ಪ್ರಭುರಾವ ಕಂಬಳಿವಾಲೆಯವರ ಸಾಂಸ್ಕೃತಿಕ ಸಂಘಟನೆ.
ಡಾ.ಸಂಜೀವಕುಮಾರ ಅತಿವಾಳೆ ಬೀದರ.
ಬೀದರ ಜಿಲ್ಲೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು
ಹೊಂದಿದೆ. ಸುದೀರ್ಘವಾದ ಕಾಲದಿಂದಲೂ ವಿವಿಧ ಘಟನೆಗಳು ಈ ಜಿಲ್ಲೆಯಲ್ಲಿ
ನಡೆಯುತ್ತಾ ಬಂದಿವೆ.
ಬಸವಣ್ಣನವರ ಕರ್ಮಭೂಮಿಯಾಗಿ 12ನೇ ಶತಮಾನದಲ್ಲಿಯೇ
ಪ್ರಸಿದ್ದಿ ಪಡೆದ ನಾಡು ನಮ್ಮದಾಗಿದೆ. ಗುರುನಾನಕರಂತಹ ಸಂತರು ಮೆಟ್ಟಿದ ನೆಲ
ನಮ್ಮದು. ಹಲವು ಪುಣ್ಯ ಸ್ಥಳಗಳಿಂದ ಕೂಡಿದ ನಾಡಿನಲ್ಲಿ ಅನೇಕ ರಾಜರು ತಮ್ಮ
ಆಡಳಿತವನ್ನು ನೀಡಿದ್ದಾರೆ. ಕಲೆ, ಸಾಹಿತ್ಯ ಸಂಸ್ಕೃತಿಯ ಘೋಷಣೆಯನ್ನು ಮಾಡಿದ್ದಾರೆ.
ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಿದ್ದಾರೆ. ಮರಾಠಿ ಮತ್ತು ಉರ್ದು ಭಾಷೆಗಳ
ಪ್ರಭಾವ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಇತ್ತು. ಇಂತಹ ಸಂದರ್ಭದಲ್ಲಿ ಕನ್ನಡವನ್ನು
ಉಸಿರಾಗಿಸಿಕೊಂಡು ಕನ್ನಡಕ್ಕಾಗಿ ತಮ್ಮ ಬಾಳನ್ನು ಮುಡುಪಾಗಿಟ್ಟು ಹೋರಾಟದ
ಮುಂಚೂಣಿಗೆ ಬಂದವರು ಪ್ರಭುರಾವ ಕಂಬಳಿವಾಲೆಯವರು.
ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಕಂಬಳಿವಾಲೆಯವರು
ಕೌಟುಂಬಿಕ ಸುಖ-ಶಾಂತಿಯನ್ನು ತ್ಯಾಗ ಮಾಡಿ ಸಂಪೂರ್ಣ ಕನ್ನಡದ ಕಟ್ಟಾಳಿನ
ರೂಪದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿಯ ಕಾರ್ಯವನ್ನು ಒಂದು ವ್ರತವೆಂಬಂತೆ ಮಾಡಿದ್ದಾರೆ. ಅವರ ಪರಿಶ್ರಮದಿಂದಾಗಿ ಇಂದು ಇಷ್ಟಾದರೂ ಕನ್ನಡಮಯ ವಾತಾವರಣ ಕಾಣುತ್ತಿದ್ದೇವೆ.
ತಮ್ಮ ಜೀವನಕ್ಕೆ ಮೂಲಾಧಾರವಾಗಿದ್ದ ವಕೀಲಿ ವೃತ್ತಿಯನ್ನೂ ತ್ಯಜಿಸಿ ಕನ್ನಡತನದ
ಬೆಳವಣಿಗೆಯ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದ್ದಾರೆ.
ಕನ್ನಡದ ಕಾರ್ಯಕ್ರಮಗಳೆಂದರೆ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದಂತೆ, ಅಂತಹ
ಹತ್ತು ಹಲವಾರು ಚಟುವಟಿಕೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವೊಂದು ಮಹತ್ವದ
ಕಾರ್ಯಗಳನ್ನು ಅವಲೋಕಿಸೋಣ.
