ಕಾವ್ಯ ಕಲ್ಪವಲ್ಲರಿ
ಲೋಕಜ್ಞಾನವಿದ್ದವರಿಗೆ ಆಸಕ್ತಿಯೊಂದಿದ್ದರೆ ಕವನ ಕಟ್ಟುವುದೇನೂ ಕಷ್ಟವಲ್ಲ. ಏಕೆಂದರೆ ಕವನ ಅವರ ಹೃದಯದಿಂದಲೇ ಹುಟ್ಟುತ್ತದೆ. ಇದಕ್ಕೆ ಹೆಚ್ಚು ಓದಿರಲೇಬೇಕು ಎಂದೇನಿಲ್ಲ. ಏಕೆಂದರೆ ಆರಂಭದಲ್ಲಿ ಹಾಡುಗಳು ಹುಟ್ಟಿದ್ದೇ ಜಾನಪದದಿಂದ. ಇಂದಿಗೂ ಅವುಗಳೇ ಸಂಶೋಧನೆಯ ಮೂಲವಸ್ತುಗಳು. ಆದ ಕಾರಣ ಭಾವನೆಗಳನ್ನು ಪದಗಳ ಮೂಲಕ ಅಭಿವ್ಯಕ್ತಿಗೊಳಿಸಲು ತಿಳಿದವರು ಕಾವ್ಯ ರಚಿಸಬಲ್ಲರು. ಇದಕ್ಕೊಂದು ಉದಾಹರಣೆ ಎಂಬಂತೆ ಗದಗ ಜಿಲ್ಲೆಯ ಮುಂಡರಗಿ ತಾಲೂಕು ಹಿರೇವಡ್ಡಟ್ಟಿ ಶ್ರೀ ಕೊಟ್ರೇಶ ಜವಳಿಯವರು. ಹತ್ತನೇ ತರಗತಿವರೆಗಿನ ಓದಿನಿಂದಲೇ ಕನ್ನಡ ಸಾಹಿತ್ಯ ರಚನೆಗೆ ಇಳಿದಿರುವುದು ಇವರ ಸಾಹಿತ್ಯಾಸಕ್ತಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ವೃತ್ತಿಯಲ್ಲಿ ಕೃಷಿಕರಾದರೂ ಪ್ರವೃತ್ತಿಯಲ್ಲಿ ಕವನಗಳನ್ನು ರಚಿಸುವ ಇವರ ರಚನೆಗಳು ಯಾವ ಕವಿಗೂ ಕಡಿಮೆ ಇಲ್ಲದಂತೆ ಪೈಪೋಟಿಗೆ ನಿಲ್ಲಬಲ್ಲವು. ಲಯಬದ್ಧ ರಚನೆಗಳು ವಸ್ತುನಿಷ್ಠ ವಿಷಯಗಳಿಂದ ಕೂಡಿದ್ದು ಓದುಗನ ಹೃದಯಕ್ಕೆ ತಟ್ಟುವಂತಿದ್ದು, ಒಂದು ಕ್ಷಣ ಯೋಚಿಸುವಂತೆ ಮಾಡುತ್ತವೆ.
ಶ್ರೀಯುತರ ಕವನಗಳನ್ನು ನಾನೂ ಓದಿದವನಿದ್ದೇನೆ. ನಮ್ಮ ಬತ್ತದ ತೊರೆ ಸ್ನೇಹ ಬಳಗದ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಇವರು ತಮ್ಮ ಬರಹಗಳಲ್ಲಿ ಒಂದು ವಿಶೇಷತೆ ಸೃಷ್ಟಿಸುವುದನ್ನು ಕಂಡಿದ್ದೇನೆ. ಜಾನಪದ, ವಚನಾಮೃತ, ಭಾವ ಗೀತೆ, ತತ್ವಪದ ಇತ್ಯಾದಿಗಳ ಸಾರವನ್ನು ಉಣಬಡಿಸುವ ಕೊಟ್ರೇಶರವರು ಈಗ ತಮ್ಮ ಚೊಚ್ಚಲ ಕವನ ಸಂಕಲನ “ಕಾವ್ಯ ಕಲ್ಪವಲ್ಲರಿ” ಯನ್ನು ಮುದ್ರಿಸಿ ಓದುಗರಿಗೆ ತಲುಪಿಸಿದ್ದಾರೆ. ಇವರ ಈ ನಡೆಯು ಅಭಿನಂದನೀಯ.
