ಮತ್ತೆ ಮೊಳಗಲಿ ಕನ್ನಡ ದುಂಧುಭಿ.
ಕನ್ನಡ ದುಂಧುಭಿ ಮತ್ತೆ ಮೊಳಗಲಿ
ಹೃದಯದಂಬುಧಿ ಮೊರೆಯಲಿ
ಭಾಷಾಭಿಮಾನ ಉಕ್ಕಿ ಹರಿಯಲಿ
ಕೋಟಿ ಭಾಷೆಗಳಲಿ ಕನ್ನಡ ಚೆಂದ
ಕಸ್ತೂರಿ ಪರಿಮಳದ ಕಂಪು ಅಂದ ಮೆರೆಯಲಿ ವಿಶ್ವದಿ ಕನ್ನಡದ ಕಂದ
ಜಡತೆ ನೀಗಿಸುತ ಸತತ ಸಾಗುತ
ತರುಣ ಶಕ್ತಿಗೆ ಸ್ಫೂರ್ತಿ ನೀಡುತ
ಭರವಸೆಯ ಬೆಳಕಾಗಿ ಬಾಳಲಿ
ಅಂದು ಯಜ್ಞದ ಸಮಿಧೆಗಳಾದರು
ಶರಣರು ದಾಸರು ಶ್ರೇಷ್ಠ ಜನರು
ಭಾಷೆಗಾಗಿ ರಾಜ್ಯಕ್ಕಾಗಿ ಕನ್ನಡಿಗರು
ನೆಲ ಜಲ ನಾಡುನುಡಿಗಾಗಿ ಪ್ರಾಣ
ತೆತ್ತರು ಗಂಡುಗಲಿ ರಾಣಿಯರು
ಕನ್ನಡವ ಬೆಳೆಸಿ ಬೆಳಕಾದರು
ಹೋಳಾಗಿ ಹೋದ ರಾಜ್ಯವನು
ಹೋಳಿಗೆಯಂತೆ ಹೂರಣ ತುಂಬಿ
ಏಕೀಕರಣ ಮಾಡಿದವರಿಗಿಂದು
ಕೃತಜ್ಞತೆಯ ಭಾವದಿ ನಮಿಸುವೆ
ಎಲ್ಲಿದ್ದರೂ ಕರುನಾಡ ಮಕ್ಕಳು
ನಾವೆಲ್ಲ ಒಂದೇ ಹೃದಯದವರು
ಎಲ್ಲ ಊರು ಹಳ್ಳಿ ಹಳ್ಳಿಗಳಲಿ ಸಾಹಿತ್ಯ ಸಮ್ಮೇಳನಗಳಾಗಲಿ
ಕನ್ನಡ ಮನಸುಗಳು ಒಂದಾಗಲಿ
ಗಡಿನಾಡಿನ ಭಾಷೆಯ ಸೊಗಸು
ಮಲೆನಾಡಿನ ಮೃದು ಮನಸು
ಒಳನಾಡಿನವರ ಕನ್ನಡ ಕನಸು
ಮೂಡಣ ಪಡುವಣ ತೆಂಕಣ
ಬಡಗಣ ಕರುನಾಡ ತಾಯರಕ್ಷಣ
ಮಾಡುವ ಭಾಷೆ ಬೆಳೆಸೋಣ
ಕನ್ನಡ ಭಾಷೆಯ ವಿಜಯಪತಾಕೆ
ಮಂದಹಾಸದಿಹಾರಲಿಎತ್ತರೆತ್ತರಕೆ
ಮತ್ತೆ ಮೊಳಗಲಿ ಕನ್ನಡ ದುಂಧುಭಿ
– ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ
ಚೆಲುವ ಕನ್ನಡ ನಾಡು.
