Oplus_131072

ಕೇರಳ ರಾಜ್ಯದ ಮುಂದಿನ ಪ್ರವಾಸ ಮಲಬಾರ ಪ್ರಾಂತದ ಕೊಚ್ಚಿ :

(ಹಿಂದಿನ ಸಂಚಿಕೆಯಿಂದ.)

ಅಧ್ಯಾಯ- 3.

ನಮ್ಮ ಪ್ರವಾಸದ ಕೊನೆಯ ದಿನವಿದು ಏಕೆಂದರೆ ನಾಳೆ ಮುಂಜಾನೆ ಎಂಟು ಗಂಟೆಗೆ ಯರನಾಕುಲಂ ದಿಂದ ಉಗಿಬಂಡಿ ಹತ್ತಿಕೊಂಡು ನಮ್ಮೂರಿಗೆ ಹೋಗುವುದಕ್ಕಾಗಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಎಲ್ಲರೂ ಕೊಚ್ಚಿಯಲ್ಲಿರುವ ಬಂದರು ಮತ್ತು ಕಡಲತೀರಗಳು ನೋಡಲು ಕೋಡಂಗಳೂರು ದಿಂದ ಹೊರಟೆವು. ಆ ಸಮಯದಲ್ಲಿ ಗೆಳೆಯ ಮೊಹಮ್ಮದ್ ಜಹೀರ್ ಕೇಳಿದ, ಮೈಸೂರ್ ಟಿಪ್ಪು ಸುಲ್ತಾನರು ಈಗಿನ ಕೇರಳ ರಾಜ್ಯದ ಮಲಬಾರ ಪ್ರದೇಶಗಳ ವರೆಗೆ ಆಳ್ವಿಕೆ ಮಾಡಿ, ಅವರ ಆಳ್ವಿಕೆ ಕಾಲಕ್ಕೆ ಆ ಪ್ರದೇಶದಲ್ಲಿರುವ ದೇವಸ್ಥಾಗಳಿಗೆ ದಾನ ನೀಡಿರುವುದನ್ನು ಅಲಲ್ಲಿ ಕೇಳಿರುತ್ತೇನೆ. ಆ ದೇವಾಲಯಗಳನ್ನು ನೋಡಬೇಕಾಗಿತ್ತು. ಆದರೆ ಸಮಯದ ಅಭಾವದಿಂದ ಹೋಗಲು ಆಗುತ್ತಿಲ್ಲ . ಹೇಗೆ ಮಾಡುವುದು? ದಯಮಾಡಿ ಆ ದೇವಾಲಯಗಳು ಯಾವ್ಯಾವು? ಆ ದೇವಾಲಯಗಳಿಗೆ ನೀಡಿದ ದಾನದ ಇತಿಹಾಸವಾದರೂ ತಿಳಿಸಿ  ಎಂದಾಗ, ನಾನು ಬರೆದಿರುವ ‘ಡೆಕ್ಕನ್ ಮುಸ್ಲಿಂ ಪ್ರಭುತ್ವದಲ್ಲಿ ಸೌಹಾರ್ದತೆ’ ಕೃತಿ ಬರೆಯುವಾಗ ಈ ವಿಷಯಗಳ ಕುರಿತು ಆಳವಾಗಿ ಅಧ್ಯಯನ್ ಮಾಡಿರುವ ನಾನು, ಆಯ್ತು ಎಂದು ಟಿಪ್ಪು ಸುಲ್ತಾನ್ ಕೇರಳ ರಾಜ್ಯದ ಮಲಬಾರ್ ಪ್ರಾಂತಗಳ ಮೇಲೆ ಆಳ್ವಿಕೆ ಮಾಡುವ ಕಾಲಕ್ಕೆ ದೇವಾಲಯಗಳಿಗೆ ದಾನ ನೀಡಿರುವ ಇತಿಹಾಸವನ್ನು ಹೇಳಲು ಪ್ರಾರಂಭಿಸಿದೆ.

