Oplus_131072

ಸಾಹಿತಿ ಶಕೀಲ್ ಐ ಎಸ್ ‘ ರವರು ಬರೆದ ಕೇರಳ ಪ್ರವಾಸ ಕಥನ.

ಪ್ರತಿ ವರ್ಷ ನಮ್ಮ ಭಾರತ ದೇಶದ ಒಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಆ ರಾಜ್ಯದ ಪ್ರೇಕ್ಷಣಿಕ ಸ್ಥಳಗಳನ್ನು ನೋಡುವ ಪರಿಪಾಠ ಮಾಡಿಕೊಂಡಿರುವ ನಾನು, ಈ ವರ್ಷ ಆಯ್ಕೆ ಮಾಡಿಕೊಂಡ ರಾಜ್ಯ ಕೇರಳ.

ಈ ರಾಜ್ಯ ಅನೇಕ ವಿಷಯಗಳಿಗೆ ಪ್ರಸಿದ್ದಿ ಪಡೆದಿದೆ.

ಕೇರಳ ರಾಜ್ಯವನ್ನು 1991 ರಲ್ಲಿ ಸಂಪೂರ್ಣ ಸಾಕ್ಷರ ರಾಜ್ಯವೆಂದು ಘೋಷಿಸಲಾಯಿತು, ಅಲ್ಲಿ ಎಲ್ಲರೂ ಓದುವವರು ಮತ್ತು ಬರೆಯುವವರು ಆಗಿದ್ದಾರೆ. ನಗರ ಸಾಕ್ಷರತಾ ಪ್ರಮಾಣವು ಗ್ರಾಮೀಣ ಸಾಕ್ಷರತೆ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಾಗಿದೆ.

               ಕೇರಳವು 10492 ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದಲ್ಲದೇ ರಾಜ್ಯದಲ್ಲಿ 94.59% ವಯಸ್ಕ ಸಾಕ್ಷರತೆಯನ್ನು ಹೊಂದಿದ್ದು, ತೆಂಗಿನಕಾಯಿ, ರಬ್ಬರ್, ಮೆಣಸು, ಏಲಕ್ಕಿ, ಶುಂಠಿ, ಕೋಕೋ, ಗೋಡಂಬಿ, ಅಡಿಕೆ, ಕಾಫಿ ಮತ್ತು ಚಹಾದ ಪ್ರಮುಖ ಉತ್ಪಾದಕವಾಗಿದೆ. ಜಾಯಿಕಾಯಿ, ದಾಲ್ಚಿನ್ನಿ, ಲವಂಗ ಮುಂತಾದ ಸಾಂಬಾರ ಪದಾರ್ಥಗಳನ್ನು ಸಹ ಬೆಳೆಸಲಾಗುತ್ತದೆ. ತೆಂಗು ಕೇರಳದ ಪ್ರಮುಖ ವಾಣಿಜ್ಯ ಬೆಳೆಯಾಗಿ ಪ್ರಸಿದ್ಧಿ ಪಡೆದುಕೊಂಡ ರಾಜ್ಯ ಇದಾಗಿದೆ.
ಶಿಕ್ಷಿತ ಮತ್ತು ವ್ಯಾಪಾರಸ್ಥರಾದ ಜನರು ಮತ್ತು ಅಲ್ಲಿನ ಪರಿಸರವನ್ನು ನೋಡಬೇಕೆನ್ನುವ ಉದ್ದೇಶದಿಂದಲೇ ಈ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದ್ದೇವು.
ಒಂಬತ್ತು ಜನರಿದ್ದ ನಮ್ಮ ಗೆಳೆಯರ ತಂಡವು ಕರ್ನಾಟಕದ ಕಿರೀಟವೆಂತಲೇ ಪ್ರಸಿದ್ಧಿ ಪಡೆದ ಬೀದರ್ ದಿಂದ ಭಾರತೀಯ ಉಪಖಂಡದ ದಕ್ಷಿಣದ ತುತ್ತ ತುದಿ “ದಿ ಲ್ಯಾಂಡ್ಸ್ ಎಂಡ್” ಎಂದು ಕರೆಯಲ್ಪಡುವ ಕನ್ಯಾಕುಮಾರಿಗೆ ಭೇಟಿ ನೀಡಿ, ಅಲ್ಲಿಂದ ಕೇರಳ ರಾಜ್ಯದ ಪ್ರವಾಸ ತಾಣಗಳನ್ನು ವೀಕ್ಷಿಸುವ ಕಾರ್ಯ ಪ್ರಾರಂಭಿಸಲಾಯಿತು.


ಮೊದಲಿಗೆ ತಮಿಳು ನಾಡಿನ ಕನ್ಯಾಕುಮಾರಿಯಲ್ಲಿ ಸೂರ್ಯಸ್ಥ ನೋಡಬೇಕೆಂದು ಬಂದೆವು, ಆದರೆ ಕಾರಿನವನು ವಿಳಂಬಮಾಡಿ ಕರೆದುಕೊಂಡು ಬಂದ, ಬರುವವರೆಗೆ ರಾತ್ರಿ ಆಗಿತ್ತು ಸೂರ್ಯ ಸಂಪೂರ್ಣ ಮರೆಯಾಗಿದ್ದ.ಕತ್ತಲೆ ಅವರಿಸಿತ್ತು ದೂರದಲ್ಲಿ ಒಂದು ದೊಡ್ಡ ಪ್ರತಿಮೆ ಅದರ ಪಕ್ಕದಲ್ಲಿ ವಿವೇಕಾನಂದರ ದೇವಸ್ಥಾನ ಕಾಣಿಸುತ್ತಿತ್ತು. ಆದರೆ ನನಗೆ ಮತ್ತೆ ಮತ್ತೆ ನೋಡುವಂತೆ ಮಾಡಿದ್ದೂ ಕರಿ ಕಲ್ಲಿನಿಂದ ನಿರ್ಮಿಸಿದ ಆ ಬ್ರಹತ ಪ್ರತಿಮೆ.

