Oplus_131072

ನಮ್ಮ ಹೆಮ್ಮೆಯ ಕನ್ನಡ

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈಮರೆಯುವುದು.

ಎಂಬ ನಮ್ಮ ರಾಷ್ಟ್ರಕವಿ ಕುವೆಂಪು ಅವರ ಈ ಕವನದ  ಸಾಲುಗಳು ಅದೇಷ್ಟು ಸುಂದರವಾಗಿವೆ, ಎಷ್ಟೊಂದು ಅರ್ಥಪೂರ್ಣವಾಗಿವೆ.

ಹೌದು, ಕನ್ನಡ ಎಂದಾಕ್ಷಣ ನಮ್ಮ ಹೃದಯ ಸಂತಸದಿಂದ ಕುಣಿದಾಡುತ್ತದೆ. ಕಿವಿ ನೆಟ್ಟಗಾಗುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ.ಅಂಥ ಅದ್ಭುತವಾದ ಶಕ್ತಿಯಿದೆ ಈ ಮೂರಕ್ಷರದಲ್ಲಿ. ನಮ್ಮ ನಾಡು ಸಂಪದ್ಭರಿತವಾದ ಚೆಲುವ ಕನ್ನಡ ನಾಡು. ಶ್ರೀಗಂಧದ ಬೀಡು. ಸದಭಿಮಾನದ ಗೂಡು.ಸಂಗೀತ, ನೃತ್ಯ,ಕಲೆ, ವಾಸ್ತು ಶಿಲ್ಪಗಳ ನೆಲೆವೀಡು. ಅದೇ ರೀತಿ ಜೇನಿನಂತೆ ಮಧುರವಾಗಿರುವ, ಕಸ್ತೂರಿಯಂತೆ ಕಂಪು ಸೂಸುವ, ಸುಂದರ ಲಿಪಿಯುಳ್ಳ ಹಾಗೂ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯೇ ನಮ್ಮ ಮಾತೃಭಾಷೆ. ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿಗಳವರೆಗೆ ಅನೇಕರು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಸುಂದರವಾಗಿ ಬಣ್ಣಿಸುವ ಮೂಲಕ ನಾಡಿನ ಬಗ್ಗೆ ಗೌರವವನ್ನೂ, ತಮ್ಮ ಭಾಷಾಭಿಮಾನವನ್ನೂ ಮೆರೆದಿದ್ದಾರೆ.

ರಾಷ್ಟ್ರ ಕವಿ ಗೋವಿಂದ ಪೈ ಅವರ  ‘ತಾಯೆ ಬಾರ ಮೊಗವ ತೋರ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’, ದ. ರಾ.ಬೇಂದ್ರೆಯವರ ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ,ಹಂಸಲೇಖಾ ಅವರು ರಚಿಸಿದ ಹಾಗೂ ಡಾ.ರಾಜಕುಮಾರ್ ಅವರ ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಮುಂತಾದ ಕವನಗಳು ಇದಕ್ಕೆ ಸಾಕ್ಷಿಯಾಗಿವೆ. ‘ಅನುಭವಾಮೃತ’ ಗ್ರಂಥದ ಕರ್ತೃವಾದ ಮಹಲಿಂಗರಂಗ ಎಂಬ ಕವಿ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪುದು’ ಎಂಬುದಾಗಿ ಕನ್ನಡ ಭಾಷೆಯ ಹಿರಿಮೆಯನ್ನು ಸಾರಿ ಸಾರಿ ಹೇಳಿದ್ದಾನೆ. ಹೌದು , ಸಿಪ್ಪೆ ತೆಗೆದ ಬಾಳೆಯ ಹಣ್ಣನ್ನು ಸುಲಭವಾಗಿ ತಿನ್ನುವಂತೆ, ಮೇಲಿನ ಸಿಬುರು ತೆಗೆದು ರಸವನ್ನು ಸುಲಭವಾಗಿ ಹೀರುವ ಕಬ್ಬಿನಂತೆ, ಬಿಸಿ ಆರಿದ ಹಾಲಿನಂತೆ ನಮ್ಮ ಕನ್ನಡ ಭಾಷೆಯು ಕಲಿಯಲು ಸರಳ ಸುಲಭವೂ, ಕೇಳಲು ಮಧುರವೂ ಆಗಿದೆ.

