ಸಾಧನೆಗೆ ವಿಕಲಾಂಗತೆ ಅಡ್ಡಿಯಲ್ಲ” ಅನ್ನೊದಕ್ಕೆ ಸಾಕ್ಷಿಯಾದ ದೀಪ್ತಿ ಜೀವನ್ ಜಿ
ತಾನು ಕುಳಿತ ವೀಲ್ ಚೇರ್ ನಿಂದಲೇ ಜಗತ್ತಿನ ಸಮಸ್ತ ವಿಷಯಗಳನ್ನು ಅರಿಯುವ, ಸೈದ್ದಾಂತಿಕ ಭೌತಶಾಸ್ತ್ರಜ್ಞ, ವಿಶ್ವವಿಜ್ಞಾನಿ ಎಂದು ಹೆಸರಾಗಿದ್ದ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಯಶಸ್ವಿಯಾದ ಸ್ಟೀಫನ್ ಹಾಕಿಂಗ್ ತನ್ನ ವಿಕಲಾಂಗತೆಯನ್ನು ಎಂದೂ ದೂರಲಿಲ್ಲ.
ಕಿವಿ ಕೇಳಿಸದ ಮತ್ತು ಕಣ್ಣುಗಳೇ ಇಲ್ಲದ ಅಂಧ ವ್ಯಕ್ತಿ ಹೆಲನ್ ಕೆಲ್ಲರ್,ಎಲ್ಲ ರೀತಿಯ ದೈಹಿಕ ಅಂಗವಿಕಲತೆ ಇದ್ದ ಮನುಷ್ಯರು ಕೂಡ ಸಾಮಾನ್ಯ ಜೀವನವನ್ನು ಜೀವಿಸಬಲ್ಲರು ಎಂದು ಪ್ರತಿಪಾದಿಸಿದ ಹೆಲನ್ ಕಿಲ್ಲರ್ ಅಂಧ ಮತ್ತು ಕಿವುಡ ಮಕ್ಕಳ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದಳು.
ಇನ್ನು ಭಾರತದಲ್ಲಿ ಕಣ್ಣು ಕಾಣಿಸದ ಶ್ರೀಕಾಂತ್ ಬೊಲ್ಲ ಎಂಬ ವ್ಯಕ್ತಿ ಜಗತ್ತೇ ನಿಬ್ಬೆರದಾಗುವಂತಹ ಸಾಧನೆಯನ್ನು ಮಾಡಿ ತನ್ನದೇ ಒಂದು ಉದ್ದಿಮೆಯನ್ನು ಪ್ರಾರಂಭಿಸಿ ವಾರ್ಷಿಕವಾಗಿ ಸುಮಾರು 80 ಕೋಟಿ ವ್ಯವಹಾರವನ್ನು ನಡೆಸಿ ಭಾರತ ದೇಶದ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರಲ್ಲದೇ ವಿಶ್ವ ಶ್ರೇಷ್ಠ ಉದ್ಯಮಿಗಳಲ್ಲಿ ಕೂಡ ಅವರ ಹೆಸರು ಕೇಳಿ ಬರುತ್ತಿದೆ.
ಅವರದೇ ಸಾಲಿನಲ್ಲಿ ಇನ್ನೊಂದು ಹೆಸರು ದೀಪ್ತಿ ಜೀವನ್ ಜೀ.
ಸೂರ್ಯ ಗ್ರಹಣದ ಕಾಲದಲ್ಲಿ ಹುಟ್ಟಿದ ಆಕೆಯ ತಲೆ ತುಸು ಚಿಕ್ಕದಾಗಿದ್ದು ಆಕೆಯ ಮೂಗು ಮತ್ತು ತುಟಿಗಳು ವಿಭಿನ್ನವಾಗಿಯೇ ಇದ್ದವು ಹಳ್ಳಿಯ ಜನ ಗ್ರಹಣದ ಸಮಯದಲ್ಲಿ ಹುಟ್ಟಿದ ಆಕೆಯನ್ನು ಹುಚ್ಚಿ, ಕೋತಿ ಎಂದು ಕರೆದು ಹೀಯಾಳಿಸುತ್ತಿದ್ದರು. ಜನರ ಕೆಟ್ಟ ಮಾತುಗಳಿಂದ ನೋಯುವ ಆಕೆ ಮನೆಗೆ ಬಂದು ಅಳುತ್ತಿದ್ದಳು. ಪುಟ್ಟ ಬಾಲಕಿಯನ್ನು ಸಮಾಧಾನ ಮಾಡಿಸಲು ಆಕೆಯ ಹೆತ್ತವರು ಹರ ಸಾಹಸ ಮಾಡಿ ಆಕೆಯನ್ನು ಅನಾಥಾಶ್ರಮಕ್ಕೆ ಕಳುಹಿಸಲು ಮನಸ್ಸು ಮಾಡಿದರು. ಅಂದು ತನ್ನ ದೈಹಿಕ ಅಂಗವಿಕಲತೆಯಿಂದ ಎಲ್ಲರಿಂದ ಹೀಯಾಳಿಸಲ್ಪಟ್ಟ ಆ ಮಗುವೆ ಪ್ಯಾರಿಸ್ ನ ಪ್ಯಾರಾ ಒಲಂಪಿಕ್ 2024ರಲ್ಲಿ ಚ ಸಾಧನೆ ಮಾಡಿದ ಹುಡುಗಿ ದೀಪ್ತಿ ಜೀವನ್ ಜಿ .
