Oplus_131072

ಪಾಳು ಬಿದ್ದ ಭೂಮಿ

 

-ಮಚ್ಚೇಂದ್ರ ಪಿ.ಅಣಕಲ್.

ಮುಂಜಾನೆಯ ಕಣ್ಣ ನಸುಕಿನ ಸಮಯದಲ್ಲಿ ಗೌಡ್ರ ಮನಿಯಾಗ ಕೆಲಸಕ್ಕೆಂದು ಹೋಗುವ ಸುಭದ್ರಾ ಅತ್ತೆ ನಮ್ಮನೆ ಕಡೆ ವಾಲಿ “ಲಕ್ಕಪ್ಪಜ್ಜ ಭಾಳ ಸಿರಿಯಸ್ ಅದಾನಂತೆ ಯವ್ವಾ!”  ಅಂತ ತನ್ನ ತಾಯಿ ಅಂದ್ರೆ ನಮ್ಮಜ್ಜಿ ಸುಂದ್ರಮ್ಮಳಿಗೆ ಹೇಳಿದಳು. ಈ ಮಾತು ಕೇಳಿದ ಆಕೆಗೆ ಎದೆ ಧಸ್ಸಕೆಂದಿರಬೇಕು. ಯಾಕೇಂದ್ರೆ ನಮ್ಮ ಸಮ ವಯಸ್ಕರಿಗೆ ಅಥವಾ ನಮಗಿಂತ ಕಿರಿಯರಾದವರಿಗೆ ಹೀಗಾದಾಗ ಯಾರಾದರೂ ಎದೆ ಒಡೆದುಕೊಳ್ಳುವರೆ. ಆಕೆ ಒಮ್ಮೆಲೆ ಚಕಿತಗೊಂಡು ಕೇಳಿದಳು.

“ಏನು ? ಏನಾಗಿದೆ ? ನಿನ್ನೆ ಚೆನ್ನಾಗಿಯೇ ಮಾತಾಡಿದನಲ್ಲ?”

“ಏನೋ ಯವ್ವಾ ! ಗ್ಯಾರಂಟಿ ಇಲ್ವಂತೆ. ಈಗಲೋ ಆಗಲೋ ! ಅನ್ನುವಂತಿದ್ದಾನೆ ” ಅಂತ ಜನ ಮಾತಾಡತ್ತಿದ್ದಾರೆ” ಪಾಪ ! ಮುದ್ಕಿ ಸತ್ತು ಇನ್ನೂ ಒಂದ ತಿಂಗಳು ಆಗಿಲ್ಲ ಈಗ ಅವ್ನಿಗೂ ಹಿಂಗಾಯ್ತೆ ? ದೇವರು ಕೊನೆಯ ಘಳಿಗೆಯಲ್ಲಿ ನೋಡಿಕೊಳ್ಳಲಿಕ್ಕೆ ಒಬ್ಬ ಮಗನಾದ್ರೂ ಕರುಣಿಸಲಿಲ್ಲ.” ಅಂತ ಕನಿಕರ ವ್ಯಕ್ತಪಡಿಸಿದಳು.

“ ದೈವದಲ್ಲಿ ಮಕ್ಕಳು ಇಲ್ಲದರೇನಂತೆ ಆ ದೇವು ಮಗನ ತರಾನೆ ಎಲ್ಲ ಸೇವಾ ಮಾಡ್ಲಾತನಲ್ಲಾ ? ಆ ಲಕ್ಕವ್ವಗ ಏನ್ ತ್ವಾಡೆ ಸೇವಾ ಮಾಡಿದ್ನಾ? ಹೆತ್ತ ತಾಯಿಗಿಂತ ಚಂದ ವ್ಯವಸ್ಥೆ ಮಾಡಿ ಆಕಿನ ಸಂಸ್ಕಾರ ಮಾಡಿದ. ಈಗ ಈ ಮುದುಕನಿಗೂ ಅವನೇ ಎದಿರ ನಿಂತು ಹೆಲಾ- ಉಚ್ಚಿ ಬಳಿಯೋ ಕೆಲ್ಸ ಮಾಡ್ತಿದ್ದಾನೆ. ಪಾಪ ! ಅವ್ನ ಹೆಂಡ್ತಿ ಪಾರವ್ವನೂ ತನ್ ತಂದಿ ಸೇವಾ ಮಾಡ್ಲಿಲ್ಲ. ಈ ಮುದುಕನಿಗೆ ಎಲ್ಲಾ ವ್ಯವಸ್ಥಾ ಮಾಡ್ಲಾತ್ತಾಳ. ಮತ್ ಅವ್ನಿಗಿ ಹೊತ್ತ ಹೊತ್ತಿಗಿ ಅನ್ನ ನೀರಿನ ವ್ಯವಸ್ಥಾನು ಆಕಿನೆ ಎಲ್ಲಾ ಕೆಲ್ಸ ಬಿಟ್ಟು ಅವ್ನ ಮುಂದ ಕುಂತಾಳಂತ ”

“ಮಾಡ್ತಾರ, ಮಾಡ್ತಾರ, ಎಲ್ಲಾ ಅವು ನಾಟಕ ಕಣಮ್ಮಿ. ಆ ಮುದುಕನ ಆಸ್ತಿ ಹೊಡಿಲಕ್ ಮತ್ ಜನರ ಕಣ್ಣ ಕಟ್ಟಲಿಕ ಈ ರೀತಿ ಅವ್ರು ಪಾತ್ರ ಧಾರಿಯಾಗಿದ್ದಾರೆ ಅಷ್ಟೇ. ಅವ್ರು ಚೊಲೋ ಸೇವಾ ಮಾಡಿದ್ರೆ ಆ ಮುದ್ಕಿ ಯಾಕ್ ಅಷ್ಟು ಬೇಗ ಸಾಯಿತ್ತಿದ್ಳು ? ಇವ್ರು ನಾವೂ ಸೇವಾ ಮಾಡ್ತಿವಿ ಅಂದ ಮ್ಯಾಗೆ ಆಕಿ ಹಾಸಿಗಿ ಹಿಡಿದವಳು ಮ್ಯಾಲ್ ಏಳಲೇ ಇಲ್ಲ. ಈಗ ಈ ಮುದುಕನೋ ! ದೇವರೆ ಗತಿ! ” ಅಂತ ಪಕ್ಕದ ಮನೆಯ ಗುಂಡಜ್ಜಿ ಅತ್ತೆಯ ಮಾತಿಗೆ ದನಿಗೂಡಿಸಿದಳು.

“ ಆಸ್ತಿ ತಿಂದ್ರೂ ತಿನ್ನಲಿ ಬಿಡವ್ವ, ಅಟಾದ್ರೂ ಮಾಡ್ತಿದ್ದಾನಲ್ಲ. ಯಾರ್ ಮಾಡ್ತಾರೆ ಈ ಕಾಲದಾಗ ? ಮನೆಯಲ್ಲಿರೋ ನಮ್ ಮಕ್ಳೆ ಒಂದ್ ತುಂಬಿದ ತಂಬಿಗಿ ತಂದ ಕೊಡಲ್ಲ. ಅಂತದ್ರಲ್ಲಿ ಇನ್ನೂ ಅವಾ ಮಾಡ್ತಿದ್ದಾನೆ ಅಂದ್ರೆ ಅವನೇ ಚೋಲೊ.” ಅಂತ ಅತ್ತೆ ಆಕೆಯ ಮಾತು ಮುಂದುವರೆಯಲು ಬಿಡಲಿಲ್ಲ.

