ಪ್ರೀತಿಯ ಪರಿಭಾಷೆ.
– ವೀಣಾ ಹೇಮಂತ್ ಗೌಡ ಪಾಟೀಲ್.
ನನ್ನೂರಿನ ಪುಟ್ಟ ಸ್ನೇಹಿತೆ ನನಗೆ ಮೆಸೇಜ್ ಮಾಡಿದ್ದರು. ಯಾವಾಗಲೂ ನನ್ನ ಗಂಡ ನನ್ನ ಜೊತೆ ಇರಬೇಕು ಅಂತ ಬಯಸೋದು ತಪ್ಪಾ? ನನ್ನ ಗಂಡ ಹೆಚ್ಚು ಮಾತಾಡೋದೇ ಇಲ್ಲ!. ಕೇಳಿದ ತರಕಾರಿ ದಿನಸಿ ಪದಾರ್ಥಗಳನ್ನು ತಂದು ಕೊಡ್ತಾರೆ, ಅದೆಷ್ಟೇ ಒಳ್ಳೆಯ ಅಡುಗೆ ಮಾಡಿ ಹಾಕಿದ್ರೂ ಯಾವುದೇ ರೀತಿಯ ಕಾಂಪ್ಲಿಮೆಂಟ್ ಕೊಡೋದಿಲ್ಲ ಅಡುಗೆ ಎಷ್ಟೇ ಕೆಟ್ಟದಾಗಿದ್ರೂ ಕೂಡ ಕೆಟ್ಟದಾಗಿ ಕಮೆಂಟ್ ಕೂಡ ಮಾಡೋದಿಲ್ಲ. ನಾನು ಏನು ಹೇಳಿದರೂ ಅದಕ್ಕೆ ತಲೆ ಆಡಿಸಿ ಸುಮ್ಮನಾಗ್ತಾರೆ…. ಇದ್ಯಾಕೆ ಹೀಗೆ ಎಂದು ಆಕೆ ಕೇಳಿದಾಗ ತುಸು ಯೋಚನೆಗೆ ಬಿದ್ದೆ.
ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ, ವಿಶಿಷ್ಟ. ಕೆಲವರು ಅದೆಷ್ಟೇ ಮೃಷ್ಟಾನ್ನ ಭೋಜನವಿದ್ದರೂ ಅದರಲ್ಲಿ ಕೊಂಕು ತೆಗೆಯುತ್ತಾರೆ, ಕಮೆಂಟ್ ಮಾಡುತ್ತಾರೆ… ಒಂದು ರೀತಿ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ… ಮನೆಯ ಪ್ರತಿ ಸದಸ್ಯರು ಮಾಡುವ ಕೆಲಸಗಳಿಗೆ ಹೆಸರಿಡುವುದೇ ಅವರ ಜಾಯಮಾನ ವಾಗಿರುತ್ತದೆ. ಇತ್ತಣ ಕಡ್ಡಿಯನ್ನು ತೆಗೆದು ಅತ್ತ ಇಡದೆ ಹೋದರೂ ತಾವು ಎಲ್ಲರಿಗಿಂತಲೂ ದೊಡ್ಡವರು, ತಾವು ಮಾತ್ರ ಸರಿ ತಮ್ಮ ಮಾತನ್ನು ಎಲ್ಲರೂ ಕೇಳಬೇಕು ಎಂಬ ಭಾವದಿಂದ ತುಸು ಹೆಚ್ಛೇ ದರ್ಪ ಭಾವದಿಂದ ನಡೆಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ತಮ್ಮ ಗಂಡಂದಿರು ಹೀಗೆ ಇರುವುದನ್ನು ಅನಿವಾರ್ಯವಾಗಿಯಾದರೂ ಸಹಿಸಿಕೊಳ್ಳುತ್ತಾರೆ.