ಕನ್ಯಾಕುಮಾರಿಯಲ್ಲಿರುವ ಈ ಪ್ರತಿಮೆಯೂ ತಿರುವಳ್ಳುವರ್ ಅವರದ್ದು. ಇವರು 3ನೇ-4ನೇ ಶತಮಾನ ಅಥವಾ 8ನೇ-9ನೇ ಶತಮಾನದ ನಡುವೆ ಬದುಕಿದ್ದನೆಂಬ ಒಬ್ಬ ಮಹಾನ್ ಕವಿ. ಸಾಮಾನ್ಯವಾಗಿ ವಳ್ಳುವರ್ ಎಂದು ಕರೆಯಲ್ಪಡುವ ತಿರುವಳ್ಳುವರ್ ಒಬ್ಬ ಭಾರತೀಯ ದ್ರಾವಿಡ ಕವಿ ಮತ್ತು ತತ್ವಜ್ಞಾನಿ. ಇವರು ತಿರುಕ್ಕುಟದ ಲೇಖಕರಾಗಿದ್ದು, ಇದು ನೀತಿಶಾಸ್ತ್ರ, ರಾಜಕೀಯ ಮತ್ತು ಆರ್ಥಿಕ ವಿಷಯಗಳು ಮತ್ತು ಪ್ರೀತಿಯ ಜೋಡಿಗಳ ಕುರಿತು ಬರೆದಿದ್ದು ಇದೆ. ಈ ಪಠ್ಯವನ್ನು ತಮಿಳು ಸಾಹಿತ್ಯದ ಅಸಾಧಾರಣ ಮತ್ತು ವ್ಯಾಪಕವಾಗಿ ಪಾಲಿಸಬೇಕಾದ ಕೃತಿ ಎಂದು ಪರಿಗಣಿಸಲಾಗಿದೆ. ಇವರು ಜೈನ ಧರ್ಮಕ್ಕೆ ಸಂಬಂಧ ಹೊಂದಿದ್ದಾರೆಂದು ಭಾವಿಸಲಾಗಿದೆ. ಆದಾಗ್ಯೂ, ತಿರುವಳ್ಳುವರ್ ಹಿಂದೂ ಧರ್ಮಕ್ಕೆ ಸೇರಿದವರೆಂದು ಹಿಂದೂಗಳು ಪ್ರತಿಪಾದಿಸಿದ್ದಾರೆ. ತಿರುವಳ್ಳುವರ್ ಯಾವ ಧರ್ಮಕ್ಕೆ ಸೇರಿದವರಿರಲಿ, 3-4ನೇ ಶತಮಾನದಲ್ಲಿ ಒಬ್ಬ ಕವಿ ಬಾಳಿ ಬದುಕಿ, ಸಮಾಜದ ಮೇಲೆ ಇಷ್ಟೊಂದು ಪ್ರಭಾವ ಮಾಡಿದ್ದಾನೆ. ಆತನ ಇಷ್ಟೊಂದು ಬ್ರಹತ್ ಪ್ರತಿಮೆ ಅದು ಸಮುದ್ರದಲ್ಲಿ ನಿರ್ಮಿಸಿದ್ದಾರೆಂದರೆ, ಬರಹಗಾರನಾದ ನನಗೆ ಬಹಳ ಮನಮುಟಿತ್ತು. ರಾತ್ರಿ ಆಗಿರುವುದರಿಂದ ಸಮಗ್ರ ಮಾಹಿತಿ ಪಡೆದು ನಸುಕಿನ್ ಸೂರ್ಯೋದಯ ನೋಡುವ ತವಕವಿಟ್ಟುಕೊಂಡು ಅತಿಥಿ ಗ್ರಹಕ್ಕೆವಿಶ್ರಾಂತಿ ಕುರಿತು ಹೋದೆವು.
…….

ನಸುಕಿನ ಜಾವ 4-00 ಗಂಟೆಗೆ ಕೊಣೆಯಲ್ಲಿ ಗದ್ದಲ ಕೇಳಲಾರಾಂಭಿಸಿತು. ಗೆಳೆಯರೆಲ್ಲರು ಎದ್ದು ಸ್ನಾನ ಮಾಡಲು ನಾಮುಂದು, ನಿಮುಂದೇನ್ನುತ್ತಿದರು, ಅವರಲ್ಲಿ ಒಬ್ಬ ಏಳು ಸೂರ್ಯೋದಯ ದೃಶ್ಯ ನೋಡುವುದಿದೆ ಎಂದ. ನಾನು ಸಹ ಎದ್ದು ಸ್ನಾನ ಮಾಡಿಕೊಂಡು ಅವರೋಟ್ಟಿಗೆ ಹೊರಟೆ. ಇನ್ನು ಸೂರ್ಯೋದಯ ಆಗಿಲ್ಲ. ಯುವಕರು, ಯುವತಿಯರು, ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ನೆರೆದಿದ್ದರು. ಎಲ್ಲರು ತಮ್ಮ ತಮ್ಮ ಕೈಗಳ್ಳಲ್ಲಿ ಮೊಬೈಲ್ ಹಿಡಿದು ಸೂರ್ಯನನ್ನು ಸೀರೆಹಿಡಿಯಲು ಪ್ರಯತ್ನಿಸುತ್ತಿದ್ದರು.

ನಾನು ಹಾಗೆ ಮಾಡಲು ಪ್ರಾರಂಭಿಸಿದೆ. ಕರಿ,ನೀಲಿ ಬಣ್ಣಗಳಲ್ಲಿ ಕೆಂಪನೆಯ ಬಣ್ಣವು ಒಂದು ಜಾಗೆಯಿಂದ ಬರುವಂತೆ ಕಾಣಿಸುತ್ತಿತ್ತು. ಕುತೂಹಲ ಹೆಚ್ಚಾಯಿತು. ಸೂರ್ಯ ನಮ್ಮ ಕಡೆ ಉದಯಿಸುವ ಹಾಗೆ ಉದಯಿಸುತ್ತಾನೋ ಅಥವಾ ಇಲ್ಲಿ ಹೇಗೆ ಉದಯಿಸಿ ಬರುತ್ತಾನೋ ಎನ್ನುವ ಕುತೂಹಲ ಇದ್ದೆ ಇತ್ತು. ಕಡೆಗೂ ಉದಯವಾಗಲು ಪ್ರಾರಂಭವಾದಾಗ ಅವನಿಗಿಂತ ಹೆಚ್ಚಿನ ರೋಷದಿಂದ ಮಕ್ಕಳು ಯುವಕರು ಬರಮಾಡಿಕೊಳ್ಳುತ್ತಿದರು.
ಮೊದಲಿಗೆ ಸಣ್ಣ ಒಂದು ಚಂಡಿನಂತಿದ್ದವನು ಬರುಬರುತ್ತಾ ದೊಡ್ಡ ಗಾತ್ರದ ಫೋಟ್ಬಾಲಗಿಂತಲೂ ದೊಡ್ಡವನಾದ. ಗೋಲ್ಡನ್ ಹಳದಿ, ಕಿತ್ತಳೆ, ಮೃದುವಾದ ಗುಲಾಬಿ ಮತ್ತು ವಿಕಿರಣ ಕೆಂಪು ಬಣ್ಣಗಳು, ಉಷ್ಣತೆ, ಆಶಾವಾದ, ಸಂತೋಷದ ಬಣ್ಣಗಳು, ರೋಮಾಂಚಕ, ಶಕ್ತಿ, ಸೃಜನಶೀಲತೆ, ಸಂತೋಷ, ಸೌಮ್ಯ, ಪೋಷಣೆ, ತಮಾಷೆಯ, ರೋಮಾಂಚಕ, ಉತ್ಸಾಹವನ್ನು ಹಾಗೂ ಉತ್ಸಾಹ, ಶಕ್ತಿ, ಧೈರ್ಯವನ್ನು ಪ್ರದರ್ಶಿಸುತ್ತ ಉದಯವಾಗುತ್ತಿದ್ದ. ಒಟ್ಟಿನಲ್ಲಿ ಹೇಳ್ಬೇಕೆಂದರೆ ಎಲ್ಲ ಗೆಳೆಯರು ಸೂರ್ಯೋದಯವನ್ನು ಆನಂದ ದಿಂದ ನೋಡಿ ಕಣ್ಣು ತುಂಬಿಕೊಂಡೆವು. ಪಟಗಳಂತು ನೂರಾರು ತೆಗೆದುಕೊಂಡೆವು.


