Oplus_131072

 

 

ಒಂದು… ಎರಡು… ಮೂರು.. ! (ಕತೆ)

 

ಮಚ್ಚೇಂದ್ರ ಪಿ ಅಣಕಲ್.

 

” ಹಲೋ ! ಮಾಧವ, ನಾ ನಿನ್ ತಂದೆ ಮಾತಾಡ್ತಿರೊ ಕಣೋ ! ಯಶೋಧ,ಯಾಕೋ ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾಳೆ.ನೀನು ಸ್ಟುಡಿಯೊ ಮುಚ್ಕೊಂಡು ಬೇಗ ಬಂದ ಬಿಡೋ ! ನಮಗ್ಯಾಕೋ ಭಯವಾಗ್ತಿದೆ ” ಅಂತ ಆ ಕಡೆಯಿಂದ ಆನಂದರಾಯರು ಮೊಬೈಲ್ ಕರೆ ಮಾಡಿದಾಗ ಮಾಧವನಿಗೆ ಸಿಡಿಲು ಬಡಿದಂತಾಯ್ತು. ಯಶೋಧಳಿಗೆ ಏನಾಯಿತು ? ಮುಂಜಾನೆ ಸರಿಯಾಗಿಯೇ ಇದ್ದಾಳಲ್ಲ ? ” ಅಂತ ಅವಸರದಲ್ಲಿ ಸ್ಟುಡಿಯೋ ಮುಚ್ಚಿದ.
ಅಮವಾಸ್ಯೆಯ ದಿನ ವಿದ್ಯುತ್ ದೀಪವಿಲ್ಲದೆ ಮನೆಯಲ್ಲಿ ಚಿಮಣಿಯ ಮಬ್ಬು ಬೆಳಕಿನಲ್ಲಿ ಅಪ್ಪ ಅಮ್ಮ ಮತ್ತು ನೆರೆಮನೆಯ ಜೋಗವ್ವ ಯಶೋಧಳ ಸುತ್ತುವರೆದು ಕುಳಿತ್ತಿದ್ದರು.ಮಾಧವನ ಬರುವಿಕೆಯನ್ನೆ ನೀರಿಕ್ಷಿಸುತ್ತಿದ್ದರು.
ಆನಂದರಾಯ ದಂಪತಿಗಳು ದಿಕ್ಕು ತೊಚದೆ ಭಯ
ಭೀತರಾಗಿದರು.ಮಗನ ಆಗಮನದಿಂದ ಅವರಿಗೆ ಭಯ ಸ್ವಲ್ಪ ಕಡಿಮೆಯಾಗಿತ್ತು. ಮಾಧವ ಬಂದವನೆ ಮೊದ್ಲು ಯಶೋಧಳ ಮುಖವನ್ನೆ ನೋಡಿದ. ಅವಳ ಆ ಅವತಾರ ನೋಡಿ ಎದೆ ದಸ್ಸಕ್ಕೆನ್ನದೆ ಇರಲಾಗಲಿಲ್ಲ. ಆಕೆ ಹುಚ್ಚಿಯಂತೆ ಕೂದಲು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಕಣ್ಣು ಗುಡ್ಡೆ ಕಿಸಿದು ರೆಪ್ಪೆ ಬಡಿಯದೆ ಸುಮ್ಮ ಸುಮ್ನೆ ನಗುತ್ತಿದ್ದಾಳೆ.ದೇವ್ವ ಮೈ ಮೇಲೆ ಬಂದವರಂತೆ ಪ್ರಜ್ಞೆಯಿಲ್ಲದೆ ಕೈಗಳು ತಂತಾನೆ ಅದುಮಿಕೊಳ್ಳುತ್ತಾ ತುಟಿಗಳೊಂದು ಮಾಡದೆ ಶಬ್ದ ಉಚ್ಚರಿಸದೆ ಬಾಯಿ ಚಪ್ಪರಿಸಿ ಮಂತ್ರ ಪಠಿಸುವಂತೆ ವರ್ತಿಸುತ್ತಿದ್ದಾಳೆ.ಏನಾದ್ರೂ ಅಂದ್ರೆ ಮತ್ತೆ ವಿಚಿತ್ರ ನಗು.
ಸುಮ್ಮನಿದ್ದರೆ ಮಂತ್ರ ಪಠಿಸುವಂತೆ ನಟಿಸುವುದು ಅದಾದ ಮೇಲೆ ನೆಲ ಕೆದರುವುದು.ದುರುಗುಟ್ಟಿ  ನೋಡುವುದು. ಅಳುವುದು ಜೋರಾಗಿ ಚಿರುವುದು.ಮತ್ತೆ ಅದೇ ನಗು ನಗುವುದು.ಆ ನಗುವಿನ ನಡುನಡುವೆ ಅಳುವುದು.
ಹೀಗೆ ನಾನಾ ತರಹದ ವಿಚಿತ್ರ ವರ್ತನೆಗಳು. ನೋಡಿದವರಾರೆ ಆಗಲಿ ಧೈರ್ಯ ಕಳೆದುಕೊಳ್ಳುವುದು ಸಹಜವೇ . ಆತನಿಗೆ ತನ್ನ ಹೆಂಡತಿಯ ವಿಚಿತ್ರ ವರ್ತನೆ ನೋಡಿ ಇದು ಮಾಟ ಮಂತ್ರದ ಪ್ರಯೋಗವೆಂದು ತಿಳಿಯದೆ ಇರಲಿಲ್ಲ.

” ಯಶೂ ! ” ಅಂತ ಮಾಧವ ಅವಳ ಗದ್ದ ಹಿಡಿದು ಕರೆದ.ಆಕೆ ಕಣ್ಣು ತೆರೆಯದೆ ಸುಮ್ಮನೆ ಅಳಲು ಸುರು ಮಾಡಿದಳು.ಅಳುವಾಗ ಅವಳ ದುಂಡು ಮುಖ ವಿಕಾರವಾಗಿ ಕಾಣತೊಡಗಿತ್ತು.

” ಅಳಬೇಡ ಯಶೂ ! ಅಳಬೇಡ.ಇಲ್ನೋಡು ನಾನು ಬಂದಿದ್ದಿನಿ.ಮಾತಾಡು ಯಶೂ ! ಮಾತಾಡು.” ಎಂದಾಗ
” ಹ್ಹಿ..ಹ್ಹಿ..ಹ್ಹಿ..” ಅಂತ ಮತ್ತೆ ವಿಚಿತ್ರವಾಗಿ ನಗತೊಡಗಿದಳು.
ಆಕೆ ನಗುವುದು ನೋಡಿದರೆ ಸಿನಿಮಾದಲ್ಲಿ ದೆವ್ವಗಳು ನಕ್ಕಂತೆ  ಭಾಸವಾಗುತ್ತಿತ್ತು.ಇದನ್ನೆಲ್ಲ ನೋಡಿದ ಮಾಧವನಿಗೆ
ಭಯವಾಗುತ್ತಿದ್ದರು ಮೇಲ್ನೋಟಕ್ಕೆ ಮಾತ್ರ ಧೈರ್ಯವಂತನಂತೆ ಇದ್ದ. ಅವನ ತಂದೆ ತಾಯಿಯು ಕೂಡ ಸೊಸೆಯ ಮೈಯಲ್ಲಿನ ಪಿಶಾಚಿ ಕಂಡು ಏನೂ ತೊಚದೆ ಭಯಭೀತರಾಗಿ ಮುಖ ಸಪ್ಪಗೆ ಮಾಡಿಕೊಂಡು ಚಿಂತಿತರಾಗಿದರು.

” ಅಮ್ಮ, ಯಾವಾಗ್ಲಿಂದ ಹೀಗಾಡ್ತಿದ್ದಾಳೆ ” ? ಅಂತ ಮಾಧವ ತಾಯಿಯನ್ನು ಕೇಳಿದ.

” ಸಾಯಂಕಾಲ ನಾಲ್ಕರಿಂದ ಹೀಗಾಡ್ತಿದ್ದಾಳೆ.ಇದೇನಾಯ್ತು ನಂಗೊಂದು ತೋಚ್ತಿಲ್ಲ. ನಮ್ಮ ಕುಟುಂಬದಾಗೆ ಎಂದೂ ಇಂತಹದಾಗಿಲ್ಲ.ಇದೇನಾಯ್ತು ಶಿವ್ನೇ ! ” ಅಂತ ಅನುರಾಧಮನವರು ಹಣೆಗೆ ಕೈ ಹಚ್ಚಿಕೊಂಡು ಕಣ್ಣೀರು ಹಾಕಿದರು. ಆನಂದರಾಯರು ಕೂಡ ಅಷ್ಟೇ ನೋವು ತುಂಬಿಕೊಂಡು ಖಿನ್ನರಾಗಿ ಬಿಟ್ಟಿದರು.ಮಾಧವನು ಕೂಡ ಮನೆಯ ಪರಿಸ್ಥಿತಿ ನೋಡಿ ಒಮ್ಮೆಲೆ ದುಃಖ ತಂದುಕೊಂಡು ಕಣ್ಣೀರು ಸುರಿಸಿದ.

” ಯಾಕಳ್ತಿ ತಮ್ಮ ! ಇದೇಲ್ಲ ಏನಾಗಲ್ಲ ಸುಮ್ಕಿರು.ಧೈರ್ಯ ತಂದುಕೋ ! ತುಳಜಾಪೂರ ಅಂಬಾ ಭವಾನಿ ಮ್ಯಾಲ್ ಭಕ್ತಿ ಇಡು. ಎಲ್ಲ ಸರಿ ಹೋಗ್ತದ .ನಾನಿದ್ದಿನಿ ಹೆದರಬೇಡ.”ಅಂತ ಅಲ್ಲೆ ಕುಂತ್ತಿದ್ದ ನೆರೆಮನೆಯ ಜೋಗವ್ವ , ” ಉದೊ ! ಉದೊ ! ” ಅಂತ ಬೇವಿನ ತಪ್ಪಲಿನಿಂದ ಯಶೋಧಳ ಮೈ ಮೇಲೆ ರಪರಪ ಮೂರುಸಾರೆ ಬಡೆದು ದೇವಿ ಭಂಡಾರ ಹಣೆಗೆ ಹಚ್ಚಿದಳು.ಆಚರ್ಯವೆಂದರೆ ಯಶೋಧ ಮೊದಲಿನಂತೆ ಪ್ರಜ್ಞೆಯಿಂದ ತನ್ನ ತಲೆಗೂದಲು ಸರಿಪಡಿಸಿಕೊಂಡು ಮಾನಸಿಕವಾಗಿ ಜಾಗೃತಳಾಗಿ ಎದ್ದು ಕುಳಿತಳು.ಅವಳ ಮುಖದಲ್ಲಿ ಸಂತಸದ ಖಳೆ ಮೂಡಿತ್ತು.
ಜೋಗವ್ಬನ ಮಾತಿನಂತೆ ತಾಯಿ ತುಳಜಾಪೂರ ಅಂಬಾಭವಾನಿ ಮೇಲೆ ಎಲ್ಲರ ಮನದಲ್ಲಿ ಭಕ್ತಿ ರಸವುಕ್ಕಿತ್ತು.
ಅನುರಾಧಮ್ಮನವರಂತು ತುಂಬ ಖುಷಿಯಾಗಿ  ” ಜೋಗವ್ವ, ಈ ಪಿಶಾಚಿ ಮತ್ತೆ ಬರದಾಂಗ ಮಾಡವ್ವ.ನಮಗೆ ಇವಳ ಅವತಾರ ನೋಡಿದರೆ ಭಯವಾಗ್ತದೆ ” ಅಂದಳು.