ಹಾಗಾದರೆ ಇದರಲ್ಲಿ ಯಾರು ಸರಿ ಯಾರು ತಪ್ಪು ಎಂದು ವಿಶ್ಲೇಷಿಸಿದಾಗ ಎಲ್ಲವೂ ಅವರವರ ದೃಷ್ಟಿಕೋನ ಎಂದು ಸುಮ್ಮನಾಗಿ ಬಿಡಬಹುದು.
ಮತ್ತೆ ಕೆಲ ಪುರುಷರು ತಮ್ಮ ಪತ್ನಿಯ ಕೈ ಹಿಡಿದು ಸಾರ್ವಜನಿಕವಾಗಿ ಓಡಾಡದಿರಬಹುದು, ಹೆಂಡತಿಗೆ ಪ್ರೀತಿಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದೆ ಹೋಗಬಹುದು, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳನ್ನು ಮರೆತು ಬಿಡಬಹುದು. ಹೂವಿನ ಗುಚ್ಚವನ್ನು ಕೈಗಿಡದೆ ಇರಬಹುದು,ನಡೆವ ಹಾದಿಯಲ್ಲಿ ಹೂವ ಹಾಸಿಗೆಯನ್ನು ಹಾಸದಿರಬಹುದು, ಮೇಣದ ಬತ್ತಿಯ ಬೆಳಕಿನಲ್ಲಿ ಊಟ ಸವಿಯದೆ ಹೋಗಬಹುದು, ಯಾವುದೇ ಗಿಫ್ಟ್ ತರದೇ ಇರಬಹುದು… ಆತನ ಪ್ರೀತಿಯ ಆಳದ ಅರಿವು ನಿಮಗಾಗದಿರಬಹುದು . ಶಾಂತ ಸಮುದ್ರದಂತೆ ತೋರುವ ಆತನ ಮನಸ್ಸಿನ ಆಳದಲ್ಲಿ ಪ್ರೀತಿಯ ಮುತ್ತು ರತ್ನಗಳನ್ನು ನೀನು ಕಾಣ ದಿರಬಹುದು. ನಿನ್ನನ್ನು ಮುಟ್ಟದೆಯೂ ಆತ ನಿನ್ನೆದೆಯ ವೀಣೆಯ ತಂತಿಯನ್ನು ಮೀಟಿ ಮಧುರ ಭಾವಗಳ ನಾದವನ್ನು ಹೊಮ್ಮಿಸಬಲ್ಲ.
ತನ್ನಿಷ್ಟದ ಹಾಡನ್ನು ಗುನುಗುನಿಸುತ್ತಲೇ ಆತ ಪಾತ್ರೆಗಳನ್ನು ಶಬ್ದ ಮಾಡದೆ ತಿಕ್ಕಿ ತೊಳೆದಿಡಬಲ್ಲ.
ಮಕ್ಕಳು ಅಲ್ಲಲ್ಲಿ ಎಸೆದ ಬಟ್ಟೆಗಳನ್ನು ಆಟಿಕೆಗಳನ್ನು ಎತ್ತಿ ಇಡಬಲ್ಲ. ಪತ್ನಿ ಅಡುಗೆ ಮಾಡುವಾಗ ಮಕ್ಕಳ ಹೋಂವರ್ಕ್ ಮಾಡಿಸಬಲ್ಲ… ಎಲ್ಲರ ಊಟ ಮುಗಿದ ಮೇಲೂ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವಾಗ ತಮ್ಮ ಮಕ್ಕಳಿಗೆ ಕಥೆ ಹೇಳಿ ಮಲಗಿಸಿ ಪತ್ನಿಗಾಗಿ ಹಾಸಿಗೆಯ ತುದಿಯಲ್ಲಿ ಕಾಯುತ್ತಾ ಕೂರಬಲ್ಲ.