ನಂತರ ಗುರುತ್ತಾಗಿದ್ದೇನೆಂದರೆ, ನಾವು ನಿಂತು ಸೂರ್ಯೋದಯ ನೋಡುತ್ತಿರುವ ಸ್ಥಳದಲ್ಲಿ ಮೂರು ಸಮುದ್ರಗಳು ಸೇರುತ್ತವೆ ಅನ್ನುವುದು. ಅವುಗಳಲ್ಲಿ ಒಡನೆಯದು ಅರಬ್ಬೀ ಸಮುದ್ರ, ಎರಡನೆಯದು ಹಿಂದೂ ಮಹಾಸಾಗರ, ಮುರನೆಯದು ಬಂಗಾಳ ಕೊಲ್ಲಿ ಸಮುದ್ರಗಳು. ಒಂದೇ ಸ್ಥಳದಲ್ಲಿದ್ದು ಮೂರು ಸಮುದ್ರಗಳ ನೀರಿನಿಂದ ಸ್ನಾನ ಮಾಡಿ ಖುಷಿ ಪಟ್ಟೆವು. ಆದರೆ ಮೂರು ಸಮುದ್ರಗಳ ನೀರು ಉಪ್ಪೆ.

                                  = ===

ತಿರುವನಂತಪುರಂ ಅನ್ನು ಈ ಹಿಂದೆ ತ್ರಿವೇಂಡ್ರಮ್ ಎಂದು ಕರೆಯಲಾಗುತ್ತಿತ್ತು, ಇದು 2024 ರ ಹೊತ್ತಿಗೆ 1.68m ಜನಸಂಖ್ಯೆಯನ್ನು ಹೊಂದಿರುವ ಕೇರಳದ 2 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಖ್ಯ ಭೂಭಾಗದ ದಕ್ಷಿಣಕ್ಕೆ ಸಮೀಪದಲ್ಲಿದೆ, ತಿರುವನಂತಪುರಂ ಕೇರಳದ ಪ್ರಮುಖ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದೆ ಮತ್ತು 2016 ರ ಹೊತ್ತಿಗೆ ರಾಜ್ಯದ ಸಾಫ್ಟ್‌ವೇರ್ ರಫ್ತುಗಳಲ್ಲಿ 55% ಕೊಡುಗೆ ನೀಡುತ್ತದೆ. ಈ ನಗರವನ್ನು  “ಭಾರತದ ನಿತ್ಯಹರಿದ್ವರ್ಣ ನಗರ” ಎಂದು ಮಹಾತ್ಮಾ ಗಾಂಧಿಯವರು ಉಲ್ಲೇಖಿಸಿದ್ದಾರೆ, ಈ ನಗರವು ತಗ್ಗು ಕರಾವಳಿ ಬೆಟ್ಟಗಳ ಅಲೆಅಲೆಯಾದ ಭೂಪ್ರದೇಶದಿಂದ ನಿರೂಪಿಸಲ್ಪಟ್ಟಿದೆ. ನೋಡಲು ಬಹಳ ಸುಂದರವಾದ ನಗರವಾಗಿದೆ.