” ಏನೂ ಆಗಲ್ಲ. ಸ್ವಲ್ಪ ಧೈರ್ಯ ತಂದು ಕೊಳ್ರೀ .ನಾ ಇದೊಂದೇ ಪಿಶಾಚಿಯಲ್ಲ.ಇಂತಹ ಅದೇಷ್ಟೋ ಪಿಶಾಚಿಗಳು ನೋಡಿದ್ದಿನಿ.ಅಂಬಾಭವಾನಿ ಭಂಡಾರ ತಂದ್ರೆ ಅವ್ಯಾವು ನಿಲ್ಲುವುದಿಲ್ಲ. ನೀವು ಯಾರು ಹೆದರಬೇಕಾಗಿಲ್ಲ.
ಹೊತ್ತಾಗಿದೆ ಎಲ್ಲರೂ ಊಟಮಾಡಿ ಮಲಗಿ.ನಾನು ಬೇಕಾದ್ರೆ ಮನೆಗ್ಹೋಗಿ ಬರುವಾಗ ಗಾಣಗಾಪೂರದ ಭಸ್ಮ ಮನೆಯಲ್ಲಿದೆ ತಂದು ಕೊಡ್ತಿನಿ.‌ ಅದು ನಿಮ್ಮನೆಯಲ್ಲಿ ಇದ್ರೆ ಆ ಪಿಶಾಚಿ ಮತ್ತೆ ಈಕೆ ಮೈಯಾಗ ಬರೊಲ್ಲ ” ಅಂತ ಹೇಳಿ ಜೋಗವ್ವ ಮನೆಗೆ ಹೋದಳು ಮಾಧವನಿಗೆ ಎಲ್ಲ ತಿಳಿದರು ಏನೂ ಅರ್ಥವಾಗದವನಂತೆ ಚಿಂತಿತನಾಗಿದ್ದ.
ಆತ ಚಿಂತಿತನಾಗಲು ಒಂದು ಪ್ರಬಲವಾದ ಕಾರಣವು ಇತ್ತು. ಅದೇನಂದ್ರೆ ಮಾಧವ- ಯಶೋಧ ಇಬ್ರು ಒಬ್ಬರನ್ನೊಬ್ಬರು ಪ್ತೀತಿಸಿ ವಿವಾಹವಾಗಿದರು.ಮಾಧವನ ತಂದೆ ತಾಯಿ ಮೊದ ಮೊದಲು ವಿರೋಧಿಸಿದರು . ಆದರೂ ಮಗನ ಹಟಕ್ಕೆ ಮಣಿದು ಸುಮ್ಮನಾಗಿದರು. ಆದರೆ ಯಶೋಧಳದೆ ಬೇರೆ ಕತೆ. ಅದೇನೆಂದರೆ ಹೆತ್ತ ತಾಯಿಯನ್ನು ಕಳೆದುಕೊಂಡ ತಬ್ಬಲಿ‌ ಅವಳು. ಮಲತಾಯಿಯ ಮನೆಯಲ್ಲಿ ನೂರಾರು ನೋವುಂಡು ಬೆಳೆದವಳು. ಮಲತಾಯಿ ಕೊಡುವ ಕಿರುಕುಳ ತಾಳದೆ ಆಕೆ ಸಾಕಷ್ಟು ಸಲ ತನ್ನ ತಾಯಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತದ್ದು ಇದೆ. ತನ್ನ ತಾಯಿ ಇದ್ರೆ ನಮಗೆ ಈ ಸ್ಥಿತಿ ಬರುತ್ತಿತ್ತೆ ? ಎಂದು ಒಳಗೊಳಗಿನ ಕೊರಗು ಆಕೆಗೆ ಕಾಡತೊಡಗಿತ್ತು.
ಒಮ್ಮೆ ಆಕೆಗೆ ಮಾಧವನ ಆಕಸ್ಮಿಕ ಪರಿಚಯವಾಗಿ ಆತನೊಂದಿಗೆ ಸಲಿಗೆಯಿಂದ ಮಾತನಾಡುತ್ತಿದ್ದಾಗ ಆತನೆ ಪ್ರೀತಿಯ ಪ್ರಪೊಜ್ ಮಾಡಿದ ಆ ಪ್ರೀತಿಗೆ ಮನಸೋತು  ಅವನೊಂದಿಗೆ ಉಟ್ಟ ಬಟ್ಟೆಯ ಮೇಲೆ ಹುಟ್ಟಿದ ಮನೆ ಬಿಟ್ಟು ಬಂದಿದಳು.ಆಗ ಆಕೆಗೆ ‘ ಓಡಿ ಹೋಗಿದ್ದಾಳೆ ‘ ಅನ್ನೋ ಪಟ್ಟ ಬೇರೆ ಕಟ್ಟಿ ಆಕೆಯ ಮಲತಾಯಿ ಮನೆಯಲ್ಲಿ ತನ್ನ ಗಂಡನಿಗೆ ರಂಪಾ ಮಾಡಿದಳು. ” ಅವಳಿಗೆ ಈ ಮನೆ ಹೊಸ್ತಿಲು ಮತ್ತೆ ತುಳಿಯುವ ಹಾಂಗ ಮಾಡಿದ್ರಿ ಅಂದ್ರೆ ನಾನೆ ಈ ಮನೆ ಬಿಟ್ಟು ಹೋಗ್ತೇನೆ.ಅವಳ ಜೋತೆ ಯಾರು ಮಾತಾಡಕೂಡದು. ಮತ್ತೆ ಯಾವುದೆ ಕಾರಣಕ್ಕೂ ಆಕೆಗೆ ಮನೆಗೆ ಕರೆ ಬಾರದು ” ಅಂತ ಗಂಡನೊಂದಿಗೆ ಜಗಳವಾಡಿದಳು. ಅವಳ ಜಗಳದ ಉದ್ದೇಶ ಯಶೋಧ ತವರು ಮನೆ ಆಸೆಯಿಟ್ಟುಕೊಂಡು ತಿರುಗಿ ಬರಬಾರದು ಅನ್ನೊದೆ ಆಗಿತ್ತು . ಅವಳ ತಂದೆ ಶಂಕ್ರೇಪ್ಪನು ಕೂಡ  ಈ ರೀತಿ ಮನೆ ಬಿಟ್ಟು ಹೋಗಿದಕ್ಕೆ ತುಂಬ ಬೆಸತ್ತು ಹೋಗಿದರು. ಆದ್ರೂ ಅವರು ಮಗಳು ಹೇಗಿದ್ದರೂ ಅಲ್ಲಾದ್ರು ಚನ್ನಾಗಿರಲಿ ಅಂತ ಅವರು ಸಮಧಾನ ತಂದುಕೊಂಡಿದ್ದರು. ಅಂತು ಆಕೆ ಮಾಧವನೊಂದಿಗೆ ಸರಳ ವಿವಾಹವಾಗಿ ಅತ್ತೆ ಮಾವಂದಿರೊಂದಿಗೆ ಗಂಡನ ಮನೆಯಲ್ಲಿ ಸುಖ ಜೀವನ ಮಾಡುತ್ತಿದ್ದಳು.

ಅತ್ತೆ ಮಾವನವರು ಕೂಡ ತಾಯಿ ಇಲ್ಲದ ಈಕೆಗೆ ತಂದೆ ತಾಯಿಯ ಪ್ರೀತಿ ನೀಡಿದರು. ಅವರು ಯಾವಾಗಲೂ ಆಕೆಗೆ ತುಂಬ ಪ್ರೀತಿಯಿಂದ ಕಾಣುತ್ತಿದ್ದರು. ಗಂಡ ಮಾತ್ರ ಒಂದು ಚಿಕ್ಕ ಪೋಟೊ ಸ್ಟುಡಿಯೋ ಇಟ್ಟುಕೊಂಡು ಕೆಲ್ಸ ಮಾಡ್ತಿದ್ದ.ಅಂತು ಬದುಕುವುದಕ್ಕೆ ಯಾವುದೇ ಕಷ್ಟವಿಲ್ಲದೆ ಮಲತಾಯಿ ಮನೆಗಿಂತ ಈ ಮನೆ ಆಕೆಗೆ ಕನಸಿನ ಗೋಪುರವಾಗಿತ್ತು. ಗಂಡನ ಪ್ರೀತಿ ಆಕೆಗೆ ತವರು ಮನೆಯು ಮರೆಯುವಂತೆ ಮಾಡಿತ್ತು.ಈಗ ಅವಳು ಮೂರು ತಿಂಗಳು ಗರ್ಭಿಣಿ ಬೇರೆ. ಆದರೆ ಅವಳ ಮೇಲೆ ಮಾಟ ಮಂತ್ರದ ಪ್ರಯೋಗ ನಡೆದಿರುವುದರಿಂದ ನಾಳೆ ಏನಾದ್ರೂ ಪ್ರಾಣಕ್ಕೆ ಕುತ್ತು ಅಪಾಯ ಬಂದೊದಗಿದರೆ ? ಪ್ರೀತಿ ಪ್ರೇಮದ ಆಟವಾಡಿ ಕೊಲೆ ಮಾಡಿದ್ದಾನೆ ” ಅಂತ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆಯಲ್ಲ ? ಏನು ಮಾಡುವುದು ದೇವರೆ ! ನೀನೆ ಕಾಪಾಡಬೇಕು ” ಅಂತ ಮಾಧವ ಮನದಲ್ಲಿ ನೊಂದುಕೊಳ್ಳುತ್ತಿರುವಾಗ ಕಣ್ಣುಗಳಲ್ಲಿ ನೀರು ಚಿಮ್ಮಿ ಕೆನ್ನೆಯವರೆಗೆ ಇಳಿದವು.

