ನಾ ಮೆಚ್ಚಿದ ಶಿಕ್ಷಕ : ಚಾಮಾ ಮಾಸ್ತರ.
ನಾನು ಬಾಲ್ಯದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನನಗೆ ಒಬ್ಬ ಶಿಕ್ಷಕರು ಪ್ರಭಾವ ಬೀರಿದರು. ಅವರ ಹೆಸರು ಚಾಮಾ ಮಾಸ್ತರ್ ಎಂದಾಗಿತ್ತು. ಬೀದರ ಜಿಲ್ಲೆಯ ಬಗ್ದಲ ಗ್ರಾಮದಲ್ಲಿ ಆ ಮಾಸ್ತರ ಇದ್ದರು.ಸುಮಾರು 37 ವರ್ಷದ ಘಟನೆಯ ನೆನಪು ಇದು.
ಚಾಮಾ ಮಾಸ್ತರ ಊರಲ್ಲಿ ಎಲ್ಲೇ ಕಂಡರು ಉಸಿರು ಗಟ್ಟಿ ಓಡುತ್ತಿದ್ದೆವು. ಇವರು ಪಾಠ ಮಾಡಬೇಕಾದರೆ ಒಂದು ಸಣ್ಣ ಶಬ್ದ ಕೂಡ ಬರುತ್ತಿರಲಿಲ್ಲ. ಅತ್ಯಂತ ತೆಳ್ಳಗಿನ ದೇಹ ಕನ್ನಡಕ ಹಾಕಿ ಓಡಾಡುವಾಗ ಮಕ್ಕಳ ಸುದ್ದಿ ಕೇಳದ ಅಪ್ಪಂದಿರೆ ಇರಲಿಲ್ಲ.
ಹಿರಿಯರು ಹೇಳಿದ ಹಾಗೆ “ಮೂರರಲ್ಲಿ ಕಲೆತದ್ದು ನೂರರಲ್ಲಿ ಮರೆಯದು” ಎಂಬ ನಾನ್ನುಡಿಯೆಂತೆ. ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಕೆಲವು ವ್ಯಕ್ತಿಗಳು ತುಂಬಾ ಪ್ರಭಾವ ಬಿರುತ್ತಾರೆ. ಅವರಲ್ಲಿ ಶಿಕ್ಷಕರು ತುಂಬಾ ಮಹಾತ್ವದ ಪಾತ್ರ ಹೊಂದಿರುತ್ತಾರೆ.
ಒಂದು ಮಗು ಮಾತು ಕಲಿತು ಮನೆಯಿಂದ ಶಾಲೆ ಕಡೆ ಮುಖ ಮಾಡಿದಾಗ. ಒಬ್ಬ ರೋಗಿ ಆಸ್ಪತ್ರೆ ಕಡೆ ಮುಖ ಮಾಡಿದಾಗ ವಿದ್ಯಾರ್ಥಿಗೆ ಗುರು ರೋಗಿಗೆ ವೈದ್ಯ ಯಾವ ರೀತಿ ಧಾರೆ ಎರೆಯುತ್ತಾರೆ ಎಂಬುದರ ಮೇಲೆ ಅವನ ಜೀವನ ಅವಲಂಬನೆಯಾಗಿರುತ್ತದೆ. ರೋಗಿಗೆ ಔಷಧ್ಯ ವಿದ್ಯಾರ್ಥಿಗೆ ವಿಷಯ ಇವೆರಡು ಯಾವ ರೀತಿ ಜೀರ್ಣಸಿಕೊಳ್ಳುತ್ತಾನೆ ಎಂಬ ಅಂದಾಜು ಗುರುವಿಗಿರುತ್ತದೆ.
ಇಂದಿನವರೆಗೆ ನಾವು ಸಮಾಜದಲ್ಲಿ ನಮ್ಮ ಬದುಕು ಕನ್ನಡಿಯಲ್ಲಿ ನಮ್ಮನು ನಾವು ಒಮ್ಮೆ ನೋಡಿಕೊಂಡಾಗ ಇದರ ಹಿಂದಿನ ಶಕ್ತಿಗಳ ಬಗ್ಗೆ ಅರಿವಾಗಬಹುದು.
