲರ ಬದುಕು ಸುಗಮವಾಗಿರುವುದಿಲ್ಲ.
ಕೆಲವರ ಬದುಕು ಸರಳವಾದ, ಸುಗಮವಾದ ರಸ್ತೆಯಂತೆ ತೋರಿದರೆ ಮತ್ತೆ ಕೆಲವರ ಬದುಕು ಏರಿಳಿತಗಳನ್ನು, ಕಠಿಣ ತಿರುವುಗಳನ್ನು ಹೊಂದಿರುವ ಹಾದಿ. ಕೆಲವರಿಗೆ ಸುಖದ ನಡುವೆ ಅಲ್ಲೊಂದು ಇಲ್ಲೊಂದು ದುಃಖದ ಅಲೆ ಇದ್ದರೆ ಮತ್ತೆ ಕೆಲವರಿಗೆ ಈ ಜನ್ಮಕ್ಕೆ ಕೊನೆಯಾಗುವುದಿಲ್ಲವೇನೋ ಎನ್ನುವಷ್ಟು ದುಃಖವನ್ನೇ ಬದುಕಿನಲ್ಲಿ ಹಾಸಿ ಹೊದ್ದು ಮಲಗುವಷ್ಟು ನೋವುಗಳು ಸಂಕಷ್ಟಗಳು.
ಕೆಲವರಿಗೆ ಉಂಡದ್ದನ್ನು ಕರಗಿಸುವ ಚಿಂತೆಯಾದರೆ ಮತ್ತೆ ಕೆಲವರಿಗೆ ದಿನದ ಊಟವನ್ನು ಹೊಂದಿಸುವ ಚಿಂತೆ, ಕೆಲವರಿಗೆ ಅರಿವೆಗಳನ್ನು ಇಡಲು ಕಪಾಟು ಸಾಲುತ್ತಿಲ್ಲವೆಂಬ ಚಿಂತೆಯಾದರೆ ಮತ್ತೆ ಕೆಲವರಿಗೆ ಉಡಲು ವಸ್ತ್ರಗಳೇ ಇಲ್ಲ ಎಂಬ ಚಿಂತೆ. ಕೆಲವರ ಮನೆಯಲ್ಲಿ ಮಕ್ಕಳು ಸರಿ ಇಲ್ಲವೆಂದು ಚಿಂತೆಯಾದರೆ ಮತ್ತೆ ಕೆಲವರಿಗೆ ಮಕ್ಕಳೇ ಇಲ್ಲ ಎಂಬ ಚಿಂತೆ.
ಇಂತಹ ಚಿಂತೆಯ ಸಂತೆಯಲ್ಲಿ ಬದುಕುತ್ತಿದ್ದರೂ ಎಂದಾದರೂ ತಮಗೂ ಒಂದು ಒಳ್ಳೆಯ ದಿನ ಬರಬಹುದೆಂಬ ಆಶಯದಿಂದ, ಭರವಸೆಯಿಂದ ಕಾಯುತ್ತಿರುವ ಬಹುದೊಡ್ಡ ವರ್ಗವೇ ನಮ್ಮ ಸಮಾಜದಲ್ಲಿ ಇದೆ.
ಆ ಭರವಸೆಯೇ ಅವರಿಗೆ ಬದುಕನ್ನು ಸಾಗಿಸಲು ಬೇಕಾಗುವ ಶಕ್ತಿಯನ್ನು ನೀಡುತ್ತದೆ. ಅಂತಹ ಭರವಸೆಯ ಶಕ್ತಿಯಲ್ಲಿ ನಂಬಿಕೆ ಇಟ್ಟು ಬದುಕಿನಲ್ಲಿ ಮುಂದೆ ಸಾಗೋಣ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.