1953ರಲ್ಲಿ “ಬೀದರ ಜಿಲ್ಲಾ ಕನ್ನಡ ಶಿಕ್ಷಣ ಸಮಿತಿ”ಯನ್ನು ಹುಟ್ಟು ಹಾಕಿ ಅದರ ಮೂಲಕ ಕನ್ನಡ ಶಾಲೆಗಳನ್ನು ತೆರೆಯುತ್ತಾ ಶೈಕ್ಷಣಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹೆಚ್ಚಿಸುತ್ತಾ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ಮಾಡತೊಡಗಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ
ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಲವಾರು ಸಭೆ-ಸಮ್ಮೇಳನಗಳ
ಆಯೋಜನೆಯನ್ನು ಮಾಡಿದರು. ಅವುಗಳಲ್ಲಿ ಪ್ರಮುಖವಾದವುಗಳು:
ನಾಡ ಉತ್ಸವಗಳು : ಉದಗೀರದ ನಿವಾಸಿಯಾಗಿದ ಕಂಬಳಿವಾಲೆಯವರು 1953ರಲ್ಲಿ
ಬೀದರಕ್ಕೆ ಬಂದು ಆಶ್ವತವಾಗಿ ನೆಲೆಸುತ್ತಾರೆ, ಅವಾಗ ಬೀದರಿನ ಮಹಾ ಜನತೆಯು
ನಾಡಹಬ್ಬದ ಸಂಪೂರ್ಣ ಜವಾಬ್ದಾರಿಯನ್ನು ಇವರಿಗೆ ವಹಿಸುತ್ತಾರೆ. ಈ ನಾಡ ಹಬ್ಬದಿಂದಾಗಿ ಮರಾಠಿ, ಉರ್ದು,ತೆಲುಗು ಭಾಷೆಗಳ ಹಿಡಿತದಿಂದ ಕನ್ನಡವನ್ನು
ಬಿಡಿಸಿ ತನ್ನದೇ ಆದ ರೀತಿಯಲ್ಲಿ ಬೆಳೆಸುವ ಉದ್ದೇಶದಿಂದ ಪೂರಕವಾದ ವಾತಾವರಣ
ನಿರ್ಮಿಸಲಾಗುತ್ತಿತ್ತು, ಪ್ರಸಿದ್ಧ ಕಲಾವಿದರನ್ನು, ಸಂಗೀತಗಾರರನ್ನು ಕರೆಸಿ ಸಾಂಸ್ಕೃತಿಕ
ಚಟುವಟಿಕೆಗಳನ್ನೂ ಏರ್ಪಡಿಸುತ್ತಾ ಮುನ್ನಡೆಯುತ್ತಾರೆ.
ದೇಗಲೂರು ಕನ್ನಡ ಸಮ್ಮೇಳನ: ಕನ್ನಡವನ್ನು ಎಲ್ಲಾ ಕಡೆಗೂ ಪಸರಿಸಬೇಕೆಂಬ ಮಹಾದಾಸೆಯನ್ನುಹೊತ್ತ ಕಂಬಳಿವಾಲೆಯವರು ಅಂದು ಕನ್ನಡದ ನೆಲವಾಗಿದ್ದ ಇಂದಿನ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೇಗಲೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಮ್ಮೇಳನವನ್ನು ಸಾಕಷ್ಟು ಶಿಸ್ತಿನಿಂದ ಏರ್ಪಡಿಸುವ ಮೂಲಕ ಕನ್ನಡ ಜ್ಯೋತಿಯನ್ನು ಹೊತ್ತಿಸಿದ್ದಾರೆ.
1955 ಮೇ 6 ಮತ್ತು 7ರಂದು ಸಮ್ಮೇಳನ ಬಹು ವಿಜೃಂಭಣೆಯಿಂದ ಜರುಗಿತು.
ಮಾನ್ವಿ ನರಸಿಂಗರಾಯ, ಸಿದ್ದಯ್ಯ ಪುರಾಣಿಕರಂತಹ ದಿಗ್ಗಜರು ಈ ಸಮ್ಮೇಳನದಲ್ಲಿ
ಪಾಲ್ಗೊಂಡು ವಿದ್ವತಪೂರ್ಣವಾದ ಉಪನ್ಯಾಸವನ್ನು ನೀಡಿ ಕನ್ನಡದ ಜ್ಯೋತಿ
ಪಜ್ವಲಿಸುವಂತೆ ಮಾಡಿದರು. ಈ ಸಮ್ಮೇಳನಕ್ಕೆ ಮರಾಠಿಗರಿಂದ ಅಡಚಣೆಗಳು ಬಂದರೂ
ಕೂಡ ದೃಢ ಮನಸ್ಸಿನ ಕಂಬಳಿವಾಲೆಯವರು ಕಿಂಚಿತ್ತೂ ಧೈರ್ಯಗುಂದದೆ ಚಾಕಚಕ್ಯತೆ,
ಸಂಘಟನಾ ಸಾಮರ್ಥ್ಯದಿಂದ ಸಮ್ಮೇಳನ ಯಶಸ್ವಿಗೊಳಿಸಿ ಸಾಂಸ್ಕೃತಿಕ ವಾತಾವರಣದ
ನಿರ್ಮಾಣಕ್ಕೆ ಕಾರಣಕರ್ತರಾದರು.
