ಪ್ರೀತಿಗೆ ನೂರು ಮುಖ (ಕತೆ)
– ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ.
“ಇಂದು ಅವಳ ಅಹಂಕಾರವನ್ನು ಹುಟ್ಟಡಗಿಸಬೇಕು. ಎಷ್ಟು ಜನರ ಎದುರಿನಲ್ಲಿ ನನ್ನ ಅವಮಾನ ಮಾಡಿದಳು ಅವಳು? “ಅಂತ ತನ್ನ ಯೋಚನಾ ಲಹರಿಗೆ ತಡೆ ಹಾಕಿದ ಅಮ್ಮ ಸರಸ್ವತಿಯನ್ನೇ ನೋಡಿದ ವಿನೋದ.
“ಏನೋ ಮಗಾ…..ಕಾಲೇಜಿನಿಂದ ಬಂದಾಗಿನಿಂದ ನೋಡ್ತಾ ಇದ್ದೀನಿ. ನೀನು ಇವತ್ತು ನೀನಾಗಿಲ್ಲ.” ಎಂದು ಮಗನ ಮುಖವನ್ನೇ ನೋಡುತ್ತಾ ಹೇಳಿದಳು.
ಹೌದಮ್ಮಾ… ನೀನು ಹೇಳಿದ್ದು ನೂರಕ್ಕೆ ನೂರು ಸರಿ. ನಾನು ಇಂದು ನಾನಾಗಿಲ್ಲ.ಇಷ್ಟಕ್ಕೆಲ್ಲಾ ಅವಳೇ ಕಾರಣ. ನನ್ನನ್ನು ಎಲ್ಲರೂ ಮುಂದೆ ಅವಮಾನ ಮಾಡಿ ಎಲ್ಲರಿಗೂ ಹಾಸ್ಯಾಸ್ಪದ ವಸ್ತು ನಾನಾದೆ ಇಂದು. ಎಲ್ಲಾ ಅವಳಿಂದಲೇ..ಎಲ್ಲಾ ಅವಳಿಂದಲೇ ಅಂತ ಎರಡೂ ಕೈಗಳನ್ನು ಮುಷ್ಟಿ ಮಾಡಿ ಗೋಡೆಗೆ ಬಡಿಯುತ್ತಿರುವ ವಿನೋದ ನನ್ನು ನೋಡಿ ಸರಸ್ವತಿಗೆ ಗಾಬರಿ ಆಯಿತು.
ಏನೋ ಆಗಬಾರದ್ದು ಆಗಿದೆ. ಅದಕ್ಕೇ ಅವನ ವರ್ತನೆ ಸ್ವಾಭಾವಿಕವಾಗಿಲ್ಲ. ಏನು? ಅಂತ ವಿಚಾರಿಸಲೇ ಬೇಕು ಅಂತ ಮಗನನ್ನು ಕುಳ್ಳಿರಿಸಿ ” ಮಗಾ….ವಿನೋದಾ…ನಾನು ನಿನ್ನ ಹೆತ್ತ ತಾಯಿ. ನಿನ್ನ ಮನಸ್ಸಿನಲ್ಲಿ ಏನೋ ದೊಂಬರಾಟವೋ? ಗೊಂದಲವೋ? ಚಡಪಡಿಕೆಯೋ? ನಡೆಯುತ್ತಿದೆ. ಮನಬಿಚ್ಚಿ ಹೇಳು” ಎಂದು ಸಾವಧಾನವಾಗಿ ನುಡಿದವಳೇ ಮಗನ ಗುಂಗುರು ಕೂದಲಲ್ಲಿ ಕೈಯಾಡಿಸಿದಳು.
ವಿನೋದ ದಡಕ್ಕನೆ ಎದ್ದವನೇ ಅಮ್ಮನನ್ನು ಕೂರಿಸಿ ಆಕ್ರೋಶದಿಂದ ಅಬ್ಬರಿಸಿದ” ಅಮ್ಮಾ ಇಂದು ಅವಳೇನು ಅಂದಳು ಗೊತ್ತಾ? ” ಎಂದು ಹಲ್ಲು ಮಸೆದು, ಕಂಗಳು ಕೆಂಪಡರಿ ಅವನ ಎದೆಯು ವೇಗವಾಗಿ ಹೊಡೆದುಕೊಳ್ಳುವ ಸ್ವರ ಅವಳಿಗೆ ಕೇಳಿಸಿತು.
ದೀರ್ಘವಾಗಿ ಉಸಿರು ತೆಗೆದುಕೊಂಡು ಬಿಡು. ಮನಸ್ಸನ್ನು ತಹಬಂದಿಗೆ ತಂದುಕೋ. ಹತ್ತು ನಿಮಿಷ ನಾನು ಹೇಳಿದಂತೆ ಮಾಡಿ ಒಂದು ಲೋಟ ಬಿಸಿನೀರು ಕುಡಿದು ಮತ್ತೆ ನನ್ನ ಬಳಿ ಬಾ” ಎಂದಳವಳು.
ಶತಪಥ ತಿರುಗುತ್ತಿದ್ದ ವಿನೋದ ” ಅದೆಲ್ಲಾ ನನ್ನಿಂದ ಸಾಧ್ಯವಿಲ್ಲ. ನೀನು ನಿನ್ನ ಯೋಗ ತರಗತಿಯ ವಿದ್ಯಾರ್ಥಿಗಳಿಗೆ ಹೇಳಿಕೊಂಡು. ನಿನ್ನ ಯೋಗದ ಪ್ರಯೋಗ ನನ್ನ ಮೇಲೆ ಬೇಡ. ನನಗೆ ಅದರಲ್ಲೆಲ್ಲಾ ನಂಬಿಕೆಯಿಲ್ಲ” ಎಂದು ವಿನೋದ ತಾಯಿಯನ್ನು ಏಳಲು ಬಿಡಲಿಲ್ಲ.
“ಹಾಗಾದರೆ ಹೇಳು. ಏನು ನಡೆಯಿತು? ಮೊದಲೇ ಕೋಪಿಷ್ಠ ನೀನು. ಧೂರ್ವಾಸ ಮುನಿ. ನನ್ನ ದೇವರ ಸತ್ಯ ನನಗೆ ಗೊತ್ತಿಲ್ಲವೇ? ಎಂದಳು.
“ಅಮ್ಮಾ ಹೇಳುತ್ತೇನೆ ಕೇಳು.
ಇಂದು ನಮ್ಮ ಕಾಲೇಜಿಗೆ ದ್ವಿತೀಯ ಇಂಜಿನಿಯರಿಂಗ್ ತರಗತಿಗೆ ವಿನ್ಯಾಸ ಎಂಬವಳು ಹೊಸತಾಗಿ ಸೇರಿದ್ದಳು. ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿ ಸುಮ್ಮನೆ ಅವಳನ್ನು ರೇಗಿಸಿ ಪದ್ಯ ಹೇಳುತ್ತಿದ್ದೆವು. ತರಗತಿಯ ಪ್ರೀ ಟೈಂ ನಲ್ಲಿ ಅವಳೊಬ್ಬಳೇ ಹೊರಗೆ ಕ್ಯಾಂಪಸ್ ನಲ್ಲಿ ನಿಂತು ಏನನ್ನೋ ಯೋಚನೆ ಮಾಡುತ್ತಿದ್ದಳು. ನಾವೆಲ್ಲಾ ಸೀನಿಯರ್ಸ್ ತಾನೆ? ಸ್ವಲ್ಪ ಅವಳನ್ನು ಆಟ ಆಡಿಸಬೇಕು ಅಂತ ನಾನು, ನನ್ನ ಗೆಳೆಯರು ಸೇರಿ ಅವಳ ಸುತ್ತಲೂ ತಿರುಗುತ್ತಾ” ಗೌರಮ್ಮಾ…. ನಿನ್ನ ಗಂಡ ಯಾರಮ್ಮಾ? ಅಂತ ರಾಗವಾಗಿ ಪದ್ಯ ಹೇಳಿದೆವು. ಹೇಳದೆ ಬಿಡುವುದಿಲ್ಲ ನಿನ್ನನ್ನು ಅಂತ ಹೆದರಿಸಿದೆವು ಸುಮ್ನೆ ತಮಾಷೆಗೆ.
