Oplus_131072

ನೋವ ಮರೆಸಿದ ಕ್ರೀಡೆ

73ರ ಇಳಿ ವಯಸ್ಸಿನಲ್ಲಿ ಸುಲತ ಕಾಮತ್ ಎಂಬ ಉಡುಪಿಯ ಹೆಣ್ಣು ಮಗಳು ಹಲವಾರು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ತಿಂಗಳಲ್ಲಿ ಮೂರರಿಂದ ನಾಲ್ಕು ಮ್ಯಾರಥಾನ್ಗಳನ್ನು ಆಕೆ ಬರಿಗಾಲಿನಲ್ಲಿ ಓಡಿ ಇಲ್ಲವೇ ನಡೆದು ಪೂರೈಸುತ್ತಾರೆ.

ಈಗಲೂ ಕೂಡ ವಾರದಲ್ಲಿ ಮೂರರಿಂದ ನಾಲ್ಕು ದಿನ ಆಕೆ ಸತತವಾಗಿ ನಡೆಯುವ ಮೂಲಕ ತರಬೇತಿ ಹೊಂದುತ್ತಿತ್ತು. ಆದರೆ ಸುಲತ ಅವರಿಗೆ ಓಡುವುದು ಕೇವಲ ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಮಾತ್ರವಲ್ಲದೆ, ಮಾನಸಿಕ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಲು ಅತ್ಯವಶ್ಯವಾಗಿದ್ದು ಜನರ ಕುಹಕ, ಅಪಹಾಸ್ಯಗಳಿಗೆ ಆಕೆ ತನ್ನದೇ ರೀತಿಯಲ್ಲಿ ಉತ್ತರ ಕಂಡುಕೊಂಡರು.

ಚಿಕ್ಕಂದಿನಿಂದಲೂ ಓಡುವುದರಲ್ಲಿ ಆಸಕ್ತಿಯನ್ನು ಹೊಂದಿದ್ದ ಸುಲತ ಕ್ರೀಡೆಯಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿದ್ದರೂ ಕಾಲೇಜಿಗೆ ಬಂದ ನಂತರ ಈ ಎಲ್ಲ ಚಟುವಟಿಕೆಗಳಿಗೆ ಪೂರ್ಣವಿರಾಮ ನೀಡಿದರು. ಮುಂದೆ ಮದುವೆಯಾದ ನಂತರ ಆಕೆ ಮನೆ, ಮಕ್ಕಳು, ಸಂಸಾರ ಎಂದು ತಮ್ಮನ್ನು ತಾವು ತೊಡಗಿಸಿಕೊಂಡರು. ಪತಿ ದಿನಸಿ ಅಂಗಡಿ ವ್ಯಾಪಾರಸ್ಥರಾಗಿದ್ದರು.ಮಕ್ಕಳು ತುಸು ದೊಡ್ಡವರಾದ ಮೇಲೆ ಮತ್ತೆ ತಮ್ಮ ಮಕ್ಕಳೊಡನೆ ಆಡಲು ಆರಂಭಿಸಿದ ಆಕೆ ತನ್ನ ಮಗಳೊಂದಿಗೆ ತಾನು ಕೂಡ ಕರಾಟೆ ಕಲಿತು ನನ್ನ 35ರ ಹರೆಯದಲ್ಲಿ ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದರು.

ಕರಾಟೆ ಸ್ಪರ್ಧೆಗಳು ತೂಕದ ಆಧಾರದ ಮೇಲೆ ನಡೆಯುವುದರಿಂದ ಈಕೆಯೊಂದಿಗೆ ಸ್ಪರ್ಧಿಸಲು ಬರುವ ಮಕ್ಕಳು ಈಕೆಯನ್ನು ನೋಡುತ್ತಲೇ ಅಳುತ್ತಿದ್ದರು ಎಂದು ಆಕೆ ನಗುತ್ತಲೆ ಹೇಳುತ್ತಾರೆ.