ತಿರುವನಂತಪುರಂನಲ್ಲಿ ನನಗೆ ಆಕರ್ಷಣೆ ಮಾಡಿದ್ದೂ ಪದ್ಮನಾಭಸ್ವಾಮಿ ದೇವಾಲಯ. ಇದಕ್ಕೆ ಕಾರಣ ಈ ದೇವಾಲಯದಲ್ಲಿರುವ ಸಂಪತ್ತು. ಸುಮಾರು ವರ್ಷಗಳಿಂದ ಈ ದೇವಾಲಯದ ಕುರಿತು ಹಾಗೂ ಸಂಪತ್ತಿನ ಕುರಿತು ಮಾಧ್ಯಮಗಳ್ಳಲ್ಲಿ ಆಗಾಗ ಚರ್ಚೆ ನಡೆಯುತ್ತಲೆ ಇರುತ್ತದೆ. ಈ ದೇವಲಯದ ಐದು ಬಾಗಿಲುಗಳು ತೆರಿದಿದ್ದು ಬಹಳಷ್ಟು ಸಂಪತ್ತು ದೊರೆತಿರುತ್ತದೆ. ಈ ದೇವಾಲಯವು ಭಾರತದ ಅತ್ಯಂತ ದುಬಾರಿ ದೇವಾಲಯಗಳಲ್ಲಿ ಒಂದಾಗಿದೆ, ಅದರ ಚಿನ್ನ, ರತ್ನಗಳು ಮತ್ತು ಪ್ರತಿಮೆಗಳಿಗೆ ಅಂದಾಜು 1,00,000 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಕಾರ್ಯಕರ್ತರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ನಂತರ 2011 ರಲ್ಲಿ ಸುಪ್ರೀಂ ಕೋರ್ಟ್ ದೇವಾಲಯದ ಕಮಾನುಗಳನ್ನು ತೆರೆಯಲು ಆದೇಶಿಸಿತು.  ಭೂಗತ ಕಮಾನುಗಳ ಆವಿಷ್ಕಾರ, ವಿಶೇಷವಾಗಿ ವಾಲ್ಟ್ ಬಿ, ಶತಮಾನಗಳಿಂದ ಮೊಹರು ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ, ದೇವಾಲಯವು ಅಂತರರಾಷ್ಟ್ರೀಯ ಗಮನವನ್ನು ತಂದಿತು. ಆದರೆ ಇಂದಿಗೂ ಆರನೇ ಬಾಗಿಲು ತೆಗೆಯಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅನೇಕ.
ಹೀಗೆ ಬಹಳಷ್ಟು ವಿಷಯಗಳನ್ನು ಕೇಳಿದ ನನಗೆ ಈ ದೇವಾಲಯ ನೋಡಲೇ ಬೇಕಾಗಿತ್ತು, ಅದಕ್ಕಾಗಿ ನೋಡಲು ಹೋದಾಗ ಸಮಯ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಕೆರೆಯ ಪಕ್ಕದಲ್ಲಿ ಬಹಳ ಎತ್ತರವಾದ ದೇವಸ್ಥಾನ ನಿರ್ಮಿಸಿದ್ದಾರೆ. ಈ ದೇವಸ್ಥಾನದ ಇತಿಹಾಸವು ದಂತಕಥೆಗಳು, ಪುರಾಣಗಳು ಮತ್ತು ಸಾಂಸ್ಕೃತಿಕ ಮಹತ್ವದಿಂದ ಸಮೃದ್ಧವಾಗಿದೆ, ದೇವಾಲಯದ ಮೂಲವು ಪ್ರಾಚೀನ ಕಾಲದ ಹಿಂದಿನದು ಎಂದು ನಂಬಲಾಗಿದೆ ಮತ್ತು ಕೆಲವರು ಇದನ್ನು 5,000 ವರ್ಷಗಳ ಹಿಂದೆ ಕಲಿಯುಗದ ಮೊದಲ ದಿನದಂದು ಸ್ಥಾಪಿಸಲಾಯಿತು ಎಂದು ಹೇಳುತ್ತಾರೆ. ಈ ದೇವಾಲಯವನ್ನು ಚೇರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ, ಇದು ಕೇರಳ ಮತ್ತು ನೆರೆಯ ರಾಜ್ಯಗಳಿಗೆ ವಿಶಿಷ್ಟವಾಗಿದೆ. ದೇವಾಲಯದ ಮುಖ್ಯ ದೇವರು ವಿಷ್ಣು, ಅವರು “ಅನಂತ ಶಯನಂ” ಭಂಗಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ, ಇದು ಸರ್ಪ ಆದಿಶೇಷನ ಮೇಲೆ ಶಾಶ್ವತ ಯೋಗ ನಿದ್ರೆಯಾಗಿದೆ. ಈ ದೇವಾಲಯವನ್ನು ವಿವಿಧ ಆಡಳಿತಗಾರರು ಮತ್ತು ರಾಜವಂಶಗಳಿಂದ ಶತಮಾನಗಳಿಂದ ಹಲವಾರು ಬಾರಿ ನವೀಕರಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ.  ಪ್ರಸ್ತುತ ರಚನೆಯನ್ನು 18ನೇ ಶತಮಾನದಲ್ಲಿ ತಿರುವಾಂಕೂರ್ ರಾಜವಂಶದ ಆಳ್ವಿಕೆಯಲ್ಲಿ ಪುನರ್ನಿರ್ಮಿಸಲಾಯಿತು ಮತ್ತು ವಿಸ್ತರಿಸಲಾಯಿತು ಎಂದು ನಂಬಲಾಗಿದೆ. ಅನೇಕ ಸಾಂಪ್ರದಾಯಿಕ ಇತಿಹಾಸಕಾರರು ಮತ್ತು ವಿದ್ವಾಂಸರು ಈ ದೇವಾಲಯವನ್ನು “ಗೋಲ್ಡನ್ ಟೆಂಪಲ್” ಎಂದು ಅಭಿಪ್ರಾಯಪಟ್ಟಿದ್ದಾರೆ, ಆ ಸಮಯದಲ್ಲಿ (ಸಂಗಮ್ ಅವಧಿಯ ಆರಂಭದಲ್ಲಿ) ದೇವಾಲಯವು ಈಗಾಗಲೇ ಊಹಿಸಲಾಗದಷ್ಟು ಶ್ರೀಮಂತವಾಗಿತ್ತು. ಸಂಗಮ ತಮಿಳು ಸಾಹಿತ್ಯ ಮತ್ತು ಕಾವ್ಯದ ಅನೇಕ ತುಣುಕುಗಳು ಮತ್ತು 9 ನೇ ಶತಮಾನದ ತಮಿಳು ಕವಿ-ಸಂತರು ನಮ್ಮಾಳ್ವಾರ್ ನಂತಹ ನಂತರದ ಕೃತಿಗಳು ದೇವಾಲಯ ಮತ್ತು ನಗರವು ಶುದ್ಧ ಚಿನ್ನದ ಗೋಡೆಗಳನ್ನು ಹೊಂದಿದೆ ಎಂದು ಉಲ್ಲೇಖಿಸುತ್ತದೆ. ದೇವಾಲಯ ಮತ್ತು ಇಡೀ ನಗರ ಎರಡನ್ನೂ ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ದೇವಾಲಯವನ್ನು ಸ್ವರ್ಗವೆಂದು ಶ್ಲಾಘಿಸಲಾಗುತ್ತದೆ.
ಇಷ್ಟೊಂದು ವೈಶಿಷ್ಟತೆ ಹೊಂದಿರುವ ದೇವಾಲಯದ ಒಳಗಡೆ ಹೋಗಿ ನೋಡಲು ಸಾಯಂಕಾಲ ಐದು ಗಂಟೆ ನಂತರವೇ ಅವಕಾಶ ಕೊಟ್ಟಿರುವುದರಿಂದ ದೇವಾಲಯದ ಹೊರಗಡೆಯಿಂದಲೇ ಮರಳಿ ಬರಬೇಕಾಯಿತು. ಅಷ್ಟಕ್ಕೂ ಇಲ್ಲಿಯೇ ನಿಲ್ಲದೆ ಮತ್ತೆ ಮುಂದಿನ ಪ್ರವಾಸಕ್ಕೆ ಹೊರಟೆವು.