ಭಾತಂಬ್ರಾ-ಕನ್ನಡ ಸಾಹಿತ್ಯ ಸಮ್ಮೇಳನ :
ಭಾಲ್ಕಿ ತಾಲೂಕಿನ ಐತಿಹಾಸಿಕ ಗ್ರಾಮವಾದ
ಭಾತಂಬ್ರಾದಲ್ಲಿ ಹೈದ್ರಾಬಾದ ಪ್ರದೇಶ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವು
1956 ಏಪ್ರಿಲ್ 29 ಮತ್ತು 30 ಗಳಂದು ಬಹಳ ಅದ್ದೂರಿಯಾಗಿ ಜರುಗಿತು.
ಗ್ರಾಮಸ್ಥರೆಲ್ಲರೂ ಸೇರಿ ಈ ಸಮ್ಮೇಳನದ ಆಯೋಜನೆಯ ಮಹತ್ವದ ಜವಾಬ್ದಾರಿಯನ್ನು
ಕಂಬಳಿವಾಲೆಯವರು ಹೆಗಲಿಗೆ ಏರಿಸಿದರು. ಹಲವೆಡೆಯಿಂದ ಜನರು ಭಾತಂಬ್ರಾದತ್ತ
ಬರುವಂತಾಯಿತು. ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಪಾಲ್ಗೊಂಡು ಕನ್ನಡ
ಪ್ರೇಮ ಮೆರೆದರು. ವಿದ್ವಾಂಸರು, ಸಾಹಿತಿಗಳು, ಕವಿಗಳು, ಕಲಾವಿದರು, ಸಂಗೀತಗಾರರು
ಸಾಕಷ್ಟು ಸಂಖ್ಯೆಯಲ್ಲಿ ಈ ಕನ್ನಡಮ್ಮನ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ,
ಪಾಂಡಿತ್ಯವನ್ನು ಸಾಬೀತುಪಡಿಸಿದರು.
ಕನ್ನಡ ತಾಯಿ ಭುವನೇಶ್ವರಿ ಹಾಗೂ
ಸಮ್ಮೇಳನಾಧ್ಯಕ್ಷರಾದ ಡಾ. ಪದ್ಮನಾಭ ಪುರಾಣಿಕರ ಭವ್ಯವಾದ ಮೆರವಣಿಗೆ ನಡೆಯಿತು.
ಹಳ್ಳಿಕೇರಿ ಗುಡ್ಡೆಪ್ಪ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಸಿದ್ದಯ್ಯ ಪುರಾಣಿಕ,
ಮಾನ್ವಿ ನರಸಿಂಗರಾಯ, ಡಾ. ಜಿ.ಎಸ್. ಮೇಲ್ನೋಟೆ ಮುಂತಾದ ದಿಗ್ಗಜರು ಭಾಗವಹಿಸಿ
ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರೆಲ್ಲರು ಕಂಬಳಿವಾಲೆಯವರ ಪರಿಶ್ರಮದ
ಫಲವಾಗಿ ಇಲ್ಲಿಗೆ ಬರುವಂತಾದದ್ದು ಗಮನಾರ್ಹ ಸಂಗತಿಯಾಗಿದೆ.
ಕನ್ನಡಮ್ಮನ
ಜಾತ್ರೆಯ ರಥಕ್ಕೆ ಭಾತಂಬ್ರಾದಂತಹ ಹಳ್ಳಿಯ ಜನರು ಸಾಥ ನೀಡಿದ್ದು ಇಂದಿಗೂ ದಾಖಲೆಯಾಗಿದೆ
ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಿನ ನಂಟು : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ
1915ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಒತ್ತಾಸೆಯಾಗಿ ಹುಟ್ಟಿಕೊಂಡ ಕನ್ನಡ
ಸಾಹಿತ್ಯ ಪರಿಷತ್ತು ಕನ್ನಡ ಭಾಷಾಭಿವೃದ್ಧಿ ಮತ್ತು ಮಸ್ತಕ ಪ್ರಕಟಣೆಯ ಕಾವ್ಯವನ್ನು
ಮಾಡುತ್ತಾ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವಲ್ಲಿ ಸಕ್ರೀಯವಾಗಿತ್ತು.
