Oplus_131072

ಪುರಂದರ ನಮನ.

(ಪುರಂದರ ದಾಸರ ಆರಾಧನೆಯ ಪ್ರಯುಕ್ತ ಈ ಕವನ)
…………………………………………..
ನಮಿಸುವೆವು ಕನ್ನಡದ ಹರಿದಾಸ ಶ್ರೇಷ್ಠರಿಗೆ
ಜಗವು ತಲೆಬಾಗಿಹುದು ಅವರ ಜ್ಞಾನದ ಸುಧೆಗೆ
‘ನವಕೋಟಿ ನಾರಾಯಣ’ ಪುರಂದರರಿಗೆ
ಕರಮುಗಿದು ವಂದಿಪೆವು ಚರಣ ಕಮಲಗಳಿಗೆ.

ವರದಪ್ಪ ನಾಯಕ ಲಕ್ಷ್ಮಿದೇವಿಯರಲ್ಲಿ
ಮಾಧ್ವ ಬ್ರಾಹ್ಮಣ ಕುಲದಿ ಉದಯಿಸಿದರು
ತಿರುಪತಿಯ ಒಡೆಯನ ಕೃಪೆಯಿಂದ ಅವತರಿಸಿ
ಶ್ರೀನಿವಾಸನ ಹೆಸರ ಪಡೆದ ಮಹಿಮರು ಇವರು.

ಸಾಧ್ವಿ ಸರಸ್ವತಿಯನ್ನು ಶ್ರೀನಿವಾಸರು ವರಿಸಿ
ಕೃಪಣತನದಲಿ ಬದುಕು ಸಾಗಿಸಿದರು
ಶ್ರೀಹರಿಯು ‌ಪರೀಕ್ಷಿಸಲು ಜ್ಞಾನೋದಯವಾಗಿ
ಸಿರಿವಂತಿಕೆಯ ತೊರೆದು ಹರಿದಾಸರಾದರು.

ತುಳಸಿ ಮಾಲೆಯ ಧರಿಸಿ ಗೋಪಿಚಂದನವಿರಿಸಿ
ತಾಳ ತಂಬೂರಿಯನು ಪಿಡಿದರವರು
ಸಂಸಾರ ಬದುಕಿನಲಿ ವೈರಾಗ್ಯವನು ತಾಳಿ
ಜೋಳಿಗೆಯ ಹಿಡಿದು ಭಾಗ್ಯವನು ಪಡೆದಿಹರು.

ಕನಸು ಮನಸಿನ ತುಂಬ ಚೆಲ್ವ ಚೆನ್ನಿಗ ಕೃಷ್ಣ
ಭಕ್ತಿಯಲಿ ಮುಳುಗಿಸಿದನೀ ದಾಸರನ್ನು
ಭಗವಂತನ ಲೀಲೆ,ಜೀವನದ ವೈರಾಗ್ಯ
ಭಕ್ತಿ ಮಾರ್ಗಕೆ ದಾರಿ ಅರಿತರಿದನು.

‘ದಾಸರೆಂದರೆ ಪುರಂದರ ದಾಸ’ರೆಂದೆನುತ
ವ್ಯಾಸರಾಯರೆ ಅವರ ಬಣ್ಣಿಸಿದರು
ಕೀರ್ತನೆ, ಉಗಾಭೋಗ, ಸುಳಾದಿಗಳ ರಚಿಸಿ
‘ಕರ್ನಾಟಕ ಸಂಗೀತ ಪಿತಾಮಹ’ರೆನಿಸಿದರು.

ಪಾಂಡುರಂಗನ ಭಜಿಸಿ ಮಧ್ವ ಸಿದ್ಧಾಂತವನು
ನಾಡಿನೆಲ್ಲೆಡೆ ಹರಡಿ ಪೋಷಿಸಿದರು
‘ಪುರಂದರ ವಿಠಲ’ ಅಂಕಿತದಿ ಕೃತಿ ರಚಿಸಿ
ಸಂಗೀತ ಲೋಕವನೆ ಬೆಳಗಿಸಿದರು..

-ಜಿ.ಎಸ್.ಗಾಯತ್ರಿ.
ಶಿಕ್ಷಕಿ
ಬಾಪೂಜಿ ಶಾಲೆ
ಹರಿಹರ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