ಲಕ್ಕಜ್ಜ ಮತ್ತು ಲಕ್ಕಜ್ಜಿಯವರಿಗೆ ಮಕ್ಕಳಿಲ್ಲದ್ದರಿಂದ ಅವರು ಒಂದಿನನೂ ‘ಬಂಜೆ’ ಅನ್ನೊ ಕೊರಗಿನಲ್ಲಿ ಇದ್ದವರಲ್ಲ. ಅವರು ಇತರರ ಮಕ್ಕಳಿಗೆ ತುಂಬಾ ಪ್ರೀತಿಯಿಂದ ಕಾಣ್ತಿದ್ದರು. ಓಣಿಯ ಮಕ್ಳು ಅವರಿಗೆ ಹೊತ್ತು ಹೊದ್ರೆ ಸಾಕು ‘ಅಜ್ಜ ಕತೆ ಹೇಳು’ ಅಂತ ದುಂಬಾಲು ಬಿಳ್ತಿದ್ದರು. ಅವರು ಒಂದೊಂದು ದಿನ ಒಬ್ಬೊಬ್ಬರು ತರಗತಿಯಲ್ಲಿ ಶಿಕ್ಷಕರು ಪಾಠ ಹೇಳಿದಂತೆ ದಿನಾ ಒಬ್ಬರು ಒಂದೊಂದು ಕತೆ ಹೇಳೋದು ಹಾಡು ಹಾಡೊದು ಮುಪ್ಪಿನ ಕಾಲದಲ್ಲಿ ಮಕ್ಕಳಂತೆ ಮಕ್ಕಳಾಗಿ ಇದ್ದು ಮನರಂಜನೆ ನೀಡಿದ್ದರು. ಮಕ್ಳು ಅವರಿಗೆ “ಲಕ್ಕು ನೀನೇ ಲಕ್ಕಿ, ಕಣಪ್ಪೋ” ಅಂತ ಅನ್ನೋದು ಮತ್ತು ಅವರು ಒಮ್ಮೊಮ್ಮೆ ಕತೆ ಹೇಳಲು ಬೆಸರಿಸಿದಾಗ “ಲಕ್ಕು ಲಕ್ಕಿ, ಲಕ್ಕು ಲಕ್ಕಿ” ಅಂತ ಛೇಡಿಸುತ್ತಾ ಓಡಿ ಹೋಗೋದು ಮಾಡ್ತಾ ಇದ್ರು. ಆದ್ರೂ ಮಕ್ಳ ಮಾತಿಗೆ ಬರಿ ನಗ್ತಿದ್ದರೆ ಹೊರೆತು ಯಾವ ಮಕ್ಕಳಿಗೂ ಒಮ್ಮೆಯಾದ್ರೂ ಬೈದು ಒಂದೆಟು ಹೊಡೆದವರಲ್ಲ.

ಇತ್ತಿತ್ತಲಾಗಿ ವಯಸ್ಸಾಗುತ್ತಿದ್ದಂತೆ ಈ ಮುಪ್ಪಿನ ಕಾಲದಲ್ಲಿ ದಿನಾ ಒಂದೊಂದು ಕಾಯಿಲೆಗೆ ಒಳಗಾಗಿ ಹಾಸಿಗೆ ಹಿಡಿಯುತ್ತಾ ನರಳುತ್ತಿದ್ದರಿಂದ ಅರಿತ ಮಕ್ಕಳು ಇವರ ಮನೆ ಕಡೆಗೆ ಸುಳಿಯುವುದು ಕಡಿಮೆಯಾಗಿತ್ತು. ಈ ವಯೋ ವೃದ್ಧರ ಮುಪ್ಪಿನ ಕಾಲಕ್ಕೆ ಯಾರು ಸಹಾಯಕ್ಕೆ ಇಲ್ಲದಿದ್ದಾಗ ಅವರಿಗೆ “ಮಕ್ಕಳಿಂದಲ್ಲೇ ಸದ್ಗತಿ ಪ್ರಾಪ್ತಿ “ಅನ್ನೋ ಮಾತು ಖರೆ ಅದಾ ಅನಿಸಿತ್ತು. ಆದ್ರೆ ಬೇರೆ ಯಾರನಾದ್ರೂ ತನ್ ಮಕ್ಕಳಂಗ ನೋಡಿಕೊಂಡ್ರೆ ಸಾಕು ಅಂತ ದೇವುನ ತುಂಬಾ ಹಚ್ಚಿಕೊಂಡಿದ್ರು. ಈ ದೇವು ಬೇರೆ ಕುಟುಂಬದವನಾದರೂ ಲಕ್ಕಜ್ಜನಿಗೆ ‘ಕಾಕ’ ಅಂತಲೆ ಕರೆಯುತ್ತಿದ್ದ. ಇವನೂ ಅವನಿಗೆ ‘ಮಗಾ’ ಅಂತ ತುಂಬಾ ಪ್ರೀತಿಲೆ ಕರೆಯುತ್ತಿದ್ದನು. ದೇವುನೂ ಕೂಡ ಮಗನಂತೆ ಸಣ್ಣ ಪುಟ್ಟ ಸಹಾಯ ಮಾಡ್ತಾ ಬಂದಿದ್ದ. ಪೂನಾ ಬಾಂಬೆಗೆ ಹೋಗಿ ಮಿಸ್ತ್ರಿ ಕೆಲ್ಸ ಮಾಡ್ತಿದ್ದ ದೇವುನ ಕೈಯಲ್ಲಿ ಸಾಕಷ್ಟು ರೊಕ್ಕ ಓಡಾಡ್ತಾ ಇರೋದರಿಂದ ಅವಾ ಬಾಂಬೆಯಿಂದ ಬಂದಾಗ ಈ ಮುದುಕಾ-ಮುದುಕಿಗೆ ಒಂದಿಷ್ಟು ಖರ್ಚಿಗೆ ಅಂತ ರೊಕ್ಕ ಕೊಡೊದು ಮತ್ತೆ ಅವರಿಗೆ ಉಡೋಕೆ ಬಟ್ಟೆ-ಬರೆ ತಂದು ಕೊಡೋದು ಬೇಕಾದಾಗ ಜೋಳ ಬ್ಯಾಳಿ ತಂದು ಕೊಡೊದು ಮಾಡ್ತಿದ್ದನಲ್ಲದೆ ಅವರ ಜೊತೆ ಕಷ್ಟ ಸುಖದ ಮಾತಾಡ್ತಾ ಥೇಟ್ ಹ್ವಾಟ್ಯಾಗ ಹುಟ್ಟಿದ ಮಗನಂತೆ ನೋಡಿಕೊಳ್ಳು ತ್ತಿದ್ದರಿಂದ ಆ ಹಣ್ಣು ಜೀವಗಳು ಸ್ವಲ್ಪ ನೆಮ್ಮದಿಯ ಉಸಿರಾಡುತ್ತಿದ್ದವು.