ಇಂದಿನ ಶಿಕ್ಷಣದಲ್ಲಿ ದುಡ್ಡಿಗಾಗಿ ಶಿಕ್ಷೆ ಅನುಭವಿಸುವ ಪಾಲಕರನ್ನು ನೋಡಿ ನಮ್ಮ ಶಿಕ್ಷಕರ ಬಗ್ಗೆ ಹಂಚಿಕೊಳ್ಳಲು ಇನ್ನು ಹೆಚ್ಚಿನ ಹುಮಸ್ಸು ಬರುವಂತಾಯಿತು .
ಇಂದಿನ ಪ್ರಕೃತಿ ಕಂಡು ಅಂದಿನ ಪ್ರಕೃತಿ ನೆನೆಯುವ ಹಾಗೆ
ಇಂದಿನ ಆಹಾರ ಪದ್ದತಿ (ಹೈಬ್ರಿಡ್) ಕಂಡು ಅಂದಿನ (ಜವಾರಿ) ಪದ್ಧತಿ ನೆನೆಯುವ ಹಾಗೆ ಶಿಕ್ಷಕರು ಕೂಡ ನೆನೆಯುವಂತಾಗಿದೆ.
ವಿಶೇಷವಾಗಿ ಶಿಕ್ಷಕರೆಂದರೆ ಓದು ಬರಹ ಪುಸ್ತಕದ ವಿಷಯಕ್ಕೆ ಸೀಮಿತವಿರುವ ಈ ಕಾಲದಲ್ಲಿ.
ಚಾಮಾ ಸರ್ ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಅದು ಹೇಗೆಂದರೆ, ಅವರು ನಮ್ಮೂರ ಜಾತ್ರೆಯಲ್ಲಿ ಮುಖಕೆ ಬಣ್ಣ ಹಚ್ಚಿ ನಾಟಕದಲ್ಲಿ ಪಾತ್ರಧಾರಿಯಾಗಿ ನಿಂತರೆ ನೋಡುಗರು ದಂಗು ಬಡಿದು ಬಾಯಿ ಮೇಲೆ ಬೆರಳು ಇಟ್ಟು ದಂಗಾಗಿ ನೋಡುತ್ತಿದ್ದರು.
ಊರಿನವರಿಗೂ ಇವರ ಕಂಡರೆ ಎಲ್ಲಿಲ್ಲದ ಪ್ರೀತಿ ಅಭಿಮಾನ. ಅವರು ಇಲ್ಲದ ಜಾತ್ರೆಯಲ್ಲಿ ಜನರಿಗೆ ನಾಟಕ ನೋಡಲು ಹಾಗೂ ಮಾಡಲು ಮನಸ್ಸು ಒಪ್ಪಲಿಲ್ಲ. ಅನೇಕ ವರ್ಷ ಚಾಮ ಸರ್ ನೆನಪಲ್ಲಿ ನಮ್ಮೂರ ಜಾತ್ರೆ ನಾಟಕ ವಿಲ್ಲದೆ ಮಾಡುವಂತಾಯಿತು.
ಒಬ್ಬ ಶಿಕ್ಷಕ ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗದೆ ಇಡಿ ಊರ ಜನರ ಮನಸ್ಸಿನಲ್ಲಿ ಬೇರುರುವದು ಅಷ್ಟು ಸುಲಭದ ಮಾತಿಲ್ಲ. ಇಂಥ ಅಪರೂಪದ ಶಿಕ್ಷಕರು ನಮ್ಮೂರಲ್ಲೊಬ್ಬರಿದ್ದರು ಎಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆ ವಿಷಯವಾಗಿತ್ತು.