ನಮ್ಮ ನಾಡು ಕನ್ನಡ ನಮ್ಮ ನುಡಿಯು ಕನ್ನಡ
ನಮ್ಮ ಹೆಸರು ಕನ್ನಡ ನಮ್ಮ ಉಸಿರು ಕನ್ನಡ
ನಮ್ಮ ಭಾಷೆ ಕನ್ನಡ ನಮ್ಮ ಮಾತು ಕನ್ನಡ
ನಮ್ಮ ಮನವು ಕನ್ನಡ ನಮ್ಮ ಧ್ವನಿಯು ಕನ್ನಡ.
ರನ್ನಪಂಪರುದಿಸಿದ ಭವ್ಯನಾಡು ಕನ್ನಡ
ಹಕ್ಕಬುಕ್ಕರಾಳಿದ ಪುಣ್ಯಬೀಡು ಕನ್ನಡ
ವೀರವನಿತೆ ಓಬವ್ವ ಹುಟ್ಟಿದ ಸ್ಥಳ ಕನ್ನಡ
ಕಿತ್ತೂರು ಚೆನ್ನಮ್ಮ ಮೆಟ್ಟಿದ ನೆಲ ಕನ್ನಡ.
ಕುವೆಂಪು ಬೇಂದ್ರೆ ಹರಿಸಿದ ಕಾವ್ಯಧಾರೆ ಕನ್ನಡ
ಮಹಾದೇವಿ ಬಸವಣ್ಣರ ವಚನಾಮೃತ ಕನ್ನಡ
ಕನಕ ಪುರಂದರರು ಬರೆದ ದಾಸವಾಣಿ ಕನ್ನಡ
ಗಾಯಕರು ಹಾಡಿ ನಲಿವ ಗಾನ ಲಹರಿ ಕನ್ನಡ.
ಜನಪದ ಸಾಹಿತ್ಯಕಲೆಗೆ ಜೀವ ಕೊಟ್ಟ ಕನ್ನಡ
ಅಮೃತ ಸುಧೆಯ ಉಣಿಸುವಂಥ ಮಧುರ ಸ್ವರವು ಕನ್ನಡ
ಋಷಿಮುನಿಗಳು ತಪವಗೈದ ತಪೋಭೂಮಿ ಕನ್ನಡ
ಪ್ರಕೃತಿ ಮಾತೆ ಕಂಗೊಳಿಸುವ ಹಸುರಿನ ಸಿರಿ ಕನ್ನಡ.
ಸಂಸ್ಕೃತಿ, ಸಂಸ್ಕಾರಗಳನು ಕಲಿಸಿದಂಥ ಕನ್ನಡ ಸಂಗೀತ, ನೃತ್ಯಕಲೆಯ ಬೆಳೆಸಿದಂಥ ಕನ್ನಡ
ಸ್ವರ್ಣಯುಗದ ಇತಿಹಾಸಕೆ ಮೆರುಗು ತಂದ ಕನ್ನಡ
ಪೌರಾಣಿಕ ಹಿನ್ನೆಲೆಗೆ ಕಥೆಯ ಬರೆದ ಕನ್ನಡ.
ತುಂಗಭದ್ರೆ ಕಾವೇರಿ ಹರಿವ ನೆಲವು ಕನ್ನಡ
ಜೋಗದ ಸಿರಿ ವೈಭವದ ರಮ್ಯತಾಣ ಕನ್ನಡ
ಹಳೇಬೀಡು ಬೇಲೂರಿನ ವಾಸ್ತು ಶಿಲ್ಪ ಕನ್ನಡ
ಕಲೆಗೆ ಬೆಲೆಯ ನೀಡುವಂಥ ಚೆಲುವ ನಾಡು ಕನ್ನಡ.
– ಗಾಯತ್ರಿ.ಜಿ.ಎಸ್.
ಶಿಕ್ಷಕಿ. ಬಾಪೂಜಿ ಶಾಲೆ.
. ಹರಿಹರ.
ಹೆಮ್ಮೆಯ ಕನ್ನಡ ನಾಡು.