=======

ಮೊದಲಿನಿಂದಲೂ ಸೂಫಿಗಳ ಇತಿಹಾಸ ಹಾಗೂ ಅವರ ಪವಾಡಗಳ ಕುರಿತು ಕೇಳುತ್ತ ಬಂದಿರುವ ನಾನು, ನಮ್ಮೂರಲ್ಲಿಯ ಕುತಾಬ್ ಅಲ್-ಅಕ್ತಾಬ್ ಖ್ವಾಜಾ ಸಯ್ಯಿದ್ ಮುಹಮ್ಮದ್ ಭಕ್ತಿಯಾರ್ ಅಲ್-ಹೂಸೈನಿ, ಕುತ್ಬ್ ಅಲ್-ದಿನ್ ಭಕ್ತಿಯಾರ್ ಕಾಕಿ (ಖಾಜಾ ಖುತಬೊದ್ದಿನ)ರ ಛಿಲ್ಲಾ (ದರ್ಗಾ) ಊರುಸ್ ಕಾರ್ಯಕ್ರಮದಲ್ಲಿ ಒಂಬತ್ತನೇ ತರಗತಿಯಲ್ಲಿರುವಾಗ ನಾಟಕದಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡಿದಲ್ಲದೆ ‘ಬೀದರ್ ಜಿಲ್ಲೆಯ ಸೂಫಿಗಳು’ ಎನ್ನುವ ಸುಮಾರು ಎರಡನೂರ ಹದಿಮೂರು ಸೂಫಿಗಳ ಪರಿಚಯ ನಿಮಗೆಲ್ಲರಿಗೂ ಮುಟ್ಟಿಸಲು ಪ್ರಯತ್ನಿಸಿದ್ದೇನೆ.

ಸೂಫಿ ಬೆಳೆದು ಬಂದ ಬಗೆಯನ್ನು ಕರ್ನಲ್ ಕ್ಲಾರ್ಕ ಸೂಫಿ ಪದ್ಯವೊಂದರಿಂದಲೇ ಈ ಕೆಳಗಿಂನಂತೆ ಉದಾಹರಿಸುತ್ತಾರೆ.
ಸೂಫೀತ್ವದ ಬೀಜ, ಬಿತ್ತಿದ್ದು ಆದಮನ ಕಾಲದಲ್ಲಿ, ಮೊಳೆತದ್ದು ನೋಹಾನ್ ಸಮಯದಲ್ಲಿ,
ಮೋಗ್ಗಾದದ್ದು ಅಬ್ರಾಹಂನ್ ಕಾಲದಲ್ಲಿ,
ವಿಸ್ತರಿಸತೊಡಗಿದ್ದು ಮೋಸಸ್‌ನ ಸಮಯದಲ್ಲಿ, ಪಕ್ವತೆಯನ್ನು ಪಡೆದುದ್ದು ಏಸುವಿನ ಕಾಲದಲ್ಲಿ,
ಶುದ್ಧವಾದ ಮದಿರೆಯನ್ನು ತಯಾರಿಸಿದ್ದು, ಮಹಮ್ಮದರ ಕಾಲದಲ್ಲಿ.

ಅಂದರೆ ಸೂಫಿ ತತ್ವಗಳು ಒಮ್ಮೆಲ್ಲೆ ಧುತ್ತೆಂದು ಒಂದು ಸಮಯದಲ್ಲಿ ಬಂದದ್ದಲ್ಲ. ನಿಧಾನವಾಗಿ, ಏಕಸೂತ್ರವಾಗಿ, ನೂರಾರು ವರ್ಷಗಳಲ್ಲಿ ಜ್ಞಾನಿಗಳ ಚಿಂತನೆಯ ಮೂಸೆಯಲ್ಲಿ ಕುದಿದು ರಸಪಾಕವಾಗಿ ಬಂದದ್ದು. ಸಾಮಾನ್ಯವಾಗಿ ಇಸ್ಲಾಮನ್ನು ಸೂಫಿ ಪಂಥದ ಕವಚ ಎಂದು ಕರೆಯುತ್ತಾರೆ.

