Oplus_131072

ನಿಜವಾದ ಭಕ್ತನ ಬೇಡಿಕೆ. (ಮಕ್ಕಳ ಕತೆ)

 

ರಾಜನೊಬ್ಬ ಬಹಳ ವರ್ಷಗಳ ಯುದ್ಧದ ನಂತರ, ತನ್ನ ರಾಜ್ಯಕ್ಕೆ ಹಿಂದಿರುಗಿ ಬರುತ್ತಿದ್ದ. ಅವನಿಗೆ ಬಹಳಷ್ಟು ಪತ್ನಿಯರಿದ್ದರು. ಆತ ತನ್ನ ಪತ್ನಿಯರೆಲ್ಲರಿಗೂ , ತಾನು ಹಿಂದಕ್ಕೆ ಬರುವಾಗ, ಯಾರಿಗೆ ಏನು ಬೇಕು ಎಂಬುದನ್ನು ತಿಳಿಸಿ, ನಾನು ಬರುವಾಗ ತರುತ್ತೇನೆ ಎಂದು ಸುದ್ದಿ ಕಳಿಸಿದ್ದ. ಒಬ್ಬಳು ಮುತ್ತಿನ ಹಾರ ಎಂದೂ ಇನ್ನೊಬ್ಬಳು ರೇಷ್ಮೆ ಸೀರೆ ಎಂದೂ, ಇನ್ನೊಬ್ಬಳು ಕಸ್ತೂರಿ ಮೃಗದ ಗಂಧವೆಂದು, ವಜ್ರ, ವೈಡೂರ್ಯ, ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ, ತಮಗೇನು ಬೇಕೋ ಅದನ್ನು ತರಲು ಹೇಳಿದರು.

ಅವನ ಅಸಂಖ್ಯಾತ ರಾಣಿಯರಲ್ಲಿ ಒಬ್ಬಳು ಮಾತ್ರ, ನೀವು ಹುಷಾರಾಗಿ ಆರೋಗ್ಯದಿಂದ ಹಿಂದಿರುಗಿ ಬನ್ನಿ ,ನನಗೆ ಅದೇ ಬಹಳಷ್ಟಾಯಿತು , ಎಂದು ಸಂದೇಶ ಕಳಿಸಿದ್ದಳು.
ಈ ರಾಜ, ಈ ರಾಣಿಯ ಬಗ್ಗೆ ಎಂದೂ ಕೂಡ ಗಮನವನ್ನೇ ಹರಿಸುತ್ತಿರಲಿಲ್ಲ. ಅವನ ಎಷ್ಟೋ ರಾಣಿಯರಲ್ಲಿ ಇವಳೂ ಒಬ್ಬಳು ಎಂಬಂತೆ ಲೆಕ್ಕಕ್ಕೆ ಮಾತ್ರ ಇದ್ದಳು. ಎಂದೂ ಕೂಡಾ ರಾಜ, ಇವಳೂ ಒಬ್ಬಳು ತನ್ನ ರಾಣಿಯೇ,ಎಂದು ಇವಳ ಬಗ್ಗೆ ತನ್ನ ಗಮನವನ್ನು ಎಂದೂ ಕೂಡ ಕೊಟ್ಟಿರಲಿಲ್ಲ.

ಆದರೆ ರಾಜ, ಅರಮನೆ ತಲುಪಿದ ನಂತರ ಆಕೆಯನ್ನು ಪಟ್ಟದ ರಾಣಿಯನ್ನಾಗಿ ಮಾಡಿಬಿಟ್ಟ. ಉಳಿದ ರಾಣಿಯರಿಗೆ ಇದರಿಂದ ಆಶ್ಚರ್ಯವಾಯಿತು, ಹೊಟ್ಟೆಕಿಚ್ಚಾಯಿತು.ಇವನಿಗೆ ಇದ್ದಕ್ಕಿದ್ದಂತೆ ಇದೇನಾಯಿತು ? ಯಾವ ಕಾರಣಕ್ಕಾಗಿ ಈಕೆಯನ್ನು ಪಟ್ಟದ ರಾಣಿಯನ್ನಾಗಿ ಮಾಡಿದ? ಎಂದು ರಾಜನನ್ನು ಕೇಳಿದರು.