” ರ್ರೀ ! ಯಾಕ್ರೀ ಕಣ್ಣಲ್ಲಿ ನೀರು ? ನನಗೇನಾಗಿದೆ ಅಂತ ಅಳ್ತಾ ಇದ್ರಿ ? ನೀವು ಅತ್ರೆ ನನ್ ಕಣ್ಣಲ್ಲೂ ನೀರು ಬರ್ತವೆ ” ಅಂತ ಯಶೋಧ ತನ್ನ ಕಣ್ಣಲ್ಲೂ ನೀರು ತಂದುಕೊಂಡಳು.
ರಾತ್ರಿ ಹತ್ತರ ಸಮಯ ಮಾಧವ ಮತ್ತು ಯಶೋಧ ಕೋಣೆಯೊಂದಲ್ಲಿ ಮಲಗಿದರು.‌ಅವನಿಗೆ ಅವಳದೆ ಚಿಂತೆಯಾಗಿತ್ತು.ಸುಮ್ಮನೆ ಪಿಳಿ ಪಿಳಿ ಕಣ್ಣು ಬಿಟ್ಟು ಕೊಂಡು ಮೇಲೆ ನೋಡುತ್ತಾ ಅಂಗಾತ ಮಲಗಿದ.ಯಶೋಧ ಮಾತ್ರ ಮೌನವಾಗಿ ಮಲಗಿದಳು.ಆದ್ರೆ ಒಮ್ಮೆ ಇದ್ದಕ್ಕಿದ್ದಂತೆ ‘ಟುಣುಕನೆ’ ಹಾರಿ ಭಯಭೀತಳಾಗಿ ಗಂಡನ ಕೊರಳು ಬಿಗಿದಪ್ಪಿ ಅವನ ಎದೆಗೊರಗಿ ಮರಕ್ಕೆ ಬಳ್ಳಿಯೊಂದು ಸುತ್ತುವರೆದುಕೊಂಡಂತೆ ಒತ್ತಿ ಹಿಡಿದುಕೊಂಡು ” ರ್ರೀ ! ಯಾಕೋ ನಂಗೆ ಭಯವಾಗ್ತಿದೆ . ಆ ಕಡೆ ಮುಖ ಮಾಡಿದ್ರೆ ಅವನ್ಯಾವನೋ ಬಂದು ನಿಂತಾಂಗ ಆಗ್ತಿದೆ ” ಅಂತ ಅಂಜತೊಡಗಿದಳು.ಅವಳ ಎದೆ ಹೆದರಿಕೆಯಿಂದ ‘ಡವಡವ’ ಹೊಡೆದುಕೊಳ್ಳತೊಡಗಿತ್ತು.

” ಹೆದರಬೇಡ ಯಶೂ ! ಏನೂ ಆಗಲ್ಲ ” ಅಂತ ಮಾಧವನಿಗೂ ಭಯವಾದರು ಧೈರ್ಯ ಹೇಳಿದ. ಈಗ ಆಕೆ ಒಂದು ಕೈ ಗಂಡನ ಕೊರಳ ಮೇಲೆ ಹಾಕಿ ನಿದ್ರೆ ಹೋಗಿದಳು. ಮಾಧವನು ನಿದ್ರೆಯ ಹಂತದಲ್ಲಿದ್ದ.ಆದ್ರೆ ಪೂರ್ತಿ ನಿದ್ರೆ ಹೋಗಿರಲಿಲ್ಲ. ವಿಚಿತ್ರವೆಂದರೆ ಯಶೋಧ ಹಾಕಿದ ಕೈ ಮಾಧವನಿಗೆ ಭಾರವಾಗತೊಡಗಿತ್ತು.ಗಂಟಲು ಬಿಗಿದುಕೊಂಡಿತ್ತು.ಉಸಿರಾಟಕ್ಕೆ ತೀರ ತೊಂದರೆ ಆಗಿದ್ದರಿಂದ ತನ್ನ ಮೈಯ ಶಕ್ತಿಯೆಲ್ಲ ಉಪಯೋಗಿಸಿದರೂ ಸಾಧ್ಯವಾಗಲಿಲ್ಲ. ಉಸಿರು ಗಟ್ಟಿಯಾದಂತಾಗಿ ಮಲಗಿದಲ್ಲೆ ಕೈ ಕಾಲುಗಳು ಸಾಯುವಾಗ ತಿಕ್ಕುವಂತೆ ತಿಕ್ಕತೊಡಗಿದ.ಸ್ಪಲ್ಪ ಗಂಟಲಿಗೆ ಭಾರ ಕಡಿಮೆಯಾದಂತಾದಾಗ ಉಸಿರೆಳೆದುಕೊಳ್ಳಬೇಕೆಂದು ಒಮ್ಮೆ ಎಳೆದುಕೊಳ್ಳುವಾಗ ಗಂಟಲು ಕೋಣದ ಧ್ವನಿಯಂತೆ ” ಗರ್ರ್sss..! ” ಅಂತ ಕರ್ಕಶವಾಗಿ ಶಬ್ದ  ಹೊರ ಬಂದಿದ್ದರಿಂದ ಅಪಶಕುನ ಎನ್ನುವಂತೆ ಮನೆಯಲ್ಲಿ ಭಯದ ವಾತಾವರಣ ಮೂಡಿತ್ತು. ಆಗ ಯಶೋಧ ಮತ್ತೆ ‘ಬುಸ್ಸಕನೆ ‘ ನಿದ್ರೆಯಿಂದ ಹಾರಿ ಬಿದ್ದು ಚಟ್ಟನೆ ಚಿರಿದಳು. ಈಗ ಮಾಧವನ ಗಂಟಲಿಗೆ ಮುಕ್ತಿ ದೊರೆಕಿದಂತಾಗಿ ಉಸಿರಾಡತೊಡಗಿದ.ಆತನ ಗಂಟಲಿನಿಂದ ಹೊರಟ ಆ ವಿಚಿತ್ರ ಶಬ್ದ ಕೇಳಿ ಆನಂದರಾಯ ಮತ್ತು ಅನುರಾಧಮ್ಮನವರಿಗೂ ಎಚ್ಚರವಾಗಿ ಗಾಬರಿಯಿಂದ ಮಗ ಸೊಸೆ ಮಲಗಿದ ಕೋಣೆಗೆ ಧಾವಿಸಿದರು.

” ಯಾಕೋ ಮಗಾ,ಏನಾಯಿತೋ ? ಹಿಂಗ್ಯಾಕ್ ಚಿರಿದ್ಯೊ ? ” ಅಂತ ಬಾಗಿಲಲ್ಲಿ ನಿಂತು ಕೇಳಿದರು ಆನಂದರಾಯರು.
” ಯಾಕು ಇಲ್ಲಪ್ಪ ” ಅಂತ ಮಾಧವ ಬಾಗಿಲು ಚಿಲಕ ತೆಗೆದು ನಡೆದದ್ದೆಲ್ಲ ಹೇಳಿದ.

ಯಶೋಧಳ ಮೈಯಲ್ಲಿ ದೆವ್ವ ಇದೆ ಅದಕ್ಕೆ ಹಿಗಾಗಿರಬೇಕು. ಅಂತ ತಿಳಿದ ಅನುರಾಧಮ್ಮನವರು
” ಇಬ್ಬರು ದೂರ ದೂರ ಮಲಗಿಕ್ಕೊಳ್ಳಿ ” ಅಂತ ಸಲಹೆ ಇತ್ತರು. ಮಾಧವನಿಗೆ ಇದು ನಿಜವೆನಿಸಿತ್ತು.ಆತ ಹಾಸಿಗೆ ತೆಗೆದುಕೊಂಡು ಅಲ್ಲೆ ಸ್ವಲ್ಪ ದೂರ ಅಂದ್ರೆ ಅವನೊಂದು ತೀರ ಅವಳೊಂದು ತೀರ ಮುಖ ಮಾಡಿ ಮಲಗಿದರು.ಈಗ ಯಶೋಧಳಿಗೆ ನೂರೊಂದು ನೆನಪುಗಳು ಬರತೊಡಗಿದವು.

ಆಕೆ ” ಹೇ ! ದೇವರೆ ! ಚಿಕ್ಕವಳಿದ್ದಾಗಲೆ ಹೆತ್ತ ತಾಯಿಯ ಮಡಿಲನ್ನೆ ಕಸಿದುಕೊಂಡು ಬಿಟ್ಟೆ.ಯೌವನದಲ್ಲಿ ಗಂಡನ ಮಡಿಲಿನ ಆಸರೆ ಇರಬೇಕು ಅಂತಾರೆ. ಈಗ ಇದನ್ನು ಕಸಿದುಕೊಳ್ಳುತ್ತಿದೆಯೇ ? ” ಅಂತ ಮನದಲ್ಲಿ ನೊಂದುಕೊಂಡು ಹಾಸಿಗೆಯಲ್ಲಿ ಮುಸು ಮುಸು ಅಳತೊಡಗಿದಳು.

” ಯಶೂ ! ಯಾಕ್ ಅಳ್ತಿದ್ದಿಯೇ ? ಅಂತ ಮಾಧವ ಅವಳ ಕೆನ್ನೆ ಹಿಡಿದು ಕೇಳಿದ.

” ಇನ್ನೇನು ? ನನ್ ಮೈಯಲ್ಲಿ ದೆವ್ವ ಇದೆ ಭೂತ ಇದೆ ಪಿಶಾಚಿ ಇದೆ ಅಂತ ಹೆದರಿ ದೂರ ಮಲ್ಕೊಂಡಿರಲ್ಲ ? ಇದೇನಾ ನೀವು ನನ್ನ ಪ್ರೀತಿಸಿ ಮದುವೆ ಮಾಡ್ಕೊಂಡಿದ್ದು ? ನಾನೆಲ್ಲ ಮೊದ್ಲು ಚಂದ್ಯೆ ಇದ್ದೆ ನಿಮ್ಮನ್ನು ನಂಬಕೊಂಡಿದಕ್ಕೆ ಹಿಂಗಾಗಿದ್ದು.ಯಾಕೆ ಇಷ್ಟು ಬೇಗ ನನ್ ಮ್ಯಾಲಿನ ಪ್ರೀತಿ ಹೊಂಟ್ಹೋಯಿತ್ತಾ ? ” ಅಂತ ಪ್ರಶ್ನಿಸಿದಳು.
” ಇಲ್ಲ ! ಯಶೂ ! ”
” ಮತ್ತಿನ್ನೇನು ?
” ಯಶೂ ! ನಿನ್  ಮೇಲೆ ಪ್ರೀತಿ ಇಲ್ಲದಿದ್ರೆ ಮಾತಾ ಪಿತೃರ ವಾಕ್ಯ ಧಿಕ್ಕರಿಸಿ ನಿನ್ನನ್ನೇಕೆ ನಾನು ವರಿಸುತ್ತಿದ್ದೆ ? ಇಗೋ ! ನಾನಲ್ಲಿಗೆ ಬಂದೆ ” ಅಂತ ಮರಳಿ ಯಶೋಧಳ ಹಾಸಿಗೆಯಲ್ಲಿ ಬಂದು ಮಲಗಿದ..