ಇಂದಿನ ಕೇರಳ ರಾಜ್ಯಕ್ಕೊಳಪಟ್ಟ ಮಲಬಾರ್ ಪ್ರದೇಶವು ಅಂದಿನ ಮೈಸೂರು ಸಂಸ್ಥಾನದ ಭಾಗವಾಗಿತ್ತು. ಈ ಭಾಗದಲ್ಲಿ ಟಿಪ್ಪು ನೀಡಿರುವ ಕೆಲವು ದಾನಗಳೆಂದರೆ,
1. ಅರ್ನಾಡು ತಾಲೂಕಿನ ಚೇಲಾಂಬರ ಅಮಸೋಮಿನ ಪೂಣ್ಣೂರು ದೇವಾಲಯಕ್ಕೆ 70.42 ಎಕರೆಗಳ ಗದ್ದೆ ಮತ್ತು 3.29 ಎಕರೆ ತೋಟವನ್ನು ಟಿಪ್ಪು ದಾನ ರೂಪದಲ್ಲಿ ನೀಡಿದ್ದನು. 2. ಪೊನ್ನಾನಿ ತಾಲೂಕಿನ ಪೈಲತ್ತೂರು ಅಮಸೋಮಿನ ತಿರುವಂಚಿಕುಳದ ಶಿವದೇವಾಲಯಕ್ಕೆ 208.82 ಎಕರೆ ಜಮೀನು ಮತ್ತು 3.29 ಎಕರೆ ತೋಟವನ್ನು ಟಿಪ್ಪು ದಾನ ರೂಪದಲ್ಲಿ ನೀಡಿದ್ದನು. 3. ಪೊನ್ನಾನಿನ ತಾಲ್ಲೂಕು ಉರುವಾಯೂರು ಅಮಸೋಮಿನ ಗುರುವಾಯೂರು ದೇವಾಲಯಕ್ಕೆ 46.02 ಎಕರೆ ಗದ್ದೆ ಮತ್ತು 458.32 ಎಕರೆ ತೋಟದ ಭೂಮಿಯನ್ನು ದಾನ ನೀಡಿದ್ದನು. 4. ಕಲ್ಲಿಕೋಟೆ ತಾಲೂಕಿನ ಕಸಬಾ ಅಮಸೋಮಿನ ತ್ರಿಕ್ಕಂಡಿಯೂರು ವೆಟ್ಟಕ್ಕೋರು ಮಂಕವು ದೇವಾಲಯಕ್ಕೆ 122.70 ಎಕರೆಗಳಷ್ಟು ಗದ್ದೆ ಮತ್ತು 73.36 ಎಕರೆ ತೋಟವನ್ನು ಟಿಪ್ಪು ದಾನ ನೀಡಿದ್ದನು. 5. ಪೊನ್ನಾನಿ ತಾಲೂಕಿನ ಕಡಿಕಾಡು ಅಮಸೋಮಿನ ಕಟ್ಟು ಮಡತ್ತಿಲ್ ಶ್ರೀ ಕುಮಾರನ್ ನಂಬೂದಿರಿಪ್ಪಾಡ್ಗೆ 27.97 ಎಕರೆ ಗದ್ದೆ ಮತ್ತು 6.91 ಎಕರೆ ತೋಟದ ಭೂಮಿಯನ್ನು ಟಿಪ್ಪು ದಾನ ನೀಡಿದ್ದರು. 6. ಪೊನ್ನಾನಿ ತಾಲೂಕಿನ ತ್ರಿಕ್ಕಂಡಿಯೂರು ಅಮಸೋಮಿನ ತ್ರಿಕ್ಕಂಡಿಯೂರು ಸಮೂಹಂ ದೇವಸ್ಥಾನಕ್ಕೆ 20.63 ಎಕರೆ ಗದ್ದೆ ಮತ್ತು 0.41 ಎಕರೆ ತೋಟದ ಭೂಮಿಯನ್ನು ದಾನ ನೀಡಿದ್ದನು. 7.ತಿರುಚೂರಿನ ನಡುವಿಲ್ ಮಡತ್ತಿಲ್ ತಿರುಮುಂಬುಗೆ 40.26 ಎಕರೆ ಜಮೀನು 2.13 ಎಕರೆ ತೋಟ ಮತ್ತು 4.17 ಎಕರೆ ಹೊಲವನ್ನು ಟಿಪ್ಪು ದಾನ ನಿಡಿದ್ದನು. ಈ ದೇವಸ್ಥಾನಗಳಿಗೆ ದಾನ ನೀಡಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿವೆ. ಟಿಪ್ಪು ಸುಲ್ತಾನರು ತನ್ನ ಹಿಂದೂ ಪ್ರಜೆಗಳ ಧಾರ್ಮಿಕ ಆಚರಣೆಗಳನ್ನು ಯಾವ ರೀತಿಯಲ್ಲಿ ಗೌರವಿಸುತ್ತಿದ್ದರು, ಹಿಂದೂಗಳೊಂದಿಗೆ ಎಂತಹ ಸೌಹಾರ್ದಯುತ ಸಂಬಂಧ ಹೊಂದಿದ್ದರು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಟಿಪ್ಪು ಎಂತಹ ಗೌರವ ಭಾವನೆಯಿತ್ತೇ
ನ್ನುವುದು ತಿಳಿದುಕೊಳ್ಳಲು ಇದಕ್ಕಿಂತ ಮಿಗಿಲಾಗಿ ಪುರಾವೆಗಳ ಅಗತ್ಯ ಬೀಳದು ಗೆಳೆಯ ಎಂದು ಹೇಳಿದಾಗ ನಾವು ಈಗ ಇದ್ದಿರುವ ಈ ಪ್ರದೇಶವನ್ನು ನಾವು ಕರ್ನಾಟಕದವರು ಈ ಮುಂಚೆ ಆಳ್ವಿಕೆ ಮಾಡಿದವರೆಂದು ತಿಳಿದುಕೊಂಡ ಮೇಲೆ ನಮ್ಮ ಕರ್ನಾಟಕದ ಬಗ್ಗೆ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಇನ್ನಷ್ಟು ಹೆಮ್ಮೆ ಅನಿಸುತ್ತಿದೆ ಎಂದನು.

