ಒಳ್ಳೆಯ ಪತ್ನಿ ಬೇಕಿದ್ದರೆ ಉತ್ತಮ ಪತಿಯಾಗಿ.
– ವೀಣಾ ಹೇಮಂತ್ ಗೌಡ ಪಾಟೀಲ್.
ಸಾಮಾಜಿಕ ಜಾಲತಾಣದ ಕೀಡೆಯ ಕಚ್ಚುವಿಕೆಯಿಂದ ಪ್ರಭಾವಿತರಾದವರಿಗೆ( ಅದಕ್ಕೂ ಮುನ್ನ ಹೊಸದರಲ್ಲಿ ಗೋಣಿಚೀಲ ಎತ್ತಿ ಒಗೆದಂತೆ) ಮದುವೆಯಾದ ಹೊಸತರಲ್ಲಿ ಹೆಂಡತಿಯನ್ನು ಚಂದ್ರ ಚಕೋರಿ, ಜೀವನದ ಸಂಗಾತಿ ಎಂದೆಲ್ಲಾ ಬಣ್ಣಿಸುವ ಗಂಡು ಹುಡುಗರು ಮದುವೆಯಾದ ಕೆಲವೇ ವರ್ಷಗಳಲ್ಲಿ ಪತ್ನಿಯನ್ನು ತಮ್ಮ ಬದುಕಿನ ಅತಿ ದೊಡ್ಡ ದುರಂತ, ಏನನ್ನೂ ಕಲಿಯದವಳು, ಒಂದು ಪೈಸೆ ದುಡಿಯುವ ಯೋಗ್ಯತೆ ಇಲ್ಲದ,ಮೂರು ಹೊತ್ತು ಮನೆಯಲ್ಲಿ ಇರುವ ದಂಡಪಿಂಡ ಎಂಬಂತೆ ಭಾವಿಸಿ ಸದಾ ಆಕೆಯನ್ನು ಹಂಗಿಸುತ್ತಾರೆ. ಆಕೆಯ ನೋಯುವಿಕೆಯಲ್ಲಿಯೇ ವಿಕೃತ ಸಂತೋಷವನ್ನು ಕಾಣುವರು. ತಮ್ಮೆಲ್ಲ ಆರ್ಥಿಕ ಔದ್ಯೋಗಿಕ ಮತ್ತು ಸಾಮಾಜಿಕ ಪ್ರಗತಿಗೆ ತಾವೇ ಕಾರಣ ಎಂದು ಬಿಂಬಿಸಿಕೊಳ್ಳುವ ಇವರು ತಮಗಾಗುವ ತೊಂದರೆಗಳಿಗೆ ‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬಂತೆ ಪತ್ನಿಯನ್ನು ದೂಷಿಸುತ್ತಾರೆ.
ಬಹಳಷ್ಟು ಬಾರಿ ಗಂಡಸರ ಈ ವರ್ತನೆಗೆ ಅವರು ಬೆಳೆದು ಬಂದ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಸ್ಥಿತಿಗತಿಗಳು ಕಾರಣವಾದರೆ ಮತ್ತೆ ಕೆಲವೊಮ್ಮೆ ಅವರಲ್ಲಿರುವ ಸಂವೇದನಾಹೀನತೆಯೇ ಕಾರಣ. ತನ್ನ ತಾಯಿ ಮಾಡುವ ಕೆಲಸಗಳನ್ನು ನೆನೆಯುವುದು ತಪ್ಪಲ್ಲ… ಆದರೆ ತನ್ನ ಹೆಂಡತಿಯೂ ಹಾಗೆಯೇ ಇರಲಿ ಎಂದು ಬಯಸುವುದು ತಪ್ಪು. ಖ್ಯಾತ ಬರಹಗಾರ್ತಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕೆಲ ದಶಕಗಳ ಹಿಂದೆಯೇ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ಇನ್ಫೋಸಿಸ್ ಸಂಸ್ಥೆಯ ಧರ್ಮದರ್ಶಿ ಶ್ರೀಮತಿ ಸುಧಾ ಮೂರ್ತಿ ಅವರು ಒಂದೆಡೆ ನಿನ್ನ ನೌಕರಿ ಮಾಡುವ ಪತ್ನಿಯಲ್ಲಿ ನಿನ್ನ ತಾಯಿಯ ಅಡುಗೆ ಕೌಶಲ್ಯವನ್ನು ಬಯಸಬೇಡ ಎಂದು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ. ತಮ್ಮ ಸಂಗಾತಿಯಲ್ಲಿ ಇಲ್ಲದ ಗುಣಗಳನ್ನು ಅವರು ಹೊಂದಲಿ ಎಂದು ಅಪೇಕ್ಷಿಸುವುದು ಅಸಹಜ. ತಾಯಿ ಅದೆಷ್ಟೇ ತೂಕ ಅಳತೆ ಪ್ರಮಾಣದಲ್ಲಿ ನಿಖರತೆಯನ್ನು ಹೊಂದಿದ್ದು ಅಡುಗೆ ಮಾಡಿದರೂ ಒಂದು ಬಾರಿ ಮಾಡಿದಂತೆ ಮತ್ತೊಮ್ಮೆ ಮಾಡಲು ಸಾಧ್ಯವಿರುವುದಿಲ್ಲ ರುಚಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿಯೇ ಬಿಡುತ್ತದೆ. ಬೇರೊಬ್ಬರು ಅವರಂತೆ ಮಾಡುತ್ತಾರೆ ಎಂಬುದು ಅಸಾಧ್ಯ.
