ಪ್ರಕೃತಿಯ ಪ್ರಾಯೋಗಿಕತೆಯನ್ನು ಪ್ರತಿಧ್ವನಿಸಿದ ‘ಚಿಪ್ಪಿ ಚಿಪ್ಕಲಿ’ ನಾಟಕ (ರಂಗ ವಿಮರ್ಶೆ)
-ಡಾ.ರಾಜೇಂದ್ರಕುಮಾರ ಕೆ. ಮುದ್ನಾಳ್.
”ಪ್ರಕೃತಿ ಪೂಜೆಗೆ ಬನ್ನಿರೆಲ್ಲರೂ
ಪ್ರಕೃತಿ ಪೂಜೆಗೆ ಬನ್ನಿರಿ.
ಕಣ್ಣು ಹೃದಯಗಳೆರಡನು ಮಾತ್ರ ಇಲ್ಲಿಗೆ ತನ್ನಿರಿ ”
ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳು ನಿಸರ್ಗದ ಮಹತ್ವವನ್ನು ಸಾರುತ್ತವೆ. ಪ್ರಕೃತಿಯೊಂದಿಗೆ ಹೇಗೆ ಸಹಬಾಳ್ವೆ ನಡೆಸಬೇಕೆಂದು ಇಂದಿಗೂ ಗೊತ್ತಾಗುತ್ತಿಲ್ಲ. ಭೂಮಿಯ ಮೇಲೆ ವಾಯುಮಾಲಿನ್ಯ, ಭೂಕಂಪ, ಸುನಾಮಿ ಇತ್ಯಾದಿ ಅವಗಡಗಳು ಸಂಭವಿಸುತ್ತಿರುವುದಕ್ಕೆ ಕಾರಣ ಮನುಷ್ಯ ತನ್ನ ಎಲ್ಲೆ ಮೀರಿ ವರ್ತಿಸುತ್ತಿದ್ದಾನೆ.ಆದ್ದರಿಂದ ಪ್ರಕೃತಿ ಮುನಿಸಿಕೊಳ್ಳುವುದು ಸಹಜವಾಗಿದೆ. ತನ್ನ ಮೂಲ ಸ್ಥಿತಿಯನ್ನು ಕಾಪಾಡಿಕೊಳ್ಳಲು ಪ್ರಕೃತಿ ಕೂಡ ಪ್ರಯತ್ನಿಸಿದೆ ಅದು ಇಂತಹ ಅವಗಡಗಳ ಮೂಲಕ. ಪ್ರಾಣಿ, ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾದಾಗ ಸ್ವವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆರೋಗ್ಯವನ್ನು ಸುಧಾ ರಿಸಿಕೊಳ್ಳುತ್ತವೆ.
ಪ್ರಕೃತಿ ಕೊಟ್ಟಿರುವ ವರದಾನ ಕೂಡ ಹೌದು.ಆದರೆ ಮಾನವ ಇದಕ್ಕೆ ತದ್ವಿರುದ್ಧ ರೀತಿಯಲ್ಲಿ ಹೇಗೆ ವರ್ತಿಸುತ್ತಾನೆಂಬುದೇ ನಾಟಕದ ವಿಶಿಷ್ಟತೆ.
ಬೆಂಗಳೂರಿನ ರಂಗ ಶಂಕರ ತನ್ನ 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ‘ಚಿಪ್ಪಿ ದಿ ಚಿಪ್ಕಲಿ’ ನಾಟಕ ಮಕ್ಕಳಿಗೆ ಹೇಳಿ ಮಾಡಿಸಿದ್ದು.ಇದು ಅಶಾಬ್ದಿಕ ಪ್ರಯೋಗ.ಯಾವುದೇ ರೀತಿಯ ಮಾತುಗಳಿಲ್ಲ.ಸಂಗೀತ, ಹಾಸ್ಯ, ಮರೆತಿಲ್ಲ. ಪ್ರಾಣಿಗಳು ಕೂಡ ಸ್ವಾಭಾವಿಕ ಮನಸ್ಥಿತಿ ಹೊಂದಿರುವಂತವು.ಅದು ಮಾನವನ ಮನಸ್ಥಿತಿಗಿಂತ ಭಿನ್ನವೇನಲ್ಲ. ಅದನ್ನ ಮಾನವನ ಮೂಲಕ ಪ್ರತಿಬಿಂಬಿಸುವುದು ನಾಟಕದ ಮತ್ತೊಂದು ವಿಶೇಷ.