ನಂತರ ಅಲ್ತಾಫ್ ಹುಸೈನ್, ಈ ಮಲಬಾರ್ ಪ್ರಾಂತದಲ್ಲಿ ಮಹಿಳೆಯರು ತಮ್ಮ ಸೊಂಟದ ಮೇಲೆ ಬಟ್ಟೆ ಉಟ್ಟುಕೊಳ್ಳುವಂತಿಲ್ಲ ಉಟ್ಟುಕೊಂಡರೆ ತೆರಿಗೆ ನೀಡಬೇಕಾಗಿತ್ತಂತೆ ಈ ಇತಿಹಾಸ ನಿಮಗೇನಾದ್ರು ಗುರುತೆ ಎಂದು ಕೇಳಿದ, ಆಗ ಹೌದು ಆ ಅಮನುಷ್ ಪದ್ಧತಿ ಈ ಮಲಬಾರ ಪ್ರಂತದಲ್ಲಿ ಜಾರಿಯಲಿತ್ತು, ಈ ಹಿಂದೆ ನಂಬುದರಿ ಜಾತಿಯ ತಿರುವಾಂಕೂರಿನ ಅರಸರು ಕೇರಳದಲ್ಲಿ ‘ಮುಲಕ್ಕರ’ (ಸ್ತನ ತೆರಿಗೆ) ಎಂಬ ಅಮಾನವೀಯ ತೆರಿಗೆ ಪದ್ಧತಿ ಅಲ್ಲಿನ ಕೆಳವರ್ಗದ ಮಹಿಳೆಯರ ಮೇಲೆ ಹೆರಲಾಗಿತ್ತು. ಋತುಮಾತಿಯಾದ ಕೆಳವರ್ಗದ ಮಹಿಳೆಯರು ಮೇಲ್ವಸ್ತ್ರ ಧರಿಸದೆ ಇರಬೇಕು. ಧರಿಸಿದರೆ ಅದಕ್ಕಾಗಿ ಅವರು ತೆರಿಗೆ ಕಟ್ಟಬೇಕಾಗಿತ್ತು. ಇಂತಹ ಅಮನುಷ್ ಪದ್ದತಿಯ ವಿರುದ್ಧ ಮೊಟ್ಟ ಮೊದಲು 1787ರಲ್ಲಿ ಅಂದರೆ 18ನೇ ಶತಮಾನದಲ್ಲಿಯೇ ಟಿಪ್ಪು ಸುಲ್ತಾನರು ಆ ಪ್ರಾಂತದ್ ಗವರ್ನರನಿಗೆ ಪತ್ರ ಬರೆದು, ಈ ಅಮನುಷ್ ಪದ್ಧತಿ ರದ್ದು ಪಡಿಸುವಂತೆ ಸೂಚಿಸಿ, ಕೆಳವರ್ಗದ ಮಹಿಳೆಯರ ಮಾನಕ್ಕೆ ಗೌರವ ತಂದು ಕೊಡಲು ಪ್ರಯತ್ನಿಸಿದ.