ಹೆಮ್ಮೆಯ ಕನ್ನಡ ನಾಡಿದು
ನಮ್ಮಯ ಕಸ್ತೂರಿ ಬೀಡಿದು
ಸಂಸ್ಕೃತಿಗೆ ಗಂಧದ ಗೂಡಿದು
ಎಲ್ಲಡೆ ಬೆಳಗಲಿ ದೀವಿಗೆ
ಕನ್ನಡ ಭುವನೇಶ್ವರಿ ದೇವಿಗೆ
ಕೈಮುಗಿದು ನಮಿಸಿ ಕನ್ನಡದ ತೇರಿಗೆ
ಕಟ್ಟೋಣ ನಾವೆಲ್ಲ ಕನ್ನಡ ಗುಡಿಯ
ಬೆಳೆಸೋಣ ಎಲ್ಲರೂ ಕನ್ನಡ ನುಡಿಯ
ಉಳಿಸೋಣ ಚಿವುಟದೆ ಕನ್ನಡದ ಕುಡಿಯ
ಹಚ್ಚೋಣ ಸರ್ವರೂ ಕನ್ನಡದ ದೀಪ
ಕನ್ನಡವೇ ನಮ್ಮೆಲ್ಲರುಸಿರು ಹಿಡಿ ನೆನಪ
ಹಳದಿ ಕೆಂಪು ಬಣ್ಣದಲ್ಲಿ ಕಾಣೋಣ ತಾಯ ರೂಪ.
– ಎ ಆರ್ ಇಂದಿರಾ ಸಿದ್ದೇಶ್
ಶಿಕಕರು ದಾವಣಗೆರೆ |
ನಮ್ಮ ನುಡಿ ಕನ್ನಡ.
ಕನ್ನಡ ಕನ್ನಡ ನಮ್ಮ ತೊದಲು ನುಡಿ ಕನ್ನಡ
ಇರಲಿ ಇರಲಿ ಕನ್ನಡ ಕೊನೆಯವರೆಗೆ ನಮ್ಮ ಸಂಗಡ
ಕನಸು ಮನಸಲಿ ಮನವು ನುಡಿಯುವ ಕನ್ನಡ
ತೊರೆದು ಹೋಗದಿರು ನುಡಿಯೆ ಕನ್ನಡಿಗರ ಸಂಗಡ
ಎಂಟು ಜ್ಞಾನ ಪೀಠ ಇರಿಸಿಕೊಂಡೆ ನಿನ್ನ ಜೇಬಿಗೆ
ನಿನಗೂ ಸ್ಥಾನ ಉಂಟು ರಾಷ್ಟ್ರದೆಲ್ಲಾ ನೋಟಿಗೆ
ಸೋತು ಹೋಗಲೇಬೇಕು ನಿನ್ನಾಡುವ ಪರಿಗೆ
ತಾಯೇ ನೀ ನಲಿದಾಡು ಕುಳಿತು ನಮ್ಮೆಲ್ಲರ ನಾಲಗೆ ಮೇಲಗೆ
ಕನ್ನಡ ಉಲಿಯುವ ಗಿಳಿಗಳ ಅಮ್ಮನ ತೆರದಿ ನೀ ಹರಸು
ನಿನ್ನ ನಂಬಿರುವ ಮಕ್ಕಳ ಸದಾ ನೀ ಕೈ ಹಿಡಿದು ನಡೆಸು
ಅಕ್ಷರ ತಿದ್ದಿ ತೀಡುವ ಕರಗಳ ನೀ ಉಳಿಸು ಬೆಳೆಸು
ಬೇರೆ ಭಾಷೆ ವ್ಯಾಮೋಹವ ನೀ ಅಳಿಸು ಹೊಡೆದೋಡಿಸು
ಕನ್ನಡ ಕನ್ನಡ ನಮ್ ತಾಯಿ ಭಾಷೆ ಕನ್ನಡ
ಅಪ್ಪ ಅಮ್ಮ ಎಂದು ಉಲಿದ ನಮ್ಮ ಭಾಷೆ ಕನ್ನಡ
ಹೊರಡಲಿ ತೆರಳಲಿ ಮನೆಬಾಗಿಲಿಗೆ ಕನ್ನಡ ತೇರು
ಕೈ ಬೀಸಿ ಕರೆಯುತಿದೆ ಪ್ರತಿ ಕನ್ನಡಿಗನೆ ನೀ ಏರು
– ವಿಮಲಾ ಆದರ್ಶ ಹೆಬ್ರಿ.
