Oplus_131072

ಪ್ರಾಣಿ ಪ್ರಪಂಚದ ಪುಟ್ಟ ಜಿಂಕೆ ಮೌಸ್ ಡೀರ್.

ಈ ದಸರ ರಜೆಯಲ್ಲಿ ನಮ್ಮನೆಯವರ ಸ್ನೇಹಿತರ ಬಳಗದೊಂದಿಗೆ ಮುದ್ದು ಪುಟಾಣಿಗಳ ಒತ್ತಾಸೆಯಂತೆ ಮೃಗಾಲಯಕ್ಕೆ ಹೊರಟು ನಿಂತೆವು. ನನ್ನ ಎರಡು ವರ್ಷದ ಮುದ್ದು ಗೊಂಬೆಯೂ ಅಪ್ಪನ ಹೆಗಲೇರಿತು. ಮೂವರು ಸ್ನೇಹಿತರ ಕುಟುಂಬ 12 ಗಂಟೆಗೆ ತಲುಪಿದ್ದೆವು. ಮಕ್ಕಳಂತೆ ಮೈಯೆಲ್ಲಾ ಕಣ್ಣಾಗಿಸಿ ಎಲ್ಲಾ ಪ್ರಾಣಿಗಳನ್ನು, ಪಕ್ಷಿಗಳನ್ನು, ಹಾವುಗಳನ್ನು, ಜಲಚರಗಳನ್ನು ಜನಜಂಗುಳಿಯ ನಡುವೆ ತೂರಿಕೊಂಡು ನೋಡುತ್ತಾ ನಮ್ಮ ಜೊತೆಗಿದ್ದ ಪುಟಾಣಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಗಿದೆವು. ಹಸಿವು, ಸುಸ್ತು, ಬಾಯಾರಿಕೆ ಎಲ್ಲವೂ ಸೇರಿ ಒಮ್ಮೆ ಹೊರಬಂದರೆ ಸಾಕೆನಿಸಿತ್ತು. ಆದರೂ ಮಕ್ಕಳಂತೆ ಇನ್ನಷ್ಟು ತಿಳಿಯುವ ಕುತೂಹಲ ನಮ್ಮ ಜೊತೆಯಾಯಿತು.

ಹಿಂದೆ ವಿದ್ಯಾರ್ಥಿ ಜೀವನದಲ್ಲಿ ನೋಡಿದ್ದ ಪ್ರಾಣಿಗಳೇ ಅಂದುಕೊಂಡೆ. ಏನು ನೋಡುದಿದೆ ಎಂಬ ಯೋಚನೆ ಮನಸ್ಸಿನಲ್ಲಿ ಸುಳಿಯಲು ಇಲ್ಲ. ಕಾರಣ ತೀವ್ರ ಕುತೂಹಲ ಹಾಗು ಇನ್ನೊಂದಿಷ್ಟು ಜ್ಞಾನ ಜೊತೆ ಸೇರಿ ನನಗೆ ಹುಮ್ಮಸ್ಸು ಮೂಡುವಂತೆ ಮಾಡಿತ್ತು. ಪ್ರಾಣಿ ಪ್ರಪಂಚದ ಕೌತುಕಗಳನ್ನು ನೋಡುತ್ತಾ ವಿವಿಧ ಜಾತಿಯ ಜಿಂಕೆಗಳು ನಮ್ಮನ್ನು ಆಕರ್ಷಿಸಿದವು. ವಲ್ಲಭಿ, ಹಂದಿ ಮೂತಿಯ ಜಿಂಕೆ, ಸಾರಂಗ ಹೀಗೆ ಸಾಗುತ್ತಾ ಹೋದಂತೆ ಅತಿ ಚಿಕ್ಕ ಗಾತ್ರದ ಇಲಿಯ  ಮೂತಿಯನ್ನು ಹೋಲುವ ಮೌಸ್ ಡೀರ್ ನೋಡಿದೆವು. ಇದನ್ನು ನೋಡುತ್ತಿದ್ದಂತೆ ಹಿಂದೊಮ್ಮೆ ನಾನು ಅದನ್ನು ನೋಡಿದ್ದ ನೆನಪು ಮರುಕಳಿಸಿತು. ಬಾಯಲ್ಲಿ ಬರ್ಕ ಎಂಬ ಹೆಸರು ಹಾದು ಹೋಯಿತು.