ಈಗಿನ ಶಿಕ್ಷಣ ಪದ್ಧತ್ತಿ ನೋಡಿ ನಮ್ಮನ್ನು ನಾವು ಪುಣ್ಯವಂತರು ಎನ್ನುವದರಲ್ಲಿ ಎರಡು ಮಾತಿಲ್ಲ. ಇಂದಿನ ಶಾಲೆಗಳಲ್ಲಿ ಪೇರೆಂಟ್ಸ್ ಮೀಟಿಂಗ್ ಅಂತ ಒಂದು ದಿನ ಕಳೆದರೆ ಅಂದು ನಮ್ಮ ಶಿಕ್ಷಕರ ಜೊತೆ ನಮ್ಮ ತಂದೆಯವರು ಹೋಟೆಲಿನಲ್ಲೇ ಪೇರೆಂಟ್ಸ್ ಮೀಟಿಂಗ್ ಮುಗಿತ್ತಿತ್ತು. ಮರುದಿನ ಮೇಸ್ಟ್ರು ಬೆತ್ತ ಬೀಸುವದು ಕಂಡು ನನಗೆ ಖಚಿತವಾಗುತ್ತಿತ್ತು ನಿನ್ನೆ ಸಾಯಂಕಾಲ ಪೇರೆಂಟ್ಸ್ ಮೀಟಿಂಗ್ ಮುಗಿದಿದೆ ಅಂತ. ಹೀಗೆ ಮೇಸ್ಟ್ರು ಸಮಯ ವ್ಯರ್ಥ ಮಾಡದೆ ಮಕ್ಕಳಿಗೆ ಪಾಠ ಮಾಡಲು ಅಧಿಕ ಸಮಯ ಮಿಸಲಿಡುತ್ತಿದ್ದರು.
ಚಾಮಾ ಸರ್ ಅಂದರೆ ಗಂಟಲಿನಲ್ಲಿನ ತಿಂಡಿ ಕೂಡ ಅಲ್ಲಾಡುತ್ತಿರಲಿಲ್ಲ. ಅವರ ಹೆಸರು ಗುರಿತಸದ ಮನುಷ್ಯ ಹುಡುಕಿದರೂ ಸಿಗುತ್ತೀರಿಲ್ಲಿಲ್ಲ. ಈ ಶಿಕ್ಷಕರ ವಿಶೇಷ ಗುಣವೆಂದರೆ ಸಂಬಳಕ್ಕೂ ಸಮಯಕ್ಕೂ ಯಾವತ್ತೂ ಸಂಬಂಧ ಕಟ್ಟಿದವರಲ್ಲ. ಇವರು ಶಾಲೆಗೆ ಬಂದರೆ ಸಮಯ ನೋಡುತ್ತಿರಲಿಲ್ಲ. ನನ್ನ ತರಗತಿ ನಿನ್ನ ತರಗತಿ ಎಂಬ ಭೇದ ಭಾವ ಬರುತ್ತಿರಲಿಲ್ಲ. ಈಗಿನ ಸಮಯದಲ್ಲಿ ಮಕ್ಕಳ ಕಿರಿಕಿರಿಗಿಂತ ಸಿಬ್ಬಂದಿಯ ಸಮಸ್ಯೆ ಆಲಿಸುವದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಊರಲ್ಲಿನ ಶಾಲೆಯಲ್ಲಿ ಶಿಕ್ಷಕರು ಎಷ್ಟೇ ಕುಂದು ಕೊರತೆ ಇದ್ದರು. ಅದನ್ನು ಮೆಟ್ಟಿ ನಿಲುವ ಶಕ್ತಿ ಹೊಂದಿದ್ದರು. ಶಿಕ್ಷೆಕರಿಗೆ ತಡವಾಗಲೂ ಬಾತ ರೂಮಿಗಾಗಿ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇರಲಿಲ್ಲ. ಟ್ರಾಫಿಕ್ ಸಮಸ್ಸೆ ಇಲ್ಲ, ಬೈಕ್ ಕೆಟ್ಟಿತ್ತು ಅನ್ನುವ ಹಾಗಿಲ್ಲ, ಬಸ್ಸು ಲೇಟಾಗಿ ಬಂತು ಅನ್ನೋ ಪ್ರಮೇಯ ಬಂದಿರಲಿಲ್ಲ.
ಊರಲ್ಲಿಯೇ ಮನೆ ಇರುವದರಿಂದ ಶಾಲೆಗೆ ಸಮಯಕ್ಕೆ ಬರುವಂತಹ ಶಿಕ್ಷಕರು ನಮಗೆ ಸಿಕ್ಕಂತಾಗಿದೆ.
ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗೆ 37 ವರ್ಷದ ನಂತರ ನೆನಪಾಗಿ ಉಳಿದು ಅಕ್ಷರದ ರೂಪದಲ್ಲಿ ಮೆಲಕು ಹಾಕಿಸಿಕೊಳ್ಳುವ ವ್ಯಕ್ತಿತ್ವ ಅಂದರೆ ಎಂತಹ ಸಾಮರ್ಥ್ಯ ಇರಬಹುದು ನೀವೇ ಅಂದಾಜು ಮಾಡಿ ಕೊಳ್ಳಿ.
ಈಗಿನ ಶಿಕ್ಷೆಕರ ವಿದ್ಯಾರ್ಥಿಗಳ ಬಾಂಧವ್ಯದ ಬಗ್ಗೆ ಯೋಚಿಸಿದರೆ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಜ ಹೇಳಬೇಕೆಂದರೆ ನಾನು ಯಾವುದೇ ತರಹದ ಶುಲ್ಕಕ್ಕಾಗಿ (ಫಿಸ್) ಹೊರಗಡೆ ನಿಂತಿರೋದು, ಅಥವಾ ಪಾಲಕರಿಗೆ ಕರೆದುಕೊಂಡು ಬಾ, ಫಿಸ್ ತರದೆ ಶಾಲೆಗೆ ಬರಬೇಡ, ಬೆಂಚ್ ಮೇಲೆ ನಿಲ್ಲು. ಈ ತರಹದ ಶಬ್ದಗಳನ್ನು ಕೇಳುವ ರ್ದೌಭಾಗ್ಯ ನಮ್ಮ ಕಾಲದ ಶಿಕ್ಷಣದಲ್ಲಿರಲಿಲ್ಲ. ಶಾಲೆಯನ್ನುವದು ‘ಜ್ಞಾನದ ದೇಗುಲ ಕೈ ಮುಗಿದು ಒಳಗೆ ಬಾ’ ಎನ್ನುವಂತೆ ಕೇವಲ ಜ್ಞಾನಕ್ಕೆ ಸೀಮಿತವಾಗಿರುತ್ತಿತ್ತು. ಏಕೆ ಈ ಮಾತು ಹೇಳುತ್ತಿದ್ದೇನೆಂದರೆ. ಈಗಿನ ಕೇಳವು ಶಿಕ್ಷಕರು ಶಾಲೆಯ ಸಮಯ ಮುಗಿಯುವದನ್ನೆ ಕಾಯುತ್ತಿರುತ್ತಾರೆ. ಮುಗಿದ ಮೇಲೆ ಬೇರೆ ಬೇರೆ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಮತ್ತೆ ತನ್ನ ಸ್ವಂತಕ್ಕಾಗಿ ಅಥವಾ ತಮ್ಮ ವೈಯಕ್ತಿಕ ಚಟುವಟಿಕೆಗಾಗಿ ಆದ ದಣಿವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬಿರುತ್ತದೆ. ನಮ್ಮೂರ ಶಿಕ್ಷಕರು ತಾನು ನಾಳೆ ತನ್ನ ವಿದ್ಯಾರ್ಥಿಗಳಿಗೆ ಭೋಧನೆ ಮಾಡುವ ವಿಷೆಯದ ಬಗ್ಗೆ ಚಿಂತಿಸುತ್ತಿದ್ದರು . ಪುಸ್ತಕದ ಮಿಗಿಲಾದ ಉದಾಹರಣೆಗಳೊಂದಿಗೆ ಪಾಠ ಮಾಡುತ್ತಿದ್ದರು ನಮ್ಮೂರ ಶಿಕ್ಷಕರು.
ನಮ್ಮ ಈ ಶಿಕ್ಷಕರಿಗೆ ಶಾಲೆಯಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದು ನಾ ಕಾಣಲೇ ಇಲ್ಲ.