ತಮ್ಮ ಪತ್ನಿ ತಾವು ಬಯಸಿದಂತೆ ಇರಬೇಕು ಎಂದು ಅಪೇಕ್ಷಿಸುವ ಪತಿರಾಯರು ತಾವು ಹೇಗಿರಬೇಕು ಎಂಬುದಕ್ಕೆ ಕೆಲ ಸಲಹೆಗಳು ಇಂತಿವೆ.
*ತನ್ನ ಪತ್ನಿ ತನ್ನನ್ನು ಅತಿಯಾಗಿ ಪ್ರೀತಿಸಲಿ ಎಂದು ಬಯಸುವ ವ್ಯಕ್ತಿ ತಾನು ಕೂಡ ಅಷ್ಟೇ ಪ್ರೀತಿಯನ್ನು ಆಕೆಗೆ ಕೊಡಬೇಕು. ಆಕೆಯನ್ನು ಕೆಟ್ಟದಾಗಿ ಅಲ್ಲಗಳೆದು ನಂತರ ಆಕೆಯ ಪ್ರೀತಿಯನ್ನು, ದೈಹಿಕ ಸಾಂಗತ್ಯವನ್ನು ಬಯಸಿದರೆ ನೊಂದ ಹೆಣ್ಣು ಹೇಗೆ ಕೊಡಲು ಸಾಧ್ಯ?
ನಿಮ್ಮ ಪತ್ನಿ ನಿಮ್ಮನ್ನು ಗೌರವಿಸಲಿ ಎಂದು ಬಯಸಿದರೆ ಆಕೆ ಗೌರವಿಸುವಂತಹ ವ್ಯಕ್ತಿತ್ವವನ್ನು ನೀವು ಹೊಂದಿರಬೇಕು. ಪದೇಪದೇ ಹಂಗಿಸಿ, ಮಕ್ಕಳ ಮುಂದೆ ಸ್ನೇಹಿತರ ಮುಂದೆ ತಮಾಷೆ ಮಾಡಿದರೆ ಆಕೆ ನಿಮ್ಮನ್ನು ಗೌರವಿಸಲು ಸಾಧ್ಯವೇ?
* ಮನೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು, ಒಳ್ಳೆಯ ಜೀವನವನ್ನು ಹೆಂಡತಿ ಮಕ್ಕಳಿಗೆ ಕೊಡ ಮಾಡುವುದು ಮಾತ್ರ ಗಂಡಸಿನ ಕೆಲಸವಲ್ಲ. ತನ್ನ ಪತ್ನಿಯ ಬೇಕು ಬೇಡಗಳನ್ನು ಗಮನಿಸುವ, ಆಕೆಯ ಎಲ್ಲಾ ಸಣ್ಣ ಪುಟ್ಟ ದೋಷಗಳ ಸಹಿತ ಆಕೆಯನ್ನು ಪ್ರೀತಿಸುವ ಮನಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿಯಾದರೂ ಹೊಂದಬೇಕು.