2006ರಲ್ಲಿ 56ವರ್ಷದ ಸುಲತ ತಮ್ಮ ಹನ್ನೆರಡು ವರ್ಷದ ಮಗಳೊಂದಿಗೆ ಮಣಿಪಾಲದಲ್ಲಿ ನಡೆದ 21 ಕಿಲೋಮೀಟರ್ ಮ್ಯಾರಥಾನ್ ನಲ್ಲಿ ಭಾಗವಹಿಸಿ 13ನೇ ಸ್ಥಾನವನ್ನು ಗಳಿಸಿದ ನಂತರವೂ ಸುಲತಾ ಅವರು ಇನ್ನು ಮುಂದೆ ಈ ಪ್ರಯತ್ನ ಕೈಬಿಡಬೇಕು ಎಂದುಕೊಳ್ಳುತ್ತಿರುವಾಗಲೇ ಸ್ಥಳೀಯ ಶಾಸಕ ರಘುಪತಿ ಭಟ್ ರವರು ಅವರಿಗೆ ಪ್ರೋತ್ಸಾಹಿಸಿ ಅವರ ಪ್ರಯತ್ನವನ್ನು ಜಾರಿಯಲ್ಲಿಡಲು ಆಗ್ರಹಿಸಿದರು.

ಕೆಲವು ತಿಂಗಳುಗಳ ಹಿಂದೆ ತನ್ನ 30ರ ಹರೆಯದ ಮಗನನ್ನು ಕಳೆದುಕೊಂಡ ಸುಲತಾ ತೀವ್ರ ಮಾನಸಿಕ ಯಾತನೆಗೊಳಗಾದರು. ಸಂಕಷ್ಟದ ಇಂತಹ ಪರಿಸ್ಥಿತಿಯಲ್ಲಿ ಆಕೆಯ ಓಟವೇ ಆಕೆಯ ನೋವನ್ನು ಮರೆಸುವ ಸಾಧನವಾಗಿ ಪರಿಣಮಿಸಿತು. ಆಕೆಯ ಬದುಕಿನ ಅತ್ಯಂತ ಪ್ರಮುಖ ಭಾಗವಾಗಿ ಪರಿಣಮಿಸಿದ ಓಟ ಆಕೆಯ ಮಾನಸಿಕ ಒತ್ತಡವನ್ನು ಬಹಳಷ್ಟು ದೂರಗೊಳಿಸಿತು. ಮಗನ ಸಾವಿನ ಆಕಸ್ಮಿಕ ಆಘಾತದ ನಂತರ ಆತನ ನೀರಿನ ವ್ಯಾಪಾರವನ್ನು ಮುಂದುವರೆಸಿರುವ ಆಕೆ ಎಂದೂ ಹಿಂತಿರುಗಿ ನೋಡಲೇ ಇಲ್ಲ. ಇದೀಗ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮ್ಯಾರಥಾನ್ಗಳಲ್ಲಿ ಭಾಗವಹಿಸಿರುವ ಸುಲತ ಅವರು ಸಾವಿರಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ.

ಎಂಟನೇ ತರಗತಿಯಲ್ಲಿ ಕಲಿಯುತ್ತಿರುವಾಗ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಯ ಖೋ ಖೋ ಮತ್ತು 4* 100 ಮೀಟರ್ ರಿಲೇ ಓಟದಲ್ಲಿ ಭಾಗವಹಿಸಲು ನಾವು ರಾಯಚೂರು ಜಿಲ್ಲೆಯ ಹಟ್ಟಿ ಎಂಬ ಪಟ್ಟಣಕ್ಕೆ ಹೋಗಿದ್ದೆವು. ಬಂಗಾರದ ಅದಿರಿನ ಗಣಿಗಳಿಂದಾಗಿ ಹಟ್ಟಿ ಗೋಲ್ಡ್ ಮೈನ್ ತುಂಬಾ ಪ್ರಸಿದ್ಧವಾಗಿದ್ದು ಅಲ್ಲಿ ಕೆಲಸ ಮಾಡುತ್ತಿರುವ ಎಲ್ಲ ದರ್ಜೆಯ ನೌಕರರಿಗೆ ಒಳ್ಳೆಯ ವಸತಿ ಸಮುಚ್ಚಯಗಳು,ಸುಸಜ್ಜಿತ ರಸ್ತೆಗಳು, ಸುಸಜ್ಜಿತ ಕ್ರೀಡಾಂಗಣ ಅಲ್ಲಿ ಲಭ್ಯವಿದ್ದವು.