ಅಕ್ಕರೆ ತುಂಬಿದ ಸಕ್ಕರೆಯಂತಹ
ಆಕರ್ಷಕ ನುಡಿ ಕನ್ನಡವು
ಮನಸಿಗೆ ತಂಪನು ಕಿವಿಗಳಿಗಿಂಪನು
ನೀಡುವ ಭಾಷೆಯು ಸುಂದರವು.

‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂಬ ಪಂಪನ ನುಡಿ ಮುಂದಿನ ಜನ್ಮದಲ್ಲಿಯೂ ತಾನು ಕನ್ನಡ ನಾಡಿನಲ್ಲೇ ಹುಟ್ಟಬೇಕು ಎಂಬ ಅವನ ಆಶಯವನ್ನು ವ್ಯಕ್ತಪಡಿಸುತ್ತದೆ. ಕನ್ನಡ ಪ್ರದೇಶವು ದೇಶದ ವಿವಿಧೆಡೆ ಹರಿದು ಹಂಚಿ ಮುಂಬೈ, ಮದರಾಸು, ಹೈದರಾಬಾದ್ ಪ್ರಾಂತ್ಯಗಳಲ್ಲಿ ಮರಾಠಿ, ತೆಲುಗು,ಉರ್ದು ಭಾಷೆಗಳ ಮಧ್ಯೆ ಕನ್ನಡ ಭಾಷೆಯು ಸಿಕ್ಕಿ ನಲುಗಿತ್ತು.ಆ ಸಂದರ್ಭದಲ್ಲಿ ನಾಡು..ನುಡಿಯ ಬಗ್ಗೆ ಚಿಂತಿಸಿದ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡದ ಪುನರ್ನಿರ್ಮಾಣ ಕಾರ್ಯದಲ್ಲಿ ಸಾಹಿತಿಗಳಿಗೆ,ಸಮಾಜ ಸೇವಕರಿಗೆ, ಶ್ರೀ ಸಾಮಾನ್ಯರಿಗೆ ಪ್ರೇರಕ ಶಕ್ತಿಯಾದರು. ಕರ್ನಾಟಕ ಏಕೀಕರಣದ ರೂವಾರಿಯಾದ ಹಾಗೂ ‘ಕನ್ನಡ ಕುಲಪುರೋಹಿತ’ರೆಂದು ಖ್ಯಾತರಾದ ಶ್ರೀ ಆಲೂರು ವೆಂಕಟರಾಯರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಲೇಬೇಕು.ಇವರ ಅವಿರತ ಹೋರಾಟದ ಫಲವಾಗಿ ಕಾವೇರಿಯಿಂದ ಗೋದಾವರಿಯವರೆಗಿನ ನಾಡೆಲ್ಲ ಒಂದಾಯಿತು.೧೯೫೬ ರಲ್ಲಿ ‘ಮೈಸೂರು ರಾಜ್ಯ’ವಾಗಿದ್ದ ನಮ್ಮ ನಾಡು ೧೯೭೩ ನವೆಂಬರ್ ೧ ರಂದು ‘ಕರ್ನಾಟಕ’ ಎಂದು ಮರು ನಾಮಕರಣಗೊಂಡಿತು. ಇದರ ಸವಿನೆನಪಿಗಾಗಿ ಪ್ರತಿವರ್ಷ ನವೆಂಬರ್ ‌೧ ರಂದು ‘ಕರ್ನಾಟಕ ರಾಜ್ಯೋತ್ಸವ’ ಅಥವಾ ‘ಕನ್ನಡ ರಾಜ್ಯೋತ್ಸವ ‘ ಎಂಬ ಕನ್ನಡ ಹಬ್ಬವನ್ನು ನಾವೆಲ್ಲರೂ ಸಡಗರ, ಸಂಭ್ರಮದಿಂದ ಆಚರಿಸುವ ಮೂಲಕ ಭಾರತ ಜನನಿಯ ತನುಜಾತೆಯಾದ ಹಾಗೂ ಅರಿಶಿನ..ಕುಂಕುಮ ಸುಶೋಭಿತೆಯಾದ ಕನ್ನಡ ತಾಯಿಗೆ ಗೌರವವನ್ನು ನೀಡುವುದಕ್ಕಾಗಿ ಕುವೆಂಪುರವರ ನಾಡಗೀತೆಯನ್ನು ಹಾಡಿ, ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ನಾಡಿನಾದ್ಯಂತ ಹಾರಿಸಿ ವಂದನೆ ಸಲ್ಲಿಸುತ್ತೇವೆ.
ಪವಿತ್ರವಾದ ಭರತ ಭೂಮಿಯಲ್ಲಿ ಅದರಲ್ಲೂ ಕನ್ನಡ ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯವೇ ಸರಿ.’ನಾವು ಕನ್ನಡಿಗರು’ ಎಂದು ನಮ್ಮನ್ನು ಗುರುತಿಸಿಕೊಳ್ಳಲು ಹೆಮ್ಮೆಯೆನಿಸುತ್ತದೆ.