ಹೌದು ಸೂಫಿಗಳ್ಳಲಿರುವ ಅಧ್ಯತ್ಮದ ಜ್ಞಾನವೇ ಜನರ ಮನ ಮುಟ್ಟಿದ್ದು. ನಮ್ಮೂರಲ್ಲಿರುವುದು ಛೀಲಾ, ಆದರೆ ಅಮ್ಮೋರಿನವರು ಅದನ್ನು ದರ್ಗಾ ಅಂತಲೇ ಕರೆದು ಹರಕೆ ಹೊರುತ್ತಾರೆ. ಪಾಪ ನಮ್ಮ ಕಡೆಯ ಇತ್ತೀಚಿನ ಯುವ ಪೀಳಿಗೆಗೆ ದರ್ಗಾ ಮತ್ತು ಛೀಲ್ಲಾದ ನಡುವೆ ಇರುವ ಅಂತರವೇ ಗುರುತಿಲ್ಲ. ದರ್ಗಾ ಅಂದರೆ ಅಲ್ಲಿ ಆ ಸೂಫಿಯ ಸಮಾಧಿ ಇರಬೇಕು. ಛೀಲಾ ಅಂದರೆ ಆ ಸೂಫಿ ಆ ಜಾಗದಲ್ಲಿ ಸುಮಾರು ನಲ್ವತ್ತು ದಿವಸ ಪ್ರಾರ್ಥನೆ ಮಾಡಿದ್ದಿರ್ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ದರ್ಗಾದ ಸ್ಥಳದಿಂದ ಏನಾದರು ಒಂದು ವಸ್ತು ತಂದು ಅಲ್ಲಿ ಒಂದು ಛೀಲಾ ಕಟ್ಟಿಸಿ ಹರಕೆ ಹೊರುವ ಪದ್ಧತಿ ನಮ್ಮ ಹೈದ್ರಾಬಾದ್ ಕರ್ನಾಟಕ್ ಕಡೆ ಹೆಚ್ಚೆ ಕಾಣುತ್ತೇವೆ. ಇದಕ್ಕೆ ಉತ್ತಮ ಉದಾ: ಮಹೇಬುಬ್ ಸುಭಾನಿ ದರ್ಗಾಗಳು. ಬಹುಷಃ ಹೆಚ್ಚು ಕಮ್ಮಿ ಹೈದ್ರಾಬಾದ್ ಕರ್ನಾಟಕ ಪ್ರತಿಯೊಂದು ಊರಲ್ಲಿ ಈ ದರ್ಗಾ ಇದೆ. ಆದರೆ ಮಹೇಬುಬ್ ಸುಭಾನಿ ರವರು ಈ ಕಡೆ ಬರಲೇ ಇಲ್ಲ. ಹಾಗಾದ್ರೆ ದರ್ಗಾಗಳು ಹೇಗೆ ಕಟ್ಟಲ್ಪಟ್ಟವು ಅನ್ನುವ ಪ್ರಶ್ನೆಗೆ ಈ ಮೇಲಿನ ವಿಷಯವೇ ಉತ್ತರ. ಅದರಂತೆ ಕುತಾಬ್ ಅಲ್-ಅಕ್ತಾಬ್ ಖ್ವಾಜಾ ಸಯ್ಯಿದ್ ಮುಹಮ್ಮದ್ ಭಕ್ತಿಯಾರ್ ಅಲ್-ಹೂಸೈನಿ, ಕುತ್ಬ್ ಅಲ್-ದಿನ್ ಭಕ್ತಿಯಾರ್ ಕಾಕಿ (ಜನನ 1173 – 1235 ರಲ್ಲಿ)  ಜನನ ದೆಹಲಿ, ಅವರು ಚಿಶ್ತಿ ಆದೇಶದ ಮುಖ್ಯಸ್ಥರಾಗಿ ಮುಯಿನ್ ಅಲ್-ದಿನ್ ಚಿಶ್ತಿಯ ಶಿಷ್ಯ ಮತ್ತು ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದರು. ಆತನಿಗೆ ಮೊದಲು ಭಾರತದಲ್ಲಿ ಚಿಶ್ತಿ ಕ್ರಮವು ಅಜ್ಮೀರ್ ಮತ್ತು ನಾಗೌರ್‌ಗೆ ಸೀಮಿತವಾಗಿತ್ತು. ದೆಹಲಿಯಲ್ಲಿ ಸುಭದ್ರವಾಗಿ ಆದೇಶವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಮೆಹ್ರೌಲಿಯಲ್ಲಿರುವ ಜಾಫರ್ ಮಹಲ್‌ನ ಪಕ್ಕದಲ್ಲಿರುವ ಅವರ ದರ್ಗಾ ಮತ್ತು ದೆಹಲಿಯ ಅತ್ಯಂತ ಹಳೆಯ ದರ್ಗಾಗಳ್ಳಲಿ ಒಂದಾಗಿದೆ. ಆದರೆ ಇವರ ಛಿಲ್ಲಾಗಳು ಹೈದರಾಬಾದ್ ಕರ್ನಾಟಕದ ಬಹಳಷ್ಟು ಗ್ರಾಮಗಳಲ್ಲಿವೆ, ಅವುಗಳ್ಳಲ್ಲಿ ಅಮ್ಮರಲ್ಲಿರುವುದು ಒಂದು.

ಸೂಫಿಸಂನ್ನು ಮೂರು ಘಟ್ಟಗಳಲ್ಲಿ ನೋಡಬಹುದು. ಮೊದಲ ಘಟ್ಟದಲ್ಲಿ ಆದಿಮ್ ಸೂಫಿಗಳು ಅಲೆಮಾರಿಗಳು, ತಾಪಸ ಬದುಕನ್ನು ಬದುಕುತ್ತಿದ್ದರು. ಇವರನ್ನು ಹಜರತ್ ಮಹಮ್ಮದ ಪೈಗಂಬರ್ ರವರ ಶಿಷ್ಯರಿಂದ ಪ್ರಾರಂಭವಾಗುತ್ತದೆ. ಇವರ ಶಿಷ್ಯರು ತಂಡೋಪ ತಂಡವಾಗಿ ಭಾರತ್ತಕೆ ಬರಲು ಪ್ರಾರಂಭಿಸಿದರು. ಅನುಭಾವಿಯಾದ ಇವರು ಪವಾಡ ಪುರುಷ, ದೈವಭಕ್ತಿ ಪ್ರದರ್ಶಿಸಿ ಭಾರತದ ನಾನಾ ಕಡೆಯಿಂದ ಭಕ್ತರು ಸೆಳೆದರು. ನಾನಾ ಸಂತರು ಇವರ ಉಪದೇಶಗಳನ್ನು ಕೇಳಲು ಬರತೊಡಗಿದರು. ಅನೇಕ ಸೂಫಿಗಳೊಂದಿಗೆ ಅವರ ಪತ್ನಿ, ಮಕ್ಕಳು ಸೇರಿದಂತೆ ಮಹಿಳಾ ಸೂಫಿಗಳು ಬರತೋಡಗಿದರು.

 

ನಾನೇಕೆ ಇಲ್ಲಿ ದರ್ಗಾ ಮತ್ತು ಸೂಫಿಗಳ ಕುರಿತು ಹೇಳ್ಳೂತ್ತಿದ್ದೇನೆಂದು ನಿಮ್ಮ ಮನದಲ್ಲಿ ಪ್ರಶ್ನೆ ಎದ್ದಿರಬಹುದು. ಹೌದು ನಿಮ್ಮ ಪ್ರಶ್ನೆಗೆ ಮೊದಲು ಉತ್ತರ ಕೊಡುತ್ತೇನೆ. ಕೇರಳ ರಾಜ್ಯದ ರಾಜಧಾನಿ ತ್ರಿವಂತಪುರಂ ದಿಂದ ಕೇವಲ ಹನ್ನೆರಡು ಕಿಲೋ ಮೀಟರ್ ಅಂತರದಲ್ಲಿರುವ ಬೀಮಾಪಲ್ಲಿ ಗ್ರಾಮದಲ್ಲಿ ಒಂದು ಐತಿಹಾಸಿಕ ದರ್ಗಾ ನೋಡೊಣವೆಂದು ಗೆಳೆಯರು ಹೆಳಿದ್ದರಿಂದ ಭೀಮಪಲ್ಲಿ ಗ್ರಾಮಕ್ಕೆ ಹೊರಟೆವು. ಗ್ರಾಮ ತಲುಪಿದಂತೆ ಊರೆಲ್ಲ ಗುಲಾಬಿ ಬಣ್ಣದ ದೊಡ್ಡದಾದ ಕಾಂಪೌಂಡ ಗೋಡೆ ಹಾಗೂ ಬಹಳಷ್ಟು ಮನೆಗಳು ಸಹ ಗುಲಾಬಿ ಬಣ್ಣದು, ಕಾಂಪೌಂಡ ಮಧ್ಯದಲ್ಲಿ ಗುಲಾಬಿ ಬಣ್ಣದ ಬ್ರಹತ್ ಕಟ್ಟಡ ಕಂಡುಬಂತು. ಅದಕ್ಕೆ ದೊಡ್ಡದಾದ ಮಿನಾರಗಳು, ದೊಡ್ಡ ಗುಮ್ಮಟ್ ಇಸ್ಲಾಮಿಯ ಶೈಲಿಯ ಕಟ್ಟಡವದು. ಗೊಮ್ಮಟ್ ಒಳಗೆ ಹೋದಂತೆ ಒಂದು ಗೋರಿ ಇದ್ದು, ಅದಕ್ಕೆ ಪರ್ದಾ ಕಟ್ಟಲಾಗಿತ್ತು. ಸ್ವಭಾವಿಕವಾಗಿ ಎಲ್ಲರಿಗೂ ದರ್ಶನಕ್ಕೆ ಖುಲ್ಲ ಇರುವ ಗೊರಿಗಳನ್ನು ಕಂಡಿದ್ದ ನನಗೆ, ಇದು ವಿಚಿತ್ರ ಅನಿಸಿತು.

