ನನ್ನೊಳಗಿನ ನಾನು.
– ವಿಮಲ ಆದರ್ಶ ಹೆಬ್ರಿ
ಮನವೆಂಬ ಸದನದ ಕದದ ಕಿಂಡಿಯ ನಡುವೆ ಹುಡುಕುತ್ತಿರುವ ನನ್ನೊಳಗಿನ ನಾನು
ಮನವಂಬ ಮನೆಯನ್ನೆ ನೆಚ್ಚಿ ಅದೆಷ್ಟೋ ಜೀವಸಾಗರದ ನಟ್ಟ ನಡುವೆ ನನ್ನನ್ನೆ ಅರಸಿ ನನ್ನರಸಿಯಾದ ನನ್ನೊಳಗಿನ ನಾನು ಬಾಲ್ಯವೆಂಬ ಸುಂದರ ಕನಸುಗಳ ದಿನಗಳಸುರಸುಂದರ ಜಗದೊಳಗೆ ಅಡಿಯಿರಿಸಿ ನನ್ನೊಳಗೆ ಬೆಳೆದ ನನ್ನೊಳಗಿನ ನಾನು
ಏನಾದರೂ ಸಾಧಿಸಬಲ್ಲೆ ಎಂಬ ಕಿಚ್ಚಿನ ಎಲ್ಲವೂ ಸಾಧ್ಯ ಎಂಬ ಹುಚ್ಚಿನ ಅಪರಿಮಿತ ಕನಸುಗಳ ರಾಜಕುಮಾರಿ ನನ್ನೊಳಗಿನ ನಾನು ಬೆಳೆ ಬೆಳೆಯುತ್ತಾ ಓರಗೆಯವ ರೊಂದಿಗೆ ಹೊರ ಜಗತ್ತಿಗೆ ತೆರೆದುಕೊಂಡ ನನ್ನವಳು ನನ್ನೊಳಗಿನ ನಾನು
ಅಡುಗೆ ಮನೆಯ ಸುಂದರ ಜಗದಲಿ ತಯಾರಿಸಿದ ರುಚಿಯಾದ ಪಾಕದಂತೆ ಜೇನಿನ ಊಟವಾಗುವ ಬಿರಿದ ಹೂವೊಳಗಿನ ಮಕರಂದದಂತೆ ಒರಟು ಮೈಯೊಳ ಗೊಳಗಿನ, ಎಲ್ಲಾ ತಿಂಡಿಗೂ ರುಚಿ ಕೊಡುವ ಕಬ್ಬಿನ ಜಲ್ಲೆಯಂತೆ ಎಸೆದರೂ ಒಗೆದರೂ ಮತ್ತೆ ಮತ್ತೆ ಹುಟ್ಟಿ ಬರುವ ಕಳೆಗಿಡದಂತೆ
ತುಳಿದಷ್ಟು ಬೆಳೆಯುವ ಕಾಲುಹಾದಿ ಹುಲ್ಲಿನ ಹಂದರದಂತೆ
ಜಗ್ಗಿದಷ್ಟು ಬಗ್ಗಿದಷ್ಟು ತಲೆ ಆಡಿಸುವ ಕೋಲೆ ಬಸವನಂತೆ
ಎಲ್ಲವನು ಸಾಧಿಸುವ ಜಗಜಟ್ಟಿಯಂತೆ
ಕಷ್ಟಗಳೆನ್ನೆಲ್ಲಾ ಇಷ್ಟವೆಂದು ಬಗೆಯುವ ದುಡಿಯುವ ಎತ್ತಿನಂತೆ
ಹುಡುಕಾಟದಲ್ಲಿ ಸೋತೆ ಕಾಣದೆ ನನ್ನೊಳಗಿನ ನಾನು
ಅವಳು ಎಲ್ಲಿಹಳು ಮನದ ಯಾವ ಮೂಲೆಯಲಿ
ಅಡಗಿಹಳು ಅನವರತ ನನ್ನ ಕಾಡುವ ಹಾಲುಗಲ್ಲದ ಮುಗುದೆ
ಕನಸೆಂಬ ಹೂಗಿಡಕೆ ತಂಪು ನೀರೆದವಳು
ಹುಡುಕುತ್ತಿರುವೆ ನನ್ನನ್ನೆ ದಿಟ್ಟಿಸುವ ಮುಗ್ದ ಕಂಗಳಲಿ
ಅಂದು ನನ್ನರಸಿ ಬಂದವಳು, ನನ್ನಲ್ಲೆ ನೆಲೆಯಾದವಳು
ಸದಾ ಓಡಾಡುವ ಚೇತನದ ಸೆಲೆಯಾದವಳು
ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾದವಳು
ಸಾಧಿಸುವ ಛಲವ ನನ್ನಲ್ಲಿ ಬಿತ್ತಿದವಳು
ಮರೆಯಾಗಿಹಳು ಬಹುಮಹಡಿ ಕಟ್ಟಡದ ಕಾಣದ ಕಿಂಡಿಯ ಒಳಗೆ
ಓಡುವ ಕಾಲನ ಚಕ್ರದ ಪರಿಧಿಯ ಒಳಗೆ
ಚಿಂತೆಯ ಲವಲೇಷದ ಸುಳಿವಿಗೆ ಸಿಗದವಳು
ಸದಾ ನಗುವ ಹೂವಿನಂತ ಮನದವಳು
ಎಲ್ಲರೊಳು ಬೆರೆತು ಕಲಿತು ನಲಿವ ಬಾಲೆ
ಅವಳಿಗಿಲ್ಲ ಯೌವ್ವನ ಮುಪ್ಪು ಕಾಲನ ಲೀಲೆ
ಕುತೂಹಲದ ನೋಟ ತೋರುವ ಪರಿಗೆ
ನಾನವಳ ಮೊದಲ ಅಭಿಮಾನಿ ಎಂಬ ರೀತಿಗೆ
ಸದಾ ಕಾಡುವ ನನ್ನೊಳಗಿನ ನಾನು
ಜಾಗೃತಗೊಳಿಸುವ ಅವಳೇ ಆಗಿದ್ದರೆ ನಾನು?
– ವಿಮಲ ಆದರ್ಶ. ಹೆಬ್ರಿ