ಕನ್ನಡ ಶೂಲಕ್ಕೆರಿಸುತ್ತಿಹರು
ಕನ್ನಡ ಹೊಗಳಿ ಹೊನ್ನ ಶೂಲಕ್ಕೆರಿಸುತ್ತಿಹರು
ಕನ್ನಡಮ್ಮನಾಳುವ ಜಾಣ ಕಂದಮ್ಮಗಳಿವರು
ಕನ್ನಡದ ಡಿಂ ಡಿಂವ ಹದ್ದಿನಂತೆ ಕುಕ್ಕಿ ತಿನ್ನುತ್ತಿಹರು
ಕನ್ನಡ ಕಹಳೆ ನುಡಿಯಲ್ಲುದಿ ನಡೆಯಲ್ಲಿ ತೋರದಿಹರು
ಕನ್ನಡ ಶಾಲೆಗಳು ಕರ್ನಾಟಕದಲ್ಲೇ ಅಳಿಸುತ್ತಿಹರು
ಕುನ್ನಿಗಳಂಗ್ಲರ ವ್ಯಾಮೋಹವು ಪೋಷಿಸುತ್ತಿಹರು
ತನು ಮನ ಧನ ಕನ್ನಡ ಬಸವಣ್ಣ ನೋಡೆಂದರು
ಕನ್ನಡ ಸಂಸ್ಕೃತಿ ನಾಯಕ ಬಸವನ ಬಿಂಬಿಸಿದರು
ಅಣ್ಣ ಬಸವಣ್ಣರನ್ನ ಹಗಲಿರುಳು ಜಪಿಸುವವರು
ಜಾಣ ಕುರುಡುತನ ಮಕ್ಕಳಿಗಿಂಗ್ಲಷ್ ಕಲಿಸುವರು
ಕನ್ನಡದ ಗತ ವೈಭವವು ಅರಿಯದ ಅಂಧರಸರು
ಚಿನಾ ಜಾಪನ ಜರ್ಮಿನಿ ಭಾಷ ಭಕ್ತಿ ಪ್ರದರ್ಶಿಸರು
ತಾನುಂಡ ಮನೆಗೆ ಎರಡೂ ಬಗೆತ್ತಿಹ ಜನ ನಾಯಕರು
ಕನ್ನಡಿಯು ಪ್ರಜಾಪ್ರಭುತ್ವದ ಬಿಂಬವು ತೋರುತ್ತಿಹರು
– ರಮೇಶ ಬಿರಾದಾರ
ಬೀದರ
ಕನ್ನಡ_ಕೃಷಿ.
ಕೃಷಿಯ ಮಾಡೋಣ ನಾವು
ಕನ್ನಡಾಂಬೆಯ ಮಡಿಲಲ್ಲಿ
ಕನ್ನಡ ಕೃಷಿಯ ಮಾಡೋಣ ನಾವು
ಸಿರಿ ಕನ್ನಡದ ನೆಲದಲ್ಲಿ .
ತುಂಗ- ಭದ್ರಾ ಕೃಷ್ಣ ಕಾವೇರಿಯ
ಜೀವ ಜಲವ ಹರಿಸಿ
ಜನ ಮನವ ಹದವಾಗಿಸಿ
ಮನದೊಳಗಿನ ಕೊಳೆ ತೆಗೆಯೋಣ.
