ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ. (ಲಲಿತ ಪ್ರಬಂಧ)
– ಮಚ್ಚೇಂದ್ರ ಪಿ.ಅಣಕಲ್.
ಬಹುದಿನಗಳಿಂದ ನನ್ನ ಸಂಪರ್ಕಕ್ಕೆ ಸಿಗದೆ ಇದ್ದ ಬೀರ ಅದ್ಯಾಕೋ ! ಕನ್ನಡದ ಪತ್ರಿಕೆಯೊಂದು ಬಗಲಲ್ಲಿ ಹಿಡಿದುಕೊಂಡು, ಅತ್ತಲಿಂದ ಇತ್ತ ಇತ್ತಲಿಂದ ಅತ್ತ ‘ ಅಂತ ಹುಚ್ಚನಂತೆ ತಿರುಗಾಡುತ್ತಿದ್ದ.
ದೂರದಿಂದಲೇ ಗಮನಿಸಿದ ನಾನು.
“ ಏ ! ಏ ! ಬೀರ. ” ಅಂತ ಚೀರಿದೆ.
ಆದರೂ ಆತ ಕೇಳಿಸಿಕೊಳ್ಳದೆ ಪಕ್ಕದ ಗಾಂಧಿ ಚೌಕಿನ ಬಾರ್ ಒಂದರ ಒಳಹೊಕ್ಕ.
“ ಛೇ ! ಈ ಬೀರನಿಗೆ ಅದೇಷ್ಟು ಸಲ ಹೇಳಿದರು ಕುಡಿಯೊದನ್ನು ಬಿಡೊಲ್ಲ. ಹ್ಞಾ ! ಅದ್ಯಾಕೋ ! ಇವತ್ತು ಬಾರ್ ಒಳಗೆ ಒಬ್ಬನೆ ಹೋಗಿದ್ದಾನಂದ್ರೆ ಏನಾದ್ರೂ ವಿಷಯ ಇರ‍್ಲೆ ಬೇಕು.” ಅಂತ ಅಂದುಕೊಂಡೆ. ಯಾಕೆಂದ್ರೆ ಇವಾ ಖುಷಿಯಲ್ಲಿ ಇರುವಾಗ ಯಾರನಾದ್ರೂ ಜತೆಗೆ ಕರೆದುಕೊಂಡು ಹೋಗುವವ, ಬೇಜಾರಾದ್ರೆ ಮಾತ್ರ ಒಬ್ಬನೇ ಕುಡಿಯೊದು ಅಂತ ಗೊತ್ತು. ಕುಡ್ದು ಕುಡ್ದು ಕಂಡ ಕಂಡವರಿಗೆಲ್ಲ ತಪ್ಪು ಹೊರಿಸಿ ಬೈಯೊದು ಹೊಸದೆನಲ್ಲ. ಕುಡಿದರೆ ಮಾತ್ರ ಇವಾ ಕಾವ್ಯ, ಗಜಲ್ ಬರೆಯೋದು. ಇವನು ಬರೆದ ಗಜಲ್ ಪುಸ್ತಕದ ತುಂಬೆಲ್ಲ `ಮದಿರೆ,
ಮಾನಿನಿ, ನಿಷೇ ಹೆಂಡ, ಅಮೃತ ಕುಂಡ ‘ ಎಂಬ ಇತ್ಯಾದಿ ಪದಗಳೆ ತುಂಬಿ ತುಳುಕುತ್ತಿವೆ. ನಾನು ಬಹಳ ಸಲ ಇವನಿಗೆ