“ಮಗಾ, ದೇವು ! ನೀ ನಮ್ ಹ್ವಾಟ್ಯಾಗ ಹುಟ್ಟದಿದ್ರೂ ಪರವಾಗಿಲ್ಲ. ಹೆತ್ತ ಮಗನಗಿಂತ ಹೆಚ್ಚಿಗಿ ನಾವ್ ನಿನ್ ನಂಬಿಕೊಂಡಿದ್ವಿ. ಮುಪ್ಪಿನ ಕಾಲದಲ್ಲಿ ನಮ್ಮನ್ನು ಕೈ ಬಿಡಬೇಡಪ್ಪಾ ಬೇಕಾದ್ರೆ ನನ್ನ ಆಸ್ತಿಯೆಲ್ಲ ನಿನ್ ಹೆಸರಿಗೆ ಬರೆದು ಕೊಡ್ತೆನೆ. ಜೀವ ಇರೋವರೆಗೂ ಎರಡು ಹೊತ್ತು ಗಂಜಿನಾದ್ರೂ ಹಾಕಿ ಪುಣ್ಯ ಕಟ್ಟಿಕೋ ಸಾಕು ” ಎಂದಿದ್ದ.

“ಆಯ್ತು ಬಿಡೋ ನಿನ್ ವ್ವನ್ ! ನೀ ಯೇನ್ ಬ್ಯಾರೆ ಇದ್ದಿಯೇನು ? ನಾ ನಿಂಗೆ ಏನ್ ಬೇಕು ಎಲ್ಲಾ ವ್ಯವಸ್ಥಾ ಮಾಡ್ತಿನಿ ನೀ ಸುಮ್ನಿರು. ಮತ್ತೆ ನಿಂಗೆ ಹಗಲು – ರಾತ್ರಿ ಮಗಾ ಸೊಸೆ ತರಾ ನಾ ನನ್ ಹೆಂಡ್ತಿ ನಿನ್ ಮನೆಯಲ್ಲೆ ಉಳಿದು ನಿಮ್ಮಿಬ್ಬರ ಆರೈಕೆ ಮಾಡ್ತಿವಿ” ಅಂತ ಹೇಳಿ ತನ್ನ ಹೆಂಡ್ತಿ ಮಕ್ಳು ಸಮೇತ ಆ ಮುರುಕಲು ಮನೆಯಲ್ಲಿ ಮುದುಕರಿಗೆ ಆಸರೆಯಾಗಿ ನಿಂತು ಜೀವನ ಮಾಡತೊಡಗಿದರು. ಯಾವಾಗ್ಲೂ ಇಬ್ರೆ ಇರುತ್ತಿದ್ದ ಆ ಮನೆಯಲ್ಲಿ ದೇವು ಅವ್ನ ಹೆಂಡ್ತಿ ಮತ್ತು ಅವನ ಐದಾರು ಮಕ್ಳು ಮನೆ ತುಂಬ ತುಂಬಿರುವುದರಿಂದ ಅವರಿಗೆ ಜೀವನದಲ್ಲಿ ಅಂತು ಮಕ್ಳು ಮೊಮ್ಮಕ್ಕಳ ಭಾಗ್ಯ ಕಂಡಷ್ಟು ಖುಷಿಯಾಗಿತ್ತು. ಮನೆ ತುಂಬ ಓಡಾಡ್ತಾ ಇರೋ ಮಕ್ಳು ಎಲ್ಲ ಕೆಲ್ಸ ಮಾಡ್ತಿದ್ದ ದೇವುನ ಹೆಂಡ್ತಿ ಪಾರಮ್ಮ ಬಂದಾಗಿನಿಂದ ‘ಲಕ್ಕಜ್ಜಿ’ ಅತ್ತೆ ತರಹ ಏನೂ ಮಾಡದೆ ಸುಮ್ಮನೆ ಹಾಸಿಗೆಯಲ್ಲೆ ಆರಾಮ ಮಲಗ ತೊಡಗಿದಳು. ಹೀಗೆ ಮಲಗುತ್ತಾ ಮಲಗುತ್ತಿದ್ದಂತೆ ಕೆಲ ದಿನಗಳಲ್ಲಿ ಲಕ್ಕಜ್ಜಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದು ಮಲಗಿದಲ್ಲೆ ಒಂದಿನ ಇಹಲೋಕ ತ್ಯೇಜಿಸಿದಳು. ಅವಳು ಸತ್ತು ಇನ್ನೂ ಒಂದು ತಿಂಗಳು ಕಳೆದಿಲ್ಲಾ ಈಗ ಅಜ್ಜ ನೆಲ ಹಿಡಿದಿದ್ದಾನೆ.

ಪಾಪ ಅಜ್ಜಿಯ ಮೇಲೆ ತುಂಬ ಜೀವ. ಮುಪ್ಪಾನು ಮುಪ್ಪಾದ್ರೂ ಕೂಡ ಮುದುಕಿನ ಬಿಟ್ಟು ಒಂದಿನಾನು ಬ್ಯಾರೆ ಕಡೆ ಮಲಗಿದವನಲ್ಲ. ವಯಸ್ಸು ತೊಂಬತ್ತು ದಾಟಿದ್ರೂ ಇಬ್ರೂ ಆ ಜೋಳಿಗೆಯಂತ ಹೊರಸಿನಲ್ಲಿ ಉಯ್ಯಾಲೆ ತರಹ ಒಬ್ಬರನೊಬ್ಬರು ಪ್ರೀತಿಲೆ ಅರಮನೆಯ ಸುಖ ಅನುಭವಿ ಸಿದವರು. ಈಗ ಅಜ್ಜನಿಗೆ ಅವಳಿಲ್ಲದ ದಿನಗಳು ಬಹಳ ಕಷ್ಟಕರವಾದಂತೆ ಭಾರವಾಗ ತೊಡಗಿದವು. ಎಲ್ಲ ಹಳೆ ನೆನಪುಗಳು ಮತ್ತೆ ಮತ್ತೆ ಮರುಕಳಿಸಿ ಮನಸ್ಸು ಅದ್ಯಾಕೋ ಭಾರವಾಗಿ ದೇಹವೆಲ್ಲ ನೆಲಕ್ಕೆ ಒರಗಿಸಿತ್ತು. ಈಗ ಆತನಿಗೆ ಶಕ್ತಿಯಲ್ಲ ಉಡುಗಿದಂತಾಗಿ ಆಕೆಯ ಕುದಿಯಲ್ಲೆ ಹಾಸಿಗೆ ಹಿಡಿದಿದ್ದ.

“ ನೀರು ! ಅಬ್ಬಾ ! ಒಂದ್ ಗಿಲಾಸ್ ನೀರ್ ಕೊಡೋ ! ” ಅಂತ ಕೊಯ್ ಕೊಯ್ ಕೆಮ್ಮುತಾ ಉಬ್ಬಸ ಬಂದಿರುವುದ ರಿಂದ ಮಲಗಿದ ಹೊರಸಿನ ಮೇಲೆ ಮಗ್ಗಲು ಹೊರಳಿ ಕ್ಯಾಕರಿಸಿ ‘ಥೂ ! ’ ಅಂತ ಗಂಟಲಲ್ಲಿ ಜಮಾ ಆದ ‘ಕಫ್’ ಉಗುಳಿದ ಉಬ್ಬಸದಿಂದ ಉಸಿರಾಟ ತೀವ್ರವಾಗಿದ್ದರಿಂದ ಒಂದೇ ಸವನೇ ತೇಕತೊಡಗಿದ.