ಅವಳು ಹೆದರದೆ ” ನನ್ನ ಗಂಡನ ಹೆಸರು ಹೇಳಬೇಕಾ? ಹೇಳಿದರೆ ಮಾತ್ರ ಬಿಡುವುದಾ ನನ್ನ? ಏನು
ಚೇಷ್ಟೆ ಮಾಡುತ್ತೀರಾ? ನಾನು ಯಾರು ಅಂತ ಗೊತ್ತಾ?ಈ ಏರಿಯಾದ ಎಸ್.ಐ ವಿಕ್ರಮ್ ನ ತಂಗಿ ವಿನ್ಯಾಸ ಅಂತ ನನ್ನ ಹೆಸರು. ನಿಮ್ಮ ಆಟ ಎಲ್ಲಾ ನನ್ನತ್ರ ನಡೆಯಲ್ಲ” ಅಂತ ಧೈರ್ಯದಿಂದ ಅಂದಳು.
ಉಳಿದ ಹುಡುಗರೆಲ್ಲಾ ಅಲ್ಲಿಂದ ಮೆಲ್ಲನೆ ಜಾರಲು ನೋಡಿದರು. ಅವಳು ವಿಜಯದ ನಗೆ ಬೀರಿದಳು. ಅಂತ ನಿಲ್ಲಿಸಿದ.
ನಾನು ಹೆದರದೆ” ನೀನು ಯಾರಾದರೂ ಆಗು. ನಿನ್ನ ಗಂಡನ ಹೆಸರು ಹೇಳು. ಮತ್ತೆ ನಿನ್ನ ತಂಟೆಗೆ ಬರುವುದಿಲ್ಲ ” ಎಂದೆ.
ಅವಳು ಸೀದಾ ನನ್ನ ಹತ್ತಿರ ಬಂದು ” ನಿನ್ನ ಹೆಸರೇನು? ಅಂತ ಕೇಳಿದಳು.
“ನಿನ್ನ ಗಂಡನ ಹೆಸರು ಹೇಳು ಮೊದಲು”. ಮತ್ತೆ ನನ್ನ ಹೆಸರು ಹೇಳುವೆ ಎಂದೆ.
“ಅವ್ಳಿಗೆ ಮದುವೆ ಆಗಿದೆಯೇನೋ? ” ಅಂತ ಅಮ್ಮ ಮಧ್ಯೆ ಬಾಯಿ ಹಾಕಿದರು.
“ಇಲ್ಲಮ್ಮ.ತಮಾಷೆಗೆ ಯಾವುದೇ ಹೆಸರು ಹೇಳಿ ಹೋಗಬಹುದಿತ್ತು ತಾನೇ? “ ಎಂದ ವಿನೋದ ಅಮ್ಮನನ್ನೇ ನೋಡುತ್ತಾ.
ಆಗ ನನ್ನ ಗೆಳೆಯ” ಅವನ ಹೆಸರು ವಿನೋದ. ಈಗ ಹೇಳು ನಿನ್ನ ಗಂಡನ ಹೆಸರು ಎಂದು ರೇಗಿಸಿದ.
“ನನ್ನ ಗಂಡನ ಹೆಸರು ಕೂಡಾ ವಿನೋದ” ಎಂದು ನನ್ನನ್ನು ನೋಡಿ ನಮ್ಮ ಮುಂದೆಯೇ ಕಾಲಿನ ಚಪ್ಪಲಿ ಅಪ್ಪಳಿಸುತ್ತಾ ಕಾರಲ್ಲಿ ಹತ್ತಿ ಹೋದಳು.
ಸರಸ್ವತಿಯು ಜೋರಾಗಿ ನಕ್ಕು
“ಇಷ್ಟೇ ತಾನೇ? ಇದನ್ನು ಬಿಟ್ಟು ಬಿಡು. ಕಾಲೇಜಲ್ಲಿ ಇದೆಲ್ಲಾ ಇದ್ದದ್ದೇ. ಓದುವ ಬಗ್ಗೆ ಗಮನ ಕೊಡು. ನೀನು ದೊಡ್ಡ ಇಂಜಿನಿಯರ್ ಆಗಬೇಕು. ನಿನ್ನ ಕಾಲಲ್ಲಿ ನಿಲ್ಲಬೇಕು ನೀನು” ಎಂದು ಸಮಾಧಾನ ಮಾಡುತ್ತಾ ಅವಳ ಪಾಡಿಗೆ ಹೋದಳು.
“ನಾಳೆ ಅವಳು ಬರಲಿ. ಗಂಡ ಅಂತ ನನ್ನನ್ನೇ ಅಂದಳಲ್ಲಾ? ಹೇಗೂ ಗಂಡ ತಾನೇ? ಅವಳ ಕೈ ಹಿಡಿದೆಳೆಯಬೇಕು.” ಅಂತ ಅವನ ಮನಸ್ಸು ಅವಳ ಸುತ್ತವೇ ಗಿರಕಿ ಹೊಡೆಯುತ್ತಿತ್ತು.
ಮರುದಿನ ಕಾಲೇಜಿಗೆ ತಯಾರಾದಾಗ ತಂಗಿ ನೀರಜಾ ಬಂದು “ನಿನ್ನ ಹೆಂಡತಿ ವಿನ್ಯಾಸ ನಾ?” ಎಂದು ತಮಾಷೆ ಮಾಡಿದಾಗ
“ವಿನ್ಯಾಸ ನಾ? ಸನ್ಯಾಸವಾ? ನೀನೊಬ್ಬಳು ಬಾಕಿ ಇದ್ದೆ ರೇಗಿಸಲು. ನನಗೆ ಬರುವ ಕೋಪದಲ್ಲಿ… ಎಂದಾಗ
“ಹೋಗಿ ವಿನ್ಯಾಸಳಿಗೆ ತಾಳಿ ಕಟ್ಟುವೆಯಾ? ಅಂತ ಜೋರಾಗಿ ನಕ್ಕಾಗ
ಕೋಪದಿಂದ ” ಹೌದು ಕಣೇ.ಅವಳನ್ನು ಒಂದು ಕೈ ನೋಡಿಕೊಳ್ಳುವೆ” ಎಂದು ಬುಲೆಟ್ ಸ್ಟಾರ್ಟ್ ಮಾಡಿ ಹೋದ.
ಕಾಲೇಜಲ್ಲಿ ಸರಿಯಾಗಿ ಪಾಠ ಕೇಳಲು ಆಗಲಿಲ್ಲ. ಯಾವತ್ತೂ ಹೀಗೆ ಆಗಿರಲಿಲ್ಲ. ಎಂದು ಸಂಜೆ ಆಗುವುದನ್ನೇ ಕಾದು ಅವಳ ತರಗತಿಯ ಬಳಿ ಹೋದ.
ವಿನ್ಯಾಸ ಅವಳ ಗೆಳತಿಯರೊಂದಿಗೆ ಬರುತ್ತಿದ್ದಳು. ಸೀದಾ ಕೋಪದಲ್ಲಿ ನೋಡನೋಡುತ್ತಿದ್ದಂತೆ ಅವಳ ಕೈ ಹಿಡಿದು ಬಲವಾಗಿ ಚುಂಬಿಸಬೇಕೆನಿಸುವಷ್ಟರಲ್ಲಿ ಅವಳು ಕೈ ಕೊಡವಿಕೊಂಡಳು.