ನಾಟಕ ನೋಡಲು ‘ರಂಗ ಶಂಕರ’ಕ್ಕೆ ತಂದೆ ತಾಯಂದಿರು ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು. ಮಕ್ಕಳು ಲವ ಲವಿಕೆಯಿಂದ ರಂಗಮಂದಿರ ಒಳಗೆ ಪ್ರವೇಶಿಸಿದಾಗ ಮಕ್ಕಳ ಕಲರವ ಹಕ್ಕಿಗಳ ಚಿಲಿಪಿಲಿಗಾನದಂತೆ ಪ್ರತಿದ್ವನಿಸುತ್ತಿತ್ತು. ನಾಟಕದ ಆರಂಭಕ್ಕೆ ಇವರ ಖುಷಿ ಗುಸುಗುಸು ಮಾತು ಸಂಗೀತ ಒದಗಿಸುತ್ತಿತ್ತು.
ನಟರು ಮುಸುಕುಧಾರಿಯಾಗಿ ರಂಗವನ್ನು ಪ್ರವೇಶಿಸಿದಾಗ ಮಕ್ಕಳು ಕುತೂಹಲಕ್ಕೆ ಅಣಿಯಾದರು.
ತಮ್ಮ ಸೂಟ್ಕೇಸ್ ನಲ್ಲಿನ ಪ್ರಾಣಿಯನ್ನು ತಾವು ಕಟ್ಟಿದ ಕಲ್ಪನಾ ಮನೆಯಲ್ಲಿ ಒಳಗೆ ಆಟವಾಡಿಸುತ್ತಾ ಮಕ್ಕಳನ್ನು ರಂಜಿಸುತ್ತಾರೆ. ಹಲ್ಲಿಯನ್ನು ಆಟವಾಡಿಸುವಾಗ ಮಕ್ಕಳು ಪ್ರತಿಕ್ರಿಯೆಯನ್ನು ನೀಡುತ್ತಿರುತ್ತಾರೆ. ಹಲ್ಲಿಯನ್ನು ನೀರಿನಲ್ಲಿ ಸ್ನಾನ ಮಾಡಿಸುವಾಗ ಹಲ್ಲಿ ಸತ್ತಿತೆಂದು ತಿಳಿದುಕೊಂಡಿರುತ್ತಾರೆ. ಆದರೆ ಅದು ಹಾಗಾಗುವುದಿಲ್ಲ ಅದನ್ನು ಮೇಲಕ್ಕೆತ್ತಿ ಅದರ ಎದೆ ಬಡಿತವನ್ನು ಕೇಳಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ . ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿದಾಗ ಆತನನ್ನು ದಡಕ್ಕೆ ಕರೆದುಕೊಂಡು ಬಂದು ಉಪಶಮನ ಮಾಡಬೇಕೆಂದು ಮಕ್ಕಳಿಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಮಕ್ಕಳು ನೀರಿನ ಹತ್ತಿರ ಹೋಗದಂತೆ ಎಚ್ಚರಿಕೆ ಗಂಟೆಯನ್ನು ಕೂಡ ನಾಟಕ ಸೂಕ್ಷ್ಮವಾಗಿ ಪ್ರತಿಬಿಂಬಿಸುವುದು . ಇದೊಂದು ಆಟದ ಮೂಲಕ ಕಲಿಕೆಯ ಒಂದು ಪ್ರಯತ್ನವೆನ್ನ ಬಹುದು.
ಹಲ್ಲಿಯನ್ನು ಹೀಗೆ ಆಟವಾಡಿಸುತ್ತಿರುವಾಗ ಹಲ್ಲಿಯ ಬಾಲ ಮುರಿದು ಬೀಳುತ್ತದೆ. ಇದನ್ನು ಗಮನಿಸಿದ ಹಲ್ಲಿ ತನ್ನ ಆಟವನ್ನು ಮುಂದುವರಿಸುತ್ತಿರುವಾಗ ತನ್ನ ಬಾಲ ಏಕೆ ತನ್ನ ಮಾತು ಕೇಳುತ್ತಿಲ್ಲ ಎಂದು ಹಿಂದಕ್ಕೆ ತಿರುಗಿ ನೋಡಿದಾಗ ಆಶ್ಚರ್ಯಗೊಳ್ಳುತ್ತದೆ. ಕತ್ತರಿಸಿಕೊಂಡ ಬಾಲವನ್ನು ಅಂಟಿಸಿಕೊಳ್ಳಲು ಹಿಂದಕ್ಕೆ ಮುಂದಕ್ಕೆ ಪ್ರಯತ್ನ ಮಾಡುತ್ತದೆ. ಅದು ಸಾಧ್ಯವಾಗುವುದೇ ಇಲ್ಲ.
