ನೀನ ಯಾರಿಗೇನಾದಿಯೋ ..!
ಎಂತಹಾ ಅದ್ಭುತ ! ಈ ಜಗತ್ತಿನ ನಿಯಮ. ಇಲ್ಲಿ ನೀರು ಗಾಳಿ ಬೆಂಕಿ ಆಕಾಶ ಭೂಮಿ ಎಂಬ ಪಂಚಭೂತಗಳು ಸೃಷ್ಟಿಯಾಗಿದ್ದು ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಅಸಂಖ್ಯಾತ ಜೀವಿಗಳ ಬದುಕಿಗೆ ಆಧಾರವಾಗಿವೆ . ಈ ಭೂಮಿಯ ಮೇಲೆ ಕಲ್ಲು ಬಂಡೆ ಮಣ್ಣುಗಳೆಂಬ ಜಡ ವಸ್ತುಗಳ ಸಂಗಮವು ಸೃಷ್ಟಿಯಾಗಿ. ಈ ಜಗತ್ತಿನ ಭೂಮಂಡಲವೆಂಬ ಈ ಸುಂದರ ಹೂದೋಟದಲ್ಲಿ ಅರಳಿವೆ.
ಇಲ್ಲಿ ಅನೇಕ ಸಸ್ಯ , ಪ್ರಾಣಿ , ಪಶು ಪಕ್ಷಿ , ಕೀಟ ಜೀವರಾಶಿಗಳು . ಈ ಭೂಮಿಯಲ್ಲಿ ಮಾನವರಿಂದ ಹಿಡಿದು ಪ್ರತಿ ಸೂಕ್ಷ್ಮ ಜೀವಿಯೂ ಕೂಡ ತಮ್ಮ ತಮ್ಮ ಬದುಕನ್ನು ಬಹಳ ಸುಂದರವಾಗಿ , ಅಚ್ಚುಕಟ್ಟಾಗಿ ಕಟ್ಟಿಕೊಂಡು ಜೀವನ ನಡೆಸುವ ಪರಿಯನ್ನು ನೋಡಿದರೆ ಅದೊಂದು ಭೂಮಿಯಲ್ಲಿನ ವಿಸ್ಮಯವೇ ಸರಿ. ಇಂತಹ ವಿಸ್ಮಯ ಲೋಕದಲ್ಲಿ ಬದುಕು ನಡೆಸುತ್ತಿರುವ ಜೀವಿಗಳ ಪೈಕಿ ಈ ಮನುಷ್ಯ ಎಂಬ ಜೀವಿಯು ಮಾತ್ರ ತುಂಬಾ ಜಾಣ , ಬುದ್ಧಿವಂತ ಹಾಗೂ ವಿಶಿಷ್ಟ ಜೀವಿಯ ಪರಿಧಿಯಲ್ಲಿ ಬರುವ ಪ್ರಾಣಿ ಅಂದ್ರೆ ತಪ್ಪಾಗಲಾರದು.
ಇವನ ವಾಕ್ ಚಾತುರ್ಯ , ವಿಚಾರ ಮಾಡುವ ವಿಧಾನ ಮತ್ತು ಅನ್ವೇಷಣೆಯಂತಹ ವಿಶಿಷ್ಟ ಕೌಶಲ್ಯಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ಇತರೆ ಎಲ್ಲಾ ಜೀವಿಗಳಿಗಿಂತ ಭಿನ್ನವಾಗಿ ಕಾಣುತ್ತಾನೆ. ಹಾಗೆ ತನ್ನ ಬುದ್ಧಿವಂತಿಕೆ ಬಳಸಿ ಇತರೆ ಎಲ್ಲಾ ಜೀವಿಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಸದಾ ಹವಣಿಸುತ್ತಿರುವ ಏಕೈಕ ಜೀವಿ ಅಂದ್ರೆ ಅದು ಮನುಷ್ಯ ಪ್ರಾಣಿ ಮಾತ್ರ.
