ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ.
– ವೀಣಾ ಹೇಮಂತ್ ಗೌಡ ಪಾಟೀಲ್.
ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ನೆಮ್ಮದಿ. ನೀವು ಸರಿ ಇಲ್ಲ ಎಂದು ವಾದಿಸುವವರ ಮುಂದೆ ನಾನೇ ಸರಿ ಎಂದು ಕಂಠ ಶೋಷಣೆ ಮಾಡಿಕೊಳ್ಳುವು ದರಲ್ಲಿ ಯಾವುದೇ ಲಾಭವಿಲ್ಲ.. ನಿಜವಾಗಿಯೂ ಅವರು ಹೇಳಿದ್ದರಲ್ಲಿ ಸತ್ಯವಿದ್ದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಅಸೂಯೆ ಇದ್ದರೆ ನಿರ್ಧಾಕ್ಷಿಣ್ಯವಾಗಿ ಅಂತಹ ವ್ಯಕ್ತಿಗಳನ್ನು ನಮ್ಮ ಬದುಕಿನಿಂದ ದೂರವಿರಿಸಬೇಕು.
ಯಾವುದೇ ರೀತಿಯ ವಾದ ವಿವಾದಗಳಿಗೆ ಅವಕಾಶ ಕೊಡದ, ದಾಕ್ಷಿಣ್ಯಕ್ಕೆ ಕಟ್ಟು ಬೀಳದ, ಸಂಬಂಧಗಳಿಗೆ
ಬೆಲೆ ಕೊಡಬೇಕು. ಅಂತಹ ವ್ಯಕ್ತಿಗಳಿಗೆ ಏನನ್ನೂ ಹೇಳದೆಯೂ ಎಲ್ಲವನ್ನು ವ್ಯಕ್ತಪಡಿಸಬೇಕು. ನಿಮ್ಮ ಮೌನ ಪ್ರತಿಕ್ರಿಯೆ ಅವರಿಗೆ ಶೂಲದಂತೆ ಭಾಸವಾಗಬೇಕು.
ಮುಂಜಾನೆಯ ಸಮಯ ಮಕ್ಕಳನ್ನು ಶಾಲೆಗೆ ಕಳಿಸುವ ಗಡಿಬಿಡಿಯಲ್ಲಿರುವ ಪತ್ನಿಗೆ ಪತಿ ಕೂಗಿದ್ದು ಕೇಳಿಸುವುದಿಲ್ಲ. ಇದು ಆತನ ಕೋಪಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಆರೋಪ ಹೊರಿಸುತ್ತಾ ಅವರಿಬ್ಬರೂ ಜಗಳ ಮಾಡುತ್ತಾರೆ. ಸಿಟ್ಟಿನಲ್ಲಿ ಸ್ನಾನ ಮಾಡದೆ ಬಟ್ಟೆ ಧರಿಸಿ ಹೊರ ಹೋಗುವ ಆತ, ಅಳುತ್ತಾ ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳುವ ಆಕೆ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕುಳಿತುಕೊಳ್ಳುವ ಮಕ್ಕಳು… ಇದು ಆಗಾಗ ಬಹುತೇಕ ಮನೆಗಳಲ್ಲಿ ಕಾಣುವ ದೃಶ್ಯ.
ದಾರಿಯಲ್ಲಿ ಹೋಗುವಾಗ ಅಕಸ್ಮಾತಾಗಿ ತನ್ನ ಬೈಕಿಗೆ
ಎದುರಾಗಿ ರಾಂಗ್ ಸೈಡ್ ನಲ್ಲಿ ಬಂದ ವ್ಯಕ್ತಿ ಸ್ವಲ್ಪದರಲ್ಲಿಯೇ ಅನಾಹುತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿ ಪರಸ್ಪರ ದೋಷಾರೋಪಣೆ ಮಾಡುತ್ತ
ಪರಿಸ್ಥಿತಿಗೆ ವಿಕೋಪಕ್ಕೆ ಹೋಗುವುದು.ಯಾವುದೋ ಒಂದು ಪಾರ್ಟಿಯಲ್ಲಿ ಕುಳಿತು ಬೇರೆಯವರ ಬಗ್ಗೆ ಹೀನಾಯವಾಗಿ ಮಾತನಾಡಿ ಅವರ ಚಾರಿತ್ರ್ಯ ವಧೆ ಮಾಡುವುದು.
