Oplus_131072

ರಾಮ ಮತ್ತು ರಾವಣ ಒಂದು ವಿಮರ್ಶೆ

ಜಿ.ಎಲ್.ನಾಗೇಶ್.

ಈ ರಾಮ ಮತ್ತು ರಾವಣ ಯಾರು ? ಎಂದು ಕೇಳಿದರೆ ಎಲ್ಲರೂ ಥಟ್ಟನೆ ಹೇಳುತ್ತಾರೆ;
ರಾಮಾಯಣದಲ್ಲಿ ಬರುವ ಎರಡು ಪ್ರಮುಖ ಪಾತ್ರಗಳು .
ನಾಯಕ-ಖಳನಾಯಕ ! ಅಂತ.
ರಾಮ ಅವನೊಬ್ಬ ದೇವತಾ ಪುರುಷ!
ಉತ್ತಮರಲ್ಲಿ ಪುರುಷೋತ್ತಮ‌ ಈ ರಾಮ !!
ರಾವಣ… ಅವನೊಬ್ಬ ದುಷ್ಟ ರಾಕ್ಷಸ!
ರಾಮ ಹೇಗೆ ದೇವರಾದ ?
ರಾವಣ ಏಕೆ ರಾಕ್ಷಸನಾದ ?
ರಾವಣನ ದಹನ ಏಕೆ ಮಾಡಲಾಗುತ್ತದೆ ?

ವನವಾಸದ ಸಂದರ್ಭದಲ್ಲಿ ಹೊಟ್ಟೆಗೆ ಅನ್ನ, ನೀರು, ಬಟ್ಟೆ ಇಲ್ಲದೆ ಕಾಡು ಮೇಡುಗಳಲ್ಲಿ ಅಲಿಯುತ್ತಿರುವ ರಾಮ, ಲಕ್ಷ್ಮಣ ಮತ್ತು ಸೀತೆಯರನ್ನು ರಾವಣನ ಸಹೋದರಿ ಶೂರ್ಪನಖಿ ನೋಡುತ್ತಾಳೆ.
ರಾಮನ ಬಾಹ್ಯ ಸೌಂದರ್ಯಕ್ಕೆ ಮರುಳಾದ ಶೂರ್ಪನಖಿ ತನ್ನ ಮನದಾಸೆ ತಿಳಿಸುತ್ತಾಳೆ. ಅದಕ್ಕೆ ರಾಮ ಹೇಳುತ್ತಾನೆ

“ನನ್ನ ಮದುವೆಯಾಗಿದೆ, ನನಗೆ ಸೀತೆಯೆಂಬ ಪತ್ನಿ ಇದ್ದಾಳೆ. ನಾನು ನಿನಗೆ ಮದುವೆ ಆಗುವಂತಿಲ್ಲ. ನನ್ನ ತಮ್ಮ ಲಕ್ಷ್ಮಣ ಇದ್ದಾನೆ. ನೀನು ಬೇಕಾದರೆ ಅವನನ್ನು ಮದುವೆಯಾಗು.” ಅಂತ . ಆದರೆ ಲಕ್ಷ್ಮಣ ಏನು ಮಾಡಿದ ?

“ನಾನು ಅಣ್ಣನ ಆಜ್ಞೆಯನ್ನು ಶಿರಸಾವಹಿಸುತ್ತೇನೆ. ಆದರೆ ಆ ಆದೇಶಕ್ಕೆ ತಕ್ಕದಾದ ಗುರುತನ್ನು ತಂದರೆ ನಿನ್ನನ್ನು ವಿವಾಹವಾಗುವುದರ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದಾಗ ಶೂರ್ಪನಖಿ ರಾಮನಲ್ಲಿಗೆ ಬರುತ್ತಾಳೆ.