“ಹ್ಞಾ ! ನೀರು ! ನೀರು ! ” ಅಂತ ಕೆಳಗೆ ತಲೆಬಾಗಿ ಹೊರಸಿನ ಕಾಲಡಿ ಕೈಯಾಡಿಸುತ್ತಾ ನೀರಿಗಾಗಿ ಚಡಪಡಿ ಸುತ್ತಿದ್ದನ್ನು ನೋಡಿದ ದೇವು “ ಕಾಕ ! ನೀರು ತಗೋ ” ಅಂತ ಅಲ್ಲೆ ಹೊರಸಿನ ಕೆಳಗೆ ನೆಲದ ಮೇಲೆ ಮಲಗಿದ ಆತ ಒಂದು ಗಿಲಾಸ್ ನೀರು ತಂದು ಕುಡಿಸಿದ. ನೀರು ಕುಡಿದಾದ ಮೇಲೆ ತುಸು ಉಸಿರಾಟ ನಿಧಾನವಾದ್ದರಿಂದ ಸಮಾಧಾನ ತಂದುಕೊಂಡು ಮೊದಲಿನ ಉಸಿರಾಟದ ಸ್ಥಿತಿಗೆ ಬಂದಿದ್ದ.

“ ಮಗಾ ದೇವು ನೀನು ನಿಜವಾಗ್ಲು ನಮ್ಮ ಪಾಲಿನ ದೇವ್ರು ಕಣಪ್ಪ. ನಮ್ ಕಷ್ಟದ ಕಾಲಕ್ಕೆ ಆ ದೇವರೆ ನಿನ್ನನ್ನು ಸೃಷ್ಟಿ ಮಾಡಿ ಕಳಿಸಿದಂತೆ ಕಾಣ್ತದೆ. ಆ ದೇವ್ರು ನಿನಗೆ ಚನ್ನಾಗಿಟ್ಟಿರಲಿ, ಮಕ್ಕಳಿಲ್ಲದ ಈ ಜೀವಕ್ಕೆ ಕೊನೆ ಘಳಿಗೆಯಲ್ಲಿ ಮಗನಂತೆ ದಿನಾ ನೂರಾರು ರುಪೈ ಗಳಿಸೊ ಕೆಲ್ಸ ಬಿಟ್ಟು ನಮ್ಮ ಸೇವಾ ಮಾಡ್ತಾ ಇದ್ದಿಯಾ. ಮುದ್ಕಿ ಸತ್ತಾಗಲೂ ಹೆತ್ತ ಮಗನಂತೆ ಸಂಸ್ಕಾರ ಮಾಡಿದ್ದಿ. ನಂಗೂ ಇಷ್ಟೊಂದು ಸೇವೆ ಮಾಡ್ತಾ ಇದ್ದಿಯಾ ಆ ದೇವರು ನಿನ್ ಹೆಂಡ್ತಿ ಮಕ್ಕಳಿಗೆ ಚಂದಾಗಿ ಇಟ್ಟಿರಲಪ್ಪಾ” ಅಂತ ಲಕ್ಕಜ್ಜ ಮಲಗಿದಲ್ಲೆ ಕಣ್ಣೀರು ಹಾಕಿದ.

“ ಯಾಕಳ್ತಿ ಕಾಕ ! ನನ್ನನ್ನು ನಿನ್ ಮಗನಂತೆ ತಿಳಿದುಕೋ ! ನಾ ನಿನ್ ಹ್ವಾಟ್ಯಾಗ್ ಹುಟ್ಟದಿದ್ರೆ ಏನಂತೆ ? ಯಾಕ್ ಹಾಂಗೆಲ್ಲ ಮಾತಾಡ್ತಾ ಇದ್ದಿ ? ನಾ ನಿಂಗೆ ಯಾವುದ್ರಲ್ಲಿ ಕಮ್ಮಿ ಮಾಡಿದ್ದಿನಿ ? ನೀ ಕುದಿ ಮಾಡಬ್ಯಾಡ ಚನ್ನಾಗಿ ಕಣ್ತುಂಬ ನಿದ್ದಿ ಮಾಡಿ ಆರಾಮವಾಗಿರು. ಹೂಂ ಈಕಾ ಮಲಕ್ಕೋ! ” ಅಂತ ದೇವು ಅಜ್ಜನಿಗೆ ಮೈ ತುಂಬ ಹೊದಿಸಿ ಮಲಗಿಸಿದ.

ದೇವು ಈ ಮುದುಕ ಮುದುಕಿಯ ಸೇವೆ ಮಾಡ್ಲಾಕ್ ನಿಂತ್ತು ಐದಾರು ತಿಂಗ್ಳು ಆಗಿರಬೇಕು. ಕೆಲ ತಿಂಗ್ಳ ಹಿಂದೆ ಮುದುಕಿ ಏಕಾ ಏಕಿ ಹಾಸಿಗಿ ಹಿಡಿದು ಒಂದೆರಡು ತಿಂಗಳು ಉಪಚಾರ ಮಾಡಿಸಿ ಕೊಂಡಿದಳು ಅಷ್ಟೇ.
“ಮಗಾ, ದೇವು ನಾ ಸತ್ತ ಮ್ಯಾಲೆ ಈ ಮನೆ ನಿನ್ ಹೆಸ್ರಿಗೆ ಮಾಡಿಕೋ ! ಬೇಕಾದ್ರೆ ಛಾಪಾ ಕಾಗ್ದ ತಗೊಂಡು ಬಾ ನಾ ಈಗಲೇ ನಿನ್ ಹೆಸ್ರಿಗಿ ಬರೆದು ಕೊಡ್ತಿನಿ. ಕೊನೆಗಾಲದಲ್ಲಿ ಈ ಅನಾಥ ಜೀವಗಳಿಗೆ ಇಷ್ಟು ಚಂದಾಗಿ ನೋಡಿ ಕೋಳ್ತಾ ಇದ್ದಿಯ. ನಿನ್ ಉಪಕಾರ ನಾನೆಂದು ಮರೆಯೊಲ್ಲ. ಸತ್ತು ಸ್ವರ್ಗ ನರಕ ಅಂತ ಒಂದಿದ್ರೆ ಅಲ್ಲೂ ನಿನ್ ನೆಂಪು ಮಾಡಿಕೊಳ್ತಿನಿ” ಅಂತ ಲಕ್ಕಜ್ಜ ಏನೇನೋ ಬಡಬಡಿಸುತ್ತಿದ್ದಂತೆ ದೇವುಗೆ ಈಗೀಗ ಆತನ ಆಸ್ತಿಯ ಮೇಲೆ ಅದ್ಯಾಕೋ ಆಸೆಯ ಮೋಹದ ಚಿಗುರು ಮೂಡ ತೊಡಗಿತ್ತು. ಅಜ್ಜನ ಮನೆ ಮತ್ತು ಆ ನಾಲ್ಕು ಎಕರೆ ಭೂಮಿ. ತನ್ನ ಹೆಸರಿಗೆ ಬರೆಸಿಕೊಳ್ಳಬೇಕು” ಅಂತ ದೇವು ನಿರ್ಧರಿಸಿದ. ಆದ್ರೆ ಅಜ್ಜಗೆ ಇರೋದು 30×40 ಸೈಜಿನ ಒಂದು ಹಳ್ಳಿಯ ಮನೆ ಮಾತ್ರ. ಆದ್ರೆ ಆ ನಾಲ್ಕು ಎಕರೆ ಕರಿಯ ಭೂಮಿ ಗೌಡ್ರ ಸಿದ್ದಪ್ಪನಿಂದ ಈತನಿಗೆ ಬಂದಿದ್ದು. ಮಕ್ಕಳಿಲ್ಲದ ಈತನಿಗೆ ವಯಸ್ಸಾದ ಕಾಲದಲ್ಲಿ ಬದುಕಿಗೆ ಆಸರೆಯಾಗಲೆಂದು ಕೊಟ್ಟಿದ. ಕೊಡುವಾಗ ಒಂದು ಮಾತು ಕೂಡ ಹೇಳಿದ್ದ.