ಇದನ್ನು ಗಮನಿಸಿದ ನಟರು ( ಗೊಂಬೆ ಆಡಿಸುವರು )ಹಲ್ಲಿಯ ಬಾಲವನ್ನು ಅಂಟಿಸಲು ಪ್ರಯತ್ನಿಸುತ್ತಾರೆ.ಆದರೆ ಹಲ್ಲಿಯ ಬಾಲ ಅದರ ದೇಹಕ್ಕೆ ಅಂಟುವುದಿಲ್ಲ. ಆದರೆ ಮನುಷ್ಯ ಪ್ರಾಣಿ ಎಂಬ ನಟ ನಟಿಯರು ಅಲ್ಲಿಯ ದೇಹಕ್ಕೆ ಇಲ್ಲ ಸಲ್ಲದ ಪ್ರಾಣಿಗಳ ಬಾಲಗಳನ್ನು ಅಂಟಿಸಲು ನೋಡುತ್ತಾರೆ. ಕುದುರೆಯ ಬಾಲವನ್ನು ತಂದು ಇಡುತ್ತಾರೆ ಅದು ಕೂಡ ಯಶಸ್ವಿಯಾಗುವುದಿಲ್ಲ.
ನವಿಲಿನ ಗರಿಯನ್ನು ಹಚ್ಚುತ್ತಾರೆ. ಚಿರತೆಯ ಬಾಲವನ್ನು ಹಚ್ಚುತ್ತಾರೆ. ಹಾವಿನ ಬಾಲವನ್ನು ಕೂಡ ತಂದು ಹಚ್ಚುತ್ತಾರೆ ಅದು ಯಾವುದೂ ಕೂಡ ಹಲ್ಲಿಯ ದೇಹಕ್ಕೆ ಅಂಟಿಕೊಳ್ಳದೆ ವಿಸ್ಮಯವಾಗುತ್ತದೆ.
ಇವುಗಳಿಂದ ಬೇಸತ್ತ ಹಲ್ಲಿಯೂ ಕೂಡ ನನಗೆ ಬಾಲವು ಬೇಡವೇ ಬೇಡ ಎಂದು ಮೂಲೆಗುಂಪು ಸೇರುತ್ತದೆ. ಆಗ ಪಾತ್ರಧಾರಿಗಳು ಆ ಹಲ್ಲಿಯನ್ನು ಜೋಗುಳ ಹಾಡುತ್ತ,ಲಾಲಿ ಹಾಡುತ್ತ ಮಲಗಿಸುತ್ತಾರೆ .
ಹಾಡುತ್ತ, ಆಡುತ್ತ ದಿನಗಳು ಕಳೆಯುತ್ತವೆ. 15 ದಿನಗಳಾದ ನಂತರ ಹಲ್ಲಿಯ ದೇಹದಿಂದ ಬಾಲವು ವೃದ್ಧಿಯಾಗುತ್ತಾ ಹೋಗುತ್ತದೆ. ಇದನ್ನು ನಟರು ಅಮಾವಾಸ್ಯೆಯ ಚಂದಿರ ಪೂರ್ಣಚಂದ್ರನಾಗುವುದರೊಂದಿಗಿನ ವಿಸ್ಮಯವನ್ನು ಬೆಳದಿಂಗಳ ಆಟವನ್ನು ರಂಗದ ಮೇಲೆ ಪ್ರಯೋಗ ಮಾಡುತ್ತಾರೆ. ಈ ಪೂರ್ಣ ಚಂದಿರನನ್ನು ನೋಡಿ ಮಕ್ಕಳು ಖುಷಿಪಡುತ್ತಾರೆ. ಎಲ್ಲದಕ್ಕೂ ನಿಧಾನವೇ ಪ್ರಧಾನವೆಂಬ ನೀತಿಯು ಈ ನಾಟಕ ತೋರ್ಪಡಿಸುತ್ತದೆ.