ಹೇಗೆ ಬಣ್ಣಿಸಲಿ ಹೇಗೆ ಹೊಗಳಲಿ
ನಮ್ಮಯ ಕರುನಾಡಿನ ಹಿರಿಮೆ
ನಾ ಕನ್ನಡಿಗ ನಾ ಕನ್ನಡತಿ
ಎಂದು ನುಡಿಯಲು ಬಲು ಹೆಮ್ಮೆ.

ಪ್ರಸಿದ್ಧಕವಿಗಳು, ಲೇಖಕರು, ವಚನಕಾರರು,ದಾಸಶ್ರೇಷ್ಠರು ತಮ್ಮ ಸಾಹಿತ್ಯ ಕೃತಿಗಳನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.ಅಲ್ಲದೆ ಎಂಟು ‘ಜ್ಞಾನಪೀಠ ‘ ಹಾಗೂ ಮೂರು ‘ರಾಷ್ಟ್ರಕವಿ’ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಹೆಗ್ಗಳಿಕೆ ನಮ್ಮ ಭಾಷೆಯದು.ಇಂಥ ಕವಿವರ್ಯರಿಗೆ, ವಚನಕಾರರಿಗೆ,ದಾಸಶ್ರೇಷ್ಠರಿಗೆ ಜನ್ಮ ನೀಡಿದ ಕನ್ನಡ ತಾಯಿ ಭುವನೇಶ್ವರಿಗೆ ಕೋಟಿ ಕೋಟಿ ಪ್ರಣಾಮಗಳು.

ಕವಿಪುಂಗವರ ವಚನಕಾರರ
ದಾಸವರೇಣ್ಯರ ನೆಲೆವೀಡು
ವಾಸ್ತುಶಿಲ್ಪ ಸಂಗೀತ ಕಲೆಗಳ
ಆಗರವಾಗಿಹ ಕರುನಾಡು.

ಭಾಷೆಗಳಲ್ಲೇ ಸುಮಧುರ ಭಾಷೆ
ಅದುವೇ ಕನ್ನಡ ಕಸ್ತೂರಿ
ಎಂದುಲಿವೆವು ಅಭಿಮಾನದಿಂದಲಿ
ನುಡಿಸುತ ಬಣ್ಣದ ತುತ್ತೂರಿ.