ಸಮಯ ರಾತ್ರಿ ಹನ್ನೆರಡರ ಗಡಿ ಮಾಡಿರಲಿಲ್ಲ. ಯಶೋಧ ಹಾಸಿಗೆಯಲ್ಲಿ ಮತ್ತೆ ವಿಚಿತ್ರವಾಗಿ ನಗತೊಡಗಿದಳು.ಅವಳ ನಗುವಿನ ಅಲೆ ಕೇಳಿ ಮನೆಯವರೆಲ್ಲ ನಿದ್ದೆಯಿಂದೆದ್ದು ಕುಳಿತರು.
” ಯಶೂ ! ” ಅಂತ ಮಾಧವ ಗದ್ದ ಹಿಡಿದು ಕರೆದಾಗ
” ಹ್ಹ..ಹ್ಹ..ಹ್ಹ..! ” ಅಂತ ದುರುಗುಟ್ಟಿ ನೋಡುತ್ತಾ ನಗತೊಡಗಿದಳು.
” ಯಶೋಧ ..! ಅಂತ ಅತ್ತೆ ಅನುರಾಧಮ್ಮಳು ಕರೆದಾಗಲೂ ಅದೇ ನಗು ಕಿಲಕಿಲವೆನ್ನುತ್ತಿತ್ತು. ಕ್ಷಣಾರ್ಧದಲ್ಲೆ ನಗು ಮಾಯವಾಗಿ ಅಳತೊಡಗಿದಳು.
” ಯವ್ವಾ ! ಹೊಟ್ಟಿ ಹೊಟ್ಟಿ ” ಅಂತ ಹೊಟ್ಟೆ ಹಿಡಿದುಕೊಂಡು ಅಳತೊಡಗಿದಳು.

ಆನಂದರಾಯರು ಸೊಸೆಯ ತ್ರಾಸು ನೋಡಲಾಗದೆ ಮತ್ತೆ ನೆರೆ ಮನೆಯ ಜೋಗವ್ವಳಿಗೆ ಕರೆದುಕೊಂಡು ಬಂದರು. ಆಕೆ ಮಹಾನ್ ತಪಸ್ವಿನಿ ಎಂಬಂತೆ ಬಾಯಲ್ಲಿ ಮಂತ್ರ ಹೇಳಲು ಸುರು ಮಾಡಿದಳು. ಯಶೋಧ ಕೂಡ ಅವಳ ಮಂತ್ರಕ್ಕೆ ತಿರುಮಂತ್ರ ಹೇಳುವಂತೆ ತುಟಿ ಬಡೆಯತೊಡಗಿದಳು. ಜೋಗವ್ವ ಐದು ಸಲ,ಹನ್ನೊಂದು ಸಲ,ಇಪ್ಪತೊಂದು ಸಲ,ಐವತೊಂದು ಕೊನೆಯಲ್ಲಿ ನೂರೆಂಟು ಸಲ ಮಂತ್ರ ಹೇಳಿದರೆ ಬೆಳಗಾಯಿತೆ ಹೊರತು ಅವಳ ಮೇಲೆ ಯಾವ ಪರಿಣಾಮವು ಬಿರಲಿಲ್ಲ.ಆಕೆ ತಂದ ಗಾಣಗಾಪೂರ ದತ್ತಾತ್ರೇಯನ ಭಸ್ಮಕ್ಕೆ ಹೆಚ್ಚಾಯಿತೆ ವಿನ: ಕಡಿಮೆಯಾಗಲಿಲ್ಲ ಕೊನೆಯಲ್ಲಿ ಅದರ ಸಮಯ ಮುಗಿದ ನಂತರ ತಾನೆ ತಾನಾಗಿಯೇ ಕಡಿಮೆಯಾಯಿತು.

ಆಗ ಜೋಗವ್ವ ” ನೋಡಿದ್ಯ ಯಕ್ಕಾ ! ಬಿಟ್ಟೇನಾ ಇದ್ಕೆ ? ನನ್ ಸತತ ಮಂತ್ರ ಪಠಣದಿಂದ ಅದ್ಕೆ‌ ಓಡಿಸ್ದೆ ” ಅಂತ ಅನುರಾಧಮ್ಮನವರ ಕಡೆಗೆ ಮುಖಮಾಡಿ ಹೇಳಿದಳು. ಅವಳ ಮಾತಿಗೆ ಮನೆಯವರೆಲ್ಲರೂ ಹೌದೆನ್ನುವಂತೆ ತಲೆ ಅಲ್ಲಾಡಿಸಿದರು. ಆದ್ರೆ ಯಶೋಧಳಿಗೆ ದೆವ್ವ ಬಡ್ಕೊಂಡಿದೆಯೋ !  ಅಥವಾ ಮಾಟ ಮಾಡಿಸಿದ್ದಾರೋ ! ಎಂಬೊದು ಯಾರಿಗೂ ತಿಳಿಯದ ವಿಷಯವಾಗಿತ್ತು. ಆಗ ಮಾಧವನೆ ಆ ಕುರಿತು,
” ಜೋಗವ್ವ , ಇದೇನು ದೆವ್ವ ಬಡ್ಕೊಂಡಿದೆಯೋ ಅಥವಾ ಮಾಟ ಮಂತ್ರದ ಪ್ರಯೋಗವೋ ? ” ಅಂತ ಕೇಳಿದ.
” ತಮ್ಮಾ ! ಇದು ‘ ಭಾನಾಮತಿ ‘ ಮಾಡಿಸಿದದಾ ಹೀಗಂತ ಯಾರಿಗೂ ಹೇಳಬೇಡ.ಹೇಳಿದ್ರೆ ಮಾಡೊರಿಗೆ ಗೊತ್ತಾಗಿ ನಾವ್ ಮಾಡಿದ್ದು ಸೆಕ್ಸೆಸ್ ಆಗಿದೆ ಅಂತ ಅವರು ವಿಕೃತ ಮನಸ್ಸಿನಿಂದ ಖುಷಿಪಟ್ಟು ಮತ್ತೆ ಹೆಚ್ಚಿಗಿ ಮಾಡ್ಲಿಕ್ ಸುರು ಮಾಡ್ತಾರೆ.ನೀನೇನು ಹೆದರಕೋ ಬೇಡ ನಾ ಎಲ್ಲ ಇದ್ಕೆ ‘ ಕಟ್ ಬಂಧ’ ಮಾಡ್ತಿನಿ.ನೀ ಇದರ ಕುದಿ ತಲ್ಯಾಂದು ತಗ್ದು ಬಿಡು.” ಅಂತ ಹೇಳಿ ಎಲ್ಲರಿಗೂ ಸಮಧಾನ ಮಾಡಿದಳು.
‘ ಭಾನಾಮತಿ ‘ ಎಂಬ ಶಬುದ ಕಿವಿಗೆ ಬಿಳುತಲೆ ಮಾಧವ ಒಡೆದು ಗೋಡೆಗೆ ಕುಸಿದು ಚಿಂತಿತನಾದ. ಆನಂದರಾಯ ಅನುರಾಧಮನವರು ಕೂಡ ಸೊಸೆಯ ತ್ರಾಸು ನೋಡಲಾರದೆ ಕಣ್ಣೀರು ಸುರಿಸಿದರು.

” ಅಳಬ್ಯಾಡ್ರೀ ! ಏನೂ ಆಗಲ್ಲ.
ನಾ ಎಲ್ಲಾ ‘ ಕಟ್ ಬಂಧ ‘ ಮಾಡ್ತಿನಿ ಅಂದಿನಲ್ಲ ? ಯಾಕ್ ಅಳ್ತ್ರೀ ! ಸುಮ್ಮನಿರಿ ” ಅಂತ ಜೋಗವ್ವ ಆನಂದರಾಯ ದಂಪತಿಗಳಿಗೆ ಸಮಧಾನದ ಮಾತನಾಡಿದಳು.
ಹೇಗೋ ರಾತ್ರಿಯೆಲ್ಲ ಕಳೆದು ಬೆಳಗಾಯಿತು.ಯಶೋಧ ಮತ್ತೆ ಮೊದಲಿನಂತೆ ಪರಿಜ್ಞಾನ ಬಂದು ಜಾಗೃತಳಾದಳು.ಆದ್ರೆ ಮತ್ತೆ ಯಾವಾಗ ಏನಾಗುವುದೋ ! ಎಂಬ ದಿಗಿಲು ಮಾತ್ರ ಹೋಗಲಿಲ್ಲ.
” ಮಾಧವ ! ” ಅಂತ ಕರೆದರು ಆನಂದರಾಯರು.
” ಏನಪ್ಪಾ ! ” ಕೇಳಿದ.
” ಮಗಾ, ಈ ವಿಷಯ ಯಶೋಧಳ ತಂದೆಗೆ ತಿಳಿದು ಎಷ್ಟಾದ್ರೂ ಹೆತ್ತ ಜೀವ ನಾಳೆ ಹೆಚ್ಚು ಕಡಿಮೆ ಆದ್ರೆ ಮಾತ ಬರ್ತಾವೆ ಬೇಗ ಪೋನ್ ಮಾಡಿ ಬರಹೇಳು ” ಅಂತ ಹೇಳಿದರು.
” ಆಯ್ತು ಅಪ್ಪಾ ! ” ಅಂದ
ಈ ಸಲ ಮಾಧವನಿಗೆ ಪಿತೃವಾಕ್ಯ ಮಿರುವುದು ಸರಿಯಲ್ಲವೆಂದು ಅರಿವಾಗತೊಡಗಿತ್ತು.ಆದರೆ ಕೊಪಿಸಿಕೊಂಡಿರುವ ಮಾವನಿಗೆ ಹೇಳುವುದಾದರೂ   ಹೇಗೆ ? ಹೇಳಿದರೆ ಏನನ್ನುವರೋ ! ಎಂಬ ಭಯ ಸುರುವಾಗಿತ್ತು.