“ನಿನಗೆ ಇದೆ ಮುಂದೆ.” ಎಂದು ಅವಳನ್ನೇ ಎವೆಯಿಕ್ಕದೆ ನೋಡಿದ. ಅವಳ ಕಣ್ಣು ತುಂಬಿ ಬಂದು ಕಣ್ಣೀರು ಬರಲು ಆರಂಭವಾಯಿತು. ಅವಳ ಗೆಳತಿಯರೆಲ್ಲ ಚದುರಿ ಹೋದರು.
ಬುಲೆಟ್ ನಲ್ಲಿ ವೇಗವಾಗಿ ಮನೆಗೆ ಬಂದ ವಿನೋದ ತಾನೇನೋ ದೊಡ್ಡ ಸಾಹಸ ಮಾಡಿದಂತೆ ಬೀಗಿದ. ಅಮ್ಮನ ಬಳಿ ಹೇಳಿದರೆ ಬೈಗುಳ ಗ್ಯಾರಂಟೀ ಅಂತ ಮೌನವಾಗಿ ಓದಲು ಕುಳಿತ.
ನೀರಜಾ ಬಂದು” ತಾಳಿ ಕಟ್ಟಿದೆಯಾ ರಾಜಾ? ರಾಜಕುಮಾರಿ ಎಲ್ಲಿ?” ಎಂದು ಕೇಳಿದಾಗ
“ಎಲ್ಲರ ಮುಂದೆ ಅವಳ ಕೈ ಎಳೆದು ಮುತ್ತು ಕೊಡಬೇಕೆನಿಸುವಷ್ಟರಲ್ಲಿ ಕೈ ಕೊಡವಿದಳು” ಎಂದ ಮೀಸೆ ತಿರುವುತ್ತಾ.
“ಅಯ್ಯೋ ಅಣ್ಣಾ….ಇದು ಸರಿಯಲ್ಲ. ನೀನು ವಿದ್ಯಾವಂತ. ಬುದ್ದಿವಂತ. ಹೆಣ್ಣನ್ನು ಗೌರವದಿಂದ ಕಾಣಬೇಕು. ಅವಳ ಕಣ್ಣಲ್ಲಿ ನೀರು ತರಿಸಿ ನಿನಗೇನು ಸಾಧಿಸಿದಂತಾಯಿತು ಈಗ.? ಅವಳಿಗೆ ಬೇಸರವಾಗಿರಬಹುದು ಪಾಪ.” ಎಂದಾಗ.
“ಅವಳಾ….ಪಾಪ..ಇಂದು ಬುದ್ಧಿ ಕಲಿಸಿದೆ. ಇನ್ನು ನನ್ನ ಸುದ್ದಿಗೆ ಬರಬಾರದು ಅವಳು” ಎಂದ ವ್ಯಂಗ್ಯದಿಂದ ನಗುತ್ತಾ.
ಮಾರನೇ ದಿನ ನೀರಜಾ “ಅಣ್ಣಾ… ಅವಳಲ್ಲಿ ಕ್ಷಮೆ ಕೇಳು. ಅವಳ ಅಣ್ಣ ಎಸ್.ಐ. ಸುಮ್ಮನೆ ಕೆಟ್ಟ ಹೆಸರು ತರಬೇಡ” ಎಂದಾಗ ವಿನೋದನಿಗೆ ಒಳಗೊಳಗೇ ಸ್ವಲ್ಪ ಹೆದರಿಕೆ ಆಯಿತು.
ಪಾಠವನ್ನು ಕೇಳಲೂ ಆಗದೆ ಕಳವಳ,ಬೇಸರ, ಆಯಿತು. ಸ್ವಲ್ಪ ಹೊತ್ತಿನಲ್ಲಿ ಪ್ರಿನ್ಸಿಪಾಲ್ “ವಿನೋದನನ್ನು ಕರೆಯುತ್ತಿದ್ದಾರೆ” ಎಂದು ಪ್ಯೂನ್ ಲೆಟರ್ ತಂದಾಗ ಕೆಮೆಸ್ಟ್ರಿ ಲೆಕ್ಚರರ್ “ವಿನೋದ್ ವಾಂಟೆಡ್ ಪ್ರಿನ್ಸಿಪಾಲ್” ಎಂದಾಗ ಎದೆ ಡವ ಡವ ಹೊಡೆದುಕೊಳ್ಳಲಾರಂಭಿಸಿತು.
ಪ್ರಿನ್ಸಿಪಾಲ್ ನ ಛೇಂಬರ್ ನಲ್ಲಿ
“ವಿನ್ಯಾಸ ತನ್ನ ಅಣ್ಣ ನೊಂದಿಗೆ ನಿಂತಿದ್ದಳು. ಎಸ್.ಐ ಖಾಕಿ ಡ್ರೆಸ್ ನಲ್ಲಿ ಇದ್ದುದನ್ನು ನೋಡಿ ತಲೆ ತಗ್ಗಿಸಿದ.
ಪ್ರಿನ್ಸಿಪಾಲ್ ” ವಿನೋದ… ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ. ಉತ್ತಮ ಆಟಗಾರ. ಕಲಿಯುವುದರಲ್ಲೂ ಮೊದಲಿಗ . ಈ ವರ್ಷ ಅವನಿಂದ ರೇಂಕ್ ನಿರೀಕ್ಷೆ ಮಾಡುತ್ತಿದ್ದೇವೆ. ನೀವು ಅವನ ಮೇಲೆ ಆರೋಪ ಹಾಕಿದರೆ ಹೇಗೆ?” ಎಂದರು.
ಎಸ್.ಐ ವಿಕ್ರಮ್ ನನ್ನ ತಂಗಿ ಬಂದು ನನ್ನಲ್ಲಿ ಎಲ್ಲವನ್ನೂ ಹೇಳಿದಳು. ನೀವು ಈಗಲೇ ವಿಚಾರಿಸಿ. ನಿಂತಿದ್ದಾನಲ್ಲಾ ನಿಮ್ಮ ಮುಂದೆ ನಿಮ್ಮ ಅಚ್ಚುಮೆಚ್ಚಿನ ವಿದ್ಯಾರ್ಥಿ? ಎಂದು ವ್ಯಂಗ್ಯದಲ್ಲಿ ಹೇಳಿದ.
ವಿನೋದ ” ಕ್ಷಮಿಸಿ ಸರ್. ನಾನು ನಿನ್ನೆ ಅವಳ ಕೈ ಎಳೆದದ್ದು ಹೌದು. ನನ್ನಿಂದ ತಪ್ಪಾಗಿದೆ. ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಿದ್ದೇನೆ ಎಂದು ಮೊದಲು ಆದ ಸಂಗತಿಯನ್ನೂ ಹೇಳಿದನು.
ಪ್ರಿನ್ಸಿಪಾಲ್ ರಿಗೆ ಆಶ್ಚರ್ಯ ಆಯಿತು. “ನಿನ್ನಿಂದ ಇದನ್ನು ನಾನು ನಿರೀಕ್ಷೆ ಮಾಡಲಿಲ್ಲ. ಛೇ! ನಿನ್ನ ಬುದ್ಧಿ ಎಲ್ಲಿ ಹೋಗಿತ್ತು?” ಎಂದರು ಕೋಪದಿಂದ.
