Oplus_131072

ನಿತೀಶನ ಉದಯ(ಮಿನಿ ಕಾದಂಬರಿ)

 

ಅನೀತಾ ಡಿ.ದುಬೈ ಯಾದಗಿರಿ.

 

ಮೂರನೇ ದಿನವಾಯಿತು ಮೇಘರಾಯ ನಿಲ್ಲದೇ, ಉಸಿರಾಡಲು ಸಮಯ ತೆಗೆದುಕೊಳ್ಳದೆ, ಒಂದೇ ತರವಾಯ ಬಿಡದೆ ಸುರಿಯುತ್ತಿದ್ದಾನೆ. ತೆಂಗು ಮರಗಳು ಬಾಗಿವೆ, ಹಕ್ಕಿಗಳ ಕಲರವ ನಿಂತಿದೆ, ಪ್ರಾಣಿಗಳು ಹೆದರಿವೆ, ಹೂ-ಕುಸುಮ ಮೊಗ್ಗಾಗಿ ಅರಳದೆ ಕುಸಿಯುತ್ತಿವೆ. ಮಕ್ಕಳ ಕಿವಿಗೆ ಕಟ್ಟಿದ ಬಟ್ಟೆ ಬಿಚ್ಚಿಯೇ ಇಲ್ಲ. ವೃದ್ಧರು ಮನೆಯಿಂದಾಚೆ ಬಂದಿಲ್ಲ, ಭತ್ತದ ಗದ್ದೆಯ ತುಂಬ ನೀರು ನಿಂತಿವೆ. ಹಳ್ಳ-ಕೊಳಗಳು ತುಂಬಿ ಹರಿಯುತ್ತಿವೆ. ಮಳೆ ಬಂದ ನೆಲ ಒಣಗಲು ಸೂರ್ಯನ ಬೆಂಕಿಯAತಹ ಕಿರಣಗಳು ಬೇಕಾಗಿವೆ.
ನೆಗಡಿಯಿಂದ ತಾಯಿಯ ಧ್ವನಿ ಕೆಟ್ಟಿದೆ. ತಂದೆಗೆ ಬೆನ್ನು ನೋವು. ಪುಟ್ಟ ತಂಗಿಯೊಬ್ಬಳು. ಮನೆ ಎರಡು ದಿನದಿಂದಾಯ್ತು ಸೋರುತ ಇದೆ. ತಾಯಿ ಮನೆ ಹತ್ತಿ ಅಂಚುಗಳನ್ನು ಸರಿ ಮಾಡಿ ಬರುವುದರೊಳಗೆ ಪುನಃ ಮೊದಲ ಸ್ಥಿತಿಗೆ ಬಂದು ಬಿಡೋದು. ತಂದೆಗೆ ಮನೆ ಮಾಳಿಗೆಯನ್ನು ಹತ್ತುವುದೇ ಕಷ್ಟ. ಮಳೆಯಲ್ಲಿ ನೆನೆದು ತಾಯಿಗೆ ಸುಸ್ತು. ಇದನ್ನು ಕಂಡAತಹ ನಿತೀಶ ಹತ್ತಾರು ಬಾರಿ ಮಾಳಿಗೆ ರಿಪೇರಿ ಮಾಡಿದ. ಪುಟ್ಟ ಮನೆ ಅದು ನಿತೀಶನ ಮನೆ: ಊರಲ್ಲಿ ನಿತೀಶನ ಮನೆಗಿಂತ ಸ್ವಲ್ಪಗಟ್ಟಿ ಮನೆಗಳಿವೆ. ನಿತೀಶನು ಮನೆ ಮಾಳಿಗೆ ಹತ್ತಿ ನಿಂತುಬಿಟ್ಟ. ಭಾರಿ ಮಳೆ ಅಲ್ಲಲ್ಲಿ ಒಬ್ಬೊಬ್ಬರು ಮಾಳಿಗೆ ರಿಪೇರಿ ಮಾಡುತ್ತಿದ್ದರು. ಇನ್ನೊಂದು ಕಡೆ ತಿರುಗಿ ನೋಡಿದ ತನ್ನ ವಯಸ್ಸಿನ ಸಮಕಾಲೀನ ಗೌಡರ ಮಗನು ತಮ್ಮ ಸಿಮೆಂಟ್ ಮಾಳಿಗೆ ಮೇಲೆ ಕೊಡೆ ಹಿಡಿದುಕೊಂಡು ಮಳೆಯಲ್ಲಿ ಕುಣಿಯುತ್ತಿದ್ದ. ‘ಇನ್ನೂ ಮಳೆ ಬರಲಿ ಬಡವರ ಮನೆ ಹಳ್ಳಕ್ಕೆ ಹೋಗಲಿ’ ಎಂದು ಕೂಗುತ್ತಿದ್ದ, ನಗುತ್ತಿದ್ದ. ನಿತೀಶ ಗೋಣಿಚೀಲ ತಲೆಯ ಮೇಲೆ ಹಾಕಿಕೊಂಡು “ದೇವರೆ ಮಳೆರಾಯ! ಸಾಕಿಷ್ಟು. ಮಳೆ ಸಾಕು! ಯಾರ ಮೇಲೆ ಕೋಪಕ್ಕಾಗಿ ಇಷ್ಟೊಂದು ಮಳೆ” ಎಂದು ಕೈ ಮುಗಿದು ದೇವರ ಹತ್ತಿರ ಪ್ರಾರ್ಥಿಸುತ್ತಿದ್ದ. ಶ್ರೀಮಂತ ಗೌಡನ ಮಗ ‘ಮಳೆ ಇನ್ನೂ ಬರಲಿ’ ಎಂದು ಬಡವರ ಮಗ ನಿತೀಶನು ‘ಮಳೆ ಸಾಕು’ ಎಂದು. ಕೊನೆಗೆ ಮಳೆಯು ಸಂಪೂರ್ಣವಾಗಿ ನಿಂತಿತು. ಸೂರ್ಯನ ಕಿರಣಗಳು ಮೆಲ್ಲಗೆ ಮೈ ಮುರಿಯುತ್ತಾ ಕರಿ ಮೋಡದಿಂದ ಹೊರ ಬಂದವು. ಹಳ್ಳಿಯೊಳಗೆ ಜನರು ಮುಖ ಸಪ್ಪಗೆ ಮಾಡಿಕೊಂಡಿದ್ದರು. ಹೊಟ್ಟೆಗೆ ತಿನ್ನಲು ಬೇಕಾದ ಹೊಲ, ಭತ್ತದ ಗದ್ದೆ ಮಳೆಗೆ ಹಾಳಾಗಿ ಹೋಗಿದ್ದವು. ಪರಿಹಾರ ಧನ ಪಡೆಯಲು ಊರ ಗೌಡರ ಮುಖಾಂತರ ಸರ್ಕಾರಕ್ಕೆ ಪತ್ರವೊಂದನ್ನು ಬರೆಸಿದರು. ಕೆಲ ದಿನಗಳ ನಂತರ ಬಂದಂತಹ ಪರಿಹಾರ ಧನದಲ್ಲಿ ಮಧ್ಯಸ್ಥಗಾರರಿಗೆ ಅರ್ಧ ಹಂಚಿಹೋಗಿತ್ತು. ಈ ಬಾರಿ ಮಾತ್ರ ಹೀಗಾಗಿರಲಿಲ್ಲ. ಪ್ರತಿಯೊಂದು ಬಾರಿ ಸಹ ಹೀಗೆ ಆಗುತ್ತಿತ್ತು. ನಿತೀಶನ ತಂದೆಯ ಹೊಲ ಮೂರು ಎಕರೆ ಇದೆ. ಪರಿಹಾರ ಧನದಲ್ಲಿ ಬಂದAತಹ ಹಣದಲ್ಲಿ ನಿತೀಶನ ತಂದೆಗೆ ಸ್ವಲ್ಪವು ದೊರೆಯಲಿಲ್ಲ. ಅಕ್ಕ-ಪಕ್ಕದವರಿಗೆ ಸ್ವಲ್ಪವಾದರೂ ಕೈಯಿಗೆ ಹಣ ಸೇರಿತ್ತು. ಮನೆಯಲ್ಲಿ ಕುಳಿತು ನಿತೀಶನ ತಾಯಿ-ತಂದೆ ಚರ್ಚಿಸುತ್ತಿದ್ದರು.

“ಗೌಡರ ಮನೆಗೆ ಹೋಗಿ ಹಣ ಕೇಳಲು ಕಷ್ಟ. ಅವರೆದುರು ನಿಂತು ಕೇಳುವುದಾದರೆ ಭಯ, ಆದರೇ ಹೊಟ್ಟೆಗೆ ತಿನ್ನಲು ಏನು ಇಲ್ಲ. ನಮ್ಮ ನಿತೀಶನನ್ನು ಗೌಡರ ಮನೆಯಲ್ಲಿ ಜೀತವಿಟ್ಟು, ದವಸ-ಧಾನ್ಯಗಳನ್ನು ಗೌಡರ ಮನೆಯಿಂದ ತಂದರಾಯಿತು ಎಂದು ಮಾತನಾಡುತ್ತಿದ್ದರು. ಆದರೇ ನಿತೀಶನ ತಾಯಿಯು ತನ್ನ ಮಗನನ್ನು ಜೀತದಾಳಾಗಿ ಮಾಡುವುದು ಸರಿಯಲ್ಲ. ಎಂದು ಗಂಡನ ಜೊತೆ ವಾದಿಸಿದಳು. ತಂಗಿಯನ್ನು ಆಟ-ವಾಡಿಸುತ್ತಿದ್ದ ನಿತೀಶನು ಎಲ್ಲಾನೂ ಕೇಳಿಸಿಕೊಳ್ಳುತ್ತಿದ್ದ. ನಿತೀಶನಿಗೆ ಟೀಚರ ಹೇಳಿದ್ದು ನೆನಪಿಗೆ ಬಂದಿತು. 9ನೇ ತರಗತಿಯಲ್ಲಿ ಓದುತ್ತಿದ್ದ. ನಿತೀಶನಿಗೆ “ನಮಗೆ ಸ್ವಾತಂತ್ರ್ಯ ದೊರಕಿದೆ, ಎಲ್ಲಾರಂತೆ ನಮಗೂ ಕೂಡ ಸರ್ಕಾರದಿಂದ ಹಣ ಬಂದಿರುತ್ತದೆ. ಆದರೇ ಗೌಡರು ನೀಡಿಲ್ಲ ಅಂದರೇ ಕಾರಣ ಏನೀರಬಹುದು? ಹೋಗಿ ಕೇಳಿ ಬರುವುದೇ ಒಳ್ಳೆಯದು” ಎಂದು ಮನೋಸ್ಥೈರ್ಯ ಮಾಡಿಕೊಳ್ಳುತ್ತಿದ್ದ. ಅದೇ ಸಮಯದಲ್ಲಿ ಅವನ ತಂದೆ ಬಂದು
“ನಿತೀಶ ನೀನು ಗೌಡರ ಮನೆಯಲ್ಲಿ ಜೀತಾ ಇರುವೆಯಾ?” ಎಂದು ಕೇಳಿದರು. ಏನೂ ಉತ್ತರಿಸದೆ ನಿತೀಶ ನೇರವಾಗಿ ಹೊರಟಿದ್ದು ಗೌಡರ ಮನೆಗೆ. ಗೌಡರ ಜೊತೆಗೂಡಿ ತಮಗೆ ಸಿಗಬೇಕಾದ ಹಣದ ವಿಷಯವನ್ನು ಕೇಳುತ್ತಿದ್ದ. ಗೌಡರು ಬೆಪ್ಪಾಗಿ ಹೋದರು. “ಯಾರ ಮಗ? ಏನು ಓದಿದ್ದಾನೆ?” ಹೀಗೆ ಹತ್ತಾರು ಪ್ರಶ್ನೆ ನಿತೀಶನಿಗೆ ಕೇಳಿದರು. ಸರಿಯಾಗಿ ಉತ್ತರಿಸಿದ ನಿತೀಶನು ತನಗೆ ಸಲ್ಲಬೇಕಾದ ಹಣ ಕೇಳಿ ಪಡೆದು ಮನೆಗೆ ಹಿಂದುರಿಗಿದ. ಗೌಡರ ಹೃದಯ ಬಡಿತ ಹೆಚ್ಚಾಯಿತು.
ನಿತೀಶನು ಮನೆಗೆ ತೆರಳಿ ಅಮ್ಮನಿಗೆ ಹಣ ಪಡೆದು ತಂದಂತಹ ಸುದ್ಧಿ ತಿಳಿಸಿದ. ಅಮ್ಮನಿಗೆ ಭಯ. ಅಪ್ಪನಿಗೆ ಭಯಂಕರ ಕೋಪ.
“ನಿತೀಶ ಗೌಡರ ವಿಷಯ ನಿನಗೆ ಗೊತಿಲ್ಲ ಕಣೋ. ಅವರ ಎದುರು ನಿಂತು ಮಾತನಾಡುವುದೇ ತಪ್ಪು. ಅದರಲ್ಲಿ ನೀನು ಹಣ ತೆಗೆದುಕೊಂಡು ಬಂದಿರುವೆಯಲ್ಲ. ಶಿವ!” ಎಂದು ಅಮ್ಮ ಹೇಳಿದಳು.
“ಅಮ್ಮ ಸರ್ಕಾರ ನೀಡಿದ ಹಣ ನಮಗೆ ಸೇರಬೇಕು. ಈ ಹಣ ಗೌಡರು ನೀಡಿದ್ದಲ್ಲ. ಗೌಡರು ಮಧ್ಯಸ್ಥಿಕೆ ವಹಿಸಿದ್ದಾರೆ ಅಷ್ಟೆ!” ಎಂದನು ಅಪ್ಪನಿಗೆ ಕೋಪ ಹೆಚ್ಚಿತು. ಮರುದಿನ ಬೆಳಿಗ್ಗೆ ಗೌಡರ ಮನೆಕಡೆ ನಿತೀಶನ ಅಪ್ಪ ಹೊರಟರು. ಗೌಡರ ಮುಂದೆ ನಿಂತು ಅವರು ಗೌಡರಿಗೆ ಹೆದರಿ “ನನ್ನ ಮಗ ತಪ್ಪು ಮಾಡಿದ್ದಾನೆ ಕ್ಷಮಿಸಿ” ಎಂದು ಕೋರಿದರು. ಗೌಡರು “ನಿನ್ನ ಮಗನು ಬುದ್ಧಿವಂತ ಆದರೇ ಆಲೋಚನೆ ಶಕ್ತಿಯಿಲ್ಲ. ಅಂತ ಮಗ ನಿನಗೆ ಹುಟ್ಟಿದ್ದು ಆಶ್ಚರ್ಯ. ಬುದ್ಧಿ ಹೇಳು ಅವನಿಗೆ, ತುಂಬ ಮಾತನಾಡುತ್ತಾನೆ. ನಿನ್ನ ಮಗನೆಂದು ತಿಳಿದು ಸುಮ್ಮನಿದ್ದೇನೆ. ನೆನಪಿರಲಿ! ನನಗೆ ಎದುರು ನಿಂತುಕೊಂಡು ಮಾತನಾಡಿದವರು ಯಾರು ಇಲ್ಲ.” ಎಂದು ಬೆದರಿಸಿದರು.
ನಿತೀಶನು ಸಂಜೆ ಹೊತ್ತು. ಮರದಡಿ ಕುಳಿತು “ಗೌಡರೆಂದರೆ ಏಕೆ? ನಮ್ಮ ಜನ ಹೆದರುತ್ತಾರೆ. ಅವರು ಗೌಡರಿದ್ದರೆ ಅವರ ಮನೆಗೆ ಮಾತ್ರ ಸೀಮಿತ. ನಮಗೆಲ್ಲಾ ಅಲ್ಲ.” ಎಂದು ಯೋಚಿಸುತ್ತಿದ್ದ. ಸ್ವಲ್ಪ ದಿನ ಕಳೆದವು. ಆ ಹಳ್ಳಿಯಲ್ಲಿ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪನ ಮಾಡುವುದಕ್ಕೆ ಇಂತಿಷ್ಟು ಹಣ ನೀಡಬೇಕೆಂದು ತೀರ್ಮಾನಿಸಿದ್ದು. ಅದರಂತೆ ನಿರ್ಮಾಣ ಕೂಡ ಆಯಿತು. ಮೂರ್ತಿಯ ಪೂಜೆ ಇದೆ. ಗೌಡರು ಊರ ಜನರನ್ನು ಸಭೆ ಸೇರಿಸಿ, “ವೆಂಕಟೆಶ್ವರನ ಮೂರ್ತಿ ಸ್ಥಾಪಿಸಿದು ಸಂತಸ. ಇದರ ಪೂಜೆಗೂ ಸಿದ್ಧತೆ ನಡೆದಿದೆ. ಪೂಜೆ ದಿನ ಯಾವ ನಿಮ್ಮ ಹೆಂಗಸರು ದೇವಾಲಯದ ಮೆಟ್ಟಲು ಸಹ ತುಳಿಯುವಂತಿಲ್ಲ. ಆರತಿಯ ತಟ್ಟೆಯನ್ನು ಹಾಗೂ ಕಳಸದ ಪೂಜೆ ನಮ್ಮ ಮನೆಯ ಹೆಂಗಸರೆ ನೆರವೇರಿಸುವರು. ಮೊದಲ ಪಂಕ್ತಿಯ ಊಟವೇ ನಮ್ಮ ಜನರದ್ದು. ನಂತರ ನೀವೆಲ್ಲ ಊಟ ಮಾಡಿ. ಪೂಜೆ ಕಾರ್ಯವೆಲ್ಲ ನಾವೇ ಜರುಗಿಸುವೆವು.” ಎಂದೇಳುತ್ತಿದ್ದ ಗೌಡರ ಮಾತುಗಳನ್ನೆಲ್ಲಾ ಕೇಳುತ್ತಿದ್ದ ಬಡ ಜನರು “ಹೌದು ಸ್ವಾಮಿ ಆಗಲಿ” ಎಂದು ತಲೆ ಅಲ್ಲಾಡಿಸುತ್ತಿದ್ದರು. ಗೌಡರು ಹಾಗೇ ಒಂದೊಂದು ಕಂಡೀಷನ್ ಹಾಕುತ್ತಾ ಇದ್ದರು. ಇದನ್ನೆಲ್ಲಾ ನೋಡುತ್ತಾ, ಕೇಳುತ್ತಾ ಇದ್ದಂತಹ ನಿತೀಶನಿಗೆ ತಾಳ್ಮೆ ಮೀರಿ ಭಯಂಕರ ಕೋಪ. ಎಲ್ಲರ ಮಧ್ಯದಿಂದ ಎದ್ದು ನಿಂತು, ಗೌಡರು ಮಾತನಾಡುತ್ತಿರುವುದನ್ನು ಲೆಕ್ಕಿಸದೆ ಕಟ್ಟೆಯನ್ನು ಹತ್ತಿ ನಿಂತನು. ಕೋಪದಿಂದ ಹೀಗೆ ಹೇಳುವನು.
“ಮಳೆಯಿಂದ ತಿನ್ನುವ ಭತ್ತ ಹಾಳಾಗಿವೆ. ತಿನ್ನಲು ಆಹಾರವಿಲ್ಲದಿರುವಾಗ ಸಾಲ ಮಾಡಿ ಮೂರ್ತಿ ಸ್ಥಾಪನೆಗೆ ಹಣ ನೀಡಿದ್ದಾರೆ ನಮ್ಮ ಜನ. ಮೂರ್ತಿ ಸ್ಥಾಪನೆಗೆ ಕಲ್ಲು-ಮಣ್ಣು ಹೊತ್ತು ತಂದವರು ನಿಮ್ಮ ಮನೆಯ ಹೆಂಗಸರು? ಅಥವಾ ನಮ್ಮ ಹೆಂಗಸರಾ? ಇಂದು ಅವರನ್ನೆ ಪೂಜೆಗೆ ನಿರಾಕರೆಸುವಿರಾ?” ಗೌಡರಿಗೆ ಹುಚ್ಚಿಡಿದಂತಾದರು. ನಿಂತಿರುವ ಜನರಿಗೆ ಆಶ್ಚರ್ಯ, ನಿತೀಶನ ತಂದೆಗೆ ಸಿಟ್ಟು. ನಿತೀಶನು ಮಾತನ್ನು ಮುಂದುವರೆಸಿದ. ಏನು ಅರಿಯದ ನಿತೀಶ ಮಾತನಾಡುವುದನ್ನು ಕಂಡ ಜನರು ತಬ್ಬಿಬ್ಬರಾದರು.
“ಮೂರ್ತಿ ಸ್ಥಾಪನೆಗೆ ಮಣ್ಣು-ಕಲ್ಲು ನೀಡಿದ ನಮ್ಮ ಹೆಂಗಸರು. ಪೂಜೆಗೆ ಬರಬಾರದೇ? ಗೌಡರಂತೆ ನಾವು ಸಹ ಹಣ ನೀಡಿದ್ದೇವೆ. ತಾನೇ? ಮೂರ್ತಿಯೇ ನಮ್ಮ ಜನರ ಕೈ ಮೇಲೆ ಮುಗಿದಿದೆ. ಅಂದ ಮೇಲೆ ಪೂಜೆಯ ಸಮಯದಲ್ಲಿ ನಾವು ಹರಗಡೆ ಇರಬೇಕಂತೆ ಇದು ಯಾವ ನ್ಯಾಯ ತಿಳಿಸಿ. ಸ್ವಲ್ಪ ಯೋಚಿಸಿ” ಎಂದಂತಹ ನಿತೀಶ ಮತ್ತೊಮ್ಮೆ ಎಲ್ಲಾರಿಗೂ ನಮಸ್ಕರಿಸುತ್ತಾ ಕಟೆಯಿಂದ ಇಳಿದು ಹೊರಟ. ನಿಂತಂತಹ ಜನರಿಗೆ ಹೌದಲ್ವ? ನಿತೀಶ ಹೇಳಿದ್ದು ಸರಿಯಾಗಿಯೇ ಇದೆ. ಎಂದು ತಿಳಿದರು ಸಹ ಗೌಡರ ಮುಂದೆ ಸುಮ್ಮನೆ ನಿಂತರು. ಅಲ್ಲಿಂದ ಗೌಡರು ಕೋಪ ಮಾಡಿಕೊಂಡು ಉತ್ತರಿಸದೆ ಹೊರಟರು. ಗೌಡರು ಮನೆಗೆ ತೆರಳಿ ಹಾಸಿಗೆ ಹಿಡಿದರು. ಅವರ ದೃಷ್ಟಿಯಲ್ಲಿ ನಿತೀಶನ ನುಡಿಗಳು ಕಾಡುತ್ತಿದ್ದವು. ಇತ್ತ ನಿತೀಶನ ತಂದೆ ಮನೆಯಲ್ಲಿ ನಿತೀಶನಗೋಸ್ಕರ ಕಾಯುತ್ತಿದ್ದರು. ಆ ದಿನ ನಿತಿಯು ಮನೆಗೆ ಹೋಗಿರಲಿಲ್ಲ. ಅವನಿಗೆ ತಿಳಿದಿತ್ತು. ಮನೆಗೆ ಹೋದರೆ ತಂದೆ ಸುಮ್ಮನೆ ಬಿಡುವುದಿಲ್ಲ. ಹಾಗಾಗಿ ರಾತ್ರಿಯಾದರು ಮನೆಗೆ ಹೋಗಿರಲಿಲ್ಲ. ಕಾಯುತ್ತಾ ಕುಳಿತಿದ್ದ ಅಪ್ಪ-ಅಮ್ಮ ಮಲಗಿದರು. ನಡು ರಾತ್ರಿಗೆ ಮನೆಗೆ ಬಂದನು ನಿತಿಯು ಮೆಲ್ಲಗೆ ಹೆಜ್ಜೆ ಇಡುತ್ತಾ ನುಗ್ಗುತ್ತಿದ್ದನು. ಪುಟಾಣಿ ತಂಗಿಯು ಅಣ್ಣನನ್ನು ನೋಡಿ ನಗುತ್ತಿದ್ದಳು.

ಬೆಳಿಗ್ಗೆ ಆಗುತ್ತಲೇ ಮನೆಬಿಟ್ಟು ಹೊರಟನು ನಿತಿಯು. ಹಾದಿಯಲ್ಲಿ ನಿತೀಶನ ತಂದೆ ಹೋಗುತ್ತಿದ್ದರು. ಪಕ್ಕದಲ್ಲಿರುವ ಜನರು ನಿತೀಶನ ಬಗ್ಗೆ ಒಳ್ಳೆಯ ಮಾತು ಆಡುವುದನ್ನು ಅವರ ಕಿವಿಗೆ ಬಿತ್ತು. ಮರುದಿನ ರಾತ್ರಿ ನಿತೀಶನು ತಡವಾದರೂ ಮನೆಗೆ ಬಂದಿರಲಿಲ್ಲ. ನಿತೀಶನ ಸಲುವಾಗಿ ಕಾಯುತ್ತಾ ಕುಳಿತಿದ್ದ ಗಂಡ-ಹೆಂಡತಿ. ನಿತಿಯ ತಾಯಿಯು “ಹೋಗಿ, ನಿತೀಶ ಎಲ್ಲಿದ್ದನೋ ಏನು? ನಿಮಗೆ ಹೆದರಿ ಅವನು ಮನೆಗೆ ಬಂದಿಲ್ಲ. ಕರೆದುಕೊಂಡು ಬನ್ನಿ” ಎಂದಳು. ಅದಕ್ಕೆ ನಿತೀಶನ ಅಪ್ಪನು “ಗೌಡರಿಗೆ ಹೆದರದವನು ನನಗೆ ಹೆದರುತ್ತಾನೆ ?.” ಎನ್ನುವಷ್ಟರಲ್ಲಿಯೇ ನಿತೀಶನು ಮನೆಗೆ ಬಂದನು. ನೇರವಾಗಿ ನಿತೀಶನ ತಂದೆಯ ಕೋಲನ್ನು ಕೈಗೆತ್ತಿಕೊಂಡು ಸಿಕ್ಕ-ಪಟ್ಟೆ ನಿತೀಶನಿಗೆ ಭಾರಿಸಿದ. ತಡೆಯಲು ಮುಂದಾದ ನಿತೀಶನ ತಾಯಿಯು ಸಹ ಕೋಲೇಟು ಕಂಡಳು. ನಿತೀಶನ ತಂದೆಗೆ ಬೆನ್ನು ನೋವೊಂದು ಸುಸ್ತಾಕಿ ಕುಳಿತುಕೊಂಡರು. ತಾಯಿ ಅವನನ್ನು ಕರೆದುಕೊಂಡು ಹೊರ ನಡೆದಳು. ತಾಯಿ “ನಿತೀಶ, ನಿತೀಶ, ನಿತೀಶ ಎಷ್ಟು ಭಾರಿಯೋ ನಿನಗೆ ಹೇಳೋದು.ಆ ಸುಡುಗಾಡ ಗೌಡನ ತಂಟೆಗೆ ಹೋಗಬೇಡ ಅಂತ. ನಿನ್ನಪ್ಪ ನಿಂಗೆ ಹೊಡೆಯೋಲು ಕಾರಣ ಆ ಗೌಡ ನಿನಗೇನಾದರೂ ಮಾಡಿ ಬಿಡುತ್ತಾನೇನೋ ಅಂತ. ಆ ಗೌಡನ ಮನೆಯವರು ಸಾಮಾನ್ಯದವರಲ್ಲ. ಹಿಂದೆ ನಿನ್ನ ತಾತ, ನಮ್ಮ ಹಿರಿಯರಿಗೆ ಏನಾದರೂ ತಪ್ಪು ಮಾಡಿದರೆ ಅವರ ಬಾಯಲ್ಲಿ ಉಗುಳುತ್ತಿದ್ದನಂತೆ. ಅಂತವರನ್ನು ತಿದ್ದೋಕೆ ಆಗುತ್ತಾ?” ಎಂದರು. ನಿತೀಶನು “ಅಮ್ಮ ಅವರು ನೀಡುವ ಶಿಕ್ಷೆ, ಜೀತಪದ್ಧತಿ, ಕೀಳರಿಮೆ, ಅಸಮಾನತೆ ಮುಂತಾದವು ಇನ್ನೂ ನಾವು ಎಷ್ಟು ಸ್ವೀಕರಿಸುತ್ತೇವೋ ಅವರು ಹಾಗೇ ಕೊಡುತ್ತಾ ಇರುತ್ತಾರೆ. ಹುಟ್ಟದಾಗಿನಿಂದ ಸಾಯುವತನಕ ದುಡಿಯುದೊಂದು ಬಿಟ್ಟು ಅವರಂತೆ ನಮಗೂ ಆರಾಮ ಜೀವನ ಬೇಡವೆ?. ಗೌಡನ ಮಗ ಗೌಡ. ಬಡವನ ಮಗ ಬಡವ ಆಗುವುದು ನಿಮ್ಮೆಲ್ಲರ ದೃಷ್ಠಿಯಲ್ಲಿ ಸರಿ ಅಲ್ವ?.” ಎಂದನು ನಿತೀಶನು.
ತಾಯಿ ಇವನ ವಿರುದ್ಧವಾಗಿ “ಯಾರು ಏನಾದರೇನೂ? ನೀನು ಓದಿ ಏನಾದರಾಗೂ, ಹೊರತು ಊರಿನ ವಿಷಯಕ್ಕೆ ಬರಬೇಡ. ನಾವು ಹೇಗೋ ಇದೆಯಲ್ವ ನಿನ್ನನ್ನೂ ಚೆನ್ನಾಗಿ ಓದುಸ್ತಿವಿ.” ಎಂದಳು.
ನಿತೀಶನು “ಅಮ್ಮ ಹಾಗಿಲ್ಲಮ್ಮ ನಮ್ಮ ಜನ ಕಷ್ಟಪಡುವುದನ್ನು ಕಂಡರೆ ಅಯ್ಯೋ ಅನಿಸುತ್ತದೆ.” ಎಂದನು. ಹೀಗೆ ಇಬ್ಬರ ನಡುವೆ ಚರ್ಚೆಯಾಗುತ್ತದೆ.


ನಿತೀಶನಿಗೆ ಬೇಜಾರಿನ ಸಂಗತಿಯೇ ಸರಿ. ಏಕೆಂದರೆ ಅಂದು ಆ ಊರಿನ ಶಿಕ್ಷಕರೊಬ್ಬರ ಬೀಳ್ಕೊಡುಗೆ ಸಮಾರಂಭ ಇರುವ 5 ಶಿಕ್ಷಕರಲ್ಲಿ ಒಬ್ಬರಾದ ಇವರು ನಿತೀಶನ ನೆಚ್ಚಿನ ಗುರುಗಳಾಗಿದ್ದರು. ಆ ಶಿಕ್ಷಕರಿಗೆ ಆ ಊರಿನಲ್ಲಿ ಗೌಡನ ಆಳ್ವಿಕೆ ನಡೆಯುತ್ತಿದ್ದನು ಅರಿತ ಅವರು ಗೌಡರು ಹೇಳುವಂತೆ ಕೇಳುತ್ತಿದ್ದರು. ಗೌಡರ ಮಾತೆಂದರೆ ಮೀರಿ ನಡೆಯುತ್ತಿರಲಿಲ್ಲ ಅಂದು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಗೌಡರು ವಹಿಸಿಕೊಂಡಿದ್ದರು. ಕಾರ್ಯಕ್ರಮವೆಲ್ಲಾ ಅಚ್ಚು ಕಟ್ಟಾಗಿಯೇ ಜರುಗಿತು. ನಿತೀಶ ಹಾಗೂ ಇವನ ಸ್ನೇಹಿತರು ಸೊಪ್ಪೆ ಮೊರೆ ಹೊತ್ತುಕೊಂಡು ಕುಳಿತಿದ್ದರು ಅದನ್ನು ಆ ಶಿಕ್ಷಕರು ಕಂಡರು. ಅವರ ಬಳಿ ಬಂದು ಶಿಕ್ಷಕನು

“ನಿತೀಶ ಚೆನ್ನಾಗಿ ಓದಿ, ದೊಡ್ಡವನಾಗು, ಚಿಕ್ಕದಾಗಿನಿಂದಲೇ ಆ ಗೌಡರ ಜೊತೆ ಯಾಕೆ ದ್ವೇಷವನ್ನು ಬೆಳೆಸಿಕೊಳ್ಳುತ್ತಿಯ್ಯಾ? ಹಾಳಾಗಿ ಹೋಗಲಿ ಸುಮ್ಮನಿರೋದನ್ನು ಕಲಿತಿಕೋ”. ಎಂದರು. ನಿತೀಶನ ಕಣ್ಣಲ್ಲಿ ನೀರು ತುಂಬಿತ್ತು. ಅವನ ಸ್ನೇಹಿತರೆಲ್ಲಾ ಸೇರಿ ನೆಚ್ಚಿನ ಗುರುಗಳ ಪಾದ ಮುಟ್ಟಿ ನಮಸ್ಕರಿಸಿದರು. ಪ್ರೀತಿಯಿಂದ ಗುರುಗಳಿಗೆ ನಿತೀಶನು ನೆನಪಿನ ಕಾಣಿಕೆಯನ್ನು ನೀಡಿದನು. ಆತನು ಆ ಕಾರ್ಯಕ್ರಮ ಅಂಗಳದಿಂದ ನೇರವಾಗಿ ದೂರ ತನ್ನ ಕಣ್ಣನ್ನು ಹಾಯಿಸಿದ. ಯಾರೋ ಒಬ್ಬ-ಇಬ್ಬ ಮಹಿಳೆಯರು ಹಾಗೂ ಪರುಷರು ಚರಂಡಿಯ ವಿಲೆ (ಕಸ-ಕಡ್ಡಿ) ತೆಗೆವುದನ್ನು ಕಂಡ. ಹಾಗೇ ಕಣ್ಣನ್ನು ತಿರುಗಿಸಿ ನೋಡಿದ ಅಲ್ಲಿ ಖುರ್ಚಿಯ ಮೇಲೆ ಯಾರೋ ಕುಳಿತುಕೊಂಡು ನಗುತ್ತಿರುವುದನ್ನು ಕಂಡ, ಹಿಂದಕ್ಕೆ ತಿರುಗಿ ನೋಡಿದ ಹಾಳಾದ ಗೌಡನು, ಒಬ್ಬ ಅಮಾಯಕ ವ್ಯಕ್ತಿಯು ಅವನ ಚಪ್ಪಲಿಯನ್ನು ತುಳಿದ ಕಾರಣಕ್ಕಾಗಿ ತನಗೆ ಇಚ್ಛೆ ಬಂದಂತೆ ಹೊಡೆಯುತ್ತಿದ್ದ ಮತ್ತೊಮ್ಮೆ ಉಸಿರು ಬಿಡುತ್ತಾ ಸ್ವಲ್ಪ ದೂರದ ಜಾಗ ಕಂಡನು ಅಲ್ಲಿ ಆ ಊರಿನ ಪೂಜಾರಿಯ ಎಲ್ಲಾ ಸಾಮಗ್ರಿಗಳನ್ನು ಹಿಡಿದುಕೊಂಡು, ತಲೆಬಾಗಿ, ಆ ಅರ್ಚಕನಿಗೆ ನೆರಳು ತಾಗದಂತೆ, ಹಿಂದೆಯೇ ಹೋಗುತ್ತಿದ್ದ, ಅವನ ಗೆಳೆಯನ ತಂದೆಯನ್ನು ಕಂಡ. ಇದನ್ನೆಲ್ಲಾ ಕಂಡ ನಿತೀಶನಿಗೆ ಗೊತ್ತಾಗಿದ್ದು ನಾ ಹುಟ್ಟಿ 15 ವರ್ಷಗಳಾಗಿವೆ. ಮೊದಲಿನಿಂದಲೂ ಯರ‍್ಯಾರಿಗೆ ಎಂತಂಹ ಕೆಲಸ ನೀಡುತ್ತಿದ್ದರೇನು? ಗುರುಗಳ ಸಮೀಪ ಹೋಗಿ ಹೇಳಿದ. “ಸರ್ ನೋಡಿ ಭೂಮಿ ಮೇಲೆ ಎಲ್ಲರೂ ಹುಟ್ಟಿ ಬರುವುದು ತಾಯಿಯ ಗರ್ಭದಲ್ಲೇ ಅಲ್ವ? ಇರುವ ಒಂದು ಜೀವವನ್ನು ಕೆಲವರು ಇನ್ನೊಬ್ಬರ ಕೈ ಕೆಳಗೆ ಗುಲಾಮರನ್ನಾಗಿಯೇ ಜೀವನ ಮುಗಿಸಿಕೊಳ್ಳುತ್ತಾರೆ. ಕೆಲವೊಬ್ಬರು ಮಾತ್ರ ಸುಖದ ಸುಪ್ಪತ್ತಿಗೆಯಲ್ಲ್ಲಿ ಬದುಕನ್ನು ಪೂರ್ಣಗೊಳಿಸುತ್ತಾರೆ.” ಎಂದನು. ಅದಕ್ಕೆ ಗುರುಗಳು “ಏನೋ ನಿತೀಶ ಏನು? ಮಾತನಾಡುತ್ತಿದ್ದೀಯಾ?” ಎಂದರು.
“ಇನ್ನೇನು? ಸರ ತಾರತಮ್ಯವನ್ನು ಅಳೆಯಲು ಸಾಧ್ಯದ ನಾಲ್ಕು ದೃಶ್ಯಗಳು ಸಾಕಲ್ಲವೇ. ಸ್ವಲ್ಪ ದೂರ ನೋಡಿ ಸರ. ಅಲ್ಲಿ ನನ್ನ ತಂದೆ-ತಾಯಿಯರು ಚರಂಡಿಯ ಸ್ವಚ್ಚತೆ ಮಾಡುತ್ತಿದ್ದಾರೆ, ಅಗೋ ಅಲ್ಲಿ ನೋಡಿ ನನ್ನ ಗೆಳೆಯನ ತಂದೆಯು ಆ ಅರ್ಚಕರಿಂದ ಹೇಗೆ ಹೋಗುತ್ತಿರುವುದು, ಆ ಗೌಡರ ಮಕ್ಕಳು, ಮೊಮ್ಮಕ್ಕಳು ನೋಡಿ ಕುಳಿತುಕೊಂಡು ನಗುತ್ತಿರುವುದು, ಆ ಗೌಡರು ನಮ್ಮಂತಹ ಸಾಮಾನ್ಯ ವ್ಯಕ್ತಿಗೆ ನೀಡುತ್ತಿರುವ ಶಿಕ್ಷೆ, ಕೊನೆಯದಾಗಿ ನೋಡಿ ಸರ ಶ್ರೀಮಂತರಾದ ಸ್ವಾಮಿ ಸದಾಶಿವರು ತಮ್ಮ ಕಾರಿನಲ್ಲಿ ಕುಳಿತುಕೊಂಡು ಹೋಗುತ್ತಿರುವುದು. ಒಬ್ಬೊಬ್ಬರು ಒಂದೊಂದು ರೀತಿಯ ಬದುಕುವ ದಾರಿ ಅಲ್ವ?. ಅದಕ್ಕೆ ಗುರುಗಳು
“ನಿತೀಶ ನೀ ಹೇಳುವುದರಲ್ಲಿಯು ಅರ್ಥವಿದೆ. ನಿನ್ನ ಮಾತಿನ ಅರ್ಥ ಸಾಮಾನ್ಯ ಜನರು ಸಹ ಶ್ರೀಮಂತರಾಗಿ ಬದಲಾಗಬೇಕೆನ್ನುವುದು ನಿನ್ನ ಉದ್ದೇಶ ಅಲ್ವ? ಆದರೇ ಬದಲಾಗುವುದಾದರೂ ಹೇಗೆ? ಜಮೀನು ಇಲ್ಲ, ಹಣ ಇಲ್ಲ, ಶಿಕ್ಷಣ ಇಲ್ಲ, ಪ್ರತಿಭಟನೆ ಇಲ್ಲ, ಒಗ್ಗಟ್ಟು ಇಲ್ಲ. ಅಂದ ಮೇಲೆ ಹೇಗೆ ತಾನೆ ಅವರು ಮುಂದೆ ಬರಬಹುದು?.” ಎಂದರು.
ನಿತೀಶನು “ಹೌದು ಸರ, ನಮ್ಮ ಜನರ ಬಳಿ ಜ್ಞಾನ ಇಲ್ಲ. ಆದರೇ ಅವರಿಗೆ ತಿಳಿಸಿ ಹೇಳಿದರೆ ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆಯಿದೆ. ಸರ್! ನಮ್ಮ ಹಿರಿಯರ ಬಳಿ ಹಿಂದೆ ಅಪಾರ ಆಸ್ತಿ-ಜಮೀನು ಇತ್ತಂತೆ. ಆದರೇ ಅವರು ಕೆಲವೊಮ್ಮೆ ಬರಗಾಲ ಬಂದಾಗ ಭತ್ತಕ್ಕಾಗಿ ಗೌಡರಿಗೆ ಕೇವಲ 800 ರೂಪಾಯಿ ಎಕರೆಗೆ ಮಾರಾಟ ಮಾಡಿದ್ದಾರಂತೆ ಹಾಗಾಗಿ ಗೌಡರ ಬಳಿ ಅಷ್ಟೊಂದು ಜಮೀನು ಇರುವುದು. ಆ ಮಾರಾಟ ಮಾಡಿದ ಎಲ್ಲಾ ಹೊಲ-ಗದ್ದೆಗಳ ರಸೀದಿಯನ್ನು ಮೊನ್ನೆ ನಮ್ಮ ದೊಡ್ಡಪ್ಪ ಹಾಗೂ ಅಜ್ಜಿ ತೋರಿಸಿದರು. ಆ ಜಮೀನುಗಳಿಗೆ ಸಂಬಂಧಪಟ್ಟಂತೆ ಪಾಣಿ, ಪತ್ರ ಎಲ್ಲಾನೂ ಇವೆ ಸರ.” ಎಂದ ನಿತೀಶನು ಗುರುಗಳು ಹೇಳುವ ಮಾತನ್ನು ನಿರೀಕ್ಷಿಸುತ್ತಿದ್ದ ಸ್ವಲ್ಪ ಸಮಯದ ಬಳಿಕ ಗುರುಗಳು “ಹೌದಾ! ಹಾಗಿದ್ದರೆ ಏನು ಮಾಡಬಹುದು ಗೊತ್ತಾ? ನೀವು ಹೊಲದ ವಿರುದ್ಧ ಕೇಸ್ ಹಾಕಬಹುದು ಕೋರ್ಟ್ಲ್ಲಿ.” ಎಂದರು. ನಿತೀಶನು ಸ್ವಲ್ಪ ಯೋಚಿಸುತ್ತಾ
“ಸರ ನಮ್ಮ ಜಮೀನು ಅಷ್ಟೇ ಅಲ್ಲ, ನಮ್ಮ ಊರಿನ 12-13 ಕುಟುಂಬಗಳ ಜಮೀನು ಅವರ ಬಳಿಯೇ ಸಿಕ್ಕಿಕೊಂಡಿವೆ. ನಾನು ಈವಾಗಲೇ ಎಲ್ಲರ ಬಳಿ ಹೋಗಿ ಹೊಲಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳು ಇವೆ ಇಲ್ಲವೋ ಎಂಬುದನ್ನು ಕೇಳಿ ನೋಡುತ್ತೇನೆ” ಎಂದನು. ಗುರುಗಳು ಮೌನದಿಂದ ಉಸಿರು ಬಿಡುತ್ತಾ ನಿತೀಶನಿಗೆ ತಿಳಿ ಹೇಳಿದರು. ನಂತರ ನಿತೀಶನು ತನ್ನ ಪ್ರೀತಿಯ ಗುರುಗಳನ್ನು ಹೃದಯದ ನೋವಿನಂಚಿನಲ್ಲಿಯೇ, ಹೂವಿನ ಮೊಗ್ಗು ಬಾಡುವಂತೆ ತನ್ನ ಮುಖವನ್ನು ಬಾಡಿಸಿಕೊಂಡು ಗುರುಗಳಿಗೆ ಸತ್ಕರಿಸಿದನು, ಕಣ್ಣೀರಿನಿಂದ ನೀರಿನಿಂದ ಗುರುಗಳನ್ನು ಬೀಳ್ಕೋಟ್ಟನು.


“ಏನೋ ? ನಿನಗಿಷ್ಟು ಯೋಚನೆ ಯಾಕೆ ಅಂತ ತಿಳಿತಾ, ಇಲ್ಲ” ಎಂದು ಒಬ್ಬ ಗೆಳೆಯ ಹೇಳಿದನು. ಇನ್ನೊಬ್ಬ ಗೆಳೆಯ “ಅಲ್ಲೋ ನನಗಿಂತ ನಿನಗೇನು ಕಮ್ಮಿ, ನಮ್ಮ ಅಪ್ಪ-ಅಮ್ಮನಿಗಿಂತ ನಿನ್ನ ಅಪ್ಪ-ಅಮ್ಮ ಚೆನ್ನಾಗಿ ದುಡಿಯುತ್ತಾರೆ. ನಿಮ್ಮ ಮನೆಯಲ್ಲಿ ಯಾವಾಗಲೂ ಭತ್ತ ಇರುತ್ತದೆ. ಅಂದ ಮೇಲೆ ಊರಿನ ಜನರ ಬಗ್ಗೆ ನಿನಗೆಷ್ಟು ಯೋಚನೆಯಿರುವುದು ಸರಿಯಲ್ಲ” ಎಂದನು.
ಅಣ್ಣನ ಸ್ಥಾನದಲ್ಲಿರುವ ರಘು ಹೇಳುವನು “ಲೋ ನಿತೀಶ ನೀನು ಈ ವರ್ಷ 10ನೇ ತರಗತಿ ಓದುತ್ತಿದ್ದೀಯ, ಹಾಗಾಗಿ ನೀನು ತರಗತಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ವಿದ್ಯಾರ್ಥಿ ಓದಿನ ಕಡೆ ಗಮನಹರಿಸು, ಹೊರತು ಗೌಡ-ಕುಲಕರ್ಣಿ ಅಂತ ತಲೆಕೆಡಿಸಿಕೊಳ್ಳುವುದು ಯಾಕಪ್ಪಾ? ಕೋರ್ಟು-ಕಛೇರಿ, ಕೇಸ್ ಅಂತ ಗೌಡರನ್ನು ವಿರುದ್ಧ ಹಾಕಿಕೊಳ್ಳುವುದಕ್ಕೆ ಆಗುತ್ತಾ, ಜೊತೆಗೆ ನಿನ್ನ ಅಪ್ಪ-ಅಮ್ಮಂದಿರ ಬಗ್ಗೆ ಚಿಂತಿಸು ಅವರ ನಿನ್ನ ಭವಿಷ್ಯದ ಬಗ್ಗೆ ದೊಡ್ಡ ಕನಸ್ಸನ್ನೆ ಕಟ್ಟಿಕೊಂಡಿದ್ದಾರೆ. ಗೌಡ ನಿನಗೆ ನಾಳೆ ಏನಾದರೂ ಹೆಚ್ಚು-ಕಮ್ಮಿ ಮಾಡಿದರೆ ಏನೋ ಮಾಡುತ್ತೀಯಾ ? ಎಲ್ಲಾನು ಬಿಟ್ಟು ಬಿಡು ಈವಾಗಲೇ 10ನೆ ಕ್ಲಾಸ್ ಮುಗಿದ ನಂತರ ನಾನೇ ನಿನ್ನನ್ನು ನಗರಕ್ಕೆ ಕರೆದುಕೊಂಡು ಹೋಗಿ ಓದಿಸುವೆ ಓಕೆನಾ’’ ಎಂದನು ರಘು.
ನೀರಿನ ಹಳ್ಳದ ಅಂಚಿನಲ್ಲಿ ನಾಲ್ಕು ಜನ ಸ್ನೇಹಿತರು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಮುಖ ಮಾಡಿ ಮರಳಿನ ಮೇಲೆ ಕುಳಿತುಕೊಂಡಿದ್ದಾರೆ. ಮೂವರು ಸ್ನೇಹಿತರು ಹೇಳಿದ ಸಲಹೆಯನ್ನು ಕೇಲಿಸಿಕೊಂಡ ನಿತೀಶನು ಮಂಕು ಬಡೆದಂತೆ ಕುಳಿತಿದ್ದನು. ಕಣ್ಣು ಸಣ್ಣದಾಗಿತ್ತು. ಗೆಳೆಯರು “ಮಾತನಾಡು ನೀತಿ” ಎಂದಾಗ
“ನೀವು ನನಗೆ ನೀಡಿದ ಸಲಹೆ ನನ್ನ ಸ್ವಾರ್ಥಕ್ಕಾಗಿ ಅದನ್ನು ಬಳಸಿಕೊಳ್ಳುವೆ. ಆದರೇ ನಮ್ಮ ಜನರ ಬಗ್ಗೆ ಯೋಚಿಸಿದ್ದೀರಾ ನಾವು ರಾಜಕೀಯವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ. ಸಮಾನತೆ ಸಿಗುವುದಾದರೂ ಯಾವಾಗ? ಪ್ರತಿ ವರ್ಷ ನಮ್ಮೂರಿನ ಗ್ರಾಮ ಪಂಚಾಯಿತಿಯ ಮೇಂಬರ ಕುಲಕರ್ಣಿಯ ಮಕ್ಕಳೇ ಹಾಗೂ ಅಧ್ಯಕ್ಷರು ಆ ಮುಂದುವರೆದ ಸಮಾಜದವರೆ. ನಮಗೆ ಆ ಸ್ಥಾನ ಸಿಗದೇ ಇರದಿದ್ದರೂ ಪರವಾಗಿಲ್ಲ ಆದರೇ ಸ್ವಾವಲಂಬಿಯಾಗಿ ಬದುಕಲು ಜಮೀನಾದರೂ ಬೇಕಲ್ಲವೆ? ಗುಲಾಮರಾಗಿ ಬಾಳುವುದಕ್ಕಿಂತ ಆರ್ಥಿಕವಾಗಿ ಡೆವಲಪ್ ಆಗುವುದರಾದರೂ ಸ್ವಂತ ದುಡಿಮೆ ಮೂಲಕ ಸ್ವಾಲಂಬಿಯಾಗುತ್ತಾರೆ. ನಿಮ್ಮ ಸಲಹೆ ಕೇಳಿದಕ್ಕಾಗಿ ಋಣಾತ್ಮಕ ಮಾತನ್ನೇ ಹೇಳಿದ್ದೀರಲ್ಲ” ಎಂದನು.
ರಘು ಅಣ್ಣನು “ನಿತೀಶ ತಾಳ್ಮೆಯಿರಲಿ ನಾವು ಹೇಳಿದ್ದು ನಿನ್ನ ಒಳಿತಿಗಾಗಿ, ಯಾವುದನ್ನು ದೂಷಿಸಬೇಡ. ನಿನಗೆ ಇರುವ ಹಂಬಲ, ತುಡಿತ-ಮಿಡಿತ ಒಳ್ಳೇಯದೆ ಆದರೂ ಅದಕ್ಕೂ ಸಮಯ ಬೇಕಲ್ಲವೆ?.”
ಮತ್ತೊಬ್ಬ ಗೆಳೆಯ “ನಿತಿ ದಿನಾಲೂ ಅದೇ ಯೋಚನೆಯಲ್ಲಿಯೇ ನಿನಗೆ ನಾವು ಸಹಾಯ ಮಾಡುತ್ತೇವೆ. ನಾವು ಅಭಿವೃದ್ಧಿಯಾಗಬೇಕು, ಜಾಗೃತರಾಗಬೇಕು. ಅದಕ್ಕೆ ನಾವೇಲ್ಲರೂ ಒಗಟ್ಟಾಗಿ ಮುಂದಾಗೋಣ ಜಿಗುಪ್ಸೆ ಪಡಬೇಡ” ಎಂದನು.
ನಿತೀಶನಿಗೆ ಸ್ವಲ್ಪ ಸಮಾಧಾನವಾದರೂ ವ್ಯಂಗ್ಯಾ ಮುಖ ಹೊತ್ತುಕೊಂಡು ಕುಳಿತದ್ದನ್ನು ಕಂಡ ರಘು ಹೇಳುವನು “ನಿತೀಶ ನಾವು ಊರಿಂದ ತುಂಬ ಆಚೆ ಬಂದಿದ್ದೇವೆ ಎಷ್ಟೊಂದು ಸೊಗಸಾಗಿದೆ ನೋಡು ವಾತಾವರಣ ಈ ಹಳ್ಳ ನೋಡು, ಆ ಬೆಟ್ಟ ನೋಡು, ಈ ಮರಳು, ಮರ, ಪಕ್ಷಿಗಳ ಕಲರವ, ಓಡುವ ಮೋಡವನ್ನು ನೋಡು ಹೇಗಿದೆ ಸ್ವಲ್ಪವಾದರೂ ಅವುಗಳಲ್ಲಿ ಬೇಜಾರುತನ ಕಂಡು ಬರುವುದಿಲ್ಲ.” ಎಂದು ರಘು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ. ನಿತೀಶನು ಎದ್ದು ನಿಂತುಕೊAಡನು ಜೊತೆಗೆ ಅಂಗೈಗೆ ಅಂಟಿದ ಮರಳನ್ನು ಒಂದು ಕೈಯಿಂದ ಇನ್ನೊಂದು ಕೈಯಿಗೆ ಜಾಡಿಸಿಕೊಳ್ಳುತ್ತಾ ಹೇಳಿದನು.
“ರಘು ಅಣ್ಣ ಕೇಳು ನೀನು ಹೇಳಿದೆ ಆ ಮರ, ಬೆಟ್ಟ ಹಳ್ಳ, ಗುಡ್ಡ, ಪರ್ವತ, ಮೋಡಗಳು ಒಂದಕ್ಕೊಂದು ವ್ಯತ್ಯಾಸವಿದ್ದರೂ ಅವುಗಳಲ್ಲಿರುವ ಮುಗ್ದತೆ, ಸೌಜನ್ಯ ಅಮರ ಅಲ್ವ? ಆದರೇ ಮನುಷ್ಯನು ಆಗಲ್ಲ.
ಈ ಹರಿಯುವ ಹಳ್ಳ ನೋಡು ಯಾವ ಜಾತಿ, ಲಿಂಗ, ತಾರತಮ್ಯತೆ ಎನ್ನದೇ ಎಲ್ಲರಿಗೂ ಕುಡಿಯಲು ನೀರನ್ನು ನೀಡುತ್ತದೆ, ಆ ಮರ ಸರ್ವರಿಗೂ ಗಾಳಿ ನೀಡುತ್ತಿದೆ. ಆ ಪಕ್ಷಿ ನೋಡು ಎಲ್ಲರ ಮುಂದೆಯು ಒಂದೇ ರೀತಿಯ ಧ್ವನಿಯ ಮೂಲಕ ಕೂಗುತ್ತದೆ. ಆ ಕಪ್ಪನೆ ಮೋಡ ನೋಡು ಬಡವರ ಮತ್ತು ಶ್ರೀಮಂತರ ಮನೆ ಎಂಬುದನ್ನು ಕಾಣದೇ ಎಲ್ಲಾ ಕಡೆ ಒಂದೇ ತರವಾಯ ಸುರಿಯುತ್ತದೆ”. ಇದು ಅದ್ಭುತ ಅಲ್ವ? ಆದರೇ ಮನುಷ್ಯ ಹೀಗ್ಯಾಕಂತ? ಸ್ವಾರ್ಥ ಗುಣ, ದ್ವೇಷ, ಅಸೂಯೆ ತುಂಬಿಕೊಂಡು ಜೀವನ ನಡೆಸುತ್ತಾನೆ.” ಎಂದು ನಿತೀಶನು ನಿಂತ ಜಾಗದಿಂದ ಒಂದೊಂದು ಹೆಜ್ಜೆಯನ್ನು ಮುಂದೆ ಇಡುತ್ತಾ-ಇಡುತ್ತಾ ಇದೆಲ್ಲಾ ಹೇಳುತ್ತಿದ್ದನು.
ಗೆಳೆಯ ಹೇಳುವನು. “ಅದು ಹಾಗೇ ಕಣೋ ನಿಸರ್ಗದಲ್ಲಿರುವ ಸೂಕ್ಷö್ಮ ಜೀವಿಗೆ ಇರುವ ಬುದ್ಧಿ ಮಾನವನಿಗೆ ಇಲ್ಲ. ಪರಸ್ಪರ ಹೊಂದಾಣಿಕೆ ಮನೋಭಾವನೆ ಇಲ್ಲ. ಪ್ರೀತಿಯಂತು ಮೊದಲೇ ಇಲ್ಲ. ಹೀಗಿರುವಾಗ ನಮ್ಮ ಜನವನ್ನು ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸ”. ಎಂದನು.
ನಿತೀಶನ ಇನ್ನೊಬ್ಬ ಗೆಳೆಯನು ನಿತೀಶನಿಗೆ, ರಘುವಿಗೆ, ಗೆಳೆಯನಿಗೆ ಕರೆಯುವನು. ಹೇಳುವನು “ಇಲ್ಲಿ ನೋಡ್ರೋ, ಇನ್ನು ಸ್ವಲ್ಪಬಾಗಿ ನೋಡಿ ಆ ನೀರಲ್ಲಿ ಒಂದು ಚಿಕ್ಕ ಮೀನು ಪಾಚಿಯನ್ನು ಬದಿಗೆ ತಳ್ಳಿ ಆ ಚಿಕ್ಕ ಮೀನನ್ನು ಸಂರಕ್ಷಿಸುತ್ತಿದೆ ಅಲ್ವ”. ಎಂದನು ಮೆಲ್ಲಗೆ ಅವುಗಳನ್ನೇ ನೋಡುತ್ತಾ, “ಅದೇ ಕಣೋ ನಮಗೂ ಮತ್ತು ಅವುಗಳಿಗೂ ಇರುವ ವ್ಯತ್ಯಾಸ” ಎಂದನು.
5 ನಿಮಿಷಗಳ ಮೌನವೇ ಅಡಗಿತ್ತು. ಪುನಃ ಒಬ್ಬರಿಗೊಬ್ಬರೂ ಮುಖನೋಡಿಕೊಂಡು ಸಂಜೆ ಸೂರ್ಯನ ಕಿರಣಗಳು ಮರೆಯಾಗುತ್ತಿದ್ದವು. ಪಕ್ಷಿಗಳು ಗೂಡಿಗೆ ಸೇರಿದ್ದವು. ಎಲ್ಲರೂ ಮನೆಗೆ ಹೊರಡಲು ಸಿದ್ಧರಾಗಿ ಹೊರಟರು.


ಗೆಳೆಯರ ಮಾತಿನಿಂದ ಸ್ವಲ್ಪ ತೃಪ್ತಿಗೊಂಡಂತಹ ನಿತೀಶನು ಸ್ವಲ್ಪ ಸಮಾಧಾನದಿಂದಲೇ ಇದ್ದನು. ಅಂದು ರಾತ್ರಿ ನಿತೀಶನು ಅವರ ಮನೆಯ ನಡುವೆ ದೀಪವನ್ನು ಮುಂದಿಟ್ಟುಕೊಂಡು ಓದಲೂ ಕುಳಿತಿದ್ದನು. ಅಪ್ಪ-ಅಮ್ಮ ಮಲಗಿರಬಹುದೇನು ಭವಿಷ್ಯತಂಗಿ ಸಹ ಮಲಗಿದ್ದಳು. ಇವನ್ನೊಬ್ಬನೇ ಅಭ್ಯಾಸ ಮಾಡುತ್ತಾ ಕುಳಿತಿದ್ದ. ರಾತ್ರಿ ಹನ್ನೊಂದು ಮೂವತ್ತರ ಸಮಯ ಗೌಡರ ಮನೆಯಿಂದ ಇಬ್ಬರು ಜೀತದಾಳುಗಳನ್ನು ನಿತೀಶನ ಅಪ್ಪನನ್ನು ಕರೆದುಕೊಂಡು ಹೋಗಲು ಗೌಡನು ಕಳುಹಿಸಿದ್ದನು. ನಿತೀಶನ ಮನೆಗೆ ಬಂದರು.
ಅವರು ನೇರವಾಗಿ ನಿತೀಶನ ಅಪ್ಪನ ಹೆಸರನ್ನು ಕೂಗಿ ಕರೆಯುತ್ತಿದ್ದರು. ಸರಿಯಾಗಿ ಇನ್ನೂ ನಿತೀಶನಿಗೆ ಹಾಗೂ ಅವನ ಅಪ್ಪನಿಗೆ ಕೇಳಿರುವುದಿಲ್ಲ. ಆ ಜೀತದಾಳುಗಳು ನಿತೀಶನು ಅಭ್ಯಾಸ ಮಾಡುವುದನ್ನು ಕಂಡರು. ಅವರಿಗೆ ಆಶ್ಚರ್ಯವಾಯಿತು ಈ ನಡುರಾತ್ರಿ ಇವನು ಓದುತ್ತಾ ಕುಳಿತಿದ್ದನಲ್ಲ ? ಎಂದು ಅವನನ್ನೆ ನೋಡುತ್ತಿದ್ದರು. ಮತ್ತೊಮ್ಮೆ ನಿತೀಶನ ಅಪ್ಪನನ್ನು ಕರೆದರು. ಆವಾಗ ಅವರು ಎಚ್ಚೇತ್ತುಕೊಂಡು ಹೊರ ಬಂದರು. ನಿತೀಶನು ಸಹ ಅಪ್ಪನ ಹಿಂದೆ ನಡೆದನು. ಅವರು ವಿಚಾರಿಸಿದರು ಅದಕ್ಕೆ ಜೀತದಾಳು.
“ನೋಡಿ ನಿಮ್ಮನ್ನು ಗೌಡರು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.”
ಅದಕ್ಕೆ ನಿತೀಶನ ಅಪ್ಪನು “ಈ ಸಮಯದಲ್ಲ? ಈ ನಡುರಾತ್ರಿನಾ ಯಾಕೆ? ಎಂದು ಉತ್ತರಿಸದೆ ನೇರವಾಗಿ ಅವರಿಂದ ಹೊರಡಲು ಸಿದ್ಧರಾಗುತ್ತಿದ್ದರು. ನಿತೀಶನು ಒಂದು ಹೆಜ್ಜೆ ಮುಂದಕ್ಕೆ ಹೋಗಿ “ಏನೋ ಕೆಲಸ ಇದೆ? ಈವಾಗ ನಮ್ಮ ಅಪ್ಪಂದಿರು ಬರುವುದಿಲ್ಲ ಅಂತ ತಿಳಿಸಿ ಹೋಗಿ ಗೌಡರಿಗೆ.” ಎಂದನು ನಿತೀಶನು. ಅದಕ್ಕೆ ನಿತೀಶನ ತಂದೆನು
“ಸುಮ್ಮನಿರೋ, ಮಾತಾಡಬೇಡ. ಗೌಡರಿಗೆ ಏನಾದರೂ ಕೆಲಸ ಇದ್ರೇನೆ ತಾನೆ ನನ್ನನ್ನು ಕರೆಯಲು ಕಳುಹಿಸಿರಬಹುದು” ಎಂದರು. ಪಕ್ಕದಲ್ಲಿಯೇ ನಿಂತುಕೊಂಡ ಜೀತದಾಳು “ಏನೂ ಇಲ್ಲ ಗೌಡರ ಮನೆಯಲ್ಲಿ ಕೆಲಸ ಇದೆ ಬನ್ನಿ” ಎಂದು ಹೇಳಿದ
ನಿತೀಶನಿಗೆ ಕೋಪ ಬಂದರೂ ಅವರನ್ನು ಉದ್ದೇಶಿಸಿ ಮತ್ತೊಮ್ಮೆ ಆ ಆಳುಗಳಿಗೆ ಹೇಳುವನು “ನೋಡಿ ಈ ರಾತ್ರಿಯಲ್ಲಿ ಯಾವ ಕೆಲಸವಿದೆ ಗೌಡರ ಮನೆಯಲ್ಲಿ ಮುಂಜಾನೆ ಬಂದು ನೋಡಿಕೊಳ್ಳುತ್ತಾರೆ ಹೋಗಿ” ಎಂದನು.
ಜೀತದಾಳು ಹೇಳುವನು “ನಿನ್ನ ತಂದೆ ಮಾತ್ರ ಗೌಡರ ಮನೆಗೆ ಬರುತ್ತಿಲ್ಲ ಜೊತೆಗೆ ಅಲೆಲ್ಲಾ ಮನೆಯ ಎಂಟು-ಒಂಭತ್ತು ಜನ ಬರುತ್ತಿದ್ದಾರೆ” ಎಂದನು. ನಿತೀಶನು “ಸರಿ ಹಾಗಾದರೆ ನಾನೇ ಬರುವೆ ನಡೆಯಿರಿ” ಎನ್ನುವನು.
ಜೀತದಾಳು “ಅಲ್ಲಿ ನೀನು ಬಂದು ಏನು ಮಾಡುವೆಯಾ? ನಿನ್ನದು ಕೆಲಸವಿಲ್ಲ”.
ನಿತೀಶನ ಅಪ್ಪ “ಲೋ ನಿತಿ ಮನೆಯೊಳಗೆ ಹೋಗುತ್ತಿಯ? ಇಲ್ವ? ಕೋಲೇಟು ತಿಂತ್ತಿಯಾ”. ಎಂದು ೨ ನಿಮಿಷ ಸುಮ್ಮನೆ ನಿಂತುಕೊಂಡಿರುವ ಅವರು ಜೀತದಾಳುಗಳು ಜೊತೆಗೆ ಹೊರಟೆ ಹೋದರು. ನಿತೀಶನು ಮನೆಯೊಳಗೆ ಬಂದು ಎಲ್ಲಾ ಪುಸ್ತಕವನ್ನು ಬದಿಗಿಟ್ಟು ಕುಳಿತುಕೊಂಡ. ಇವನ ಅಪ್ಪನು ಗೌಡರ ಮನೆಗೆ ತಲುಪಿದನು ಜೊತೆಗೆ ಆ ಹಿಂದುಳಿದ ಸಮಾಜದ 10 ಜನ ಆಳುಗಳು ಗೌಡರ ಮನೆಯ ಹಿಂದೆ ಇರುವ ದೊಡ್ಡ ಕಟ್ಟಡದ ಬಳಿ ಎಲ್ಲಾರನ್ನೂ ಕರೆದುಕೊಂಡು ಹಾಗೂ ಮೂರು ದೊಡ್ಡದಾದ ಬೃಹತ ಲಾರಿಗಳು ನಿಂತಿದ್ದವು, ಗೌಡರ ಹಿರಿಮಗ ಅವರಿಗೆ 200 ಅಕ್ಕಿ ಚೀಲಗಳನ್ನು ತೋರಿಸ ತೊಡಗಿದ ಆ ಎಲ್ಲಾ ಅಕ್ಕಿ ಚೀಲಗಳನ್ನು ಲಾರಿಯಲ್ಲಿ ಲೊಡ ಮಾಡುವಂತೆ ಸೂಚನೆ ಹೇಳುತ್ತಿದ್ದ. ಅದನ್ನು ಆ ಎಲ್ಲಾ ಆಳುಗಳು ಒಪ್ಪಿಕೊಂಡರು. ಜೊತೆಗೆ ಕತ್ತಲಲ್ಲಿ ಕಾರ್ಯ ಪ್ರಾರಂಭಿಸಿದರು.
ನಿತೀಷನು ಮೆಲ್ಲನೆ ಮನೆಯಲ್ಲಿ ಆ ಕಂಬ ದಿಂದ ಈ ಕಂಬಕ್ಕೂ, ಈ ಕಂಬದಿಂದ ಆ ಕಂಬಕ್ಕೂ ಸುತ್ತಾಡ ತೊಡಗಿದ. ಅವನ ಅಮ್ಮ ಕೆಮ್ಮುತ್ತಾ ಎದ್ದುಕೊಂಡು ನೀರು ಕುಡಿಯುತ್ತಿದ್ದಳು. ನಿತೀಶನನ್ನೂ ನೋಡಿ ಅವನ ಸಮೀಪಕ್ಕೆ ಬಂದಳು ಬಂದು, “ಏನೋ ನಿತೀಶ ಮಲಗಿಲ್ವ? ತಿರುಗಾಡುತ್ತಿದ್ದೀಯಲ್ಲಾ. ಹೋಗಿ ಮಲಗು ಹೋಗು. ನಡುರಾತ್ರಿಯಾಗಿದೆ ಮಲಗಿಕೊಳ್ಳುವುದು ಬಿಟ್ಟು ತಿರುಗಾಡುತ್ತೀದ್ದಿಯಲ್ಲಪ್ಪ” ಎಂದರು.
‘ನಿತೀಶನು ಮಲಗುತ್ತೇನೆ ಅಮ್ಮ’ ಎಂದು ನೀರು ಕುಡಿದು ಹೊರಟನು, ಮಲಗಲಿಲ್ಲ, ಹೊರತಾಗಿ ಗೌಡರ ಮನೆ ಕಡೆ. ಅಪ್ಪನ ಕಡೆ ಆಲೋಚನೆ ವಹಿಸುತ್ತಿದ್ದ ನಿತೀಶನು ಕೈಯಲ್ಲೊಂದು ಚಿಕ್ಕ ‘ಟಾರ್ಚ್ನ್ನು ಹಿಡಿದು ಹೊರಟನು. ಗೌಡರ ಹಿರಿಮಗನು ಖುರ್ಚಿಯ ಮೇಲೆ ಕುಳಿತುಕೊಂಡು ಕೈಯಲ್ಲೊಂದು ದೀವಿಟಿಗೆ ಹಿಡಿದು ಲಾರಿಗೆ ಅಕ್ಕಿ ಚೀಲಗಳ ಲೋಡನ್ನು ಮಾಡುತ್ತಿದ್ದನ್ನು. ಆ ಹತ್ತಾರು ಆಳುಗಳು ಸ್ವಲ್ಪನಾದರು ಯೋಚಿಸಬಾರದೇ ಯೋಚಿಸಲೇ ಇಲ್ಲ. ಸುಮ್ಮನೆ ಹೆಗಲ ಮೇಲೆ ಚೀಲ ಹಾಕಿಕೊಂಡು ಲಾರಿಯೊಳಗೆ ಹಾಕಿ ಬರುತ್ತಿದ್ದರು. ನಿತೀಶನು ಮನೆಯಿಂದ ಹೊರ ನಡೆದು ಗೌಡರ ಮನೆಗೆ ತಲುಪಿದ. ತಲುಪಿ ಗೌಡರ ಮನೆಯನ್ನು ನೋಡಿದ. ಎಲ್ಲಾ ನಿಶಬ್ದವಾಗಿತ್ತು. ಮನೆಯ ಸುತ್ತಲೂ ಮುಳ್ಳಿನ ಕಂಬಗಳ ಸಾಲುಗಳು, ಮುಚ್ಚಿದ ಮುಳ್ಳಿನ ಬಾಗಿಲು. ಆ ಮನೆಯ ಅಂಗಳದಲ್ಲಿ ಕುದುರೆಗಳು ಹಸಿ ಹುಲ್ಲನ್ನು ತಿನ್ನುತ್ತಿದ್ದವು, ನಾಯಿಗಳ ಕಣ್ಣು ಕತ್ತಲಿಗೆ ಮಿಂಚುತಿದ್ದವು. ಇದನ್ನೆಲ್ಲಾ ನಿತೀಶನು ಹೊರಗಡೆಯಿಂದ ನೋಡಿದನು. ನೋಡಿ ಯೋಚಿಸಿದ ‘ಯಾರೂ ಇಲ್ವಲ್ಲ? ಮತ್ತೆ ನಮ್ಮ ಅಪ್ಪಾಜಿಯನ್ನು ಯಾಕೆ ಇಲ್ಲಿಗೆ ಕರೆ ತಂದಿರಬಹುದು ಮತ್ತು ಇಲ್ಲಿ ಅಪ್ಪಾಜಿ ಇಲ್ಲ. ಎಲ್ಲಿ ಹೋಗಿರಬಹುದು.” ಎಂದು ಬಾಗಿ-ಬಾಗಿ, ಜಿಗಿ-ಜಿಗಿದು ನೋಡಿದನು. ಸ್ವಲ್ಪ ಸಮಯ ಹಾಗೇ ನಿಂತುಕೊಂಡನು. ದೂರದಿಂದ ಅಂದರೇ ಸ್ವಲ್ಪ ಸಮೀಪಕ್ಕೆ ಹೊಗೆ ಬರುತ್ತಿದ್ದದನ್ನು ಇವನ ಮೂಗಿಗೆ ತಲುಪಿತು.

ನಿತೀಶನು ತಟ್ಟನೆ ನಿಂತುಕೊಂಡನು ‘ಯಾರು, ಇದು? ಇಲ್ಲಿ ಧೂಮಪಾನ ಹೊಗೆ ಹೇಗೆ? ಬರುತ್ತಿದೆ. ಆಶ್ಚರ್ಯ ಎಂದು ಸುತ್ತಲೂ ತಿರುಗಿ ನೋಡಿದನು. ಕಟ್ಟಿಗೆಗಳ ಮಧ್ಯದಿಂದ ಆಚೆ ಯಾರೋ ನಿಂತುಕೊಂಡದು ನಿತೀಶನಿಗೆ ಕಾಣತೊಡಗಿದು. ಮೆಲ್ಲನೆ ಆ ಕಟ್ಟಿಗೆಗಳ ಬಳಿ ಬಂದನು. ನಿತೀಶನ ಮಾವ-ಚಿಕ್ಕಪ್ಪ ಇಬ್ಬರು ಹೊರಗಡೆ ಬಂದು ಬೀಡಿಯನ್ನು ಸೇದುತ್ತಿದ್ದರು. ಹಾಗೂ ಅವರಿಬ್ಬರೂ ಮಾತನಾಡುತ್ತಿದ್ದನ್ನು ನಿತೀಶನಿಗೆ ಸ್ವಲ್ಪ-ಸ್ವಲ್ಪ ಕೇಳಿಸತೊಡಗಿತು. ನಂತರ ಅವರು ಅಲ್ಲಿಂದ ಹೊರಟರು. ನಿತೀಶನು ಗೌಡರ ಮನೆಯ ಹಿಂಭಾಗದಲ್ಲಿ ಬಂದು ಇಣಿಕಿ ಇಣಿಕಿ ನೋಡುವನು. ಆ ಎಲ್ಲಾ ಆಳುಗಳು ಆಗಲೇ ಅಕ್ಕಿ ಚೀಲಗಳನ್ನು ೨ ಲಾರಿಯಲ್ಲಿ ಹಾಕಿದ್ದರು. ಉಳಿದದ್ದು ಒಂದೇ ಲಾರಿಯಾಗಿತ್ತು. ಅದನ್ನು ತುಂಬಲು ಹಾಗೇ ಕಾರ್ಯ ನಡೆದಿತ್ತು. ನಿತೀಶ ಅಲ್ಲಿಂದ ನೋಡುವಾಗ ಎಲ್ಲಾ ಸ್ಪಷ್ಟವಾಗಿ ಕಾಣತೊಡಗಿತ್ತು. ಆ ಚೀಲಗಳ ಮೇಲೆ ಸರ್ಕಾರÀ ಎಲ್ಲಾ ಸಂಕೇತ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಜನರಿಗೆ ನೀಡುವಂತಹ ಅಕ್ಕಿಯಾಗಿತ್ತು ಅದು. ಅದನ್ನು ಕಂಡಂತಹ ನಿತೀಶ ಯೋಚಿಸಿದ ಇದು ಸರ್ಕಾರದ್ದು ಅಕ್ಕಿ, ಈ ಅಕ್ಕಿಯನ್ನೂ ಈ ರಾತ್ರಿಯಲ್ಲಿ, ಲಾರಿಯಲ್ಲಿ ತುಂಬಲು ಕಾರಣವೇನು? ಎಂದು ಆಲೋಚಿಸುತ್ತಿದ್ದ. ಪಕ್ಕ ಗೌಡರ ಹಿರಿಮಗ ಹಾಗೂ ಮೂವರು ಲಾರಿ ಚಾಲಕರ ಬಳಿ ಮಾತನಾಡುತ್ತಿದ್ದರು. ಅವರ ಸಮೀಪಕ್ಕೆ ನಿತೀಶ ಬಂದನು. ಅವರ ಹಿಂದೆ ಎಂದು ನಿಂತಂತಹ ನಿತೀಶನ ಸುಳಿವು ಅವರಿಗೆ ತಿಳಿದಿರುವದಿಲ್ಲ. ಗೌಡನು ಅವರ ಲಾರಿಗಳ ಎಲ್ಲಾ ಪಾಸಿಂಗ ಲೈಸನ್ಸ್, ಡ್ರೆöÊವರ ಲೈಸನ್ಸ ಇದಾವೇ ಇಲ್ವ? ಎಂದು ಕೇಳಿ, ಇದನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುವುದಾಗಿ ಎಲ್ಲಾ ಮಾರ್ಗಗಳನ್ನು ತಿಳಸಿಕೊಡುತ್ತಿದ್ದ, ಅದರೊಳಗೆ ಒಬ್ಬ ಡ್ರೈ ವರ “ಗೌಡ್ರೇ ನೀವು ಇಷ್ಟೊಂದು ಅಕ್ಕಿನಾ ಯಾವ ವರ್ಷ ಬೆಳೆದಿದ್ದೀರಾ? ಪ್ರತಿ ವರ್ಷ ಹೀಗೆ ಸಾಗಟಣೆ ಮಾಡುತ್ತಾನೇ ಇರುವಿರಲ್ಲ” ಎಂದನು.
ಗೌಡರು “ಅಯ್ಯೋ ಸ್ವಲ್ಪ ಮೆಲ್ಲಗೆ ಮಾತಾಡು ಕಣಯ್ಯ ! ಇಲ್ಲಿ ಯಾರದರೂ ಕೇಳಿಸಕೊಂಡರೋ. ಹಾಗೂ ನೀವೆಲ್ಲಾ ಹೈದ್ರಾಬಾದ್‌ನ ಟ್ರೆವರ್ ಅಲ್ವ?” ಎಂದು ಗಂಭೀರದಿಂದ ಕೇಳಿ ನೋಡಿದರು.
“ಹೌದು ನಾವೆಲ್ಲಾ ಹೈದರಾಬಾದಿನವರೇ! ಯಾಕೆ?” ಎಂದು ಮತ್ತೊಬ್ಬ ಡ್ರೆವರ ಗೌಡನಿಗೆ ತೆಲುಗಿನಲ್ಲಿ ಕೇಳಿದನು.
ಗೌಡನು ಮನದಲ್ಲಿ “ಇವರಿಗೆ ಹೇಳಿದರೆ ಈ ವಿಷಯ ಯಾವ ತೊಂದರೆಯು ಆಗುವುದಿಲ್ಲವೆಂದು ಹೇಳೋಣ ಬಿಡು ಎಂದು ಅತ್ತ-ಇತ್ತ ನೋಡಿ ಹೇಳಲಾರಂಭಿಸಿದರು.
“ನೋಡಿ ಈ ಎಲ್ಲಾ ರೇಶನ್ಸ್, ಸೀಮೆ ಎಣ್ಣೆ ಇದು ನ್ಯಾಯಬೆಲೆ ಅಂಗಡಿಗೆ ಸೇರಿದ್ದು. ನಮ್ಮೂರ ಜನರಿಗೆ ಇದು ಸೇರಬೇಕಾದದ್ದು, ಸ್ವಲ್ಪ-ಸ್ವಲ್ಪ ಏ. ಅವರುಗಳಿಗೆ ನೀಡಿದ್ದೇವೆ. ನಾವು ನೀಡಿದಷ್ಟು ಅವರು ತೆಗೆದುಕೊಂಡಿದ್ದರೆ ಹೊರತು ತಮಗೆ ಎಷ್ಟು ಬರಬೇಕು ಎಷ್ಟು ಬಿಡಬೇಕು ಎಂಬುದರ ಜ್ಞಾನ ಅವರಿಗಿಲ್ಲ. ಅವರಿಗೆ ನೀಡಿ ಉಳಿದ ಅಕ್ಕಿ ಇದು. ಇದನ್ನು ಕಳ್ಳ ಸಾಗಾಟಣೆ ಮಾಡುತಿದ್ದೇವೆ. ಇದನ್ನು ಯಾರಿಗೂ ತಿಳಿಸಬೇಡಿ ಎಂದು ಮಧ್ಯಪಾನ ಮಾಡುವಂತಹ ಕೆಲವು ವಸ್ತುಗಳನ್ನು ಡ್ರೆವರಗಳಿಗೆ ನೀಡುತ್ತಿದ್ದರು. ಇದನ್ನೆಲ್ಲಾ ದೂರದಿಂದ ನಿತೀಶನು ಕೇಳಿಸಿಕೊಂಡನು. ಅವನಿಗೆ ತಲೆ ತಿರುಗಿ ಹೋದಂತಾಗಿ ಏನು ಮಾಡಲು ತೋಚದೆ “ಏನಿದು ೨೦೦ ಚೀಲ ಅಕ್ಕಿ ಉಳಿದಿದೆ ಸರ್ಕಾರ ಜನರಿಗೆ ನೀಡುತ್ತದೆ. ಪ್ರತಿಬಾರಿ ಸರ್ಕಾರದಿಂದ ಬಂದಂತಹ ಪದಾರ್ಥದಲ್ಲಿ ಎಲ್ಲಾನೂ ತಾವೇ ತೆಗೆದಿಟ್ಟುಕೊಳ್ಳುತ್ತಾರೆ. ನಮ್ಮೂರಿನ ನ್ಯಾಯ ಬೆಲೆ ಅಂಗಡಿಗೆ ಉಚಿತವಾಗಿ ಬರುವ ಈ ಪದಾರ್ಥವನ್ನು ಗೌಡರು ವಿತರಣೆ ಮಾಡುವ ಅಧಿಕಾರ ಪಡೆದುಕೊಂಡಿದ್ದಾರೆ. ಆದರೇ ಇವರೆಲ್ಲಾ ನಮಗೆ ಸರಿಯಾದ ರೀತಿಯಲ್ಲಿ ನೀಡದೇ, ಈವಾಗ ಇದನ್ನು ಕಳ್ಳಸಾಗಣೆ ಮಾಡಿ ಬಂದಂತಹ ಹಣವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಸ್ವಾರ್ಥಿಗಳು. ಮಳೆ ಬಂದು ಹೊಲ-ಗದ್ದೆ ಹಾಳಾಗಿ ನಿಂತುಕೊಂಡಾಗ ಉಪವಾಸದಿಂದ ಉಳಿದ ಜನರಿಗೆ ಅಕ್ಕಿಯಿಲ್ಲ, ಏನು ಇಲ್ಲ ಎಂದು ಉತ್ತರಿಸಿದ ಗೌಡರು ‘ಥೂ’ ಇಷ್ಟೊಂದು ಕ್ರೂರರು ಅಂತ ತಿಳಿದಿರಲಿಲ್ಲ. ನಮ್ಮ ಜನರಲ್ಲಿ ತಿಳುವಳಿಕೆ ಇದ್ದರೆ ಇಷ್ಟೊಂದು ತೊಂದರೆ ಅನುಭವಿಸಬೇಕಾಗುತ್ತೀತಾ? ಅಪ್ಪ, ಚಿಕ್ಕಪ್ಪ, ಮಾವ ಎಲ್ಲರೂ ಹೇಗೆ ಹೆಗಲ ಮೇಲೆ ಹೊತ್ತುಕೊಂಡು ಹೊಯ್ಯುತ್ತಿದ್ದರೆ ಸ್ವಲ್ಪನಾದರೂ ಯೋಚನೆ ಬೇಡವೆ! ಒಗ್ಗಟ್ಟಾಗಿ ಅವರನ್ನು ಕೇಳಿದರೆ ಗೌಡರಿಗೂ ಭಯವಿರುತ್ತದೆ. ಇಲ್ಲ, ಇಂತಹ ಕ್ರೂರ ಶ್ರೀಮಂತನಿಗೆ ಕೇಳಲು ಹೋದರೆ ಜೀವ ಹೋಗುವಂತಹ ಶಿಕ್ಷೆ ನೀಡುತ್ತಾನೆ. ಹಾಗಾಗಿ ಹೆದರಿದ್ದಾರೆ ಜನರು. ಇವನನ್ನು ಒಳ ಅವಮಾನ ಮಾಡಬೇಕು. ತಪ್ಪಿಗೆ ಶಿಕ್ಷೆ ನೀಡಿಸಲೇ ಬೇಕು. ಆದರೇ ನಾನೊಬ್ಬನೆ ಮಾಡೋದೇನು? ಇಲ್ಲ. ಹೋಗಿ ಗೌಡರಿಗೆ ಕೇಳಿ ಅಕ್ಕಿಯನ್ನು ಜನರಿಗೆ ನೀಡಿ ಎಂದು ಬೇಡಲೇ ಅಥವಾ ಮಲಗಿರುವ ಊರ ಜನರನ್ನು ಎಬ್ಬಿಸಿ ‘ನಮಗೆ ಸೇರುವ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಲೇ! ತಿಳಿಸಲು ಹೋದರೆ ಯಾರು ಗೌಡರ ವಿರುದ್ಧ ಕೇಳಲು ಮುಂದಾಗುವುದಿಲ್ಲ. ನನಗೆ ಸಹಾಯ ಮಾಡುವವರೂ ಯಾರೂ ಇಲ್ವಲ್ಲ ಮಾಡುವುದಾದರೂ ಏನು? ದೇವರೇ ಅದೇಷ್ಟು ನಮ್ಮೂರಿನ ಕುಟುಂಬಗಳು ತಿನ್ನಲು ಅನ್ನವಿಲ್ಲದೆ ಗೋಳಾಡುತ್ತಿವೆ. ಹಾಳಾದ ಗೌಡನಿಗೆ ಕೇಳಲು ಹೋದರೆ ಆ ಕುಟುಂಬಗಳ ಕೂಸುಗಳನ್ನು ಜೀತವಾಗಿಟ್ಟುಕೊಂಡು ಭತ್ತ ನೀಡುತ್ತಾನೆ. ನಮಗೆ ಸೇರಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಅನುಭವಿಸುವ ಭಾಗ್ಯವಿಲ್ಲದಂತಾಗಿದೆ.” ಎಂದ ಕೊನೆಗೂ ತೀರ್ಮಾನಕ್ಕೆ ಬಂದೇ ಬಿಟ್ಟನು. ಆ ತೀರ್ಮಾನವೇ ಇವನ ಜೀವನದಲ್ಲಿ ಬದಲಾವಣೆ ತರುವ ಸ್ಥಿತಿಗೆ ಬರುತ್ತದೆ.
ಸಮಯ ನೋಡಿಕೊಂಡನು ಆಗಲೇ 12.45 ನಿಮಿಷವಾಗಿತ್ತು. 3 ಲಾರಿಗಳು ಸಿಫ್ಟ್ ಆಗಿ ಆಂಧ್ರಕ್ಕೆ ಹೊರಡಲು ಸಿದ್ಧವಾಗುತ್ತಿದ್ದವು. ಗೌಡನು ಚೀಲವನ್ನು ಹೊತ್ತು ಹಾಕಿದ ರೈತರಿಗೆ ಸ್ವಲ್ಪ ಭತ್ತವನ್ನು ನೀಡಿ ಕಳುಹಿಸುತ್ತಿದ್ದ ಹಾಗೂ ತಿoಡಿ ತೀರ್ಥ ಸಹ ಮಾಡಿದ “ಯಾರಿಗೂ ಹೇಳಬೇಡಿ” ಎಂದು ಹೇಳಿದ.
ನಿತೀಶನು ಓಡಿದ ಓಡಿದ ಬರೋಬ್ಬರಿ 10 ಕಿ.ಮೀ. ಓಡಿದ. ಇನ್ನೇನು ಪಕ್ಕದ ಅವನ ಊರಿನ ಹೋಬಳಿ ಮಟ್ಟದ ಊರು ಬಂದಾಯಿತು ಪೋಲಿಸ ಸ್ಟೇಶನಗೆ ಹೋಗಿ ಬಾಗಿಲು ತಟ್ಟಿದ್ದ. ತಟ್ಟಿ ನೆಲಕ್ಕೆ ಉರುಳಿದ. ನಿತೀಶನ ಪುಣ್ಯದ ಫಲವೋ ಅಥವಾ ಅವನ ಸಮಾಜ ಸೇವೆಯ ಧರ್ಮವೋ ಅಂದು ಆ ಸ್ಟೇಶನದಲ್ಲಿ ಎಲ್ಲಾ ಪೋಲಿಸರು ಅಲ್ಲಿಯೇ ಉಳಿದುಕೊಂಡಿದ್ದರು. ದಿನಾಲೂ ಮನೆಗೆ ಹೋಗುವ ಎಲ್ಲಾ S.P. ಪೋಲಿಸರಿಂದ – ಕಾನ್ಸಟೇಬಲವರೆಗೂ ಎಲ್ಲರೂ ಅಲ್ಲಿಯೇ ಮಲಗಿದ್ದರು. ಯಾಕೆಂದರೆ ಪೋಲಿಸರಿಗೆ ಕೆಲಸ ಕಮ್ಮಿ ಇರುತ್ತಿತ್ತು ಹಾಗಾಗಿ ಮನೆ ಕಡೆ ಹೋಗುತ್ತಿದ್ದರು. ಇವನ ಉಸಿರು ಬಡಿತದ ಶಬ್ದ ಕೇಳಿ ಎಲ್ಲಾ ಎಚ್ಚರವಾದರೂ. 5 ನಿಮಿಷಗಳ ಕಾಲ ಆ ಎಲ್ಲಾ ಪೋಲಿಸರ ಮುಖದ ಮೇಲೆ ಕೋಪ ಆಕ್ರೋಶಗೊಂಡಿತ್ತು. ನಿತೀಶನು “ಸರ್ ದಯವಿಟ್ಟು! ಈ ನಡುರಾತ್ರಿ ನಾನು ನಿಮಗೆ ತೊಂದರೆ ಮಾಡಿರಬಹುದು. ನಿದ್ದೆಯನ್ನು ಹಾಳು ಮಾಡಿರಬಹುದು `ನನ್ನನ್ನು ಕ್ಷಮಿಸಿ ಸರ್ ’ ಎಂದು ಕಣ್ಣೀನ ತೋಳಲಾಟ, 2 ಕೈಗಳ ಸೂಚನೆ, ಹುಬ್ಬುಗಳ ಜೋಡಣೆಯಿಂದ ನನ್ನ ದೂರನ್ನು ಕೇಳಿ ಈಗಲೇ ಅದರ ತಪಾಸಣೆ ನಡೆಸಲೇಬೇಕು.” ಎಂದನು. ಇದನ್ನೆಲ್ಲಾ ಕೇಳುತ್ತಾ ನಿಂತಿದ್ದ ಪೋಲಿಸರಿಗೆ ಇಲ್ಲಿ ಏನಾದರೂ ಜರುಗುತ್ತಾ ಇರಬಹುದು ಅನಿಸಿದರು. ಆ ದೂರು ಏನೆಂದು ನಿತೀಶನನ್ನು ಕೆಳಗೆ ಕೂಳಿರಿಸಿ, ಕುಡಿಯಲು ನೀರು ನೀಡಿ, ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಹೊರಡಲು ಸಿದ್ಧರಾದರು. ಆ ಸ್ಟೇಶನ್‌ನ ಹಿರಿಯ ಪೋಲಿಸರು ಕೇಳಿದರು.
“ಮಗು ನಿನ್ನ ಹೆಸರೇನು? ನೀನು ಅಷ್ಟೊಂದು ಬೇಡಿಕೊಳ್ಳುವ ಅವಶ್ಯಕತೆ ಇಲ್ಲ. ಅದು ನಮ್ಮ ಜವಾಬ್ದಾರಿ ನಾವು ಮಾಡುತ್ತೇವೆ. ನೀನು ಒಂದು ಹಾಳೆಯ ಮೇಲೆ ದೂರನ್ನು ಬರೆದುಕೊಡು. ನಿಮ್ಮ ಊರು ನಮಗೆ ಗೊತ್ತು, ನಿಮ್ಮ ಊರಿನ ಗೌಡರು ಒಳ್ಳೆಯವರು ಎಂದು ತಿಳಿದಿದ್ದೆ ಅವರು ಇಂತಹ ಕೆಲಸವನ್ನು ಮಾಡುವರ? ಆಯಿತು! ನಮ್ಮ ಸಿಬ್ಬಂದಿಗಳು ಆ ಲಾರಿಗಳನ್ನು ಹಿಡಿದು, ನಿಮ್ಮ ಕುಟುಂಬಗಳಿಗೆ ಅಕ್ಕಿ ತಲುಪುತ್ತವೆ ಯೋಚಿಸಬೇಡ” ಎಂದು ಧೈರ್ಯ ತುಂಬಿದರು ಜೊತೆಗೆ ಸಿಬ್ಬಂದಿ ವರ್ಗ ಆಂಧ್ರಪ್ರದೇಶದ ಕಡೆ ನಡೆದರು. ನಿತೀಶನನ್ನು ಸ್ಟೇಶನನಲ್ಲಿಯೇ ಕುಳಿರಿಸಿಕೊಂಡು. ಪೆನ್ನು ಮತ್ತು ಹಾಳೆಯನ್ನು ನೀಡಿದರು ಅವರು ಖುರ್ಚಿಗೆ ಒರಗಿ ಕಣ್ಣು ಮುಚ್ಚಿ ಕುಳಿತುಕೊಂಡರು. ನಿತಿಯು ಆ ಹಾಳೆಯ ಮೇಲೆ ತನ್ನ ಸಂಪೂರ್ಣ ವಿಳಾಸ ಹಾಕಿ ತುಂಬ ಅಚ್ಚು ಕಟ್ಟಾಗಿ ಸಂಪೂರ್ಣವಾಗಿ ಗೌಡರ ಮೇಲೆ ದೂರನ್ನು ಬರೆದು ಸುಮ್ಮನೆ ಕುಳಿತುಕೊಂಡನು. ಪೋಲೀಸರು ಕಣ್ಣು ಮುಚ್ಚಿ ನಿದ್ದೆಯಲ್ಲಿ ಮುಳುಗಿದ್ದರು. ಗಡಿಯಾರ ನೋಡಿದ ಸಮಯ 12.30 ಆಗಿತ್ತು ಸುತ್ತಲ ಕತ್ತಲೋ ಕತ್ತಲು. ಅವನಿಗೆ ಧೈರ್ಯ ಬಂದಾಗಿತ್ತು. ‘ಹೇಗಿದ್ದರೂ ಗೌಡರು ಸಾಗಿಸುವ ಕಳ್ಳ ಸಾಗಟಣೆ ಅಕ್ಕಿ ಪೋಲಿಸರ ವಶಕ್ಕೆ ಸಿಗುವದು. ಎಂತಹ ನಿಷ್ಟಾವಂತಹ ಸ್ಟೇಶನ ಇದು. ಖುಷಿಯಾಯಿತು ಅವನಿಗೆ ಲೋಕದಲ್ಲಿ ಯಾರಾದರೂ ಒಳ್ಳೆಯವರು ಇದ್ದರಲ್ಲ ಅಂತೇಳಿ. ಪೋಲಿಸರನ್ನು ಎಚ್ಚರಿಸದೆ ಕುಳಿತಿದ್ದ. ಕೊನೆಗೆ ಅವರೇ ಎಚ್ಚರಗೊಳ್ಳುವರು.
ಎಚ್ಚರವಾಗಿ “ಏನೋ ದೂರು ಬರೆದಿದೀಯಾ?” ಎಂದು ಪ್ರಶ್ನೆ ಕೇಳುವರು. ಅದಕ್ಕೆ ಪುನಃ ಉತ್ತರಿಸಿದ ನಿತೀಶನು
“ಹ್ಹಾ ! ಸರ್ ಬರೆದಿರುವೆ, ನೋಡಿ” ಎಂದನು. ಕಣ್ಣುತುಂಬ ನಿದ್ದೆ ತುಂಬಿಕೊಂಡಿರುವ ಪೋಲಿಸರಿಗೆ ತನ್ನ ದೂರನ್ನು ಕೈಯಿಗೆ ನೀಡಿದ ನಿತೀಶ. ಅವರು ನಿದ್ರೆಯ ಮಂಪರಿನಲ್ಲಿದ್ದರು ಹಾಗಾಗಿ ಆ ಹಾಳೆ ಪೋಲಿಸರ ಕೈಯಿಂದ ಕೆಳಗೆ ಬಿತ್ತು. ಪುನಃ ಅದನ್ನು ಎತ್ತಿಕೊಟ್ಟನು. ಪೋಲಿಸರು ಆ ಹಾಳೆ ನೋಡುತ್ತಾರೆ ಅವನು ದೂರು ಎಷ್ಟೊಂದು ಅಚ್ಚುಕಟ್ಟಾಗಿ ಬರೆದಿದ್ದನು. ಅಂದರೇ ಪೋಲಿಸರಿಗೆ ಆಶ್ಚರ್ಯವಾಗಿ, ನಿದ್ರೆ ಎಂಬ ರೋಗ ಅವರಿಂದ ಓಡಿ ಹೋಯಿತು ಆ ಪ್ರತಿಯನ್ನು ನೋಡಿದ ತಕ್ಷಣ. 5 ನಿಮಿಷಗಳ ಕಾಲ ಓದಿದರು. ಅದರೊಳಗೆ ನಿತೀಶನ ಆ ಶ್ರೀಮಂತ ಮನೆತನ ನಡೆಸುತ್ತಿರುವ ಎಲ್ಲಾ ದರ್ಬಾರನ್ನು, ತನ್ನ ಊರಿಗೆ ಮಾಡುವ ಕೆಲವೊಂದು ಕೆಟ್ಟ ಚಟುವಟಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳಲೇ ಬೇಕು ಕಡ್ಡಾಯವಾಗಿ ಹಾಗೂ ಸಾಗಟನೆ ಮಾಡುತ್ತಿರುವ ದಾಸ್ತಾನಿನ ಮೂಟೆಗಳ ಸಂಖ್ಯೆಯನ್ನು ಓದಿದ ಅವರಿಗೆ ನಿತೀಶನ ಮೇಲೆ ಬಹಳ ಗೌರವ ಬಂದಾಯಿತು. ಕೊನೆಗೂ ಕೇಳಿಯೇ ಬಿಟ್ಟರು.
“ನೀನು ಯಾರು? ನಿನ್ನ ವಿದ್ಯಾರ್ಹತೆ ಏನು? ನಿನ್ನ ಜಾಣ್ಮೆಯೆನು? ನಿನ್ನ ಧೈರ್ಯಕ್ಕೆ ಕಾರಣವೇನು?” ಎಂಬ 5-6 ಪ್ರಶ್ನೆಗಳನ್ನು ಆ ಹಿರಿಯ ಪೋಲಿಸರು ನಿತೀಶನಿಗೆ ಕೇಳಿದರು. ನಿತೀಶನು ಸರಿಯಾಗಿಯೇ ಉತ್ತರಿಸಿದನು. ಇಬ್ಬರ ಮಧ್ಯೆ ಸಂವಾದ ನಡೆಯುತ್ತಿರಬೇಕಾದರೇ ಟೆಲಿಫೋನಗೊಂದು ಕರೆ ಬಂದಾಯಿತು. ಅದನ್ನು ರಿಸೀವ್ ಮಾಡಿದ ಕಾನ್ಸ್ಟೇಬಲ ಹಿರಿಯ ಪೋಲಿಸರ ಬಳಿ ಹೋಗಿ. “ಸರ್ ಆ ಗೌಡರ ಲಾರಿಗಳು ದೊರಕಿವೆ ಅಂತೆ ಅದರಲ್ಲಿ ಇರುವ ಎಲ್ಲಾ ಮೂಟೆಗಳು ಸರ್ಕಾರಕ್ಕೆ ಸೇರಿದ ಮೂಟೆಯಾಗಿದ್ದು ಗೌಡರ ಹಿರಿಮಗ ಮತ್ತು ಡ್ರೆವರಗಳನ್ನು ಅರೆಸ್ಟ ಮಾಡಿದ್ದರಂತೆ ಸರ್” ಎಂದನು.
ನಿತೀಶನು ಎಲ್ಲಾವನ್ನು ಸುಮ್ಮನೆ ಆಲಿಸುತ್ತಿದ್ದ. ಪೋಲಿಸರು ನಿತೀಶನ ಬಳಿ ಬಂದು “ನೋಡು ನಿತೀಶಕುಮಾರ ನಿನ್ನ ಜಾಣ್ಮೆ ಕಾರ್ಯಕ್ಕಾಗಿ ಒಳ್ಳೆಯ ಕೆಲಸವನ್ನೇ ಮಾಡಿರುವೆ ನಿನ್ನ ಆರೈಕೆಯು ಇಡೇರಿತು ಕಣೋ ! ನಾಳೆನೆ ನಿಮಗೆ ಸೇರಬೇಕಾದ ದವಸ-ಧಾನ್ಯ ಸೇರುತ್ತದೆ. ಆದರೇ ಗೌಡರೂ ಇಷ್ಟು ಕ್ರೂರರೆಂದು ನಾನು ತಿಳಿದಿರಲಿಲ್ಲ.” ಎಂದು ಪೋಲಿಸರು ಬೇಜಾರಿನಿಂದ ನುಡಿದರು. ಮಂಕಾಗಿ ಕುಳಿತಿರುವ ನಿತೀಶನನ್ನು ನೋಡಿ. ಅವರು ಅವನ ಬಳಿ ಹೋಗಿ ತಲೆ ಹಿಡಿದು ಪ್ರೀತಿಯಿಂದ ತಲೆಯ ಮೇಲೆ ಕೈಯಾಡಿಸಿ ಕೇಳಿದರು. “ಯಾಕೋ ನಿತಿಕುಮಾರ ಯಾಕಿಷ್ಟು ಮಂಕಾಗಿರುವೆ?” ಎಂದರು. ನಿತೀಶನು ಅಲ್ಲಿಂದ ಎದ್ದು ನಿಂತು “ಸರ್ ನಾನು ನೀಡಿದ ದೂರನ್ನು ವಾಪಸ್ಸು ತೆಗೆದುಕೊಳ್ಳುತ್ತೆನೆ” ಎಂದನು.
“ಯಾಕಪ್ಪ? ಏನಾಯ್ತು?” ಎಂದರು.
“ಸರ್, ನಾಳೆ ನಮ್ಮೂರಿನಲ್ಲಿ ಈ ವಿಷಯ ತಿಳಿದರೆ ಗೌಡರ ಮರ್ಯಾದೆಯಲ್ಲ ಹಾಳಾಗುತ್ತದೆ”.
“ಇದೆ ಬೇಡ ಅನ್ನುವುದು. ನಿನ್ನ ಹಾಗೇ ಕಣೋ ನಿನ್ನ ಹಿರಿಯರು ಅವರಿಗೆ ಅಂಜಿಕೆ ಪಡೆದು, ಗೌರವ, ಮರ್ಯಾದೆ ನೀಡಿ ಇವತ್ತು ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಬಂದಿರುವ ನಾಯಕನೇ ಹೆದರಬೆಡ ಒಳ್ಳೇಯ ಕಾರ್ಯವನ್ನು ಮಾಡಿರುವೆ.” ಎನ್ನುವರು.
“ತುಂಬ ಧನ್ಯವಾದಗಳು ತಮಗೆ. ನಾನು ಇನ್ನು ಮನೆ ಕಡೆ ಹೊರಡುವೆ ಸರ್” ಎಂದು ನಿತೀಶನು ಮನೆಗೆ ಮರಳಿದನು. ಪೋಲಿಸರು ನಿತೀಶಕುಮಾರನಿಗೆ ಧೈರ್ಯ ಹೇಳಿ ಕಳುಹಿಸಿದರು. ಬೆಳಿಗ್ಗೆಯಾದರೇ ಅಂದು ಸ್ವಾತಂತ್ರದ ದಿನಾಚರಣೆ ಇರುವುದರಿಂದಾಗಿ ಎಲ್ಲಾ ಸಿದ್ಧತೆ ಮಾಡ ತೊಡಗಿದರು ಬೆಳಿಗ್ಗೆ 5.15 ನಿಮಿಷವಾಯಿತು. ಗೌಡರ ಲಾರಿಗಳು, ಗೌಡರ ಹಿರಿಮಗ, ಡ್ರೆವರ ಪೋಲಿಸ ಠಾಣೆಗೆ ಬಂದರು. ಗೌಡರ ಮಗ ಆಗಲೇ ಅರ್ಧ ಹುಚ್ಚನಾಗಿದ್ದನು. ಏನು ಎತ್ತ, ಏನಾಯಿತು ಎಂಬುದನ್ನು ಯೋಚಿಸಿದರು ಉತ್ತರ ದೊರಕಲಿಲ್ಲ.


ಅಂದು ‘ಸ್ವಾತಂತ್ರö್ಯ ದಿನಾಚರಣೆ’ ಊರೊಳಗೆ ಏನೋ ಒಂದು ರೀತಿಯ ಕಳವಳ ಜನರಲ್ಲಿ, ಆಗಲೇ ಊರೊಳಗೆ ವಿಷಯ ಹರಡಿತ್ತು. ಗೌಡರ ಮನೆಯಲ್ಲಿ ಎಲ್ಲರೂ ಮುಖ ಸಪ್ಪಗೆ ಹೊತ್ತುಕೊಂಡು ಕುಳಿತಿದ್ದರು. ಶಾಲೆಯ ಆವರಣದಲ್ಲಿ ಪ್ರತಿವರ್ಷ ಗೌಡರು ಧ್ವಜಾರೋಹಣ ಮಾಡುತ್ತಿದ್ದರು ಆದರೇ ಈ ವರ್ಷ ಅವರು ಶಾಲೆಗೆ ಹಾಜರಾಗದೇ ಇರುವ ಕಾರಣಕ್ಕಾಗಿ ಆ ನಿತೀಶನ ಶಾಲೆಯ ಮುಖ್ಯ ಗುರುಗಳು ಆ ಕಾರ್ಯಕ್ರಮ ನಡೆಸಿದರು.
ಧೂಳೋ ಧೂಳು! ಶಬ್ದ ಅಂತೂ ಜೋರು ಎಲ್ಲರ ಕಣ್ಣು ಊರು ಆಚೆಗಿನ ಡಬ್ಬಾ ರಸ್ತೆ ಕಡೆ ನೋಡುತ್ತಿದ್ದರು. ಮಹಿಳೆಯರು ತಲೆಯ ಮೇಲೆ ಸೀರೆಯ ಸೆರಗನ್ನು ಹಾಕಿಕೊಂಡು ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಎತ್ತಿಕೊಂಡು ಗುಡಿಸಲೊಳಗೆ ಒಳ ನಡೆದರು ಇನ್ನೂ ವೃದ್ಧರು ರಸ್ತೆ ಪಕ್ಕ ಬರದೇ ಆಚೆಯೇ ನಡೆಯುತ್ತಿದ್ದರು. ಕೊನೆಗೂ ಲಾರಿಗಳು, ಪೋಲಿಸರ ಎರಡು ವಾಹನಗಳು ಊರೊಳಗೆ ಬಂದೇ ಬಿಟ್ಟವು. ಯಾರಾದರೂ ಮಾತಾಡಬೇಕಲ್ಲವೇ ಯಾರು ಇಲ್ಲ. ಪೋಲಿಸರು ನೇರ ಗೌಡರ ಮನೆ ಕಡೆ ನಡೆದರು. ಹೋಗಿ ನಿಂತುಕೊAಡರು. ಗೌಡರು ಹೊರಗಡೆ ಬರಲಿಲ್ಲ. ಊರ ಜನರು ಸಹ ಮನೆಯ ಬಾಗಿಲು ಹಾಕಿಕೊಂಡು ಕುಳಿತಿದ್ದರು. ೧೦-೧೫ ನಿಮಿಷ ನಿಶಬ್ದ ವಾತಾವರಣ ಆ ಹಳ್ಳಿಯ ಪ್ರಾಣಿ-ಪಕ್ಷಿಗಳು ಆಹಾರ ಮುಟ್ಟದೇ, ಸೂರ್ಯನ ಕಿರಣಗಳು ಬಾಗದೇ, ಹೂ-ಕುಸುಮ ಪರಿಮಳ ಬೀರದೆ, ಮರ-ಗಿಡಗಳ ಎಲೆ ಅಲ್ಲಾಡದೇ ತಟಸ್ಥವಾಗಿದ್ದವು, ಪೋಲಿಸರಿಗೆ ಆಶ್ಚರ್ಯವೇ ಆಶ್ಚರ್ಯ. ಕೊನೆಗೂ ಹಿರಿಯ ಪೊಲೀಸರು ಗೌರವ ಪೂರ್ವಕವಾಗಿ ಗೌಡರನ್ನು ಕರೆದರು. ಏನು ಪ್ರತಿಕ್ರಿಯಿಸದ ಅವರು 10 ಬಲಶಾಲಿ ಆಳುಗಳನ್ನು ಕಳುಹಿಸಿದರು. ಪೊಲೀಸರ ಬಳಿ ಬಂದ ಅವರಲ್ಲಿ ಒಬ್ಬ
“ನಮ್ಮ ಊರಲ್ಲಿ ಇರುವೆ ಉಸಿರಾಡಬೇಕಾದರೂ ಗೌಡರ ಅನುಮತಿ ಪಡೆದುಕೊಳ್ಳಬೇಕು? ಹೀಗಿರುವಾಗ ಗೌಡರ ಹಿರಿ ವಂಶ ಉದ್ದಾರಕ, ಕುಲಪುತ್ರನನ್ನು ಅರೆಸ್ಟ್ ಮಾಡುವುದಲ್ಲದೇ ಗೌಡರ ಮಾನ ಹರಾಜು ಮಾಡಿದ್ದೀರಾ ಎಷ್ಟು ನಿಮಗೆ ಧೈರ್ಯ.” ಎಂದನು. ಅವನು ಹೇಳಿದ್ದನ್ನು ಕೇಳಿದ ಹೆಡ್ ಕಾನ್ಸಟೆಬಲ್ ಗೆ ಕ್ರೋಧ ಉಂಟಾಗಿ.
“ಏಯ್! ನಿಮ್ಮ ಗೌಡರ ಜೊತೆ ಮಾತಾಡಬೇಕು ಅವರನ್ನು ಹೊರ ಕರೆಯಿರಿ” ಎಂದರು ಪೊಲೀಸರು.
“ಪೊಲೀಸ ಸಾಹೇಬ ನಮ್ಮ ಊರಿಗೆ ಬಂದಿರುವೆ ನಿಗಾ ಇರಲಿ ನಿನ್ನ ಮಾತಿನಲ್ಲಿ” ಆ ಆಳು ಹೇಳಿದ. ಅದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು “ನಿನ್ನ ಮಾತಿನಲ್ಲಿ ನಿಗಾ ಇರಲಿ ಹೊರತು ನನಗೆ ಬುದ್ಧಿ ಹೇಳುವೆಯಾ? ಗೌಡರ ಬಗ್ಗೆ ಗೌರವ ಇದೆ. ಆದರೇ ಅವರು ನಡೆಸಿದ ಕಾರ್ಯದ ಮೇಲೆ ಶಿಕ್ಷೆ ಇದೆ. ಎಷ್ಟು ದಿನ ಅಂತ ಈ ಹಳ್ಳಿ ಜನರಿಗೆ ತೊಂದರೆ ನೀಡುತ್ತಾರೆ. ಹೆಚ್ಚು ಮಾತಾಡಲು ಸಮಯವಿಲ್ಲ. ಕರೆಯೋ ಅವರನ್ನು ಹೊರಗೆ” ಎಂದರು.
“ಯಾವ ಆಧಾರದ ಮೇಲೆ ಅವರನ್ನು ನೀವು ತಪಾಸಣೆ ನಡೆಸುವಿರಿ”
“ಆಧಾರ ಇರುವ ಸಲುವಾಗಿಯೇ ಇಲ್ಲಿಯವರೆಗೂ ಬಂದು ತಪಾಸಣೆ ನಡೆಸುತ್ತಿರುವುದು ಈ ಲಾರಿಗಳು ನಿನ್ನ ಕಣ್ಣಿಗೆ ಕಾಣಿಸುತ್ತಿಲ್ಲವೆ ? ಈ ಸಾಗಟಣೆಗಾಗಿ ಹಿರಿಮಗನನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ದೂರು ಅಲ್ಲಿ ದಾಖಲಿಸಿದ ಗೌಡರ ಮೇಲೆ ತಕ್ಕ ತಪಾಸಣೆ ನಡೆಸಿ ಹೋಗಬೇಕಾಗಿದೆ” ಎಂದರು. ಕಟ್ಟಿಗೆಯ ಖುರ್ಚಿಯ ಮೇಲೆ ಕುಳಿತು, ಬೆಳ್ಳನೆಯ ಬಟ್ಟೆ ಧರಿಸಿ, ಕೊರಳ ತುಂಬ ಜನೆವಾರ ಧರೆಸಿ, ಹಣೆಯ ಮೇಲೆ ವಿಭೂತಿ ಬರೆದುಕೊಂಡು, ಕಿವಿಯಲ್ಲಿ ಚಿಕ್ಕ ಗಾತ್ರ ಓಲೆ ಇವೆ. ಒಮ್ಮೆ ನಿಂತುಕೊಂಡರು ಮತ್ತೊಬ್ಬ ಆಳು ಚಪ್ಪಲಿಯನ್ನು ಕೆಳ ಹಾಕಿದನು. ಇನ್ನೊಬ್ಬ ಓಡಿ ಬಂದು ಶ್ರೀಗಂಧದ ಕಟ್ಟಿಗೆಯ ಖುರ್ಚಿಯನ್ನು ಹೊರತಂದು ಪೊಲೀಸರಿಂದ 10-15 ಮೀಟರ ಅಂತರದಲ್ಲಿ ಆ ಖುರ್ಚಿಯನ್ನು ಹಾಕಿದನು. ಆ ಹಿರಿ ಗೌಡ ಬಂದು ಕುಳಿತು ಕೇಳುವಷ್ಟರಲ್ಲಿಯೇ ಮತ್ತೊಬ್ಬ ಕೊಡೆಯನ್ನು ಹಿಡಿದು ನಿಂತನು. ಪೊಲೀಸರನ್ನು ಕುಳಿತುಕೊಳ್ಳಲು ಹೇಳದೆ, ಮಾತಾಡಿಸದೆ, ನೇರ ಆ ಪೊಲೀಸರನ್ನೇ ನೋಡುತ್ತಿದ್ದರು. ಅಷ್ಟರಲ್ಲಿಯೇ ಒಬ್ಬ ಹಿರಿಯ ಪೋಲಿಸರು ಮುಂದೆ ಬಂದು.
“ಗೌಡರೇ ತಮ್ಮ ಹೆಸರ ಮೇಲೆ ದೂರು ಬಂದಿರುವ ಕಾರಣಕ್ಕಾಗಿ ನಾವು ಇಲ್ಲಿಯವರೆಗೂ ಬಂದೂ ತಪಾಸಣೆ ಮಾಡಬೇಕಾಯಿತು ಹಾಗೂ ಈ ಎಲ್ಲಾ ಅಕ್ಕಿಯು ಸಾರ್ವಜನಿಕರಿಗೆ ಸೇರಬೇಕಾದದ್ದು ಇದು ನಾವು ಜಪ್ತಿ ಮಾಡಿದ್ದೇವೆ. ಹಾಗಾಗಿ ಈ 200 ಮೂಟೆಯ ಅಕ್ಕಿಯನ್ನು ಸಾರ್ವಜನಿಕರಿಗೆ ಹಂಚಲಾಗುತ್ತದೆ. ನಿಮ್ಮ ಬಗ್ಗೆ ನಾನು ಒಳ್ಳೇಯದನ್ನೇ ಭಾವಿಸಿದ್ದೆ ಆದರೇ ನೀವು ಇಷ್ಟೊಂದು ಸ್ವಾರ್ಥಿಗಳೆಂದು ತಿಳಿದಿರಲಿಲ್ಲ” ಎಂದರು. ಕೈಯಲ್ಲಿನ ಎಲ್ಲಾ ಬೆರಳು ಮಡಚಿಕೊಂಡಿದ್ದವು ಹೆಬ್ಬೆರಳು ಹಣೆಯನ್ನು ಸವರಿಸುತ್ತಿದ್ದರು. ಆ ಗೌಡರು ಪೊಲೀಸರ ಮಾತು ಕೇಳಿ ಮೇಲೇಳುತ್ತಿರುವಾಗ ಕುಳಿತಕೊಂಡ ಖುರ್ಚಿಯನ್ನು ತಳ್ಳಿ ಮೇಲೆದ್ದು. ಜೋರಾಗಿ.
“ಏ! ಯಾವ ಸೂಳೆಮಗ ನನ್ನ ಹೆಸರ ಮೇಲೆ ದೂರು ನೀಡಿದ್ದಾನೆ. ಅದನ್ನು ನನಗೆ ಮೊದಲು ತಿಳಿಸು. ಅಲ್ಲೆಲ್ಲ ನೋಡು ನಿನ್ನ ಹಿಂದೆ, ಸುತ್ತಲೂ ಒಬ್ಬರಾದರು ನಿಂತುಕೊಂಡಿದ್ದರಾ? ಯಾವನು ಇಲ್ಲ. ಅಂದ ಮೇಲೆ ನಿನ್ನ ಮೇಲೆ ದೂರು ನೀಡಲು ಅವನಿಗೆಷ್ಟು ಧೈರ್ಯ? ಅವನು ನಾಯಿ ಎಂಜಲು ತಿಂದು ಬೆಳೆದಿರಬೇಕವನು.” ಎಂದನು. ಆ ಶ್ರೀಮಂತ ಗೌಡನ ಮಾತಿನಲಿ ಬರಿ ಏಕವಚನ ಕೂಡಿತ್ತು. ಇತ್ತ ಮನೆಯಲ್ಲಿ ನಿತೀಶನ ಅಮ್ಮನಿಗೆ ಕೆಮ್ಮೋ ಕೆಮ್ಮು. ಯಾವಾಗ ಆ ಗೌಡರು ಆ ಪದವನ್ನು ಬಳಸಿದರು ಆವಾಗಿನಿಂದಲೂ, ಸಿಟ್ಟನ್ನು ತಾಳಲಾರದೇ, ಭಯಂಕರ ವ್ಯಾಘ್ರನಾಗಿ ತುಂಬು ಧೈರ್ಯ ತುಂಬಿಕೊಂಡ ಹೃದಯದಿಂದ ಕೂಡಿ ಎಲ್ಲಾವನ್ನು ಆಲಿಸುತ್ತಾ ನಿಂತುಕೊಂಡಿದ. ಶಾಲೆಯ ಸಮವಸ್ತçವನ್ನು ಧರೆಸಿದ್ದ. ಸ್ವಾತಂತ್ರೋತ್ಸವದ ಆಚರಿಸಿದ ಅವನು ಒಂದೊಂದು ಹೆಜ್ಜೆಯನ್ನಿಡುತ್ತಾ ಗೌಡ ಹಾಗೂ ಪೊಲೀಸರ ಮಧ್ಯೆ ನಿಂತುಕೊಂಡನು. ಆವಾಗ ಆ ಪೊಲೀಸರು.
“ನೋಡಿ ಯಾರು ತಮ್ಮ ಮುಂದೆ ನಿಂತುಕೊಳ್ಳುವಷ್ಟು ಧೈರ್ಯವಿಲ್ಲ ಎಂದೇಳಿದೀರಿ, ಅಗೋ ನೋಡಿದಿರಾ ಈ ಚಿಕ್ಕ ಬಾಲಕನು ನಿಂತಿದ್ದಾನೆ. ನಿಮ್ಮ ಮುಂದೆ ಇವನೇ ನಿಮ್ಮ ಮೇಲೆ ದೂರು ನೀಡಿದ್ದು.” ಎಂದರು.


ಗೌಡರ ಹೃದಯ ಕಳಚಿ ಬಿದ್ದೆ ಬಿಟ್ಟಿತು. ನಿತೀಶನನ್ನು ಎಲ್ಲಿಯೋ ನೋಡಿದ ನೆನಪು ಕಾಣತೊಡಗಿತು. ಕೊನೆಗೂ ಆ ಗೌಡನು ನಿರ್ಧರಿಸಿಯೇ ಬಿಟ್ಟನು ಅವನನ್ನು ಕೊಲೆ ಮಾಡುವುದಾಗಿ ತೀರ್ಮಾನಕ್ಕೆ ಬಂದನು. ತನ್ನ ಪಕ್ಕ ಬಲಶಾಲಿ ಆಳು ಹಿಡಿದು ನಿಂತಿದ್ದ ಉದ್ದನೆಯ ಚೂಪಾದ ಕತ್ತಿಯನ್ನು ಹಿಡಿದು ಎಸೆದು ಬಿಟ್ಟ. ನಿತೀಶನಿಗೆ ನೆಗಡಿ ಕಾಯಿಲೆ ಬಂದಿದ್ದ ಕಾರಣಕ್ಕಾಗಿ ಸೀನಲು ತಲೆ ಬಾಗಿಸಿ “ಆ.. ಕ್ಷಿ” ಎಂದ. ಅವನ ತಲೆಯ ನೇರಕ್ಕೂ ಬಂದ ಆ ಕತ್ತಿಯು ಗೌಡರು ಸಾಕಿದ ಪ್ರೀತಿಯ ನಾಯಿಯ ಹೊಟ್ಟೆಗೆ ಬಿದ್ದು ಬಿಟ್ಟಿತು. ಮುಂದೆ ಪೊಲೀಸರು ನಿಂತದ್ದನ್ನು ಮರೆತಿದ್ದ ಆ ಗೌಡನು ಮರಳಿ ಜ್ಞಾನೋದಯವಾಗಿ ತಾನು ಮಾಡಿದ ತಪ್ಪಿಗಾಗಿ “ಆ ನಾಯಿಗೆ ನಾನೇನು ಬೇಕಾಗಿ ಕತ್ತಿ ಬೀಸಲಿಲ್ಲ. ಹೊರತಾಗಿ ಅದು ಹುಚ್ಚು ನಾಯಿ ಹಾಗಾಗಿ ಅದಕ್ಕೆ ಕತ್ತಿ ಎಸೆದೆ” ಎಂದರು. ಎಲ್ಲವನ್ನು ಗಮನಿಸುತ್ತಿದ್ದ ಪೊಲೀಸರು
“ನೋಡಿ ಗೌಡರೇ, ನಮಗೆ ಸಮಯವಾಗುತ್ತದೆ. ನಿಮ್ಮ ಮಗನ ಮುಖವನ್ನು ಒಮ್ಮೆ ನೋಡಿ. ಇವರನ್ನು ನಾನು ಠಾಣೆಗೆ ಕರೆದುಕೊಂಡು ಹೋಗುತ್ತೇವೆ ನೀವು ಈ ಹಳ್ಳಿಯಲ್ಲಿ ಜನರಿಗೆ ತೀವ್ರವಾದ ಶಿಕ್ಷೆಯನ್ನು ನೀಡಿದ್ದಿರಿ, ಇಂತಹ ಘಟನೆಗೆ ಸಂಬಂಧಿಸಿದಂತೆ ತಾವು ಶಿಕ್ಷೆ ಅನುಭವಿಸುತ್ತೀರಿ ” ಎಂದು ವಾರ್ನಿಂಗ ಮಾಡಿದನು.
ಎತ್ತ ನೋಡಿದರೂ ನಿರ್ಜನ. ಜನರೇ ಇಲ್ಲ. ಆ ಅಧಿಕಾರಿಯು ನಿತೀಶನ ಬಳಿ ಬಂದು “ನಿತೀಶ ದೊಡ್ಡ ಕಾರ್ಯವನ್ನು ಪುಟಾಣಿ ಬಾಲಕ ಮಾಡಿರಿವೆ ಆದರೇ ನಿಮ್ಮ ಊರಿನ ಜನರು ಎಲ್ಲಿ? ಅವರಿಗೆಲ್ಲಾ ಈ ಅಕ್ಕಿಯನ್ನು ಹಂಚಬೇಕು” ಎಂದರು ಅಧಿಕಾರಿ. ಇತ್ತ ಗೌಡರು ನಿತೀಶನನ್ನು ನೋಡಿ ಹಲ್ಲು ಕಚ್ಚುತಿದ್ದರೆ. ನಿತೀಶನಿಗೆ ಸ್ವಲ್ಪ ಸಮಾಧಾನವಾಯಿತು. ಅಧಿಕಾರಿಗಳ ಬಳಿ ಹೋಗಿ ಸರ್ ನಮ್ಮ ಜನರನ್ನು ನಾನು ಕರೆದುಕೊಂಡು ಬರುವೆ. ಅವರಿಗೆಲ್ಲ ಹಂಚಿ ಇದನ್ನು” ಎಂದನು.
ಎಲ್ಲರ ಮನೆಯ ಬಾಗಿಲುಗಳು ಮುಚ್ಚಿಕೊಂಡಿವೆ. ನಿತೀಶನ ಅಪ್ಪ-ಅಮ್ಮ ಸಹ ಮನೆಯಲ್ಲಿಯೇ ಇದ್ದಾರೆ. ಅವರು ‘ತಮ್ಮ ಮಗ ಶಾಲೆಯಲ್ಲಿ ಉಳಿದುಕೊಂಡಿದ್ದಾನೆ’ ಎಂದು ಭಾವಿಸಿದ್ದರು. ಆದರೇ ನಿತೀಶನು ಇಲ್ಲಿ ಎಂತಹ ಕಾರ್ಯ ಮಾಡುತ್ತಿರುವನು.
ನಿತೀಶನು ಎಲ್ಲರ ಮನೆಯ ಬಾಗಿಲುಗಳನ್ನು ತಟ್ಟಿ-ತಟ್ಟಿ ಗೌಡರ ಮನೆ ಕಡೆ ಬನ್ನಿ, ಬನ್ನಿ ಎಂದು ಕೂಗುತ್ತಾ ಹೋಗುತ್ತಿದ್ದ. ಆದರೇ ಯಾರೂ ಬರದೇ ತಮ್ಮ ಮನೆಯೊಳಗಡನೆ ಗುಸು-ಗುಸು ಮಾತನಾಡುತಿದ್ದರು. ನಿತೀಶನಿಗೆ ಬೇಜಾರು! ಬೇಜಾರು. ಅಷ್ಟೋ! ಇಷ್ಟು ಸಮಯ ಕಳೆದ ನಂತರ ಆ ಹಳ್ಳಿಯ ಜನಸಂಖ್ಯೆ 1/4 ರಷ್ಟು ಮೆಲ್ಲಗೆ ಹೊರ ನಡೆದರು. ನಿತೀಶನು ಮರಳಿ ಪುನಃ ಜನರನ್ನು ಕರೆಯಲು ಮುಂದಾಗಿ, ಕೊನೆಗೂ 100ಕ್ಕೆ 65% ರಷ್ಟು ಜನರು ಬಂದು ಆ ಗೌಡರ ಅಂಗಳದಲ್ಲಿ ನಿಂತುಕೊAಡರು ತಲೆಯಬಾಗಿಸಿ. ಜನರನ್ನು ಮೆಲ್ಲನೆ ಪೊಲೀಸರು ವಿಚಾರಿಸಲು ಪ್ರಾರಂಭಿಸಿದರು.
“ನೋಡಿ, ನಿಮ್ಮ ಗೌಡರು ನಿಮಗೆ ಸೇರಬೇಕಾದ, ಸರ್ಕಾರದಿಂದ ವಿಪತ್ತು ಕಾಲದಲ್ಲಿ ಬಂದಂತಹ ದಾಸ್ತಾನು. ನಿಮಗೆ ನೀಡದೆ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ. ಇದಕ್ಕೆ ನೀವು ಏನು ಹೇಳುವೀರಿ” ಎಂದು ಜನರನ್ನು ಉದ್ದೇಶಿಸಿ ಅಧಿಕಾರಿಯು ಕೇಳಿದನು. ಆದರೆ ಯಾರಾದರೂ, ಏನಾದರೂ ಮಾತನಾಡಬೇಕಲ್ಲವೇ? ಯಾರು ಮಾತಾಡದೇ ಕತ್ತುಬಾಗಿಸಿ ನಿಂತಿದ್ದರು. ಅಧಿಕಾರಿಯು ಅಕ್ಕಿಯನ್ನು ನೀಡಲು ಮುಂದಾದರು. ಆದರೇ ಒಬ್ಬರಾದರೂ ಮುಂದೆ ಬರಬೇಕಲ್ಲವೇ? ಯಾರೂ ಬರಲೇ ಇಲ್ಲ ಗೌಡರ ಮುಖದಲ್ಲಿ ನಗು, ಕೈಯ ಬೆರಳು ಮೀಸೆಯ ಮೇಲೆ, ಮೆಲ್ಲಗೆ ಧ್ವನಿ ಎತ್ತಿದರು.
“ಏ! ಪೊಲೀಸವರೇ ಸುಮ್ಮನೆ ಹೋಗಿ ಇದು ನನ್ನ ಊರು. ನನ್ನ ಎಂಜಲನ್ನು ತಿಂದು ಬೆಳೆದಿರುವ ಜನರಿರುವಾಗ. ಅವುಗಳಿಗೆ ಮಾತನಾಡಲು ಶಕ್ತಿಯೆಲ್ಲಿ ನನ್ನ ಮುಂದೆ. ಇನ್ನೂ ಸ್ವಲ್ಪ ನೀವು ಇಲ್ಲೆ ಉಳಿದರೆ ಜೀವಂತವಾಗಿ ಮನೆ ಸೇರೋದಿಲ್ಲ. ಕಳುಹಿಸು ಇತ್ತ ನನ್ನ ಮಗನನ್ನು” ಎಂದು ಕುಳಿತುಕೊಂಡ. ಆ ವೇಳೆಗಾಗಲೇ ಅಧಿಕಾರಿಗೆ ಸುಸ್ತಾಯಿತು. ಸರಿಪಡಿಸಬೇಕೆಂದು ಬಂದ ಅವರಿಗೆ ಊರಿನ ಜನರಲ್ಲಿ ಒಗ್ಗಟ್ಟಿಲ್ಲದ ಕಾರಣ ತೊಂದರೆಯಾಗಿ ಕಾಣತೊಡಗಿತು. ಏನೇ ಆಗಲಿ, ಎಂದು ತಾಳ್ಮೆ ಮೀರಿದ ನಿತೀಶ ಕುಮಾರನು ಎತ್ತರವಾದ ಕಟ್ಟೆಯನ್ನು ಹತ್ತಿ ನಿಂತುಕೊಂಡನು. ಸಮವಸ್ತç ಧರಿಸಿಕೊಂಡು ನಿಂತಿರುವ ನಿತೀಶನನ್ನು ನೋಡಿ ಗೌಡರ ಹೃದಯದ ಮಿಡಿತ ತುಡಿತವಾಗಿ ಕಾಣತೊಡಗಿತು. ಅವನನ್ನು ಕೊಂದು ತಿರುವೇನು ಎಂದು ಕಾಲಿನ ಹೆಬ್ಬೆರಳನ್ನು ನೆಲಕ್ಕೆ ಗೀಚ ತೊಡಗಿದರು. ನಿತೀಶನು ನಿಂತು.
“ಮಹಾ ಜನಗಳೆ ! ತಂದೆ-ತಾಯಿಯರೇ, ಅಣ್ಣ, ಅಕ್ಕ, ತಂಗಿಯರೇ, ಇಂದು ಸ್ವಾತಂತ್ರö್ಯ ದಿನಾಚರಣೆ ಆಚರಿಸಿದ್ದೇವೆ. ಆ ಹಬ್ಬದ ವಿಶೇಷತೆ ನಿಮಗೆಲ್ಲಾ ಗೊತ್ತೆ? ಗೊತ್ತಿಲ್ಲ. ತಿಳಿದಿದ್ದರೆ, ಹೂಂ…… ಇನ್ನು ಸ್ವಲ್ಪ ಹೊತ್ತಾದರೆ ನಿಮ್ಮ ಗೋಣು ಮುರಿದರು ಮುರಿಯಬಹುದು. ಎತ್ತಿ ನಿಮ್ಮ ಕತ್ತನ್ನು ಮೊದಲು” ಎಂದು ಆಕ್ರೋಶದಿಂದ ನುಡಿದನು.
“ಯಾವ ತಪ್ಪು ಮಾಡಿದ್ದೀರಾ ನೀವು? ಯಾವ ತಪ್ಪು ಮಾಡದ ನಿಮಗೆ ಯಾಕಿಷ್ಟು ಅಂಜಿಕೆ. ನಮಗೆ ಸಂಪೂರ್ಣವಾಗಿ ಸ್ವಾತಂತ್ರö್ಯ ದೊರಕಿದೆ. ನಮ್ಮ ತೊಂದರೆಗಳನ್ನು ಬಗೆಹರಿಸಲು ಸರ್ಕಾರ, ಕಾನೂನು, ಸಂವಿಧಾನ ಎಲ್ಲಾ ಇವೆ. ಅಂದ ಮೇಲೆ ಬಡಪಾಯಿ ಗೌಡನಿಗೆ ಭಯ ಪಡುವುದು ಏಕೆ? ಎಷ್ಟು ದಿನ ಹೀಗೆ ಇರುತ್ತೀರಾ? ನೀವು ಹೀಗೆ, ನಿಮ್ಮ ಮಕ್ಕಳು ಹೀಗೆ ಮುಂದಿನ ಪೀಳಿಗೆಯು ಸಹ ಆ ಶ್ರೀಮಂತ ಗೌಡನ ಆಳ್ವಿಕೆಯ ಗುಲಾಮರಾಗಿ ಬಾಳುವಿರಾ?” ಎಂದು ಒಂದೇ ನಿಟ್ಟು ಉಸಿರಿನಿಂದ, ಒಂದೇ ವಾಕ್ಯದಂತೆ ಜನರು ಪರಿವರ್ತನೆಯಾಗುವಂತೆ ನುಡಿದ.
“ನುಡಿದ ವಾಕ್ಯ ಅದೇಷ್ಟು ಅರ್ಥದಿಂದ ಕೂಡಿದೆಯೋ ಅಥವಾ ಇಲ್ಲವೋ ಆದರೇ ಜನರೆಲ್ಲಾ ಒಂದೇ ಬಾರಿಗೆ ಕತ್ತನ್ನು ಮೇಲೆ ಎತ್ತಿದರು. ಎತ್ತಿ ದಿಗ್ಭ್ರ ಮೆಯಿಂದ ನಿತೀಶನನ್ನು ನೋಡಿದರು. ಇನ್ನು ಗೌಡನು ಹಾಗೂ ಅವನ ಆಳುಗಳು ಎದ್ದು ನಿಂತುಕೊAಡು, ಆ ಆಳುಗಳು ನಿತೀಶನನ್ನು ಹಿಡಿಯಲು ಮುಂದಾದರು. ಆದರೇ ಪೋಲಿಸರು ಆಜ್ಞೆಯನ್ನು ನೀಡಿದರು. ಅದಕ್ಕೆ ಸುಮ್ಮನೆ ನಿಂತಿರು. ಊರಿನ ಜನರು ನಿತೀಶನನ್ನು ಕುರಿತಾಗಿ ಯೋಚಿಸಿದರು. ಅವನ ತಂದೆ-ತಾಯಿ ಮಾತ್ರ ಅಲ್ಲಿ ಸುಳಿವೇ ಇರಲಿಲ್ಲ. ಮನೆಯಲ್ಲಿ ನಿತೀಶನ ತಂಗಿಗೆ ವಿಪರೀತವಾದ ಕಾಮಾಲೆ ಬಂದಿರುವ ಕಾರಣಕ್ಕಾಗಿ ಮನೆಯಲ್ಲಿ ಉಳಿಯದೇ ಪಕ್ಕದ ಊರಿಗೆ ಆರ್ಯುವೇದಿಕ ಔಷಧಿ ಪಡೆಯಲು ಬೆಳಿಗ್ಗೆಯೇ ಹೋಗಿದ್ದರು. ಅಲ್ಲೆಲ್ಲ ಜನರು ನಿತೀಶನ ಅಪ್ಪನನ್ನು ಕಣ್ಣುಗಳ ಮೂಲಕ ಹುಡುಕಾಡುತ್ತಿದ್ದರು. ಇತ್ತ ಗೌಡನು ನಿತೀಶನ ಅಪ್ಪನಿಗಾಗಿಯೇ ಕಾಯುತ್ತಿದ್ದರು. ಅತ್ತ ನಿತೀಶನ ಅಮ್ಮಳಿಗೆ ಒಂದು ರೀತಿಯ ದುಗುಡ, ಭಯ, ಕೆಮ್ಮು ಕಾಣಿಸುತ್ತಿತ್ತು. ಇಲ್ಲಿ ಗೌಡರ ಅಂಗಳದಲ್ಲಿ ನಿಂತು ಮಾತನಾಡುತ್ತಿದ್ದ ನಿತೀಶನು. ಪುನಃ
“ತಪ್ಪು ಇರುವುದು ನಮ್ಮದೇ ಹೊರತಾಗಿ ಬೇರೆ ಯಾರದ್ದು ಅಲ್ಲ. ನಮಗೆ ತಿಳಿವು, ಅರಿವು ಬಂದಿಲ್ಲ. ಬಂದರು ಸಹ ಅದನ್ನು ಹೆದರಿಸುವ ಶಕ್ತಿ ನಮ್ಮಲ್ಲಿಲ್ಲದಂತಾಗಿದೆ. ನಾವು ಶಕ್ತರಾದಾಗ ಮಾತ್ರ ಯಾವ ರೋಗಗಳು ನಮ್ಮ ಹತ್ತಿರ ಸುಳಿವುದಿಲ್ಲ. ನಾವು ಹಿಂದೆ ಉಳಿಯಲು ಕಾರಣ ನಾವೇ, ನಿಂತು ಮಾತಾಡಲು ಆಗುತ್ತಿಲ್ಲವೆಂದರೆ ನಮಗೆ ನಾವೇ ಆ ಧೈರ್ಯವಂತರೂ, ನಮಗೆ ಜ್ಞಾನದ ಕೊರತೆಯಿದೆ ಅಕ್ಕ-ಪಕ್ಕದ ಊರೊಳಗೆ ಜನರು ನಮ್ಮಂತೆ ಜೀವಿಸುತ್ತಿದ್ದರಾ? ಗುಲಾಮರಾಗಿ ಬಾಳುತ್ತಿದ್ದಿರಾ?. ಯಾಕೇ? ನಿಮಗೆ ಗುಲಾಮ, ಆಳು, ನಿಶಕ್ತ, ಆಸಕ್ತ ಜನ ಅನ್ನುವ ಬಿರುದುಗಳು. ಯಾಕೆಂದರೆ ನಾವು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಹಿಂದೆ ಉಳಿದಿದ್ದೇವೆ. ನಾವು ಮೊದಲು ಸದೃಢರಾಗಬೇಕು” ಹೀಗೆ ಹೇಳುತ್ತಾ ಇರುವಾಗಲೇ ಜನರ ಹೃದಯದಲ್ಲಿ ಕಮಲದ ಹೂ ಅರಳುವಂತೆ ಧೈರ್ಯದ ಬುತ್ತಿ ಅರಳ ತೊಡಗಿತು. ಗೌಡರು ಮಂಕಾಗಿ ಹೋದ ನಿತೀಶನ ಮಾತು ಕೇಳಿ, ಅಧಿಕಾರಿ ವೃಂದವು ಆಲಿಸುತ್ತಿದ್ದರು. ನಿತೀಶನು ಮಾತಿನಲ್ಲಿಯೇ ತೊಡಗಿದ್ದ.
“ನಾವು ಜಾಗೃತರಾಗೋಣ, ನಿನ್ನೆ ಗೌಡರ ಮನೆಗೆ ರಾತ್ರಿ, ನಡು ರಾತ್ರಿಯಲ್ಲಾ ಅಕ್ಕಿಯ ಮೂಟೆಗಳನ್ನು ಹೆಗಲ ಮೇಲೆ ಹೊತ್ತು ಹಾಕಿದ್ದೀರಾ? ಅಷ್ಟೊಂದು ಮೂಟೆಗಳನ್ನು ಹಾಕುವಾಗ, ಒಂದು ಮೂಟೆಯನ್ನು ಹೊರ ಬೇಕಾದರೆ ತೀರಾ ಸಾಕಷ್ಟು ನೋವು ಅನುಭವಿಸಬೇಕು. ಆವಾಗಲಾದರೂ ಯೋಚನೆಬಾರದೇ ನಿಮಗೆ ಇಷ್ಟೊಂದು ದಾಸ್ತಾನು ಎಲ್ಲಿದೂ? ಏನು ಮಾಡುತ್ತಿದ್ದಾರೆ? ಇದನ್ನು ಎಂಬ ಪ್ರಶ್ನೆಯೇ ಮೂಡಿಲ್ವ ನಿಮಗೆ ಮನೆಯಲ್ಲಿ ಗಂಜಿಗೂ ಗತಿಯಿಲ್ಲದ ನಮಗೆಲ್ಲಾ. ‘ಆ ಸಂದರ್ಭದಲ್ಲಿ ನಿಮಗೆ ಆ ಪ್ರಶ್ನೆ ಮೂಡಿರಲೇಬೇಕು ಆದರೇ ಹೆದರಿದ್ದೀರಾ, ಅಸಮಾನತೆ, ಗೌರವ, ಹಕ್ಕು, ನ್ಯಾಯ, ಕಾನೂನು, ನಿಯಮ, ಪ್ರಶ್ನೆ ಇವು ನಿಮ್ಮನ್ನು ಗೌಡರಿಂದ ಹಳ್ಳಕ್ಕೆ ತಳ್ಳಿದ್ದಾವೆ” ಎಂದು ನಿತೀಶನೂ ಅಚ್ಚು ಕಟ್ಟಾಗಿ ತಿಳಿಸತೊಡಗಿದ್ದ.
“ನಮ್ಮಲ್ಲೆಲ್ಲಾ ಮೊದಲು ಮೂಢನಂಬಿಕೆ ತುಂಬಿಕೊAಡಿದೆ. ದೇವರಿಗಾಗಿಯೇ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಿದ್ದೇವೆ. ಆದಾಯ ಕಡಿಮೆ ನಮ್ಮದು ಆದರೇ ಅದರಲ್ಲಿ ಉಳಿತಾಯ ಮಾಡುವ ಜವಾಬ್ದಾರಿ ಬೆಳೆಸಿಕೊಂಡಿದ್ದೇವೆಯೋ? ಇಲ್ಲ. ಜೊತೆಗೆ ನಮ್ಮಲ್ಲಿಯೇ ನಮಗೆ ಒಗ್ಗಟ್ಟು ಇಲ್ಲ, ಒಳ ಒಪ್ಪಂದವಿಲ್ಲ, ಹೊಂದಾಣಿಕೆಯಿಲ್ಲವಾದರೇ ಹೇಗೆ? ಇವುಗಳ ಕೊರತೆಯಿಂದಾಗಿಯೇ ಆ ಶ್ರೀಮಂತರು ನಮ್ಮನ್ನು ಆಟವಾಡಿಸುತ್ತಿದ್ದಾರೆ. ಎಂದು ನಾವು ಎದುರು ನಿಂತು ಗೌಡರಿಗೆ ಪ್ರಶ್ನೆ ಕೇಳುವ ಧೈರ್ಯ ಬರುತ್ತದೆಯೋ ಅಂದು ನಮ್ಮ ಜೀವನ ಸ್ಥಿತಿಯೇ ಬದಲಾಗುತ್ತಿದೆ. ನಾವು ಎದುರು ನಿಂತೂ ಮಾತನಾಡಿದರೇ ಏನಾದರೂ ಮಾಡುತ್ತಾರೆ ಹಾಗೂ ಮಾಡಿದ್ದಾರೆ ಎಂಬ ತರಂಗದ ಅಲೆ ಕಾಡುತ್ತಾ ಇರುತ್ತದೆ ಅಲ್ವ? ಎಷ್ಟು ಜನರನ್ನು ಅವರು ಕೊಲ್ಲಬಹುದು, ನಾಶ ಪಡೆಸಬಹುದು. ಹಿರಿಯರಾದರೇ ಗೌರವ ಕೊಡೋಣ ಆದರೇ ಗುಲಾಮರಾಗಿ ಬಾಳೋದು ಬೇಡ” ಎಂದ ಅವನ ನಡೆ-ನುಡಿಯ ಮಾತುಗಳಿಗೆ ಜನರ ಹೃದಯ ತಲ್ಲಣ ಪಟ್ಟುಕೊಳ್ಳುತ್ತಿದ್ದವು. ಬದಲಾಗುವ ಸಾಧ್ಯತೆ ಕಾಣತೊಡಗಿತ್ತು. ಗೌಡರಿಗೆ ಆಳುವುದೊಂದೆ ಬಾಕಿತ್ತು ಅನ್ನುವ ಹಾಗೇ ಮುಖ ಕೆಂಪಗೆ ಮಾಡಿಕೊಂಡು, ಏನು ಸ್ವಲ್ಪ ಸಹ ಕೊಬ್ಬು ಕಡಿಮೆಯಾಗದೆ ಆಶ್ಚರ್ಯದಿಂದ ನಿಂತುಕೊAಡಿದ್ದನು.
“ಮಧ್ಯಪಾನ, ಧೂಮಪಾನವೆಲ್ಲಾ ಏತಕ್ಕೆ ನಿಮಗೆಲ್ಲಾ? ಬರೀ ಎಲುಬನ್ನೇ ತುಂಬಿಟ್ಟುಕೊಂಡು ದುಡಿಯುವ ಜನರೇ ದೇಶದ ಆರ್ಥಿಕ ಸ್ಥಿತಿ ಅರ್ಥ ಮಾಡಿಕೊಳ್ಳಲ್ಲದೇ ವ್ಯಯಿಸುವುದೇಕೆ ? ಮಕ್ಕಳಿಗೆ ಸರಿಯಾಗಿ ವಿದ್ಯಾರ್ಹತೆ ನೀಡಲು ಶಕ್ತಯಿಲ್ಲದ ನಿಮಗೆ ಹೆತ್ತವರೆಂದು ಹೇಳಲು ಬೇಜಾರು. ಜೀವನ ಏನೆಂದು ನಿಮಗೆಲ್ಲಾ ಸಂಪೂರ್ಣವಾಗಿ ತಿಳಿದಿಲ್ಲ. ಸುಮ್ಮನೆ ಹುಚ್ಚರಂತೆ ದುಡಿತ್ತೀರಾ ಯೋಚನೆ ಇಲ್ಲ, ಗಳಿಕೆ ಇಲ್ಲ. ನೋಡಿ! ಈವಾಗ ಎಲ್ಲರೂ ಮೊದಲು ಯೋಚನೆ ಮಾಡಿ, ಅನ್ಯಾಯದ ವಿರುದ್ಧ ಪ್ರತಿಭಟಿಸಿ ಜೀವನ ಸಾಗಿಸೋಣ. ನಮಗೆ ಸಹಾಯಕವಾಗಿ ಕಾನೂನುಗಳಿವೆ. ಊರೊಳಗೆ ಮೆಂಬರ, ಉಪ ಸದಸ್ಯ, ಬ್ಯಾಂಕನ ಜವಾಬ್ದಾರಿ, ನ್ಯಾಯ ಬೆಲೆ ಅಂಗಡಿಯ ಅಧಿಕಾರ, ಮಾರುಕಟ್ಟೆಯ ಲೇವಾ-ದೇವಿಗಾರರು ಇತ್ಯಾದಿ. ಇವೆಲ್ಲವುಗಳ ಜವಾಬ್ದಾರಿ ಹೊತ್ತುಕೊಂಡು ಬರೀ ನಮಗೆ ಅರ್ಧ ಕ್ಷಣಕ್ಕೂ, ಕ್ಷಣ-ಕ್ಷಣಕ್ಕೂ ದೋಷ ಮಾಡುತ್ತಾ! ತಾವು ಮಾತ್ರ ಬೆಳವಣಿಗೆ, ಸಂಪತ್ತು ಗಳಿಸಿಕೊಳ್ಳುತ್ತಿದ್ದಾರೆ ಗೌಡರು. ಹಳ್ಳಿಯಲ್ಲಿ ಜೀವಿಸುವ ನಮ್ ಗಳಿಗೆ ಒಂದರ ಅಧಿಕಾರ ಬೇಡವೇ? ನನ್ನ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶ. ಸಂಪೂರ್ಣವಾಗಿ ಅಭಿವೃದ್ದಿಯಾಗಲು ಇರದೇ ಕಾರಣ. ಹಳ್ಳಿಯ ಜನರೇ ಅರ್ಧದೇಶಕ್ಕೆ ಕಾರಣವಾಗಿದ್ದಾರೆ. ರಾಜಧಾನಿಗಳಲ್ಲಿ ಮಾಡುವ ಕಾನೂನುಗಳು ನಮಗೆ ಸರಿಯಾಗಿ ಸಿಗುವುದೇ ಜಸ್ಟ್ ೨೦% ರಷ್ಟು ಅದರೊಳಗೆ ನಮ್ಮೂರಿನಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡವರು ಸಂಪೂರ್ಣ ಎಲ್ಲಾನೂ ನುಂಗಿಬಿಡುತ್ತಾರೆ. ನಮಗೆ ಮುಕ್ತವಾಗಿ ದೊರಕುವ ಸೌಲಭ್ಯ-ಸೌಕರ್ಯ ದೊರೆಯುತ್ತಿಲ್ಲ ಮನೆ, ಹೊಲ, ಆಸ್ತಿ, ಸಂಪತ್ತು ಯಾರ ಬಳಿ ಹೆಚ್ಚು ಇದೆ. ಹೇಳಿ ಒಂದಿಷ್ಟು ಗುಡಿಸಲು ಇದೆ ಹೊರತಾಗಿ ಮತ್ತೇನು ಇಲ್ಲ. ಇರುವವರ ಬಳಿ ಎಲ್ಲಾ ಇದೆ. ಸ್ವಾತಂತ್ರö್ಯ, ಜೀವಿಗಳಾಗಿ ಬಾಳೋಣ. ಎಂದು ಸ್ವಲ್ಪ ಕೆಮ್ಮುತ್ತಾ ಇದ್ದ. ಜನರು ಸಂಪೂರ್ಣ ಬದಲಾಗುವಂತೆ ಕಂಡಿತ್ತು. ೯೦% ರಷ್ಟು ಜನ ಅಲ್ಲಿ ನೆರೆದಿದ್ದರು. ನಿತೀಶನ ಮಾತು ಕೇಳಿ ಒಬ್ಬೊಬ್ಬರು ಬಂದು ನಿಂತರು. ಜನರ ಮುಖದಲ್ಲಿ ಮುಜುಗರ ಭಾವನೆ, ಛೆ, ಹೌದಲ್ವ ಅನ್ನಿಸತೊಡಗಿತು. ಹಾಗೂ ಅವರಿಗೆ ‘ಗೌಡರು ಮಾಡಿದ ತಪ್ಪಿಗಾಗಿ ಅವನ ಮಗನಿಗೆ ಶಿಕ್ಷೆ ನೀಡಲೇಬೇಕು ಎಂದು ನಿರ್ಧರಿಸುತ್ತಿದ್ದರು. ನಮ್ಮ ಹುಡುಗ, ನಿತೀಶ ಹೇಳುವುದು ಸರಿ ಎಂದು ಜನ ನಂಬ ತೊಡಗಿದರು. ಊರೆಲ್ಲಾ ನಿಶಬ್ದವಾಗಿದೆ. ಒಂದು ಮೂಲೆಯಿಂದ ಮಾತ್ರ ಶಬ್ದ ಕೇಳ ತೊಡಗಿತು. ಅದು ಅಸ್ಪಷ್ಟವಾಗಿ ಕೇಳ ತೊಡಗಿತು. ನಿತೀಶನ ತಂದೆ-ತಾಯಿ ಇಬ್ಬರೂ ಮೆಲ್ಲಗೆ ನಡೆಯುತ್ತಾ ಊರೊಳಗೆ ಪ್ರವೇಶಿಸುತ್ತಿದ್ದರು. ನಿತೀಶನ ತಂದೆಯು
“ಸೂಸ್ತೋ ಸುಸ್ತು ಆಗುತ್ತಾ ಇದೆ” ನಿತೀಶನ ತಾಯಿಯು
“ಹೌದು. ನಮ್ಮ ನಿತೀಶ ಎಲ್ಲಿದ್ದಾನೋ ಏನೋ ಈ ಸಾಮಗ್ರಿಗಳನ್ನಾದರೂ ಹಿಡಿದುಕೊಂಡು ಹೋಗುತ್ತಿÀದ್ದ ಎದುರಾದರು ಬರಬರದೇ”
“ಇವತ್ತು ಸ್ವಾತಂತ್ರ್ಯ ಉತ್ಸವ ಅಲ್ವ? ಅವನು ಬೆಳಿಗ್ಗೆಯೇ ಸ್ನಾನಮಾಡಿ ಶಾಲೆ ಕಡೆ ನಡೆದಿದ್ದ. ಅವನಿಗೆ ನಾವು ಊರಿಗೆ ಹೋಗಿದ್ದು ಗೊತ್ತಿಲ್ಲ, ಇಲ್ಲವಾದರೇ ಹುಡುಕಿಕೊಂಡು ಇತ್ತ ಗದ್ದೆ ಕಡೆಯಾದರೂ ಬರುತ್ತಿದ್ದ. ನಿತೀಶ ಎಂದರೇ ನನಗೆ ಪ್ರಾಣ. ಹಳ್ಳಿಯಲ್ಲಿ ಜನ ಅವನನ್ನು ನೋಡಿ ತುಂಬ ಜಾಣ ಹುಡುಗ ಅಂತಾರೆ. ಖುಷಿಯಾಗುತ್ತದೆ” ಎಂದರು ಅಪ್ಪ.
“ಹೌದಾದು. ಅವನ ಕಂಡರೇ ರೇಗುತ್ತೀರಾ. ಚಿಕ್ಕ ಮಗುವಿಗೆ ಹೊಡೆಯುವ ಹಾಗೇ ಕೋಲೇಟು ಭಯ ಇಟ್ಟಿದ್ದೀರಾ?”
“ಇಲ್ಲ ಅವನು ನನ್ನ ಹತ್ತಿರ ಒಡೆಸಿಕೊಳ್ಳುತ್ತಾನೆ ಅಂದರೆ ಅದು ಅವನದು ಭಯ ಅಲ್ಲ. ಅವನು ನನಗೆ ನೀಡುವ ಗೌರವ.”
“ನಮ್ಮ ನಿತೀಶನನ್ನು ಒಳ್ಳೇಯ ಡಾಕ್ಟರನನ್ನಾಗಿ ಮಾಡೋಣ, ಅವನು ಇಂಗ್ಲೀಷನಲ್ಲಿ ಚೆನ್ನಾಗಿ ಓದುತ್ತಾನೆ ಎಂದು ಅವನ ಜೊತೆಯಿರುವ ಅವನ ಅಣ್ಣ ಹೇಳುತ್ತಿದ್ದ ರೀ” ಎಂದಳು ನಿತೀಶನ ಅಮ್ಮ.
“ನಿಲ್ಲು, ಸ್ವಲ್ಪ. ಅತ್ತ ನೋಡು ಹಳ್ಳಿಯಲ್ಲಿ ಮಕ್ಕಳಿಲ್ಲ, ಹಿರಿಯರಿಲ್ಲ ನಿಶಬ್ದ ಕಾಣಿಸುತ್ತಿದೆ”
“ಹೌದೌದು. ಸ್ವಲ್ಪ ಕೂಗೂ ಗೌಡರ ಮನೆಕಡೆಯಿಂದ ಬರುತ್ತಿದೆ ರೀ”
“ನೀನು ಮನೆಕಡೆ ನಡೆ ಮಗುವನ್ನು ಕರೆದುಕೊಂಡು ನಿತೀಶ ಇರಬಹುದು ಹೊರಡು” ಎಂದನು ನಿತೀಶನ ಅಪ್ಪ. ಸರಿ ಆಯಿತ್ತೆಂದು ಅವರು ಮನೆಗೆ ತೆರಳಿದರು. ಗೌಡರ ಮನೆಕಡೆ ನಿತೀಶನ ಅಪ್ಪ ಹೊರಟ ಮೆಲ್ಲನೆ. ನಿತೀಶನ ನಿರರ್ಗಳ ಮಾತಿಗೆ ಗಂಟಲು ಬಿಗಿದಪ್ಪಿ ಕೆಮ್ಮುತ್ತಿದ್ದ ಅವನು ಹಾಗೇ ಮಾತನಾಡುತ್ತಿದ್ದ.
“ಮುಂದೆ ನಾವೆಲ್ಲರೂ ಸೇರಿ ಅನ್ಯಾಯದ ವಿರುದ್ಧ ಸಿಡಿದೇಳೋಣ, ನಾಗರಿಕತೆ ಜೀವನ ಪ್ರಾರಂಭಿಸೋಣ. ಇವತ್ತು ಈ ಅಕ್ಕಿಯನ್ನು ತೆಗೆದುಕೊಳ್ಳಿ, ಏನೂ ಹೇಳುತ್ತೀರಾ?” ಎಂದು ಪ್ರಶ್ನಿಸಿದ ನಿತೀಶ. ಮೌನದ ಮುಸುಕು ಮುಚ್ಚಿತ್ತು. ಪೊಲೀಸ ಅಧಿಕಾರಿಗಳಿಗೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಕಾಣುತ್ತಿತ್ತು ಏನೂ ಹೇಳದ ಜನರನ್ನು ಕಂಡು ಗೌಡರಿಗೆ ನಗು. ಉರಿಯುವ ಕಟ್ಟಿಗೆಗೆ ಪೆಟ್ರೋಲ್ ಸುರಿದಷ್ಟು ಖುಷಿಯಾಯಿತು. ಯಾರೋ ಒಬ್ಬ ಹಿರಿಯ ಸದಸ್ಯ ಮಧ್ಯದಿಂದ ಜೋರಾಗಿ ‘ನಿತೀಶನು ಹೇಳಿದ ಹಾಗೆ ಆಗಲಿ’ ಎಂದನು. ಎಲ್ಲಾ ಜನರು, ಅಕ್ಕಿ ನೆನೆದು ಅನ್ನದಂತಾಗಿದ್ದರು ಅವರು ಸಹ ‘ಹೌದಾದು, ನಿತೀಶ ಹೇಳಿದಂತೆ ಆಗಲಿ’ ಇನ್ನೂ ಮುಂದೆ ನಾವು ಯಾವುದಕ್ಕೂ ಹೆದರುವುದಿಲ್ಲ. ಅನ್ಯಾಯವನ್ನು ಪ್ರತಿಭಟಿಸುತ್ತೇವೆ. ಈಗ ನಮಗೆ ಸೇರಬೇಕಾದ ಅಕ್ಕಿಯನ್ನು ಪಡೆದುಕೊಳ್ಳುತ್ತೇವೆ” ಎಂದರು ಎಲ್ಲಾ ಜನರು. ಗೌಡರ ಎದುರಿಗೆ ಅಕ್ಕಿಯನ್ನು ಹಂಚಲಾಯಿತು. ನಿತೀಶ ಹಾಗೂ ಅಧಿಕಾರಿಗಳ ಮುಖದಲ್ಲಿ ಮುಗುಳು ನಗೆ, ಗೌಡರು ಇದ್ದರೂ ಸತ್ತವರಂತೆ ನಿಂತರು, ಜನರಲ್ಲಿ ಹೊಸ ಚೈತನ್ಯ ಮುಡಿಸಿದ ನಿತೀಶನನ್ನು ಹಿರಿಯರು ಮುದ್ಧಿಸುತ್ತಿದ್ದರು. ಅಷ್ಟರಲ್ಲಿಯೇ ನಿತೀಶನ ಅಪ್ಪ ಅಲ್ಲಿಗೆ ತಲುಪಿದ್ದರು. ಗೌಡರನ್ನು, ಪೋಲಿಸವರನ್ನು, ಜನರನ್ನು, ನಿತೀಶನನ್ನು ಕಂಡು ಬೆರಗಾದರೂ ಸ್ವಲ್ಪ ದೂರದಿಂದಲೇ ಕಂಡರು. ಲಾರಿಗಳು, ಹಿರಿಯ ಮಗ ಏನಿದು? ಮೂಟೆ ಅಕ್ಕಿಯನ್ನು ಜನರಿಗೆ ಹಂಚುವಿಕೆ ಎಲ್ಲಾ ಕಂಡAತಹ ಅವರಿಗೆ ಆಶ್ಚರ್ಯವಾಗ ತೊಡಗುತ್ತದೆ. ಗೌಡರಿಗೆ ಪುನಃ ಪೊಲೀಸರು ಮಾತನಾಡಿಸದೆ ಅವರ ಮಗನನ್ನು ಕರೆದುಕೊಂಡು ಮುಂದಾದರು. ನಿತೀಶನು ಅಧಿಕಾರಿಗಳಿಗೆ ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದನು. ಜನರು ಸಹ ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳು ಅಲ್ಲಿಂದ ತೆರಳಿದರು. ಜನರು ಸಹ ಯಾರ ಮನೆ ಗುಡಿಸಲಿಗೆ ಹೊರಟರು. ನಿತೀಶನು ಅವನ ಅಪ್ಪನನ್ನು ನೋಡಿಯೇ ಇರಲಿಲ್ಲ. ಮನೆಗೆ ಹೊರಟು ಹೋದನು.
ನಿತೀಶನು ಮಾತ್ರ ತನ್ನ ಒಳ ಮನಸ್ಸಿನಿಂದ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಮನೆಗೆ ತಲುಪಿದ. ನಿತಿಯ ಅಪ್ಪನು ಅವರ ಸಹಚಾರಿಯ ಜೊತೆ ಕುಳಿತುಕೊಂಡು ಎಲ್ಲಾ ವಿಷಯವನ್ನು ತಿಳಿದುಕೊಂಡು ಉಗ್ರರಾದರು, ಕೋಪಗೊಂಡರು ಮನೆಗೆ ದಿಟ್ಟ ಹೆಜ್ಜೆ ಇಡುತ್ತಾ ತಲುಪಿದರು. ನಿತೀಶನ ಅಮ್ಮಳು. ನಿತೀಶನ ತಂಗಿಗೆ ಊಟವನ್ನು ಮಾಡಿಸುತ್ತಾ
“ಏನೋ ನಿತಿ. ಎಲ್ಲಿಗೆ ಹೋಗಿದ್ದೆ ಇವತ್ತು? ಶಾಲೆಯಿಂದ ಮರಳಿ ಬಂದ ನಂತರ ಸಮವಸ್ತç ಬಿಚ್ಚಿಡ ಬದಲು ಹಾಗೇ ಹಾಕಿಕೊಂಡಿರುವೆಯಲ್ಲಾ ಅಷ್ಟು ಪುರುಸೋತ್ತು ಇಲ್ವ? ಇರಲಿ ನಿನ್ನ ಅಪ್ಪ ನಿನ್ನನ್ನೆ ಹುಡುಕುತ್ತಾ ಬಂದರಲ್ಲ ಎಲ್ಲಿ ಹೋದರು.? ಎಂದರು ಅಮ್ಮ. ಸಮವಸ್ತç ಕಳಚಿದ ನಿತೀಶನು ತಂಗಿಯ ಬಳಿ ಹೋಗಿ, ಮುದ್ಧಿಸುತ್ತಾ ಸಮಯದ ಬಳಿಕ ಅಮ್ಮನಿಗೆ.
“ಅಮ್ಮ ಹಸಿವಾಗಿದೆ” ಎಂದನು.
“ಕೂರು ಇಲ್ಲಿಗೆ ತಟ್ಟೆಯಲ್ಲಿ ಊಟ ಹಾಕಿಕೊಂಡು ಬರುವೆನು” ಎಂದು ಅಮ್ಮ ಮನೆಯೊಳಗೆ ಹೋಗಿ ಊಟ ತೆಗೆದುಕೊಂಡು ಬಂದರು.
“ಅಮ್ಮ ತಂಗಿಯ ಕಾಯಿಲೆ ಯಾವಾಗ ವಾಸಿಯಾಗುತ್ತದೆ ಅಂತೆ? ಎಲ್ಲ ಸೊರಗಿದೆ ಪುಟ್ಟಿ” ಎಂದನು.
“ಹೌದು ಕಣೋ ಕಾಮಾಲೆಗೆ ಕೆಲವೊಂದು ಪದಾರ್ಥ ತೆಗೆದು ಊಟ ಮಾಡಬೇಕು, ಹಾಗಾಗಿ ಇವಳು ದಿನ ಸ್ವಲ್ಪ ರೊಟ್ಟಿ, ಬೆಳ್ಳುಳ್ಳಿಯ ಸ್ವಲ್ಪ ಖಾರದ ಊಟ ಮಾಡುತ್ತಾಳೆ ಹಾಗಾಗಿ ಹೀಗಾಗಿದ್ದಾಳೆ” ನಿತೀಶ ಅಮ್ಮ ಹೇಳುವುದೇ ನೋಡುತ್ತಿದ್ದ.
“ನೀನು ಊಟ ಮಾಡೋ ತಟ್ಟೆ ಮುಂದಿಟ್ಟುಕೊಂಡು ಮಾತು ಹೇಳುತ್ತಿದ್ದೀಯಲ್ಲ? ಊಟ ಮಾಡು” ಎಂದರು. ಊಟ ಮಾಡಲು ಮುಂದಾದ ನಿತೀಶ. ಆವಾಗಲೇ ಅಪ್ಪಾಜಿ ಬಂದರು. ತಟ್ಟೆಯಲ್ಲಿ ಕೈಯಿಟ್ಟ ನಿತೀಶ ಅನ್ನುವನು ಕಲಕುತ್ತಿದ್ದ ಅಪ್ಪಾಜಿ ಬಂದು ವಿಷಯವನ್ನು ಅವನ ತಟ್ಟೆಯಲ್ಲಿ ಹಾಕಿದರು.
“ಊಟ ಮಾಡೋ” ಎಂದರು ಅದಕ್ಕೆ ಅವನ ಅಮ್ಮ
“ರೀ ಏನಾಯ್ತು ನಿಮಗೆ, ಗದ್ದೆಯ ಕ್ರಿಮಿಕೀಟಗಳ ನಾಶಕ ಔಷಧಿಯನ್ನು ಇವನ ತಟ್ಟೆಯಲ್ಲಿ ಹಾಕಿದ್ದಿರಲ್ಲ” ಎಂದರು ಅಮ್ಮ.
“ನೀನು ಊಟ ಮಾಡೋ, ತಿನ್ನು ಇದನ್ನ” ಇವರ ಕಣ್ಣಿನಲ್ಲಿ ಕೆಂಪನೆ ಬಣ್ಣ ಮೂಡಿತ್ತು. ನಿತೀಶ ಸುಮ್ಮನೆ ಇದ್ದನು. ತಂಗಿ ನಿತೀಶನನ್ನೇ ನೋಡುತ್ತಿದ್ದಳು.
“ರೀ ಇದನ್ನ ತಿಂದರೇ ನಿಮ್ಮ ಮಗ ಸಾಯಿತ್ತಾನೆ”
“ಸಾಯಲೆಂದೆ ಈ ವಿಷ ಅವನ ತಟ್ಟೆಯಲ್ಲಿ ಹಾಕಿದ್ದು.”
“ಏನು ಮಾತನಾಡುತ್ತೀರಾ?” ಎಂದು ಅವರು ತಟ್ಟೆಯನ್ನು ತೆಗೆಯಲು ಮುಂದಾದರು.
“ತಟ್ಟೆ ತೆಗೆಯಬೇಡ” ಎಂದನು ಅಪ್ಪ
“ನಿಮಗೆ ಏನಾಗಿದೆ ನನಗೆ ತಿಳಿತಾ ಇಲ್ಲ”
ತಟ್ಟೆಯನ್ನು ಕೈಯಲ್ಲಿ ಎತ್ತಿಕೊಂಡು
“ಸರಿ ಅವನು ಊಟ ಮಾಡದಿದ್ದರೇ ನಾನೂ ತಿಂದು ಸಾಯಿತ್ತೇನೆ ಕೊಡು. ಆಗಲಾದರೂ
ನೆಮ್ಮದಿ ಜೀವನ ಸಿಗುತ್ತದೆ ನನಗೆ ಕೊಡು”
“ಅಯ್ಯೋ ಮೊದಲು ಏನಾಯ್ತು ಹೇಳಿ” ಎಂದರು ಮೌನದಲ್ಲಿದ ನಿತೀಶ ಮುಂದಾಗಿ
“ಅಮ್ಮ ಊಟ ಕೊಡು ಉಣ್ಣುತ್ತೇನೆ” ಎಂದ.
ಯಾರ ಮಾತನ್ನು ಲೆಕ್ಕಿಸದ ಅಮ್ಮಳು ಆ ಊಟವನ್ನು ಮನೆಯ ಹಿಂದೆ ಹೋಗಿ ಬಿಸಾಡಿ ಚೆಲ್ಲಿ ಬಂದಳು. ಅಷ್ಟರಲ್ಲಿಯೇ ನಿತೀಶನಿಗೆ ಕೋಲೇಟು ಬೀಳುತ್ತಿದ್ದವು. ಅಮ್ಮ ಓಡಿ ಬಂದು ತಡೆಯಲು ಮುಂದಾದರು. ಕೊನೆಗೂ ಯಾರ ಮಾತನ್ನು ಕೇಳದೆ ಕತ್ತು ಹಿಡಿದು ಹೊರ ಹಾಕಿದನು.
“ಮನೆಯಲ್ಲಿ ಇರಬೇಡ, ಬರುವುದು ಬೇಡ. ಎಲ್ಲಾದರೂ ಹೋಗಿ ಸಾಯುವ ದಾರಿ ನೋಡಿಕೊಳ್ಳು ಹೊರಡು. ನಿನ್ನನ್ನೂ ಬೆಳಿಗ್ಗೆ ಅಥವಾ ಸಾಯಂಕಾಲದೊಳಗೆ ಆ ಗೌಡರು ಪ್ರಾಣ ತೆಗೆದುಕೊಳ್ಳುತ್ತಾರೆ. ಮುಂಚೆಯೇ ಮಾರ್ಯಾದೆ ಪ್ರಾಣ ತ್ಯಜಿಸುವ ಕಾರ್ಯಕ್ಕೆ ಇಳಿ”.
“ಗೌಡರ ಮಾನ, ಮಾರ್ಯಾದೆ ಹರಾಜು ಹಾಕಿ ನೀನು ಹೇಗೆ ಬದುಕುಳಿತ್ತೀಯಾ? ನಾನೇ ನಿನ್ನನ್ನು ಸಾಯಿಸುವೆ” ಎನ್ನುತ್ತಿದ್ದರು. ಅತ್ತ ಕಂಬಕ್ಕೆ ಒರಗಿ ನಿಂತಿರುವ ನಿತೀಶನ ಅಮ್ಮಳು ತಲೆ ಸುತ್ತಿದಂತಾಗಿ ಬಿದ್ದರು. ಅವರಿಗೆ ಮಗ ಮತ್ತು ಗಂಡನು ಯಾವುದರ ಕುರಿತಾಗಿ ಮಾತನಾಡುತ್ತಿದ್ದರೆ ಎಂಬುದು ತಿಳಿಯದೆ ಗಂಡನು ಆಡುವ ಕಠೋರ ಮಾತುಗಳು ಅವರನ್ನು ಚಿಂತಿಸುವ, ಯಾತನೆ ಉಂಟಾಗುತ್ತದೆ. ಕೊನೆಗೂ ತಲೆ ಸುತ್ತಿ ನೆಲಕ್ಕೆ ಬಿದ್ದರು. ಅಪ್ಪನು ಹೆಂಡತಿಯನ್ನು ನೋಡಲು ಕಂಬದ ಬಳಿ ಹೋದರು. ೮ ವರ್ಷದ ನೀತಿಶನ ತಂಗಿಯು ಒಮ್ಮೆ ಅಪ್ಪ – ಅಮ್ಮನ ಸಂಕಟವನ್ನು ಮತ್ತೊಮ್ಮೆ ಅಣ್ಣನು ಹೋಗುತ್ತಿದ್ದ ಅವನ ಬೆನ್ನು ಹಿಂದಿನ ಭಾಗ ನೋಡುತ್ತಿದ್ದಳು ಹಿಂದಕ್ಕೆ ತಿರುಗಿ ನೋಡದೆ ನಿತೀಶ ಹೊರಟು ಹೋಗುವನು. ಕತ್ತಲಿನ ಸಮಯ ಎಲ್ಲಿ ಅಂತ ಹೋಗೋದು ಆ ನಿತೀಶ. ಸಂಪೂರ್ಣ ಊರು ಬಿಟ್ಟು ಹೋಗೋಣವೆಂದರೇ ತನ್ನ ಶಾಲೆಯ ವಿದ್ಯಾರ್ಹತೆ ನೆನಪಿಗೆ ಬಂದಿತು. ಅಂತೂ ಕೊನೆಗೂ ನಿತೀಶನು ಊರು ಬಿಟ್ಟು ಹೊರ ಬಂದನು. ಮುಂಜಾನೆ – ಮಧ್ಯಾಹ್ನದ ಹೊತ್ತಿಗೆ ಊರಿನ ಜನರೆಲ್ಲಾ ತತ್ತರಿಸ ತೊಡಗಿದರು. ನಿತೀಶ ಊರು ಬಿಟ್ಟು ಹೋದ ಸುದ್ಧಿ ಊರೆಲ್ಲಾ ಹರಡಿತು. ಊರ ಜನ ಬಂದು ನಿತೀಶನ ಅಪ್ಪನಿಗೆ ಬುದ್ಧಿ ಹೇಳ ತೊಡಗಿದರು. ಅಮ್ಮ ಅಳುವಿನ ಸಾಗರದಲ್ಲಿ ಮುಳುಗಿದ್ದರು. ನಿತೀಶನನ್ನು ಎಲ್ಲಾ ಕಡೆ ಹುಡುಕಿದರು, ಸಿಗದ ನಿತೀಶ. ಮುಂದೆ ಒಂದಿಲ್ಲವಾದರೂ ಒಂದಿನ ಊರಿಗೆ ಬಂದೆ ಬರುತ್ತಾನೆ ಎಂಬ ಭರವಸೆ ಜನರಲ್ಲಿತ್ತು. ಕತ್ತಲೆಯ ಸಮಯದಲ್ಲಿ ಊರು ಬಿಟ್ಟು ಹೋಗಲು ನಿತೀಶನಿಗೆ ಕೊಂಚವೂ ಮನಸ್ಸಿಲ್ಲ. ಆದರೂ ಅಪ್ಪ-ಅಮ್ಮನಿಗೆ ನಾನು ಬೇಸರ ತರುವುದು ಬೇಡ ಎಂದು ಹೊರಟನು. ಊರಿನಿಂದ ನಡೆಯಲು ಸುರು ಮಾಡಿದ ಅವನಿಗೆ ನಡೆದು ನಡೆದು ತೀರಾ ಸುಸ್ತೋ ಸುಸ್ತು. ದೂರದಲ್ಲಿರುವ ಒಂದು ನಗರಕ್ಕೆ ಮೂರನೇ ದಿನಕ್ಕೆ ತಲುಪಿದನು. ಒಂದು ಸುಂದರವಾದ ಮನೆಯನ್ನು ಕಂಡನು. ಹೂವು-ಮರಗಳಿಂದ ಆವೃತ್ತವಾದ ಆವರಣದಲ್ಲಿ ತಂಪನೆ ಗಾಳಿಗೆ ಉಪವಾಸದಿಂದ ಮಲಗಿದ್ದ.
“ಅಯ್ಯೋ! ಅದನ್ನು ಹಿಡಿದುಕೊಳ್ಳಿ, ಓಡಿ ಹೋಗುತ್ತೆ. ಇನ್ನು ಸ್ವಲ್ಪ ಚಿತ್ರ ಬಿಡಿಸೋದು ಇದೆ ಆದರ ಮೈ ಮೇಲೆ” ಎಂದು ಚೀರುತ್ತಾ ಕೂಗುತ್ತಾ ಆವರಣದಲ್ಲೆಲ್ಲಾ ಓಡಾಡುತ್ತಿದ್ದಳು. ಆ ಮನೆಯ ಆವರಣದಲ್ಲಿ ನಿತೀಶನು ಚೆಂಡೂ ಹೂವಿನ ಸಾಲು, ಮಲ್ಲಿಗೆ ಹೂವಿನ ಸಾಲು, ಸಂಪಿಗೆ ಹೂವಿನ ಸಾಲುಗಳ ನೆರಳಲ್ಲಿ ಮಲಗಿದ್ದ. ಅವಳು ಆ ಆವರಣದಲ್ಲಿ ಓಡಾಡುತ್ತಿರಬೇಕಾದರೆ ಮಲಗಿದ್ದ ನಿತೀಶನನ್ನು ಕಾಣದೆ ಅವನ ಹೃದಯದ ಮೇಲೆ ಗೆಜ್ಜೆ ಹಾಕಿಕೊಂಡಿರುವ ನುಣುಪಾದ ಕಾಲನ್ನು ಇಟ್ಟು ಮುಂದೆ ಸಾಗಿದಳು. ಅವಳು ನಿತಿಯ ಎದೆಯ ಮೇಲೆ ಪಾದ ಇಟ್ಟು ಮುಂದೆ ನೋಡುತ್ತಾ ಹೋದಾಗ ನಿತೀಶನಿಗೆ ದಿಗ್ಭçಮೆ! ಎಚ್ಚರವಾಯಿತು. ಎದ್ದು ನಿಂತನು. ಹಳ್ಳಿಯಿಂದ ಇಷ್ಟೊಂದು ದೂರ ಬಂದಿರುವುದು ಮರೆತು ಹೋಗಿತ್ತು. ಹಸಿವಾಗಿದೆ. ಏನು ಮಾಡಬೇಕು? ನಿಂತು ನೋಡುತ್ತಿದ್ದನು. ಅವಳು ಕೈಯಲ್ಲಿ ತಾನು ಧರಿಸಿದ ಅಂಚಿನ ಲಂಗ ಹಿಡಿದು ಆವರಣದಲ್ಲೆಲ್ಲಾ ಓಡಾಡುತ್ತಿದ್ದಾಳೆ. ಅವಳು ಜಿಂಕೆಯನ್ನು ಹಿಡಿಯಲು ಅತ್ತ-ಇತ್ತ ಯಾರನ್ನೂ ನೋಡದೆ ತಾನು ಸಾಕಿದ ಮೆಚ್ಚಿನ ಜಿಂಕೆಯನ್ನು ಹಿಡಿದಾಡಲು ತನ್ನ ಲಂಗ ಹಿಡಿದು ಕಾಲಿನ ಗೆಜ್ಜೆಯ ಶಬ್ದವೂ ಗಿಲ್-ಗಿಲ್ ಎನ್ನುತ್ತಿವೆ. ಹಾಗೇ ಮುಖದಲ್ಲಿ ಭಯ ಒಂದು ಕಡೆ ದುಗುಡ, ಜಿಂಕೆಮರಿ ಎಲ್ಲಿ ತನ್ನ ಕೈಯಿಂದ ತಪ್ಪಿಸಿಕೊಳ್ಳುತ್ತಿದೆಯೋ ಎಂಬ ಭಯ ಅವಳಲ್ಲಿ. ಸ್ವಲ್ಪ ಸಮಯದ ಬಳಿಕ ಜಿಂಕೆಮರಿ ನಿಂತುಕೊಂಡು ಉಸಿರಾಡುತ್ತಿತ್ತು. ಅದನ್ನು ಕಂಡ ಅವಳು ಹಿಡಿಯಲು ವೇಗವಾಗಿ ಹೋದರೆ ತನ್ನ ಕೈಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ಮೆಲ್ಲನೆ ಮೆಲ್ಲನೆ ತನ್ನ ಪಾದದ ಹೆಜ್ಜೆಯನಿಡುತ್ತಾ ಹೂ-ಗಿಡಗಳ ಬಳಿ ಬಾಗಿ, ಬಾಗಿ ಜಿಂಕೆ ಕಣ್ಣಿಗೆ ಕಾಣದೆ ಹಾಗೇ ಅದರ ಹಿಂದೆ ಹೋಗುತ್ತಿದ್ದಳು. ತುಟ್ಟಿಯನ್ನು ಗಟ್ಟಿಗೆ ಬಿಗಿದು, ಕಣ್ಣನು ಚಿಕ್ಕದಾಗಿ ಮಾಡಿಕೊಂಡು, ಹುಬ್ಬುಗಳನ್ನು ಗಂಟು ಹಾಕಿ, ಶಬ್ದ ಜಿಂಕೆಯನ್ನು ಹಿಡಿಯಬೇಕೆನ್ನುವಷ್ಟರಲ್ಲಿಯೇ ಕ್ಷಣಾರ್ಧದಲ್ಲೇ ಅಂತರ್ಧಾನ. ನಿಂತು ಬಿಟ್ಟಳು. ಮೊಗವನ್ನು ಅಗಲಿಸಿದಳು. ಕೈಯ ಬೆರಳನ್ನು ಹಲ್ಲಿನ ಮೇಲಿಟ್ಟು “ಎತ್ತ ಹೋಯಿತಪ್ಪ ಈ ಜಿಂಕೆ” ಎಂದು ಆಲೋಚಿಸಿದಳು. ಇತ್ತ ನಿತೀಶ ಕುಮಾರನು ಜಿಂಕೆಮರಿಯನ್ನು ಎತ್ತಿಕೊಂಡು ಮುದ್ದಾಡಿಸುತ್ತಿದ್ದ. ಆ ಜಿಂಕೆಯ ಮೈಮೇಲೆ ಚಿತ್ರಿಸಿದ್ದ ಕಲೆಯನ್ನು ಕಂಡ ನಿತೀಶ ಬೆರಗಾಗಿ ನೋಡುತ್ತಾ ನಿಂತಿದ್ದನು. ಅಷ್ಟರಲ್ಲಿಯೇ ಜಿಂಕೆಯನ್ನು ಹಿಡಿಯಲು ಓಡಾಡುತ್ತಿದ್ದ ಅವಳನ್ನು ನೋಡಿದ್ದ. ಸ್ವಲ್ಪ ಸಮಯ ದಿಟ್ಟಿಸಿ ಜಿಂಕೆಯನ್ನು ನೋಡಿ ಅವಳ ಹತ್ತಿರ ಹೋಗಿ ಅವಳ ಮುಂದೆ ನಿಲ್ಲಿಸಿದನು. ಆಗ ಅತಳು ಆ ಜಿಂಕೆಯನ್ನು ಎತ್ತಿಕೊಂಡು “ಹೇ ಜಿಂಕೆ ನನ್ನನ್ನು ಸುಸ್ತಾಗುವರೆಗೂ ಓಡಾಡಿಸುತ್ತಿಯಲ್ಲಾ? ಏನ್ ಮಾಡುತ್ತೀಯಾ ನಿನ್ನ ಮೇಲೆ ನನ್ನ ಪ್ರೀತಿ ಹೆಚ್ಚಾಗಿದೆಯಲ್ಲಾ ಅದಕ್ಕೆ ಅನಿಸುತ್ತೆ ಮಗನೇ ಇರು ಇವತ್ತು ನಿನಗೆ ಊಟನೇ ಇಲ್ಲ.” ಎಂದು ಪಟ-ಪಟನೇ ಮಾತಾಡುತ್ತಿದ್ದಳು. ಅಯ್ಯೋ! ಅವಳಿಗೆ ಮುಂದೆ ನಿಂತಿರುವ ನಿತೀಶನನ್ನು ನೋಡಿದ್ದಳೋ ಅಥವಾ ಇಲ್ಲೋ ಗೊತ್ತಿಲ್ಲಾ ಆದರೇ ಅವನನ್ನು ‘ನೀನು ಯಾರು?’ ಎಂಬ ಪ್ರಶ್ನೆಯನ್ನು ಮಾಡದೇ ಜಿಂಕೆಯನ್ನು ಕರೆದುಕೊಂಡು ಹೊರಟು ಹೋಗುವಳು ಅರಮನೆಗೆ. ನಿತೀಶ ಅವಳಿಗೆ ಅಪರಿಚಿತ ಆದರೂ ಅವಳು ಕೇಳಬೇಕಿತ್ತು ನೀನು ಯಾರು? ಎಂದು ಕೇಳಿಲಿಲ್ಲ ಅಂದರೇ ಏನು ಅರ್ಥ. ನಿತೀಶನ ಮೊಗದಲ್ಲಿನ ಕಳೆಯನ್ನು ಹೊರಟು ಹೋಗಿತ್ತು. ಹೊಟ್ಟೆಗೆ ಊಟವಿಲ್ಲದೆ ದಣಿದಿದ್ದ. ಸ್ವಲ್ಪ ತಂಗಾಳಿ ಬೀಸಿದಂತಾಯಿತು. ಎಲೆಗಳೆಲ್ಲಾ, ಧೂಳು ನಿತೀಶನ ಮೈಯೆಲ್ಲಾ ಆವರಿಸಿತ್ತು. ಜಿಂಕೆಯನ್ನು ಬಿಟ್ಟು ಅವಳು ಅರಮನೆಯಿಂದ ಒಂದು ಪಾತ್ರೆಯಲ್ಲಿ ಅನ್ನ ತೆಗೆದುಕೊಂಡು ಬಂದು ನಿತೀಶನಿಗೆ ನೀಡಲೂ ಮುಂದಾದಳು. ನಿತೀಶನಿಗೆ ಆಶ್ಚರ್ಯ “ನಾನು ಬಾಯಿ ಬಿಟ್ಟು ಇವಳಿಗೆ ಊಟ ಕೇಳಲೇ ಇಲ್ಲ ಆವಾಗಲೇ ಊಟ ನೀಡುತ್ತಿದ್ದಾಳೆ” ಎಂದು ಆಲೋಚಿಸುತ್ತಿದ್ದ. ಯಾರು, ಯಾರನ್ನು ಹೇಗೆ ಮಾತನಾಡಿಸಬೇಕೆಂಬುದು ಇಬ್ಬರ ಮೊಗದಲ್ಲಿ ಕಾಣುತ್ತಿತ್ತು. ಆದರೂ ಮಾತಾಡದೆ ಮೌನದಲ್ಲಿದ್ದರು. ಅವಳಿಗೆ ಯೋಚನೆಯಾಗ ತೊಡಗಿತು. “ಏಕೆ? ಇವನು ಊಟ ತೆಗೆದುಕೊಳ್ಳುತ್ತಿಲ್ಲ. ಊಟ ಕೇಳೋಕೆ ಬಂದವನು ಇದನ್ನು ಸ್ವೀಕರಿಸುತ್ತಿಲ್ಲಲ್ವ. ಏನರ್ಥ” ಎಂದು ಯೋಚಿಸುತ್ತಿದ್ದಳು. ನಿತೀಶನು ಮೆಲ್ಲನೆ “ನಾನು ನಿಮಗೆ ಹೇಗೆ ಕಾಣಿಸುತಾ ಇದ್ದೇನೆ”.
“ಹೇಗೆ ಅಂದರೆ ಮನುಷ್ಯನಾಗಿ” ಎಂದಳು.
‘ಅಯ್ಯೋ ಇದೇನಿದೂ ಈಕೆ ನಾನೊಂದು ಕೇಳಿದರೆ ಇವಳೊಂದು ಹೇಳುತ್ತಾ ಇದ್ದಳೆ’ ಎಂಬ ಯೋಚನೆ ಅವನಲ್ಲಿತ್ತು. ಮತ್ತೊಮ್ಮೆ ನಿತೀಶನು.
“ಅಲ್ಲ. ನನಗೆ ಹಸಿವಾಗಿದೆ, ಊಟ ಕೇಳೋಕೆ ಬಂದಿದ್ದೆನೆ ಅಂತ ನಿಮಗೆ ಗೊತ್ತಿತ್ತಾ?” ಎಂದನು
ಅವಳು “ಅಯ್ಯೋ! ಈ ಭಿಕ್ಷÄಕನಿಗೇನು ಹುಚ್ಚ’ ಭಿಕ್ಷೆ ಬೇಡೋಕೆ ಬಂದವನು ಊಟ ಕೊಡುತ್ತಿದ್ದರೆ ಏನೇನೋ ಮಾತನಾಡುವನಲ್ಲ’ ಎಂದು ಮನದಲ್ಲಿ ಆಲೋಚಿಸುತ್ತಾ.
“ಭಿಕ್ಷುಕನಿಗೆ ಊಟ ಕೊಡುವುದು ಧರ್ಮ. ಹಾಗಾಗಿ ನಿನಗೆ ಊಟದ ಬಿಕ್ಷೆ. ಅದನ್ನು ಬಿಟ್ಟು ಏನು ಮಾತನಾಡುತ್ತೀಯಾ?” ಎಂದಳು. ‘ನಾ ಭಿಕ್ಷುಕ’. ಊಟದ ತಟ್ಟೆ ತೆಗೆದುಕೊಂಡು ಆ ಆವರಣದಿಂದ ಹೊರಗಡೆ ಹೊರಟನು ನಿತೀಶ.

೮.
ಜೋರಾದ ಗುಡುಗು ಸಿಡಿಲಿನ ಆರ್ಭಟ, ಮಿನುಗುವ ಮಳೆಯ ಮಿಂಚು, ಮೋಡ ಮೋಡ ಟಚ್ಚಾಗಿ ಘರ್ಷಣೆ, ಕತ್ತಲೆ ಕವಿಯಿತು, ಗಿಡ-ಮರಗಳು ನಾಗವಲಿ ‘ತಮ್ಮ ಮೈಯೆಲ್ಲಾ ಆವರಿಸಿದಂತೆ ಜೋಲಾಡ ತೊಡಗಿದವು, ಮುದಿ ಎಲೆಗಳು ಉದುರಿದವು, ಚಿಗುರೆಲೆ ನಗುತ್ತಿದ್ದವು, ಕಿಟಕಿ-ಬಾಗಿಲುಗಳ ಭಯಂಕರ ಶಬ್ದ. ಇನ್ನೇನೂ ಮಳೆ ಬರುವಷ್ಟರಲ್ಲಿ ನಿತೀಶನ ಮೈಯಲ್ಲಾ ಬೆವರು ಸುರಿಯಲಾರಂಭಿಸಿತು. ದೇವಾಲಯದ ಘಂಟೆಗಳು ನಾದ ನಿನಾದ, ನಾನು ಹೆಚ್ಚು, ನೀನು ಹೆಚ್ಚೋ ಎಂದು ಕುಣಿದಾಡುವಂತೆ ಕಾಣುತ್ತಿದ್ದವು. ನಿತೀಶನು ನಡು ಬೀದಿಯಲ್ಲಿ ನಿಂತಿದ್ದನು. ಯಾವ ಮರದ ಕೆಳಗೆ ನಿಲ್ಲಬೇಕೂ? ಅಥವಾ ಎಲ್ಲಿ ಓಡಬೇಕೋ ಎಲ್ಲಿ ಸೇರಬೇಕೋ ಎಂಬ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವಾಗಲೆ “ತಕ್ಕಡದಿಮ್ ಥೈ….”ಎಂದು ಮಳೆ ಜೋರಾಗಿ ಬಂದೇ ಬಿಟ್ಟಿತು. ನಿತೀಶನ ಮೈಯಲ್ಲಾ ಒದ್ದೆಯಾಗಿ ನಡುಗಲು ಪ್ರಾರಂಭಿಸಿದ. ನೀರು ಹರಿಯ ತೊಡಗಿದವು. ತಾನು ಇನ್ನೇನೂ ತಲೆ ಸುತ್ತಿ ಬೀಳುವನು ಎನ್ನುವಷ್ಟರಲ್ಲಿಯೇ ದೇವಸ್ಥಾನದ ಗಂಟೆಗಳು ಇವನನ್ನು ಕೂಗಿ ಕರೆದಂತೆ ಕಾಣಿಸುತ್ತಿತ್ತು. ಇವನ ಕಿವಿ ಆ ಕಡೆ ಸುಳಿದವು. ಬಿರುಗಾಳಿ ಬೀಸಿದ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆದರೇ ಮಳೆರಾಯ ಮಾತ್ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕದೆ ತನ್ನ ಕಾರ್ಯದಲ್ಲಿ ಮಗ್ನವಾಗಿತ್ತು. ಒಂದೊಂದೇ ಪಾದವನ್ನು ಆ ಪಾಕದಿಂದ ತೆಗೆದು ದೇವಸ್ಥಾನದ ಕಡೆ ಹೊರಟ. ದೇವಾಲಯ ತಲುಪಿ ಗರ್ಭಗುಡಿಯಿಂದ ಕುಳಿತನು. ನಿತೀಶನು ಹಳ್ಳಿಯಲ್ಲಿದ್ದಾಗ ಮಳೆಯಲ್ಲಿ ಅವನ ಮಾಳಿಗೆ ರಿಪೇರಿ ಮಾಡಲು ಹೋಗಿ ನೆನೆದಿದ್ದ ಅನುಭವ ಇವನ್ನಲ್ಲಿತ್ತು. ಆದರೂ ಹೊಟ್ಟೆಗೆ ಊಟವಿಲ್ಲದ್ದ ಇವನಿಗೆ ಒಂದೊಂದು ಹನಿ ಇವನ ಮೈಗೆ ಸೂಜಿ ಚುಚ್ಚಿದಂತೆ ಕಾಣುತ್ತಿತ್ತು. ಅದನ್ನು ತಾಳದ ನಿತೀಶನು ಗರ್ಭಗುಡಿಯಿಂದ ಮುದಡಿ ಕುಳಿತನು. “ನಿಶಾ ಈ ಕಡೆ ಬಾರಮ್ಮ. ಆ ಕಡೆ ಮಳೆಯ ರಭಸ ಜಾಸ್ತಿ ಇದೆ” ಎಂದು ಮುದುಕಿ ಗೊಣಗುತ್ತಿದ್ದಳು.“ಇರಲಿ ಬಿಡಿ ಅಜ್ಜಿ. ಅರಮನೆಯಲ್ಲಿದ್ದರೆ ಮಳೆಯನ್ನು ನೋಡಲು ಸಹ ಆಗುತ್ತಿರಲಿಲ್ಲ. ಇವತ್ತು ನೋಡು ಈ ದೇವಾಲಯದಲ್ಲಿ ಸಿಕ್ಕಿಹಾಕಿಕೊಂಡು ಮಳೆಯ ಆನಂದವನ್ನು ಸವಿಯುವ ಅವಕಾಶ ದೊರೆತಿದೆ. ಅದನ್ನು ನೋಡಲು ಬಿಡುತ್ತಿಲ್ಲ. ಹೋಗಿ ಅಜ್ಜಿ ನೀವು” ಎಂದು ನಿಶಾಳ ಮುಖ ಮುದುಡಿ ತೊಡಗಿತು.
“ಇಲ್ವೇ ನಿಶಾ ಮೈಯಲ್ಲಾ ಒದ್ದೆಯಾದರೆ ತೊಂದರೆ” ಎಂದು ಅಜ್ಜಿ ನುಡಿದಳು. ನಿಶಾಳು ಅಜ್ಜಿ ಹೇಳುವುದನ್ನು ಲೆಕ್ಕಿಸದೆ ಹಾಗೆಯೇ ನಿಂತುಕೊಂಡಿದಳು. ಗರ್ಭಗುಡಿಯಿಂದ ಕುಳಿತಿದ್ದ ನಿತೀಶನಿಗೆ ನಿಶಾ ಹಾಗೂ ಅವಳ ಅಜ್ಜಿ ಮಾತನಾಡುವುದು ದಿಟ್ಟು ದೇವರಿಗೆ ಶ್ಲೋಕ ಹೇಳುವ ಹಾಗೆ ಅನಿಸುತ್ತಿತ್ತು. ಆದರೇ ನಿತೀಶನು ಅರಮನೆಯ ಹುಡುಗಿ ನಿಶಾ ಎಂದು ತಿಳಿದಿರಲಿಲ್ಲ. ಸಮಯ ಕಳೆಯ ತೊಡಗಿತು. ಕಾರ್ಮೋಡ ಕೆರಳಿ, ಭೂಮಿಯೆಲ್ಲಾ ಹಸಿಯಾಗಿ, ತಂಪಾದ ಗಾಳಿ ಬೀಸ ತೊಡಗಿತು. ನಿಶಾಳು “ಮತ್ತೊಮ್ಮೆ ದೇವರ ಹತ್ತಿರ ಪ್ರಾರ್ಥನೆ ಮಾಡಿ ಬರುತ್ತೇನೆ ಅಜ್ಜಿ” ಎಂದು ಗರ್ಭಗುಡಿ ಹತ್ತಿರ ಬಂದು ಎರಡು ಕೈಯನ್ನು ಮುಗಿಯುತ್ತಾ,
“ಶ್ರೀ ಆಂಜನೇಯ ಸ್ವಾಮಿ ನಿನಗೆ ನನ್ನ ಮೇಲೆ ಅನುಕಂಪ ಹುಟ್ಟುತ್ತಿಲ್ಲ. ಯರ‍್ಯಾರೋ ಏನು ಕೇಳಿದರೂ ಕೊಡುತ್ತಿಯಾ ಆದರೇ ನಾನು ಏಳು ವರ್ಷಗಳಿಂದ ನಮ್ಮಮ್ಮನನ್ನು ಕೇಳುತ್ತಾ ಇದ್ದೇನೆ. ಆದರೇ ನೀನು ನಮ್ಮಮ್ಮಳನ್ನು ಮಾತ್ರ ಕೊಡುತ್ತಿಲ್ಲ ಯಾಕೆ?. ಒಂದು ದಿನ… ಎರಡು ದಿನ ಅನ್ನದೇ ಏಳು ವರ್ಷಗಳಾಯಿತು ನಾನು ನಮ್ಮಮ್ಮನ ಆಗಮನದ ದಾರಿಗಾಗಿ ಕಾಯುತ್ತಿರುವೆ. ಬೇಗ ಅಮ್ಮನನ್ನು ಕಳುಹಿಸು ನನ್ನ ಹತ್ತಿರ. ಎಂದು ನಿಶಾಳು ಮಂಡಿಯೂರಿ ದೇವರ ಹತ್ತಿರ ಬೇಡುತ್ತಿದ್ದಳು. ದೇವರ ಹಿಂದೆ ಕುಳಿತಿರುವ ನಿತೀಶನಿಗೆ ಆಶ್ಚರ್ಯವೇ ಆಶ್ಚರ್ಯ. ಸ್ವಲ್ಪ ಕತ್ತು ಬಾಗಿಸಿ ನೋಡಿದ. ಕಣ್ಣ ರೆಪ್ಪೆಯನ್ನು ಫಳ-ಫಳಿಸಿ ನೋಡಿದ ಅರಮನೆಯ ಹುಡಿಗಿ ನಿಶೆಯಳು ಅವನ ಎದುರಿಗೆ ಕಂಡಳು. ಹಾಗೇ ನೋಡುತ್ತಿದ್ದ. ಪ್ರಾರ್ಥಿಸುತ್ತಿದ್ದ ನಿಶಾಳು ಕಣ್ಣು ಬಿಡುವ ಸೂಚನೆ ಕಾಣಿಸಿತೊಡಗಿತ್ತು. ನಿತೀಶನು ಬಾಗಿ ನೋಡುತ್ತಿದ್ದ ಬೇಗನೆ ಹಿಂದಕ್ಕೆ ತನ್ನ ಕತ್ತನ್ನು ಹಿಂದುರಿಗಿಸಿದನು. ಅಲ್ಲಿಂದ ನಿಶಾಳು ಎದ್ದು ಅಜ್ಜಿಯ ಕಡೆ ಹೊರಟಳು. ನಿತೀಶನು “ಏನಿದು? ಈಕೆ ನಿನ್ನೆ ತನ್ನ ಅರಮನೆಯಲ್ಲಿ ನಗು-ನಗುತಾ ನನಗೆ ಊಟ ಕೊಟ್ಟಳು. ಇವತ್ತು ದೇವರ ಮುಂದೆ ‘ಅಮ್ಮ’ ಬೇಕು ಎಂದು ಅಳುತ್ತಾ ಪ್ರಾರ್ಥನೆ ಮಾಡುತ್ತಿದ್ದಾಳೆ. ಅಯ್ಯೋ! ಪಾಪ ಅವಳು ಅಮ್ಮನನ್ನು ಕಳೆದುಕೊಂಡಿರಬೇಕು. ಹಾಗಾಗಿ ಇಷ್ಟೊಂದು ನೋವಿದೆ ಆಕೆ ಹತ್ತಿರ.” ಎಂದು ನಿತೀಶನು ಎದ್ದು ನಿಂತುಕೊಂಡು. ದೇವರ ಮುಂದೆ ಬಂದು
“ದೇವರೆ ಎಲ್ಲಾರಿಗೂ ಒಂದೊಂದು ರೀತಿಯ ಕಷ್ಟ ಕೊಡುತ್ತೀಯಾ ಅಲ್ವ? ನನಗೆ ನೋಡು ನನ್ನ ಹಳ್ಳಿ ಬಿಟ್ಟು ಹೊರಗಡೆ ಕಳುಹಿಸಿದ್ದೀಯಾ, ಆ ಅರಮನೆ ಹುಡಿಗಿಗೆ ಅಮ್ಮನನ್ನು ಕಿತ್ತುಕೊಂಡು ಅವಳಿಗೆ ಅಮ್ಮನ ನೋವು ನೀಡಿದ್ದೀಯಾ. ಈ ಲೋಕದಲ್ಲಿ ನೆಮ್ಮದಿ ಜೀವನ ಯಾರಿಗಿದೆ ಹೇಳು? ಯಾರಿಗೂ ನೀನು ನೆಮ್ಮದಿ ನೀಡಿಲ್ಲ. ಮನುಷ್ಯನಿಗೆ ಬೇಕಾದುದು ನೆಮ್ಮದಿ. ಆ ನೆಮ್ಮದಿಯನ್ನು ಯಾರೂ ತಮ್ಮ ಜೀವನದಲ್ಲಿ ಕಂಡುಕೊಳ್ಳುವರೋ ಅವರೇ ಧನ್ಯರೂ.” ಎಂದು ಬೇಡುತ್ತಾ ದೇವರ ಸುತ್ತಲೂ ಪ್ರದಕ್ಷಣೆ ಹಾಕುತ್ತಾ, ಹಾಕುತ್ತಾ ‘ಅಮ್ಮ’ ಎಂದು ಕಿರುಚಿದ. ನೋವು, ಬಾಗಿ ನೋಡಿ ಕಾಲಿಗೆ ಚುಚ್ಚಿದ ಕಾಲ್ಗೆಜ್ಜೆಯನ್ನು ಎತ್ತಿ ಹಿಡಿದನು. ಆ ಗೆಜ್ಜೆಯ ಕೊಂಡಿಲು ಅವನ ಕಾಲಿಗೆ ಆಳವಾಗಿ ಚುಚ್ಚಿ ಬಿಟ್ಟಿತ್ತು. ಹಾಗೇ ನೋಡುತ್ತಾ,
“ಯಾರದ್ದು? ಇದು ಗೆಜ್ಜೆ. ಗರ್ಭಗುಡಿಯೊಳಗೆ ಹೇಗೆ ಬಂತು” ಎಂದು ಆಲೋಚಿಸುತ್ತಾ, ನಿಂತನು.
“ಇಲ್ಲ. ಅಜ್ಜಿ ನನ್ನ ಕಾಲ್ಗೆಜ್ಜೆ ಇಲ್ಲೆ ಎಲ್ಲಿಯಾದರೂ ಬಿದ್ದಿರಬೇಕು. ಹುಡುಕುತೀನಿ ನೀನು ಇರು. ಎಂದು ನಿಶಾ ಮಳೆಯಿಂದ ತೋಯ್ದ ದೇವಾಲಯದ ಅಂಗಳದ ಸುತ್ತಲೂ ಹುಡುಕಲು ಆರಂಭ ಮಾಡಿದಳು. ಸಿಗಲೇ ಇಲ್ಲ. ಸುಸ್ತಾದ ನಿಶಾ. ಸುಸ್ತಾದ ಅಜ್ಜಿ.
“ಇರಲಿ ಬಿಡಮ್ಮ ಕಾಲ್ಗೆಜ್ಜೆ ತಾನೆ ಹೋಗಲಿಬಿಡು”. ಎಂದಳು ಅಜ್ಜಿ.
“ಆಗಲ್ಲ ಅಜ್ಜಿ, ಗೆಜ್ಜೆ ಸಿಕ್ಕರೆ ತೃಪ್ತಿ ಅಲ್ವ?. ಇಲ್ಲವೆಂದರೆ ಅತೃಪ್ತಿ. ದೇವಾಲಯಕ್ಕೆ ಬಂದ ನಾವು ಅತೃಪ್ತಿಯಿಂದ ಹಿಂದಕ್ಕೆ ಹೋಗಬಾರದಲ್ವ? ಇನ್ನೂ ಸ್ವಲ್ಪ ಹುಡುಕುವೇ. ಪ್ರಯತ್ನ ನಮ್ಮದು ಫಲ ದೇವರದಲ್ಲವ್ವ? ಮತ್ತೆ ನಮಗೆ ಮನೆಗೆ ಹೋದ ಬಳಿಕ ಆನೆಮ್ಮದಿ ನಮ್ಮಲ್ಲಿ ಕಾಡಬಾರದಲ್ಲವ್ವ”. ಎಂದು ನಿಶಾ ಹಾಗೆ ಹುಡುಕುತ್ತಿದ್ದಳು.
ಇತ್ತ ನಿತೀಶನು “ಈ ಗರ್ಭಗುಡಿಯೊಳಗೆ ಮಳೆ ಬಂದ ನಂತರ ನಾನು ಬಂದಿರೋದು, ಮತ್ಯಾರು? ಬಂದಿರೋದು. “ಹೋ…..ಆಕೆ ಆ ಅರಮನೆ ಹುಡುಕಿದೆ ಈ ಕಾಲ್ಗೆಜ್ಜೆ.” ಎಂದು ನಿತಿಯು ದೇವರಿಗೆ ಕೊನೆಯದಾಗಿ ನಮಸ್ಕರಿಸಿ ಗರ್ಭಗುಡಿಯಿಂದ ಹೊರಗೆ ಬಂದನು. ಬಂದು ನಿಶಾ ಹಾಗೂ ಅವಳ ಅಜ್ಜಿಯನ್ನು ಕಂಡನು. ಕೊನೆಯದಾಗಿ ನಿಶಾಳ ಪಕ್ಕ ಬಂದು ನಿಂತನು. ನಿಶಾಳು ಎದ್ದು ನಿಂತಳು. ನಿಂತೂ
“ಈ ಭಿಕ್ಷುಕನ ಎಲ್ಲಿ ನೋಡಿರುವೆ?” ಎಂದು ಚಿಂತಿಸುತ್ತಿದ್ದಳು. ನಿತಿಯು ಬಳಿಕ
“ಇದು ನಿನ್ನದಾ?” ಎಂದನು ನಿತೀಶ. ಅಜ್ಜಿ ಅವನನ್ನು ನೋಡುತ್ತಿದ್ದಳು. ನಿಶಾಳು ಅವನ ಕೈಯಲ್ಲಿದ ಗೆಜ್ಜೆಯನ್ನು ನೋಡುತ್ತಾ.
“ಹೌದು ಈ ಕಾಲ್ಗೆಜೆ ನನ್ನದೆ, ನಿನ್ನ ಕೈಯಲ್ಲಿ ಹೇಗೆ ಬಂತು?.” ಎಂದು ನಿಶಾಳು ಪ್ರಶ್ನಿಸಿದಳು.
“ಹೌದು ನಾನು ಅಂದುಕೊAಡಿದ್ದೆ ಸರಿ” ಎಂದನು ನಿತಿ.
“ನೀನು ಏನು? ಅಂದುಕೊAಡಿರುವೆ” ನಿಶಾ ಕೇಳಿದಳು.
“ಈ ಗೆಜ್ಜೆ ನಿಮ್ಮದೆ ಅಂತ. ಈ ಕಾಲ್ಗೆಜ್ಜೆ ದೇವಸ್ಥಾನದ ಒಳಗಡೆ ನನಗೆ ದೊರಕಿತು ತಗ್ಗೊಳ್ಳಿ” ಎಂದು ನಿತೀಶನು ಅವಳ ಕೈಗೆ ಅದನ್ನು ನೀಡಿದನು. ಖುಷಿಯಿಂದ ನಿಶಾ ಅದನ್ನು ತೆಗೆದುಕೊಂಡಳು. ಧನ್ಯವಾದ ಹೇಳಿದಳು. ನಿಂತುಕೊಂಡಿರುವ ಅಜ್ಜಿಗೆ ಸಂತಸವಾಯಿತು. ಅಜ್ಜಿಯು
“ನಿಶಾ ಯಾರಮ್ಮ ಇವನು? ನಿನಗೇನು ಮೊದಲೆ ಪರಿಚಯನಾ?”
“ಇಲ್ಲ ಅಜ್ಜಿ. ಆದರೇ ಎಲ್ಲೋ ನೋಡಿದ ನೆನಪು” ತುಟಿಯ ಮೇಲೆ ಬೆರಳಿಟ್ಟು ಯೋಚಿಸಿದಳು. ಕೊನೆಗೆ ಅವಳ ತಲೆಗೆ ಆಗ ಸ್ಮರಣೆ ಬಂತು.
“ಹೌದೌದು. ಇವನು ಭಿಕ್ಷÄಕನೇ ಸರಿ. ನಿನ್ನೆ ನೋಡಿದ್ದೆ. ಅಜ್ಜಿ ಇವನು ಭಿಕ್ಷÄಕ ಅಜ್ಜಿ, ಭಿಕ್ಷುಕ”
ನಿತೀಶ ಮುಖ ಸಪ್ಪಗೆ ಮಾಡಿಕೊಂಡನು. ಅವಳ ಅಜ್ಜಿಯು ‘ಒಳ್ಳೆ ಹುಡುಗ. ದೇವರು ನಿನಗೆ ಒಳ್ಳೆಯದು ಮಾಡಲಿ” ಎಂದು ತನ್ನ ಕೈಯಲ್ಲಿದ 2 ರೂಪಾಯಿಯನ್ನು ಅವನ ಕೈಯಿಗೆ ನೀಡಿದಳು. ನಿಶಾ ಹಾಗೂ ಅವಳಜ್ಜಿ ಹೊರಡಲು ಸಿದ್ದರಾದರು. ಹೋಗುವ ಮುನ್ನ.
“ಮಗು ನಿನ್ನ ಹೆಸರೇನು? ಕಂದ” ಅಜ್ಜಿ ನಿತೀಶನಿಗೆ ಕೇಳಿದಳು. ನಿತೀಶನು ಮೆಲ್ಲಗೆ…..
“ನಿತೀಶಕುಮಾರ” ಎಂದು ಉತ್ತರಿಸಿದನು.
“ನಿತೀಶ ಕುಮಾರ! ನಿತೀಶ ಎಂದರೆ ಗುರು ಹೇಳಿದ ದಾರಿಯಲ್ಲಿ ನಡೆಯುವ ಎಂದರ್ಥಪ್ಪ. ಮುಗ್ದ ಹುಡುಗ ನೋಡಿದರೆ ಗೊತ್ತಾಗುತ್ತದೆ” ಎಂದಳು ಅಜ್ಜಿ. ನಿಶಾಳು ಕಾಲ್ಗೆಜ್ಜೆ ಕಾಲಿಗೆ ಹಾಕಿಕೊಂಡು ಅಜ್ಜಿಯ ಜೊತೆ ಹೊರಡಲು ಸಿದ್ಧಳಾದಳು. ನಿತೀಶನ್ ಸಹ ಹೊರಡಲು ಸಿದ್ಧನಾದನು. ನಿಶಾ ಹಾಗೂ ಅವಳ ಅಜ್ಜಿ ಹೋಗೋದು ಅವರ ಅರಮನೆಗೆ ಆದರೇ ನಿತೀಶನು ಹೋಗುವುದಲ್ಲಿಗೆ…? ಯೋಚನೆಯ ಮಂಪರಿನಲ್ಲಿದ್ದ ನಿತೀಶನು ಪುನಃ ಎದ್ದು ನೋಡಿದ. ಸ್ವಲ್ಪ….ಸ್ವಲ್ಪ ಅವನಿಗೆ ಅವನ ಅಮ್ಮನ ರೂಪ ಕಾಣ ತೊಡಗಿತು. ನಿತೀಶನು ಎದ್ದು.
“ಅಮ್ಮ…..ಅಮ್ಮ…..ಅಮ್ಮ” ಎಂದು ಕೈ ಮುಂದಕ್ಕೆ ಮಾಡುತ್ತಾ ಮಾಡುತ್ತಾ ಇವಳು ಅವನ ಅಮ್ಮನೇ. ಯಾಕೆಂದರೆ ನನ್ನಮ್ಮ ನಾನು ಊರು ಬಿಟ್ಟು ಬಂದ ಬಳಿಕ ನನಗಾಗಿ ಹಾತೋರೆಯುತ್ತಿದ್ದಾಳೆ. ನನ್ನನ್ನು ಅರಸಿಕೊಂಡು ಈ ಪಟ್ಟಣಕ್ಕೆ ಬಂದಿದ್ದಾಳೆ ಎಂದು ‘ಅಮ್ಮ, ಅಮ್ಮ’ ಎಂದು ಹಾಗೆ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಇಡುತ್ತಾ ಹೊರಟ. ಅವನ ಅಮ್ಮನ ರೂಪು ಕತ್ತಲಲ್ಲಿ ಬೆಳಗ್ಗೆ ಕಾಣಿಸುತ್ತಿತ್ತು. ಅವನು ಮುಂದಕ್ಕೆ ಹೋದಂತೆಲ್ಲಾ ಅಮ್ಮನ ರೂಪು ಹಿಂದಕ್ಕೆ ಹಿಂದಕ್ಕೆ ಸರಿಯುತ್ತಿತ್ತು. ನಿತೀಶನು ಅಮ್ಮನಿಗಾಗಿ ಹತೋರೆದು ಕೆಳಗೆ ನೋಡದೆ ಮೇಲೆ ನೋಡದೆ ಹಾಗೆ ಮುಂದಾದ. ಅವನಿಗನಿಸಿತು. “ನನ್ನಮ್ಮ ಆದರೇ ಹೀಗೆ ಮಾಡುತ್ತಾ ಇರಲಿಲ್ಲ. ಇದು ನನ್ನ ಭ್ರಮೆ” ಎಂದಕೊಂಡನು. ಆದರೂ ಹಾಗೆ ಸಾಗುತ್ತಿದ್ದ. “ಬಾ ನಿತೀಶ ಬಾರೋ” ಎಂದು ಆ ರೂಪ ಕರೆಯುತ್ತಿತ್ತು. ಹಾಗೆ ಮುಂದೆ ಸಾಗಿದೆ. ಮುಳ್ಳು ಗಿಡ ಬಂದವು, ಕಲ್ಲು-ಬಂಡೆ ಬಂದವು ಹಾಗೆ ಅವನೆಲ್ಲಾ ತಳ್ಳುತ್ತಾ-ತಳ್ಳುತ್ತಾ ಆ ರೂಪನ್ನು ನೋಡುತ್ತಾ ದೊಡ್ಡದಾದ ಬಾವಿಯಲ್ಲಿ ಬಿದ್ದನು. ಬಿದ್ದ ಕ್ಷಣಾರ್ಧದಲ್ಲೇ ‘ಅಮ್ಮ’ ಎಂದು ಜೋರಾಗಿ ಚೀರಿದ. ಮೈಯಲ್ಲಾ ಬೆವರು, ಸುತ್ತಲೂ ನಿರ್ಜನ ಎದ್ದು ಕುಳಿತನು. ತಾನು ಇಷ್ಟೋತ್ತು ಕಂಡದ್ದು ಕನಸ್ಸು ಎಂದು ತಾಳ್ಮೆ ತಂದು ಕೊಂಡನು. ಅಮ್ಮನ ಮುಖವನ್ನೇ ಜ್ಞಾಪಿಸಿಕೊಳ್ಳುತ್ತಾ ಹಾಗೆ ಕಣ್ಣು ಮುಚ್ಚಿದನು. ನಿದ್ರೆ ಬಾರದೆ ಆ ಕಡೆ ಈ ಕಡೆ ಹೊರಳಾಡುತ್ತಾ ತಣ್ಣನೆ ಗಾಳಿ ಬೀಸ ತೊಡಗಿತು ನೊಂದ ಮನಸ್ಸು ಮುಗ್ದ ಮನಸ್ಸು ಯಾರೂ ಕಾಣದ ಆ ಮನಸ್ಸು ಸುಮ್ಮನೆ ಮಲಗಿತು.

೧೦
‘ನಿಮ್ಮದೆ ದೊಡ್ಡ ಮನಸ್ಸು, ದೊಡ್ಡ ಮಗ ಮನೆಯಲ್ಲಿ ಇಲ್ಲದಿದ್ರೂ ಯೋಚನೆ ಮಾಡದೇ ಆರಾಮ ಜೀವನ ಮಾಡುತ್ತಾ ಇದೀರಾ. ನಿತೀಶ ಏನು ತಪ್ಪು ಮಾಡಿದ್ದಾನೆ ಎಂದು ಅವನನ್ನು ಊರು ಬಿಟ್ಟು ಕಳುಹಿಸಿದ್ದೀರಾ! ಅವನು ಮಾಡಿದ ಪುಣ್ಯದ ಕೆಲಸದಿಂದಾಗಿ ಇಂದು ಊರಿನ ಜನರಿಗೆ ಸ್ವಾತಂತ್ರ್ಯ ದೊರಕಿದೆ ಅಂದರೇ ಅದಕ್ಕೆ ಕಾರಣ ನಿತೀಶ. ಅಂತಹ ಕಂದಮ್ಮನನ್ನು ನೀವು ಮನೆ ಬಿಟ್ಟು ಕಳುಹಿಸಿದ್ದೀರಾ. ನಿಮಗೆ ಹೃದಯ ಎಂಬುದೇ ಇಲ್ಲ?. ಒಂದು ದಿನವಾದರೂ ನೀವು ಅವನನ್ನು ಹುಡುಕುವ ಪ್ರಯತ್ನ ಮಾಡಿದ್ದೀರಾ?”. ಎಂದನು ಕೃಷ್ಣಪ್ಪ ನಿತೀಶ ಕುಮಾರನ ಅಪ್ಪನಿಗೆ. ಮನೆಯ ಪರಂಗಣದ ಕಂಬಕ್ಕೆ ಒರಗಿ ಕುಳಿತಿರುವ ನಿತೀಶನ ಅಪ್ಪ. ಪಕ್ಕದಲ್ಲಿ ತಲೆಗೆ ಕೈ ಹಚ್ಚಿಕೊಂಡು ಕುಳಿತಿರುವ ನಿತೀಶನಮ್ಮ. ಕೃಷ್ಣಪ್ಪ ಹೇಳಿದ ಮಾತನ್ನು ಕೇಳಿದ ನಿತೀಶನ ಅಪ್ಪನಿಗೆ ಮನ ಪರಿವರ್ತನೆಯಾಗುವ ಸೂಚನೆ ಕಾಣಿಸಿಯೇ ಇಲ್ಲ.
“ನೋಡೋ, ನಿತೀಶನನ್ನು ಹುಡುಕಿ ಕರೆದುಕೊಂಡು ಬಾ” ಎಂದರು ಕೃಷ್ಣಪ್ಪ.
“ಇಲ್ಲ ಕೃಷ್ಣಪ್ಪ, ನನ್ನ ಮಗನನ್ನು, ಅವನು ಮನೆ ಬಿಟ್ಟು ಹೋದ ದಿನವೇ ಹುಡುಕುತ್ತಿದ್ದೆ. ಆದರೇ ಅವನನ್ನು ನಮ್ಮೂರಿಗೆ ಕರೆದುಕೊಂಡು ಬಂದೇ ಗೌಡರು ಸುಮ್ಮನೆ ಇದ್ದಾರೆಯೇ? ಇರಲೂ ಸಾಧ್ಯವಿಲ್ಲ. ಬೇರೆ ಎಲ್ಲಾದರೂ ಇದ್ದರೂ ನನ್ನ ಮಗ ಇರಲಿ. ಇಲ್ಲವಾದರೆ ಸಾಯಲಿ. ಆದರೇ ಗೌಡರು ಅವನನ್ನು ಕೊಲ್ಲುವುದನ್ನು ನಾನು ನೋಡುಲಾರೆ.” ಎಂದು ನಿತೀಶನಪ್ಪ
“ಎಂತಹ ಮಾತನ್ನು ಹೇಳುತ್ತಿದ್ದೀರಾ? ನೀವು ಮಗನ ವಿಷಯದಲ್ಲಿ ಸಾಯುವ ಮಾತೇಕೆ? ಹೇಳಿ. ಅಂತಹ ಕೂಸಿಗೆ ಜನ್ಮಕೊಡುವುದಕ್ಕಾಗಿ, ಅಂತಹ ಮಗ ನಿಮ್ಮ ಹೊಟ್ಟೆಯಲ್ಲಿ ಜನಿಸಿದಕ್ಕಾಗಿ ಸಂತಸಪಡಿ. ಊರ ಮಂದಿಯ ಬಾಯಲ್ಲಿ ನಿಮ್ಮ ಮಗ ಮನೆಯ ಮಗನನ್ನು ಕಳೆದುಕೊಂಡಂತೆ ನೆನೆಯುತ್ತಿದ್ದಾರೆ. ಆ ಆಳಾದ ಗೌಡ ಅವನ ಮೈಯಿಯ ಒಂದು ರೋಮ ಮುಟ್ಟಿ ನೋಡಲಿ, ಅವರ ಸ್ಥಿತಿ ಶೋಚನಿಯವಾಗುತ್ತದೆ. ಏನು ತಪ್ಪು ಮಾಡದ ನಿತಿಗೆ ಶಿಕ್ಷೆ ನೀಡಲು ನೀವು ಅನರ್ಹರು ನೆನಪಿಟ್ಟುಕೊಳ್ಳಿ” ಎಂದರು ಕೃಷ್ಣಪ್ಪ ಕ್ರೋಧದಿಂದ. ಮೌನದ ಮುಸುಕು ಮುಟ್ಟಿತ್ತು ನಿತೀಶನ ಅಪ್ಪನಿಗೆ ಏನು ಹೇಳಬೇಕೆಂಬುದು ತೋಚಲಿಲ್ಲ.
“ನಾನು ನಿತೀಶನಪ್ಪ ನನಗೂ ಮಗನ ಮೇಲೆ ಪ್ರೀತಿ, ವಾತ್ಸಲ್ಯ, ಕಾಳಜಿ, ಮಮತೆ ಇದೆ. ಅವನಲ್ಲಿದ್ದ ಈ ಮನೆಯಲ್ಲಿ ನನಗಿರಲು ಅಸಾಧ್ಯವಾಗಿದೆ. ಈಗ ಮೌನದಲ್ಲಿದ್ದ ನಮ್ಮ ಗೌಡ ನನ್ನ ಮಗನ ಮುಖ ಕಂಡ ಅವರು ಹೊಂಚು ಹಾಕಿ ಕೊಲ್ಲುವುದು ಗ್ಯಾರಂಟಿ. ನೂರಾರು ಕೊಲೆ ಮಾಡಿದ ಅವರು ಈಗ ಅವರ ಮಾನ-ಮರ್ಯಾದೆ ಹರಾಜಿಗೆ ಹಾಕಿದ ನಮ್ಮ ನಿತೀಶ. ದೊಡ್ಡ ಮಗ ಜೈಲಿನಲ್ಲಿದ್ದಾನೆ ಕೋಪ ಗೌಡರಲ್ಲಿ ತುಂಬಿ ತುಳುಕುತ್ತಿದೆ, ನಿತಿಯನ್ನು ಸುಮ್ಮನೆ ಬಿಡುವನೆ. ಎಲ್ಲೆಯಿರಲಿ ನಮ್ಮ ನಿತಿಗೆ ಆ ದೇವರು ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆ ಮಾತ್ರ ನನಗಿದೆ” ಎಂದರು ಅಪ್ಪ. ಕಣ್ಣಲಿನ ನೀರು ಖಾಲಿಯಾಗುವರೆಗೂ ಅಳುತ್ತಿದ್ದಳು, ಒಡಲಿನ ಸಂಕಷ್ಟ ಯಾರಿಗೆ ಹೇಳುವುದು. ಅವಳ ಗಂಡ ಕೊನೆಯಾ ನಿರ್ಧಾರ ಮಗನನ್ನು ಹರಸುವುದಿಲ್ಲ. ಆದರೇ ತಾಯಿಯ ಕರಳು ಸುಮ್ಮನೆ ಇರಲು ಸಾಧ್ಯವೆ?. ಅಳುತ್ತಾ ನಿತಿಯ ಅಮ್ಮ.
“ನೋಡ್ರಿ ನಿಮಗೆ ನಿತಿಯ ನೆನಪು ಕ್ಷಣ ಕ್ಷಣಕ್ಕು ಬರಬಹುದು. ಆದರೇ ನನಗೆ ನಿತಿಯು ಅವನ ಬಟ್ಟೆ, ಪುಸ್ತಕ, ಕೈಚೀಲ, ಅವನ ಮಾತು, ಅವನ ವಸ್ತುಗಳು, ಅವನ ನಗು ಒಂದು ಕ್ಷಣಕ್ಕೆ ಒಂದೇ ಅಂಶ ನೂರು ನೆನಪು ತರುತ್ತಿವೆ. ಮಗನಿಲ್ಲದ್ದ ಮನೆ ನರಕ. ನನ್ನಂತಹ ಕೆಟ್ಟ ತಾಯಿ ಈ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ನನ್ನ ಮಗ ಇಂದಿರಾ. ಅಂತಹ ಮಗನಿಂದ ನಾನು ದೂರವಿರುವ ಕೆಟ್ಟ ಹಣೆಬರಹ ನನ್ನದಾ? ಮಗನು ಹೋಗಿ ದಿನಗಳು ಉರುಳಿದವು. ನನ್ನ ಕಂದ ಉಪವಾಸ ಎಲ್ಲಿದೆಯೋ? ಹೇಗಿದಿಯೋ? ನಿಮ್ಮ ಮಾತು ನಂಬುತ್ತಾ ಇನ್ನೂ ನಾನು ಕೂರುವುದಿಲ್ಲ. ನನ್ನ ಮಗನನ್ನು ಹುಡುಕಲು ನಾ ಹೋಗುವೆ. ನನ್ನ ಸಂಕಷ್ಟ ನಿಮಗೆ ಅರ್ಥವಾದಿತೆ? ನಿಮ್ಮದು ಹೃದಯ ಹೃದಯವೇ ಅಲ್ಲ. ಕಲ್ಲು, ಬಂಡೇಗಲ್ಲು. ಊರ ಜನರಿಗೆ ಅವನ ಮೇಲೆ ಪ್ರೀತಿ ಇದೆ. ಮಗನನ್ನು ಕೊಲ್ಲುತ್ತಾನೆ. ಕೊಲ್ಲುತ್ತಾನೆ ಆ ಗೌಡ ಎಂದು ಹೇಳುತ್ತಾ ಇದ್ದೀರಲ್ಲ. ನಿಮಗೆ ಧೈರ್ಯವೇ ಇಲ್ವ? ಇಂತಹ ಅಂಜುಬುರಕನ ಹೊಟ್ಟೆಯಲ್ಲಿ ಧೈರ್ಯದ ಸಿಂಹ ಹುಟ್ಟಿದ್ದು ತಪ್ಪೆ. ಮಗ ಊರಿನ ಉದ್ಧಾರಕ್ಕಾಗಿ ಮುಂದಾದ ಅಂತಹ ಮಗುವನ್ನೇ ಮನೆಬಿಟ್ಟು ಕಳುಹಿಸಿದ್ದೀರಾ. ಗೌಡ, ಗೌಡ ಎಂದು ಗೌಡನ ಎಂಜಲಿನಲ್ಲೇ ಬಾಳೋಣ, ಬದುಕೋಣ ಅನ್ನುತ್ತು ಕೂರಿ. ಗೌಡನಿಗಾಗಿ ನನ್ನ ಮಗನನ್ನು ದೂರ ಮಾಡಿಕೊಂಡು ಬಾಳಲು ನನಗೆ ಇಷ್ಟವಿಲ್ಲ.” ಎಂದು ಅಮ್ಮ ಜೋರಾಗಿ ಅಳುತ್ತಾ ನಿಂತರು. ಹೆತ್ತ ತಾಯಿ ನೋವು ಪ್ರಪಂಚದಲ್ಲಿ ಯಾರೂ ಅನುಭವಿಸಲು ಅಸಾಧ್ಯ. ಅಷ್ಟೇಲ್ಲಾ ನೋವನ್ನು ಅನುಭವಿಸುವ ತಾಯಿ ಮಕ್ಕಳ ಮೇಲಿನ ಪ್ರೀತಿ ಮಾತ್ರ ಕಡಿಮೆ ಮಾಡಿಕೊಳ್ಳಲ್ಲ.
“ಇರಲಿ ತಾಯಿ, ಸಮಾಧಾನ ತಂದುಕೊಳ್ಳಿ. ನಿತಿಗೆ ಏನು ಆಗಿರುವುದಿಲ್ಲ. ಮುಂದೆ ಒಂದು ದಿನ ಈ ಮನೆಗೆ ಬಂದೇ ಬರುತ್ತಾನೆ ಸುಮ್ಮನಿರಿ” ಎಂದರು ಕೃಷ್ಣಣ್ಣ.
“ರೀ ಕೊನೆಗೆ ಯಾವ ನಿರ್ಧಾರ ತೆಗೆದುಕೊಂಡಿದ್ದೀರಾ ಹೇಳಿ. ಮಗ ಬೇಕೋ? ನಿಮಗೆ ಗೌಡ ಬೇಕೋ?”. ಎಂದಳು ನಿತೀಶನಮ್ಮ ಗಟ್ಟಿ ಧ್ವನಿಯಲ್ಲಿ.
“ನನಗೆ ಮಗನ ಮೇಲೆ ಅತಿಯಾದ ಪ್ರೀತಿ. ಆದರೆ ಗೌಡರ ಮೇಲೆ ಪ್ರೀತಿ ಮತ್ತು ಗೌರವ ಎರಡು ಇದೆ. ಗೌಡರ ಗೌರವ ಮರ್ಯಾದೆಯನ್ನೇ ಹರಾಜಿಗೆ ಹಾಕಿದ ಅವನಿಗೆ ನನ್ನ ಮನೆಯಲ್ಲಿ ಜಾಗವಿಲ್ಲ” ಎಂದರು ನಿತೀಶನಪ್ಪ.
“ಹಾಗಿದ್ದರೆ ನಾನು, ನನ್ನ ಮಗಳು ಈ ಮನೆಯಲ್ಲಿ ಇರುವುದಿಲ್ಲ. ನನಗೂ ವಿಷಕೊಡಿ ಸಾಯುತ್ತೇವೆ. ಮಗ ನಿಲ್ಲದ ಮನೆಯಲ್ಲಿ ನಾನು ಬಾಳಲಾರೆ”. ಎಂದಳು ಅಮ್ಮ. ಅಮ್ಮ ಅಳುವುದನ್ನು ಸಹಿಸಲಾರದ ನಿತೀಶನ ತಂಗಿ ಅಮ್ಮನನ್ನು ದುಃಖಿಸಿ, ದುಃಖಿಸಿ ಸಂತೈಸುತ್ತಿದ್ದಳು.
“ಊರ ಮಂದಿ ಆರಾಮವಾಗಿ ಜೀವನ ಮಾಡುತ್ತಾ ಇದ್ದಾರೆ. ನಿತೀಶನಗೋಸ್ಕರ ಕಾಯುತ್ತಾ ಕುಳಿತಾರೆ. ನಿಮ್ಮ ಮಾತು ಮೀರದೆ ಅವರು ನಿತೀಶನನ್ನು ಹುಡುಕಲು ಮುಂದಾಗಿಲ್ಲ. ಊರ ಜನ ಸೇರಿ ನಾಳೇನೆ ನಿತಿಯನ್ನು ಕರೆದುಕೊಂಡು ಬರುತ್ತಾರೆ! ಎಂದರು ಕೃಷ್ಣಪ್ಪ.
“ನೋಡಿ ಕೃಷ್ಣ ನನ್ನ ಮಗನನ್ನು ಯಾರು ಊರಿಗೆ ಕರೆದುಕೊಂಡು ಬರುವ ಅವಶ್ಯಕತೆ ಇಲ್ಲ. ನನ್ನ ಪಾಲಿಗೆ ನಿತೀಶ ಒಂದು ಕಡೆ ಸತ್ತಿದ್ದಾನೆ ಎಂದು ಭಾವಿಸಿದ್ದೇನೆ. ನನಗೆ ನಿಜವಾಗಿ ಮಗನ ಮೇಲೆ ಆಸೆÀ ಹೊರಟು ಹೋಗಿದೆ. ನಿಮ್ಮ ಸಮಾಧಾನಕ್ಕಾಗಿ ಪ್ರೀತಿ, ಮಮತೆ ಇದೆ” ಎಂದನು. ನಿತೀಶನ ತಾಯಿಯು ಇದನ್ನೆಲ್ಲಾ ಕೇಳುತ್ತಾ ಕೆಳಗೆ ಬಿದ್ದರು. ಬಿದ್ದ ಕ್ಷಣಾರ್ಧದಲ್ಲೆ ಮಗಳ ತೊಡೆಯ ಮೇಲೆ ಪ್ರಾಣ ಬಿಟ್ಟರು. ಅಪ್ಪ ಗೋಗರೆದರು, ಮಗಳು ದುಃಖಿಸಿ ಅಳುತ್ತಿದ್ದಳು. ಕೃಷ್ಣಣ್ಣ ಅಯ್ಯೋ! ಎಂದು ಚಕಿತರಾದರು.

೧೧
ನಾಲ್ಕು ದಿನ ಕಳೆದವು. ನಿತೀಶನು ಅದೇ ದೇವಾಲಯದಲ್ಲಿ ಉಳಿದುಕೊಂಡಿದ್ದ. ದೇವಸ್ಥಾನದ ಅಲ್ಪ ಪ್ರಸಾದ ಸೇವಿಸಿ ಜೀವನ ಸಾಗಿಸುತ್ತಿದ್ದ. ನಿತೀಶನು ಮೆಲ್ಲಗೆ ಕುಳಿತುಕೊಳ್ಳುತ್ತಾ ಅಂದು ಅಪ್ಪನು ನೀನು ಸಾಯಿ ಹೋಗು ಮುಖ ತೋರಿಸಬೇಡ. ಎಂಬ ಮಾತು ಮರಳಿ ಮರಳಿ ಅವನನ್ನು ಕಾಡುತ್ತಿತ್ತು. ತಾಯಿ ಮರಣಪ್ಪಿದ್ದರು, ಗೊತ್ತಿರದ ನಿತೀಶ. ಮನಸ್ಸಿಗೆ ಸಮಾಧಾನ ಪಡೆದುಕೊಳ್ಳುವುದಕ್ಕಾಗಿ ದೇವರ ಮುಂದೆ ಹೋಗಿ ಬೇಡಿಕೊಳ್ಳುತ್ತಾ ಇದ್ದ. ಸಾಯಂಕಾಲವಾಗಿತ್ತು ರವಿಯು ಕಣ್ಮರೆಯಾಗುವ ಸಮಯ ಹಕ್ಕಿಗಳು ಗೂಡಿಗೆ ಸೇರುವ ಸಮಯ. ಒಂದು ಕಡೆ ಮುಸಲ್ಮಾನ ದೇವರ ಮಸೀದಿಯಲ್ಲಿ ‘ಹಜ್’ ಕೊಡುವ ಕೂಗು.
“ಬೇಡ ಅಜ್ಜಿ ಸಾಯಂಕಾಲವಾಗಿದೆ. ನಾನೊಬ್ಬಳೆ ಆಂಜನೇಯ ದೇವಾಲಯಕ್ಕೆ ಹೋಗಿ ಬರುವೆ ನೀನು ಬರುವುದು ಬೇಡ ಕೇಳು” ಎಂದಳು ನಿಶಾ.
“ಬೇಡ ತಾಯಿ. ನಾನು ಜೊತೆಗೆ ಬರುವೆ. ನೀನೊಬ್ಬಳೆ ಹೋಗುವುದು ಬೇಡ” ಎಂದಳು ಅಜ್ಜಿ.
“ಅಜ್ಜಿ, ಅಜ್ಜಿ ಕತ್ತಲಾಗುತ್ತಿದೆ. ನೀನು ಬರುವುದು ಬೇಡವೇ ಬೇಡ. ಸುಮ್ಮನೆ ಮಂಡಿ ನೋವು ಅಂತೀರಾ ಆಮೇಲೆ. ನೀನು ಬರುವುದಾದರೆ ದೇವಸ್ಥಾನಕ್ಕೆ ಹೋಗುವುದೇ ಬೇಡ.” ಎಂದಳು ಕೋಪದಲ್ಲಿ ನಿಶಾ.
“ಹಠಮಾರಿ. ಹೋಗು”. ಎಂದಳು ಅಜ್ಜಿ.ಖುಷಿಯಿಂದ ನಿಶಾ ದೇವಸ್ಥಾನಕ್ಕೆ ಹೊರಟಳು. ದೇವಸ್ಥಾನಕ್ಕೆ ತಲುಪಿದ ನಿಮಿಷದಲ್ಲೇ ನಿತೀಶನನ್ನು ಕಂಡಳು. ಕಂಡ ತಕ್ಷಣ ಓ ಭಿಕ್ಷುಕನ ಮುಖ ನೋಡಿದೆ ಮೊದಲಿಗೆ ಆ ದೇವರು ನನಗೆ ಬೇಡಿದ ವರ ಕೊಟ್ಟೆ ಕೊಡುತ್ತಾನೆ” ಎಂದು ಸಂತಸಪಟ್ಟಳು. ನಿತೀಶನು ದೇವರ ಹತ್ತಿರ ಪ್ರಾರ್ಥನೆ ಮಾಡಲು ಹೊರಡುವುದನ್ನು ನಿಶಾಳು ದೂರದಿಂದ ಕಂಡಳು. ನಿತೀಶನು ಮಂಡಿಯೂರಿ, ಎರಡು ಕೈಯನ್ನು ಮುಗಿಯುತ್ತಾ, ಕಣ್ಣು ಮುಚ್ಚಿಕೊಂಡು ಹಾಗೂ ನೇರವಾಗಿ ಬೆನ್ನು ಮಾಡಿಕೊಂಡು ಕುಳಿತನು. ನಿಶಾಳು ಅವನು ಕುಳಿತುಕೊಂಡ ಸ್ಥಿತಿ ನೋಡಿ ಗಾಬರಿಗೊಂಡು ಅವನ ಹಿಂದುಗಡೆ ಬಂದು ನಿಂತಳು.
“ದೇವರೆ, ನಾನು ನಿಜವಾಗಿ ತಪ್ಪು ಮಾಡಿದ್ದೇನಾ?. ಹೌದು ನಾನು ತಪ್ಪು ಮಾಡಿದ್ದು ನಿಜ. ಹಾಗಾಗಿ ಅಪ್ಪ, ಅಮ್ಮ, ತಂಗಿ, ಗೆಳೆಯರು ಹಾಗೂ ಊರ ಜನರಿಂದ ದೂರವಿದ್ದು ಇಷ್ಟೊಂದು ಯಾತನೆ ಪಡುವ ಪರಿಸ್ಥಿತಿ ನನಗಿರುತ್ತಿರಲಿಲ್ಲ. ಮುಂದೆ ನಾನೇನು ಮಾಡಲಿ. ನನ್ನ ವಿದ್ಯಾರ್ಹತೆ ಕೊನೆಗಾಣಿಸಿಕೊಳ್ಳಲು ಇಷ್ಟವಿಲ್ಲ. ಕೂಲಿ ಮಾಡಿ ಬದುಕೋಣವಾ?. ಅದರ ದಾರಿಯ ಅರಿವು ನನಗಿಲ್ಲ. ಗೌಡರ ವಿಷಯದಲ್ಲಿ ನಾನು ಮುಂದಾಗಿ ತಪ್ಪು ಮಾಡಿದ್ದೇನಾ? ಛೇ! ನನಗೆ ಈ ವಿಷಯ ಹೀಗೇಕೆ ಕಾಡುತ್ತಿದೆ.
ನಾನು ಮಾಡಿದ್ದು ಸರಿಯಾಗಿದೆ. ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದೇನೆ. ಅದಕ್ಕೆ ಪರಿಹಾರ ಸಹ ಒಳ್ಳೇಯದಾಗಿದೆ. ನಾನೇ ಸುಮ್ಮನೆ ತಪ್ಪು ಯೋಚನೆ ಮಾಡುತ್ತಾ ಇದ್ದೇನೆ. ನನ್ನ ಬಗ್ಗೆ ಸ್ನೇಹಿತರಿಗೂ, ಊರ ಜನರಿಗೂ ಇಷ್ಟ ಆಗಿರಬಹುದು. ಅಪ್ಪನಿಗೆ ಮಾತ್ರ ಇಷ್ಟ ಆಗಿಲ್ಲ. ಹಾಗಾಗಿ ಅವರು ಮನೆಯಿಂದ ಹೊರ ಹಾಕಿದ್ದಾರೆ. ದೇವರೆ ನನ್ನಮ್ಮ ನನ್ನ ತಂಗಿ, ನನ್ನಪ್ಪ ನಗು-ನಗುತಾ ಇರಲಿ ಊರ ಜನರಿಗೂ ಒಳ್ಳೆಯ ಆರೋಗ್ಯ ನೀಡು. ಮುಂದೆ ನನಗೆ ಯಾವ ದಾರಿ ಒದಗಿಸುತ್ತದೆಯೋ ಅದೇ ದಾರಿಯಲ್ಲಿ ಹೋಗುತ್ತೇನೆ ತಂದೆ. ನನ್ನ ಕೈಯನ್ನು ಬಿಡಬೇಡ ನೀನು. ನಿನ್ನ ಆಶೀರ್ವಾದ ಬಲದಿಂದಾಗಿ ನಾನು ಜೀವಿಸುತ್ತೇನೆ ದಾರಿ ತೋರಿಸಪ್ಪ” ಎಂದು ನಿತೀಶನು ಗಟ್ಟಿ ಧೈರ್ಯ ಮಾಡುತ್ತಾ ಕಣ್ಣು ತೆರೆದನು ಕಣ್ಣಲ್ಲಿ ನೀರು ಬಂದವು.
ನಿಶಾಳು ನಿತೀಶನ ಮಾತಿಗೆ, ಪ್ರಾರ್ಥನೆ ಕೇಳಿ ಮೌನಸ್ಥಳಾದಳು. ಅವನ ಕಣ್ಣೀರಿನ ಕತೆ ಕೇಳಿ ಆಶ್ಚರ್ಯಗೊಂಡಳು. ಸಂಪೂರ್ಣ ಕತ್ತಲಾಯಿತು. ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಕಣ್ಮರೆಯಾದ. ರವಿ ಕಣ್ಮರೆಯಾಗುವಷ್ಟರಲ್ಲಿಯೆ, ನಿತೀಶನು ಕಣ್ಮರೆಯಾದ. ನಿಶಾಳು ಬೇಗ-ಬೇಗ ದೇವರ ಪೂಜೆ ಮಾಡಿಕೊಂಡಳು. ನಿತೀಶನನ್ನು ಹುಡುಕಾಡ ತೊಡಗಿದಳು. ಆಕಡೆ ಈ ಕಡೆ, ಹಿಂದೆ-ಮುಂದೆ ಎಲ್ಲಾ ಕಡೆ ಹುಡುಕಿದರು ನಿತೀಶ ಕಾಣಲೇ ಇಲ್ಲ. ಅವಳಿಗೆ ನಿತೀಶ ಕಾಣುವುದರ ಸುಳಿವು ಸಿಗಲಿಲ್ಲ. ವಿಪರೀತವಾಗಿ ಹುಡಕ ತೊಗಿದಳು. ಕತ್ತಲ್ಲಾದರೂ ಅರಮನೆಗೆ ಹೋಗಬೇಕೆಂಬ ಗಮನ ಅವಳಿಗೆ ಇರಲಿಲ್ಲ. ಯಾವುದೇ ಆಗಲಿ ಹಾಗೆಯೇ ಇಷ್ಟಪಟ್ಟದ್ದು, ಬೇಕಾದ ವಸ್ತು, ಜೊತೆಯಾಗಿರಬೇಕೆಂಬ ಸ್ನೇಹಿತರು. ಮುಂತಾದ ವಿಷಯದಲ್ಲಿ ನಮ್ಮಿಂದ ಅವು ದೂರವಾಗುತ್ತವೆ ಎಂದು ಗೊತ್ತಾದರೆ ಹೃದಯಕ್ಕೆ ನೋವಾಗುತ್ತದೆ. ಅವರಂತೆಯೇ ನಿಶಾಳಿಗೂ ಹಾಗೂ ಅನಿಸಿದೆ. ನಿತೀಶನನ್ನು ಕಾಣಬೇಕು. ಅವನನ್ನು ಮಾತಾಡಿಸಬೇಕು, ಕೇಳಬೇಕು ಎಂಬ ಕುತೂಹಲ ಅವಳನ್ನು ಕೆರಳಿಸಿತು. ಕತ್ತಲೆಯ ಆಟ ಆವರಿಸಿತು. ಬೇಸತ್ತ ನಿಶಾಳು ಅರಮನೆ ಕಡೆ ತೆರಳಿದಳು.

೧೨
“ಇಲ್ಲ. ಅಜ್ಜಮ್ಮ ಅವನು ಭಿಕ್ಷÄಕ ಅಲ್ಲ ಅನಿಸುತ್ತದೆ. ಅವನು ಮಹಾನ ವ್ಯಕ್ತಿಯ ರೀತಿಯಾಗಿ ಮಾತನಾಡುತ್ತಿದ್ದ ಆ ದೇವರ ಮುಂದೆ. ಕೇಳುತ್ತಿದ್ದ ನನ್ನ ಕಿವಿಗಳು ನಂಬುವ ಹಾಗೆ ಕಾಣಿಸುತ್ತಿದ್ದಿಲ್ಲ.” ಎಂದಳು ನಿಶಾ. ಮಂಜಿನ ಮಬ್ಬು ಹನಿ ಜಾರಿ, ಎಳೆಬಿಸುಲು ನಗೆ ಬೀರಿತ್ತು. ಪ್ರಕೃತಿಯ ಸೊಬಗು ಸೋಬಾನವಾಡುತ್ತಿತ್ತು. ತಂಬೆರಲಗಳು ಜಿನುಗುತ್ತಿದ್ದವು. ನಿಶಾಳ ತುಟಿಯಿಂದ ಹೊರಡುತ್ತಿದ್ದ ಆ ಮಾತುಗಳು ಮುದ್ದಾಗಿ, ಆಶ್ಚರ್ಯದಿಂದ ಅಜ್ಜಿಯನ್ನೆ ನೋಡುತ್ತಾ ಹೇಳುತ್ತಿದ್ದಳು. ಅವಳ ಮುಗ್ದತೆಗೆ ಕರಗಿ ಆಕೆ ಹೇಳುತ್ತಿರುವ ಒಂದೊಂದು ಮಾತನ್ನು ಆಲಿಸುತ್ತಾ,
“ಹೌದಾ! ಆ ಹುಡುಗ ತುಂಬ ಗಂಭೀರ ಹುರುಪಿನಿಂದ ಕೂಡಿದ ಹುಡುಗ, ಅನಿಸಿತ್ತು ನನಗೆ ಆ ದಿನ ದೇವಾಲಯದಲ್ಲಿ, ಅವನ ಸ್ವಭಾವ ಎಷ್ಟೊಂದು ಸ್ವಗಸಾಗಿತ್ತಲ್ವ ನಿಶಾ” ಎಂದಳು ಅಜ್ಜಿ.
“ಏನು ಮಾಡೋದು ಅಜ್ಜಿ. ಅವನನ್ನು ಮಾತನಾಡಿಸಬೇಕೆಂದು, ಹುಡುಕಿ, ಹುಡುಕಿ ಸುಸ್ತಾಯಿತು.”
“ಅದೃಷ್ಟ ಇದ್ದರೆ ಮುಂದೊAದು ದಿನ ಸಿಗುತ್ತಾನೆ ಬಿಡು.”
“ಅಜ್ಜಿ ನಾಳೆ ದೇವಸ್ಥಾನಕ್ಕೆ ಹೋಗೋಣವ? ಅಲ್ಲಿ ಅವನು ಸಿಗುತ್ತಾನೆ.” ನಿಶಾಳು ಆತುರದಿಂದ ಕೇಳಿದಳು.
“ಸರಿ. ಹೋಗೋಣ. ಅವನು ಅಲ್ಲಿಯೆ ಇರಬೇಕಲ್ವೆ?”
“ಇಲ್ಲ ಅಜ್ಜಿ ಅವನು ಅಲ್ಲಿಯೆ ಇರುತ್ತಾನೆ. ಯಾಕೆಂದರೆ ನಾವು ಮೊದಲ ದಿನ ಹೋದಾಗ ಅಲ್ಲಿಯೇ ಇದ್ದ. ನಿನ್ನೆನೂ ಅಲ್ಲಿಯೇ ಇದ್ದ. ಅಂದರೆ ಅವನು ನಾಳೆಯು ಅಲ್ಲಿಯೇ ಇರುತ್ತಾನೆ. ಹೋಗೋಣ ಅಜ್ಜಿ. ದಯವಿಟ್ಟು. ಅಜ್ಜಿಯು ಒಪ್ಪಿಗೆ ಸೂಚಿಸಿದಳು. ಮರಳಿ ಮರುದಿನ ಅದೇ ದೇವಸ್ಥಾನಕ್ಕೆ ಹೋದರು. ನಿಶಾಳ ಅಜ್ಜಿ ಹೇಳಿದಂತೆ ಜರುಗಿತು. ಅದೇನೆಂದರೆ ನಿತೀಶನು ಅಲ್ಲಿ ಇರಲೆ ಇಲ್ಲ. ನಿಶಾಳಗೆ ತುಂಬ ಬೇಜಾರಾಯಿತು. ಸಾಯಂಕಾಲದವರೆಗೂ ಕಾದರೂ, ಕಾದೂ ಕಾಣದ ನಿತಿ. ಮರಳಿ ಅರಮನೆಗೆ ಹೋದರು. ಹಠಮಾರಿ ನಿಶಾ ಮತ್ತೇ ಅವಳ ಅಜ್ಜಿಯನ್ನು ಸಿದ್ಧ ಮಾಡಿಕೊಂಡು ದೇವಾಲಯಕ್ಕೆ ಬಂದರು. ಎರಡನೇ ದಿನಕ್ಕಾದರು ನಿತೀಶನು ಸಿಗಬೇಕಿತ್ತು. ನಿಶಾಳ ಕೋಪ, ನೆತ್ತಿಗೇರಿತು. ಅಜ್ಜಿ ನಿಶಾಗೆ ಬೈದಳು. ನಿಶಾ ನಿತೀಶನ ಮೇಲೆ ರೇಗಿ ಮಾತನಾಡುತ್ತಿದ್ದಳು. ಆದರೇ ಅಜ್ಜಿ ನಿಶಾಗೆ
“ಅವನನ್ನು ಕಾಣಬೇಕೆಂಬ ಹಂಬಲ ನಿನಗಿದೆ. ಆದರೇ ಸಿಗದ ನಿತಿಯ ಮೇಲೆ ನಿನ್ನ ಕೋಪ ತುಂಬಿದ ಮಾತುಗಳು. ಅವನ ಪಾಡಿಗೆ ಅವನ ದಾರಿ ಹಿಡಿದು ಹೋಗಿರುತ್ತಾನೆ ಬಿಡು” ಕೊಂಚ ಅಜ್ಜಿ ಮತ್ತು ನಿಶಾಳ ಮಧ್ಯೆ ಬಿರುಕು ಬಿಟ್ಟಿತ್ತು.
ಅರಮನೆಗೆ ಹೋದರು. ಮರುದಿನ ಅಜ್ಜಿಗೆ ಹೇಳಿದ ನೇರ ನಿಶಾ ಬಂದದ್ದು ದೇವಾಲಯಕ್ಕೆ. ಅವಳ ಅದೃಷ್ಟ, ಸಂಕಟ, ಆತುರ ಹಂಬಲದ ಬಯಲಾಟ ಆಂಜನೇಯ ಸ್ವಾಮಿಗೆ ತಿಳಿತ್ತಂತೆ ಕಾಣಿಸುತ್ತದೆ. ಕೊನೆಗೂ ಇವಳ ಮೇಲೆ ಆ ದೇವರಿಗೆ ಕರುಣೆ ಬಂದಾಯಿತು ನಿತಿಶನು ಆ ದೇವಾಲಯದಲ್ಲಿ ಸ್ವಚ್ಛತೆ ಮಾಡುವುದನ್ನು ನಿಶಾಳು ಕಂಡಳು. ಕಂಡು ನಿತಿಶನ ಹತ್ತಿರಕ್ಕೆ ಬಂದಳು. ಅವಳ ಖುಷಿಗೆ ವರ್ಣನೆ ಸಾಲದು.
“ನಿತೀಶ” ಎಂದಳು. ಬೆರಗಾದ ನಿತಿ ಯಾರು? ಎಂಬ ಕೇಳುವ ಚಟುವಟಿಕೆ ಮೊಗದಲ್ಲಿ ಕ್ಷಣದಲ್ಲಿಯೇ ಮೂಡಿತು.
“ನಿತೀಶ”
“ಯಾರು” ಎಂದು ಹಿಂದುರಿಗೆ ನೋಡಿದ
“ಓ! ಅರಮನೆಯ ರಾಣಿಯವರು.”
“ನೀನು ನನ್ನ ಮುಖದ ಪರಿಚಯ ಮರೆತು ಇಲ್ವ”
“ಇಲ್ಲ ಈ ನಿತಿ ಒಮ್ಮೆ ಒಬ್ಬರನ್ನು ನೋಡಿದರೆ ಮರೆಯುವ ಮಾತೆ ಇಲ್ಲ. ಆಂಜನೆಯ ಸ್ವಾಮಿ ನಿಮ್ಮ ಮನೆಯ ದೇವ್ರ? ಪ್ರತಿನಿತ್ಯ ಬರುತ್ತೀರಾ? ಹೋಗಿ ದರ್ಶನ ಮಾಡಿಕೊಂಡು ಬನ್ನಿ ಹೋಗಿ” ಎಂದನು. ನಿಶಾಳು ದರ್ಶನ ಮಾಡಿಕೊಂಡು ಅವಸರದಲ್ಲೆ ನಿತೀಶನ ಸಮೀಪಕ್ಕೆ ಬಂದಳು.
“ನಿತೀಶ ನೀನು ಭಿಕ್ಷುಕನಿರಬಹುದು ಎಂದು ತಪ್ಪಾಗಿ ಭಾವಿಸಿದ್ದೆ. ಅದಿರಲಿ ಎರಡು ದಿನದಿಂದ ಎಲ್ಲಿ ಹೋಗಿದ್ದೆ. ನಿನ್ನನ್ನು ನೋಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಕೊನೆಗೂ ನಿನ್ನನ್ನು ಕಂಡು ಖುಷಿಯಾಯಿತು” ಎಂದಳು ನಿಶಾ.
“ಅರೆ ಹೌದಾ? ಅರಮನೆಯ ರಾಣಿಗೆ ನನ್ನನ್ನು ಕಾಣಲು ಇರುವ ಹಂಬಲಕ್ಕೆ ಕಾರಣ”
“ಎರಡು ದಿನ ಎತ್ತ ಸಾಗಿದ್ದೆ”
“ಕೆಲಸ ಹುಡುಕಿಕೊಂಡು ಹೋಗಿದ್ದೆ”
“ಯಾವ ಕೆಲಸ ಸಿಕ್ತು”
“ಯಾವುದು ಇಲ್ಲ”
“ಮುಂದೇನು ಮಾಡುವೆ?”
“ಗೊತ್ತಿಲ್ಲ”
ನಿಶಾ ಮತ್ತೆ ಪ್ರಶ್ನೆ ಮಾಡದೇ ಸುಮ್ಮನಾದಳು. ನಿತೀಶನು ಸುಮ್ಮನಾದನು. ಸಮಯ ಸಾಗಿತು.
“ನಿತೀಶ ನೀನು ಆ ದಿನ ದೇವರ ಹತ್ತಿರ ಪ್ರಾರ್ಥಿಸುವಾಗ ನಾನು ಎಲ್ಲವನ್ನು ಕೇಳಿಸಿಕೊಂಡಿದ್ದೇನೆ. ನೀನು ಹಳ್ಳಿಯಿಂದ ದೂರವಾದುದಕ್ಕೆ ಕಾರಣ ಏನು? ನಿನ್ನ ಅಮ್ಮ-ಅಪ್ಪ ಎಲ್ಲಿ?”
“ಅರಮನೆಯ ರಾಣಿಗೆ ನನ್ನ ವಿಷಯ ಯಾಕೆ? ನನ್ನ ಕಷ್ಟ ನನಗಿರಲಿ ನೀವು ಹೊರಡಿ”
“ರಾಣಿ-ಗೀಣಿ ಎಂದು ಕರೆಯಬೇಡ ‘ನಿಶಾ’ ಎಂದರೆ ಸಾಕು”
“ನಿಶಾ”
“ಹೌದು. ನಾನು ನಿಶಾ. ನಿನಗೆ ನಮ್ಮ ಅರಮನೆಯಲ್ಲಿ ಕೆಲಸವಿದೆ ಮಾಡುವೆಯಾ?”
“ಹೊಟ್ಟೆ ತಣ್ಣಗಿರಲು ಒಂದು ಹೊತ್ತು ಊಟ ನೀಡಿದರೆ ಸಾಕು ಕೆಲಸ ಮಾಡುತ್ತೇನೆ”
ನಿಶಾ ನಿತೀಶನನ್ನು ಕರೆದುಕಂಡು ಅರಮನೆಯ ಕಡೆ ಹೊರಟಳು. ಅಜ್ಜಿಗೂ ತಿಳಿಸಿದಳು. ನಿತೀಶನಿಗೆ ಆಶ್ಚರ್ಯ. “ನೋಡಲು ಅರಮನೆಯಂತೆ ಇರುವ ಮನೆಯಲ್ಲಿ ನಿಶಾ ಮತ್ತು ನಿಶಾಳ ಅಜ್ಜಿ ಮತ್ತು ಕೆಲಸದವರು ಮಾತ್ರ ಅಲ್ಲಿ ಇರುವುದು ಆಶ್ಚರ್ಯ. ದೊಡ್ಡದಾದ ಮನೆಯಲ್ಲಿ ಜನ ಸಂಖ್ಯೆಯೇ ಇಲ್ವಲ್ಲ.” ಎಂದು ಮನಸ್ಸಿಗೆ ಪ್ರಶ್ನಿಸುತ್ತಿದ್ದ.
ರಾತ್ರಿಯಾಯಿತು. ನಿಶಾಳು ಓದುತ್ತಾ ಕುಳಿತುಕೊಂಡಿದ್ದಳು. ಅಜ್ಜಿ ಮಲಗಿದ್ದಳು. ನಿತೀಶನು ಹೊಟ್ಟೆ ತುಂಬ ಊಟ ಮಾಡಿ ಹಾಯಾಗಿ ಮಲಗಿದ್ದ. ಬೆಳಗಾಯಿತು. ನಿತೀಶನು ಯಾವ ಕೆಲಸ ಮಾಡಬೇಕೆಂಬುವುದನ್ನು ಅಜ್ಜಿ ತಿಳಿಸಿದಳು. ನಿತೀಶನು ಎಲ್ಲಾ ಕೆಲಸ ಮಾಡಿ ಮುಗಿಸಿದ. ಸಂಜೆಯಾಯಿತು. ನಿಶಾ ವಿದ್ಯಾ ಮಂದಿರಕ್ಕೆ ಹೋಗಿ ಅರಮನೆಗೆ ವಾಪಸಾದಳು ರಾತ್ರಿಯ ಸಮಯ
“ಅಜ್ಜಿ ಮಲಗಲು ಹೋಗುತ್ತೆನೆ ನಿಶಾ” ಎಂದು ಹೇಳಿ ಹೊರಟರು. ನಿಶಾ ಓದುತಾ ಕುಳಿತಳು. ಯಾವುದೋ ಪುಸ್ತಕದ ವಿಚಾರ ಅವಳನ್ನು ಕಾಡಿಸ ತೊಡಗಿತು. ಆ ವಿಚಾರ ಅವಳಿಗೆ ಅರ್ಥವೇ ಆಗಲಿಲ್ಲ. “ಅಜ್ಜಿಯನ್ನು ಕೇಳೋಣ ಎಂದರೇ ಮಲಗಿದ್ದಾಳೆ ಏನು ಮಾಡುವುದು ಎಂದು ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಅತ್ತ-ಇತ್ತ ತಿರುಗಾಡುತ್ತಿದ್ದಳು. ನಿತೀಶನಿಗೆ ಎಚ್ಚರವಾಯಿತು. ಎದ್ದು ನೀರು ಕುಡಿಯುತ್ತಿದ್ದ. ನಿಶಾಳನ್ನು ಕಂಡನು. ಅವಳ ಹತ್ತಿರ ಹೋಗಿ.
“ನೀವು ಮಲಗಿಲ್ವ?”
“ನಾ ಮಲಗಿಲ್ಲ. ಈವಾಗ ಸಮಯ 10 ಗಂಟೆಯಾಗಿದೆ”
“ಮತ್ತೇನು ಮಾಡುತ್ತಿದ್ದೀಯಾ?”
“ಓದುತ್ತಿದ್ದೆ. ಒಂದು ವಿಷಯ ನನಗೆ ತಿಳಿಲಿಲ್ಲ. ಅಜ್ಜಿಯನ್ನು ಕೇಳೋಣ ಎಂದೆ. ಬೆಳಿಗ್ಗೆ ಕೇಳೋಣ ಎಂದು ಸುಮ್ಮನಾದೆ”
“ನಿಶಾ. ತಿಳಿಯಲಾರದ ವಿಷಯವೇನು”
“ನಿನಗೆ ಹೇಳಿದರೆ ತಿಳಿಸುವೆಯಾ? ಪುಸ್ತಕದ ವಿಷಯ ನಿನಗೆ ತಿಳಿಯುವುದು ಕಷ್ಟ. ಮಲಗು ಹೋಗಪ್ಪ”
“ಆಯಿತು” ಎಂದು ನಿತೀಶ ಮಲಗಿದನು. ಮರುದಿನ ನಿಶಾ ಅಜ್ಜಿಗೆ ಹೋಗಿ ಕೇಳುತ್ತಿರಬೇಕಾದರೆ, ಅಜ್ಜಿಯ ಪಕ್ಕ ನಿತೀಶ ಯಾವುದೋ ಕೆಲಸ ಮಾಡುತ್ತಿದ್ದ. ಅವರಿಬ್ಬರ ಸಂವಾದ ಕಂಡು, ನಿಶಾಳ ಕೈಯಲ್ಲಿದ್ದ ಪುಸ್ತಕ ಕೈಗೆತ್ತಿಕೊಂಡು ಇಂಗ್ಲೀಷಿನಲ್ಲಿದ್ದ ಆ ಸಮಸ್ಯೆಯನ್ನು ಪಟ-ಪಟನೇ ವಿವರಿಸಿಬಿಟ್ಟು ನಿಶಾಳಿಗೆ ಏನು ಹೇಳಬೇಕು ಅವನ ಕುರಿತು ಎಂಬುವುದು ತಿಳಿಯದೆ ಮೌನಿಯಾದಳು ಅಜ್ಜಿಯು ಬೆರಗಾದಳು. ಸಾಯಂಕಾಲ ಮರದ ಕೆಳಗೆ ಕುಳಿತುಕೊಂಡು ನಿತೀಶ ಹಾಗೂ ಅಜ್ಜಿ, ನಿಶಾ ಮಾತನಾಡುತ್ತಿದ್ದರು. ಅಜ್ಜಿಯು ನಿತೀಶನಿಗೆ
“ನಿತೀಶ ಯಾರು ನೀನು? ಎಲ್ಲಿಂದ ಬಂದಿರುವೆ? ನಿನ್ನ ಕಂಡು ವಿಚಿತ್ರ ಆಸಕ್ತಿ ಆಗುತ್ತಿದೆ”
“ಅಜ್ಜಿ ಸತ್ಯ ಹೇಳಬೇಕಾದರೆ ನಾನು ಹಳ್ಳಿಯವನು. ಕೆಲಸ ಅರಸಿಕೊಂಡು ಪಟ್ಟಣಕ್ಕೆ ಬಂದಿದ್ದೇನೆ ಅಷ್ಟೇ. ನನ್ನಿಂದ ನಿಮಗೆ ತೊಂದರೆಯಾಯಿತೆ?”
“ತೊAದರೆ ವಿಷಯವಲ್ಲ. ನೀನು ಓದಿದ ಹುಡುಗ. ಜಾಣ ಅನಿಸುತ್ತಿದೆ”
“ಹೌದಾ? ಅಜ್ಜಿ, ತುಂಬ ಧನ್ಯವಾದಗಳು” ಎಂದು ಹೇಳಿದ ನಿತೀಶ ಅಲ್ಲಿಂದ ಹೊರಡಲು ಸಿದ್ಧನಾಗುತ್ತಿದ್ದ. ನಿಶಾಳು ಅವನನ್ನು ತಡೆ ಹಿಡಿದು.
“ನಿತೀಶ ಸತ್ಯ ಹೇಳು. ಆ ದಿನ ದೇವರ ಹತ್ತಿರ ಏನೆಂದು ಪ್ರಾರ್ಥಿಸುತ್ತಿದ್ದೆ? ನೀನ ನೋವು ಮನದಲ್ಲಿಟ್ಟುಕೊಂಡು ನಾಟಕ ಮಾಡಬೇಡ.” ನಿತೀಶನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ವಿಷಯ ಮರೆಯಿಸಬೇಕೆಂದು, ನಿತೀಶನು

ಅಜ್ಜಿ ನಾನು ಬಂದಾಗಿನಿಂದ ನೋಡಿದ್ದೇನೆ. ಅರಮನೆಯಲ್ಲಿ ಯಾರು ಇಲ್ಲ ಯಾಕೆ?” ಎಂದನು.
“ದೇವರ ಆಟ”
ಅಜ್ಜಿಯ ಮುಖ ಸಪ್ಪಗಾಯಿತು. ನಿತೀಶ ಸುಮ್ಮನಾದನು. ನಿಶಾಳು.
“ನೋಡು ನಿತೀಶ ನಿನಗೆ ಹೇಗೆ ನಮ್ಮ ಕುಟುಂಬದ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲವಿದೆಯೋ, ಅದರಂತೆ ನಮಗೂ ನಿನ್ನ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ವಿದೆ” ಎಂದಳು.
“ನಿಶಾ ತಪ್ಪು ತಿಳಿಯಬೇಡ ಹೇಳುವೆ ನನ್ನ ಬಗ್ಗೆ. ಅದಕ್ಕೂ ಮುಂಚೆ ನಾನೊಂದು ಪ್ರಶ್ನೆ ಕೇಳಲೆ”
“ಕೇಳು ಪರವಾಗಿಲ್ಲ”
“ನಿಮ್ಮ ಆ ಅರಮನೆಯ ಪಡಸಾಲೆಯಲ್ಲಿ ನೇತು ಹಾಕಿದ ಭಾವಚಿತ್ರಗಳು ಯಾರದ್ದು?”
ನಿಶಾಳು ಎದ್ದು ನಿಂತಳು. ಅಜ್ಜಿ ಮೆಲ್ಲಗೆ ಕೆಮ್ಮುತ್ತಾ, ವಿಷಯ ಪ್ರಾರಂಭಿಸಿದಳು.
“ಆ ಫೋಟೋಗಳು ನಿಶಾಳ ತಂದೆ ಮತ್ತು ತಾಯಿದು”
“ಅಜ್ಜಿ ನಿಶಾಳ ತಂದೆ ಮತ್ತು ತಾಯಿಯರದಾ? ನಿಶಾಳ ತಂದೆ ದೊಡ್ಡ ರಾಜನಾ?”
“ರಾಜನಲ್ಲ. ಆದರೇ ರಾಜನ ಸ್ಥಾನ ನನ್ನ ಮಗನಿಗಿತ್ತು. ನನ್ನ ಮಗನು ಸಮಾಜ ಸುಧಾರಕ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶೂರ. ಅವನಿಗೆ ಮದುವೆಯಾಗಿ ಮಕ್ಕಳಾಗುವುದಕ್ಕೆ ತುಂಬ ದಿವಸ ಬೇಕಾಯಿತು. ತುಂಬ ದಿವಸಕ್ಕೆ ಹುಟ್ಟಿದೆ ನಿಶಾ. ಒಳ್ಳೇಯದನ್ನೆ ಬಯಸುವ ಇವನಿಗೆ ಕೆಡು ಬಗೆಯುವರು ಕೆಲವು ಜನ. ಒಮ್ಮೆ ನಿಶಾ ಒಂಭತ್ತು ತಿಂಗಳಿನ ಕೂಸು. ಅಮಾವಾಸೆ ಕಗ್ಗತ್ತಲು. ನಿಶಾಳಿಗೆ ವಿಪರೀತವಾದ ಜ್ವರ. ರಾತ್ರಿ ಹೊತ್ತು ನಾನು. ನನ್ನ ಮಗ ಮತ್ತು ಸೊಸೆ ನಿಶಾಳನ್ನು ಎತ್ತಿಕೊಂಡು ವೈದ್ಯರ ಬಳಿ ಹೋದಾಗ, ಮರಳಿ ಮನೆಗೆ ಬರುವಾಗ ಕಗ್ಗತ್ತಲಲ್ಲಿ ವೈರಿಗಳು ನಿಶಾಳ ಅಪ್ಪ-ಅಮ್ಮನನ್ನು ಕೊಂದರು. ನಿಶಾಳು, ನಾನು ಆ ದಿನವೇ ಸತ್ತು ಹೋಗುವರು ದೇವರ ಆರ್ಶೀವಾದದಿಂದ ಬದುಕುಳಿತಿದ್ದೇವೆ. ಅಂದಿನಿಂದ ಇಂದಿನವರೆಗೂ ಅವಳಿಗೆ ನಾನು, ನನಗೆ ಅವಳಾಗಿ ಜೀವಿಸುತ್ತಿದ್ದೇವೆ. ಈ ನಡುವೆ ಬಂದಿರೊದೆ ನೀನು” ಎಂದು ಅಜ್ಜಿ ಹೇಳಿದಳು. ನಿಶಾಳ ಕೆನ್ನೆಯ ಮೇಲೆ ನೀರು ಹೌಹಾರಿ ಹರಿಯ ತೊಡಗಿದವು ನಿತೀಶ ಸಮಾಧಾನ ಪಡೆಸಬೇಕೆಂದರೆ, ಇವನ ಎದೆ ಜಲ್ಲೆಂದಿತು. ಅವರೂ ನಿತೀಶ.
“ಅಜ್ಜಿ, ನಿಶಾ ದಯವಿಟ್ಟು ನನ್ನನ್ನೂ ಕ್ಷಮಿಸಿ ನಿಮಗೆ ನೋವು ಉಂಟು ಮಾಡಿದೆ ತಪ್ಪಾಯಿತು” ಎಂದು ಮಂಡಿಯೂರಿದ.
“ಅಯ್ಯೋ! ಕಂದ ಎದ್ದೇಳು, ಜಾಣ ಮರಿ ನೀನು. ನೀನು ಕೇಳಿದಲ್ಲಿ ತಪ್ಪೇ ಇಲ್ಲ ಎದ್ದೇಳು” ನಿತೀಶನು ಎದ್ದು ನಿಂತು.
“ಅಜ್ಜಿ ನಾನು ಇಲ್ಲಿಂದ ಹೊರಡುತ್ತೇನೆ. ಮತ್ತೆಂದು ನಿಮಗೆ ಮುಖ ತೋರಿಸುವುದಿಲ್ಲ”
“ನಿನ್ನನ್ನು ಕಳುಹಿಸಬೇಕಿದ್ದರೆ, ಆ ದಿನ ನಿನ್ನ ಮನೆಗೆ ಸೇರಿಸಿಯೇ ಕೊಳ್ಳುತ್ತಿರಲಿಲ್ಲ. ಕಂದ! ಪುಟ್ಟ ಮನಸ್ಸಿಗೆ ನೋವು ಮಾಡಿಕೊಳ್ಳಬೇಡವೋ”
‘ಬಾ’ ಎಂದು ಅಜ್ಜಿ, ನಿಶಾ, ನಿತೀಶ ಅರಮನೆ ಕಡೆ ನಡೆದರು. ಯಾಕೋ ನಿತೀಶನಿಗೆ ಜೀವನದ ಬಗ್ಗೆ ಬೇಜಾರುತನ ಬೆಳೆಯ ತೊಡಗಿತು. ನಾಲ್ಕು-ಐದಿನ ನಿಶಾಳಿಗೆ ಮತ್ತು ಅಜ್ಜಿಗೆ ಮುಖ ತೋರದೆ ಮನೆಯಲ್ಲಿ ಯಾವುದೋ ಕೆಲಸದಲ್ಲಿ ತೊಡಗುತ್ತಿದ್ದ. ನಿಶಾ ಕಣ್ಮುಂದೆ ಬಂದರೆ ಮೌನಿಯಾಗುತ್ತಿದ್ದ ಅಜ್ಜಿಯ ಧ್ವನಿ ಕೇಳಿದರೆ ಕಿವುಡನಾಗುತ್ತಿದ್ದ. ಒಂದಿನ ರಾತ್ರಿಯಾಯಿತು. ನಿತೀಶ್‌ನಿಗೆ ನಿದ್ರೆ ಹತ್ತಲಿಲ್ಲ. ಏನು ಮಾಡಬೇಕೆಂದು ತೋರದೆ. ಅಮ್ಮ, ಅಪ್ಪ, ತಂಗಿಯ ನೆನಪು ಚುಚ್ಚಿ-ಚುಚ್ಚಿ ಕಾಡತೊಡಗಿತು. ಊರಿಗೆ ಹೋಗೋಣ ಎಂದು ಚಿಂತಿಸಿದ. ಒಂದು ಮನಸ್ಸು ಹೋಗೋಣ, ಮತ್ತೊಂದು ಮನ ಬೇಡ ಎಂದು. ಒಂದೇ ಮನ ಆದರೇ ಎರಡು ಯೋಚನೆ. ಧೈರ್ಯ ತುಂಬಿಕೊಂಡ. ಕೈ ಕಟ್ಟಿಕೊಂಡು ಉಸಿರು ಎಳೆದುಕೊಳ್ಳುತ್ತಿದ್ದ. ನಿಶಾಳು ಜೋಡಿಸಿಟ್ಟಿದ್ದ ಸಾಲದ ಪುಸ್ತಕ ಅವನ ಕಣ್ಣಿಗೆ ಗೋಚರಿಸಿದವು. ಹೋಗಿ ನಿಂತುಕೊಂಡು ಅದರೊಳಗಿನಿಂದ ಒಂದು ದಪ್ಪವಾದ ಪುಸ್ತಕ ಕೈಗೆತ್ತಿಕೊಂಡನು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಓದಲು ಕುಳಿತು. ಅರ್ಧರಾತ್ರಿ ಕಳೆಯಿತು. ಮುಂಜಾನೆ ನಸುಕು. ನಿಶಾ ಎಚ್ಚೆತ್ತು ಹೊರ ಬರಬೇಕಾದರೆ, ನಿತೀಶ ಓದುವುದನ್ನು ಕಂಡಳು. ಐದು ನಿಮಿಷ ಹಾಗೆ ನೋಡಿದಳು. ಆಮೇಲೆ ಅಜ್ಜಿಯನ್ನು ಕರೆದುಕೊಂಡು ಬಂದು ಇಬ್ಬರೂ ನೋಡ ತೊಡಗಿದರು. ಮರಳಿ ವಾಪಸಾದರು.
ನಿತೀಶ ಪುಸ್ತಕ ಮಡಚಿಟ್ಟು ಕೆಲಸದಲ್ಲಿ ತೊಡಗಿದ್ದ ಉದ್ದೇಶ ಪೂರ್ವಕವಾಗಿ ನಿಶಾ ಓಡಿ ಬಂದು.
“ಅಜ್ಜಿ ನನ್ನ ಪುಸ್ತಕ ನೋಡಿದಿರಾ?”
“ಪುಸ್ತಕನಾ? ಯಾವ ಪುಸ್ತಕ?”
“ಅದು ಅಜ್ಜಿ, ವುಡ್‌ವರ್ತ್ಸ್ ಬರೆದಿರುವ ಇಂಗ್ಲೀಷ ಪುಸ್ತಕ”
“ನಾನು ನೋಡಿಲ್ವೆ”
ನಿತೀಶ ಎಲ್ಲಾ ಕೇಳಿಸಿಕೊಳ್ಳುತ್ತಿದ್ದ. ಮುಖ ಚಂಚಲ ದಿಂದ ಕೂಡಿತು. ಭಾವ ತಾಳವಾಡ ತೊಡಗಿತು. ನಿಶಾ ಹಾಗೂ ಅಜ್ಜಿ ನಿತೀಶನನ್ನು ಕಂಡು ಮುಗುಳ್ನಗ ತೊಡಗಿದರು. ನಿತೀಶ ಓಡಿ ಹೋಗಿ ತಾನು ಓದಿದ ಆ ಪುಸ್ತಕ ತೆಗೆದುಕೊಂಡು ಅಜ್ಜಿಯ ಮುಂದೆ ಬಂದು ನಿಂತನು.
“ಅಜ್ಜಿ ಪುಸ್ತಕ” ಎಂದನು
“ಯಾವ ಪುಸ್ತಕ? ಯಾರದ್ದು ಇದು”
“ಅಜ್ಜಿ ಇದು ನಿಶಾಳದು. ರಾತ್ರಿ ಓದಲು ತೆಗೆದುಕೊಂಡಿದ್ದೆ. ಹೇಳದೆ ತೆಗೆದುಕೊಂಡದಕ್ಕೆ ಕ್ಷಮಿಸಿ”
“ಅಯ್ಯೋ! ಹುಚ್ಚಪ್ಪ. ನಮಗೆ ಗೊತ್ತಿತ್ತು. ಬೇಕಾಗಿ ನಿಶಾ ಈ ರೀತಿ ನಾಟಕ ಮಾಡಿದ್ದಾಳೆ. ನಿನಗೆ ಈ ಮನೆಯಲ್ಲಿ ಏನು ಬೇಕೆನಿಸುತ್ತದೆಯೋ ಅದನ್ನೆಲ್ಲಾ ತೆಗೆದಿಕೋ ಆರಾಮವಾಗಿರು. ಬುದ್ಧಿವಂತ ನೀನು.” ಎಂದ ಅಜ್ಜಿ ಹೋಗಿ ಕುಳಿತುಕೊಂಡಳು. ಅಜ್ಜಿಯ ಪಕ್ಕ ನಿಂತಿರುವ ನಿಶಾ ಗಂಭೀರವಾಗಿ.
“ನಿತೀಶ ನೀನು ನಮ್ಮೆಲ್ಲರಿಗಿಂತಲೂ ಜ್ಞಾನವಂತ. ಓದುವ ಹುಚ್ಚಿದೆ ನಿನಗೆ. ಆ ಮಹಾಕವಿ ಬರೆದಿರುವ ಪುಸ್ತಕವನ್ನು ಎದೆ ಬಿಡದೆ ರಾತ್ರಿಯಲ್ಲಾ ಕುಳಿತು ಓದಿದ್ದೀಯಾ. ಅಂದರೇ ನಿನಗೆ ಓದುವುದರಲ್ಲಿ ಎಷ್ಟು ಆಸಕ್ತಿ ಇರಬೇಕು ಹೇಳು ? ಆ ದಿನ ನನಗೆ ಉಂಟಾದ ಸಮಸ್ಯೆಯನ್ನು ಸುಲಭವಾಗಿ ವಿವರಿಸಿದೆ. ಹೇಳು ನೀನು ಏನು ಓದಿರುವೆ? ಎಲ್ಲಿಂದ ಬಂದಿರುವೆ.”
“ಯಾರು ಹೇಳಿದ್ದು? ನಾನು ಜಾಣ ಎಂದು. ನಾನೊಬ್ಬ ಅನಾಗರಿಕ ಹುಡುಗ. ಕೂಲಿ ಹುಡುಕಿಕೊಂಡು ಬಂದಿದ್ದೇನೆ.”
“ನೋಡು ನಿತೀಶ ಸತಾಯಿಸಬೇಡ. ಆ ಕಲ್ಲು ದೇವರ ಮುಂದೆ ಆ ದಿನ ಪ್ರಾರ್ಥನೆ ಮಾಡುತ್ತಾ. ಬೇಡಿಕೊಳ್ಳುತ್ತಿರುವುದನ್ನು ನಾನು ಕೇಳಿಸಿಕೊಂಡೆ. ಆ ಮೇಲೆ ನಿನ್ನನ್ನೆ ಹುಡುಕುತ್ತಾ ಹೊರಟೆ. ನೀನು ನನಗೆ ಸಿಗಲು ದಿನಗಳು ಕಳೆದವು. ಅಜ್ಜಿಗೆ ಹೇಳಿದೆ ಅವರು ನಂಬುವ ಸ್ಥಿತಿಯಲ್ಲಿರಲಿಲ್ಲ. ನಿನ್ನನ್ನು ಹೇಗಾದರೂ ಪರಿಚಯ ಮಾಡಿಕೊಂಡು ನಿನ್ನ ಕಷ್ಟ ಕೇಳಬೇಕೆಂಬ ಕುತೂಹಲ ನನದಾಗಿತ್ತು.”
ಇಷ್ಟು ಹೇಳಿದ ಬಳಿಕ ನಿತೀಶನಿಗೆ ತನ್ನ ಬಗ್ಗೆ ಹೇಳಿಕೊಳ್ಳುವುದರಲ್ಲಿ ಹಿಂಜರೆಯಲಿಲ್ಲ. ತಾನು ಯಾರ ಮಗ. ತನಗೂ ತನ್ನ ಅಪ್ಪನಿಗೂ ಇರುವ ಬಿರುಕು. ಹಳ್ಳಿಯ ಗೌಡರಿಗೂ ಇರುವ ವೈ-ಮನಸ್ಸು. ತನ್ನ ಶಾಲೆ, ಗೆಳೆಯರು ತಾನು ಮಾಡಿದ ಪ್ರತಿಭಟನೆ. ಊರ ಬಿಟ್ಟ ಬಂದಂತಹ ಪರಿಸ್ಥಿತಿ. ಎಲ್ಲಾವನ್ನು ಹೇಳಿ ಮುಗಿಯಿಸಿಯೇ ಬಿಟ್ಟ. ಕೇಳುತ್ತಿದ್ದ ಅಜ್ಜಿಗೆ ತನ ಮಗನ ನೆನಪು ಬಂದಿತು. ನಿಶಾಳಿಗೆ ಎಂತಹ ಒಳ್ಳೆಯ ಗುಣ ಇವನದು. ಎಂದು ಯೋಚಿಸಿದಳು. “ಮತ್ತೆ ಮುಂದೆ ಎಂದೂ ಊರಿಗೆ ಬರಬೇಡ ಎಂದು ಅಪ್ಪ ಆಜ್ಞೆ ಮಾಡಿದ್ದಾರೆ. ಹಾಗಾಗಿ ಇಲ್ಲೆ ಎಲ್ಲಿಯಾದರೂ ಕೆಲಸ ಮಾಡಿಕೊಂಡು ಇರುತ್ತೇನೆ” ಎಂದು ವಿವರಿಸಿದ. ಇಂತಹ ಒಳ್ಳೇಯ ರಾಜಕುಮಾರನನ್ನು ಅರಸುತ್ತಾ ಹೋದರು ಸಿಗುವುದಿಲ್ಲ ಎಂದು ಅಜ್ಜಿ ನಿರ್ಧಾರಿಸಿ. ಅರಮನೆಯಲ್ಲಿನ ಎಲ್ಲಾದಕ್ಕೂ ಅಧಿಕಾರ ನೀಡಿದಳು. ನಿಶಾ ಮತ್ತು ನಿತೀಶ ಆತ್ಮೀಯ ಸ್ನೇಹಿತರಾಗಿ ನಿತೀಶನ ಓದು ಮುಂದುವರೆಸಿದನು. ಇಬ್ಬರೂ ಒಂದು ಹಂತದ ವಿದ್ಯಾಭ್ಯಾಸ ಮುಗಿಸಿಕೊಂಡರು. ಅಜ್ಜಿ ಕೊನೆ ಉಸಿರು ಎಳೆಯುವಾಗ “ನಿತೀಶ ನನ್ನ ನಿಶಾಳಿಗೆ ಬೇರೆ ಯಾರು ದಿಕ್ಕಿಲ್ಲ. ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನದು. ಆದರೇ ನಿತೀಶ ಒಂದು ಮಾತು ಗಮನದಲ್ಲಿಟ್ಟುಕೋ. ಅದೇನಂದರೆ ನೀನು ನಿನ್ನ ಹುಟ್ಟಿದ ಹಳ್ಳಿಗೆ ಹೋಗು. ಅಲ್ಲಿಯೇ ಹೊಸ ಜೀವನ ಆರಂಭಿಸು. ನಿನ್ನ ತಂದೆ-ತಾಯಿ ನಿನ್ನ ಆಗಮನದ ನಿರೀಕ್ಷೆಯಲ್ಲಿಯೇ ಇರುತ್ತಾರೆ. ಅವರ ಮನಸ್ಸನ್ನು ತೃಪ್ತಿಗೊಳಿಸಬೇಕು. ಚೊಚ್ಚಲ ಮಗನಾದ ನೀನು ಹೆತ್ತವರನ್ನು ನೋಡಿಕೊಳ್ಳುವುದು ಆದ್ಯ ಕರ್ತವ್ಯ. ಅನ್ಯಾಯವನ್ನು ಹೆದರಿಸು. ಬದುಕನ್ನು ಸಾರ್ಥಕಗೊಳಿಸಿಕೋ” ಎಂದು ಅಜ್ಜಿ ಆರ್ಶೀವಾದ ಮಾಡಿದರು ಇಬ್ಬರಿಗೂ. ಈಗ ನಿತೀಶಕುಮಾರನ ಹಳ್ಳಿಯ ಜನರಿಗೆ ಧೈರ್ಯ ಬಂದಾಗಿದೆ. ಗೌಡನು ಬೆಪ್ಪಾಗಿ ಹೋಗಿದ್ದಾನೆ. ಕೆಲವೊಂದು ಸ್ಥಾನಗಳಲ್ಲಿ ನಿತೀಶನ ಜನರು ಅಧಿಕಾರ ಪಡೆದುಕೊಂಡಿದ್ದಾರೆ. ನಿತೀಶನ ತಂಗಿ ದೊಡ್ಡವಳಾಗಿ ಹೈಸ್ಕೂಲ್ ಜೀವನ ಮುಗಿಸಿದ್ದಾಳೆ ಗೆಳೆಯರೆಲ್ಲಾ ಕೆಲವರು ಓದನ್ನು ಮುಂದುವರೆಸಿದ್ದಾರೆ ಕೆಲವರು ಅರ್ಧಕ್ಕೆ, ಇನ್ನೂ ಕೆಲವರು ಮದುವೆ ಮಾಡಿಕೊಂಡಿದ್ದಾರೆ. ಹೌದು. ಅಂದು ಊರು ಬಿಟ್ಟು ಹೋದ ನಿತೀಶನು ಇಂದು ಮೂವತ್ತರ ವಯಸ್ಸಿನ ಜಿಲ್ಲಾಧಿಕಾರಿಯಾಗಿ ನಿಶಾಳನ್ನು ಮನಸಾರೆ ಪ್ರೀತಿಸಿ, ಮದುವೆಯಾಗಲು ಇಚ್ಛಿಸಿದ್ದಾನೆ. ಹಳ್ಳಿಯ ಜನರು ನಿತೀಶನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಹಳ್ಳಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಹಳ್ಳಿಯ ಜನರ ಮನತುಂಬ ಖುಷಿಯೋ ಖುಷಿ. ‘ನಮ್ಮೂರ ಕಂದ ಮರಳಿ ನಮ್ಮೂರಿಗೆ ಬರುತ್ತಿದ್ದಾನೆ’ ಎಂದು ಜನರು ಅಲ್ಲಲ್ಲಿ ಮಾತನಾಡುವುದನ್ನು ಆಲಿಸಿದ ನಿತೀಶನ ತಂಗಿ ಖುಷಿಯಿಂದ ಮನೆಗೆ ಓಡಿದಳು. ಅಪ್ಪನಿಗೂ ತಿಳಿಸಿದಳು. ಕೊನೆಗೆ ನಿತೀಶನು ತನ್ನ ಹುಟ್ಟೂರಿಗೆ ಬಂದನು. ತನ್ನ ಮೊದಲ ಹೆಜ್ಜೆವಿಟ್ಟಾಗ ಅಪ್ಪ ‘ಬರಬೇಡ’ ಎಂದ ಹಾಗೆ ಅನಿಸುತ್ತಿತ್ತು. ಅಮ್ಮ ‘ಬಾ ಮಗು ಬಾರೋ, ನನ್ನ ಮಡಿಲನ್ನು ಸೇರೋ’ ಎಂದೇನಿಸುತ್ತಿತ್ತು. ನಿತೀಶನನ್ನ ಕಂಡ ಜನ ಕಣ್ಣೀರು ಸುರಿಸುತ್ತಾ ಅವನ ಸುತ್ತು ನಿಂತುಕೊAಡು, ಹರ್ಷದಲ್ಲಿದ್ದ ಜನರು ಮೌನವಾದರು.
“ಬಾ ಮಗನೇ ನಿನ್ನನ್ನೂ ದೂರ ಮಾಡಿಕೊಂಡ ನಮ್ಮ ಒಡಲು ಕಂಗಲಾಗಿವೆ” ಎಂದೇಳುತ್ತಾ ಸ್ವಾಗತಿಸುತ್ತಿರುವ ಅಮ್ಮಂದಿರು.
“ಲೋ….! ನಿತೀಶ ನಿನ್ನನ್ನು ಇಷ್ಟು ದಿನ ದೂರ ಮಾಡಕೊಂಡು ಸ್ನೇಹದ ಕೊಂಡಿ ಕಳಚಿದಂತಾಗಿದೆ” ಎಂದೇಳುತ್ತಿದ್ದ ಸ್ನೇಹಿತರು. ಅಪ್ಪನಿಗೆ ಗೊತ್ತಾಗದಂತೆ ಮನೆಬಿಟ್ಟು ಓಡಿಬಂದು ಎಲ್ಲರ ಮಧ್ಯೆ ನಿಂತಿರುವ ನಿತೀಶನ ತಂಗಿ. ಆ ದಿನ ಅಣ್ಣ ಮನೆ ಬಿಟ್ಟು ಹೋಗುವಾಗ ಬೆನ್ನನ್ನು ಮಾತ್ರ ನೋಡುತ್ತಾ ಅಮ್ಮನನ್ನು ಸಂತೈಸುತ್ತಿದದ್ದನ್ನು ಸ್ಮರಿಸಿಕೊಂಡು, ನೋವು ತಾಳಲಾರದೆ ಓಡಿಬಂದು ‘ಅಣ್ಣ’ ಎಂದು ಅಪ್ಪಿಕೊಂಡಳು. ಕರಿಮೋಡ ಕರಗಿ ಮಳೆ ಬಂದಂತೆ, ಭೂಮಿಗೆ ಬಿದ್ದ ಬೀಜ ಭೂಮಿಯಿಂದ ಮೊಳಕೆ ಹೊಡೆದಷ್ಟೇ ಸಂತೋಷ ಈ ಇಬ್ಬರ ಅಣ್ಣ-ತಂಗಿಯ ಪ್ರೀತಿಯಲ್ಲಿ ಕಾಣುತ್ತಿತ್ತು. ಅದೇ ಹಳೆಯ ಚಪ್ಪರದ ಗುಡಿಸಲ ಬಳಿ ನಿತೀಶ, ನಿಶಾ, ತಂಗಿ, ಜನರೆಲ್ಲಾ ಬಂದು ಸೇರಿದರು. ಅಪ್ಪ ಕೆಮ್ಮುತ್ತಿದ್ದ. ಅಮ್ಮನ ಪೋಟೋ ಗೋಡೆಗೆ ನೇತು ಹಾಕಿದ್ದರು. ಕೆಮ್ಮುತ್ತಾ ಅಪ್ಪ ಬೆನ್ನು ಮಾಡಿ ನಿಂತಿದ್ದ. ನಿತೀಶ ತನ್ನ ತಂದೆಯ ಕಾಲನ್ನು ಹಿಡಿದು “ಕ್ಷಮಿಸಿ” ಎಂದನು. ಅಪ್ಪನಿಗೆ ಮಗನ ಸ್ಪರ್ಶದಿಂದ ಕಣ್ಣೀರು ಧಾರಾಕಾರಾವಾಗಿ ಸುರಿದವು. ಮಗನನ್ನು ಬಿಗಿದಪ್ಪಿಕೊಂಡು “ಕ್ಷಮಿಸಬೇಕಾಗಿರುವುದು ನಾನಲ್ಲ ನೀನು” ಎಂದು ಬೇಡಿದನು. ಸಂಜೆಯ ಸೂರ್ಯನಿಗೆ ಮನೆಗೆ ಹೊರಡುವ ಹೊತ್ತಾಗಿತ್ತು. ಅವನು ಹೊರಟನು. ಇಲ್ಲಿ ನಿತೀಶ ಹಾಗೂ ಅಪ್ಪ ಸಮಾಧಾನಗೊಂಡು. ಮರು ಮಾತನಾಡದೆ ಮೌನವಾಗಿದ್ದರು. ದಿನ ಕಳೆದವು ನಿತೀಶನ ಕುಟುಂಬ ಹಾಗೂ ಹಳ್ಳಿಯ ಜನರು ಸಂತೋಷದಿಂದ ಜೀವನ ನಡೆಸಿದರು.

ಅನೀತಾ ಡಿ.ದುಬೈ.ಯಾದಗಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