ಪ್ರಕೃತಿ ತನ್ನನ್ನು ತಾನು ಸ್ವ ವಿಮರ್ಶಿಸಿಕೊಳ್ಳುತ್ತಾ, ಸ್ವ ಅವಲೋಕವನ್ನು ಮಾಡಿಕೊಳ್ಳುವ ಶಕ್ತಿಯನ್ನು ಪಡೆದಿದೆ ಎಂಬುದಕ್ಕೆ ಈ ನಾಟಕ ಸಾಕ್ಷಿ ಒದಗಿಸುತ್ತದೆ .
ಹಲ್ಲಿಯ ಬಾಲದಂತೆ ಮನುಷ್ಯನ ಮನಸ್ಸು ವಿಚಿತ್ರವಾಗಿದೆ. ಮನುಷ್ಯ ತನಗೆ ಬೇಕಾದ ವಸ್ತುವನ್ನು ಕಳೆದುಕೊಂಡಾಗ ಅದನ್ನು ಪುನರ್ ನಿರ್ಮಿಸಿಕೊಳ್ಳಲು ಕೃತಕವಾದ ವಸ್ತುಗಳನ್ನು ಜೋಡಿಸಿಕೊಳ್ಳುತ್ತಾನೆ.
ಆದರೆ ಪ್ರಾಣಿಗಳಿಗೆ ಹಾಗಾಗುವುದಿಲ್ಲ ಎಂಬುದನ್ನು ಮನುಷ್ಯ ಮರೆತು ಬಿಡುತ್ತಿರುತ್ತಾನೆ. ಜೀವ ವಿಕಾಸದ ಹಂತದಲ್ಲಿ ಬೆಳೆದ ಪ್ರಾಣಿಗಳು ತಮ್ಮಿಂದ ತಾನೇ ವಿಕಸನವನ್ನು ಹೊಂದಿಕೊಳ್ಳಲು ಇಚ್ಛಿಸುತ್ತವೆ ಹೊರತು ಬೇರೆಯವರಿಂದ ಕೃತಕವಾಗಿ ಯಾವುದೇ ವಸ್ತುಗಳನ್ನು ಕೂಡ ಸ್ವೀಕರಿಸುವುದಿಲ್ಲ ಎಂಬುದನ್ನು ಪ್ರಯೋಗ ಸಾಬೀತುಪಡಿಸುತ್ತದೆ.
ಒಂದು ವಿಶೇಷವೇನೆಂದರೆ ಅಲ್ಲಿಯ ದೇಹಕ್ಕೆ ಯಾವ ಪ್ರಾಣಿಯ ಬಾಲವನಚ್ಚುತ್ತಾರೋ ಅಥವಾ ಅಂಟಿಸಲು ಪ್ರಯತ್ನಿಸುತ್ತಾರೋ ಅದೇ ರೀತಿ ಹಲ್ಲಿಯೂ ಕೂಡ ತನ್ನ ವರ್ತನೆಯನ್ನು ಮಾಡುತ್ತಿರುತ್ತದೆ ಎಂಬುದು ತೋರಿಸಲಾಯಿತು . ಮಕ್ಕಳ ಮನರಂಜನೆಗೆಂದು ಈ ರೀತಿ ಚಲನವಲ ಮಾಡಿದರು ಕೂಡ ಅದು ಬಹಳಷ್ಟು ಬೌದ್ಧಿಕ ತಾತ್ವಿಕತೆಯ ಅರ್ಥವನ್ನು ಒಳಗೊಂಡಿದೆ. ಒಂದು ಮಾತನಾಡಲು ಹೋಗಿ ಮನುಷ್ಯ ಒಬ್ಬ ಮಾತುಗಳನ್ನು ಆಡುತ್ತಾನೆ. ಅಂಥವರ ಜಾಯಮಾನಕ್ಕೆ ಈ ಪಾತ್ರಧಾರಿಗಳೊಂದಿಗೆ ನಾವು ಕೂಡ ಸೇರುತ್ತೇವೆ.