ಪ್ಯಾರಿಸ್ ಪ್ಯಾರಾ ಒಲಿಂಪಿಕ್ 2024ರ ಪಂದ್ಯಾವಳಿಗಳಲ್ಲಿ ಆತ್ಮಬಲ ಮತ್ತು ಛಲ ಇರುವ ವ್ಯಕ್ತಿ ಬದುಕಿನಲ್ಲಿ ಬರುವ ಸಂಘರ್ಷಗಳನ್ನು ಮೆಟ್ಟಿ ನಿಂತು ಜಯ ಸಾಧಿಸುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಕೇವಲ 20ರ ಹರೆಯದ ದೀಪ್ತಿ ಜೀವನ್ ಜೀ ಪ್ಯಾರಿಸ್ ನ ಪ್ಯಾರಾ ಒಲಿಂಪಿಕ್ ನಲ್ಲಿ ನಡೆದ ಮಹಿಳೆಯರ 400 ಮೀಟರ್ ಓಟದ ಟಿ20 ಕಾಂಪಿಟೇಶನ್ ನಲ್ಲಿ 55.82 ಸೆಕೆಂಡ್ ಗಳಲ್ಲಿ ಓಡಿ ತನ್ನ 16ನೇ ಪದಕಕ್ಕೆ ಕೊರಳೊಡ್ಡಿದಳು.
.
ಆಂಧ್ರಪ್ರದೇಶ ರಾಜ್ಯದ ವಾರಂಗಲ್ ಜಿಲ್ಲೆಯ ಕಲ್ಲೇಡ ಎಂಬ ಗ್ರಾಮದಲ್ಲಿ ಜನಿಸಿದ ದೀಪ್ತಿಯ ತಂದೆ ಯದುಗಿರಿ ಮತ್ತು ತಾಯಿ ಧನಲಕ್ಷ್ಮಿ.
ಸೂರ್ಯ ಗ್ರಹಣದಂದು ಹುಟ್ಟಿದ ಮಗು ದೈಹಿಕವಾಗಿ ಪುಟ್ಟ ತಲೆಯನ್ನು ಹೊಂದಿದ್ದು ನೋಡಲು ವಿಕಾರವಾಗಿ ತೋರುತ್ತಿತ್ತು.
ಕೇವಲ ಅರ್ಧ ಎಕರೆ ಜಮೀನನ್ನು ಹೊಂದಿದ್ದು ಆಕೆಯ ಪಾಲಕರು ಬದುಕಿನ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.ಮನೆಯ ಹತ್ತಿರ ಆಟವಾಡಿಕೊಂಡಿರುತ್ತಿದ್ದ ಪುಟ್ಟ ಬಾಲಕಿ ದೀಪ್ತಿಯನ್ನು ಕಂಡು ಆಕೆಯ ವಾರಿಗೆಯ ಮಕ್ಕಳು ಛೇಡಿಸುವುದಲ್ಲದೆ ಆಕೆಯನ್ನು ಹುಚ್ಚಿ, ಕೋತಿ ಎಂದೆಲ್ಲಾ ಕರೆದು ಅವಮಾನ ಮಾಡುತ್ತಿದ್ದರು. ಮಕ್ಕಳೊಂದಿಗೆ ಆಟವಾಡಲು ಬಯಸಿ ಹೋಗಿರುತ್ತಿದ್ದ ಬಾಲಕಿ ಅಳುತ್ತಾ ಮನೆಗೆ ಹಿಂತಿರುಗುತ್ತಿದ್ದಳು. ಮಗಳ ಅಳುವನ್ನು ಕಂಡು ಆಕೆಯ ಪಾಲಕರು ನೊಂದುಕೊಳ್ಳದೆ ಬೇರೇನು ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಹೀಗೆಯೇ ದಿನಗಳು ಕಳೆದು ಆಕೆ ಶಾಲೆಗೆ ಹೋಗಲಾರಂಭಿಸಿದ ಮೇಲೆ ಆಕೆಯನ್ನು ಗುರುತಿಸಿದ ಓರ್ವ ಶಿಕ್ಷಕರು ಆಕೆಯನ್ನು ಹೈದರಾಬಾದಿನ ವಿಕಲಾಂಗ ಮಕ್ಕಳ ಶಾಲೆಗೆ ಸೇರಿಸಲು ಆಕೆಯ ವೈದ್ಯಕೀಯ ಪರೀಕ್ಷೆ ಮಾಡಿಸಲು ಹೇಳಿದರು. ಅವರ ಮಾತಿನಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾದ ದೀಪ್ತಿಗೆ ಐಡಿ ಇಂಟಲೆಕ್ಟ್ನಯಲ್ ಡಿಸೆಬಿಲಿಟಿ ಇರುವುದು ಪತ್ತೆಯಾಗಿ ವಿಕಲಾಂಗ ಶಾಲೆಯಲ್ಲಿ ಪ್ರವೇಶ ದೊರೆಯಿತು.