ಮೇಲಿನ ಎಲ್ಲ ಘಟನೆಗಳಿಗೆ ಕಾರಣವಾಗುವುದು ಒಂದು ಆಕಸ್ಮಿಕ ನಡೆ ಮತ್ತು ಅದಕ್ಕೆ ನಾವು ನೀಡುವ ಪ್ರತಿಕ್ರಿಯೆ.
ನಿಮ್ಮ ಇಷ್ಟದ ವಿರುದ್ಧವಾಗಿ ಯಾರಾದರೂ ಏನನ್ನಾದರೂ ಹೇಳಿದಾಗ ನೀವು ತಕ್ಷಣ ಅದಕ್ಕೆ ಒರಟಾಗಿ ಉತ್ತರಿಸುತ್ತೀರಿ. ಅದು ವಾದಕ್ಕೆ ತಿರುಗಬಹುದು…. ಎಷ್ಟೋ ಹೊತ್ತಿನ ನಂತರ ನಿಮಗೆ ಅರ್ಥವಾಗುವ ಸಂಗತಿ ನಿಮ್ಮ ಕುರಿತ ಎಲ್ಲರ ಅಭಿಪ್ರಾಯಗಳಿಗೂ ನೀವು ಉತ್ತರಿಸುವ ಅವಶ್ಯಕತೆ ಇಲ್ಲ ಎಂಬುದು. ಮತ್ತೆ ಕೆಲವೊಮ್ಮೆ ನಾನು ಯಾಕಾದರೂ ಹಾಗೆ ಪ್ರತಿಕ್ರಿಯಿಸಿದೆ ಎಂದು ಬೇಸರಪಟ್ಟುಕೊಂಡು ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ ಅಲ್ಲವೇ?
ಜೀವನದ ಒಂದು ಹಂತದಲ್ಲಿ ಎಲ್ಲರೂ ತಮ್ಮ ಈ ತಪ್ಪನ್ನು ಅರಿತುಕೊಂಡು ನಿಧಾನವಾಗಿಯಾದರೂ ಎಲ್ಲದಕ್ಕೂ ಪ್ರತಿಕ್ರಿಯಿಸಬಾರದು ಎಂಬುದನ್ನು ಅರಿಯುತ್ತಾರೆ.ತಮಗೆ ನೋವುಂಟು ಮಾಡ ಬಯಸುವವರಿಗೆ ತಾವು ಕೂಡ ನೋವುಂಟು ಮಾಡುವ ಮೂಲಕವೇ ಪ್ರತಿಕ್ರಿಯಿಸಬಾರದು ಎಂಬುದನ್ನು ಕಲಿಯುತ್ತಾರೆ. ಯಾರಾದರೂ ನಮ್ಮ ಕುರಿತು ನಮಗಿಷ್ಟವಿಲ್ಲದ ರೀತಿಯ ಮಾತುಗಳನ್ನು ಹೇಳಿದಾಗ ಅಲ್ಲಿಯೇ ಕುಳಿತು ಅವರ ಮಾತಿಗೆ ಪ್ರತಿಕ್ರಿಯೆ ಕೊಡುವುದಕ್ಕಿಂತ ಆ ಸ್ಥಳದಿಂದ ದೂರ ಸರಿಯುವುದು ಪಲಾಯನವಾದವಲ್ಲ…. ಬದಲಾಗಿ ಪ್ರಬುದ್ಧತೆಯ ಲಕ್ಷಣ.
ನಮ್ಮ ವೈಯುಕ್ತಿಕತೆಗೆ ಧಕ್ಕೆ ತರುವ ಯಾವುದೇ ವಿಷಯಕ್ಕೆ ನಾವು ಪದೇ ಪದೇ ಪ್ರತಿಕ್ರಿಯಿಸಿದಾಗ ನಮ್ಮ ಶಕ್ತಿಯ ವ್ಯಯವಾಗುತ್ತದೆ, ಮನಸ್ಸು ವಿಕ್ಷಿಪ್ತತೆಗೆ ಒಳಗಾಗುತ್ತದೆ ಮತ್ತು ಮುಖ್ಯವಾಗಿ ಒಳ್ಳೆಯ ವಿಷಯಗಳನ್ನು ಕೂಡ ತಪ್ಪಾಗಿ ಅರ್ಥೈಸಲು ಪ್ರಾರಂಭಿಸುತ್ತದೆ.