ಆದರೆ ಟಿಪ್ಪು ಸುಲ್ತಾನ್ ಮರಣದ ನಂತರ ಮತ್ತೆ ಈ ಪದ್ಧತಿ ಜಾರಿಗೆ ಬಂದಿರ್ಬೇಕು ಏಕೆಂದರೆ 19ನೇ ಶತಮಾನದಲ್ಲಿ ಈ ಪದ್ಧತಿಯ ವಿರುದ್ಧ ಇನ್ನೊಬ್ಬ ಮಹಿಳೆ ಹೋರಾಡಿದ ಮಹಾತ್ವದ ಇತಿಹಾಸ ಈ ಮಲಬಾರ್ ಪ್ರಾಂತದಲ್ಲಿ ನಡೆದು ಹೋಗಿದೆ, ಆ ಇತಿಹಾಸವು ಹೇಳುತ್ತೇನೆ ಕೇಳಿ, ಕೆಳವರ್ಗದ ಈಳವ(ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡಿರುತ್ತಾಳೆ. ಇದಕ್ಕಾಗಿ ನಂಬೂದರಿ ರಾಜರುಗಳು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸಿದಾಗ; ಆ ಮಹಾತಾಯಿ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯಲ್ಲಿಟ್ಟು ತೋರಿಸುತ್ತಾಳೆ. ಆದರೆ ಆಕೆ ಮಾತ್ರ ಅತಿಯಾದ ರಕ್ತಸ್ರಾವದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ನಂಗೇಲಿಯ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನತೆರಿಗೆ ಪದ್ಧತಿಯನ್ನು 19 ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುತ್ತಾರೆ. ಈಗ a ಮಹಾತಾಯಿಯ ಮೂರ್ತಿ ನಿರ್ಮಿಸಿದ್ದಾರೆ. ಅಲ್ಲಿಗೂ ಸಹ ನಮಗೆ ಹೋಗಲು ಆಗುತ್ತಿಲ್ಲ ಎಂದು ಹೇಳಿದೆ. ಆಗ ಗೆಳೆಯರೆಲ್ಲರೂ ಅಬ್ಬಾ ಎಂತಹ ಧಿಟ್ಟಾತನ ಆ ಮಹಿಳೆಯದು ಎಂದು ಹೇಳಿ ಮುಂದೊಂದು ದಿನ ಈ ಎಲ್ಲ ಸ್ಥಳಗಳಿಗೆ ಖಂಡಿತ ಭೇಟಿ ನೀಡೋಣವೆಂದಾಗ ಹೌದು ಖಂಡಿತಭೇಟಿ ನೀಡೋಣ ಎಂದೂ ಹೆಳುತ್ತ ಕೊಚ್ಚಿ ಪ್ರದೇಶ ಪ್ರವೇಶಿಸಿದೆವು.