ಬಿತ್ತೋಣ ಬೀಜ ಬಿತ್ತೋಣ
ಕರುಣಾಳು ಜನರ ಮನದಲ್ಲಿ
ಸಿರಿಗನ್ನಡ ಬೀಜವ ಚೆಲ್ಲೋಣ
ಕನ್ನಡ ಫಸಲ ಬೆಳೆಯೋಣ.
ಜಾತಿ ಧರ್ಮದ ಭೇದವ ಅಳಿಸಿ
ಭಾಷೆ ಭಾವನೆಯ ಕೀಳು ತೆಗೆಸಿ
ಬಾಂಧವ್ಯದ ಬೆಸುಗೆ ಹಾಕಿಸಿ
ಕನ್ನಡಾಂಬೆಗೆ ಶಿರಬಾಗಿ ನಮಿಸೋಣ.
ದೇಶದೊಳು ನಮ್ಮ ರಾಜ್ಯದೊಳು
ಎಲ್ಲರೂ ಬೆರಗಾಗಿ ಮೆಚ್ಚುವಂತೆ
ಹಸನಾದ ಬದುಕು ನಡೆಸೋಣ
ಕನ್ನಡ ಕೀರ್ತಿಯ ಹರಡೋಣ.
– ಡಾ. ಮಹೇಂದ್ರ ಕುರ್ಡಿ.
ಒಡೆಯದಿರಲಿ, ನಮ್ಮ ನಾಡು
ಒಡೆಯದಿರಲಿ, ನಮ್ಮ ನಾಡು
ರಾಜಕೀಯ ಖಡ್ಗದಿಂದು!
ಮರೆಯದಿರು, ಓ ಕನ್ನಡಿಗನೆ
ಭಾರತಾಂಬೆ ಹೆತ್ತ ನಾಡು!
ಅದುವೆ ಕರ್ನಾಟಕವೆ ನೋಡು!
ಪುಣ್ಯ ನಾಡಿದು ಹೊನ್ನಾಡು
ಕೃಷ್ಣ ತುಂಗೆ ಕಾವೇರಿ ವರ
ಬೆಡಗಿನ ಕಲೆ ಸಂಗಮವಿದು
ಕವಿ ಋಷಿ ಸಂತರ ಬೀಡಿದು
ಸಹವೊಲ್ಮೆಯ ಗೂಡಿದು!
ಕುಲವು ಬೇಡ, ಮತವು ಬೇಡ
ಕನ್ನಡವೆ ಕುಲ-ಮತ ನಮಗ
ದ್ವೇಷ ಬೇಡ, ವಿರಸ ಬೇಡ
ಸಮರು ಭಾವ, ಒಲವು ಬೇಕ
ತವದಿರ ಶಕ್ತಿಯೆ ಕನ್ನಡ!
ಆತ್ಮ ಒಂದೆ, ಕಾಯ ಒಂದೆ
ಮನವು ಒಂದೆ, ತನವು ಒಂದೆ
ಬೇರು ಒಂದೆ, ವಾಣಿ ಒಂದೆ
ಒಕ್ಕೊರಲು ಒಡಕವು ಏಕ?
ಏಕತೆ ಪರಮ ಪೂಣ್ ಬೇಕ
ನಮ್ಮ ನಾಡು, ನಮ್ಮ ಪಾಡು
ಒಡೆತನ ಜನರ ಕರಡು, ನೋಡ್
ರಾಜಕೀಯ ನಟನೆ ಬೇಡ
ನಮಗೆ ಏಕ ಹೃದಯೊಡಲದಿ
ಹೆರಿದ ಕನ್ನಡ ತಾಯಿ, ಕಾಣ್
ಒಡೆಯದಿರಲಿ, ನಮ್ಮ ನಾಡು
ರಾಜಕೀಯ ಮಂತ್ರದಿಂದು!
ಅಖಂಡ ಕರ್ನಾಟಕವೂ!
ಅಖಂಡ ಎಂದೆಂದಿಗವೂ!
ಜಯ ಸಿರಿಗನ್ನಡದ ಮಾತೆ!