ಎಲ್ಲರೂ ಎಲ್ಲರಿಗೂ ಬೇಕಾದಂತೆ ಬದುಕಲು ಸಾಧ್ಯವಿಲ್ಲ… ಎಲ್ಲರೂ ಕುಡಿಯಲು ಇಚ್ಛಿಸುವ ಚಹಾ ಒಂದೇ ರೀತಿ ಇರಬೇಕೆಂದಿಲ್ಲ. ಅಂತೆಯೇ ನಾವು ಬಯಸಿದಂತೆ ಬೇರೆಯವರು ನಮ್ಮೊಂದಿಗೆ ನಡೆದುಕೊಳ್ಳುವುದಿಲ್ಲ ಎಂಬ ಸತ್ಯವನ್ನು ನಾವು ಅರಿಯಲೇಬೇಕು.
ಎಲ್ಲರನ್ನು ಎಲ್ಲಾ ಕಾಲದಲ್ಲೂ ಮೆಚ್ಚಿಸಲು ಸಾಧ್ಯವಿಲ್ಲ ಎನ್ನುವುದಾದರೆ ಹಾಗೆ ಮೆಚ್ಚಿಸಲು ಮಾಡುವ ಪ್ರಯತ್ನದಿಂದ ನಮ್ಮ ಶಕ್ತಿ ಮತ್ತು ಸಮಯಗಳು ವ್ಯರ್ಥವಾಗುತ್ತವೆ.ಅಂತಿಮವಾಗಿ ನಮಗೆ ದೊರೆಯುವುದು ನಿರಾಶೆ ಮತ್ತು ಖಾಲಿತನ ಎಂಬುದನ್ನು ಅರಿತುಕೊಂಡಾಗ ನಾವು ಬದುಕಿನ ಹೊಸ ಪಾಠವನ್ನು ಅರಿಯುತ್ತೇವೆ.
ಪ್ರತಿಕ್ರಿಯಿಸದೇ ಇರುವುದು ಅವರು ಹೇಳುವ ನಮ್ಮ ಕುರಿತಾದ ವಿಷಯಗಳೆಲ್ಲವೂ ಸರಿ ಎಂದು ಅರ್ಥವಲ್ಲ ಮತ್ತು ಅವರ ಮಾತುಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎಂದಲ್ಲ… ಬದಲಾಗಿ ನಾನು ನನ್ನ ಬದುಕನ್ನು ಅವೆಲ್ಲವುಗಳಿಗಿಂತ ಮೀರಿ ಉನ್ನತವಾಗಿ ಕಟ್ಟಿಕೊಳ್ಳಲು ಇಚ್ಚಿಸುವೆ ಎಂದು.
ಬೇರೆಯವರು ಮಾಡುವ ಟೀಕೆಗಳಿಂದ ನಾನು ಹೊಸ ಹೊಸ ಪಾಠಗಳನ್ನು ಕಲಿತು ನನ್ನನ್ನು ನಾನು ಮರುರೂಪಿಸಿಕೊಳ್ಳಲು, ಮತ್ತಷ್ಟು ಕ್ರಿಯಾಶೀಲವಾಗಿರಲು ಇಚ್ಛಿಸುವೆ.
ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ನೆಮ್ಮದಿ. ನೀವು ಸರಿ ಇಲ್ಲ ಎಂದು ವಾದಿಸುವವರ ಮುಂದೆ ನಾನೇ ಸರಿ ಎಂದು ಕಂಠ ಶೋಷಣೆ ಮಾಡಿಕೊಳ್ಳುವುದರಲ್ಲಿ ಯಾವುದೇ ಲಾಭವಿಲ್ಲ.. ನಿಜವಾಗಿಯೂ ಅವರು ಹೇಳಿದ್ದರಲ್ಲಿ ಸತ್ಯವಿದ್ದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಅಸೂಯೆ ಇದ್ದರೆ ನಿರ್ಧಾಕ್ಷಿಣ್ಯವಾಗಿ ಅಂತಹ ವ್ಯಕ್ತಿಗಳನ್ನು ನಮ್ಮ ಬದುಕಿನಿಂದ ದೂರವಿರಿಸಬೇಕು.
ಯಾವುದೇ ರೀತಿಯ ವಾದ ವಿವಾದಗಳಿಗೆ ಅವಕಾಶ ಕೊಡದ, ದಾಕ್ಷಿಣ್ಯಕ್ಕೆ ಕಟ್ಟು ಬೀಳದ, ಸಂಬಂಧಗಳಿಗೆ
ಬೆಲೆ ಕೊಡಬೇಕು. ಅಂತಹ ವ್ಯಕ್ತಿಗಳಿಗೆ ಏನನ್ನೂ ಹೇಳದೆಯೂ ಎಲ್ಲವನ್ನು ವ್ಯಕ್ತಪಡಿಸಬೇಕು. ನಿಮ್ಮ ಮೌನ ಪ್ರತಿಕ್ರಿಯೆ ಅವರಿಗೆ ಶೂಲದಂತೆ ಭಾಸವಾಗಬೇಕು.