ನಮ್ಮ ನಾಡಿಗೆ ಪಾಶ್ಚಾತ್ಯ ವಿದ್ವಾಂಸರ ಕೊಡುಗೆಯೂ ಅಪಾರವಾಗಿದೆ.ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಮಾರುಹೋಗಿರುವ ಪಾಶ್ಚಾತ್ಯರು ನಮ್ಮ ನಾಡಿಗೆ ಬಂದು, ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲೇ ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ವಿಷಯ. ರೆವರೆಂಡ್ ಜಾರ್ಜ್ ಫರ್ಡಿನಾಂಡ್ ಕಿಟೆಲ್ ರವರ ‘ಕನ್ನಡ ಇಂಗ್ಲಿಷ್ ನಿಘಂಟು’ ಕನ್ನಡಕ್ಕೆ ಅತ್ಯಮೂಲ್ಯವಾದ ಕೊಡುಗೆಯಾಗಿದೆ.
‘ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುವ ಕುವೆಂಪು ಅವರ ಸಂದೇಶದಂತೆ ವಿದೇಶದಲ್ಲಿರುವ ಬಹಳಷ್ಟು ಕನ್ನಡಿಗರು ಅಲ್ಲಿ ‘ಕನ್ನಡ ಸಂಘ’ ಗಳನ್ನು ಸ್ಥಾಪಿಸಿ ‘ಕನ್ನಡ ರಾಜ್ಯೋತ್ಸವ’ದ ಜೊತೆಗೆ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಲ್ಲದೆ, ತಮ್ಮ ಮಕ್ಕಳಿಗೂ ಕನ್ನಡವನ್ನು ಕಲಿಸಿ ಅವರಲ್ಲಿ ಕನ್ನಡಾಭಿಮಾನವನ್ನು ಬೆಳೆಸಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿ ಮಾತೃಭಾಷೆಗೆ ಗೌರವವನ್ನೂ, ಆದ್ಯತೆಯನ್ನೂ ನೀಡಬೇಕು ಎಂಬ ಸತ್ಯವನ್ನು ಎಲ್ಲರಿಗೂ ತೋರಿಸುತ್ತಿರುವುದು ಸಂತಸದ ವಿಷಯ.
ಈಗ ಮೂರು ವರ್ಷದ ಹಿಂದೆ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು’ ಅಭಿಯಾನ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗದೆ ಜೀವನ ಪೂರ್ತಿ ಮುಂದುವರಿಯಬೇಕು.ಈ ಅಭಿಯಾನ ಕನ್ನಡ ನಾಡಿನ ಪ್ರತಿಯೊಂದು ಮನೆಗೂ ತಲುಪಬೇಕು.ಪ್ರತಿಯೊಬ್ಬರ ಮನಸಿನಲ್ಲೂ ಕನ್ನಡ ಪ್ರೇಮ ಜಾಗೃತವಾಗಬೇಕು.ವರ್ಷಪೂರ್ತಿ ಕನ್ನಡ ಹಬ್ಬವನ್ನು ಆಚರಿಸುವಂತಾಗಬೇಕು.ಆಗ ಮಾತ್ರ ಕನ್ನಡ ನಾಡು, ನುಡಿ, ಸಂಸ್ಕೃತಿ, ನಾಗರಿಕತೆ, ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯ.ಅದಕ್ಕಾಗಿ ನಾವೆಲ್ಲರೂ ಕಟಿಬದ್ಧರಾಗಿ ನಿಲ್ಲೋಣ. ನಮ್ಮ ಮಕ್ಕಳಲ್ಲೂ ಕನ್ನಡ ಪ್ರೇಮವನ್ನು ಬೆಳೆಸೋಣ.
‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ, ಜಲವೆಂದರೆ ಕೇವಲ ನೀರಲ್ಲ ಇದು ಪಾವನ ತೀರ್ಥ’ ಎಂಬುದಾಗಿ ನಮ್ಮ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ರವರು ನಮ್ಮ ನಾಡು..ನುಡಿ, ನೆಲ..ಜಲ, ಭಾಷೆ..ಸಂಸ್ಕೃತಿಯ ಬಗ್ಗೆ ವರ್ಣನೆ ಮಾಡಿರುವುದು ಸಮಂಜಸವೇ ಆಗಿದೆ. ಕನ್ನಡವೆಂಬುದು ಕೇವಲ ಒಂದು ನುಡಿಯಲ್ಲ, ವಿಶಾಲ ಅರ್ಥವನ್ನೊಳಗೊಂಡ ಸುಂದರ, ಸುಮಧುರ ಭಾಷೆ. ನಮ್ಮ ನಾಡಿನಲ್ಲಿ ಹರಿಯುತ್ತಿರುವ ನದಿಯ ನೀರೆಲ್ಲವೂ ಪರಮ ಪವಿತ್ರವಾದ ತೀರ್ಥವಿದ್ದಂತೆ. ಇಂಥ ಪವಿತ್ರವಾದ ನಾಡಿನಲ್ಲಿ ನಾವು ಜನ್ಮತಳೆದಿದ್ದೇವೆ ಎಂದರೆ ಅದು ನಮ್ಮ ಪೂರ್ವ ಜನ್ಮದ ಪುಣ್ಯವಲ್ಲದೆ ಮತ್ತೇನು ? ನಮ್ಮ ನಾಡು,ನುಡಿ ನಮ್ಮ ಹೆಮ್ಮೆಯಲ್ಲವೆ?
‘ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’, ‘ ಕನ್ನಡವೇ ಸತ್ಯ ಕನ್ನಡವೇ ನಿತ್ಯ’ , ‘ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ‘.

ಜಿ.ಎಸ್.ಗಾಯತ್ರಿ.
ಶಿಕ್ಷಕಿ ಬಾಪೂಜಿ ಶಾಲೆ
ಹರಿಹರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