*ನಿಮ್ಮ ಪತ್ನಿಗೆ ನೀವು ಸುರಕ್ಷಿತ ಭಾವವನ್ನು ಕಲ್ಪಿಸಿ ಕೊಟ್ಟಾಗ ಮಾತ್ರ ಆಕೆ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಬಲ್ಲಳು. ದೈಹಿಕವಾಗಿ ಮಾನಸಿಕವಾಗಿ ಆಕೆಯನ್ನು ಹಿಂಸಿಸಿ ಮತ್ತೆ ಆಕೆಯನ್ನು ತಬ್ಬಲು ಹೋದಾಗ ಆಕೆ ಗುಮ್ಮನನ್ನು ಕಂಡಂತೆ ಭಯಪಟ್ಟರೆ ಅದು ಆಕೆಯ ತಪ್ಪಲ್ಲ…. ಆಕೆಯಲ್ಲಿ ನೀವು ಮೂಡಿಸುವ ಭಯದ ಪರಿಣಾಮ.
* ನಿಮ್ಮ ಪತ್ನಿ ಪದೇ ಪದೇ ನಿಮ್ಮ ಮೇಲೆ ಆಪಾದನೆ ಹೊರಿಸುತ್ತಿದ್ದರೆ ನೀವು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಪುನರಾವರ್ತಿಸುತ್ತಿದ್ದೀರಿ ಎಂದರ್ಥ… ನೀವು ಬದಲಾಗದ ಹೊರತು ಆಕೆ ಬದಲಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನೀವು ಅರಿತಷ್ಟು ಒಳ್ಳೆಯದು.
*ಕೇವಲ ಆರ್ಥಿಕ ಜವಾಬ್ದಾರಿ ನಿಮ್ಮದಾದರೆ ಸಾಲದು, ಗೃಹ ಕೃತ್ಯವನ್ನು ನೋಡಿಕೊಳ್ಳುವ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ಸಣ್ಣ ಪುಟ್ಟ ಖರ್ಚುಗಳು ಇರುತ್ತವೆ. ನಿಮ್ಮ ಅತಿಯಾದ ಹಂಗಿಸುವಿಕೆಯಿಂದಆಕೆ ತನ್ನ ಮನೆ ಖರ್ಚಿನ ಹಣದಲ್ಲಿ ಉಳಿಸಿ ಕೊಂಡು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾಳೆ ಇಲ್ಲವೇ ನಿರಾಶಳಾಗಿ ಬದುಕಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ನಿರ್ಲಿಪ್ತಳಾಗುತ್ತಾಳೆ. ಆರ್ಥಿಕ ಪಾರದರ್ಶಕತೆಯನ್ನು ಆಕೆ ಹೊಂದಿರಬೇಕು ಎಂದು ನೀವು ಬಯಸುವುದಾದರೆ ನಿಮ್ಮ ಹಣಕಾಸಿನ ವ್ಯವಹಾರದ ಕುರಿತು ಆಕೆಯೊಂದಿಗೆ ಆಗಾಗ ಮಾತನಾಡಿ. ಎಷ್ಟೋ ಬಾರಿ ಹೆಣ್ಣು ಮಕ್ಕಳು ಮುಂದಿನ ಭದ್ರ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಎತ್ತಿಟ್ಟುಕೊಳ್ಳುವುದು ಉಂಟು… ಅದು ನಿಮ್ಮ ಮತ್ತು ಮಕ್ಕಳ ಒಳಿತಿಗಾಗಿಯೇ ಅಲ್ಲವೇ?