” ರ್ರೀ ! ನಮ್ಮಪಗೆ ನೋಡಬೇಕು ಅನಿಸುತ್ತಿದೆ .” ಅಂತ ಯಶೋಧ ಕಣ್ತುಂಬ ನೀರು ತದ್ಕೊಂಡು ಹೇಳಿದಳು.
” ಯಶೂ ! ನೀನೇನೊ ಹೇಳೊದು ಸರಿ.ಆದ್ರೆ ಅವತ್ತು ನಾವ್ ಮದುವೆ ಆದ ಮರುದಿನ ಸಾಯಂಕಾಲ ಇದೆ ತರಹ ನೀನು ನಮ್ ಡ್ಯಾಡಿಗೆ ನೊಡಬೇಕು ಮಾತಾಡಬೇಕ ಅನಿಸುತ್ತಿದೆ ” ಅಂತ ಕಾಲ್ ಮಾಡಿದಾಗ ಅವರಾಡಿದ ಮಾತುಗಳು ನೆನಪಿದೆಯೆ ? ಎಂದಾಗ ಅವಳ ಕಣ್ಣೀರ ಧಾರೆಗಳು ತಾನೆ ತಾನಾಗಿ ಹರಿಯತೊಡಗಿದವು.ಅಂದ್ರೆ ಎಷ್ಟು ನೋವಾಗಿರಬೇಕು ಅವಳ ಮನಸ್ಸಿಗೆ ? ಹೌದು ಆಕೆ ಮನಸಾರೆ ಪ್ರೀತಿಸಿ ಅವನೊಂದಿಗೆ ಸರಳ ವಿವಾಹವಾಗಲು ದೇವಾಲಯ ಒಂದರಲ್ಲಿ ನೆರೆದಿದ್ದಾಗ ಪ್ರೇಮಿಗಳಿಬ್ಬರ ತಂದೆ ತಾಯಿ ಬಂಧು ಬಳಗದವರೆಲ್ಲ ಬಂದು ಮುನಿಸಿಕೊಂಡವರಂತೆ ಅಕ್ಷತೆಯ ಹೂ ಮಳೆಗೆರೆದರು.
ಮದುವೆ ಸರಳವಾದರೂ ಎಲ್ಲರೂ ಬಂದು ಹೋದದ್ದು ಕಂಡು ಯಶೋಧಳಿಗೆ ತವರಿನ ಹಂಬಲವಾಗಿ,
” ರ್ರೀ ! ಯಾಕೋ ನಮ್ಮಪ್ಪ ಅಮ್ಮಳಿಗೆ ಮಾತಾಡಬೇಕ ಅನಿಸುತ್ತಿದೆ ರ್ರೀ ! ಒಂದ್ ಕಾಲ್ ಮಾಡ್ತಿನಿ ” ಅಂತ ಮಾಧವನ ಕಿಸೆಯಲ್ಲಿನ ಮೊಬೈಲ್ ತಗೊಂಡು ಕರೆ ಮಾಡಿದಳು.ಆ ಕಡೆಯಿಂದ ” ಹಲೋ ! ಎಂಬ ಧ್ವನಿ ಕೇಳಿಸಿತ್ತು.
” ಹಲೋ ! ಅಪ್ಪಾ ! ನಾನು ಯಶೋಧ ಮಾತಾಡ್ತಾ ಇದ್ದಿನಿ ” ಎಂದಳು.
” ಯಾಕೆ ಮಾಡ್ದಿ ? ನೀನು ಯಾ‌ವತ್ತು ಮನೆ ಬಿಟ್ಟು ಹೋದಿಯೋ ಅವತ್ತೆ ನಮ್ ಪಾಲಿಗಿ ಸತ್ತಿದ್ದಿ ಅಂತ ತಿಳ್ಕೊಂಡು ನಿನ್ ಅಕ್ಷತೆಯಲ್ಲ ಅದು ಮಣ್ ಹಾಕಿದಿನಂತ  ಮನೆ ಅಂಗಳದಲ್ಲಿ ಕುಂತು ತಣ್ಣೀರಿನ ಸ್ನಾನ ಮಾಡಿದ್ದಿನಿ.ಇಡು ಪೋನು ” ಅಂತ ಗುಡುಗಿದ ಧ್ವನಿ ಮೊಬೈಲ್ ಔಟ್ ಸ್ಪಿಕರ ಇಟ್ಟಿದರಿಂದ  ಅದು ಮಾಧವನಿಗೂ ಕೆಳಿಸಿತ್ತು.

” ಅಪ್ಪಾ ! ನಾನೇನೆ ತಪ್ಪ ಮಾಡಿದ್ರೂ ಕ್ಷೇಮಿಸು ಅಪ್ಪಾ ! ” ಅಂತ ಯಶೋಧ ಅಳುತ್ತಿದಂತೆ ಆ ಕಡೆಯಿಂದ ಮೊಬೈಲ್ ಕಡಿತಗೊಂಡಿತ್ತು.ಆ ದಿನ ರಾತ್ರಿಯಲ್ಲ ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು.
” ಅಳಬೇಡ ಯಶೂ ! ಅಳಬೇಡ.ನಾನಿನ್ನೂ ಸತ್ತಿಲ್ಲ ” ಅಂತ ಮಾಧವ ಅವಳ ಗದ್ದ ಹಿಡಿದು ನೆವರಿಸುತ ಧೈರ್ಯ ತುಂಬಿದ.ಆಗ ಆಕೆ ಅವನಿಗೆ ಬಳ್ಳಿಯಂತೆ ತಬ್ಬಿಕೊಂಡು ಮುತ್ತಿಟ್ಟು ಮಡಿಲೊಳಗೆ ಹುದುಗಿ ನೋವನ್ನೆಲ್ಲ ನುಂಗಿಕೊಂಡು ತಾಯಿ ಇಲ್ಲದ ತವರು ನೀರಿಲ್ಲದ ಬಾವಿ ನೆರಳಿಲ್ಲದ ಜಾಲಿ ಮರದಂತೆ ಉಪಯೋಗಕ್ಕೆ ಬಾರದೆಂದು ತಿಳಿದು ನಿಶ್ಚಿಂತೆಯಿಂದಿರುವಾಗ ಈ ವಿಧಿಯಾಟವೇ ಒಂಥರಾ ಅಂತಾರಲ್ಲಾ ! ಅದು ಇವಳ ಜೊತೆಗೆ ಆಟವಾಡತೊಡಗಿತ್ತು.  ತವರು ಮನೆ ನೆನಪಾದಗೊಮ್ಮೆ ಅವಳಿಗೆ ಕಣ್ಣೀರು ತನ್ನಿಂದ ತಾನೇ ಒಸರುತ್ತಿದ್ದವು. ನನ್ನಂತೆ ತಮ್ಮ ತಂಗಿಯರು ಆ ಮನೆಯಲ್ಲಿ ಕಷ್ಟ ಪಡುತ್ತಿರುವುದು ನೆನೆಸಿಕೊಂಡು ಒಮ್ಮೊಮ್ಮೆ ಒಬ್ಬಳೆ ಕುಳಿತು ಅಳುತ್ತಿದ್ದಳು.ಆದ್ರೂ ಯಾರಿಗೂ ಹೇಳಿಕೊಳ್ಳದೆ ನೋವುಂಡು ಮೌನವಹಿಸುತ್ತಿದ್ದಳು.
” ಯಶೂ ! ಅಳಬೇಡ ಯಶೂ ! ಅಳಬೇಡ.ಬೇಕಿದ್ರೆ ನಾ ನಿನ್ ತಂದೆ ಜೋತೆ ಮಾತಾಡ್ತಿನಿ ತಡಿ ” ಅಂತ ಅದೆ ನಂಬರಿಗೆ ಕರೆ ಮಾಡಿದ.ಮೊಬೈಲ್ ರಿಂಗಣಿಸುತ್ತಿದೆ ಏನೋ ಒಂಥರ ಭಯ ಆದರೂ ಧರ್ಯ ತಂದುಕೊಂಡು ಕಿವಿಗಚ್ಚಿಕೊಂಡಿದ್ದ ಆ ಕಡೆಯಿಂದ ಹೆಣ್ಣು ಧ್ವನಿ.
” ಹಲೋ ! ” ಎಂದಿತ್ತು.
” ಹಲೋ‌ ! ಯಾರು ? ” ಮಾಧವ ಕೇಳಿದ.
” ನಾನು ಶಂಕರ್ ರಾವ ಅವರ ಪತ್ನಿ ಮಾಲತಿ ಮಾತಾಡ್ತಾ ಇರೋದು .ತಾವು ಯಾರು ? ” ಎಂದಾಗ ಅವನಿಗೆ ಅರಿವಾಗಿತ್ತು ಇವಳು ಯಶೋಧಳ ‘ ಮಲತಾಯಿ’ಅಂತ.ಆದರೂ ಯಾವುದೇ ಮನಸ್ಸಿನಲ್ಲಿಟ್ಟುಕೊಳ್ಳದೆ
” ಅಕ್ಕಾ ! ನಾನು ಮಾಧವ ” ಎಂದ.
” ಓಹೋ ! ನೀನಾ ” ಎಂದು ವ್ಯಂಗ್ಯ ಧ್ವನಿಯಲ್ಲಿ ನುಡಿದಳು.
” ಹೌದು ನಾನೆ .ಯಶೋಧಗೆ ಯಾಕೋ ಆರಾಮ ಇಲ್ಲ. ಅದ್ಕೆ ಪೋನ್ ಮಾಡ್ದೆ ” ಅಂತ ಅಂದಾಗ
” ಆರಾಮ ಇಲ್ಲಾಂದ್ರೆ ನಾವೇನು ಮಾಡೋಣ ? ನೀ ಹ್ಯಾಂಗ್ ಆಕಿಗಿ ಮನೆಯಿಂದ ಒಯ್ಯದಿದ್ದಿ ಹಾಂಗ್ ಜೀವನ ಪೂರ್ತಿ ಅನುಭವಿಸು.ಒಂದೇ ಆಕಿಗಿ ಏನಾದ್ರೂ ಆದ್ರೆ ಒಳ್ಳೆದಾಗೊಲ್ಲ ಇಡೋ ಪೋನು ” ಅಂತ ಕರೆ ಕಟ್ ಮಾಡಿದಳು.
” ಒಂದೇ ಆಕಿಗಿ ಏನಾದ್ರೂ ಆದ್ರೆ ಒಳ್ಳೆಯದಾಗೊಲ್ಲ ” ಎಂದ ಮಾತು ಮಾಧವನಿಗೆ ಈಟಿಯಂತೆ ನಾಟಿತು.ಯಶೋಧ ಕೂಡ ಮಲತಾಯಿ ಆಡಿದ ಮಾತು ಕೇಳಿ ನೊಂದುಕೊಂಡು ಅಳತೊಡಗಿದಳು. ಅವಳ ಕಣ್ಣೀರಿನ ಹನಿಗಳು ಧಾರಕಾರ ಹರಿಯತೊಡಗಿದವು.ಮಾಧವ ಅವಳ ನೇರ ನಿಂತು ಎರಡು ಕೈಗಳಿಂದ ಅವಳ ಮುಖ ಹಿಡಿದು ತನ್ನ ಬೆರಳಿನಿಂದ ಕಣ್ಣೀರು ಒರೆಸುತ್ತ ” ಯಶೂ ! ” ಎಂದಾಗ
” ಹಾ ! ” ಎಂದು ಗೊಣೆತ್ತಿ ಮುಸುಮುಸು ಬಿಕ್ಕುತ್ತಿದ್ದಳು.ಆಗ ಮಾಧವನ ಮೊಬೈಲ್ ರಿಂಗಾಗತೊಡಗಿತ್ತು.ಕೈಯಲಿಡಿದು ನೋಡಿದರೆ ಯಶೋಧಳ ತಂದೆಯದೆ ನಂಬರು.
” ಹಲೋ ” ಎಂದಾಗ
” ಹಲೋ ! ಈಗ ತಾನೆ ಪೋನ್ ಮಾಡಿದಿರಂತಲ್ಲಾ ? ಯಶೋಧಾಗೇನಾಗಿದೆ ? ”
” ಏನೋ ಗೊತ್ತಾಗತ್ತಿಲ್ಲ.ಬರಿ,ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾಳೆ. ”
” ಅಂದ್ರೆ ? ”
” ಅಳುವುದು.ಸುಮ್ ಸುಮ್ನೆ ನಗುವುದು.ದೆವ್ವ ಬಡ್ಕೊಂಡವರಂತೆ ಭಯ ಭೀತಳಾಗುವುದು.ಹೀಗೆ ಒಂದೊಂದು ಥರಾ ಮಾಡ್ತಿದ್ದಾಳೆ ”
” ಎಷ್ಟು ದಿನಾ ಆಯ್ತು ”
” ನಿನ್ನೆಯಿಂದಲೆ ಹೀಗಾಡ್ತಿದ್ದಾಳೆ ”
” ಸರಿ,ನಾನಿಲ್ಲಿ ಒಬ್ಬ ಸ್ವಾಮಿಗಳಿದ್ದಾರೆ ಅವರಿಗೆ ಕೇಳಿ ಮತ್ತೆ ಅದರ ಬಗ್ಗೆ ಹೇಳ್ತಿನಿ ” ಅಂತ ಕರೆ ಕಟ್ ಮಾಡಿದರು.
ಮಾಧವನಿಗೆ ಮಾವ ಸರಳವಾಗಿಯೇ ಮಾತಾಡಿದ್ದು ಕಂಡು ಸಂತಸವೆ ಆಯ್ತು.ಆದ್ರೆ ಈ ಪೀಡೆ ಪಿಶಾಚಿಯ ಕಾಟ ಮತ್ತೊಂದು ಸಮಸ್ಯೆಯಾಗಿ ಕಾಡಿತ್ತು.
ಮತ್ತೆ  ಕೆಲ ಸಮಯದ ನಂತರ ಮೊಬೈಲ್ ರಿಂಗಣಿಸಿತ್ತು.ನಂಬರ ನೋಡಿದ ಯಶೋಧಳ ತಂದೆಯದೆ ಈಗ ಯಾವ ಭಯವಿಲ್ಲದೆ
” ಹಲೋ ! ಮಾವ ” ಅಂದ ಮೊದಲನೆ ಸಲ.
” ಹಾ ! ನಾನೀಗ ಯಶೋಧಳ ವರ್ತನೆಯ ಕುರಿತು ಇಲ್ಲೊಬ್ಬ ಸ್ವಾಮಿಜಿಗೆ ತಿಳಿಸಿದ್ದೆ.ಅವರು ಈಗಲೆ  ಹೋಗೊಣ ಅಂತ್ತಿದ್ದಾರೆ.ನಾವೀಗ ನಿಮ್ಮಲಿಗೆ ಬರತ್ತಿದ್ದಿವಿ ” ಅಂತ ಪೋನ್ ಕಟ್ ಮಾಡಿದರು.