ಕೆಲ ವಿಷಯಗಳಿಗೆ ನೀವು ಭಾವನಾತ್ಮಕವಾಗಿ ವಿಪರೀತ ಪ್ರತಿಕ್ರಿಯೆ ನೀಡುವುದರಿಂದ ಬೇರೆಯವರು ನಿಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗಬಹುದು, ನಿಮ್ಮ ಭಾವನೆಗಳೊಂದಿಗೆ ಆಟವಾಡಲು ಪ್ರಯತ್ನಿಸಬಹುದು.
ಬೇರೆಯವರು ಏನು ಹೇಳುತ್ತಾರೆ ಏನು ಮಾತನಾಡುತ್ತಾರೆ ಎಂಬುದರ ಮೇಲೆ ನಮಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಆದರೆ ಆ ವಿಷಯದ ಕುರಿತು ವೈಯಕ್ತಿಕವಾಗಿ ನಮ್ಮ ಗ್ರಹಿಕೆ ಪ್ರತಿಕ್ರಿಯೆ ಮತ್ತು ಪರಿಸ್ಥಿತಿಯ ನಿಭಾಯಿಸುವಿಕೆ ನಮ್ಮ ನಿಯಂತ್ರಣದಲ್ಲಿರುತ್ತವೆ.ಆದ್ದರಿಂದ ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಕುರಿತು ನಮ್ಮ ಬಲವಾದ ನಂಬಿಕೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.
ಎಷ್ಟೋ ಬಾರಿ ನಮ್ಮನ್ನು ಹೀಯಾಳಿಸುವ ಮೂಲಕ ನಮ್ಮ ತೇಜೋವಧೆ ಮಾಡಲು ಬಯಸುವ ವ್ಯಕ್ತಿಗಳು
ಖುದ್ದು ತಮ್ಮ ಕೀಳು ವ್ಯಕ್ತಿತ್ವದ ಅನಾವರಣ ಮಾಡುತ್ತಾರೆ.
ಬಹಳಷ್ಟು ಬಾರಿ ನಿಮ್ಮ ಪ್ರತಿಕ್ರಿಯೆಗಳಿಂದ ಏನನ್ನೂ ಬದಲಿಸಲು ಸಾಧ್ಯವಾಗುವುದಿಲ್ಲ. ಒಮ್ಮಿಂದೊಮ್ಮೆಲೇ ಯಾರೂ ತಮ್ಮ ಮನಸ್ಸನ್ನು ನಮಗಾಗಿ ಬದಲಾಯಿಸಿಕೊಳ್ಳುವುದಿಲ್ಲ, ನಮ್ಮನ್ನು ಪ್ರೀತಿ ಮತ್ತು ಗೌರವದಿಂದ ಕಾಣುವುದಿಲ್ಲ ಎಂಬುದನ್ನು ಅರಿಯಬೇಕು.
ಕೆಲವೊಮ್ಮೆ ವಿಷಯಗಳು ಇರುವಂತೆ ಬಿಟ್ಟುಬಿಡಬೇಕು, ಅವುಗಳಿಗಾಗಿ ಗುದ್ದಾಡುವುದರಲ್ಲಿ ಅರ್ಥವಿಲ್ಲ. ಯಾವುದೇ ರೀತಿಯ ವಿವರಣೆಗಳನ್ನು, ಉತ್ತರಗಳನ್ನು ಹುಡುಕುವ ಅವಶ್ಯಕತೆ ಇರುವುದಿಲ್ಲ. ಬೇರೆಯವರು ನಮ್ಮನ್ನು ಅರ್ಥೈಸಿಕೊಳ್ಳಲಿ ಎಂದು ಆಶಿಸುವ ಅವಶ್ಯಕತೆಯೂ ಇಲ್ಲ.
ಎಲ್ಲರನ್ನೂ ಎಲ್ಲಾ ಕಾಲದಲ್ಲೂ ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬದುಕಿನಲ್ಲಿ ಮುಂದೆ ಸಾಗಬೇಕು.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ
ಗದಗ್.