ರಾಮಾ ಪವಾರ ಬೀದರ.
ನುಡಿ ಕನ್ನಡ
ಧರೆಯೋಳು ಪ್ರಾಚೀನ
ಲಿಪಿ ನುಡಿಕನ್ನಡ
ನುಡಿದರೆ ಸವಿ ಬೆಲ್ಲ
ನುಡಿ ಕನ್ನಡ
ಮಜ್ಜಿಗೆಯಲ್ಲಿನ ಬೆಣ್ಣೆಯಂತೆ
ನುಡಿ ಕನ್ನಡ
ಘಮಘಮ ತುಪ್ಪದಂತೆ
ನುಡಿ ಕನ್ನಡ
ಸಿಹಿ ಜೇನನಂತೆ
ನುಡಿ ಕನ್ನಡ
ಹಲಸು ಮಾವಿನ ಹಣ್ಣಿನಂತೆ
ನುಡಿ ಕನ್ನಡ
ಶುಚಿ ರುಚಿಯ ಭಾಷೆ
ನುಡಿ ಕನ್ನಡ
ಶರಣರ ವಚನ
ನುಡಿ ಕನ್ನಡ
ದಾಸರ ಪದಗಳು
ನುಡಿ ಕನ್ನಡ
ಜ್ಞಾನಪೀಠ ಪ್ರಶಸ್ತಿಯ ಗರಿ
ನುಡಿ ಕನ್ನಡ
ನವಾಡುವ ಭಾಷೆ
ನುಡಿ ಕನ್ನಡ
ಅನ್ನದ ನೆಲ
ನುಡಿ ಕನ್ನಡ
ತನು ಕನ್ನಡ
ಮನ ಕನ್ನಡ
ಉಸಿರು, ಹಸಿರು
ಕನ್ನಡ.
ಭವ್ಯ ಪರಂಪರೆ ನಾಡು
ನುಡಿ ಕನ್ನಡ.
ಕನ್ನಡ ಭುವನೇಶ್ವರಿ ಮಾತೆ
ನಿನ್ನ ಮಡಿಲಲ್ಲಿ ಜನಸಿದ
ನಾವೇ ಧನ್ಯ.
*ಜೈ ಕರ್ನಾಟಕ ಮಾತೆ*
– ಓಂಕಾರ ಪಾಟೀಲ.ಬೀದರ
ವಿಶ್ವ ಕನ್ನಡದ ಬಯಕೆ
ನಿಗೂಢ ವಿಸ್ಮಯದ ಸೃಷ್ಟಿಯೊಳಗೆ
ಯುಗ ಯುಗಾಂತರಗಳಿಂದ
ನಕ್ಷತ್ರಪುಂಜದ ಮಧ್ಯ ಇರುವ
ಕಪ್ಪುಕುಳಿಗಳ ಸುತ್ತ ಸಾಗುವ ಸೂರ್ಯಗಳಿಗೆ
ಪರಿಭ್ರಮಿಸುವ ಸರ್ವ ಗ್ರಹಗಳಲ್ಲಿ
ಸವಿಗನ್ನಡದ ಸಿಹಿಜೇನು ಜಿನುಗಿಸಬೇಕು
ಅಂತ್ಯವೇ ಇಲ್ಲದ ನಭದೊಳಗೆ ಹೊಳೆಯುವ
ರಾಶಿ ರಾಶಿ ನಕ್ಷತ್ರಗಳಲ್ಲೂ ಕೂಡ..
ಗುರಿಯಿಲ್ಲದೆ ಗಾಳಿಯಲಿ ಸಂಚರಿಸುವ
ಮೋಡದ ತಥಾ ಅಲೆಯುವ
ಅಲೆಮಾರಿ ಉಲ್ಕೆಗಳಲ್ಲಿ
ಸೌರವ್ಯೂಹದ ಆಚೆ ಅನಂತ ದಿಗಂತದಲ್ಲೂ
ಸಿರಿಗನ್ನಡದ ಶಬ್ಧಗಳು ಪಸರಿಸಬೇಕು!