ಉಡುಗೆ ತೋಡುಗೆ ಬೈಕು ಗಾಡಿ ತೋರಿಕೆ ಯಾವುದೇ ತೊರೀಕೆಯ ಹಸಿವು ಇವುಗಳ ಸ್ಪರ್ಧೆ ಅವರ ಮಧ್ಯೆ ಮನೆ ಮಾಡಲ್ಲಿಲ್ಲ. ಯಾಕೆ ಈ ಮಾತು ನೆನಪಾಯಿತು ಗೊತ್ತಾ. ಶಾಲೆಯ ಸಿಬಂಧಿಯೊಬ್ಬ ಹೊಸ ಬೈಕ್ ತಗೊಂಡರೆ ಸಾಕು ಅದರದೇ ಚರ್ಚೆ. ಅವರು ಬೈಕ್ ಮೇಲೆ ಬರುತ್ತಿದ್ದಾರೆ ನಾನು ಇನ್ನು ಸೈಕಲ್ ಮೇಲೆ ಎಷ್ಟು ದಿನ ಅಂತ ಬರೋದು ನಮಗೆ ಯಾವಾಗ ಸಿಗುತ್ತೋ ಬೈಕ್ ಭಾಗ್ಯ ಅನ್ನೋ ಗೊಳಿನ ಮಧ್ಯ ಸಮಯ ಎನ್ನುವ ಪಾಯಸ ಜಾರಿಹೋಗದೆ ಇರುತ್ತದೆಯೇ ?
ಮತ್ತೊಬ್ಬರ ಗ್ರಹ ಪ್ರವೇಶ ಮುಗಿಸಿ ಬಂದರಾಯಿತು ಪಾಠಕ್ಕೆ ಗ್ರಹ ಒಕ್ಕರಿಸಿದ ಹಾಗೆನೇ. ನೋಡಿ ಅವರು ಎಷ್ಟು ದೊಡ್ಡ ಮನೆ ಕಟ್ಟಿದ್ದಾರೆ ನಾವು ಎಂದು ಕಟ್ಟುತೆವೋ ದೇವರೆ ಬಲ್ಲ. ಎಂಬ ಜೊಲ್ಲು ಮುಖದಲ್ಲಿ ಸರಸ್ವತಿ ಕಾಣುವಳೇ..?
ನಮ್ಮ ಶಿಕ್ಷಕರು ಮಾತ್ರ ಸದಾ ಮುಗುಳ್ನಗುತ್ತಾ ಪಾಠ ಮಾಡುವದು ಕಂಡರೆ ಯಾರಿಗೆ ತಾನೇ ಹಸಿವು ನೀರಡಿಕೆ ಬರಲು ಸಾಧ್ಯ ನೀವೆ ಹೇಳಿ. ನಮ್ಮ ಸಮಯದ ಸಂತರಂತೆ ಶಿಕ್ಷಕರು ಕೂಡ. ಒಂದು ಸಲ ಶಾಲೆಯ ಮೆಟ್ಟಿಲು ಹತ್ತಿದರೆ ಸಾಕು. ತನ್ನ ತನು ಮನವೆಲ್ಲ ರೈತನು ಬಿತ್ತುವ ಬೀಜದಂತೆ ಮೊಳಕೆ ಒಡೆಯುವ ತನಕ ಬೇರೆ ಮಾತೆ ಇಲ್ಲ ಅನ್ನೋ ಹಾಗೆ ನಮ್ಮ ಶಿಕ್ಷಕರು ಕೂಡ ಇದ್ದರು. ಇದೇಲ್ಲ ಕಳೆದು ದಶಕಗಳೆ ಉರುಳಿ ಹೋದರು ನಮ್ಮ ಮಾಸ್ತರರು ಸದಾ ನೆನಪಿನಾಳದಲ್ಲಿ ಉಳಿದಿದ್ದಾರೆ. ಇತ್ತಿಚೆಗೆ ನನ್ನ ಮಕ್ಕಳಿಗೆ ಶಾಲೆಗೆ ಬಿಟ್ಟು ತರಬೇಕಾದರೆ ಆ ಶಾಲೆಯಲ್ಲಿ ನಮ್ಮನ್ನು ಕಲಿಸಿದ ನನ್ನ ನೆಚ್ಚಿನ ಶಿಕ್ಷಕ ಚಾಮಾ ಸರ್ ಇನ್ನೂ ಪದೆ ಪದೇ ನೆನಪಾಗುತ್ತಾರೆ.
– ವಿನೋದ ಹೊನ್ನಾ.ಬೀದರ