ಆಗ ವಿನ್ಯಾಸ ಳು ನನಗೆ ಮದುವೆ ನಿಶ್ಚಿತಾರ್ಥ ಆಗಿದೆ. ವಿದೇಶದಲ್ಲಿ ಇಂಜಿನಿಯರ್ ಆಗಿರುವ ಅವರ
ಹೆಸರು ವಿನೋದ ಅಂತ. ಹಾಗೆ ಇವರು ಕೇಳಿದಾಗ ನನ್ನ ಗಂಡನಾಗುವವರ ಹೆಸರು ವಿನೋದ ಎಂದೆ. ಅಷ್ಟಕ್ಕೇ ಇವರು ಮರುದಿನ ಈ ರೀತಿ ಅಸಭ್ಯವಾಗಿ ವರ್ತಿಸುವ ನಿರೀಕ್ಷೆ ನನಗಿರಲಿಲ್ಲ ಎಂದಳು.
“ಆದದ್ದೆಲ್ಲಾ ಆಯಿತು. ಕೆಟ್ಟ ಕನಸು ಅಂತ ಮರೆತು ಬಿಡು. ವಿನೋದ ಇನ್ನು ಮುಂದೆ ನಿನ್ನ ತಂಟೆಗೆ ಬರಲ್ಲ. ಈಗ ಅವನನ್ನು ಕ್ಷಮಿಸಿ ಬಿಡು” ಎಂದರು ಪ್ರಿನ್ಸಿಪಾಲ್.
ಅವನು “ಕ್ಷಮೆ ನನ್ನ ಬಳಿ ಕೇಳಿದರೆ ಕ್ಷಮಿಸುವೆ” ಎಂದಳು ವಿನ್ಯಾಸ.
“ಇಂತಹವರಿಗೆ ಬುದ್ಧಿ ಬರಬೇಕಾದರೆ ಒದ್ದು ಒಂದು ವಾರ ಸಸ್ಪೆಂಡ್ ಮಾಡಬೇಕು” ಎಂದು ಎಸ್.ಐ ವಿಕ್ರಮ್ ಗುಡುಗಿದ.
ವಿನೋದ ಕೋಪವನ್ನು ಅದುಮಿಟ್ಟು” ಕ್ಷಮಿಸಿ ವಿನ್ಯಾಸರವರೇ. ನಾನು ದುಡುಕಿದೆ. ಇನ್ನು ಮುಂದೆ ಹೀಗಾಗಲ್ಲ” ಎಂದಾಗ
ವಿನ್ಯಾಸ ” ಸರಿ.ಕ್ಷಮಿಸುವೆ” ಎಂದಳು.
ವಿಕ್ರಮ್ ಕೆಂಪಡರಿದ ಕಂಗಳಿಂದ ವಿನೋದ ನನ್ನೇ ನೋಡ್ತಾ ಎಚ್ಚರಿಕೆ ಕೊಟ್ಟು ಹೋದರು.
ವಿನೋದನಿಗೆ ಈಗ ನಿಜವಾಗಿಯೂ ತಲೆಕೆಟ್ಟಿತ್ತು. ವಿನ್ಯಾಸಳಿಗೆ ಮದುವೆ ನಿಶ್ಚಿತಾರ್ಥ ಆಗಿದೆ ಎನ್ನುವ ಸಂಗತಿಯನ್ನೇ ಅರಗಿಸಲಾಗಲಿಲ್ಲ ಅವನಿಗೆ.
ಮನೆಗೆ ಬಂದಾಗಲೂ ಅವಳ ಮುದ್ದು ಮುಖವೇ ಕಣ್ಣೆದುರಿಗೆ ಬಂದು ಕಾಡುತ್ತಿತ್ತು. ನನಗೇಕೆ ಇಷ್ಟು ಸಂಕಟವಾಗುತ್ತಿದೆ ಎನಿಸಿತು.
ಅವಳಿಗೆ ಮದುವೆ ನಿಶ್ಚಿತಾರ್ಥ ಆದರೆ ನನಗೇನು? ನನಗೆ ಅವಳನ್ನು ಕಂಡರೆ ಸಿಟ್ಟು ಬರುವುದಷ್ಟೇ.. ಅವಳನ್ನು ನಾನು ದ್ವೇಷಿಸುತ್ತಿರುವೆ. ನನ್ನನ್ನು ಅವಮಾನ ಮಾಡಿದವಳಲ್ಲವೇ? ಯಾರನ್ನು ಬೇಕಾದರೂ ಆಗಲಿ ನನಗೇನು? ಅಂತ ತನ್ನ ಮನಸ್ಸಿಗೆ ಸಮಾಧಾನ ತರಲು ಯೋಚಿಸಿದರೆ
ಇದರಲ್ಲಿ ಅವಳೇನು ತಪ್ಪು ಇಲ್ಲ. ಅವಳ ಗಂಡನಾಗುವ ಹೆಸರನ್ನೇ ಹೇಳಿದ್ದಾಳೆ. ಅವಳು ನನ್ನನ್ನು ಲೇವಡಿ ಮಾಡಲು ಹೇಳಿರುವುದಲ್ಲ ಅಂತ ತಿಳಿದಾಗ ಕರುಳು ಹಿಂಡಿದಂತಾಯಿತು.
ವಿನ್ಯಾಸಳ ನೆನಪು ಪದೇ ಪದೇ ಕಾಡಲು ಸುರು ಆಯಿತು. ಪುಸ್ತಕ ಓದಲು ಬಿಡಿಸಿದರೆ ಅವಳದೇ ಮುದ್ದು ಮುಖ. ಮಲಗಿದಾಗಲೂ ಕಾಡಿ ಅವನಿಗೆ ಇದು ಏನಾಗುತ್ತಿದೆ ? ನನಗೆ ಎಂದರಿವಾಗುತ್ತಿಲ್ಲ ಎಂದಾಗ ತಂಗಿ ನೀರಜಾಳ ಬಳಿ ಎಲ್ಲವನ್ನೂ ಹೇಳಿ ಹಗುರಾದ.
ನೀರಜಾ ತಕ್ಷಣ ಹೇಳಿದಳು ” ಅಣ್ಣಾ… ನೀನು ವಿನ್ಯಾಸಳನ್ನು ಪ್ರೀತಿಸುತ್ತಿರುವೆ. ಎಲ್ಲಾ ಪ್ರೇಮ ಪ್ರಕರಣ ಜಗಳದಿಂದಲೇ ಆರಂಭ ಆಗುವುದು. ಆದರೆ ನಿನಗೆ ಅದೃಷ್ಟ ಇಲ್ಲ.ಅವಳಿಗೆ ಮದುವೆ ನಿಶ್ಚಿತಾರ್ಥ ಆಗಿದೆ .ಅವಳನ್ನು ಮರೆತು ನಿನ್ನ ವಿದ್ಯಾಭ್ಯಾಸ ದ ಬಗ್ಗೆ ಗಮನ ಕೊಡು” ಎಂದಳು.
ಸರಸ್ವತಿ ಕೂಡಾ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಕೊಡು ಎಂದಳು.
ವಿನೋದನು “ಆಗಲಿ ” ಎಂದು ಹೇಳಿ ತಲೆಯಾಡಿಸಿದರೂ ಈ ವಿನ್ಯಾಸಳನ್ನು ಅವನ ಮನದಿಂದ ಹೊರ ಓಡಿಸಲು ಆಗಲೇ ಇಲ್ಲ.
ಇಲ್ಲ… ನಾನು ಸೋಲಬಾರದು. ಏನು ಅವಳೊಬ್ಬಳೇ ಹುಡುಗಿ ಇರುವುದಾ? ನನಗೆ ಈ ವರ್ಷ ಕಲಿತರೆ ಆಯಿತು ಅಂತ ನಿರತ ಸಾಧನೆ ಗೈದ.ಅಮ್ಮನ ಮಾರ್ಗದರ್ಶನದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಕಲಿತ.
