ನಾಲಿಗೆ ಕುಲ ಹೇಳಿತು (ಮಕ್ಕಳ ಕತೆ)
ಒಂದು ರಾಜಧಾನಿ. ಅಲ್ಲಿ ರಾಜ ವಿಕ್ರಮ ಸಿಂಹ. ಅವನು ತುಂಬ ದಯಾಳು. ದಾನ, ಧರ್ಮ ಮಾಡುವಲ್ಲಿ ತುಂಬ
ಪ್ರಸಿದ್ಧನಾಗಿದ್ದ. ಊರಿನ ಜನರಿಗೆ ರಾಜನೆಂದರೆ ಅಚ್ಚುಮೆಚ್ಚು.
ಒಮ್ಮೆ ರಾಜ ತನ್ನ ಮಂತ್ರಿ, ಸೇನಾಧಿಪತಿ, ಸೇವಕರೊಂದಿಗೆ ಬೇಟೆಯಾಡಲು ಕಾಡಿಗೆ ಹೊರಟರು. ಬೇಟೆ ಆಡುತ್ತ ಆಡುತ್ತ ಕಾಡಿನ ಮದ್ಯೆ ಎಲ್ಲರಿಗೂ ತುಂಬ ನೀರಡಿಕೆ ಆಯಿತು. ನೀರನ್ನು ಹುಡುಕುತ್ತಾ ಒಬ್ಬೊಬ್ಬರೂ ಒಂದೊಂದು ದಿಕ್ಕಿನತ್ತ ಹೊರಟರು.
ಸೇವಕ ಹೋದ ದಿಕ್ಕಿ ನಲ್ಲಿ ನದಿ ನೀರು ಹರಿಯುವ ಜುಳು ಜುಳು ಶಬ್ದ ಕೇಳಿಸಿತು. ಸೇವಕ ಶಬ್ದ ಆಲಿಸಿ ಬರುತ್ತಿದ್ದಾಗ ದಾರಿಯಲ್ಲಿ ಒಂದು ಮರದ ಕೆಳಗೆ ಕಣ್ಣು ಕಾಣದ ಒಬ್ಬ ಕುರುಡು ಸನ್ಯಾಸಿ ತಪಸ್ಸು ಮಾಡುತಿದ್ದರು.
ನೀರನ್ನು ಹುಡುಕುತ್ತಾ ಬಂದ ಸೇವಕ ಸನ್ಯಾಸಿಯನ್ನು ಕಂಡು, ‘ಏ ಕುರುಡ, ಇಲ್ಲಿ ಎಲ್ಲಾದರೂ ಕುಡಿಯಲು ನೀರು ಸಿಗುವುದೇ?’ ಎಂದು ಕೇಳಿದ. ಅದಕ್ಕೆ ಸನ್ಯಾಸಿ, ‘ಹೀಗೆ ಸೀದಾ ಹೋಗಿ. ಮುಂದೆ ಒಂದು ನದಿ ಇದೆ. ಅಲ್ಲಿ ತಮಗೆ ನೀರು ಸಿಗುತ್ತದೆ’ ಎಂದನು.
ಸ್ವಲ್ಪ ಸಮಯದ ನಂತರ ಸೇನಾಧಿಪತಿ ಅದೇ ಸ್ಥಳಕ್ಕೆ ಬಂದು ಸನ್ಯಾಸಿಯನ್ನು ಕಂಡು, ‘ರೀ ಇಲ್ಲಿಎಲ್ಲಾದರೂ ಕುಡಿಯಲು ನೀರು ಸಿಗುವುದೇ?’ ಎಂದು ಕೇಳಿದ. ಅದಕ್ಕೆ ಸನ್ಯಾಸಿ, ಅವನಿಗೂ ಅದೇ ಉತ್ತರ ಹೇಳಿದ.
ಸೇನಾಧಿಪತಿ ಮುಂದೆ ಹೋದ. ಇನ್ನು ಸ್ವಲ್ಪ ಸಮಯ ಕಳೆದ ಮೇಲೆ ಮಂತ್ರಿಯು ಅದೇ ಜಾಗಕ್ಕೆ ಬಂದು ಸನ್ಯಾಸಿಯನ್ನು ಕಂಡು, ‘ಮಹಾಸ್ವಾಮಿ, ನಮಗೆ ತುಂಬಾ ನೀರಡಿಕೆ ಆಗಿದೆ. ಇಲ್ಲಿ ಎಲ್ಲಾದರೂ ಕುಡಿಯಲು ನೀರು ಸಿಗುವುದೇ?’ ಎಂದು ಕೇಳಲು ಸನ್ಯಾಸಿ ಅವನಿಗೂ ಅದೇ ಉತ್ತರ ಹೇಳುತಾನೆ. ಸರಿ ಮಂತ್ರಿಯು ನದಿಯ ಕಡೆಗೆ ಹೊರಡುತ್ತಾನೆ.
ಮತ್ತೆ ಸ್ವಲ್ಪ ಸಮಯದ ನಂತರ ಮಹಾರಾಜ ವಿಕ್ರಮ ಸಿಂಹರು ಅದೇ ಮಾರ್ಗದಲ್ಲಿ ಬಂದು ತಪಸ್ಸು ಮಾಡುತ್ತಿರುವ ಸನ್ಯಾಸಿಯನ್ನು ಕಂಡು, ‘ಸಾಧು ಮಹಾರಾಜ್, ಈ ಮಾರ್ಗದಲ್ಲಿ ಯಾರಾದರೂ ಬಂದು ಹೋದರೇ?’ ಎಂದು ತುಂಬಾ
ಭಕ್ತಿ ಭಾವದಿಂದ ವಿನಮ್ರನಾಗಿ ಕೇಳಿದನು.