ಆಮೇಲೆ ಗುರುತಾಯಿತು ಈ ಗೋರಿ ಒಬ್ಬ ಮಹಿಳಾ ಸೂಫಿಯದ್ದು, ಹಾಗಂತ ಇದು ಶಾಶ್ವತವಾಗಿ ಹಾಕಿದ್ ಪರದೆ ಆಲ್ಲ, ಹರಕೆ ಹೋತ್ತೋಕೊಂಡು ಬಂದಾಗ ಅವರಿಂದ ಕಾಣಿಕೆ ಪಡೆದು ದರ್ಶನ್ ಮಾಡಿಸುತ್ತಿದ್ದರು. ಬೇರೆಯವರು ಹಣ ಕೊಟ್ಟಾಗ್ ಪರ್ದಾ ಸರಿಸಿದ್ದಾಗ ಕೊಡಲೇ ನಾನು ಹತ್ತಿರ ಹೋಗಿ ಈ ಗೋರಿ ನೋಡ್ದೆ. ಮಹಿಳಾ ಸೂಫಿಯ ಹೆಸರು ಸೈದುನ್ನಿಸಾ ಬೀ ಮಾ ಎಂದು. ಬಹುಷಃ ಮಹಿಳಾ ಸೂಫಿಯಾಗಿರುವುದರಿಂದ ಮಹಿಳೆಯ ಅಚ್ಚುಮೆಚ್ಚಿನ ಬಣ್ಣ ಗುಲಾಬಿ ಇರುವುದರಿಂದ ಈ ದರ್ಗಾದ ಗೋಡೆಗಳಿಗೆ ಗುಲಾಬಿ ಬಣ್ಣ ಹಚ್ಚಿರಬಹುದು. ಈ ಎಲ್ಲ ವಿಶೇಷತೆ ನೋಡಿದ ನಾನು ಈ ಮಹಿಳಾ ಸೂಫಿಯ ಕುರಿತು ತಿಳಿದುಕೊಳ್ಳಲು ಮುಂದಾದೆ. ಈ ಗ್ರಾಮವು ಸಹ ಈ ಮಹಿಳಾ ಸೂಫಿಯ ಹೆಸರಿನಲ್ಲಿದೆ. ಸೈದುನ್ನಿಸಾ ಬಿ ಮಾ ಹೆಸರಿನಲ್ಲಿ ಕಡೆಯ ಎರಡು ಅಕ್ಷರಗಳಾದ ‘ಬಿ ಮಾ’ ಶಬ್ದಗಳಿಗೆ ‘ಪಲ್ಲಿ’ ಸೇರಿಸಿದಾರೆ. ಪಲ್ಲಿ ಅಂದರೆ ತಮಿಳಿನಲ್ಲಿ ಮಸೀದಿ ಎಂಬ ಅರ್ಥವಿದೆ. ಹೀಗೆ ಬಿ-ಮಾ-ಪಲ್ಲಿ ‘ಬಿಮಾಪಲ್ಲಿ’ ಎಂದು ಹೆಸರಿಟ್ಟಿದಾರೆ. ಒಬ್ಬ ಮಹಿಳಾ ಸೂಫಿಯ ಹೆಸರಿನಲ್ಲಿ ಒಂದು ಗ್ರಾಮ ಇರುವುದು ಬಹುಷಃ ಭಾರತ ದೇಶದಲ್ಲಿ ಇದೊಂದೆ ಅಂದರು ತಪ್ಪಾಗಲಾರದು.