ಮಗನಲ್ಲಿ ಆದ ವಿಶೇಷ ಬದಲಾವಣೆಯನ್ನು ಸರಸ್ವತಿಯು ಗಮನಿಸಿ ಸಂತುಷ್ಟಳಾದಳು.
ವಿನೋದನಿಗೆ ಕ್ಯಾಂಪಸ್ ಸಂದರ್ಶನದಲ್ಲಿ ದೊಡ್ಡ ಎಂ.ಎನ್.ಸಿ ಕಂಪೆನಿಯಲ್ಲಿ ಉದ್ಯೋಗವೂ ದೊರಕಿತು.
ಹಾಗೆ ಬಹಳ ಸಂತೋಷವಾಯಿತು. ಆ ದಿನ ಅಚಾನಕ್ಕಾಗಿ ವಿನ್ಯಾಸ ಎದುರಿಗೆ ಸಿಕ್ಕಳು. ವಿನೋದ ಪರಿಚಯದ ನಗೆಬೀರಿ ಹೊರಟಾಗ
ವಿನ್ಯಾಸ ” ರೀ.. ವಿನೋದರವರೇ…ನಿಲ್ಲಿ. ನನ್ನ ಮೇಲಿನ ಕೋಪ ಇನ್ನೂ ಹೋಗಿಲ್ಲವೇ” ಎಂದು ದುಂಬಿ ಕಂಗಳನ್ನರಳಿಸಿ ಕೇಳಿದಾಗ ಅವಳನ್ನು ಅಲ್ಲೇ ಬಾಚಿ ತಬ್ಬಬೇಕೆನಿಸಿತು.
“ಹಾಗೇನಿಲ್ಲ. ನಾನು ಬ್ಯುಸೀ ನೋಡಿ. ಅಂತಿಮ ವರ್ಷ ಪ್ರೋಜೆಕ್ಟ್, ಸೆಮಿನಾರ್ ಅಂತ ಇರುತ್ತದೆ. ನನಗೆ ಕೆಲಸ ಸಿಕ್ಕಿತು ” ಎಂದ ಸಂತಸದಿಂದ.
ಹೌದಾ? ತುಂಬಾ ಸಂತೋಷ. ನನಗೆ ಪಾರ್ಟಿ ಕೊಡಿಸಬೇಕು ನೀವು” ಎಂದಳವಳು ನಗುತ್ತಾ.
ಪಾರ್ಟಿ ಎಲ್ಲಾ ಯಾಕೆ ? ಬಿಡಿ. ನಿಮ್ಮ ಅಣ್ಣ ಏನಾದರೂ ನೋಡಿದರೆ ನನ್ನ ಕತೆ ಮುಗಿಯಿತು. ಬೇಡಪ್ಪಾ ಬೇಡ. ನಿಮ್ಮಂತವರ ಸಹವಾಸ ” ಎಂದಾಗ
ವಿನ್ಯಾಸನ ಅಭಿನಯಕ್ಕೆ ಜೋರಾಗಿ ನಕ್ಕಾಗ ಎವೆಯಿಕ್ಕದೆ ಆವಳನ್ನೇ ನೋಡಿದ ವಿನೋದ.
ಮತ್ತೆ…. ನಿಮ್ಮ ಮದುವೆ ಯಾವಾಗ? ಈ ವರ್ಷ ಅಲ್ಲದೆ ಇನ್ನೂ ಒಂದು ವರ್ಷ ಬಾಕಿಯಿದೆ. ನಂತರವೇ ಮದುವೆಯಾ? ಅಂತ ಕೇಳಿದ ವಿನೋದನ ದನಿಯಲ್ಲಿ ಸಣ್ಣ ನೋವಿನ ಎಳೆಯೊಂದು ಕಾಣಿಸಿತ್ತು.
“ಹೌದು.ಅವರು ಅಮೇರಿಕಾದಲ್ಲಿ ಕೆಲಸ ಮಾಡುತ್ತಾರೆ. ನನ್ನ ಓದು ಮುಗಿದ ನಂತರ ಮದುವೆ. ಮತ್ತೆ ನಾನು ವಿದೇಶಕ್ಕೆ ಹೋಗುವೆ” ಎಂದಳು ನಾಚುತ್ತಾ.
ಅವನೇನೂ ಪ್ರತಿಕ್ರಿಯಿಸದೆ ಅವಳದೇ ಗುಂಗಿನಲ್ಲಿ ಹೋದಾಗ ಅಕಸ್ಮಾತ್ ಅವನ ಬೈಕ್ ಎದುರು ಬಂದ ನಾಯಿಯನ್ನು ಕಾಪಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದವನ ಕೈಗೆ ಬಲವಾದ ಪೆಟ್ಟಾಗಿತ್ತು. ಅಲ್ಲಿ ಸೇರಿದವರೆಲ್ಲಾ ಅವನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿ, ವಿಳಾಸ ಪಡೆದು ಅವನ ಬೈಕ್ ಅವನ ಮನೆಗೆ ಕೊಂಡೊಯ್ದು ಅವನ ತಾಯಿಗೆ ವಿಷಯ ತಿಳಿಸಿದರು.
“ಅಯ್ಯೋ ನನ್ನ ಕಂದಾ… “ಅಂತ ಓಡೋಡಿ ಬಂದಳು ಆಸ್ಪತ್ರೆಗೆ ಸರಸ್ವತಿ. ಆಗಲೇ ಕೈ ಎಕ್ಸ್ ರೇ ಮಾಡಿದಾಗ ಕೈ ಎಲುಬು ಮುರಿದ ಕಾರಣ ಸರ್ಜೆರಿ ಆಗಿ ವಾರ್ಡ್ ಗೆ ಶಿಫ್ಟ್ ಮಾಡಿದ್ದರು.
“ಏನು ಮಾಡಿದೆ ಕಂದಾ? ಇನ್ನು ಕೈ ಸರಿ ಆಗಲು ತುಂಬಾ ಸಮಯ ಬೇಕು. ಕೆಲಸ ಬೇರೆ ಸಿಕ್ಕಿದೆ. ಸ್ಪೀಡಾಗಿ ಬರಬೇಡ ಅಂತ ಎಷ್ಟು ಸಲ ಹೇಳಿದ್ದೆ ನಿನಗೆ? ಆ ನಾಯಿ ಬಂದು ಇಷ್ಟೆಲ್ಲಾ ಮಾಡಿತು” ಅಂತ ನಾಯಿಗೆ ಶಾಪ ಹಾಕಿದಳು.
ತಾಯಿಯ ವಾತ್ಸಲ್ಯ ಕ್ಕೆ ವಿನೋದನ ಮನ ಕರಗಿ ಹೋಗಿತ್ತು. ನೀರಜಾಳೂ ವಿಷಯ ಗೊತ್ತಾಗಿ ಆಸ್ಪತ್ರೆಗೆ ಬಂದು ಕಣ್ಣೀರು ಹಾಕಿದಳು.
ಛೇ! ಏನು ನೀವೆಲ್ಲರೂ ಇಷ್ಟು ಒದ್ದಾಡುವುದು? ನನಗೆ ಕೈಗೆ ಮಾತ್ರ ತಾಗಿದೆ. ಬೇರೆನೂ ಆಗಲಿಲ್ಲ” ಎಂದ ನಗುತ್ತಾ.
ಸರಸ್ವತಿಯು ಒಂದು ವಾರ ಆಸ್ಪತ್ರೆಯಲ್ಲಿ ನಿಲ್ಲುವಂತಾಯಿತು. ನೀರಜಾ ಮನೆಯಲ್ಲಿ ಅಡುಗೆ ಮಾಡಿ ಆಸ್ಪತ್ರೆಗೆ ತಂದು ಕೊಟ್ಟು ಕಾಲೇಜಿಗೆ ಹೋಗುತ್ತಿದ್ದಳು.
