Oplus_131072

ನೇಸರ ಸೊಬಗು

ಕತ್ತಲೋಡಿತು ಬೆಳಕು ಮೂಡಿತು
ದಿನಪ ಮೂಡಿದ ಸೂಚನೆ
ಮೃಗ ಖಗ ಸಕಲ ಕುಲಕೆ
ಹೊಟ್ಟೆ ತುಂಬುವ ಯೋಚನೆ

ರಂಗುರಂಗಿನ ಕಿರಣ ಹಾಸಿ
ಬೆಳಕ ನಗೆಯನು ಚೆಲ್ಲಿದ
ಜಗದ ಒಳಿತಿಗೆ ಬಂದನೆಂಬುದ
ಗ್ರಹಿಸಿ ಎದ್ದನು ಬಲ್ಲಿದ

ಸಸ್ಯಕಾಶಿಯ ಅಡುಗೆ ಕೋಣೆಗೆ
ಶಕ್ತಿ ತುಂಬಿದ ದಿನಕರ
ಸುಮವ ಸೋಕಿ ಸಿಹಿಯ ಹೀರಿ
ಗೆದ್ದು ಬೀಗಿದ ಮಧುಕರ

ಗೂಡ ತೊರೆದು ಪಕ್ಷಿ ಸಂಕುಲ
ಕಾಳ ಹೆಕ್ಕುತ ನಡೆಯಲು
ಕಾದು ಕುಳಿತ ಮರಿಗಳೆಲ್ಲಾ
ಬಾಯ ತೆರೆದು ಮುಕ್ಕಲು

ಆವಿ ಸೆಳೆದು ಮಳೆಯ ತರಲು
ಬೇಕೇ ಬೇಕು ನೇಸರ
ಭಾರಿ ಬಿಸಿಲು ಎನುವುದೊಂದೇ
ಎಲ್ಲರೊಳಗೂ ಬೇಸರ

ತಾನೂ ಬೆಳಗಿ ಸೋಮನನ್ನೂ
ಇರುಳ ಬೆಳಕಾಗಿ ಬದಲಿಸಿ
ಮಕ್ಕಳೆಲ್ಲರ ಮಾಮ ಅವನು
ಎನುವ ಭಾವವ ಮೂಡಿಸಿ

ಜಗದ ಚಲನೆಗೆ ಬೇಕೇ ಬೇಕು
ಸೂರ್ಯನೆಂಬೋ ಗೆಳೆಯನು
ಇಲ್ಲವೆಂಬುದ ನೆನೆದರೊಮ್ಮೆ
ತಾಳಲಾಗದು ನೋವನು

ಸುರೇಶ ಕಲಾಪ್ರಿಯ ಗರಗದಹಳ್ಳಿ .
ಸಹಶಿಕ್ಷಕರು
ಸ. ಕಿ. ಪ್ರಾ. ಶಾಲೆ ಸವಳ ಕ್ಯಾಂಪ್ ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