ಕಂಬಳಿವಾಲೆಯವರು 1956ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡಿದರು. 1958 ರಲ್ಲಿ
ಬೆಂಗಳೂರಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಭಾಷಣ ಮಾಡಿದರು.
ಈ ರೀತಿಯಾಗಿ ಪರಿಷತ್ತಿನೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದುವ ಮೂಲಕ
ಕನ್ನಡವನ್ನು ಉಸಿರಾಗಿಸಿಕೊಂಡು ಬದುಕಿದರು. ನಿತ್ಯ ಕನ್ನಡದ ಆರಾಧಕರಾಗಿ ನುಡಿ
ಪೂಜೆಯಲ್ಲಿ ಅವರು ತಮ್ಮ ಬಾಳು ಸವೆಸಿದರು. ಕನ್ನಡ ನಾಡು-ನುಡಿ-ನೆಲ ಜಲಕ್ಕಾಗಿ ಜೀವನವನ್ನೇ
ಮುಡುಪಾಗಿಟ್ಟಿದ್ದ ಕಂಬಳಿವಾಲೆಯವರು ಸರಳ ಸಜ್ಜನಿಕೆಯ
ಸಾಕಾರಮೂರ್ತಿಯಾಗಿದ್ದರು. ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು ಉನ್ನತ ಮಟ್ಟದ
ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು.
41 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; 1960 ಫೆಬ್ರವರಿ 11,12,13 ಗಳಂದು ಬೀದರ ನಗರದಲ್ಲಿ ಮೊದಲ ಬಾರಿಗೆ 41 ನೇ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಂಬಳಿವಾಲೆಯವರ ನೇತೃತ್ವದಲ್ಲಿ
ನೇರವೇರಿಸಲಾಯಿತು.
ಖ್ಯಾತ ಸಾಹಿತಿಗಳಾದ ಪ್ರೊ.ಡಿ.ಎಲ್. ನರಸಿಂಹಚಾರ್ಯರ
ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು. ಸ್ವಾಗತ ಸಮಿತಿಯ
ಅಧ್ಯಕ್ಷರಾಗಿ ಇಡೀ ಸಮ್ಮೇಳನದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಪ್ರತಿಯೊಂದನ್ನು
ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅವರ ವ್ಯಕ್ತಿತ್ವದ ಬಗ್ಗೆ ತಿಳಿದವರಾಗಿದ್ದ ಪರಿಷತ್ತಿನ
ಆಗಿನ ಅಧ್ಯಕ್ಷರಾದ ಬಿ. ಶಿವಮೂರ್ತಿ ಶಾಸ್ತ್ರಿಗಳು ಈ ಸಮ್ಮೇಳನ ಬೀದರನಲ್ಲಿ
ನಡೆಯಲು ಅನುವು ಮಾಡಿಕೊಟ್ಟರು. ಪರಿಪೂರ್ಣ ಸಹಕಾರ ನೀಡಿ ಇವರಿಗೆ
ಸ್ವತಂತ್ರವಾಗಿ ಕಾರನಿರ್ವಹಣೆಗೆ ಅವಕಾಶ ಮಾಡಿದರಿಂದಾಗಿ ಅಪಾರ ಕರ್ತೃತ್ವ ಶಕ್ತಿಯನ್ನು
ಮತ್ತು ಮುಂದಾಲೋಚನೆಯನ್ನು ಹೊಂದಿದವರಾಗಿದ್ದ ಕಂಬಳಿವಾಲೆಯವರು
ಐತಿಹಾಸಿಕ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದರು. ಮೂರು ದಿನಗಳ ವೈಭವ
ನೋಡುವಂತಿತ್ತು. ನಾಡದೇವಿ ಭುವನೇಶ್ವರಿ ಹಾಗು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ
ನೂರಾರು ಜಾನಪದ ಕಲಾತಂಡಗಳು ಪಾಲ್ಗೊಂಡು ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಿದವು.