ವಿನೋದನ ಸ್ನೇಹಿತರೆಲ್ಲಾ ಆಸ್ಪತ್ರೆಗೆ ಬಂದು ಬೇಗ ಹುಷಾರಾಗಿ ಬಾ ಎಂದು ಹಾರೈಸಿ ಹೋದರು.
ಆ ದಿನ ಸರಸ್ವತಿ “ಮನೆಗೆ ಹೋಗಿ ಬಟ್ಟೆ ಎಲ್ಲಾ ಒಗೆದು ಸಂಜೆ ಬರುತ್ತೇನೆ. ನೀರಜಾಗೆ ಸ್ವಲ್ಪ ಜ್ವರವಂತೆ. ಇವತ್ತು ಊಟ ಕ್ಯಾಂಟೀನಿಂದ ತರಿಸಿಕೋ ಎಂದಳು.
ಆ ದಿನ ವಿನ್ಯಾಸ, ವಿನೋದ ನನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದಿದ್ದಳು. ಯಾವಳನ್ನು ಸಂಪೂರ್ಣವಾಗಿ ಮರೆಯಬೇಕು ಅಂದುಕೊಂಡಿದ್ದೇನೋ ಆವಳೇ ಪ್ರತ್ಯಕ್ಷವಾಗಿದ್ದಳು.
“ವಿನೋದರವರೇ…ಈಗ ಹೇಗಿದೆ ಕೈ ನೋವು? ಅಂತ ಕೇಳಿದಾಗ ಅವಳ ಕಣ್ಣುಗಳು ತುಂಬಿ ಬಂದಿದ್ದವು.
“ಪರವಾಗಿಲ್ಲ. ನೋವು ಕಡಿಮೆ ಆಗಿದೆ. ನೀನು ಕಾಲೇಜಿಗೆ ರಜೆ ಹಾಕಿ ಇಲ್ಲಿಗೆ ಬರುವ ಆಗತ್ಯ ಏನಿತ್ತು? “ಎಂದು ಕಟುವಾಗಿ ನುಡಿದಾಗ
ವಿನ್ಯಾಸ ಗಾಬರಿಯಾಗಿ” ನಾನು ನಿಮ್ಮನ್ನು ನೋಡಲು ಬರಬಾರದೇ? ನಿಮ್ಮನ್ನು ನೋಡಿಕೊಳ್ಳಲು ಯಾರಿದ್ದಾರೆ ಇಲ್ಲಿ” ಅಂತ ಕಾಳಜಿಯಿಂದ ಕೇಳಿದಳು.
“ಅಮ್ಮ ಇದ್ದಾರೆ. ಸ್ವಲ್ಪ ಕೆಲಸ ಇತ್ತು ಅಂತ ಮನೆಗೆ ಹೋಗಿದ್ದಾರೆ”. ಅಂದು ಪೇಪರ್ ಓದುತ್ತಾ ಕುಳಿತ.
ಅವಳಿಗೆ ಚಡಪಡಿಕೆ ಆಯಿತು. “ನೋಡಿ. ಇಲ್ಲಿ ನಿಮಗೋಸ್ಕರ ನಾನು ಪೊಂಗಲ್ ಮಾಡಿ ತಂದಿರುವೆ” ಎಂದವಳ ದನಿಯಲ್ಲಿ ಪ್ರೀತಿಯ ಮಹಾಪೂರವೇ ಹರಿದಿತ್ತು.
“ಯಾಕೆ ತರಲು ಹೋದೆ? ನನಗೆ ಹಸಿವಿಲ್ಲ ಈಗ. ಮಧ್ಯಾಹ್ನದ ಊಟ ಕ್ಯಾಂಟೀನಿಂದ ತರಿಸುವೆ” ಎಂದಾಗ ಅವಳ ಕಂಗಳು ಕೊಳಗಳಾಗಿದ್ದವು.
ಅವಳು “ಸ್ವಲ್ಪ ತಿಂದು ನೋಡಿ ಎಂದು ಹೇಳಿದುದಕ್ಕೆ ಪಾಪ ಅಂತ ಅನಿಸಿ ” ಬುತ್ತಿ ಮುಚ್ಚಳ ತೆಗೆಯಿರಿ. ಎಂದಾಗ ಖುಷಿಯಿಂದ ತೆಗೆದು ಕೊಟ್ಟಳು.ಅವನು ಕಷ್ಟ ಪಟ್ಟು ಎಡಗೈಯಲ್ಲಿ ಚಮಚದಲ್ಲಿ ತಿನ್ನುವುದನ್ನು ನೋಡಿದ ಅವಳು ತನ್ನ ಕೈಯಾರೆ ತಿನಿಸಿದಳು. ಇಬ್ಬರ ಕಂಗಳು ಮೌನ ಸಂಭಾಷಣೆ ನಡೆಸುತ್ತಿದ್ದರೆ ವಿನೋದ ಎಲ್ಲವನ್ನೂ ತಿಂದು ಬಿಟ್ಟ. ನಾಚಿಗೆ ಆಯಿತವನಿಗೆ. ನೀರು ಕೊಟ್ಟಳು ಅವಳು.
ಆಗಲೇ ರೌಂಡ್ಸ್ ಗೆ ಬಂದ ಡಾಕ್ಟರ್ ಹೇಮಾ” ಏನು ಇವತ್ತು ತುಂಬಾ ಖುಷಿ ಆಗಿದ್ದೀರಿ ಅನಿಸುತ್ತೆ. ಸಂಜೆ ಡಿಸ್ಚಾರ್ಜ್ ಮಾಡಿಸುವ. ಈ ಹುಡುಗಿ ಯಾರು? ನಿಮ್ಮ ಗರ್ಲ್ ಫ್ರೆಂಡಾ?ಎಂದು ಅವಳೆಡೆಗೆ ತಿರುಗಿ “ಬ್ಯೂಟಿ ಫುಲ್. ಸ್ವೀಟ್ ಕ್ವೀನ್ ಟೇಕ್ ಕೇರ್ ಆಫ್ ಹಿಮ್” ಎಂದಾಗ ತಲೆ ಆಡಿಸಿದಳು.
ವಿನ್ಯಾಸ… ನೀನು ಮನೆಗೆ ಹೋಗು. ಇನ್ನೇನು ನನ್ನ ತಾಯಿ ಬರುತ್ತಾರೆ.ನೀನು ಊಟ ಮಾಡಿದೆಯಾ? ಅಂತ ಕೇಳಿದ.
“ಇಲ್ಲ.ನನಗೆ ಈಗ ಊಟ ಸೇರಲ್ಲ. ನಿಮ್ಮ ಅಮ್ಮ ಬರುವವರೆಗೆ ನಾನಿಲ್ಲಿ ನಿಲ್ಲಬೇಕಾ?” ಅಂತ ಸಣ್ಣ ಮಗುವಿನ ಹಾಗೆ ನುಡಿದವಳನ್ನು ಮುದ್ದಿಸಬೇಕೆನಿಸಿತು. ಬಾಚಿ ತಬ್ಬಬೇಕೆನಿಸಿತು.
“ಹೋಗು ವಿನ್ಯಾಸ…. ಬೇಡ. ಇಲ್ಲಿ ಕೂರಬೇಡ”. ಎಂದು ಕಷ್ಟಪಟ್ಟು ಹೇಳಿದ. ಅವನ ಒಳಮನಸ್ಸು ನನ್ನೆದುರಿಗೆ ಈ ಸುಂದರ ಚೆಲುವೆ ಹೀಗೆಯೇ ಕುಳಿತಿರಬೇಕು. ನಾನು ಅವಳ ಮಡಿಲಲ್ಲಿ ಮಗುವಾಗಿ ಮಲಗಬೇಕು ಅಂತ ಅನಿಸಿತು.
ಆದರೆ ಯಾವ ಬಾಯಿಯಿಂದ ಹೇಳಲಿ? ಅವಳ ಅಣ್ಣ ಎಸ್.ಐ. ಮದುವೆ ನಿಶ್ಚಿತವಾದ ಹುಡುಗಿ ನನ್ನ ಬಳಿ ಸಲಿಗೆಯಿಂದ ಯಾಕೆ ಇರುತ್ತಾಳೆ? ನನ್ನ ಮನಸ್ಸಿಗೆ ಹತ್ತಿರ ಆಗಲು ಅವಳೇ ಬರುತ್ತಿದ್ದಾಳೆ ಅನಿಸಿತು.
“ಆಯಿತು. ನಾನು ಹೋಗುವೆ” ಎಂದು ಹೋದವಳನ್ನೇ ನೋಡಿದ. ಅವಳು ಕೂಡಾ ಅದೇ ಹೊತ್ತಿಗೆ ತಿರುಗಿ ನೋಡಿದಳು. ಮಿಂಚಿನ ಸಂಚಾರವಾಯಿತು ಇಬ್ಬರಲ್ಲೂ.
ಮನೆಗೆ ಬಂದು ಹದಿನೈದು ದಿನ ವಿಶ್ರಾಂತಿ ಪಡೆದ ನಂತರ ಕಾಲೇಜಿಗೆ ಹೋದ.
ವಿನ್ಯಾಸ ಓಡಿ ಬಂದು” ನಿಮಗಾಗಿಯೇ ಕಾಯುತ್ತಿದ್ದೆ” ಅಂತ ಹೇಳಿ ತುಟಿ ಕಚ್ಚಿಕೊಂಡಳು. ಮನದ ಮಾತು ಅಚಾನಕ್ಕಾಗಿ ಬಾಯಲ್ಲಿ ಬಂದು ಹೋಗಿತ್ತು.
“ನನಗೆ ಯಾರೂ ಕಾಯಬೇಕೆಂದು ಇಲ್ಲ. ನಿನಗಾಗಿ ಅಲ್ಲಿ ಅಮೇರಿಕಾದಲ್ಲಿ ವಿನೋದ
ಕಾಯುತ್ತಿರುವನಲ್ಲಾ? ಅವನ ಬಳಿ ಹೇಳಿದರೆ ತುಂಬಾ ಖುಷಿ ಪಟ್ಟಾನು ” ಅಂತ ಹೇಳಿ ಅವಳನ್ನು ನೋಡದೆ ತನ್ನ ತರಗತಿಗೆ ಹೋದ.
ವಿನೋದನಿಗೆ ಬೆಂಗಳೂರಲ್ಲಿ ಕೆಲಸ ಸಿಕ್ಕಿತು. ವಿನ್ಯಾಸಳಿಗೆ ಇನ್ನೂ ಒಂದು ವರ್ಷ ಕಲಿಯುವುದಿತ್ತು.
ಇನ್ನು ಇವಳಲ್ಲಿ ಮಾತಾಡಿ ಹತ್ತಿರ ಮಾಡುವುದು ಬೇಡ ಅಂತ ಗಟ್ಟಿ ನಿರ್ಧಾರ ಮಾಡಿ ಬೆಂಗಳೂರಿಗೆ ಹೊರಟ.
“ವಿನ್ಯಾಸ…ನನಗೆ ಕಾಲ್ ಮಾಡಬೇಡ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು. ನನಗೆ ತೊಂದರೆ ಕೊಡಬೇಡ” ಅಂತ ಹೇಳಿ ಪೋನ್ ಕರೆ ಕಟ್ ಮಾಡಿದ.
ಆದರೂ ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ತಂಗಿ ನೀರಜಾಳಿಂದ ಅವಳ ಬಗ್ಗೆ, ವಿಚಾರಿಸಿ ತಿಳಿಯುತ್ತಿದ್ದ. ಒಬ್ಬಳೇ ಮಗಳು. ತುಂಬಾ ಶ್ರೀಮಂತ ಕುಟುಂಬ. ತಾಯಿ,ತಂದೆ ಇಲ್ಲ. ಅಣ್ಣನ ಜೊತೆ ಇದ್ದಾಳೆ ಅಂತ ತಿಳಿದು ಬಂತು.
ಒಂದು ದಿನ ವಿನೋದನೇ ಅವಳ ನಂಬರಿಗೆ ಬೇರೆ ನಂಬರ್ ನಿಂದ ಕಾಲ್ ಮಾಡಿದ. ಅವಳು ” ಹಲೋ.. ಎಂದಾಗ ಕಟ್ ಮಾಡಿದ. ಹೀಗೆ ಎರಡು ಮೂರು ಸಲ ಮಾಡಿದಾಗ ನಾಲ್ಕನೇ ಬಾರಿಗೆ” ಹಲೋ…ಯಾರ್ರೀ ನೀವು? ಕಾಲ್ ಮಾಡಿ ತೊಂದರೆ ಕೊಡುವುದು? ಎಂದಳು.
“ನಾನು ಹೇಳಿದ್ದು ನೀನು ಕಾಲ್ ಮಾಡಬೇಡ ಎಂದು. ನಾನು ಮಾಡುವುದಿಲ್ಲ ಎಂದಿಲ್ಲವಲ್ಲಾ” ಎಂದು ರೇಗಿಸಿದ.
“ನೀವು ಭಾರೀ ಕಿಲಾಡಿ. ಇದ್ದೀರಿ. ಹೇಳಿ ಏನು ವಿಶೇಷ?” ಎಂದಳು.
ನಿನ್ನ ಪರೀಕ್ಷೆ ಮುಗಿದಿರಬೇಕಲ್ಲಾ? ಕೇಳಿದ.
“ಪರೀಕ್ಷೆ ಮುಗಿಯಿತು. ಕ್ಯಾಂಪಸ್ ನಲ್ಲಿ ಕೆಲಸವೂ ಆಯಿತು ಬೆಂಗಳೂರಲ್ಲಿ.”ಎಂದಳು.
“ಯಾವ ಕಂಪೆನಿ?” ಅಂತ ಕೇಳಿದ ಕುತೂಹಲದಿಂದ.
ನನ್ನದು ಅಪ್ಲೈಡ್ ಮೆಟೇರಿಯಲ್ಸ್ ಕಂಪೆನಿ ಎಂದಳು.
ಹೋ..ಹಾಗಾದರೆ ನನ್ನದೇ ಕಂಪೆನಿ. ಎಲ್ಲಿ ಉಳಿದುಕೊಳ್ಳುವೆ? ಕೇಳಿದ.
“ಪಿ.ಜಿ ಯಲ್ಲಿ” ಎಂದಳು.
“ವಿನೋದ ಬಂದರೇ ಅಮೇರಿಕಾದಿಂದ. ಮದುವೆ ಯಾವಾಗ? ಕೇಳಿದ ತನ್ನ ಭಾವನೆಗಳನ್ನು ಆದಷ್ಟು ಅದುಮಿಟ್ಟು.
“ವಿನೋದ ಅಮೇರಿಕಾದಲ್ಲಿಲ್ಲ” ಎಂದಳು ನಗುತ್ತಾ.
ಮತ್ತೆ,!!!? ವಿನೋದನ ಪ್ರಶ್ನೆ.
“ನಿಜಾ ಹೇಳಬೇಕಾ ವಿನೋದ್…ನನಗೆ ಮದುವೆ ನಿಶ್ಚಿತಾರ್ಥ ಆಗಲಿಲ್ಲ. ವಿನೋದ್ ಅಂತ ನಿನ್ನ ನ್ನು ಬಿಟ್ಟು ನನಗೆ ಬೇರೆ ಯಾರೂ ಗೊತ್ತಿಲ್ಲ” ಎಂದಳು.
“ನಿನ್ನನ್ನು ನಂಬಬಹುದಾ,?” ಕೇಳಿದ ಆಶ್ಚರ್ಯದಿಂದ.
“ಖಂಡಿತ ನಂಬಬಹುದು. ನಾನು ನಿನ್ನನ್ನು ಪ್ರೀತಿಸುತ್ತೇನೆ ವಿನೋದ್. ನನ್ನ ಪ್ರೀತಿಯನ್ನು ಹೇಗೆ ವ್ಯಕ್ತ ಪಡಿಸುವುದು ತಿಳಿಯುತ್ತಿಲ್ಲ. ನಾನು ನನ್ನ ಭಾವನೆಗಳಿಗೆ ಕಡಿವಾಣ ಹಾಕಲು ಸುಳ್ಳು ಹೇಳಿದೆ. ನೀನು ಕೂಡಾ ಒಂದು ಉದ್ಯೋಗ ಹಿಡಿದು ನೆಲೆ ಆಗಬೇಕೆಂದು ಹೀಗೆ ಮಾಡಿದೆ.
“ನೀನೂ ನನ್ನನ್ನು ಪ್ರೀತಿಸುವಿ” ತಾನೇ? ಕೇಳಿದಳು ಕಾತುರತೆಯಲ್ಲಿ.
“ವಿನ್ಯಾಸ….ಒಂದು ವೇಳೆ ನಾನು ನಿನ್ನ ನ್ನು ಪ್ರೀತಿಸುವುದಿಲ್ಲ ಎಂದರೆ ಏನು ಮಾಡುವೆ? ಎಂದು ಕೇಳಿದಾಗ
ವಿನ್ಯಾಸ ಮಾತೇ ಆಡಲಿಲ್ಲ. ಮತ್ತೆ ನಿನ್ನ ನೆನಪಲ್ಲೇ ಜೀವನ ವಿಡೀ ಕಳೆಯುತ್ತೇನೆ” ಎಂದು ಕಾಲ್ ಕಟ್ ಮಾಡುವೆ ಎಂದಾಗ
” ಕೇಳಿಲ್ಲಿ. ನಿನ್ನ ನೋಡಿದ ಮೊದಲ ದಿನವೇ ನಾನು ನಿನ್ನನ್ನು ನನ್ನ ಹೃದಯದಲ್ಲಿ ಇಟ್ಟು ಆರಾಧಿಸಿದೆ. ಯಾವಾಗ ನಿನಗೆ ಮದುವೆ ನಿಶ್ಚಿತಾರ್ಥ ಆಗಿದೆ ಎಂದು ಹೇಳಿದೆಯೋ ಅದೇ ದಿನದಿಂದ ನಿನ್ನನ್ನು ಮರೆಯಲು ಯತ್ನಿಸಿದೆ. ಆದರೆ ಸಾಧ್ಯ ಆಗಲೀಲ್ಲ. ನಿನ್ನನ್ನು ದೂರವಿಟ್ಟು ನನ್ನ ಪ್ರೀತಿಯನ್ನು ನಾನೇ ಕೊಲ್ಲಲು ನೋಡಿದೆ. ಮತ್ತೆ ನೀನು ನನಗೆ ಹತ್ತಿರ ಆಗಲು ಯತ್ನಿಸಿದೆ. ಯಾಕೆ? ಅಂತ ಯಕ್ಷಪ್ರಶ್ನೆ ಕಾಡುತ್ತಲೇ ಇತ್ತು.ಕಳ್ಳಿ. ನೀನು ನನ್ನನ್ನು ಆಡಿಸಿಬಿಟ್ಟೆ. ನಮ್ಮ ಮದುವೆಗೆ ನಿನ್ನಣ್ಣ ವಿಕ್ರಮ್ ಒಪ್ಪುವರೋ?” ಅಂತ ಕೇಳಿದಾಗ
“ನಾನು ಮನಸಾರೆ ಒಪ್ಪಿರುವೆ. ಬಾ ನಮ್ಮ ಮನೆಗೆ. ನನ್ನ ತಂಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಇಲ್ಲದಿದ್ದರೆ ಒದ್ದು ಒಳಗೆ ಹಾಕುವೆ” ಎಂದು ಪೋಲೀಸ್ ಭಾಷೆಯಲ್ಲಿ ವಿಕ್ರಮ್ ಅಂದಾಗ
ವಿನೋದ” ನನ್ನ ಕಣ್ಣರೆಪ್ಪೆಯಂತೆ ನೋಡಿಕೊಳ್ಳುತ್ತೇನೆ. ವಿನ್ಯಾಸ ನನ್ನವಳು. ನನಗೆ ಅವಳಿಲ್ಲದೆ ಬದುಕಿಲ್ಲ” ಎಂದಾಗ.
“ಬಾರೋ ಬದ್ಮಾಷ್. ನಾಳೆಯೇ ಹೊರಟು ಬಾ. ನನ್ನ ತಂಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾಳೆ ಇಲ್ಲಿ” ಎಂದ.
“ವಿನ್ಯಾಸಳಿಗೆ ಕೊಡಿ ಸರ್” ಎಂದ.
” ಹಲೋ…. ಬಂದಾಗ ಮಾತನಾಡುವ ಆಗದೇ? ಕೇಳಿದಳು”. ವಿನ್ಯಾಸ.
“ಒಂದೇ ಮಾತು ವಿನ್ಯಾಸ…”ಐ ಲವ್ ಯೂ ವಿನ್ಯಾಸ ”ಎಂದ.
ವಿನ್ಯಾಸಳೂ” ಐ ಲವ್ ಯೂ ಟೂ” ಎಂದಳು.
ವಿನೋದ ಕುಣಿದು ಕುಪ್ಪಳಿಸಿದ. ತಾಯಿ ತಂಗಿಗೆ ಕಾಲ್ ಮಾಡಿ ಎಲ್ಲಾ ವಿಷಯ ಹೇಳಿದ. ಅವರಿಗೂ ತುಂಬಾ ಸಂತೋಷ ಆಯಿತು.
ಕೊನೆಗೆ ವಿನೋದ ತನ್ನಲ್ಲೇ ಹೇಳಿಕೊಂಡ” ಪ್ರೀತಿಗೆ ನೂರು ಮುಖ”. ವಿನ್ಯಾಸ ಒಬ್ಬಳೇ ಕೈಗೆ ಸಿಗಲಿ.ಕೇಳಬೇಕು ಅವಳನ್ನು” ಪ್ರೀತಿಗೆ ಎಷ್ಟು ಮುಖ? ಅಂತ. ವಿನ್ಯಾಸಳನ್ನು ಹೃದಯದಲ್ಲಿಟ್ಟು
“ವಿನ್ಯಾಸ…. ನೀನು ಎಂದೆಂದಿಗೂ ನನ್ನವಳು ಕಣೇ” ಎಂದು ಎಷ್ಟು ಬಾರಿ ಕೂಗಿದನೋ ಅವನಿಗೇ ತಿಳಿಯದು. ಪ್ರೀತಿ ಎಂದರೆ ಹಾಗೆಯೇ. ಅವ್ಯಕ್ತ ಅನುಭೂತಿ ಎಂದವನ ಕಣ್ಣಲ್ಲಿ ಕೋಟಿ ನಕ್ಷತ್ರಗಳು ಪ್ರಜ್ವಲಿಸುತ್ತಿದ್ದವು.
ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