ಕೊಚ್ಚಿ ಇದನ್ನು ಕೊಚ್ಚಿನ್ ಎಂದೂ ಕರೆಯುತ್ತಾರೆ. ನೈಋತ್ಯ ಭಾರತದ ಕರಾವಳಿ ಕೇರಳ ರಾಜ್ಯದ ಒಂದು ನಗರ. ಅದರ ವಿಸ್ತಾರವಾದ ಚಹಾ ತೋಟಗಳು, ಹಲವಾರು ಮಸಾಲೆ ಎಸ್ಟೇಟ್‌ಗಳು, ಹಚ್ಚ ಹಸಿರಿನಿಂದ ಕೂಡಿದ, ಆಕರ್ಷಕ ವಾಸ್ತುಶಿಲ್ಪ ಮತ್ತು ಪ್ರಾಚೀನ ದೇವಾಲಯಗಳೊಂದಿಗೆ, ಇದು ವೈವಿಧ್ಯಮಯ ಅಭಿರುಚಿಗಳು ಮತ್ತು ಆಸಕ್ತಿಗಳನ್ನು ಹೊಂದಿರುವ ಪ್ರಯಾಣಿಕರಿಗೆ ಅಸಾಧಾರಣ ರಜಾದಿನದ ತಾಣವಾಗಿ ಕಾರ್ಯನಿರ್ವಹಿಸುತ್ತದೆ.
ಅರೇಬಿಯನ್ ಸಮುದ್ರದ ರಾಣಿ ಎಂದು ಅಡ್ಡಹೆಸರು ಹೊಂದಿರುವ ಕೊಚ್ಚಿ ಪ್ರಾಚೀನ ಕಾಲದಿಂದಲೂ ಭಾರತದ ಪಶ್ಚಿಮ ಕರಾವಳಿಯಲ್ಲಿ ಪ್ರಮುಖ ಮಸಾಲೆ ವ್ಯಾಪಾರ ಕೇಂದ್ರವಾಗಿತ್ತು. ಮುಜಿರಿಸ್ ಬಂದರು ರೋಮನ್ನರು, ಪರ್ಷಿಯನ್ನರು, ಅರಬ್ಬರು ಮತ್ತು ಚೀನಿಯರೊಂದಿಗೆ ವ್ಯಾಪಾರ ಮಾಡಿತು. 1503 ರಿಂದ 1663 ರವರೆಗೆ, ಪೋರ್ಚುಗೀಸರು ಫೋರ್ಟ್ ಕೊಚ್ಚಿ (ಫೋರ್ಟ್ ಇಮ್ಯಾನುಯೆಲ್) ಅನ್ನು ಸ್ಥಾಪಿಸಿದರು, ಅದನ್ನು 1663 ರಲ್ಲಿ ಡಚ್ಚರು ಸ್ವಾಧೀನಪಡಿಸಿಕೊಂಡರು. ನಂತರ ಡಚ್ಚರು ಈ ಪ್ರದೇಶವನ್ನು ಯುನೈಟೆಡ್ ಕಿಂಗ್‌ಡಮ್‌ಗೆ ಬಿಟ್ಟುಕೊಟ್ಟರು. ಕೊಚ್ಚಿಯು ನೀರಿನ ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ದೇಶದ ಏಕೈಕ ನಗರವಾಗಿದೆ, ಇದನ್ನು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಬೋಟ್ ಮೆಟ್ರೋ ಸಾರಿಗೆ ಮೂಲಸೌಕರ್ಯ ಎಂದು ವಿವರಿಸಲಾಗಿದೆ. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುವ ವಿಶ್ವದಲ್ಲೇ ಮೊದಲನೆಯದು. ಅನೇಕ ಇತಿಹಾಸಕಾರರ ಪ್ರಕಾರ, ಕೊಚ್ಚಿ ಸಾಮ್ರಾಜ್ಯದ ಪೂರ್ವಗಾಮಿ ರಾಜ್ಯವು 12ನೇ ಶತಮಾನದ ಆರಂಭದಲ್ಲಿ ಚೇರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿತು. 18 ನೇ ಶತಮಾನದಲ್ಲಿ ಡಚ್ ಅಧಿಕಾರ ದುರ್ಬಲಗೊಂಡಾಗ ಇದು ಅನೇಕ ಭಾಗಗಳಾಗಿ ವಿಭಜನೆಯಾಯಿತು. ಕೊಚ್ಚಿಯ ಉಳಿದ ಭಾಗವನ್ನು ಕೊಚ್ಚಿ ಸಾಮ್ರಾಜ್ಯದ ಗವರ್ನರ್‌ಗಳು ಆಳುತ್ತಿದ್ದರು. 1773 ರ ಹೊತ್ತಿಗೆ ಮೈಸೂರು ಸುಲ್ತಾನರಾದ  ಹೈದರ್ ಅಲಿ  ಮಲಬಾರದ  ಕೊಚ್ಚಿ ಪ್ರದೇಶಗಳ್ಳನು ಗೆದ್ದುಕೊಂಡು ಹೈದರ್ ಅಲಿ ಮತ್ತು ಆತನ ಮಗ ಟಿಪ್ಪು ಸುಲ್ತಾನರು ಆಳ್ವಿಕೆ ಮಾಡಿದರು.
ಹೀಗೆ ಇತಿಹಾಸ ಹೇಳುತ್ತ ಕೇಳುತ್ತ ಕೆಡೆಗೆ ನಮ್ಮ ನೆಚ್ಚಿನ ತಾಣವಾದ ಚೆರೈ ಬೀಚಿಗೆ ಬಂದಿಳಿದೆವು. ಅಲ್ಲಿ ಸುಮಾರು ನೂರು ಜನರು ಕೂಡುವಷ್ಟು ದೊಡ್ಡ ಹಡಗಿನಲ್ಲಿ ಕುಳಿತು ಸಮುದ್ರದಲ್ಲಿ ವಿಹಾರ ಮಾಡಲು ಹೊರಟೆವು. ಸುಮಾರು ಒಂದು ಗಂಟೆಯ ವರೆಗೆ ವಿಹಾರ ಮಾಡುತ್ತ ಹೋದಾಗ ವೈಪಿನ್ ಐಲ್ಯಾಂಡ್ ನೋಡಿದೆವು. ನಂತರ ಅಲ್ಲಿಂದ ಸಾಮಾನುಗಳನ್ನು ಹೊತ್ತುಕೊಂಡು ಬರುತ್ತಿರುವ ದೊಡ್ಡ ದೊಡ್ಡ ಹಡಗುಗಳನ್ನು ನೋಡಿದೆವು. ಅಲ್ಲಿಯೇ ಆ ಹಡಗುಗಳಿಂದ ಸಾಮಾನುಗಳನ್ನು ಕಳುಹಿಸುವ ಮತ್ತು ಇಳಿಸಿಕೊಳ್ಳುವ ದೊಡ್ಡ ದೊಡ್ಡ ಕ್ರೇನಗಳು ನೋಡಿದೆವು.
ನಂತರ ನಾವಿದ್ದ ಹಡಗಿನಲ್ಲಿ ಹಾಡುಗಳು ಹಚ್ಚಿದಾಗ ‘ಉಮ್ರ ಹೋಗಾಯಿ ಚಾಲೀಸ್ ಕೆ ಪಾರ್ ಹೈ’ ಮತ್ತು ಎಹೇಸಾನ್ ಮೇರೆ ದಿಲ್ ಪೇ ತುಮಹಾರ ಹೈ ದೋಸ್ತೋ’ ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂತೋಷ ದಿಂದ ಒಂದು ತಾಸು ವಿಹಾರ ಮಾಡಿ ಅಲ್ಲಿಂದ ಮತ್ತೆ ಇನ್ನೊಂದು ಬೀಚಿಗೆ ಹೋಗಿ ಸಮುದ್ರದಡದಲ್ಲಿ ಆಟವಾಡಿದೇವು. ನಂತರ ಲೂಲ್ಲು ಮಾಲಿಗೆ ಹೋಗಿ ಅಲ್ಲಿ ಕೆಲವು ವಸ್ತುಗಳು ಖರೀದಿಸಿ ಹೀಗೆಯೇ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಿ ಮಸಾಲೆ ಪದಾರ್ಥಗಳನ್ನು ಖರೀದಿಸಿ, ರಾತ್ರಿ ಅಲ್ಲಿಯೇ ಲಾಡ್ಜನಲ್ಲಿ ವಿಶ್ರಾಂತಿ ಮಾಡಿ ಮುಂಜಾನೆ ಎರನಾಕೂಲಮ್ ದಿಂದ ರೈಲು ಹತ್ತಿ ನಮ್ಮೂರಾದ ಬೀದರ್ ಜಿಲ್ಲೆಯ ಹುಮ್ನಾಬಾದ ಪಟ್ಟಣಕ್ಕೆ ಹೊರಟು ಮರು ದಿವಸ ಮುಂಜಾನೆ ನಮ್ಮೂರಿಗೆ ಮುಟ್ಟಿದೆವು .