ಹೆಸರಾಂತ ವಿದ್ವಾಂಸರಿಗೆ ಕರೆಸಿ ಮಹತ್ವದ ಗೋಷ್ಠಿಗಳನ್ನು ಏರ್ಪಡಿಸಿದರು. ಆ
ಮೂಲಕ ಬೀದರಿನ ಸಾಂಸ್ಕತಿಕ ಲೋಕ ಬೆಳೆಯುವಂತೆ ನೋಡಿಕೊಂಡರು.
ಕನ್ನಡ ಸಾಹಿತ್ಯ ಸಂಘದ ಸ್ಥಾಪನೆ :
ಸಾಹಿತ್ಯ ಸಾಂಸ್ಕೃತಿಯ ಬೆಳವಣಿಗೆಗೆ ಸಂಘವನ್ನು
ಸ್ಥಾಪಿಸಬೇಕೆಂದು ಹಲವು ದಿನಗಳಿಂದ ವಿಚಾರ ಮಾಡುತ್ತಿದ್ದ ಕಂಬಳಿವಾಲೆಯವರು 1960 ರಲ್ಲಿ ಕನ್ನಡ ಸಾಹಿತ್ಯ ಸಂಘವನ್ನೂ ಹುಟ್ಟು ಹಾಕಿದರು. 1971 ರಿಂದ
ಸಂಘದ ಚಟುವಟಿಕೆಗಳನ್ನು ತೀವ್ರಗೊಳಿಸಿದರು. ಮುಂದೆ 1977 ರಲ್ಲಿ ನ್ಯಾಸದ
ಸದಸ್ಯರಾಗಿ ಅನಂತ ಕಾವ್ಯಗಳನ್ನು ನಿರ್ವಹಿಸಿದ್ದಾರೆ.
ಹೀಗೆ ಹತ್ತು ಹಲವು ಸಾಂಘಿಕ ಚಟುವಟಿಕೆಗಳನ್ನು ಮಾಡುತ್ತಲೆ ಸಾಹಿತ್ಯಕ
ಮತ್ತು ಸಾಂಸ್ಕೃತಿಕವಾದ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ
ಕಂಬಳಿವಾಲೆಯವರ ಜೀವನ ಸಾಗಿ ಬಂದಿದೆ. ಗಡಿನಾಡಿನಲ್ಲಿ ಕನ್ನಡದ ಕಟ್ಟಾಳಾಗಿ
ಸದಾ ಜಾಗೃತಿಯ ಜ್ಯೋತಿಯನ್ನು ಹೊತ್ತಿಸಿಕೊಂಡು ಬಂದಿರುವ ಪ್ರಭುರಾವ
ಕಂಬಳಿವಾಲೆಯವರು ಸಾಂಸ್ಕೃತಿಕ ರಾಯಭಾರಿಯಾಗಿ ಸಮರ್ಥವಾದ ರೀತಿಯಲ್ಲಿ
ತನ್ನದೇ ಆದ ಶೈಲಿಯಲ್ಲಿ ಕರ್ತವ್ಯವನ್ನು ನಿಭಾಯಿಸಿಕೊಂಡು ಬರುವ ಮೂಲಕ
ಯಶಸ್ವಿಯಾಗಿದ್ದಾರೆ. ಆದುದರಿಂದಾಗಿಯೇ ಕನ್ನಡ ಮತ್ತು ಸಾಂಸ್ಕೃತಿಕ ವಲಯದಲ್ಲಿ
ಅವರ ಹೆಸರು ಅಜರಾಮರವಾಗಿದೆ.
*****
ಡಾ.ಸಂಜೀವಕುಮಾರ ಅತಿವಾಳೆ. ಬೀದರ
ಲೇಖಕರ ಪರಿಚಯ:
ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ ಯವರು. ಬೀದರ್ ತಾಲ್ಲೂಕಿನ ಅತಿವಾಳ ಗ್ರಾಮದವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಇವರು ಬೀದರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಣದೂರವಾಡಿ ಶಾಲಾ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸ್ವಾತಂತ್ಯ್ರ(ಕವನ ಸಂಕಲನ), ಚೌಕಟ್ಟಿನಾಚೆ(ಲೇಖನಗಳ ಸಂಕಲನ), ಪ್ರಬಂಧ , ಲೋಕ ನುಡಿ ಕಿಡಿ (ಸಂಪಾದಿತ) ಮುಂತಾದ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.