“ನೋಡು ಲಕ್ಕು! ನೀ ನಮ್ ಮನೆ ಮತ್ತು ಹೊಲದಲ್ಲಿ ಭಾಳ ದಿನಗಳಿಂದ ಜೀವ ಸವೆಸಿದ್ದಿಯ ನಿನಗೀಗ ವಯಸ್ಸಾಗ್ತಾ ಇದೆ. ಈ ಇಳಿ ವಯಸಲ್ಲೂ ದುಡಿಯುವುದು ಕಷ್ಟ. ನೀನೀಗ ನಮ್ಮನೆಯಲ್ಲಿ ದುಡಿಯುವುದು ಬೇಡ. ಮನೆಯಲ್ಲಿ ಆರಾಮಾಗಿ ಇದ್ದು ಬಿಡು ” ಎಂದಾಗ

“ಗೌಡ್ರೆ! ದುಡಿಯುವುದು ಬೇಡ ಅಂದ್ರೆ ನಮ್ಮ ಹ್ವಾಟ್ಟೆ ಗತಿ? ನಾವ್ ಹೇಗ್ ಬದುಕೊದು? ಕೆಲ್ಸದಿಂದ ಮಾತ್ರ ತೆಗಿಯ ಬೇಡಿ ನನ್ ಕೈಕಾಲಲ್ಲಿ ಇನ್ನೂ ಶಕ್ತಿ ಇದೆ. ಸಾಯುವವರೆಗೂ ನಿಮ್ಮ ಜೀತಗಾರನಾಗಿಯೇ ದುಡಿಯುತ್ತೆನೆ”

“ ಬೇಡ ಲಕ್ಕು. ಇಷ್ಟು ದಿನ ದುಡಿದದ್ದೆ ಸಾಕು. ನೀವಿನ್ನು ಆರಾಮವಾಗಿ ಇರಿ. ದೇವರು ನಿಮಗೆ ಒಳ್ಳೆಯದು ಮಾಡಲಿ. ಹ್ಞಾ ! ನೀನೇನು ಬದುಕುವುದಕೆ, ಕುದಿ ಮಾಡಬ್ಯಾಡ. ಇಷ್ಟು ದಿನ ದುಡಿದದ್ದಕೆ, ನಿಮ್ಮಿಬ್ಬರ ಜೀವಮಾನ ಇರೋವರೆಗೂ ನಮ್ಮ ಗದ್ದೆಯ ಮೇಲ್ಬಾಗದ 4 ಎಕರೆ ಕಪ್ಪು ಭೂಮಿ ಉಣಲು ಕೊಡುತ್ತೇನೆ. ನಿನಗೆ ಉತ್ತಿ ಬೆಳೆಯೊದು ಕಷ್ಟವಾದ್ರೆ ನಮ್ಮೆತ್ತು ಆಳುಗಳಿಗೆ ಬಳಸಿ ಉಳುಮೆ ಮಾಡಿಕ್ಕೋ ! ಬದುಕಿರುವರೆಗೆ ಗಂಜಿಗೆ ಆಸರೆಯಾಗುತ್ತದೆ. ಅಷ್ಟೇಯಲ್ಲದೆ ವಯಸ್ಸಾಗಿರುವ ನಿಮ್ಮಿಬ್ಬರಿಗೆ ಆ ತಲಾಟಿಗೆ ಹೇಳಿ ಸರ್ಕಾರದಿಂದ ಬರೋ ತಿಂಗಳಿಗೆ ರೊಕ್ಕ ಮಾಡಿಸಿದ್ದಿನಿ. ಅವು ಪೊಸ್ಟ ಮೂಲಕ ಬರ‍್ತಾವೆ ತಗೊಂಡು ಸುಖವಾಗಿರಿ”. ಎಂದಾಗ ಲಕ್ಕಪ್ಪನ ಕಣ್ಣಲ್ಲಿ ನೀರು ಉಕ್ಕಿದವು. “ಗೌಡ್ರೆ ನೀವು ನನ್ ಮೇಲಿಟ್ಟಿರುವ ಈ ಪ್ರೀತಿ ಕನಿಕರಕ್ಕೆ ನಾ ಸೋತು ಹೋದೆ. ನಿಮ್ಮ ಋಣ ನಾ ಹೇಗೆ ತಿರಿಸಲಿ? ”.

“ನಾ ಕೊಟ್ಟಿರುವ ಈ ಹೊಲ ಮುಪ್ಪಿನ ಕಾಲದಲ್ಲಿ ಪರರಿಗೆ ಭಾರವಾಗಿ ಅದು ಪರಭಾರೆ ಮಾಡದೆ ಇರೋವಷ್ಟು ದಿನ ಉಂಡು ಕೊನೆಯಲ್ಲಿ ಹಾಗೆ ಉಳಿಸಿ ಹೋದ್ರೆ ಸಾಕು. ಅದೇ ನೀನು ಋಣ ತೀರಿಸಿದಂತೆ” ಅಂತ ಹೇಳಿದ.

