ನನ್ನ ಕುದುರೆ.
ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಚಂದಪ್ಪನಿಗೆ ಚಿಗರೆಯೆ ಕುದುರೆ
ಮಾದೇವನಿಗೆ ನಂದಿಯ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲ್ಲಿಯೇ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಅರಬರ ದೇಶದಿ ದೂರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗು ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
– ಸಿದ್ದಯ್ಯ ಪುರಾಣಿಕ.
(ಈ ಕವಿತೆ ಬೊಳುವಾರು ಮಹಮದ್ ಕುಂಞ ರವರು ಸಂಪಾಸಿದ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಮಕ್ಕಳ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.)