* ನಿಮ್ಮ ಪತ್ನಿ ನಿಮ್ಮ ಕುರಿತು ಗರ್ವದಿಂದ ಹೇಳಿಕೊಳ್ಳಲಿ ಎಂದು ಬಯಸುವ ನೀವು ಎಂದಾದರೂ ಆಕೆಯ ಇಷ್ಟಾನಿಷ್ಠಗಳನ್ನು, ಆಕೆಯ ಮನಸ್ಸಿನ ನೋವು ದುಗುಡಗಳನ್ನು ಆಕೆಯ ಅವಶ್ಯಕತೆಗಳನ್ನು ಕುರಿತು ಯೋಚಿಸಿದ್ದೀರಾ? ಇದುವರೆಗೂ ಇಲ್ಲವಾದರೆ ಇನ್ನು ಮುಂದೆ ಆ ಕುರಿತು ಸ್ವಲ್ಪ ಯೋಚಿಸಿ. ನೀವು ಹೇಳದೆಯೇ ನಿಮ್ಮೆಲ್ಲ ಬೇಕು ಬೇಡಗಳನ್ನು ಅರಿತು ಪೂರೈಸುವ ಆಕೆ ತಾಯಿಯ ನಂತರದ ದೇವತೆ ಅಲ್ಲವೇ? ಆಕೆ ಹೇಳಿಯೂ ಕೂಡ ಅರಿಯದೆ ಹೋದರೆ ತಪ್ಪು ಯಾರದು?. ನಿಮ್ಮ ಅಸಡ್ಡೆ, ಅವಹೇಳನಗಳು ಆಕೆಯನ್ನು ಆಮೆ ತನ್ನ ಚಿಪ್ಪಿನೊಳಗೆ ಹುದುಗುವಂತೆ
ಮೌನದ ಚಿಪ್ಪಿನಲ್ಲಿ ಹುದುಗಿಸಿಬಿಡುತ್ತಾಳೆ. ಎಚ್ಚರಗೊಳ್ಳಿ.
*ನಿಮ್ಮ ಪತ್ನಿ ಸದಾ ಸಿಡುಕುತ್ತಾಳೆ, ಮುಂಗೋಪಿ, ಯಾವುದರಲ್ಲೂ ಆಸಕ್ತಿ ತೋರುವುದಿಲ್ಲ ಎಂದು ನಿಮಗೆ ಅನಿಸಿದರೆ ಅದಕ್ಕೆ ಕಾರಣ ಆಕೆಯನ್ನು ನೀವು ಅವಗಣಿಸುವುದು. ಆಕೆಯ ಜೊತೆ ಹೆಚ್ಚು ಸಮಯ ಕಳೆಯಿರಿ ಮತ್ತು ಆಕೆ ನಿಮ್ಮ ಪಾಲಿನ ವಿಶೇಷ ವ್ಯಕ್ತಿ ಎಂಬಂತೆ ಬಿಂಬಿಸಿ. ನಿಮ್ಮ ಪ್ರೀತಿಯ ನೋಟದ ಪರಿಣಾಮ ಆಕೆಯ ಮುಖದಲ್ಲಿ ಹೊಂಗಿರಣವನ್ನು ಮೂಡಿಸುತ್ತದೆ.
* ಸಾಮಾನ್ಯವಾಗಿ ಎಲ್ಲ ತಾಯಂದಿರು ಮಕ್ಕಳನ್ನು ಶಿಸ್ತಿನಿಂದ ಬೆಳೆಸಲು ಇಚ್ಚಿಸುತ್ತಾರೆ ಮತ್ತು ಹಾಗೆ ಪಾಲಿಸಲು ಮಕ್ಕಳನ್ನು ಒತ್ತಾಯಿಸುತ್ತಾರೆ ಕೂಡ ಇದು ಮಕ್ಕಳ ಭವ್ಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು. ಆದರೆ ಮಕ್ಕಳ ಮೇಲಿನ ಮಮಕಾರದಿಂದ ನೀವು ಪತ್ನಿಯನ್ನು ಮಕ್ಕಳ ಮುಂದೆಯೇ ಈ ಗಳಾದರೆ ಮಕ್ಕಳು ನಿಮ್ಮ ಪತ್ನಿಯ ಮಾತನ್ನು ಕೇಳುವುದಿಲ್ಲ. ಮಕ್ಕಳ ವಿಷಯದಲ್ಲಿ ನಿಮ್ಮಿಬ್ಬರ ಅಭಿಪ್ರಾಯಗಳು ಏಕತ್ರವಾಗಿರಬೇಕು… ಭಿನ್ನಾಭಿಪ್ರಾಯಗಳನ್ನು ಮಕ್ಕಳ ಅನುಪಸ್ಥಿತಿಯಲ್ಲಿ ಚರ್ಚಿಸಬೇಕು. ಮಕ್ಕಳ ಮುಂದೆ ಯಾವುದೇ ರೀತಿಯ ಜಗಳ ಕಿರಿಕಿರಿಗಳು ಇರಬಾರದು ಇದು ಮಕ್ಕಳ ಮನಸ್ಥಿತಿಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ.