“ಕಾವ್ಯ ಕಲ್ಪವಲ್ಲರಿ” ಕೃತಿಯೊಳಗಡೆ ಇರುವ ಎಲ್ಲ ರಚನೆಗಳೂ ವೈವಿಧ್ಯಮಯವಾಗಿದ್ದು ಓದುತ್ತಿದ್ದಂತೆ ನಮ್ಮಲ್ಲಿ ಚಿಂತನೆಯ ಒಂದು ಸಣ್ಣ ಎಳೆ ಮೂಡುವುದರಲ್ಲಿ ಸಂದೇಹವಿಲ್ಲ. ಬೇಂದ್ರೆ ಮುತ್ಯಾ ಕವನದಲ್ಲಿ ಬೇಂದ್ರೆಯವರ ಕವನಗಳ ಪರಿಚಯ ಮಾಡಿಸುವುದರೊಂದಿಗೆ ನಮ್ಮನ್ನೂ ಸಾಧನಕೇರಿಗೆ ಕರೆದೊಯ್ಯುತ್ತಾರೆ.
ನಾನು ನೀನು ಆನು ತಾನು ಎಂದು
ನಾಕು ತಂತಿಯ ಮೀಟ್ಯಾನೋ
ಮುಗಿಲ ಮಾರಿಗೆ ರಾಗ ರತಿಯ
ನಂಜು ಏರಿಸ್ಯಾನೋ…
ಅರಿತು ನಡೆ ಕವನವು ಮಾನವ ಜನ್ಮ ಇದೇ ಕಡೆ. ಸದ್ಬಳಕೆ ಮಾಡಿ ಪುಣ್ಯ ಗಳಿಸಿ ಮುಕ್ತಿ ಪಡೆ ಎಂಬುದಾಗಿ ಹೇಳುತ್ತಾರೆ..
ಸತ್ಯ ಮಾರ್ಗದಿ ನೀ ನಡೆ
ಮುಕ್ತಿಯನ್ನು ನೀ ಪಡೆ
ಮಾನವ ಜನ್ಮವಿದು ಇದೇ ಕಡೆ
ಒಳಿತು ಮಾಡಿ ಪುಣ್ಯ ನೀ ಪಡೆ..
ಇವರ “ನೀಡೆನಗೆ ಸುಕೃತವ” ಕವನದ ಸಾಲು..
ನಿಲ್ಲು ಮನಸೇ ಸಿಗುವಂತೆ ಹಿಡಿತಕೆ
ಓಡದಿರು ಬಿಸಿಲ್ಗುದುರೆಯಂತೆ
ಮಾಡು ಎನ್ನ ಹೃದಯ ಅರಳುವಂತೆ
ನಾನಿರುವ ಜಾಗ ಭವದ ಸಂತೆ
ಇದೊಂದೇ ಸಾಕು ಇವರ ಕವನದ ಸಾರವನ್ನು ಆರಿತುಕೊಳ್ಳಲು. ಇಂಥದೇ ಹಲವು ತತ್ವ ಬೋಧೆಗಳನ್ನು ತಮ್ಮ ಕವನಗಳಲ್ಲಿ ಸಲೀಸಾಗಿ ವ್ಯಕ್ತಪಡಿಸುವ ಇವರ ಬರಹಗಳು ನಾಡಿನ ಸಮಸ್ತ ಕನ್ನಡಿಗರನ್ನು ಮುಟ್ಟಲಿ. ಆ ಮೂಲಕ ಓದುಗರ ಮನ ತಣಿಯಲಿ, ಕವಿಗಳಿಂದ ಮುಂದೆ ಕೂಡಾ ಇನ್ನಷ್ಟು ಸಾಹಿತ್ಯ ಕೃತಿಗಳು ಕನ್ನಡಮ್ಮನ ಪಾದಕ್ಕೆ ಅರ್ಪಿತವಾಗುವ ಮುಖೇನ ಕೀರ್ತಿ ಯಶಸ್ಸು, ಸಮ್ಮಾನಗಳು ಅರಸಿ ಬರಲಿ ಎಂದು ಹಾರೈಸುತ್ತೇನೆ
ಸಿರಿಗನ್ನಡಂ ಗೆಲ್ಗೆ.
ಹರಿನರಸಿಂಹ ಉಪಾಧ್ಯಾಯ(ವಿಹಾರಿ)
ಶಂಭೂರು, ಬಂಟ್ವಾಳ ತಾಲ್ಲೂಕು. ದ. ಕ
+91 9980921111