ನಾನು ಚಿಕ್ಕವಳಾಗಿದ್ದಾಗ ನಮ್ಮ ಮನೆಯ ದನವು ಹಾಡಿಯಲ್ಲಿ (ಅಂದರೆ ಸಣ್ಣ ಕಾರಣ ಕಾಡು) ಮೇಯುತ್ತಿತ್ತು. ಅದ ಹಿಂದೆ ಪುಟ್ಟ ಪ್ರಾಣಿಯೊಂದು ಕುಪ್ಪಳಿಸುತ್ತಾ ಬಂದಿತು. ನಾನು ಮೊಲ ಇರಬಹುದು ಎಂದು ಅದರ ಹತ್ತಿರಕ್ಕೆ ಹೋದೆ. ದನವು ಅದನ್ನು ಮೂಸಿ ನೋಡುತ್ತಿತ್ತು. ದನದ ಉಸಿರಿನ ಹೊಡೆತಕ್ಕೆ ಸಿಕ್ಕಿ ಅದು ನಿಸ್ತೇಜವಾಗಿ ಬಿದ್ದಿತು. ಅದರ ಬಳಿಗೆ ಹೋದಾಗ ಇಲಿಯ ಮೂತಿ, ದನದಂತೆ ಗೊರಸು ಪಾದ ನೋಡಿ ಇದು ಯಾವುದೋ ಹೊಸ ಪ್ರಾಣಿ ಎಂದು ಆಲೋಚಿಸಿದೆ. ಹೆಸರು ಮತ್ತೆ ತಿಳಿದರಾಯಿತು ಮೊದಲು ಅದನ್ನು ಬದುಕಿಸುವ ಆಲೋಚನೆ ಮೂಡಿತು. ನಾನು ಮನೆಗೆ ಬಂದು ನೀರಿನೊಡನೆ ಹಿಂದುರುಗಿದೆ. ಆದರೆ ಅದಕ್ಕೆ ನಡೆಯಲು ಕಷ್ಟ ಪಡುತ್ತಿತ್ತು. ಸ್ವಲ್ಪ ಹೊತ್ತಿನ ಆರೈಕೆಯ ನಂತರ ಅಮ್ಮನಿಗೆ ತಿಳಿಸಿ ಅದನ್ನು ಅಲ್ಲಿಯೆ ಬಿಟ್ಟು ಬಂದಿದ್ದೆ.ಅಮ್ಮ ಅದನ್ನು ಬರ್ಕ ಎಂದೂ ಅದನ್ನು ಬೇರೆ ದೊಡ್ಡವರಿಗೆ ಹೇಳಿದರೆ ಹೊಡೆದು ಕೊಲ್ಲುತ್ತಾರೆ ಎಂದರು. ಜಿಂಕೆಗಳಂತೆ ಸಸ್ಯವನ್ನು ತಿನ್ನತ್ತದೆ ಎಂದರು. ಪ್ರಾಣಿಗಳಿಗೆ ತೊಂದರೆ ಮಾಡಬಾರದೆಂಬ ಪ್ರಜ್ಞೆಯೂ ಜೊತೆಯಾಯಿತು. ಯಾರಿಗೂ ತಿಳಿಸದೆ ಮನೆಗೆ ಹೊರಟೆವು. ಶಾಲೆಯಲ್ಲಿ ಇವತ್ತು ಮಾಡಿದ ಒಳ್ಳೆಯ ಕೆಲಸ ಇದು ಎಂದು ಹೇಳಲು ಯೋಜನೆ ಸಿದ್ದವಾಯಿತು.

ದನದಂತೆ ಗೊರಸು ಇರುವ, ಮೊಲದಂತೆ ಕುಪ್ಪಳಿಸುವ ಈ ಪ್ರಾಣಿಯು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಜಿಂಕೆಯ ಪ್ರಬೇಧವಾಗಿದೆ. ಅವಿರತ ಬೇಟೆಯಾಡುವಿಕೆ ಮತ್ತು ವೇಗವಾಡಿ ಓಡಲಾರದ ಅವುಗಳ ದೌರ್ಬಲ್ಯವೆ ಇವುಗಳ ಅಳಿವಿಗೆ ಕಾರಣವಿರಬಹುದು. ಇಂಗ್ಲೀಷ್ ನಲ್ಲಿ Chevrotain ಎಂದು ಕರೆಯಲ್ಪಡುವ ಈ ರೀತಿಯ ಜಿಂಕೆಗಳು ಏಷ್ಯಾ ಮತ್ತು ಆಪ್ರಿಕಾ ಖಂಡದಲ್ಲಿ ಮಾತ್ರ ಕಾಣಸಿಗುತ್ತವೆ. ಭಾರತದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣ ಸಿಗುವ ಮೌಸ್ ಡೀರ್ ಗಳು ಗಾತ್ರದಲ್ಲಿ ಚಿಕ್ಕದಿದ್ದು 1 ರಿಂದ 4 ಕಿಲೋಗ್ರಾಂ ತೂಕವನ್ನು ಹೊಂದಿರುತ್ತವೆ. ಆಫ್ರಿಕಾದ ಮೌಸ್ ಡೀರ್ ಗಳು7 ರಿಂದ 16 kg ತೂಗುತ್ತವೆ. ಗಾತ್ರದಲ್ಲಿ ಚಿಕ್ಕದಿದ್ದು ಮುದ್ದು ಮಗುವಿನಂತೆ ಮುಗ್ಧ ಪ್ರಾಣಿಯನ್ನು ಕೈಯಲ್ಲಿ ಹಿಡಿದುಕೊಂಡು ಮುದ್ದಿಸುವ ಮನಸ್ಸು ಎಂತವರಿಗಾದರೂ ಬರುತ್ತದೆ.