ಆಗ ರಾಮನು ಆಕೆಗೆ ತಿರುಗುವಂತೆ ಹೇಳಿ ಆಕೆಯ ಬೆನ್ನಿನ ಮೇಲೆ ಬಾಣದ ತುದಿಯಿಂದ
“ಗಂಡುಬೀರಿಯಾದ ಇಕೆಯ ಕಿವಿ, ಮೂಗು, ಮತ್ತು ಸ್ತನಗಳನ್ನು ಕತ್ತರಿಸಿ ತಕ್ಕ ಶಾಸ್ತಿ ಮಾಡು” ಎಂದು ಬರೆಯುತ್ತಾನೆ. ಅಮಾಯಕ ಮುಗ್ಧ ಶೂರ್ಪನಖಿ ಲಕ್ಷ್ಮಣನ ಹತ್ತಿರ ಬಂದು-

“ರಾಮನ ಆದೇಶವನ್ನು ತಂದಿರುವೆ ನೋಡು ಬಾ ಲಕ್ಷ್ಮಣ” ಎಂದು ಹೇಳುತ್ತಾ ತನ್ನ ಬೆನ್ನು ತೋರಿಸುತ್ತಾಳೆ.

ಅಲ್ಲಿ ರಾಮ ಬರೆದ ವಾಕ್ಯಗಳನ್ನು ನೋಡಿದ ಲಕ್ಷ್ಮಣನು ಜೋರಾಗಿ ನಗುತ್ತಾ ಆಕೆಯನ್ನು ಪ್ರೀತಿಯಿಂದ ಇನ್ನೂ ಹತ್ತಿರಕ್ಕೆ ಬರುವಂತೆ ಕರೆಯುತ್ತಾನೆ.
“ಪ್ರಣಯ ಸುಖ ಬೇಕಲ್ಲವೇ?” ಎಂದು ತಮಾಷೆ ಮಾಡುತ್ತಾ ಮರೆಯಿಂದ ಖಡ್ಗವನ್ನು ತೆಗೆದುಕೊಂಡು ಹೆಣ್ಣಿನ ರೂಪಕ್ಕೆ ಪ್ರಧಾನವಾದ ಅವಳ ಕಿವಿ,ಮೂಗು ಮತ್ತು ಸ್ತನಗಳನ್ನು ಕೊಯ್ದು ಬಿಡುತ್ತಾನೆ ಪರಮಪಾಪಿ ಲಕ್ಷ್ಮಣ.
ಕಾರಂಜಿಯಂತೆ ರಕ್ತ ಸುರಿಯಲಾರಂಭಿಸುತ್ತದೆ.
ದೇಹವೆಲ್ಲ ರಕ್ತ ಮಯವಾಗುತ್ತದೆ.
ಯಮಯಾತನೆ ಸಹಿಸಲಾಗುವುದಿಲ್ಲ ಅವಳಿಗೆ. ನೋವು, ನಿರಾಸೆ, ದುಃಖ, ಅಪಮಾನ ತಡೆದುಕೊಳ್ಳಲಾಗದೇ ಶೂರ್ಪನಖಿ ಅರ್ಭಟಿಸುತ್ತಾಳೆ.

ಅವಳ ದೇಹದಲ್ಲಿ ಸೇಡಿನ ಜ್ವಾಲೆ ಹೊತ್ತುರಿಯಲಾರಂಭಿಸುತ್ತದೆ.
ಅಯ್ಯೋ… ! ಎಂತಹ ಅವಮಾನ ತನಗೆ!
ಇದರಲ್ಲಿ ತನ್ನ ತಪ್ಪಾದರೂ ಏನು ?
ಒಂದು ಪ್ರಾಯದ ಹೆಣ್ಣು, ಗಂಡಿಗೆ ಆಕರ್ಷಿತಳಾಗಿ ಪ್ರಣಯದ ಸುಖ ಬಯಸುವುದು ತಪ್ಪಾ ?
ಒಂದು ವೇಳೆ ಅದು ಅಪರಾಧವೇ ಆಗಿದ್ದರೆ ನನಗೆ ಇಷ್ಟೊಂದು ಕ್ರೂರವಾದ… ಘನ ಘೋರವಾದ ಶಿಕ್ಷೆ ನೀಡುವುದು ಸರಿಯೇ ? ತನ್ನ ಭಾವನೆಗಳ ಜೊತೆ…
ತನ್ನ ಬದುಕಿನ ಜೊತೆ ಈ ರೀತಿ ಚೆಲ್ಲಾಟ ಆಡುವ ಈ ರಾಮ-ಲಕ್ಷ್ಮಣರಿಗೆ ಯಾವ ಹಕ್ಕು ಇದೆ…?