ಶೈಕ್ಷಣಿಕ ದೃಷ್ಟಿಕೋನದಲ್ಲಿ ಈ ನಾಟಕವನ್ನು ಅನ್ವಯಿಸಿಕೊಳ್ಳುವುದಾದರೆ ಮಗುವಿನಲ್ಲಿರುವ ಪ್ರತಿಭೆಯನ್ನು, ಸೃಜನಶೀಲತೆಯನ್ನು ಹೊರ ತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಇದನ್ನು ಕಡೆಗಣಿಸಿ ನಾವು ನಮ್ಮದೇ ಆದ ರೀತಿಯಲ್ಲಿ ಮಗುವನ್ನು ಸಿದ್ದಪಡಿಸಲು ಪ್ರಯತ್ನಿಸುತ್ತಿರುವುದು ತುಂಬಾ ದುಃಖಕರವಾದ ಸಂಗತಿ. ಯಾಂತ್ರಿಕೃತ ಮಾದರಿಯಲ್ಲಿ ಮಕ್ಕಳ ಭವಿಷ್ಯವನ್ನು ಪಾತಾಳಕ್ಕೆ ತಳ್ಳುತ್ತಿದ್ದೇವೆ. ಮಗುವಿನ ಆಸಕ್ತಿ ಯಾವುದಾಗಿರುತ್ತದೆ ಆ ವಿಷಯದಲ್ಲಿ ಮಾತ್ರ ಆಸ್ಪದ ಮಾಡಿಕೊಳ್ಳಲು ಪೋಷಕರು ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಇಂದು ಪೋಷಕರ ಒತ್ತಾಯದ ಮೇಲೆ ಮಕ್ಕಳು ಓದಿನ ವಿಷಯದಲ್ಲಿ ಒತ್ತಡವನ್ನು ಅನುಭವಿಸುತ್ತಿರುವುದು ವಿಷಾದನೀಯ. ಗೂಗಲ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸುಂದರ ಪಿಚೈಯವರು ತಮ್ಮ ಆಸಕ್ತಿಗನು ಗುಣವಾಗಿ ಮುದುವರೆದು ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು. ಅದಕ್ಕೆ ಅವರ ತಂದೆ ತಾಯಿ ಕೂಡ ಒತ್ತಾಸೆಯಾಗಿ ನಿಂತಿದ್ದು ಈಗ ಇತಿಹಾಸ. 18ನೇ ವಯಸ್ಸಿನಲ್ಲಿ ವಿಶ್ವ ಚದುರಂಗ ದಾಟದಲ್ಲಿ ಚಾಂಪಿಯನ್ ಪಟ್ಟ ಪಡೆದ ಗುಕೇಶ್ ದುಮ್ಮರಾಜ್ ಅವರು ನಮ್ಮ ಶೈಕ್ಷಣಿಕ ಸಿದ್ಧಾಂತಕ್ಕೆ ಮಾದರಿಯ ಎನ್ನಬಹುದು. ಪ್ರಕೃತಿ ಎಲ್ಲದಕ್ಕೂ ಮಾರ್ಗವನ್ನು ಒದಗಿಸುತ್ತದೆ ಆ ಮಾರ್ಗಕ್ಕೆ ಅನುಗುಣವಾಗಿ ಮಾನವ ನಡೆದುಕೊಳ್ಳಬೇಕಷ್ಟೆ, ಅದರ ವಿರುದ್ಧವಾಗಿ ನಡೆದಾಗ ಇಲ್ಲದ ಅನಾಹುತಗಳು ನಮ್ಮನ್ನು ಕಾಡುತ್ತವೆ, ಹಾಗೆ ಮಕ್ಕಳ ಭವಿಷ್ಯವೂ ಕೂಡ ಡೋಲಾಯಮಾನ ಸ್ಥಿತಿಯಲ್ಲಿ ತಲುಪುತ್ತದೆ.
ಪೋಷಕರ ಆಲೋಚನೆಯಂತೆ ಮಕ್ಕಳು ರೂಪುಗೊಳ್ಳದೆ ತಮ್ಮ ಆಲೋಚನೆ ಪ್ರಕಾರ ಮಕ್ಕಳು ರೂಪುಗೊಂಡರೆ ಪ್ರಜ್ವಲ ಭವಿಷ್ಯವನ್ನು ಮನದಾಳಬಹುದು. ಸಮಾಜಕ್ಕೆ ಕೊಡುಗೆ ಕೂಡ ನೀಡಬಹುದು.