ಭಾರತದ ನೆಲದಲ್ಲಿ ಸೂಫಿ ಪಂಥ ನೆಲೆಯೂರಿದ ಕಾಲದಲ್ಲಿ ಪುರುಷ ಸೂಫಿ ಸಂತರ ಜೊತೆಗೆ ಮಹಿಳಾ ಸೂಫಿ ಸಂತರು ಕೂಡ ಅಷ್ಟೆ ಪ್ರಭಾವಿ ಸಾಧಕರಾಗಿದ್ದರು. ಪವಿತ್ರ ಖುರಾನಿನ ಅಲ್-ಅಹಜಾಬ್ ಅಧ್ಯಾಯದಲ್ಲಿನ 35 ನೇ ವಾಕ್ಯದಲ್ಲಿ ದೇವರ ಅಧ್ಯಾತ್ಮಿಕ ಆಶೀರ್ವಾದಗಳು ಪುರುಷರ ಮೇಲೂ ಮಹಿಳೆಯರ ಮೇಲೂ ಸಮನಾಗಿರುತ್ತವೆಂದು ಹೇಳಲಾಗುವಂತೆ ಮಹಿಳಾ ಸೂಫಿಗಳು ಭಾರತದಲ್ಲಿ ಗೌರವಯುತವಾಗಿ ಅಧ್ಯಾತ್ಮ ಸಾಧನೆಗಳನ್ನು ಮಾಡಿದರು. ಭಾರತದುದ್ದಕ್ಕೂ ನೂರಾರು ಮಹಿಳಾ ಸೂಫಿ ಸಂತರು ಕಂಡು ಬರುತ್ತಾರೆ. ಅಜ್ಮೆರಿನ ಗ್ವಾಜಾ ಮೊಯಿನೋದ್ದಿನ ಚಿಸ್ತಿಯವರ ಮಗಳು ಬೇಗಮ್ ಹಫೀಜ್ ಜಮಾಲ್ (ಗ್ವಾಜಾ ರವರ ದರ್ಗಾದ ದಕ್ಷಿಣ ಭಾಗದಲ್ಲಿ ಇವರ ಮಝಾರ ಇದೆ.) ಬೆಂಗಳೂರಿನ ಹಜ್ರತ ಅಮೀನಾಬೀಬೀ , ದಾದಿ ಮಾ ಸಾಹೇಬಾ, ಮಸ್ತಾನಬಿಬಿ, ಸೈದಾನಿ ಬೀಬಿ, ಮಂಡ್ಯಾದ ಸೈಯಿದಾ ಅಮ್ಮಾಜಾನ, ದೇಹಲಿಯ ಬೀಬಿ ಫಾತಿಮಾ, ಮಂಗಳೂರಿನ ಸೈದಾನಿ ಬೀಬಿ, ಹೈದ್ರಾಬಾದಿನ ಪಹಾಡಿ ಷರೀಫ್ ದರ್ಗಾದ ಫಿಖೀಕಿ ಬೀಬಿ, ಬೀದರಿನ ಹಜರತ್ ಬೀಬೀ ಬಂದಗಿ ಹುಸೈನಿ, ಹಜರತ್ ಮುಕ್ಕಾ ಬೀ, ಶಾರಮ ಬೀಬಿ ಹೀಗೆ ಹಲವಾರು ಮಹಿಳಾ ಸೂಫಿ ಸಂತರು ಭಾರತ ಉದ್ದಗಲಕ್ಕೂ ಕಂಡು ಬರುತ್ತಾರೆ. ಇವರು ತಮ್ಮ ಕುಟುಂಬದ ಹಿನ್ನಲೆಯಿಂದ, ತಮ್ಮ ಪತಿಯಿಂದ, ಸಹೋದರರ, ಹೆತ್ತವರ ಹಿನ್ನಲೆಯಿಂದ ಮಾತ್ರ ಸೂಫಿ ಪಂಥಕ್ಕೆ ಕಾಲಿಟ್ಟವರಾಗಿರದೆ ತಮ್ಮ ಸ್ವಂತ ಪ್ರತಿಭೆಯಿಂದಲೂ ಸೂಫಿ ಅಧ್ಯಾತ್ಮದಲ್ಲಿ ಸಾಧನೆಗಳನ್ನು ಮಾಡಿದ್ದಾರೆ.

ದೊಡ್ಡ ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದರೆಂದು ನಂಬಲಾದ ಧಾರ್ಮಿಕ ಮುಸ್ಲಿಂ ಸೈದುನ್ನಿಸಾ ಬೀಮಾ ರವರು, ಈ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಗುಣಪಡಿಸಲು ಬಳಸುತ್ತಿದ್ದ ಅದ್ಭುತ ಶಕ್ತಿಯನ್ನು ಹೊಂದಿದ್ದರು ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ ಸೈದುನ್ನಿಸಾ ಬೀಮಾ ಬೀವಿ ಮತ್ತು ಅವರ ಮಗ ಸೈದು ಶುಹದಾ ಮಾಹೀನ್ ಅಬೂಬಕರ್ ಇಸ್ಲಾಂ ಧರ್ಮದ ಬೋಧನೆಗಳನ್ನು ಹರಡಲು ಅರೇಬಿಯಾದಿಂದ ಭಾರತಕ್ಕೆ ಬಂದರೆಂದು ನಂಬಲಾಗಿದೆ. ಈ ದರ್ಗಕ್ಕೆ ಹತ್ತಿಕೊಂಡು ಅಷ್ಟೇ ದೊಡ್ಡದಾದ ಮಸೀದಿ ಕಟ್ಟಿದ್ದು, ಅದಕ್ಕೂ ಸಹ ಗುಲಾಬಿ ಬಣ್ಣ ಹಚ್ಚಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರವಾಸದಲ್ಲಿ ಮಹಿಳಾ ಸೂಫಿಯ ದರ್ಗಾ ನೋಡ್ದಿದು ಒಂದು ಐತಿಹಾಸಿಕ್ ಕ್ಷಣ….
ಗೆಳೆಯರೆಲ್ಲರೂ ಸೇರಿ ಒಂದು ಪಟ ತೆಗೆದುಕೊಂಡೇವು.
ಮುಂದಿನ ವಿಷಯಗಳು ಮುಂದಿನ ಸಂಚಿಕೆಯಲ್ಲಿ….

ಶಕೀಲ್ ಐ.ಎಸ್. ಹುಮ್ನಾಬಾದ್ .

ಲೇಖಕರ ಪರಿಚಯ.       ‌

ಶಕೀಲ್ ಐ.ಎಸ್.

ಸಾಹಿತಿ  ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ
ಹುಮನಾಬಾದ ತಾಲೂಕಿನ ಖೇಣಿ ರಂಗೋಳ ಗ್ರಾಮದವರು. ಬಿ.ಎ. ಪದವಿಧರರಾದ ಇವರು ಪೋಲಿಸ್ ಇಲಾಖೆಯಲ್ಲಿದ್ದು ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಅಭಿವೃದ್ಧಿ ಪಥ’, ‘ಕರ್ನಾಟಕ ಇತಿಹಾಸ, ‘ಹುಮನಾಬಾದ ತಾಲೂಕು ಇತಿಹಾಸ’ ( ಲೇಖನ) ‘ಮೂರು ನಾಟಕಗಳು‘ (ನಾಟಕ) ‘ಭ್ರಷ್ಟಾಚಾರ ದೇಹಕ್ಕೂ ಮಾರಕ’ (ರೂಪಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ‘ಬೀದರ ಜಿಲ್ಲೆಯ ಸೂಫಿಗಳು‘ ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. ‘ನಳದಮಯಂತಿ’ ಇದು ಪೌರಾಣಿಕ ಕತೆಯಾದರೆ, ‘ಗರ್ಭಕೋಶದಲ್ಲಿ ಮಹಾಯುದ್ಧ‘ (ಕಥಾಸಂಕಲನ) ‘ಧರಿನಾಡಿನ ಗಂಡುಗಲಿ (ವ್ಯಕ್ತಿಚಿರ್ತಣ) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