ನಿಮ್ಮ ಪತ್ನಿ ಮಕ್ಕಳನ್ನು ಶಿಸ್ತಿಗೊಳಪಡಿಸುವಾಗ ಅಡ್ಡಿಪಡಿಸುವ ನೀವು ಸಂಪೂರ್ಣವಾಗಿ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡರೆ ಆಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಬದಲಾಗಿ ಆಕೆಗೆ ಪದೇ ಪದೇ ಅಡ್ಡಿಪಡಿಸಿ ನೀವು ಕೂಡ ಮಕ್ಕಳ ಕಾಳಜಿ ವಹಿಸದಿದ್ದರೆ ಮಕ್ಕಳು ಹಾಳಾಗಿ ಹೋಗುತ್ತಾರೆ. ಇದು ಹೆಂಡತಿಯ ಬೇಸರಕ್ಕೆ ಕಾರಣವಾಗುತ್ತದೆ. ಇದು ನಿಮ್ಮಿಬ್ಬರ ನಡುವಿನ ಮನಸ್ತಾಪಕ್ಕೂ ಕಾರಣ.
ನಿಮ್ಮ ಸುತ್ತ ಬಹಳಷ್ಟು ಸ್ನೇಹಿತರನ್ನು ಸದಾ ಹೊಂದಿದ್ದರೆ ನಿಮಗೆ ಕುಟುಂಬದೆಡೆ ಲಕ್ಷ್ಯ ಕೊಡಲು ಸಾಧ್ಯವಾಗುವುದಿಲ್ಲ. ಇಲ್ಲವೇ ನಿಮ್ಮ ಪತ್ನಿ, ಮಕ್ಕಳನ್ನು ನಿಮ್ಮ ಸ್ನೇಹಿತರ ಮನೆಯಲ್ಲಿ ಅವರ ಪತ್ನಿಯೊಂದಿಗೆ ಬಿಟ್ಟು ಸ್ನೇಹಿತರೊಂದಿಗೆ ನೀವು ಪಾರ್ಟಿ ಮಾಡಲು ಹೊರಟು ಹೋಗುತ್ತೀರಿ. ಇದು ಕೂಡ ಹೆಣ್ಣು ಮಕ್ಕಳಿಗೆ ಬೇಸರದ ಸಂಗತಿ. ಇದು ನಿಮಗೆ ಸರಿ ಎನಿಸುತ್ತದೆಯೇ? ಯಾವಾಗಲಾದರೂ ಒಮ್ಮೆ ಹೀಗೆ ಆದರೆ ಹೆಣ್ಣು ಮಕ್ಕಳು ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ ಆದರೆ ಪ್ರತಿ ಬಾರಿಯೂ ಅದೇ ಪುನರಾವರ್ತನೆಯಾದಾಗ ಹೆಣ್ಣು ಮಕ್ಕಳು ನಿಮ್ಮೊಂದಿಗೆ ಹೊರಬರಲು ನಿರಾಕರಿಸುತ್ತಾರೆ.
ವರ್ಷದ 365 ದಿನವೂ ಗಂಡ ಮನೆ ಮಕ್ಕಳನ್ನು ನೋಡಿಕೊಳ್ಳುವ ಪತ್ನಿಗೆ ನೀವು ನಿಮ್ಮ ದಿನದ ಕೆಲ ನಿಮಿಷಗಳನ್ನಾದರೂ ಆಗಾಗ ನೀಡದೆ ಹೋದರೆ ಆಕೆಗೆ ಬೇಸರವಾಗುವುದಿಲ್ಲವೇ?
*ಆಕೆ ನಿಮ್ಮ ಎಲ್ಲಾ ಮಾತುಗಳನ್ನು ಕೇಳಿಕೊಂಡು ಕವಲೆತ್ತಿನಂತೆ ಬದುಕಲಿ ಎಂದು ಆಶಿಸಬೇಡಿ. ನೀವು ಆಕೆಯ ಕೊರಳಿಗೆ ಮಾಂಗಲ್ಯವನ್ನು ಕಟ್ಟಿದ್ದೀರಿ ದನಕ್ಕೆ ಕಟ್ಟುವ ಹಗ್ಗವನ್ನಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ. ಆಕೆಗೂ ಬದುಕಿನ ಕುರಿತು ಆಸೆ ಆಕಾಂಕ್ಷೆಗಳು ಇರುತ್ತವೆ.