ತನ್ನನ್ನು ಬಯಸಿ ಬಂದ ಹೆಣ್ಣೊಂದನ್ನು ಅವಮಾನಗೊಳಿಸಿ ಕಿವಿ, ಮೂಗು, ಸ್ತನ ಕತ್ತರಿಸು ಎಂದು ಹೇಳುವ ರಾಮನಂಥವರಿಗೆ ಶೂರ್ಪನಖಿಯಂಥ ಅಮಾಯಕ ಮುಗ್ಧ ಹೆಣ್ಣುಗಳ ಧಿಕ್ಕಾರ ಇದೆ !

ನನ್ನ ತಾಯಿ ಆಣೆಗೂ ಸತ್ಯ ಹೇಳುತ್ತಿದ್ದೇನೆ!
ಶೂರ್ಪನಖಿ ದುಷ್ಟ ಕುಲದವಳು ಆಗಿರಲಿಲ್ಲ. ಪಂಚಶೀಲ ತತ್ವವನ್ನು ಆಚಾರಿಸುವ ಲಂಕಾಧಿಪತಿ ರಾಜ ರಾವಣನ ಒಡಹುಟ್ಟಿದ ಸಹೋದರಿಯಾಗಿದ್ದಳು.

ಪಾಪಿಗಳು ತಮ್ಮ ಸ್ವಾರ್ಥಸಾಧನೆಗಾಗಿ ರಾಕ್ಷಸ ವಂಶದ ರಾಜರನ್ನು ಮೋಸದಿಂದ ಕೊಂದು ತಮ್ಮ ಪುರಾಣಗಳ ಮೂಲಕ ಮನಸ್ಸಿಗೆ ಬಂದಿದ್ದೆಲ್ಲವನ್ನು ರಚಿಸಿ ಮುಗ್ಧ ಜನರಿಗೆ ಮರುಳುಮಾಡಿ ಮಂಕುಬೂದಿ ಎರಚಿದರು.
ಯುದ್ಧದಲ್ಲಿ ಸೋತ ಪ್ರಜೆಗಳನ್ನು ತಮ್ಮ ಗುಲಾಮರಾಗಿಸಿಕೊಂಡು ರಾಕ್ಷಸ ಜಾತಿಯವರು, ದುಷ್ಟ ಪಾಪಿಗಳು, ಶೂದ್ರರು, ಪಂಚಮರು, ಹೊಲೆಯ ಮಾದಿಗರು… ಎಂದು ಇತ್ಯಾದಿ ಹೇಳುತ್ತಾ ದಲಿತ- ಬಹುಜನರನ್ನು ಊರ ಹೊರಗಿರಿಸಿ ಶೋಷಣೆ ಮಾಡಿದರು.

ರಾಕ್ಷಸ ಪದದ ಮೂಲ ಅರ್ಥ ರಕ್ಷಿಸುವನು ಎಂದಾಗುತ್ತದೆ.
ಆದರೆ ಮನುವಾದಿಗಳು ರಾಕ್ಷಸ ಅಂದರೆ ದುಷ್ಟ, ಪಾಪಿ ಎಂಬರ್ಥ ಬರುವಂತೆ ಇತಿಹಾಸ ತಿರುಚಿದ್ದಾರೆ.

1.ರಾಕ್ಷಸರೆಂಬ ಭಾರತದ ಪ್ರಾಚೀನ ಇತಿಹಾಸ

2.ಡಾ. ಅಂಬೇಡ್ಕರ್ ಅವರು ಬರೆದ ಗ್ರಂಥಗಳು

3.ಪ್ರೊಫೆಸರ್ ಕೆ ಎಸ್ ಭಗವಾನ್ರವರ ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸ

4.ಡಾ. ಶ್ರೀಕೃತಿ ಗಾಯಕವಾಡ, ಪ್ರಶಾಂತ್ ಬೌದ್ಧ, ಅರುಣ್ ಗೌತಮ್, ಶಾಂತಸ್ವರೂಪ ಬೌದ್ಧಾಚಾರ್ಯ, ವಾಮನ್ ಮೆಶ್ರಾಮ್ ಅರುಣಕುಮಾರ ಗುಪ್ತಾ… ಇನ್ನೂ ಅನೇಕ ಬಹುಜನ ಲೇಖಕರು, ಭಾಷಣಕಾರರು ಬರೆದ ಸಾಹಿತ್ಯ ಅಧ್ಯಯನ ಮಾಡಿದಾಗ ವೈದಿಕ ಗೃಂಥಗಳಾದ ರಾಮಾಯಣ ಮಹಾಭಾರತ ಹಾಗೂ ಸ್ವಾರ್ಥ ಸಾಧನೆಗಾಗಿ ಮನುವಾದಿಗಳು ಬರೆದ ವೇದಗಳು, ಪುರಾಣಗಳು, ಸ್ಮೃತಿಗಳು ಇತ್ಯಾದಿ ಕೃತಿಗಳು ಅಭ್ಯಾಸಿಸಿದಾಗ ಶೂದ್ರರು ಮತ್ತು ದಲಿತರೆನ್ನಿಸಿಕೊಂಡವರ ಮೂಲ ರಾಕ್ಷಸ ವಂಶ ಎಂದು ತಿಳಿದುಬರುತ್ತದೆ.

ರಾಕ್ಷಸ ಎಂಬುವರ ಮೇಲೆ ವಿದೇಸಿಯರ ದಾಳಿ ಹೇಗೆ ನಡೆಯಿತು? ನಿಜವಾದ ದುಷ್ಟ ಯಾರು?
ಪಾಪಿಗಳು ಯಾರು? ಪುಣ್ಯವಂತರು ಯಾರು?
ರಾಕ್ಷಸ ಸಂಸ್ಕೃತಿ ಎಂಥದಾಗಿತ್ತು?
ನಮ್ಮ ನಿಜವಾದ ಶತ್ರು ಯಾರು?
ಮಿತ್ರ ಯಾರು? ಎಂದೆಲ್ಲ ತಿಳಿದುಕೊಳ್ಳಬೇಕು ಅಂದರೆ ನಾವುಗಳು ತುಂಬ ಆಳವಾಗಿ ಅಭ್ಯಾಸಿಸಬೇಕಾಗುತ್ತದೆ ಬಂಧುಗಳೇ.
ಸೋ… ಅದು ಈಗ ಇರಲಿ ಬಿಡಿ !
ಈಗ ಮುಖ್ಯ ವಿಷಯಕ್ಕೆ ಬರೋಣ…

ಶೂರ್ಪನಖಿ ತನಗಾದ ಅವಮಾನದ ಬಗ್ಗೆ ತನ್ನ ಅಣ್ಣನಿಗೆ ತಿಳಿಸಿದಳು. ಅಣ್ಣ ರಾವಣ ಏನು ಮಾಡಿದ ?
ಸೀತೆಯನ್ನು ಕದ್ದುಕೊಂಡು ಲಂಕೆಗೆ ತಂದ.
ಹೆಣ್ಣನ್ನು ಕದ್ದು ತಂದ ರಾವಣ ಏನು ಮಾಡಿದ?
ದುಷ್ಟನಂತೆ ಸೀತೆಯ ಶೀಲದ ಜೊತೆ ಚೆಲ್ಲಾಟವಾಡಿ ತನ್ನ ತಂಗಿಗಾದ ಅವಮಾನದ ಸೇಡು ತೀರಿಸಿಕೊಂಡ್ನಾ…?
ಇಲ್ಲ… ರಾವಣ ಹಾಗೆ ಮಾಡಲಿಲ್ಲ!
ಒಂದು ವೇಳೆ ನೀವು ತಿಳಿದುಕೊಂಡಂತೆ ರಾವಣ ದುಷ್ಟ ರಾಕ್ಷಸನಾಗಿದ್ದರೆ ಸೀತೆಯ ಶೀಲದ ಜೊತೆ ಚಿಂದಿ ಉಡಾಯಿಸುತ್ತಿದ್ದ.
ಆದರೆ ರಾವಣ ದುಷ್ಟ ರಾಕ್ಷಸನಾಗಿರಲಿಲ್ಲ.