ಆಗ ರಾಜ, ಆಕೆ ಒಬ್ಬಳೇ, ನೀವು ನನಗೆ ಏನೂ ತರುವುದೂ ಬೇಡಾ,ನೀವು ಆರೋಗ್ಯದಿಂದ, ಸುಖವಾಗಿ ಮರಳಿ ಬನ್ನಿ ಅಷ್ಟೇ ಸಾಕು, ಬೇರೇನೂ ಬೇಕಾಗಿಲ್ಲ ಎಲ್ಲವೂ ಬಹಳಷ್ಟೇ ಇದೆ ಎಂದು ಹೇಳಿದ್ದು, ಅವಳಲ್ಲಿ ಯಾವ ಬೇಡಿಕೆಯೂ ಇರಲಿಲ್ಲ. ಈಕೆಗೆ ಬೇಕಾಗಿದ್ದುದು ,ನನ್ನ ಆರೋಗ್ಯ, ನೆಮ್ಮದಿ , ಸಂತೋಷ ಮಾತ್ರ, ನೀವೆಲ್ಲರೂ, ಸಾವಿರಾರು ವಸ್ತುಗಳನ್ನು ಕೇಳಿದಿರಿ, ನನಗಿಂತಲೂ ನಿಮಗೆಲ್ಲಾ ವಸ್ತುಗಳೇ ಮುಖ್ಯ ಎನಿಸಿತು,ಹಾಗಾಗಿ ನಿಮಗೆಲ್ಲಾ ನೀವು ಕೇಳಿದ್ದನ್ನು ತಂದಿದ್ದೇನೆ, ಇವಳು ಎನನ್ನೂ ಕೇಳಲಿಲ್ಲ, ಅವಳಿಗಾಗಿ ನಾನೇ ಬಂದಿದ್ದೇನೆ, ಎಂದ ರಾಜ.

ಭಗವಂತನಲ್ಲಿ ಕೂಡಾ ನಮ್ಮ ಪ್ರಾರ್ಥನೆ ಹೀಗೇ ಇರಬೇಕು. ಅವನಲ್ಲಿ ಕಂಡ ,ಕಂಡ ವಸ್ತು ವಿಷಯಗಳನ್ನು ಬೇಡುವುದಲ್ಲ. ಅವನು ಕೊಟ್ಟಿದ್ದಕ್ಕೆ ತೃಪ್ತಿಯಿಂದಿರುವುದು. ಅವನು ನೀವು ಬೇಡಿದ್ದನೊಂದು ಕೊಟ್ಟನೆಂದರೆ, ಅವನಲ್ಲಿ ನಿಮ್ಮ ಮುಂದಿನ ಬೇಡಿಕೆ ,ಇನ್ನೊಂದು ವಸ್ತು ವಿಷಯದ್ದಾಗಿರುತ್ತದೆ. ಅಲ್ಲಿಗೇ ಅದು ಸಮಾಪ್ತವಾಗುವುದಿಲ್ಲ. ಅದು ಹೀಗೆ ಮುಂದುವರೆಯುತ್ತಲೇ , ಹೋಗುತ್ತದೆ.

ಯಾರು ಏನನ್ನೂ ಬೇಡಲಿಲ್ಲವೋ, ಅವರ ಬಾಗಿಲ ಬಳಿ ಪರಮಾತ್ಮ ತಾನೇ ಆಗಮಿಸಿಬಿಡುತ್ತಾನೆ.
ಈಗಾಗಲೇ ನೀನು ಬಹಳಷ್ಟನ್ನು ನೀಡಿರುವೆ ಭಗವಂತ, ಅದಕ್ಕಾಗಿ ನನ್ನ ಧನ್ಯವಾದವನ್ನು ಮಾತ್ರ ಸ್ವೀಕರಿಸು ಎಂಬಂತ, ಮನೋಭಾವದಿಂದ ತುಂಬಿರುವವರಿಗೆ ಪರಮಾತ್ಮನೇ ಉಪಸ್ಥಿತನಾಗಿಬಿಡುತ್ತಾನೆ.

ನಿಜವಾದ ಪರಮ ಭಕ್ತನ ಪ್ರಾರ್ಥನೆ, ಧನ್ಯವಾದದಿಂದ, ಕೃತಜ್ಞತೆಯಿಂದ ತುಂಬಿರುತ್ತದೆ. ಆತನ ಪ್ರಾರ್ಥನೆ ಅಹೋಭಾವದ್ದಾಗಿರುತ್ತದೆ. ಆತನ ಪ್ರಾರ್ಥನೆ ಕೃತಜ್ಞತೆಯ ಉತ್ತಂಗತೆ ಆಗಿರುತ್ತದೆ. ನಿಜವಾದ ಭಕ್ತ , ಭಗವಂತ,ನಿನ್ನ ಕರುಣೆ ಅಪಾರವಾದದು ಎಂದು ಧನ್ಯತೆಯನ್ನು ಅರ್ಪಿಸಲು ದೇವಾಲಯಕ್ಕೆ ಹೋಗುತ್ತಾನೆ. ನಿನ್ನಂತ ಮಹಾದಾನಿ , ಕರುಣಾಮಯಿ,ಎಲ್ಲೂ ಇಲ್ಲ ನಾನೆಲ್ಲೂ ನೋಡಿಲ್ಲ ಎಂಬ ಭಾವ ಅವನಲ್ಲಿ ಇರುತ್ತದೆ.
ಇದೇ ನಿಜವಾದ ಭಕ್ತನ ಬೇಡಿಕೆ.

ಸಂಗ್ರಹ: ಬನ್ನಪ್ಪ ಅಂಗಡಿ.ಯಾದಗಿರಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