ತನ್ನಂತೆಯೇ ವಿವಿಧ ತೊಂದರೆಗಳಿಗೆ ಒಳಗಾದ ಮಕ್ಕಳ ನಡುವೆ ದೀಪ್ತಿ ಓದತೊಡಗಿದಳು.
ದೀಪ್ತಿ 9ನೇ ತರಗತಿಯಲ್ಲಿ ಓದುತ್ತಿರುವಾಗ ಆಕೆಯ ಓಟದ ತೀವ್ರತೆಯನ್ನು ಗಮನಿಸಿದ ಆಕೆಯ ಶಾಲೆಯ ದೈಹಿಕ ಶಿಕ್ಷಕರು ರಾಷ್ಟ್ರೀಯ ಅಥ್ಲೆಟಿಕ್ ತಂಡದ ಕೋಚ್ಗಳಲ್ಲಿ ಒಬ್ಬರಾದ ರಮೇಶ್ ಕುಮಾರ್ ಅವರಿಗೆ ಆಕೆಯನ್ನು ಪರಿಚಯಿಸಿದರು. ರಮೇಶ್ ಕುಮಾರ್ ಕೂಡ ಆಕೆಗೆ ಒಳ್ಳೆಯ ತರಬೇತಿಯನ್ನು ನೀಡುವ ಮೂಲಕ ರಾಜ್ಯಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಗೆಲ್ಲುವಂತೆ ತಯಾರು ಮಾಡಿದರು.
ಇದೇ ಸಮಯದಲ್ಲಿ ಸ್ಪರ್ಧೆಯೊಂದರಲ್ಲಿ ಆಕೆಯ ಓಟದ ಪ್ರತಿಭೆಯನ್ನು ಗಮನಿಸಿದ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಫುಲ್ಲೇಲ ಗೋಪಿಚಂದ್ ಆಕೆಯನ್ನು ಪ್ರೋತ್ಸಾಹಿಸಿದರು.
ನಂತರ ನಡೆದದ್ದು ಇತಿಹಾಸ. ರಾಜ್ಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ನ ಓಟದಲ್ಲಿ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿದ ದೀಪ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿ ಜಪಾನ್ ನ ಕೊಬೆಯಲ್ಲಿ ನಡೆದ ವರ್ಲ್ಡ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ತನ್ನ ಪ್ರಥಮ ಚಿನ್ನದ ಪದಕವನ್ನು ಆಕೆ ಗಳಿಸಿದಳು.
ನಂತರ ಆಕೆ ಹಿಂತಿರುಗಿ ನೋಡಲೇ ಇಲ್ಲ. ಇದೀಗ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ 2024ರಲ್ಲಿ, ಟಿ ಟ್ವೆಂಟಿ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಆಕೆ ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ.
ಒಂದೊಮ್ಮೆ ಆಕೆಯ ತೊಂದರೆಯನ್ನು ಗಮನಿಸಿ ಆಕೆಯ ಪಾಲಕರಿಗೆ ಆಕೆಯನ್ನು ತೊರೆದುಬಿಡುವಂತೆ
ಸಲಹೆ ನೀಡಿದ ಸಂಬಂಧಿಗಳು ಮತ್ತು ಸ್ನೇಹಿತರು ಇದೀಗ ಆಕೆಯ ಸಾಧನೆಯನ್ನು ಕಂಡು ನಿಬ್ಬೆರಗಾಗಿದ್ದಾರೆ.
ಸಾಧನೆಯ ಶಿಖರವನ್ನೇರಲು ಕೇವಲ ಮನಸ್ಸೊಂದಿದ್ದರೆ ಸಾಲದು, ಸಾಧಿಸುವ ತವಕ, ನಿರಂತರ ಪರಿಶ್ರಮ, ಕಠಿಣ ಸಾಧನೆ ಮತ್ತು ಬೆಂಬಲಿಸುವ ವಾತಾವರಣ ಎಂತದ್ದೇ ವಿಕಲಾಂಗರಲ್ಲೂ ಛಲವನ್ನು ಮೂಡಿಸುತ್ತದೆ ಎಂಬುದಕ್ಕೆ ದೀಪ್ತಿಯ ಜೀವನವೇ ಒಂದು ನಿದರ್ಶನ.
ಕೇವಲ 20 ರ ಹರೆಯದ ದೀಪ್ತಿ ಜೀವನ್ ಜಿ ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ತನ್ನ ಮುಡಿಗೇರಿಸಿಕೊಳ್ಳಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿ ತನ್ನಂತಹ ವಿಕಲಾಂಗರಿಗೆ ಸ್ಪೂರ್ತಿ ಮತ್ತು ಉತ್ಸಾಹವನ್ನು ತುಂಬುವ ಚೈತನ್ಯದ ಚಿಲುಮೆಯಾಗಲಿ ಎಂದು ಹಾರೈಸೋಣ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್