ರಾವಣ… ಅವನೊಬ್ಬ ರಾಕ್ಷಸ ಕುಲದ ಮಹಾ ಸುಶೀಲವಂತ ಮೇಧಾವಿಯಾಗಿದ್ದ!
ರಾವಣನಿಗೆ ಸೀತೆಯ ದೇಹ ಸೌಂದರ್ಯದ ಸುಖ ಬೇಕಿರಲಿಲ್ಲ. ರಾವಣನ ಧರ್ಮಪತ್ನಿ ಮಂಡೋದರಿ ನೂರು ಜನ್ಮಕ್ಕಾಗುವಷ್ಟು ಆ ಸುಖ ಅವನಿಗೆ ನೀಡಿದಳು.
ರಾವಣನಿಗೆ ಅದು ಬೇಕಾಗಿದ್ದರೆ, ಅವನು ಮನಸ್ಸು ಮಾಡಿದರೆ ಸೀತೆಗಿಂತಲೂ ನೂರುಪಟ್ಟು ಸುಂದರಿಯಾದ ಹೆಣ್ಣುಗಳು ಅವನ ಸವರ್ಣ ಲಂಕೆಯಲ್ಲಿಯೇ ಸಿಗುತ್ತಿದ್ದರು.
ಆದರೆ ಅದು ಅವನಿಗೆ ಬೇಕಿರಲಿಲ್ಲ.

“ದುಷ್ಟನಂತೆ ನಿನ್ನ ದೇಹದ ಮೇಲೆ ದಾಳಿ ಮಾಡಿ ನನ್ನ ತಂಗಿಗಾದ ಅವಮಾನದ ಸೇಡು ತೀರಿಸಿಕೊಂಡರೆ, ನನಗೂ ಮತ್ತು ನಿನ್ನ ರಾಮ ಲಕ್ಷ್ಮಣರಿಗೂ ಏನು ವ್ಯತ್ಯಾಸವಿರುತ್ತದೆ ಹೇಳು ? ನಾನು ನಿನ್ನ ರಾಮ ಲಕ್ಷ್ಮಣನಂತವನಲ್ಲ.

ನಾನು… ಲಂಕೆಯ ಮಹಾರಾಜ, ಲಂಕಾಪತಿ ರಾವಣ ನಾನು ! ನಿನ್ನ ಇಷ್ಟದ ವಿರುದ್ಧ ನಾನು ನಡೆದು ಕೊಳ್ಳಲಾರೆ ಸೀತೆ. ನಿನಗೆ ನಾನು ಇಷ್ಟ ಆಗುವವರೆಗೂ ಕಾಯುತ್ತೇನೆ”ಎಂದು ಹೇಳಿದನು ರಾವಣ.

ಹಿಂದೂಗಳ ಆರಾಧ್ಯ ದೈವ, ಮಹಾಮಾನವ ರಾಮ, ಅವತಾರ ಪುರುಷ… ಪುರುಷೋತ್ತಮ ಶ್ರೀರಾಮ ಆಗೇನು ಮಾಡಿದ? ವರ್ತಮಾನ,ಭೂತ, ಭವಿಷ್ಯತಗಳು… ಎಲ್ಲವನ್ನೂ ಅರಿತ ರಾಮ ತನ್ನ ಲೀಲೆ ತೋರಿಸುವುದಕ್ಕಾಗಿ

“ಸೀತೆ…ನನ್ನ ಸೀತೆ ಎಲ್ಲಿ ಹೋದಳು ?ಸೀತೆ…ನನ್ನ ಪ್ರೀತಿಯ ಸೀತೆಯನ್ನು ನೀವು ಯಾರಾದರೂ ನೋಡಿದ್ದೀರ?”ಎಂದು ರೋದಿಸುತ್ತಾ ಮರ-ಗಿಡ,ಪ್ರಾಣಿ- ಪಕ್ಷಿ ಗಳನ್ನು ಕೇಳುತ್ತಾ ಕರಡಿ-ಕೋತಿಗಳ ಸೈನೆ ಕಟ್ಟಿಕೊಂಡು ಲಂಕೆಗೆ ಬಂದು ಕುಲ ಘಾತಕ ವಿಭೀಷಣನ ಸಹಾಯದಿಂದ ಇಂದ್ರಜಿತು, ಮೇಘನಾಥ, ಕುಂಬಕರ್ಣ, ಮತ್ತು ರಾವಣ… (ಎಲ್ಲ)ರನ್ನೂ ಕೊಂದು ಲಂಕೆಯನ್ನು ಗೆದ್ದುಕೊಂಡು ಸೀತೆಯನ್ನು ಪಡೆದನಂತೆ… ಇದು ರಾಮಾಯಣದ ಕಥೆ !.