ಒಂದೊಂದು ದಿನ ಪತ್ನಿ ತಡವಾಗಿ ಎದ್ದಾಗ ಸಮಸ್ತವನ್ನು ಓರಣವಾಗಿರಿಸಿ, ಮಕ್ಕಳಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ, ತಿಂಡಿಯನ್ನು ತಯಾರಿಸಿ ತಿನ್ನಿಸಿ ಅವರ ಸ್ಕೂಲ್ ಬ್ಯಾಗ್ ಗಳನ್ನು ಅಣಿ ಮಾಡಿ ಲಂಚ್ ಬ್ಯಾಗನ್ನು ಪ್ಯಾಕ್ ಮಾಡಿ ಶೂ ಗಳನ್ನು ಧರಿಸಲು ಅನುವು ಮಾಡಿಕೊಟ್ಟು ಸ್ಕೂಲ್ ವ್ಯಾನ್ ಗೆ ಹತ್ತಿಸಿ ಬರುವ ಆಕೆಯ ಗಂಡ ಆಕೆಗೋಸ್ಕರ ಕಾಫಿ ಡಿಕಾಕ್ಷನ್ ತಯಾರಿಸಿ ಇಡುತ್ತಾನೆ. ಗಾಬರಿಯಿಂದ ಎದ್ದು ಬರುವ ಆಕೆಗೆ ಬಿಸಿಯಾದ ಕಾಫಿ ಕೊಟ್ಟು ಮೃದುವಾಗಿ ಕೈಯನ್ನದುಮಿ ತಾನು ಕಚೇರಿಗೆ ಹೊರಡಲು ತಯಾರಾಗಲು ಹೋಗುವ ಗಂಡ ಆಕೆಯನ್ನು ಪ್ರೀತಿಸುವುದಿಲ್ಲ ಎಂದು ಯಾಕೆ ಭಾವಿಸುತ್ತಾಳೋ… ನಾ ಕಾಣೆ.
ಪತ್ನಿ ಕೊಟ್ಟ ದಿನಸಿಯ ಲಿಸ್ಟ್ ನ ಎಲ್ಲ ಸಾಮಾನುಗಳ ಜೊತೆಗೆ ಆಕೆಯ ಇಷ್ಟದ ಫ್ಲೆವರ್ ನ ಐಸ್ಕ್ರೀಮ್ ತರುವ ಆತ ಆಗಾಗ ಆಕೆಯನ್ನು ಕಾಡುವ ಬೆನ್ನು ನೋವಿಗೆ ಮಸಾಜ್ ಮಾಡಲು ಮರೆಯುವುದಿಲ್ಲ. ಆತನ ಈ ಕಾಳಜಿ ಆಕೆಯ ಮನವನ್ನು ಹೂವಾಗಿಸುತ್ತದೆ
ಆಫೀಸಿನ ಕೆಲಸದಿಂದ ದಣಿದು ಮನೆಗೆ ಬರುವ ಆಕೆ ಅದೆಷ್ಟೇ ಕೆಟ್ಟ ಅಡುಗೆ ಮಾಡಿದರೂ ಸೊಲ್ಲೆತ್ತದೆ ತಿಂದು ಮುಗಿಸುವ ಆತನ ತಾಳ್ಮೆಯ ಹಿಂದಿನ ಪ್ರೀತಿ ಆಕೆಯನ್ನು ತಟ್ಟುತ್ತದೆ. ಈ ಕುರಿತು ಆಕೆ ಕೇಳಿದಾಗ ಯಾವಾಗಲೂ ಅಡುಗೆ ಚೆನ್ನಾಗಿಯೇ ಇದ್ದು ಒಂದೊಂದು ದಿನ ಕೆಟ್ಟರೆ ಏನಾಗುತ್ತದೆ?
ಅನುಸರಿಸಿಕೊಳ್ಳುವುದು ಒಳ್ಳೆಯದು ಎಂಬ ಮೆದುವಾದ ಮಾತು ಆತನ ಬಾಯಿಂದ ಕೇಳಿಯೂ ಕೇಳದಂತೆ ಹೊರ ಹೊಮ್ಮುತ್ತದೆ.