“ಗ್ರೇಟ್ ಪ್ಲೇಯರ್ಸ್ ಆರ್ ನಾಟ್ ಮೇಡ ಆನ್ ಪ್ಲೇಯಿಂಗ್ ಫೀಲ್ಡ್ಸ್, ದೇ ಮೇಡ್ ಸಂಥಿಂಗ್ ದೇ ಹ್ಯಾವ್ ಡೀಪ್ ಇನ್ ಸೈಡ್ ದೆಮ್”…. ಎಂಬ ವಾಕ್ಯವನ್ನು ರಾಯಚೂರು ಜಿಲ್ಲೆಯ ಹಟ್ಟಿಯ ಜಿಲ್ಲಾ ಕ್ರೀಡಾಂಗಣದ ಕಟ್ಟಡದಲ್ಲಿನ ಕಪ್ಪು ಬಣ್ಣದ ಬೋರ್ಡ್ ನಲ್ಲಿ ಬರೆದಿದ್ದು ಅದು ನನಗೆ ಬಹಳ ಇಷ್ಟವಾದ ವಾಖ್ಯಾನವಾಗಿ ನನ್ನೆಲ್ಲ ನೋಟ್ ಪುಸ್ತಕದ ಒಳ ಪುಟಗಳಲ್ಲಿ ಸ್ಥಾನ ಪಡೆಯಿತು.
ಮಹಾನ್ ಆಟಗಾರರು ಕೇವಲ ಮೈದಾನಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ… ಅವರಲ್ಲಿರುವ ಯಾವುದು ಒಂದು ಶಕ್ತಿ ಅವರನ್ನು ಮೈದಾನದ ಹೊರಗೂ ಪ್ರೋತ್ಸಾಹಿಸುತ್ತದೆ. ಅವರಲ್ಲಿರುವ ಅಗಮ್ಯ, ಅಗೋಚರ ಶಕ್ತಿ, ಏನನ್ನಾದರೂ ಸಾಧಿಸಬೇಕೆನ್ನುವ ಛಲ ನಿರಂತರವಾಗಿ ಪ್ರವಹಿಸುತ್ತಿರುತ್ತದೆ ಎಂಬ ಅರ್ಥವನ್ನು ಈ ಹೇಳಿಕೆ ಹೊಂದಿದೆ.ಒಂದು ಮಹತ್ವಾಕಾಂಕ್ಷೆ, ಒಂದು ದೂರ ದೃಷ್ಟಿ ಅವರ ಬದುಕನ್ನು ನಿರ್ದೇಶಿಸುತ್ತದೆ ಎಂಬ ಮಾತು ಇವರಿಗೆ ಬಹಳ ಸೂಕ್ತವೆನಿಸುತ್ತದೆ.

ತಮ್ಮ ಮನಸ್ಸಿನ ಆಳದ ನೋವನ್ನು ಮರೆಯಲು ಸುಲತಾರವರು ಓಟವನ್ನು ಔಷಧಿಯಾಗಿ ಪರಿಗಣಿಸಿದ್ದನ್ನು ಕಂಡು ಈ ಮಹಾನ್ ಆಟಗಾರರು ಕೇವಲ ಆಟದ ಮೈದಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ದಮನಿತ ಶಕ್ತಿ, ಕಡೆಗಣಿಸಿದ ಪ್ರತಿಭೆ ಮತ್ತು ಆಂತರಿಕ ನೋವುಗಳನ್ನು ಮರೆಯಲು ಕೂಡ ಕ್ರೀಡೆ ಸಹಕಾರಿಯಾಗಬಲ್ಲದು ಎಂಬ ಹೊಸ ಬೆಳಕನ್ನು ತೋರಿಸಿತು.