ಈ ಕಥೆಯಲ್ಲಿ ಹತನಾದ ಲಕ್ಷ್ಮಣ ಬದುಕುಳಿಯುತ್ತಾನೆ.
ಅಂದರೆ ಸತ್ತ ಲಕ್ಷ್ಮಣ ಮರುಜೀವ ಪಡೆಯುತ್ತಾನೆ.
ಮಹಾಶೂರನಾದ ರಾವಣ, ದಶಮುಖನೆಂದು ವಿಶ್ವವಿಖ್ಯಾತ ಪಡೆದ ರಾವಣ, ಅಷ್ಟ ದಿಕ್ಪಾಲಕರನ್ನು ತನ್ನ ಭುಜಬಲದಿಂದ ಸೇವಕರನಾಗಿ ಮಾಡಿಕೊಂಡ ರಾವಣ, ಮೂರು ಲೋಕಗಳನ್ನು ಗಡಗಡನೆ ನಡುಗುವಂತೆ ಮಾಡಿದ ರಾವಣ, ತಪಃಶಕ್ತಿಯಿಂದ ತನಗೆ ಯಾರಿಂದಲೂ ಸಾವು ಬರಬಾರದೆಂಬ ವರವನ್ನು ಪಡೆದ ರಾವಣ… ಮಲತಾಯಿ ಧೋರಣೆಗೆ ಒಳಗಾಗಿ ಅರಮನೆಯನ್ನು ತೊರೆದು, ನಾರು ಮಡಿಯನ್ನುಟ ಅಲೆಮಾರಿಯಂತೆ ಕಾಡಿನಲ್ಲಿ ಅಲಿಯುತ್ತಿದ್ದ ಒಬ್ಬ ರಾಮನಿಂದ ಹತನಾಗುತ್ತಾನೆ ಎಂದು ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ. ಯಾಕೆ ಅಂದರೆ ಇದು ರಾಮಾಯಣ… ಇದುವೇ ರಾಮಲೀಲೆ! ಇದುವೇ ಕಂತೆ ಪುರಾಣ !

ಕಂತೆ ಪುರಾಣದಲ್ಲಿ ಏನು ಬೇಕಾದರೂ ನಡೆಯುತ್ತದೆ.
ಯಾಕೆ ಅದು ಹಾಗೆ ಎಂದು ಕೇಳುವಂತಿಲ್ಲ.
ಒಂದು ವೇಳೆ ನನ್ನಂಥವರು ಕೇಳಿದರೆ-
‘ದುಷ್ಟ ಪಾಪಿ, ಧರ್ಮ ನಿಂದಕ , ದೇವರ ಶಾಪಕ್ಕೆ ಬಲಿಯಾಗಿ ನರಕ ಸೇರ್ತಿಯ!’ ಎಂದು ಧಾರ್ಮಿಕ ಭಯೋತ್ಪಾದನೆ ನಡೆಸಲಾಗುತ್ತದೆ ಬಂಧುಗಳೇ !
ಅವರ ಗೊಡ್ಡು ಬೆದರಿಕೆಗೆ ಹೆದರುವ ಹೇಡಿ ಗಂಡು ನಾನಲ್ಲ ಬಿಡಿ…! ಅದಿರಲಿ ಈಗ ವಿಷಯಕ್ಕೆ ಬರೋಣ…

ರಾಮಾಯಣದ ಕಥೆ ಮುಂದೇನಾಯ್ತು ?
ಅಗಸನ ಮಾತು ಕೇಳಿ ರಾಮ ಸೀತೆಯ ಶೀಲ ಶಂಕಿಸಿದ.
ಸೀತೆ ಚಿತೆಗೆ ಹಾರಿದಳು… ಕಥೆ ಮುಂದುವರಿಯುತ್ತದೆ!
ಹೆಂಡತಿಯ ಶೀಲ ಶಂಕಿಸಿದ ರಾಮ ಹೇಗೆ ಪುರುಷೋತ್ತಮನಾಗುತ್ತಾನೆ?
ಅಮಾಯಕ ಮುಗ್ಧ ಹೆಣ್ಣಿನ ಕತ್ತು, ಮೂಗು ಮತ್ತು ಸ್ತನವನ್ನು ಕೊಯ್ದು ಬಿಡು ಎಂದು ಹೇಳಿದ ರಾಮ ಹೀಗೆ ಪುಣ್ಯವಂತನಾಗುತ್ತಾನೆ? ಮಹಾಜ್ಞಾನಿ ಶೂದ್ರ ಶಂಬೂಕನನ್ನು ಕೊಲೆಗೈದ ರಾಮ ಹೇಗೆ ದೇವರಾಗುತ್ತಾನೆ…?