ಸಮಯ ಮಧ್ಯಾಹ್ನ ಒಂದು ಗಂಟೆಯಾಗಿರಬೇಕು.ಶಂಕರ್ ರಾವ ಅವರು ಮಾತು ಮೀರಿ ಮದುವೆಯಾದ ಮಗಳ ಬಗ್ಗೆ ಎಷ್ಟೇ ಮುನಿಸಿಕೊಂಡರು ಅವಳ ಯೋಗಕ್ಷೇಮದ ಬಗ್ಗೆ ‘ ಕರುಳು ಬಳ್ಳಿ ‘ ಅಂತಾರಲ್ಲ ? ಅದು ಹಿಡಿದೆಳೆದುಕೊಂಡು ಬಂದಿತ್ತು.ಜೊತೆಗೆ ಒಬ್ಬ ಸ್ವಾಮಿಯನ್ನು ಕರೆದುಕೊಂಡು ಬಂದಿದ್ದರು. ಮಾಧವನ ಮನೆಯಲ್ಲಿ ಅವರಿಗೆ ಆತ್ಮೀಯವಾಗಿ ಬರಮಾಡಿಕೊಂಡರು.ಆಗ ಯಶೋಧ ಅಲ್ಲಿ ಹುಚ್ಚಿಯಂತೆ ಮಲಗಿದಳು.ಆ ಸ್ವಾಮಿಜಿ ತನ್ನ ಎಲ್ಲ ನೇಮ ನಿಷ್ಠೆ ಮುಗಿಸಿ ಕೊಂಡು ಒಂದು ಕೋಣೆಯಲ್ಲಿ ಉತ್ತರಾಭಿಮುಖವಾಗಿ ಕುಳಿತು ಊದು ಬತ್ತಿ ಹಚ್ಚಿ ಮಂತ್ರ ಮನದೊಳಗೆ ಉಚ್ಚರಿಸುತ್ತಾ ಪೂಜೆ ಮಾಡಿಕೊಂಡು ಯಶೋಧಳಿಗೆ ಅವರ ಮುಂದೆ ಕೂಡಿಸಲು ಹೇಳಿದ.ಆಕೆ ಬೇರೊಂದು ಕೋಣೆಯಲ್ಲಿ ಅರಿವಿಲ್ಲದೆ ಸುಸ್ತಾಗಿ ಮಲಗಿದಳು. ಅವಳನ್ನು ತಾಯಿಯ ಸಹಾಯ ಪಡೆದ ಆಕೆಯ ಗಂಡ ತೆಕ್ಕೆಯಲ್ಲಿ ಹಿಡಿದುಕೊಂಡು ಸ್ವಾಮಿಯ ಮುಂದೆ ತಂದು ಕೂರಿಸಿದ.ಅವಳು ತಲೆ ಮೇಲೆ ಎತ್ತದೆ ಮುಖ ಕೆಳಗೆ ಮಾಡಿ ಕುಳಿತಳು. ಅವಳ ಕೂದಲು ಚೆಲ್ಲಾಪಿಲ್ಲಿಯಾಗಿ ಹರಡಿದವು.ಆಕೆಗೆ ಯಾವುದೇ ಪರಿಜ್ಞಾನವಿರಲಿಲ್ಲ .ಸ್ವಾಮಿಜಿ ಅವಳ ತಲೆಯ ಮೇಲೆ ಬಲಗೈ ಹಸ್ತವಿಟ್ಟು ಮಂತ್ರ ಪಠಿಸತೊಡಗಿದ.ಆಗ ಆಕೆಯ ದೇಹವೆಲ್ಲ ಭೂಕಂಪವಾದಂತೆ ಕಂಪಿಸತೊಡಗಿತ್ತು. ಅವಳ ಬಾಯಿಂದ ಯಾವುದೇ ಶಬ್ದ ಹೊರಬಿಳಲಿಲ್ಲ. ಬರಿ,ಮೌನವಾಗಿ ತಲೆಬಾಗಿ ಅರಿವಿಲ್ಲದೆ ಹುಚ್ಚಿಯಂತೆ ಕುಳಿತಿದ್ದಳು.

” ನೋಡಿ, ಇದು ಭಯಂಕರವಾಗಿ ‘ಭಾನಾಮತಿ’ಮಾಡಿಸಿದ ಅದಾ‌.ಇದು ಇಷ್ಟು ಬೇಗ ಬಾಯಿ ಬಿಡಲ್ಲ.ಇದ್ಕೆ ಓಡಿಸಬೇಕಾದ್ರೆ ಮೊದ್ಲು ನಾನು ಹೇಳುವ ನೇಮಗಳನ್ನು ಮಾಡಿ ಅದೇನಂದ್ರೆ ” ಎನ್ನುತ್ತಿದಂತೆ ಅವರ ಮಾತು ಅರ್ಧಕ್ಕೆ ತಡೆದು
” ಹೇಳಿ ಅದೇನು ನೇಮಗಳಿವೆ ಮಾಡ್ತಿವಿ ” ಅಂದರು ಅನುರಾಧಮ್ಮನವರು.
” ಹುತ್ತವೊಂದಕೆ ಕುಂಕುಮದಿಂದ ಏಳು ದಿನ ಪೂಜೆ ಮಾಡಿ ಪ್ರತಿ ಸಲದ ಪೂಜೆಯೊಂದಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಮಾಡಬೇಕು. ಈ ವೃತ್ತ ಮನೆಯಲ್ಲಿ ಯಾರಾದ್ರು ಒಬ್ಬರು ಮಾಡಿದರೆ ಸಾಕು.ಮತ್ತೆ ಇನ್ನೊಂದು ! ಈ ವೃತ್ತ ಮುಗಿಯುವವರೆಗೆ ಆ ಹುತ್ತಕ್ಕೆ ಪೂಜೆ ಮಾಡಿದ ನಂತರ ಇವಳಿಗೆ ಒಂದು ಬಾಳೆಹಣ್ಣು ತಿನ್ನಿಸಬೇಕು.ಇದು ಏಳು ದಿನ ತಪ್ಪದೆ ಪೂಜೆ ಮಾಡಿ ಬಂದಾಗೊಮ್ಮೆ ಆ ಹಣ್ಣು ತಿನ್ನಿಸಬೇಕು.ಇಷ್ಟು ನೇಮ ಪಾಲಿಸಿದ ಮೇಲೆ ಒಂದೈದ್ ರವಿವಾರ ನಮ್ ಮಠಕ್ಕೆ ಕರೆದುಕೊಂಡು ಬರಬೇಕು ” ಅಂತ ಹೇಳಿದ.
” ಆಯ್ತು ಆಪ್ಪಾವ್ರೇ ! ” ಅಂತ ಮಾಧವ ಆ ಸ್ವಾಮಿಯ ಪಾದ ಹಿಡಿದು ಬೇಡಿಕೊಂಡಿದ್ದ.
” ಆಯ್ತು ,ಗುರುಗಳು ಹೇಳಿದಾಂಗ ಮಾಡ್ರಿ ನಂತರ ಕಡಿಮೆ ಆಗಲಿಲ್ಲಂದ್ರ ಅವ್ರು ಹೇಳಿದಾಂಗ ಪ್ರತಿ ಐದು ರವಿವಾರ ಮಠಕ್ಕೆ ಬಂದು ಬಿಡ್ರೀ.ನಿಮ್ಮ ಜೋತೆಗೆ ನಾನು ಬರ್ತಿನಿ.” ಅಂತ ಶಂಕರರಾವ ಅವರು ತಮ್ಮ ಅಳಿಯ ಮತ್ತು ಭೀಗ ಬೀಗತಿಯರಿಗೆ‌ ತೀಳಿ ಹೇಳಿದ. ಎಲ್ಲರೂ ‘ ಹೂಂ’ ಎನ್ನುವಂತೆ ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದರು.
ಆ ಕರಿಕೋಳ ಮಠದ ಮಹಾಮುನಿ ಸ್ವಾಮಿ ಒಂದು ನಿಂಬೆ ಹಣ್ಣನ್ನು ಮಂತ್ರಿಸಿ ಕೈಗೆ ಕೊಡುತ್ತಾ
” ಹೂಂ.ಈ ನಿಂಬೆಕಾಯಿ ಸದಾ ಈಕೆಯ ಸೆರಗಿನಲ್ಲಿ ಕಟ್ಟಿ ” ಅಂತ ಹೇಳಿದ. ಮಾಧವ ಅದನ್ನು ತೆಗೆದುಕೊಂಡು ಅವಳ ಸೆರಗಿನಲ್ಲಿ ಸುತ್ತಿ ಕಟ್ಟಿದ.
”  ಮಿಸಲ್ ನೀರು ತಗೊಂಡು ಬನ್ನಿ ” ಎಂದು ಸ್ವಾಮಿಜಿ ಹೇಳಿದಾಗ ಅನುರಾಧಮ್ಮನವರು ಒಂದು ತಾಮ್ರದ ತಂಬಿಗೆಯಲ್ಲಿ ನೀರು ತಂದಿಟ್ಟರು.ಆಗ ಅವರು ಅದನ್ನು ಮಂತ್ರಿಸಿ
” ಹೂಂ.! ಈ ನೀರನ್ನು ಈಕೆಗೆ ಕುಡಿಸಿ ” ಎಂದಾಗ ಮಾಧವ ಏನೂ ಅರಿವಿರದೆ ಸುಸ್ತಾಗಿ ತಲೆ ಅಲ್ಲಾಡಿಸುತ್ತಾ ಕುಳಿತ್ತಿರುವ ಯಶೋಧಳ ಬಾಯಲ್ಲಿ ಸ್ವಲ್ಪವೇ ನೀರು ಹಾಕಿದ ಆಗ ವಿಚಿತ್ರವೆಂದರೆ ಅವಳು ಮೊದಲಿನಂತೆ ಜಾಗೃತಳಾಗಿ ತನ್ನ ತಂದೆ ಇರುವುದನ್ನು ಖಾತ್ರಿ ಪಡಿಸಿಕೊಂಡು ಅತಿ ಸಂತಸಗೊಂಡಳು.ಶಂಕರರಾವ ಅವರ ಮುಖದಲ್ಲೂ ಕೂಡ ಸಂತಸದ ಹೊನಲು ತುಂಬಿತ್ತು.ಅವಳಿಗೆ ಪರಿಜ್ಞಾನ ಬಂದಿರುವುದರಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದರು.
” ಆಯ್ತು, ನಾನು ಹೇಳಿದಷ್ಟು ಮಾಡಿ ಆಕೆಗೆ ಸುಸ್ತಿ ಆದ್ರೆ ಈ ಮಂತ್ರಿಸಿರೋ ! ನೀರಿನ
ಒಂದೆರಡು ಹನಿ ಕುಡಿಸಿ.ಎಲ್ಲ ಸರಿಯಾಗುತ್ತದೆ.ನಾವೀನ್ನು ಬರುತ್ತೇವೆ ” ಎಂದು ಸ್ವಾಮಿಗಳು ಎದ್ದು ಹೋಗಲು ಸಿದ್ಧರಾದರು. ಶಂಕರರಾವರು ಒಮ್ಮೆ ಮಗಳ ಮುಖ ನೋಡಿ ಕಣ್ತುಂಬ ನೀರು ತಂದುಕೊಂಡರು.ಅಪ್ಪನ ಕಣ್ಣಲ್ಲಿ ನೀರು ಕಂಡ ಯಶೋಧಾಗೆ ಅಳು ತಡೆಯುವ ಶಕ್ತಿ ಇರಲಿಲ್ಲ. ಹಳೆಯದನ್ನೆಲ್ಲ ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು.

” ಅಳಬೇಡ ಮಗಳೆ ! ಅಳಬೇಡ. ಆಗೋದೆಲ್ಲ ಆಯ್ತು .ಹಳೆಯದನ್ನೆಲ್ಲ ಮರೆತು ಬಿಡು.ದೇವರು ಒಳ್ಳೆಯದು ಮಾಡ್ತಾನೆ.ಈಗ ನೀವು ಚನ್ನಾಗಿ ಇರಿ.” ಅಂತ ಅಳಿಯನ ಮುಖ ನೋಡಿ ಮಗಳಿಗೆ ಹೇಳಿದ.ಅಷ್ಟೇಯಲ್ಲದೆ ತನ್ನ ಕೊರಳಲ್ಲಿನ ಒಂದು ತೊಲೆ ಚಿನ್ನದ ಚೈನು ತೆಗೆದು ” ಬೇಕಾದ್ರೆ ಇದು ಇಟಕ್ಕೋ ! ” ಅಂತ ಅದು ಉಚ್ಚಿ ಕೊಡತೊಡಗಿದ.ಯಶೋಧಳಿಗೆ ಒಮ್ಮೆ ಆ ಚೈನಿನ ಮೇಲೆ ಆಸೆಯಾದರೂ ಕೂಡ ತನ್ನ ಮಲತಾಯಿ ಏನನ್ನುವಳೋ ! ಆಕೆ ಅಪ್ಪಾನಿಗೆ  ಚೈನು ಎಲ್ಲಿ ? ಅಂತ ಬೈಯ್ದು ತೊಂದರೆ ಕೊಡುವಳೋ ! ಏನೋ ” ಎಂದು ತಿಳಿದು
” ಬೇಡಪ್ಪಾ ! ಈಗ ಇದರ ಅವಶ್ಯಕತೆ ಇಲ್ಲ. ” ಎಂದು ಹೇಳಿ ಕಣ್ಣೀರು ಒರೆಸಿಕೊಂಡಳು.

ಮರುದಿನ ಅನುರಾಧಮ್ಮನವರು ಆ ಸ್ವಾಮಿ ಹೇಳಿದ ವೃತವನ್ನು ಮಾಡಲು ಮನೆಯ ಹಿಂದಿನ ಹಿತ್ತಲಲ್ಲಿ ಒಂದು ಹುತ್ತ ಇರುವುದನ್ನು ಖಾತ್ರಿ ಪಡಿಸಿಕೊಂಡು ಮೂರು ಚಿಕ್ಕ ಚಿಕ್ಕ ಕಲ್ಲುಗಳನ್ನು ಇಟ್ಟು ದೇವರೆಂದು‌ ತಿಳಿದು ಕುಂಕುಮದಿಂದ ಪೂಜೆ ಮಾಡಿ ಅದಕ್ಕೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ ಮನೆಗೆ ಬಂದಿದಳು.ಬಂದವಳೆ ಮನೆಯಲ್ಲಿ ತಂದಿಟ್ಟಿದ ಬಾಳೆಯ ಗೊಂಚಲಿನ ಒಂದು ಹಣ್ಣು ಸುಲಿದು ಯಶೋಧಳಿಗೆ ತಿನ್ನಲು ಕೊಟ್ಟಾಗ ಅವಳು ಅದನ್ನು ತಿನ್ನತೊಡಿದಳು.ತಿನ್ನುವಾಗ ಆಕೆ ಪ್ರಜ್ಞೆವಂತಳಾಗಿ ಕಂಡು ಬಂದಳು.ಆದರೆ ಹಣ್ಣು ಪೂರ್ತಿ ತಿಂದಾದ ಮೇಲೆ ದಕ್ಷಿಣಾಭಿಮುಖವಾಗಿ ಕುಂತು ಕೈ ಕಾಲುಗಳು ಸುಮ್ಮನೆ ಅಲುಗಾಡಿಸುತ್ತಾ ” ಹ್ಹಿ..ಹ್ಹಿ..ಹ್ಹಿ..! ” ಅಂತ ನಗತೊಡಗಿದಳು. ಅವಳ ನಗು ಕಂಡು ಮಾಧವ ದಿಗಿಲುಗೊಂಡು ” ಯಶೂ ! ” ಅಂದ ಆಕೆ ಅವನ ಮಾತು ಕೇಳಿಯು ಕೇಳದಂತೆ ತನ್ ತಾನೆ ವಿಚಿತ್ರವಾಗಿ ಕೈ ಬೆರಳುಗಳನ್ನು ಏಣಿಸುತ್ತಾ ನಗತೊಡಗಿದಳು.
” ಒಂದು…ಎರಡು.. ಮೂರು..! ಹ್ಹಿ…ಹ್ಹಿ…ಹ್ಹಿ…! ”
” ಒಂದು.. ಎರಡು.. ಮೂರು..! ಹ್ಹಿ… ಹ್ಹಿ… ಹ್ಹಿ…! ” ಅಂತ ಕೈ ಬೆರಳುಗಳನ್ನು ಏಣಿಸಿಕೊಳ್ಳುತ್ತಾ ವಿಚಿತ್ರವಾಗಿ ನಗತೊಡಗಿದಳು.
” ಹ್ಹಿ.. ಹ್ಹಿ.. ಹ್ಹಿ..! ಅಂತ ನಗುವುದಾದ ಮೇಲೆ ಮುಖ ವಿಚಾರವಾಗಿ ಕೆಡಿಸಿ ಅಳತೊಡಗಿದಳು.
” ಯಶೂ ! ಯಶೂ ! ” ಅಂತ ಮಾಧವ ಅವಳ ಭುಜ ಹಿಡಿದು ಕರೆದರು ಪರಿಜ್ಞಾನವಿಲ್ಲ.ಅಳುವುದು ಮತ್ತೆ ವಿಪರೀತವಾಗಿತ್ತು.ಮಾಧವ ಸ್ವಾಮಿಜಿ ಮಂತ್ರಿಸಿದ ನೀರು ತಂದು ಅವಳ ಮೇಲೆ ಸಿಂಪಡಿಸಿದ.ಆಗ ಆಕೆಗೆ ಮೊದಲಿನಂತೆ ಪ್ರಜ್ಞೆಯುಂಟಾಗಿತ್ತು. ಆದರೆ ಅವಳು  ” ಒಂದು.. ಎರಡು.. ಮೂರು..! ” ಅಂತ ಬೆರಳು ಎನಿಸಿಕೊಂಡು ಯಾಕೆ ದೆವ್ವದ ನಗೆ ನಕ್ಕಳು ? ಅನ್ನೊದು ಅರ್ಥವಾಗಲಿಲ್ಲ. ಆದರೂ ಆ ಮಠಾಧೀಶರು ಹೇಳಿದಂತೆ  ವೃತ ಮುಂದುವರೆಸಿದ. ದಿನಾಲು ಹುತ್ತಕ್ಕೆ ಹೋಗಿ ಅಲ್ಲಿಟ್ಟ ಮೂರು ಚಿಕ್ಕ ಚಿಕ್ಕ ಕಲ್ಲುಗಳಿಗೆ ಕುಂಕುಮದಿಂದ ಪೂಜೆ ಮಾಡಿ ಮನೆಗೆ ಬಂದು ಯಶೋಧಾಗೆ ಒಂದು ಹಣ್ಣು ತಿನ್ನಲು ಕೊಟ್ಟಾಗ ಅವಳು ಅದು ತಿನ್ನುವಾಗ ಸರಿಯಾಗಿಯೆ ತಿನ್ನೊದು.ತಿಂದಾದ ಮೇಲೆ ಮತ್ತೆ ಮತ್ತೆ ….!