ಮಾನವ ಜನ್ಮವು ದೊಡ್ಡದು ಎಂಬ ಮಾತು ಬಹುಶಃ ಇವನ ಮಾತನಾಡುವ ಕಲೆ , ವಿಚಾರ ಶಕ್ತಿ ಹಾಗೂ ಬದುಕಿನ ರೀತಿ ನೀತಿಗಳ ನೋಡಿಯೇ ಹೇಳಿರಬೇಕು. ಆದರೆ ವಾಸ್ತವದಲ್ಲಿ ಅವನು ಎಷ್ಟೇ ನಾಗರಿಕತೆಯಲ್ಲಿ ಮಿಂಚಿದ್ದರೂ , ತಾನು ಜೀವನ ನಡೆಸುವಲ್ಲಿ ಸ್ವಾರ್ಥ ತುಂಬಿಕೊಂಡು ಇತರೆ ಎಲ್ಲಾ ಜೀವಿಗಳಿಗಿಂತ ಹಿಂದೆ ಇರುವುದಂತೂ ಸತ್ಯ. ಹಾಗಾಗಿ ಮುಂದುವರೆದು ಪುರಂದರ ದಾಸರು ಹೀಗೆ ಹೇಳುತ್ತಾರೆ
‘ಮಾನವ. ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎನ್ನುವ ಮಾತನ್ನೂ ಕೂಡ ನಾವು ಗಮನಿಸಬೇಕಾಗಿದೆ . ಕಾರಣ ಇಷ್ಟೇ ಮಾನವನನ್ನು ಹೊರತು ಪಡಿಸಿ ಇತರೆ ಯಾವುದೇ ಜೀವಿಯನ್ನು ಪರಿಗಣನೆಗೆ ತೆಗೆದು ಕೊಂಡು ನೋಡುವುದಾದರೆ , ಅವು ಯಾರಿಗೂ ತೊಂದರೆಯಾಗದಂತೆ , ಯಾರಿಗೂ ಭಾರವಾಗದಂತೆ ಮನುಷ್ಯನ ಸ್ನೇಹಿತರಾಗಿ , ಇವನ ಕೆಲಸದಾಳಾಗಿ ಇನ್ನು ಕೆಲವೊಂದು ಪರೋಪಕಾರಿಯಾಗಿ ಈ ಭೂಮಿಯಲ್ಲಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿರುವುದು ಕಂಡು ಬರುತ್ತದೆ. ಅವುಗಳಲ್ಲಿ ಬಹುತೇಕ ಜೀವಿಗಳು ಮಾನವನ ಜೀವನಕ್ಕೆ ಬದುಕಿಗೆ ಸಹಕಾರಿಯಾಗಿ ಅವನ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತವೆ. ಈ ಸನ್ನಿವೇಶದಲ್ಲಿ ನೋಡುತ್ತಾ ಹೋದರೆ ಅವುಗಳಲ್ಲಿ ಸ್ವಾರ್ಥ , ಮೋಸ , ವಂಚನೆ , ದ್ರೋಹ ಇಂತಹ ಯಾವುದೇ ಗುಣಗಳನ್ನು ನಾವು ಕಾಣಲಾರೆವು.
ಆರೋಗ್ಯದ ದೃಷ್ಟಿಯಿಂದ ಹಿಡಿದು ಅಹಾರದ ವಿಷಯದಲ್ಲೂ ಮಾನವನಿಗೆ ಬೇರೆ ಜೀವಿಗಳೇ ಆಧಾರ. ಮಾನವ ತನ್ನ ಬದುಕಿಗಾಗಿ ಇತರ ಜೀವಿಗಳನ್ನು ಹಿಡಿದು ಪಳಗಿಸಿ ಅದರಿಂದ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿರುವನು. ಅವನು ಯಾವುದೋ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾನೆ ಅಂದ್ರೆ , ಅವುಗಳಿಂದ ಏನಾದರೂ ಉಪಯೋಗ ಇದ್ದರೆ ಮಾತ್ರ. ಇಲ್ಲ ಅಂದ್ರೆ ಅವುಗಳ ತಂಟೆಗೆ ಹೋಗುವುದಿಲ್ಲ.
ಮಾನವನ ಆಸೆಗೆ ಮಿತಿಯಿಲ್ಲ ಎಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಕಂಡಿದ್ದು ಕಾಣದ್ದು ಎಲ್ಲವೂ ತನಗಿರಬೇಕು ಎನ್ನುವ ನೀಚ ಬುದ್ಧಿ ಇವನದ್ದು. ಈ ದೃಷ್ಟಿಯಿಂದಲೇ ತನ್ನ ಬದುಕು ಏನೆಂಬುದನ್ನು ಮರೆತು ಈ ಭೂಮಿ ತನಗಷ್ಟೇ ಸೀಮಿತ ಎನ್ನುವ ಭ್ರಮೆಯಲ್ಲಿ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಮನಬಂದಂತೆ ಬಳಸಿಕೊಂಡು ಇಡೀ ಪರಿಸರವನ್ನೇ ಹಾಳುಗೆಡವಿ ತಾನು ಸಾಯುವುದಲ್ಲದೇ , ಭೂಮಿಯ ಇತರ ಎಲ್ಲಾ ಜೀವಿಗಳ ಮಾರಣಹೋಮಕ್ಕೆ ಕಾರಣನಾದ ಈ ಮಾನವ .