ಮನೆ ಕೆಲಸ ಮಕ್ಕಳ ಕೆಲಸ ಆಫೀಸಿನ ಒತ್ತಡದ ನಡುವೆ ಆಕೆ ಒದ್ದಾಡುವಾಗ ಸದ್ದಿಲ್ಲದೇ ಹೊರಗಿನ ತಿಂಡಿ ತಂದು ಮಕ್ಕಳಿಗೆ ತಿನ್ನಿಸಿ ಆಟವಾಡಲು ಬಿಟ್ಟು ಆಕೆಯ ಪಕ್ಕದಲ್ಲಿಯೇ ತೂಗುಯ್ಯಾಲೆಯ ಮೇಲೆ ಕುಳಿತು ಮೌನ ಸಂವಾದ ನಡೆಸುವ ಆತನ ಪ್ರೀತಿಯ ಆಳ ಆಕೆಗಲ್ಲದೆ ಇನ್ನಾರಿಗೆ ಗೊತ್ತಾಗಬೇಕು.
ಅವರ ಸಂಬಂಧವನ್ನು ಚಿಕ್ಕ ಪುಟ್ಟ ಕ್ರಿಯೆಗಳಿಂದ ಪೋಷಿಸುವ ಆತ ಯಾವುದೇ ರೀತಿಯ ನಾಟಕೀಯ ವರ್ತನೆಗಳಿಂದ ದೂರ ಬಹು ದೂರ. ಆದರೆ ಆಕೆಗಾಗಿ ಅರ್ಥ ಮಾಡುವ ಹಲವಾರು ಕೆಲಸಗಳಲ್ಲಿ ಆತನ ಪ್ರೀತಿಯ ವ್ಯಕ್ತ ರೂಪ ದೊರೆಯುತ್ತದೆ. ಬೇರೆಯವರಿಗೆ ಇದೇನು ಮಹಾ! ಎಂದು ತೋರಬಹುದಾದರೂ ಆತನ ಈ ಮೌನ ಪ್ರೇಮ ಆಕೆಯ ಎದೆಯಲ್ಲಿ ಅಮೃತ ಸಿಂಚನವನ್ನು ಉಂಟು ಮಾಡುತ್ತದೆ.
ಕೆಲವರಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಬರಲಿಕ್ಕಿಲ್ಲ, ಹಾಗೆಂದು ಅವರಲ್ಲಿ ಪ್ರೀತಿಯೇ ಇಲ್ಲವೆಂದಲ್ಲ. ಆತನ ಪ್ರೀತಿ ಯಾವತ್ತೂ ನಿಶ್ಯಬ್ದ, ನಿರ್ಮಲ, ನಿರಪೇಕ್ಷ ಮತ್ತು ನಿರಂಕುಶವಾದುದು.
ನೀವಿರುವಂತೆಯೇ ನಿಮ್ಮನ್ನು ಒಪ್ಪಿ ಅಪ್ಪಿಕೊಳ್ಳುವ ಸಂಗಾತಿ ಎಲ್ಲರ ಭಾಗ್ಯದಲ್ಲಿ ಇರುವುದಿಲ್ಲ.
ಸಾಂಗತ್ಯ ಎನ್ನುವುದು ಪರಸ್ಪರ ಒಬ್ಬರು ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಬದುಕಿನುದ್ದಕ್ಕೂ ನಡೆದು ಸಾಗುವ ಹಾದಿ. ಈ ಹಾದಿಯಲ್ಲಿ ಏರಿಳಿತಗಳು, ಅನಿರೀಕ್ಷಿತ ತಿರುವುಗಳು, ಆಕಸ್ಮಿಕ ಘಟನೆಗಳು ಎದುರಾಗುವುದು ಸಹಜ.
ಇರುವುದನ್ನು ಇರುವಂತೆ ಒಪ್ಪಿಕೊಂಡು ಅಪ್ಪಿಕೊಂಡು ಬಾಳುವುದರಲ್ಲಿ ಜೀವನದ ಸಾರವಿದೆ ಏನಂತೀರಾ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.