ಆಫ್ರಿಕಾದ ನೈರುತ್ಯ ಭಾಗದ ಕಾಡುಗಳಲ್ಲಿ ಒಂದು ಪ್ರಬೇಧದ ಮೌಸ್ ಡೀರ್ ಗಳು ನೀರಿನಲ್ಲಿಯೂ ವಾಸಿಸುತ್ತವೆಯಂತೆ. ಪಳೆಯುಳಿಕೆಯಲ್ಲಿ ಈ ಜಾತಿಯ ಅನೇಕ ಪ್ರಬೇಧದ ಜಿಂಕೆಗಳ ಕುರುಹುಗಳು ಪತ್ತೆಯಾಗಿವೆಯಂತೆ. ಮನುಷ್ಯನು ಮಾನವತ್ವದ ನೆಲೆ ಬಿಟ್ಟು ಎಲ್ಲಾ ಪ್ರಾಣಿಗಳನ್ನು ಆಹಾರವಾಗಿ ನೋಡುವ ನೀಚ ಪ್ರವೃತ್ತಿಯಿಂದ ಇಂದು ಅನೇಕ ಪ್ರಾಣಿಗಳು ನಮ್ಮ ನಡುವೆ ಕಣ್ಮರೆಯಾಗಿ ಹೋಗಿವೆ. ಪ್ರಾಣಿ ಪ್ರಪಂಚದ ವಿಸ್ತಾರ ಕಡಿಮೆ ಆಗಿ ಆಗಿ ಕೊನೆಗೊಮ್ಮೆ ಮನುಷ್ಯನೂ ಬದುಕಲು ಅಸಾಧ್ಯವಾದ ಬರಡು ಭೂಮಿಯಾಗಿ ಹೋಗುತ್ತದೆ. ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳ ಮುಗ್ದತೆಯನ್ನು ಕಣ್ತುಂಬಿ ಕೊಳ್ಳುವ ವಿದ್ಯಾವಂತ,ನಾಗರಿಕ, ಪ್ರಜೆಗಳಾದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈ ಭೂಮಿ, ಈ ವನ, ಈ ವನ್ಯ ಸಂಪತ್ತು ನಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸಬೇಕಿದೆ. ಗುರುತರವಾದ ಜವಬ್ದಾರಿ ಹೊತ್ತ ಶಿಕ್ಷಕರಾದ ನಾವು ಮನೆಯ ಮತ್ತು ಶಾಲೆಯ ಮಕ್ಕಳಲ್ಲಿ ಪ್ರಜ್ಞೆ ಮೂಡಿಸಬೇಕಿದೆ. ಪ್ರಕೃತಿಯ ಮಡಿಲಲ್ಲಿ ಸದಾ ಮಕ್ಕಳಾಗಬೇಕಿದೆ. ಪ್ರಕೃತಿ ಎಂಬ ಒಗಟು ಬಿಡಿಸಲು ಹೋದಷ್ಟು ಜಟಿಲ. ಸಾಧಿಸಿದಷ್ಟು ಕಠಿಣ. ಹತ್ತಿರ ಹೋದಷ್ಟು ನಿರ್ದಿಗಂತ.

ವಿಮಲ‌ ಆದರ್ಶ

ಲೇಖಕಿಯರ ಪರಿಚಯ:

ವಿಮಲ ಆದರ್ಶ.

ಕವಯತ್ರಿ  ವಿಮಲ ಆದರ್ಶ ರವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದವರಾಗಿದ್ದು,
ಎಂ.ಎ.ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಧರರಾಗಿದ್ದಾರೆ.
ಇವರು 2016 ರಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕಾಸನಮಕ್ಕಿ ಮುದ್ರಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ಅವು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