ಸಾಗರ ತೀರದನುಭವ
ಕಡಲ ತೆರೆಗಳ ಮೊರೆತವು
ಹೃದಯದಲೆಗಳ ಮಿಡಿತವು
ಭಾವನೆ ತರಂಗಗಳ ಕೊರೆತವು
ಬಂದು ಹೋಗುವ ಅತಿಥಿಗಳು
ಮುಸ್ಸಂಜೆಯ ಸಮಯದಲಿ
ಹೊನ್ನ ಸೂರ್ಯ ರಶ್ಮಿಯಲಿ
ಪ್ರಶಾಂತ ಸಾಗರದ ತೀರದಲಿ
ಶಾಂತ ಕುಳಿತಿರುವೆ ಮೌನದಲಿ
ಸ್ವರ್ಣ ರಥವನೇರಿ ಹೊರಟ ರವಿ
ರಜತ ರಥವನೇರಿ ಬರುವ ಶಶಿ
ಬಣ್ಣದ ಭಾವದಲೆಗಳೆಯ ಕವಿ
ಅಕ್ಷರ ಪಥವನೇರಿ ಹೊರಟ ಜೀವಿ
ಮೂರು ಪ್ರಹರದ ಸಹಜೀವನ
ದೇವನಿತ್ತ ಸುಂದರ ಸನ್ಮಾನ
ಆಧ್ಯಾತ್ಮ ಪಥದ ಅಭಿಯಾನ
ಅನುಭವಾಮೃತದ ಅಭಿಮಾನ
ಇಳಿ ವಯಸೆಂದು ಅಳುತ
ಕೂಡದೇ ಇಳೆಯೊಳು ಬೇಕಾಗುತ
ಬೆಳಕಿನ ಪಥದಲಿ ಮುನ್ನಡೆಯುತ
ಪ್ರಜ್ವಲಿಸುವ ದಾರಿ ದೀಪವಾಗುವೆ
– ಅನ್ನಪೂರ್ಣ ಸು ಸಕ್ರೋಜಿ.ಪುಣೆ