“ ಆಯ್ತು ಗೌಡ್ರೆ. ಹಾಗೆ ಆಗಲಿ, ನಾ ನಿಮ್ಮ ಹೊಲ ಬೇರೆಯವರ ಪಾಲಾಗಲು ಬಿಡುವುದಿಲ್ಲ” ಅಂತ ಮಾತು ಕೊಟ್ಟಿದ. ಆದ್ರೆ ದೇವು ಈಗ ಆ ಹೊಲ ತನ್ನ ಹೆಸರಿಗೆ ಮಾಡಿಕೊಳ್ಳುವ ಸಂಚು ಒಳಗೊಳಗೆ ರೂಪಿಸಿಕೊಳ್ಳುತ್ತಲೆ ಇದ್ದ. ಅದೇ ಸಮಯದಲ್ಲಿ ದೇವರಾಜ ಅರಸು ಮುಖ್ಯ ಮಂತ್ರಿಯಾಗಿದ್ದಾಗ ಭೂ ಸುಧಾರಣೆ ಕಾಯ್ದೆಯಡಿಯಲ್ಲಿ ‘ಉಳುವವನೆ ಭೂಮಿಯ ಒಡೆಯ” ಎಂಬ ಯೋಜನೆ ಜಾರಿಗೆ ತಂದಿದ್ದರು. ಅಂದ್ರೆ ಭೂಮಿ ಯಾರು ಊಳುತ್ತಿದ್ದಾರೋ ಅವರೆ ಅದರ ಒಡೆಯರು. ಈ ಯೋಜನೆಯಿಂದ ಸಾಕಷ್ಟು ಆಸ್ತಿ ಮಾಡಿದ ಶ್ರೀಮಂತ ವರ್ಗದವರ ಹೊಲಗಳು ದಲಿತರಿಗೆ ವರ್ಗಾವಣೆಯಾಗಿದ್ದವು. ಇದನ್ನು ಅರಿತ ದೇವು ಹೇಗಾದ್ರೂ ಮಾಡಿ ಆ ನಾಲ್ಕು ಎಕರೆ ಭೂಮಿ ಲಕ್ಕಪ್ಪ ಕಾಕನ ಹೆಸರಿಗೆ ವರ್ಗಾವಣೆ ಮಾಡಿಸಬೇಕು ಅಂತ ಇಲ್ಲದೊಂದು ಕರಾಮತ್ತು ಮಾಡಿ ತಹಸಿಲ್ ಕಛೇರಿಯಲ್ಲಿ ತಿರುಗಾಡಿ ಒಂದಿಷ್ಟು ಒಳಗೊಳಗೆ ಲಂಚಿಕೊಟ್ಟು ದಲ್ಲಾಳಿಗಳ ಮೂಲಕ ಅದು ಲಕ್ಕಜ್ಜನ ಹೆಸರಿಗೆ ಸೇರಿಸಿದ. ಯಾಕೆಂದ್ರೆ ಈಗ ಅಜ್ಜನ ಆಸ್ತಿಗೆ ಉತ್ತರಾಧಿಕಾರಿಯಾಗುತ್ತಿದ್ದರಿಂದ ಅದು ಈ ಮೂಲಕ ತಾನಾಗಿಯೆ ಬರುತ್ತದೆ ಅನ್ನೋ ಕಲ್ಪನೆ ಆತನದಾಗಿತ್ತು. ಸಿದ್ದಪ್ಪ ಗೌಡ್ರ ಹೆಸರಿನಲ್ಲಿದ ಆ ಹೊಲ ಲಕ್ಕಪ್ಪನೆ ಉಳುತ್ತಿದ್ದಾನೆ. ಅನ್ನೋ ಕಾರಣಕ್ಕೆ ಅದು ಸರಳವಾಗಿ ಅವನ ಹೆಸರಿಗೆ ವರ್ಗಾವಣೆಯಾಗಿತ್ತು. ಅಂದಿನಿAದ ದೇವುಗೆ ಆ ಮನೆ ಜೊತೆ ಈ ನಾಕ ಎಕ್ರೆ ಭೂಮಿ ಕೂಡ ತನ್ನದಾಗುತ್ತದೆ ಅಂತ ಅಂದುಕೊAಡಿದ್ದ. ಅದು ಫಿವರ್ ಕರಿಭೂಮಿ ತನ್ ಅಜ್ಜ ಮುತ್ತಜನ ಕಾಲದಿಂದಲೂ ಇಂತಹ ಭೂಮಿ ಕಾಣದೆ ಇದ್ದ ಆತನಿಗೆ ಆ ಭೂಮಿ ಬರೋ ವಿಷಯ ಹೆಂಡ್ತಿ ಮಕ್ಕಳಿಗೆ ಹೇಳಿದ್ದರಿಂದ ಅವರೆಲ್ಲ ಅಜ್ಜನ ಯೋಗಕ್ಷೇಮದ ಬಗ್ಗೆ ಕಿಂಚಿತ್ತು ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳತೊಡಗಿದ್ದರು. ಅಜ್ಜ ಮಾತ್ರ ಈಗಲೋ ಆಗಲೋ ! ಅನ್ನೋ ಮಾತು ಊರಲೆಲ್ಲ ಗುಲ್ಲೆದಿದ್ದರಿಂದ ಜನ ಎಡತ್ತಾಕ ತೊಡಗಿದರು. ಊರ ಜನರೆಲ್ಲ ಒಬ್ಬೊಬ್ಬರು ಮುಂಜಾನೆಯಿಂದ ಸಂಜೆಯೆವರೆಗೆ ಬಂದು ನೋಡಿಕೊಂಡು ಮಾತಾಡಿ ಹೋಗುತ್ತಿದ್ದರು. ದೇವು ಅಜ್ಜನ ಆಸ್ತಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಕೊಂಡ್ರು, ಜನ ಪುರಸೊತ್ತಿಲ್ಲದೆ ಬರುತ್ತಲೆ ಇದ್ದರು. ಮುಂಜಾನೆಯಿಂದ ಛಾಪಾ ಕಾಗದ ಕೈಯಲ್ಲೆ ಹಿಡಿದುಕೊಂಡು ಜನ ದೂರ ಸರಿದು ಹೋಗುವುದನ್ನೇ ಕಾಯುತ್ತಾ ಕುಳಿತಿದ್ದ ದೇವುಗೆ ಯಾಕೋ ಜನ ದಟ್ಟಣೆ ದೂರವಾಗುವುದು ಕಾಣಲಿಲ್ಲವಾದ್ದರಿಂದ ಆ ಕಾಗದ ಮಡುಚಿ ಕಿಸೆಯಲ್ಲಿ ಇಟ್ಟುಕೊಂಡ.

ರಾತ್ರಿ ಊಟವಾದ ಮೇಲೆ ಅಜ್ಜನಿಗೆ ಹೊದಿಸಿ ಮಲಗಿಸಿದ. ಕೆಮ್ಮು ಜಾಸ್ತಿಯಾಗಿತ್ತು ಮತ್ತೆ ‘ಕೊಯಿ ಕೊಯಿ’ ಕೆಮ್ಮ ತೊಡಗಿದ. ಆಗ ದೇವು ಮತ್ತೆ ನೀರು ತಂದು ಕುಡಿಸಿದ. ಡಾಕ್ಟರು ಕೊಟ್ಟಿದ ಗುಳಿಗೆ ಸಿರಪು ಕುಡಿಸಿದ. ಸ್ವಲ್ಪ ಧಾಪು (ಉಬ್ಬಸ) ಕಡಿಮೆಯಾದಂತೆ ಎನಿಸಿತ್ತು. ಆಗ ಅಜ್ಜನೆ ದೇವುನ ಕಡೆ ಹೊರಳಿ “ಮಗಾ ದೇವು ! ಛಾಪಾ ಕಾಗದ ತಂದಿಯೇನೋ ! ನಾ ಸತ್ತ ಮೇಲೆ ನಿಂಗೆ ಮತ್ತೆ ಕಷ್ಟ ಆಗ್ತದೆ ಈಗಲೇ ಸಹಿ ಮಾಡಿಕೋ! ” ಅಂತ ಹೇಳಿದ. “ಹಾ! ತಂದಿನಿ ಕಾಕ! ” ಅಂತ ಕಿಸೆಯಲ್ಲಿನ ಆ ಕಾಗದ ತೆಗೆದು ಹೇಳಿದ. “ ಆಯ್ತು ಮಗಾ, ಆ ಕಾಗದ ಮೇಲೆ ಏನು ಬರೆದುಕೊಂಡಿದ್ದಿಯ ಓದು ” ಎಂದಾಗ
“ದಾನಪತ್ರ ” ಅಂತ ಬರೆದಿದ್ದೇನೆ ಎಂದು ಬರೆದ ಪತ್ರ ಓದಿದ. ಅದನು ತಿಳಿದು ಅಜ್ಜ ಸಹಿ ಮಾಡಿದ. ದೇವು ಅದನ್ನು ತಗೊಂಡು ಮರುದಿನ ಇಬ್ಬರ ಸಾಕ್ಷಿ ಸಮೇತ ಗ್ರಾಮ ಪಂಚಾಯತ್‌ನಲ್ಲಿ ಮೊಟೆಷನ್ ಮಾಡಿಕೊಂಡು ತಾಲೂಕಾ ಪಂಚಾಯತ ಅಧಿಕಾರಿ ಸಹಿ ಪಡೆದು ಸಬ್ ರಜಿಸ್ಟ್ರಾರ್ ಕಛೇರಿಯಲ್ಲಿ ಸರಳವಾಗಿ ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದ. ಆದ್ರೆ ಅಜ್ಜನ ಹೆಸರಿಗೆ ಸೇರ್ಪಡೆಯಾದ ಆ ನಾಕು ಎಕರೆ ಭೂಮಿ ಈಗ ಹೇಗೆ ಪಡೆಯೋದು ಅಂತ ಯೋಚಿಸುತ್ತಲೆ ಮನೆಗೆ ಬಂದಿದ್ದ. ಈ ಹೊಲದ ವಿಷಯ ಕೇಳುವುದು ಹೇಗೆ ? ಅಂತ ಯೋಚಿಸುತ್ತಾ ಸ್ವಲ್ಪ ಭಯವಾದರೂ ಧೈರ್ಯ ತಂದ್ಕೊAಡು ಕೇಳಿದ.

“ಕಾಕ, ಮನೆ ಮಾತ್ರ ರಜಿಸ್ಟರ್ ಆಯ್ತು. ಆದ್ರೆ ಹೊಲ ಹಾಗೆ ಉಳಿತು. ಅದು ಒಂದು ಸಹಿ ಮಾಡಿ ಕೊಟ್ರೆ ಎಲ್ಲ ಒಂದ ಕಡೆ ಆಗ್ತಿತ್ತು ” ಎಂದಾಗ ಈ ಮಾತು ಲಕ್ಕಜ್ಜನಿಗೆ ಬೆಸರ ತರಿಸಿತ್ತು.

“ಮಗಾ, ದೇವು ಈ ಮನೆ ಮಾತ್ರ ನಮ್ಮ ಅಪ್ಪನಿಂದ ನನಗೆ ಬಂದಿದ್ದು. ಆ ಹೊಲ ನನ್ನ ರಕ್ತ ಸಂಬಂಧದಿಂದ ಬಂದಿದ್ದಲ್ಲ. ಮತ್ತೆ ನಾನು ಸ್ವಂತ ಗಳಿಸಿ ಖರಿದಿ ಮಾಡಿದ್ದು ಅಲ್ಲ, ಅದು ಸಿದ್ದಪ್ಪಾ ಗೌಡ್ರದು, ನಾ ಅದು ಹೇಗೆ ಬರೆದು ಕೊಡಲಿ ? ಇನ್ನೊಬ್ಬರ ಆಸ್ತಿ ನಾನ್ಹೇಗೆ ಪರಭಾರೆ ಮಾಡಲಿ ? ಇದು ಇನ್ನೊಬ್ಬರಿಗೆ ಮೋಸ ಮಾಡಿದಂತಾಗುತ್ತದೆ ”

“ಕಾಕ, ಅದೀಗ ನಿನ್ನ ಹೆಸರಿನಲ್ಲಿದೆ”

“ ಇರಬಹುದು. ಅದು ನನಗೆ ಬರಿ ಉಣಲು ಮಾತ್ರ ಕೊಟ್ಟಿದ್ದು. ನಾನು ಬ್ಯಾರೆ ಯಾರಿಗೂ ಪರಭಾರೆ ಮಾಡೊದಿಲ್ಲ ಅಂತ ಗೌಡ್ರಿಗೆ ಮಾತು ಕೊಟ್ಟಿದ್ದೇನೆ’. ನಾನು ನಿಯತ್ತಿನ ಮನುಷ್ಯ. ನನ್ನ ನಿಯತ್ತಿಗೆ ಅವರು ಆ ಭೂಮಿ ಕೊಟ್ಟು ಬದುಕಲೆಂದು ಸಹಕರಿಸಿದ್ದಾರೆ. ಅಂತದ್ರಲಿ ಉಂಡ ಮನೆಗೆ ಇದು ದ್ರೋಹ ಬಗೆದಂತಾಗುತ್ತದೆ ಆ ಹೊಲದ ವಿಷಯ ಮಾತ್ರ ಕೇಳಬೇಡ. ಅದು ಗೌಡರ ಸೊತ್ತು ” ಎಂದು ಮತ್ತೆ ಉಬ್ಬಸ ಒತ್ತರಿಸಿ ಬಂದಿದ್ದರಿಂದ ‘ಕೊಯ್ ಕೊಯ್’ ಕೆಮ್ಮ ತೊಡಗಿದ.

“ ನಾವೂ ಯಾರಿಗಾದ್ರೂ ಆಸೆ ಹುಟ್ಟಿಸಿದರೆ ಅವರು ಮತ್ತೊಂದು ಆಸೆಗೆ ಒಳಗಾಗಿ ದುರಾಸೆ ಬಯಸುತ್ತಾರೆ ಅನ್ನೋದಕ್ಕೆ ಈ ದೇವುನೇ ಸಾಕ್ಷಿಯಾಗುತ್ತಿದ್ದಾನೆ. ಅದಕ್ಕೆ ಗೌತಮ ಬುದ್ಧ ‘ಆಸೆಯೆ ದುಃಖಕ್ಕೆ ಮೂಲ ಕಾರಣ’ ಎಂದಿದ್ದು ಸುಳ್ಳಲ್ಲ. ನಮ್ಮ ಕೊನೆಗಾಲದಲ್ಲಿ ಸೇವೆ ಮಾಡಿದ್ರೆ ಎಲ್ಲ ಆಸ್ತಿ ಬರೆದುಕೊಡುತ್ತೇನೆ ಎಂದಿದಕ್ಕೆ ದೇವು ಈ ರೀತಿ ದುರಾಸೆಗೆ ಒಳಗಾಗುತ್ತಾನೆ ಅಂದ್ರೆ ಇದು ನನ್ನ ಕರ್ಮ ” ಅಂತ ಅಜ್ಜ ಮಲಗಿದ ಹಾಸಿಗೆಯೊಳಗೆ ಹೊದ್ದುಕೊಂಡು ವಿಚಾರ ಮಾಡುತ್ತಾ ಚಿಂತೆಗೊಳಗಾಗಿದ್ದ.

“ ಇಷ್ಟು ದಿನ ಸೇವೆ ಮಾಡಿದ್ರು ಹೊಲದ ವಿಷಯ ಮಾತ್ರ ಬೇಡ ಅಂತಿದ್ದಾನಲ್ಲ? ಆತನಿಗೆ ಹೇಗಾದ್ರೂ ಮಾಡಿ ಒಪ್ಪಿಸಿ ಸಹಿ ಮಾಡಿಸಿಕೊಳ್ಳಬೇಕು ” ಅಂತ ದೇವು ಮುಂಜಾನೆಯಿಂದ ಮತ್ತೆ ಅಜ್ಜ ಮಲಗಿರುವ ಹೊರಸಿನ ಕಾಲ ಕಂಬದ ಪಕ್ಕಕ್ಕೆ ಕುಳಿತು ಬಿಟ್ಟಿದ. ಈ ದಿನವು ಜನ ಬಂದು ಹೋಗುವವರ ಸಂಖ್ಯೆ ಕಡಿಮೆಯಾಗಲಿಲ್ಲ. ದೇವು ಹೊಲ ಕೇಳಿದಕ್ಕೆ ನೊಂದುಕೊಂಡ ಅಜ್ಜ ಮಾತಾಡದೆ ಮೌನವಾಗಿ ಬಿಟ್ಟಿದ್ದ. ಬಂದವರು ಅವನ ಸ್ಥಿತಿ ನೋಡಿ.

“ ನಿನ್ನೆಯಂತೆ ಇವತ್ತಿಲ್ಲ. ದಿನೆ ದಿನೇ ಖಳೆ ಗುಂದತ್ತಾ ಇದೆ ಮುಖದ ಮ್ಯಾಲೆ ಚಹರೆ ಒಣಗುತ್ತಿದೆ. ಈಗಲೋ ! ಆಗಲೋ ! ಅನ್ನುವಂತೆ ಜೀವ ಮಾತ್ರ ಕಣ್ಣಲ್ಲೆ ಹಿಡಿದಂತೆ ಇದ್ದಾನೆ. ಮಾತು ನಿಂತಿವೆ ಕೈ ಕಾಲುಗಳು ಆಡುತ್ತಿಲ್ಲ. ಕಣ್ಣು ಮಾತ್ರ ‘ಪೀಳಿ ಪಿಳಿ’ ಬಿಡುತ್ತಾ ಬಂದವರನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾನೆ ” ಅಂತ ಅಜ್ಜನ ಬಗ್ಗೆ ವಿಷಯ ತಿಳಿದ ಸಿದ್ದಪ್ಪಾ ಗೌಡ್ರು “ ಕೊನೆಯ ಘಳಿಗೆಯಲ್ಲಿ ನೋಡಿ ಮಾತಾಡಿ ಬರೋಣ ” ಅಂತ ಬಂದು ಮನೆಯ ಹೊರಸಿನ ಮೇಲೆ ಮಲಗಿರುವ ಆತನ ಪಕ್ಕಕ್ಕೆ ಕುಳಿತು “ಲಕ್ಕು, ಏ! ಲಕ್ಕು ಇಲ್ನೋಡು ನಾನು ಬಂದಿನಿ. ಕಣ್ತೇರಿ, ಈಕಾ, ಕಣ್ತೆರೆದು ನೋಡು” ಅಂತ ಜೋರಾಗಿ ಕರೆದಾಗ ಮಂಪರಿನಲ್ಲಿ ಮುಳುಗಿದ ಅಜ್ಜನಿಗೆ ಎಚ್ಚರವಾಗಿ ಕಣ್ಣು ತೆರೆದು ನೋಡಿದ. ಎದುರು ಕುಳಿತ ಗೌಡರ ಗುರುತು ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ಅವರ ಕೈಗೆ ತನ್ನ ಬಲಗೈಯಿಂದ ಮೆಲ್ಲಗೆ ಕಿವುಚಿ

“ ಗೌಡ್ರೆ….! ನಿಮ್…..ಹೊಲ…..! ” ಅಂತ ತೆರೆದ ಕಣ್ಣಲ್ಲೆ ಜೀವ ಬಿಟ್ಟಿದ. ನಿಯತ್ತಿಗಾಗಿ ಸತ್ತ ಲಕ್ಕಜ್ಜನ ಪ್ರಾಣ ಪಕ್ಷಿ ಗೌಡರ ಎದುರಿಗೆ ಹಾರಿ ಹೋದದ್ದು ನೋಡಿ ಅವರ ಕಣ್ಣಲ್ಲಿ ನೀರು ಚಿಮ್ಮಿದವು. “ ಜೀವ ಮಾನವಿರುವವರೆಗೆ ನಮ್ಮನೆಯ ಮಗನಂತೆ ದುಡಿದ ಲಕ್ಕಜ್ಜನ ನಿಯತ್ತು ಶ್ರೇಷ್ಠವಾದದ್ದು. ಆತನಿಗೆ ಉಣಲು ಕೊಟ್ಟ ಹೊಲ ಈಗ ಅವನ ಹೆಸರಿನಲ್ಲಿ ಇದ್ದರು ಆತ ಪರಭಾರೆ ಮಾಡದೆ ಹಾಗೆ ಉಳಿಸಿದ್ದು ನಿಯತ್ತಿಗೆ ಈತನೆ ಸಾಕ್ಷಿ. ಆದರೂ ಆ ಹೊಲ ಮರಳಿ ನನಗೆ ಸೇರುವುದಿಲ್ಲ ದಲಿತ ಲಕ್ಕಜ್ಜನ ಹೆಸರಿನಲ್ಲಿನ ಭೂಮಿ ತಿರುಗಿ ನನ್ನ ಹೆಸರಿಗೆ ಆಗುವುದಿಲ್ಲ. ಅದು ನನಗೆ ಬೇಕಾಗಿಯು ಇಲ್ಲ. ನಿಯತ್ತಿನಿಂದ ಆ ಹೊಲ ನನಗೆ ಸೇರಲಿ “ಅನ್ನೋ! ಅವನ ಗುಣ ಬಹಳ ದೊಡ್ಡದು. ಕೊನೆಯ ಘಳಿಗೆಯಲ್ಲಿ ಸೇವೆ ಮಾಡಿದ ದೇವುನ ಕುಟುಂಬಕ್ಕೆ ಆ ಭೂಮಿ ಸೇರಲಿ ಅದಕ್ಕೆ ನಾನು ಸಹಕರಿಸುತ್ತೇನೆ ” ಎಂದಾಗ ದೇವುನ ಮುಖ ಅರಳಿತ್ತು. ಆದ್ರೆ ಈಗ ಅದು ಅಷ್ಟು ಸರಳವಲ್ಲ ದೇವು ಆತನ ವಂಶಸ್ಥನಲ್ಲದಿದ್ದರಿಂದ ಅದು ಅವನ ಹೆಸರಿಗೂ ಆಗದೆ ಹಾಗೆ ಉಳಿದಿದೆ. ಊಳುವ ಒಡೆಯನೆ ಇಲ್ಲದಿದ್ದರಿಂದ ಅದು ಈಗ ಪಾಳು ಬಿದ್ದ ಭೂಮಿ.

ಮಚ್ಚೇಂದ್ರ ಪಿ ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