ಆಗ ಸನ್ಯಾಸಿಯು, ಮಹಾರಾಜರೇ, ನಿಮ್ಮ ಪರಿವಾರ ಎಲ್ಲ ಇಲ್ಲಿಗೆ ಬಂದರು. ಮೊದಲು ನಿಮ್ಮ ಸೇವಕ ನೀರು ಹುಡುಕಿಕೊಂಡು ಬಂದರು. ನಂತರ ನಿಮ್ಮ ಸೇನಾಧಿಪತಿ ಬಂದರು. ನಂತರ ನಿಮ್ಮ ಮಂತ್ರಿ ಬಂದರು. ಅವರು ಸಹ ನೀರನ್ನು ಹುಡುಕಿಕೊಂಡು ನದಿ ಕಡೆಗೆ ಹೋದರು’ ಎಂದು ತಿಳಿಸಿದರು.
ಇದನ್ನು ಕೇಳಿ ರಾಜನು, ‘ಧನ್ಯವಾದಗಳು ಸಾಧು ಮಹಾರಾಜ್’ ಎಂದು ಸನ್ಯಾಸಿಗೆ ನಮಸ್ಕರಿಸಿ ನಾಡಿನ ಕಡೆ ಹೊರಟನು.
ನದೀದಡದಲ್ಲಿ ರಾಜನಿಗೆ ಅವನ ಪರಿವಾರದವರೆಲ್ಲ ಒಟ್ಟಿಗೆ ಸಿಕ್ಕಿದರು. ರಾಜ ಅವರನ್ನು ಕಂಡು, ‘ನಿಮ್ಮಲ್ಲಿ ಇಲ್ಲಿಗೆ ಮೊದಲು ಯಾರು ಬಂದಿರಿ?’ ಎಂದು ಕೇಳಲು ಮೊದಲು ಸೇವಕ, ನಂತರ ಸೇನಾಧಿಪತಿ, ಆಮೇಲೆ ಮಂತ್ರಿ ಬಂದೆವು, ಈಗ ತಾವು ಬಂದಿರಿ ಎಂದರು.
ಈ ವಿಷಯ ತಿಳಿದು ರಾಜನಿಗೆ ತುಂಬಾ ಆಶ್ಚರ್ಯ ಆಯಿತು. ‘ಇದು ಹೇಗೆ ಸಾಧ್ಯ? ಅಲ್ಲಿದ್ದ ಸನ್ಯಾಸಿ, ಕುರುಡರು, ಅವರಿಗೆ ಕಣ್ಣು ಕಾಣದಿದ್ದರೂ ಅವರು ನಿಮ್ಮನ್ನು ಹೇಗೆ ಗುರುತಿಸಿದರು?’ ಎಂದ ರಾಜ ಬನ್ನಿ ನಾವೆಲ್ಲಾ ಅವರ ಬಳಿಯೇ ಹೋಗಿ. ಕೇಳೋಣ ಎಂದು ಎಲ್ಲರೂ ಸನ್ಯಾಸಿ ಹತ್ತಿರ ಬಂದರು.
ಮಹಾರಾಜನು ತುಂಬಾ ವಿನಯದಿಂದ ಸಾಧು ಮಹಾರಾಜ್, ‘ನಮಗೆ ಈಗ ಒಂದು ಸಂದೇಹ. ಏನೆಂದರೆ ನಿಮಗೆ ಕಣ್ಣು ಕಾಣದಿದ್ದರೂ ನೀವು ನಮ್ಮ ಪರಿವಾರದವರನ್ನು ಹೇಗೆ ಗುರುತಿಸಿದಿರಿ ? ದಯವಿಟ್ಟು ತಿಳಿಸಬೇಕು’ ಎನ್ನಲು ಸನ್ಯಾಸಿ ಹೇಳಿದರು,
ಮಹಾರಾಜರೇ, ಕೇಳಿ. ಮೊದಲು ಬಂದವ ‘ಏ ಕುರುಡ’ ಎಂದು ಸಂಬೋಧನೆ ಮಾಡಿದ. ಅವನು ನಿಮ್ಮ ಸೇವಕ.
ಎರಡನೆಯವ ರೀ ಎಂದು ಸಂಬೋಧಿಸಿದ. ಅವನು ನಿಮ್ಮ ಸೇನಾಧಿಪತಿ. ಮತ್ತೆ ಬಂದವರು ಮಹಾಸ್ವಾಮಿ ಎಂದರು ಅವರು ನಿಮ್ಮ ಮಂತ್ರಿ. ಕೊನೆಯಲ್ಲಿ ತಾವು ಬಂದು ಸಾಧು ಮಹಾರಾಜ್ ಎಂದಾಗ ನೀವು ಮಹಾರಾಜರೆಂದು ತಿಳಿಯಿತು.
ಮಾನವನ ಮಾತಿನಿಂದಲೇ ಅವರವರ ವ್ಯಕ್ತಿತ್ವ ವನ್ನು ತಿಳಿಯಬಹುದಲ್ಲವೇ’ ಎಂದರು.
ಸಂಗ್ರಹ- ಡಾ.ಈಶ್ವರಾನಂದ ಸ್ವಾಮೀಜಿ.