( ಮುಗಿಯಿತು.)

      – ಶಕೀಲ್ ಐ.ಎಸ್. ಹುಮ್ನಾಬಾದ್.

ಲೇಖಕರ ಪರಿಚಯ: 

ಶಕೀಲ್ ಐ.ಎಸ್.

ಸಾಹಿತಿ  ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ
ಹುಮನಾಬಾದ ತಾಲೂಕಿನ ಖೇಣಿ ರಂಗೋಳ ಗ್ರಾಮದವರು. ಬಿ.ಎ. ಪದವಿಧರರಾದ ಇವರು ಪೋಲಿಸ್ ಇಲಾಖೆಯಲ್ಲಿದ್ದು ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಅಭಿವೃದ್ಧಿ ಪಥ’, ‘ಕರ್ನಾಟಕ ಇತಿಹಾಸ, ‘ಹುಮನಾಬಾದ ತಾಲೂಕು ಇತಿಹಾಸ’ ( ಲೇಖನ) ‘ಮೂರು ನಾಟಕಗಳು’ (ನಾಟಕ) ‘ಭ್ರಷ್ಟಾಚಾರ ದೇಹಕ್ಕೂ ಮಾರಕ’ (ರೂಪಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ‘ಬೀದರ ಜಿಲ್ಲೆಯ ಸೂಫಿಗಳು’ ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. ‘ನಳದಮಯಂತಿ’ ಇದು ಪೌರಾಣಿಕ ಕತೆಯಾದರೆ, ‘ಗರ್ಭಕೋಶದಲ್ಲಿ ಮಹಾಯುದ್ಧ’ (ಕಥಾಸಂಕಲನ) ‘ಧರಿನಾಡಿನ ಗಂಡುಗಲಿ (ವ್ಯಕ್ತಿಚಿರ್ತಣ) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