ದೇಶದ್ಯಂತ ರಾವಣ ದಹನ ಏಕೆ ಮಾಡಲಾಗುತ್ತದೆ?
ರಾವಣ ಹೆಣ್ಣನ್ನು ಅಪಹರಿದಕ್ಕೆ ತಾನೇ ನೀವು ರಾವಣನನ್ನು ಸುಡುವುದು ?

1.ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಅಂಬಾ, ಅಂಬೆ, ಅಂಬಲಿಕಾ ಎಂಬ ಹೆಸರಿನ ಮೂರು ಜನ ಸಹೋದರಿಯರನ್ನು ಅಪಹರಣ ಮಾಡುತ್ತಾನೆ.
ಹೆಣ್ಣುಗಳನ್ನು ಅಪಹರಣಗೈದ ಭೀಷ್ಮ ಪಿತಾಮಹನನ್ನೇಕೆ ನೀವು ಸುಡುವುದಿಲ್ಲ ?

2.ಪಾಂಡು ರಾಜ… ಮಾಧುರಿ ಸೌಂದರ್ಯಕ್ಕೆ ಮರಳಾಗಿ ಅವಳನ್ನು ಕದ್ದು ತರುತ್ತಾನೆ.

3.ಇಂದ್ರ… ಗೌತಮನ ಹೆಂಡತಿ ಪತಿವ್ರತೆ ಅಹಲ್ಯಳನ್ನು ಮೋಸದಿಂದ ಬಲತ್ಕಾರ ಮಾಡುತ್ತಾನೆ.

4.ಕೃಷ್ಣನ ಸೋದರಿಯಾದ ಸುಭದ್ರೆಯನ್ನು ಅರ್ಜುನ ಬಲತ್ಕಾರಿಸುತ್ತಾನೆ.

5.ಪಾರ್ವತಿ ಇದ್ದರೂ ಸಹ ಪರಮಾತ್ಮ ಗಂಗೆಯ ಜೊತೆ ಹಾದರದ ಸಂಬಂಧ ಇರಿಸಿಕೊಂಡಿದ್ದಾನೆ.

6.ಬಲತ್ಕಾರಿ ಬ್ರಹ್ಮ ತನ್ನ ಮಗಳನ್ನೇ ಬಲತ್ಕರಿಸುತ್ತಾನೆ.

7.ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುವ ರಾಧೆಯೆಂಬ ಪ್ರಿಯಸಿಯೊಬ್ಬಳು ಇದ್ದರೂ ಸಹ 16000 ಗೋಪಿಕಾ ಸ್ತ್ರೀಯರ ಗಂಡನಾಗುತ್ತಾನೆ ಶ್ರೀಕೃಷ್ಣ. ಸುಡುವುದಾದರೆ ಈ ಎಲ್ಲರನ್ನು ಸುಡಿ ! ಅದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ರವರು ಈ ರಾಮಾಯಣ ಮಹಾಭಾರತದ ಕುರಿತು ಇವು ‘ಹಾದರದ ಕತೆಗಳು ‘ ಎಂದು ಹೇಳಿದ್ದಾರೆ. ಹಾಗಾಗಿ ಕವಿ ಕಲ್ಪಿತ ಕಟ್ಟು ಕತೆಗಳನ್ನು ನಂಬಿ ನಿಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬೇಡಿ.

– ಜಿ.ಎಲ್ .ನಾಗೇಶ.
ಧನ್ನೂರ್ (ಆರ್)
ತಾ.ಬಸವಕಲ್ಯಾಣ ಜಿ.ಬೀದರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