ಎಷ್ಟೋ ಬಾರಿ ಮೇಲಿನ ಈ ಹೇಳಿಕೆ ನನ್ನನ್ನು ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪ್ರೇರೇಪಿಸುತ್ತಿತ್ತು… ಸೋತೆ ಎಂದೆನಿಸಿದಾಗ ಗೆಲ್ಲುವ ಅವಕಾಶಗಳನ್ನು ತೋರುತ್ತಿತ್ತು. ಆದರೆ ಸುಲತಾರಂತಹ ಮಹಿಳೆಯರ ಸಾಧನೆಗಳು, ಬದುಕಿನೆಡೆಗಿನ ಪ್ರೀತಿ, ಕಠಿಣ ಪರಿಶ್ರಮಗಳು ಇಂದಿನ ಮಧ್ಯ ವಯಸ್ಸಿನಲ್ಲಿಯೇ ಮುದುಕರಂತಾಡುವ, ಸಾವಿನ ಮಾತಾಡುವ, ಹತಾಶರಾಗಿ ಸೋಲನ್ನಪ್ಪುವ ಆತ್ಮಹತ್ಯೆಗೆಳಸುವ ಮನಸ್ಥಿತಿಯನ್ನು ಹೊಂದಿರುವ
ಜನರಲ್ಲಿ ಭವಿಷ್ಯದ ಕುರಿತಾದ ಭರವಸೆಯನ್ನು, ನಮಗಾಗಿಯೂ ನಾವು ಬದುಕಬೇಕು ಎಂಬ ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ.

ಈ ಲೋಕಕ್ಕೆ ನಾವು ಬರುವಾಗಲೂ ಒಬ್ಬರೇ ಹೋಗುವಾಗಲೂ ಒಬ್ಬರೇ… ನಡುವೆ ನಮ್ಮನ್ನು ಸೆಳೆಯುವ ಎಲ್ಲ ಬಂಧನಗಳು ಶಾಶ್ವತ ಎಂದು ಭಾವಿಸುವ ನಾವುಗಳು ಎಲ್ಲರಿಗಾಗಿ ಬದುಕುತ್ತೇವೆ… ಇದು ಖಂಡಿತ ತಪ್ಪಲ್ಲ. ಎಲ್ಲರಿಗೂ ಎಲ್ಲವನ್ನು ಮಾಡುವ ಹೆಣ್ಣು ಮಕ್ಕಳು ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲವಲ್ಲ….ಇದು ಖಂಡಿತವಾಗಿಯೂ ತಪ್ಪು. ಹೆಣ್ಣು ಮಕ್ಕಳು ತಮಗಾಗಿಯೂ ನಾವು ಬದುಕಬೇಕು ತಮ್ಮ ಆಸೆ ಆಕಾಂಕ್ಷಿಗಳನ್ನು ಅವು ತಾವಾಗಿಯೇ ಈಡೇರಲಿ ಎಂಬ ಭಾವದಿಂದ ಅದುಮಿಡಬಾರದು. ತಮಗಿರುವ ಇತಿಮಿತಿಯಲ್ಲಿ ತಮ್ಮ ಮನಸ್ಸಿನ ಚಿಕ್ಕ ಪುಟ್ಟ ಆಸೆಗಳನ್ನು ಪೂರೈಸಿಕೊಳ್ಳಬೇಕು. ಇನ್ನುಳಿದ ಮಹತ್ತರ ಆಸೆಗಳನ್ನು ಸತತ ಶ್ರದ್ಧೆ ಧ್ಯೇಯ ಮತ್ತು ನಿರಂತರತೆಯಿಂದ ಗೆಲ್ಲುವ ನಿಟ್ಟಿನಲ್ಲಿ ಸತತ ಪ್ರಯತ್ನ ನಮ್ಮದಾಗಿರಬೇಕು.

ಬದುಕು ನಮ್ಮದು… ಬದುಕಿನ ಕೆಲ ನಿರ್ಧಾರಗಳ ಆಯ್ಕೆಯೂ ನಮ್ಮದೇ ಆಗಿರಬೇಕು ಅಲ್ಲವೇ?
ಏನಂತೀರಾ ಸ್ನೇಹಿತರೇ??

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