* ನಿಮ್ಮ ಕಚೇರಿಯ ಕೆಲಸಗಳಲ್ಲಿ ನಿಮ್ಮ ಪತ್ನಿ ನಿಮಗೆ ಸಹಾಯ ಮಾಡಲಿ ಎಂದು ನೀವು ಆಶಿಸುವುದಾದರೆ ಆಕೆಗೆ ನಿಮ್ಮ ಮಹತ್ವಕಾಂಕ್ಷೆ ಮತ್ತು ದೂರ ದೃಷ್ಟಿಯ ಕುರಿತು ವಿವರವಾಗಿ ತಿಳಿಹೇಳಿ ಆಕೆಯ ಸಹಾಯವನ್ನು ಕೋರಬಹುದು… ಬದಲಾಗಿ ಆಕೆಯನ್ನು ನಿನಗೇನು ಗೊತ್ತು ಎಂಬಂತೆ ಹಂಗಿಸಬೇಡಿ.
*ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ… ಆಕೆಯಂತೆ ಅಡುಗೆ ಮಾಡಲು ಮನೆ ಕೆಲಸ ಮಾಡಲು ಮಕ್ಕಳ ಜವಾಬ್ದಾರಿಗಳನ್ನು ಹೊರಲು ಮತ್ತಿತರ ಹೆಣ್ಣು ಮಕ್ಕಳು ಮಾಡಿಕೊಂಡು ಹೋಗುವ ಕೆಲಸ ಕಾರ್ಯಗಳು ನಿಮಗೆ ಬರುತ್ತದೆಯೇ?
ನಿಮಗೆ ನೀಡಲ್ಪಟ್ಟ ತರಬೇತಿಯು ನಿಮಗೆ ಉದ್ಯೋಗ ದೊರಕಿಸಿಕೊಟ್ಟಿದ್ದು ಅದು ನಿಮ್ಮ ಆರ್ಥಿಕ ಉನ್ನತಿಗೆ ಕಾರಣವಾದರೆ, ಆಕೆ ಅದಕ್ಕೆ ಸರಿಸಮನಾಗಿ ಮನೆಯ ಸಮಸ್ತವನ್ನು ನೀಗಿಸಿಕೊಂಡು ದುಡ್ಡು ಕೊಟ್ಟರೂ
ದೊರೆಯದ ಸೇವೆಯನ್ನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒದಗಿಸುತ್ತಾಳೆ.
ಹೊತ್ತು ಹೊತ್ತಿಗೆ ಅನ್ನ ಆಹಾರಗಳನ್ನು ಒದಗಿಸುವ ಆಕೆ, ನೀವು ಓರಣವಾಗಿರಲು ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಿ/ಸಿ, ಮಕ್ಕಳ ಮತ್ತು ನಿಮ್ಮ ಕಾಳಜಿಯನ್ನು, ಅರೋಗ್ಯದ ಕಾಳಜಿಯನ್ನು ಮಾಡುತ್ತಾ ಗೃಹಿಣಿಯ ಕರ್ತವ್ಯವನ್ನು ನಿಭಾಯಿಸುತ್ತಿದ್ದಾಳೆ. ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲವೆಂದೆ ಹೆಣ್ಣು ಮಕ್ಕಳನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ…. 24 / 7, ವರ್ಷದ 365 ದಿನ, ಒಂದೇ ಒಂದು ದಿನ ರಜೆ ತೆಗೆದುಕೊಳ್ಳಲು ಕೂಡ ಸಾಧ್ಯವಿಲ್ಲದೆ, ಹಗಲು ರಾತ್ರಿ ಆಕೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾಳೆ…. ಅದು ಆಕೆಯ ಅಂತಃ ಸತ್ವ.
ಅದನ್ನು ಪೋಷಿಸಿ, ಬೆಳೆಸಿ ಆಕೆಯ ಕುರಿತು ಕಾಳಜಿ ವಹಿಸಿ, ಆಕೆಯನ್ನು ಗೌರವಿಸಿ, ಪ್ರೀತಿಸಿ …. ಆಗ ನೋಡಿ ನಿಮ್ಮ ಪತ್ನಿ ನಿಮ್ಮನ್ನು ತನ್ನ ಪ್ರೀತಿಯ ಅಲೆಯಲ್ಲಿ ತೇಲಿಸುತ್ತಾಳೆ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.