‘ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದದೇನು ನಮ್ಮೊಳಗೆ’
ಎಂಬ ಜಿ.ಎಸ್. ಶಿವರುದ್ರಪ್ಪ ರವರ ಕವಿ ವಾಣಿ ಇಲ್ಲಿ ಪ್ರಸ್ತುತ.ಏಕೆಂದರೆ ನಾವು ಇಲ್ಲದ ಆಸೆ ಆಮಿಷಗಳಿಗೆ ಬಲಿಯಾಗಿ ನಮ್ಮಲ್ಲೇ ಇರುವ ಸುಖ ಸಂತೋಷವನ್ನು ಕಳೆದುಕೊಂಡಿದ್ದೇವೆ. ಮಾನವ ಪ್ರಾಣಿ ಪಕ್ಷಿಗಳೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದಾನೆ. ಮಾನವ ಯಾಂತ್ರಿಕ ಜಗತ್ತಿನೊಂದಿಗೆ ಅಂಟಿಕೊಂಡು ಜಗತ್ತಿನ ಅವಿಭಾಜ್ಯ ಅಂಗವಾಗಿದ್ದಾನೆ . ಪ್ರಕೃತಿಯ ಸಾಮಿಪ್ಯ ಅವನಿಗೆ ಬೇಡವಾಗಿದೆ.
ಪ್ರಕೃತಿಯನ್ನು ಬಗೆದು ತಿನ್ನುವ ಜಾಯಮಾನಕ್ಕೆ ಒಗ್ಗಿ ಕೊಂಡಿದ್ದಾನೆ . ನೆಲದ ಆಳದಲ್ಲಿರಲಿ ಆಕಾಶದ ಮೇಲಿರಲಿ ನನಗೆ ನಿಲುಕದು ಯಾವುದು ಇಲ್ಲ ಎಂಬ ಅಹಂಕಾರದಲಿ ಮನುಷ್ಯ ಮುನ್ನಡೆಯುತ್ತಿದ್ದಾನೆ. ಈ ಪ್ರಜ್ಞಾವಸ್ಥೆಯ ಮನುಷ್ಯನಿಗೆ ಹಲ್ಲಿಯ ಬಾಲ ತನ್ನಿಂದ ತಾನೇ ವಿಕಾಸಗೊಳ್ಳುವುದು ಎಂಬುದರ ಅರಿವಾಗುವುದಾದರೂ ಹೇಗೆ ?
ಮನುಷ್ಯನಿಗೆ ಎಷ್ಟೇ ಸಮಸ್ಯೆಗಳು ಬಂದರು ಅವು ತನ್ನಿಂದ ತಾನೇ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಮಯವನ್ನು ಕೇಳುತ್ತದೆ. ಅದನ್ನ ಗಮನಿಸದ ಮಾನವನ ಪ್ರಜ್ಞೆ ಅವಸರದ ಬೆಂಕಿಗೆ ಬಲಿಯಾಗುತ್ತಿದೆ . ಮಾನವನ ನೋವು ನಲಿವುಗಳು ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾದರೂ ಕೂಡ ಕೆಲವು ದಿನಮಾನಗಳಲ್ಲಿ ಅವು ಮಾಸಿ ಹೋಗುತ್ತವೆ. ಸುಖವನ್ನು ಬಹುಬೇಗ ಮರೆಯಬಹುದು. ದುಃಖವನ್ನು ಬಹುಬೇಗನೆ ಮರೆಯಲು ಸಾಧ್ಯವಿಲ್ಲ ಆದರೆ ಕಾಲ ಕಳೆದಂತೆ ದುಃಖವೂ ಕೂಡ ಶಮನವಾಗುವುದು ಎಂಬ ನೀತಿ ಈ ನಾಟಕದು.