ಕೇವಲ ಬೆರಳೆಣಿಕೆಯ ಸಂಗಮಗಳ ಮೇಲಿಲ್ಲ
ಹೊನ್ನ ನುಡಿ ಉಳಿಸುವ ಕಾಳಜಿಯ ಚಿಲುಮೆ
ಕಲ್ಲುಗಳೆಲ್ಲ ಅರಳಿ ಹೂವಾಗಬೇಕಿದೆ
ಬಂಡೆಗಳ ಹೃದಯದಲ್ಲೂ ಪುಷ್ಪಗಳು ಅರಳಿಸಲು
ಬೇಕಾದಷ್ಟು ಬೆಳಕಿದೆ ಜೊತೆಗೆ ಗಾಳಿಯೂ
ಗುರಿ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಮೂಡಿಸಬೇಕಿದೆ!
ಮಾಯಾಲೋಕದ ದಿವ್ಯ ಶಕ್ತಿಯೇ
ನನ್ನ ನಿವೇದನೆ ಆಲಿಸು ನಾನು ಮೋಡವಾಗಬೇಕು!
ಅತ್ತರಿನ ಪರಿಮಳದ ಸವಿಗನ್ನಡ ಶಬ್ಧ
ಸಾಗರ ಆವಿಯಾಗಿಸಿಕೊಂಡು
ಒಂದು ಗೇಣು ಜಾಗ ಬೀಡದೇ ವಿಶ್ವದ ಎಲ್ಲ ಕಡೆಯಲ್ಲೂ
ಜೇನುಗನ್ನಡದ ಹನಿಗಳು ಸುರಿಸಬೇಕು
– ರಾಜಹಂಸ ಬೀದರ್
ನಾಡಗೀತೆ
ನಾಡದೇವಿಯ ಗುಡಿಯ ಒಳಗಡೆ ಬೆಳಗುತಿಹದು ದೀಪವು/
ಓಡಿ ಹೋಯಿತು ನಾಡ ಜನರ ಅಂಧಕಾರವು/
ಅಂದ ಚಂದದ ಚಂದನದ ನಾಡಿದು/
ಸಸ್ಯ ಶಾಮಲೆ ಯ ಬೀಡಿದು /
ಕಂಗು ತೆಂಗು ಬಾಳೆ ಬೆಳೆವ ಭೂಮಿಯು/
ನಿತ್ಯ ಹರಿವ ತೊರೆ ನದಿಗಳ ವಸುಂಧರೆಯು/
ಕಬ್ಬಿಗರು ಹಾಡಿ ಕುಣಿದರು ಈ ನಾಡಲಿ
ಕಣ್ಮನ ಸೆಳೆಯುತಿದೆ ಪ್ರಕೃತಿಯ ಕುಂಚದಲಿ/
ಭಾರತಮಾತೆಯ ತನುಜೆ ಇವಳು
ಭುವನೇಶ್ವರಿ ಎಂಬ ನಾಮ ಪಡೆದಳು
ಕಲ್ಲು ಕಲ್ಲಿನಲ್ಲೂ ಸಂಗೀತದ ಅಲೆಯು
ಭೂಗರ್ಭ ದಲಿ ಹೊನ್ನ ಅದುರಿನ ಬಲೆಯು/
ಅಪರಿಮಿತ ಕಲಿ ವೀರರುದಿಸಿದ ಜಗವಿದು/
ಅಪ್ಪಟ ಕನ್ನಡಾಭಿಮಾನಿಗಳ ತಾಣವಿದು/
ಕನ್ನಡ ಚನ್ನುಡಿ ಹೊನ್ನುಡಿ ಯ ಭಾಷೆ/
ಓದಿದರು ಸಾಕು ಇಂಗುವದು ಜ್ಞಾನ ತೃಷೆ//
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ.