ಪಂಚಾಕ್ಷರಿ ಪುಣ್ಯಶೆಟ್ಟಿ
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಜೀವನ ಚರಿತ್ರೆಗಳನ್ನು ಬರೆದು ಖ್ಯಾತರಾದ ಹಿರಿಯ ಸಾಹಿತಿಯೆಂದರೆ *ಪಂಚಾಕ್ಷರಿ ಪುಣ್ಯಶೆಟ್ಟಿ*
ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ 3-2-1935 ರಲ್ಲಿ ಜನಿಸಿದ್ದಾರೆ.
8ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಅಧ್ಯಯನ ಮಾಡಿ ನಂತರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿ, ಎಚ್.ಎಸ್.ಸಿ. ಪಾಸು ಮಾಡಿದ ನಂತರ ಟಿ.ಸಿ.ಎಚ್. ಸಿ.ಪಿ.ಎಡ್. ಬಿ.ಪಿ.ಎಡ್. ಶಿಕ್ಷಕರ ತರಬೇತಿಗಳನ್ನು ಪೂರೈಸಿದ ಇವರು 1953 ರಲ್ಲಿ ಹುಮನಾಬಾದ ತಾಲೂಕಿನ *ದುಮ್ಮನಸೂರ* ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ನಾಲ್ಕು ವರ್ಷದ ನಂತರ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ, 1993 ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ನಾಟಕ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು 1963 ರಲ್ಲಿ *ಅಜಾದ್ ಚಂದ್ರಶೇಖರ* ಎಂಬ ಸ್ವತಂತ್ರ ಹೋರಾಟಗಾರರ ಕುರಿತು ನಾಟಕವೊಂದು ಪ್ರಕಟಿಸಿದ್ದಾರೆ. ಮತ್ತು ‘ಶಿವಶರಣ ರೇವಪ್ಪಯ್ಯನವರು ‘
‘ ಸಮಾಜವಾದಿ ಹೋರಾಟಗಾರ ವೈಜಿನಾಥ ಪಾಟೀಲ್’. ‘ಮಹಾಯೋಗಿಣಿ ಚಕ್ರಕೋಟೆ ಬಾಯವ್ವ ‘ ‘ ಡಾ.ಚನ್ನಬಸವ ಪಟ್ಟದ್ದೆವರ ಹೋರಾಟದ ಬದುಕು’ ‘ ಮಹಾದೇವಪ್ಪಾ ಮಿಸೆ ‘ ‘ಹುತಾತ್ಮ ಬಸವರಾಜ ಹುಡಗಿ’. ‘ಬಿಜಪಾಲ್ ಸಿಂಗ ಸ್ವತಂತ್ರ ಹೋರಾಟಗಾರ’ ‘ ಬಿ.ಟಿ.ಸಾಸನೂರ ‘ ‘ವಿರೂಪಾಕ್ಷಯ್ಯಾ ಸ್ವಾಮಿ ಐನ್ನೋಳ್ಳಿ ‘ ‘ಹುಟ್ಟು ಹೋರಾಟಗಾರ ಪಿ.ಎನ್.ಪಾಟೀಲ್’. ಎಂಬ ಜೀವನ ಚರಿತ್ರೆಗಳು .ಹಾಗೂ ‘ ಸಜ್ಜನರ ಸಂಘದಲ್ಲಿ‘ ಎಂಬ ವ್ಯಕ್ತಿ ಚಿತ್ರಣ.
‘ ಬೀದರದಿಂದ ಸಿಂಗಾಪುರಕ್ಕೆ ‘
‘ ಕಲ್ಯಾಣದಿಂದ ಕಾಶ್ಮೀರಕ್ಕೆ “ ಎಂಬ ಪ್ರವಾಸ ಕಥನಗಳು ಕೂಡ ಬರೆದು ಪ್ರಕಟಿಸಿದ್ದಾರೆ. ಚಿಂಚೋಳಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬೀದರ ಜಿಲ್ಲೆಗೆ ಬಂದು ಇಲ್ಲಿಯು ಎರಡು ಅವಧಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಸಾಕಷ್ಟು ಕನ್ನಡಪರ ಸಾಹಿತ್ಯ ಚಟುವಟಿಕೆಗಳು ಮಾಡಿ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಭಾಲ್ಕಿ ಮಠದಿಂದ *ಉತ್ತಮ ಲೇಖಕ ಪ್ರಶಸ್ತಿ* ಮತ್ತು ಹಾರಕೂಡ ಹಿರೇಮಠ ಸಂಸ್ಥಾನದಿಂದ *ಚನ್ನಶ್ರೀ ಪ್ರಶಸ್ತಿ* ಬಸವಕಲ್ಯಾಣ ಅನುಭವ ಮಂಟಪದಿಂದ ಜಯದೇವಿ ತಾಯಿ ಲಿಗಾಡೆಯವರ ಸ್ಮರಣಾರ್ಥ *ರಾಷ್ಟ್ರೀಯ ಪುರಸ್ಕಾರ* ಕಲಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗದಿಂದ ಹಾಗೂ ಧಾರವಾಡದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕಡೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವನ,ಲೇಖನ, ಬರಹಗಳು ಭಾಲ್ಕಿಯ ‘ಶಾಂತಿ ಕಿರಣ’ ಮಾಸಪತ್ರಿಕೆ ಹಾಗೂ ಉತ್ತರ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ನಗರದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
– ಮಚ್ಚೇಂದ್ರ ಪಿ ಅಣಕಲ್
ಕೃಪೆ-: ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕ ದಿಂದ ಆರಿಸಿಕೊಳ್ಳಲಾಗಿದೆ