ಮಕ್ಕಳ ಕಲಿಕೆಯಲ್ಲಿ ಇದನ್ನು ಅರ್ಥೈಸಿಕೊಳ್ಳುವುದಾದರೆ ಮಕ್ಕಳು ಇಂದು ಕಲಿತು ನಾಳೆ ಮರೆತು ಬಿಡುವ ಸನ್ನಿವೇಶಕ್ಕೆ ಒಳಪಡುತ್ತಾರೆ.ಏಕೆಂದರೆ ಅವರು ಕಲಿಕೆಯಲ್ಲಿ ಹಿಂದೆ, ಆಟಿಕೆಯಲ್ಲಿ ಮುಂದೆ ಇರುತ್ತಾರೆ. ಅಂದರೆ ಯಾಂತ್ರಿಕವಾಗಿ ಕಲಿಸುವುದರಲ್ಲಿ ನಾವು ಸೋತಿದ್ದರೆ ಅವರು ಹಿಂದೆ ಬೀಳುತ್ತಾರೆ. ನಾವು ಗುಣಾತ್ಮಕವಾಗಿ ಚಟುವಟಿಕೆ ಮೂಲ ಕಲಿಸಿದರೆ ಅವರು ಆಟದ ಮೂಲಕ ಕಲಿಕೆಯನ್ನು ಇಷ್ಟಪಡುತ್ತಾರೆ.ಕಲಿಕೆ ಆಗಲಿ ಬಿಡಲಿ ಆ ಕಲಿಕೆ ಅವರನ್ನು ಮುಟ್ಟಿರುತ್ತದೆ. ಮುಂದಿನ ದಿನಮಾನಗಳಲ್ಲಿ ಅವರು ವಿಕಾಸಗೊಂಡಂತೆ ಕಲಿಕೆ ಕೂಡ ವಿಕಾಸ ಗೊಳ್ಳುತ್ತದೆ ಎಂಬ ಸಂದೇಶ ನಾಟಕ ಒಳಗೊಂಡಿದೆ. ಮಾತಿನಲ್ಲಿ ಹೇಳುವುದಕ್ಕಿಂತ ಕೃತಿಯಲ್ಲಿ ಹೇಳುವುದು ಉತ್ತಮ ಎಂಬ ಅಂಶ ನಾಟಕ ಒಳಗೊಂಡಿದೆ.
ಕಲಿಕೆಗನುಗುಣವಾಗಿ ನಮ್ಮ ಜೀವನ ಕ್ರಮವೂ ಪಠ್ಯ ಕ್ರಮ ಇರಬೇಕೆಂಬುದು ನಿರ್ದೇಶಕರ ಗಮನವೂ ಕೂಡ ಆಗಿರಬಹುದು. ಈ ನಾಟಕದ ಮೂಲ ನಮ್ಮ ಭಾರತದ ಜನಪದ ಕಥೆಗಳಲ್ಲಿದೆ . ದೇಶ ವಿದೇಶಗಳಲ್ಲಿ 50 ಪ್ರದರ್ಶನಗಳನ್ನು ಕಂಡು ಮುಂದುವರಿಯುತ್ತಿದೆ. ಆಸ್ಟ್ರಿಯಾದ ನಿರ್ದೇಶಕ ಗೆಲ್ಟ್ರುಡ್ ಟ್ರೋಯಿ ಬಿಂಗ್ರರ್. 2020 ರ ಆಸ್ಟ್ರೀಯ ದೇಶದ ವೆಲ್ಸ್ ದ ರಂಗೋತ್ಸವದಲ್ಲಿ ಈ ನಾಟಕ ತನ್ನ ಪ್ರಯಾಣವನ್ನು ಆರಂಭಿಸಿದೆ. ಟರ್ಕಿಯಲ್ಲಿ ನಡೆದ 14ನೇ ಇಂಟರ್ನ್ಯಾಷನಲ್ ಗೊಂಬೆ ಆಟದಲ್ಲಿ ಪ್ರದರ್ಶನಗೊಂಡಿದೆ. ವಿಶ್ವದ ಗೊಂಬೆ ಆಟ ಪ್ರದರ್ಶನಗಳಲ್ಲಿ ಟರ್ಕಿಯ ಈ ಗೊಂಬೆ ಉತ್ಸವವೂ ಕೂಡ ಒಂದಾಗಿದೆ.
ಪೌರಾತ್ಯರು ಪಶ್ಚಿಮದ ಮುಖ ಮಾಡಿದರೆ ಪಶ್ಚಿಮದ ವಿದ್ವಾಂಸರು ಪೌರಾತ್ಯದ ಕಡೆ ಮುಖ ಮಾಡಿದ್ದಾರೆ ಎಂಬುದಕ್ಕೆ ನಾಟಕ ಸಾಕ್ಷಿಯಾಗಿದೆ. ಏಕೆಂದರೆ ಭಾರತ ಬೊಂಬೆಗಳ ತವರು ಎಂಬುದನ್ನು ಸಾಬೀತುಪಡಿಸುವತ್ತ ತನ್ನ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.
– ಡಾ.ರಾಜೇಂದ್ರಕುಮಾರ ಕೆ ಮುದ್ನಾಳ್ ಯಾದಗಿರಿ.