ದಯೆ , ಕರುಣೆ , ಪ್ರೀತಿ , ವಾತ್ಸಲ್ಯ , ಮಮತೆ ಮುಂತಾದ ಗುಣಗಳು ಮಾನವನಲ್ಲಿ ಇಂದು ಸುತ್ತು ಹೋಗಿ ಎಲ್ಲೆಡೆ ಬರೀ ಸ್ವಾರ್ಥ , ದ್ವೇಷ , ಮತ್ಸರ ತುಂಬಿ ತುಳುಕುತ್ತಿದೆ. ನಾಗರೀಕತೆಯ ಹೆಸರಿನಲ್ಲಿ ಹಸಿರನ್ನು ಅಂದರೆ ಕಾಡನ್ನು ನಾಶಮಾಡಿ, ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡಿ ತನಗೆ ಅನುಕೂಲ ಮಾಡಿಕೊಂಡು ಇತರೆ ಜೀವಿಗಳ ಬದುಕಿಗೆ ಅತಂತ್ರತೆ ತಂದಿದ್ದಾನೆ. ಬುದ್ದಿವಂತ ಮಾನವ ತಾನು ತನ್ನದು ತಾನೇ ಬದುಕಬೇಕೆಂಬ ದುರಾಸೆಯಿಂದ ಎಲ್ಲವನ್ನೂ ಗುತ್ತಿಗೆ ಹಿಡಿದುಕೊಂಡು ಎಲ್ಲವೂ ತನಗೆ ಇರಲೆಂದು , ತನ್ನ ಜೀವನಕ್ಕೆ ಅಲ್ಲದೇ ಮುಂದಿನ ತಲೆ ತಲೆಮಾರಿಗೆ ಆಗುವಷ್ಟು ಮುಂಗಡ ಬುತ್ತಿ ಕಟ್ಟಿಟ್ಟು ಅದನ್ನು ತಾನೂ ತಿನ್ನದೇ ಸಾಯುವನು. ಇಂತಹ ಸ್ಥಿತಿಯಲ್ಲಿ ನಾವು ಇತರ ಜೀವಿಗಳನ್ನು ನೋಡುವ ಹಾಗಿದ್ದರೆ ನೀತಿ, ನಿಯತ್ತು ಪ್ರೀತಿ , ಮಮತೆ ಯಲ್ಲಿ ಮಾನವನಿಗಿಂತ ಪ್ರಾಣಿಗಳೇ ಗುಣದಲ್ಲಿ ಅದೆಷ್ಟೋ ಪಾಲು ಮೇಲು ಎಂಬ ಮಾತು ಸುಳ್ಳಲ್ಲ. ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿಗೆ ಸಹಾಯಕ ಜೀವನ ನಡೆಸಿದ ರೀತಿ ನೋಡಿಯೇ ಗೊತ್ತಾಗುತ್ತೆ ನೀ ಯಾರಿಗಾದೆಯೋ ಎಲೆ ಮಾನವ ಎನ್ನುವ ಮಾತಿನ ಅರ್ಥ.
ಆದ್ದರಿಂದ ಮಾನವರು ಇದನ್ನು ಅರಿಯುವ ಪ್ರಯತ್ನ ಮಾಡಬೇಕು. ಪ್ರಾಣಿಗಳ ಜೀವನ ಶೈಲಿ ನೋಡಿಯಾದರೂ ಕಲಿಯಬೇಕು. ಅವುಗಳಿಗಿಂತ ನಾವು ಕೀಳಾಗಿ ಬಾಳ ಬಾರದು ಎನ್ನುವ ಛಲ ಮೂಡಬೇಕು ಆಗ ಮಾನವ ಹುಟ್ಟಿದ್ದಕ್ಕೂ ಸಾರ್ಥಕ ಆಗುತ್ತದೆ. ಆ ನಿಟ್ಟಿನಲ್ಲಿ ಜೀವನ ರೂಪಿಸಿಕೊಂಡು ನೀನಾರಿಗಾದೆಯೋ ಎಲೆ ಮಾನವ ಎನ್ನುವ ಮಾತು ಅಳಿಸಬೇಕಿದೆ. ಎಲ್ಲರೂ ಮಾನವೀಯತೆ ಮರೆಯದೆ ಬಾಳಬೇಕಿದೆ.
ಡಾ. ಮಹೇಂದ್ರ ಕುರ್ಡಿ