” ಒಂದು… ಎರಡು… ಮೂರು…! ” ಅಂತ ವಿಚಿತ್ರವಾಗಿ ನಗುವುದು.ಮತ್ತೆ ಅಳುವುದರೊಂದಿಗೆ ಕೈ ಬೆರಳುಗಳು ಎಣಿಸುತ್ತಿದ್ದಳು. ಹೀಗೆ ಏಳು ದಿನಾ ವೃತ ಮುಗಿಯಿತ್ತೆ  ಹೊರತು ಆಕೆ  ” ಒಂದು…ಎರಡು.. ಮೂರು …! ” ಅಂತ ಆ ನಗು ನಗೋದು ಬಿಡಲಿಲ್ಲ. ಈ ವೃತ ಮುಗಿದ ಮೇಲೆ ಮಾಧವ ಸ್ವಾಮಿಜಿಗೆ ಕರೆ ಮಾಡಿದ.

” ಹಲೋ ! ಗುರುಗಳೆ ! ನಾನು ಮಾಧವ ಮಾತಾಡ್ತಿದ್ದಿನಿ ” ಅಂದ.
” ಯಾವ ಮಾಧವ ? ”
” ನಾನು ಶಂಕರರಾವ ಅವರ ಅಳಿಯ ”
” ಓಹೋ ! ಗೊತ್ತಾಯ್ತು ಗೊತ್ತಾಯ್ತು .ಏನಪ್ಪಾ , ಚನ್ನಾಗಿದ್ದಿರಾ ? ಹೇಳಿದ್ದಾಳೆ ನಿನ್ನ ಹೆಂಡ್ತಿ ?  ವೃತ ಮುಗಿತ್ತೋ ? ” ಅಂತ ಏನೆಲ್ಲ ಕೇಳತೊಡಗಿದರು.

” ಮುಗಿತ್ತು ಗುರುಗಳೆ,ಆದ್ರೆ ಯಾಕೋ ಅವಳಿಗೆ ಗುಣವಾದಂತೆ ಕಾಣ್ತಿಲ್ಲ.ವೃತದ ನಂತರ ಮತ್ತೆ ಜಾಸ್ತಿ ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾಳೆ.ನಮಗಂತು ದಿಕ್ಕೆ  ತೋಚುತ್ತಿಲ್ಲ.ಹೇಗ ಮಾಡೊದು ಗುರುಗಳೆ ? ”

” ಅಲ್ಲಾ ,ಮಾಧವ ವೃತ ಮಾಡಿದರೆ ಕಡಿಮೆ ಆಗಬೇಕು. ಆದ್ರೆ ನೀನು ಹೆಚ್ಚಾಗಿದೆ ಅಂತ ಹೇಳ್ತಾ ಇದ್ದಿಯ ? ಈ ರೀತಿ ನೀನು ಹೇಳೊದು ನೋಡಿದರೆ ಎಲ್ಲೋ ಒಂದು ಕಡೆ ಮಾಡಿದ ವೃತ ತಪ್ಪಾಗಿದೆ ಅಂತ ಅನಿಸ್ತಾ ಇದೆ ”
” ಇಲ್ಲ , ಗುರುಗಳೆ ಸರಿಯಾಗೆ ಮಾಡದ್ದಿವಿ ”
” ಸರಿಯಾಗಿ ಅಂದ್ರೆ ಹೇಗೆ ಮಾಡಿದ್ದಿರಿ ? ”
” ಬೆಳಿಗ್ಗೆ ಸ್ನಾನದ ನಂತರ ಮನೆ ಹಿಂದಿನ ಹಿತ್ತಲಲ್ಲಿ ಇರುವ ಹುತ್ತದಡಿಯಲ್ಲಿ ಮೂರು ಚಿಕ್ಕ ಚಿಕ್ಕ ಕಲ್ಲುಗಳನಿಟ್ಟು ಪೂಜೆ ಮಾಡಿ ಬಂದು ಆಕೆಗೆ ಪ್ರತಿದಿನ ಒಂದು ಬಾಳೆಹಣ್ಣು ಕೊಡುತ್ತಿದ್ದೆ ” ಎಂದಾಗ
” ಮಾಧವ ನೀನು ಇಲ್ಲೆ ತಪ್ಪಿದಿಯಲ್ಲ ? ”
” ಅದ್ಹೇಗೆ ?”
” ನಾನು ಹೇಳಿದ್ದು ಬರಿ ಹುತ್ತಕ್ಕೆ ಪೂಜೆ ಮಾಡು ಅಂತ.ಆದ್ರೆ ನೀನು ಮೂರು ಕಲ್ಲುಗಳಿಗೆ ಪೂಜೆ ಮಾಡಿದಿಯಾ ಅದ್ಕೆ ಅವಳು ಹಾಗಾಡ್ತಿದ್ದಾಳೆ. ಆ ಮೂರು ಕಲ್ಲುಗಳು ನೀನು ತಿಳಿದಂತೆ ಅವು ದೇವರಲ್ಲ ಅವು ದೆವ್ವದ ಸಂಕೇತ. ಆ ಪಿಶಾಚಿಯೆ ನಿನಗೆ ಆ ರೀತಿ ಪೂಜೆ ಮಾಡಲಿಕೆ ಹಚ್ಚಿದೆ ಅಂತ ಕಾಣ್ತದೆ.ನಿಮಗೆ ಮರೆವು ಹಾಕಿಸಿ ಆ ಆತ್ಮ ಹೀಗೆ ಮಾಡಿಸಿದೆ.ಅದು ಮೂರು ಕಲ್ಲುಗಳು ಇಡಲು ನಿಮಗೆ ಪ್ರೇರೆಪಿಸಿದೆ ಅಂದ್ರೆ ಆ ಮಾಟ ಮಾಡಿದವರು ಮೂವರು ಜನ ಇದ್ದಾರೆ .ಅವರು ನಿಮ್ಮ ಕೈಯಿಂದ ಪೂಜೆ ಮಾಡಿಸಿಕೊಂಡು ಅವಳ ಮೂಲಕ ನಗುತ್ತಿದ್ದಾರೆ .ಇದು ಭಯಂಕರ ಭಾನಾಮತಿ ಅದಾ ಹಾಗಾಗಿ ನೀನು ಮಾಡಿದ ವೃತ ಹಾಳಾಯಿತ್ತು.ಆದ್ದರಿಂದ ನೀನು ಮತ್ತೆ ವೃತ ಮಾಡಬೇಕು ಇಲ್ಲವಾದರೆ ಐದು ರವಿವಾರ ಆಕೆಗೆ ಕರೆದುಕೊಂಡು ಬರಬೇಕು .ಮತ್ತೆ ಬರುವಾಗ ಈ ಮಾಟ ಬಿಡಿಸಲು ಚೌದಾಪುಡಿ ದುಕಾನದಾಗ ಸಾಮಾನು ತಗೊಬೇಕಾಗುತ್ತದೆ ಅದಕ್ಕೆ ಅಂತ ಹತ್ತು ಸಾವಿರ ರೂಪಾಯಿ ತರೊದನ್ನು ಮರೆಯಬೇಡ.‌ ಹಾಂ ! ನೆನಪಿರಲಿ ಯಾವುದೇ ಕಾರಣಕ್ಕೂ ಖಾಲಿ ಕೈಲಿಂದ ಬಂದ್ರೆ ಕೆಲ್ಸ ಆಗೊಲ್ಲ ತಿಳ್ಕೋ ! ” ಎಂದಾಗ

” ಆಯ್ತು ಗುರುಗಳೆ ! ” ಅಂತ ಮಾಧವ ಅನ್ನುತ್ತಿದಂತೆ ಇತ್ತ‌ ಮನೆಯಲ್ಲಿ ಯಶೋಧಳ ದೆವ್ವು
” ಹೇ ! ಯಾರೋ ನೀನು ? ” ಎಂದು ಚಟ್ಟನೆ ಚಿರಿ
” ಹಿ..ಹ್ಹಿ.. ಹ್ಹಿ..! ಒಂದು..ಎರಡು.. ಮೂರು… ! ” ಆಕೆ ಹುಚ್ಚಿಯಂತೆ ತಲೆಗೂದಲು ಮುಖದ ಮೇಲೆ ಹಾಕಿಕೊಂಡು ವಿಕಾರವಾಗಿ ನೋಡಿ ಕೈ ಬೆರಳು ಎನಿಸಿಕೊಳ್ಳುತ್ತಾ ನಗತೊಡಗಿದಳು.

ಮಾಧವನೊಂದಿಗೆ ಮಾತನಾಡುತ್ತಿದ್ದ ಸ್ವಾಮಿಗಳಿಗೆ ಮೊಬೈಲ್ ಮೂಲಕ ಈ ಶಬ್ದ ಕೇಳಿಸಿದ್ದರಿಂದ ಆತ ” ಏನು ಏನದು ಏನು ?” ಅಂತ ಪ್ರಶ್ನೆ ಮಾಡಿದ.
ಇತ್ತ ಕಡೆ ಮತ್ತೆ ಅವಳು ” ಒಂದು.. ಎರಡು.. ಮೂರು..! ಹ್ಹಿ… ಹ್ಹಿ… ಹ್ಹಿ… ” ಅಂತ ನಕ್ಕಳು.ಆ ನಗು ಮತ್ತೆ ಮತ್ತೆ ಭಯ ಹುಟ್ಟಿಸುವಂತ್ತಿತ್ತು.
ಇದನ್ನೆಲ್ಲ ಸ್ವಾಮಿಗಳು ಮೊಬೈಲ್ ಚಾಲು ಇರುವುದರಿಂದ ಕೇಳಿದರೂ ಕೇಳದಂತೆ ಕರೆ ಕಟ್ ಮಾಡಿದರು. ಆಗ ಅವಳು ವಿಚಿತ್ರ ನಗು ನಗುತ್ತಾ
ಒಂದು… ಎರಡು… ಮೂರು..! ಅಂತ ಬೆರಳು ಎಣಿಸುವುದರೊಂದಿಗೆ
” ಹ್ಹಿ… ಹ್ಹಿ.. ಹ್ಹಿ…! ಅಂತ ಗಹಗಹಿಸಿ ನಗತೊಡಗಿದಳು.

ಮಚ್ಚೇಂದ್ರ ಪಿ ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