ಮೈಸೂರು ದಸರಾ
ವಿಶ್ವ ವಿಖ್ಯಾತ ಮೈಸೂರು ದಸರಾ
ನಾಡ ಹಬ್ಬವಿದು ಎಷ್ಟು ಸುಂದರ
ದೇಶ ವಿದೇಶದ ಮೂಲೆಗಳಿಂದ
ಹರಿದು ಬರುವುದು ಜನಸಾಗರ.
ನವರಾತ್ರಿಯಲಿ ಮೈಸೂರರಸರು
ನವದುರ್ಗೆಯರನು ಆರಾಧಿಸುತ
ಭಕ್ತಿಯಿಂದಲಿ ಮಹಾನವಮಿ ದಿನ
ಆಯುಧ ಪೂಜೆಯ ಮಾಡುವರು.
ತಾಯಿ ಚಾಮುಂಡಿಯು ಮಹಿಷಾಸುರನ
ಸಂಹರಿಸಿದ ದಿನ ವಿಜಯದಶಮಿಯು
ವಿಜಯದ ಸಂಕೇತವಾಗಿ ಭಕ್ತರು
ದೇವಿಯ ಪೂಜಿಸಿ ಸ್ತುತಿಸುವರು.
ಆನೆಯ ಮೇಲೆ ಚಿನ್ನದ ಅಂಬಾರಿ
ಅಂಬಾರಿಯೊಳು ಚಾಮುಂಡೇಶ್ವರಿ
ಅರಮನೆಯಿಂದ ಬನ್ನಿ ಮಂಟಪಕೆ
ನಡೆವುದು ವೈಭವದ ಜಂಬೂಸವಾರಿ.
ನಂದಿಧ್ವಜದ ಪೂಜೆಯ ಜೊತೆಗೆ
ಚಾಮುಂಡಿ ತಾಯಿಗೆ ಪುಷ್ಪಾರ್ಚನೆ
ತಾಳಮೇಳ ವಾದ್ಯಗಳೊಡಗೂಡಿ
ನೃತ್ಯ ಸಂಗೀತದ ಸಮರ್ಪಣೆ.
ಬನ್ನಿಮರವನು ಪೂಜಿಸಿ ದೇವಿಗೆ
ಬನ್ನಿ ಪತ್ರೆಯನು ಮುಡಿಸುವರು
‘ಬನ್ನಿಯು ಬಂಗಾರವಾಗಲಿ’ ಎನ್ನುತ
ಅವಳ ಕೃಪೆಯನು ಕೋರುವರು.
ಚಂಡೆ ಮದ್ದಳೆ ಕಂಸಾಳೆಯೊಂದಿಗೆ
ಸ್ತಬ್ಧ ಚಿತ್ರಗಳ ಪ್ರದರ್ಶನ
ಜಂಬೂಸವಾರಿ ಮೆರವಣಿಗೆಯಿಂದ
ಆಯಿತು ಸೀಮೋಲ್ಲಂಘನ.
ಝಗಮಗಿಸುವ ದೀಪಾಲಂಕಾರವು
ಕಣ್ಮನಗಳನು ಸೆಳೆಯುವುದು
ದಸರಾ ಹಬ್ಬದ ವೈಭವದಿಂದ
ಸ್ವರ್ಗವೆ ಧರೆಗಿಳಿದಂತಿಹುದು.
ಮೆರವಣಿಗೆಗಾಗಿ ಅಲಂಕೃತವಾದ
ಗಜಪಡೆಗಳ ನಡೆ ನೋಡಲು ಚಂದ
ನವ ವಧುವಿನಂತೆ ಸಿಂಗಾರಗೊಂಡ
ಅರಮನೆ ವೈಭವ ಇನ್ನೂ ಅಂದ.
ಮಹಿಷಾಸುರನ ಹೆಸರಿನಿಂದಲೇ
ಖ್ಯಾತಿಯ ಪಡೆಯಿತು ಮೈಸೂರು
ಕನ್ನಡ ನಾಡಿನ ಹಿರಿಮೆಯ ಸಾರುವ
ಸಂಸ್ಕೃತಿ, ಕಲೆಗಳ ತವರೂರು.
ಜಿ.ಎಸ್. ಗಾಯತ್ರಿ.
ಕವಿ ಪರಿಚಯ:
ಗಾಯತ್ರಿ. ಜಿ.ಎಸ್ ರವರು ದಾವಣಗೆರೆ ಜಿಲ್ಲೆಯ ಹರಿಹರದ ನಿವಾಸಿ.
ಎಂ.ಎ. ಬಿ.ಇಡಿ.ಪದವಿಧರರಾದ ಇವರು ಹರಿಹರದ ಬಾಪುಜಿ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಆಸಕ್ತರಾದ ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಅಂತರ್ಜಾಲ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡು ಹೆಸರುವಾಸಿಯಾಗಿವೆ.