“ ಬೀರ ಸಾರಾಯಿ ಕುಡಿ ಬೇಡಪ್ಪ, ನೀನೊಬ್ಬ ಸಾಹಿತಿ, ನೀನು ಹಿಂಗೆ ಕುಡಿತ್ತಾ ಹೊದ್ರೆ ಹೆಂಗೆ ? ಸಾಹಿತ್ಯ ಕ್ಷೇತ್ರದಲ್ಲಿ ನಿನ್ನ ಹೆಸ್ರು ಕೆಟ್ಟ ಹೊಗ್ತದೆ ಕುಡಿಬೇಡ” ಅಂತ ಹೇಳಿದ್ರೆ ಕೇಳಾವಲ್ಲ. ಬದಲಿಗೆ ಅವಾ “ ಸಾಹಿತಿಗಳಲ್ಲಿ ಬಹಳಷ್ಟು ಕವಿಗಳು ಕುಡಿತ್ತಿದ್ದರು ಮತ್ತೆ ಸಿಗರೇಟ್ ಸೇದ್ತಿದ್ದರು
ಅನ್ನೊದು ನಿಂಗೆ ಗೊತ್ತಿಲ್ಲೇನು ? ಜಿ.ಪಿ.ರಾಜರತ್ನಂ ಅವರು “ಹೆಂಡಾ ಹೋಗಲಿ, ಹೆಂಡ್ತಿ ಹೊಗಲಿ ” ಅಂತ ಯಾಕ್ ಹೇಳಿದ್ರು ? ಅವರು ಕುಡಿತ್ತಿದ್ರು . ಅದಕ್ಕೆ ಹಾಂಗ್ ಹೇಳಿದ್ದು, ಅನಕೃ ಅವರು ಸೀಗರೆಟ್ ಸೇದ್ತಿದ್ದರು, ಬಿ.ಚೀ. ಗಾಂಜಾ ಸೇದ್ತಿದ್ದರು ಅನ್ನೊದು ಗೊತ್ತಾ ? ನೀನು ಕವಿಯಾಗಿದ್ದು ದಂಡ್ ಅದಾ. ಏನಾದ್ರೂ ಒಂದು ಚಟ ಕಲ್ತು ಸಾಹಿತ್ಯ ಬರೆಯೊದು ಸುರು ಮಾಡಿದ್ರೆ, ಆಗ ನೋಡು ನೀನು ಇನ್ನೂ ದೊಡ್ಡ ಕವಿಯಾಗಬೊದು” ಅಂತ ಸಾರಾಯಿ ಕುಡಿಬೇಡ ಅಂದಿದ್ದಕ್ಕೆ ತಿರುಗಿ ಬುದ್ಧಿವಾದ ಹೇಳತ್ತಿದ್ದ.
“ ಇರ‍್ಲಿ , ಅವಾ ಬಾರ್ ನಿಂದ ಹೊರ ಬರ‍್ಲಿ ” ಅಂತ ಎದುರಿನ ಬಸ್ ಸ್ಟಾಪ್ ನಲ್ಲಿ ಕಾದೆ.
ಕೆಲ ನಿಮಿಷಗಳ ನಂತರ ತರ‍್ಯಾಡ್ಕೊತ ಬರತೊಡಗಿದ.
“ ಏ, ಏ ! ಬೀರ ” ಅಂತ ಮತ್ತೇ ಕೂಗಿದೆ . ಕೇಳಲಿಲ್ಲ.
ಇನ್ನೇನು ಆತ ಅಟೋ ಹತ್ತಲು ರಸ್ತೆಯಲ್ಲಿ ಕೈ ಮಾಡತೊಡಗಿದ. ಕುಡಿದ ನಿಷೆಯಲ್ಲಿ ಇರುವುದರಿಂದ ನನ್ನ ದನಿಯ ಕಡೆಗೆ ಆತನ ಗಮನವಿರಲಿಕ್ಕಿಲ್ಲವೆಂದು ತಿಳಿದು ಮೊಬೈಲ್ ಕರೆ ಮಾಡಿದೆ. ಆತ ರಿಸಿವ್ ಮಾಡಿ
“ ಹಲ್ಲೋ ! ದೊಸ್ತ ” ಅಂತ ಹೇಳಿದ.
“ ಏ, ಬೀರ ಇಲ್ಲಿ, ಇಲ್ಲಿ ನಿನ್ ಎದುರಿಗೆ ನೋಡು . ಇಕಾ ಈ ಕಡಿಗಿ ಇಲ್ಲಿ, ಇಲ್ಲಿ ” ಅಂತ ಕೈ ಮಾಡಿದೆ. ಆತ ಮುಖ ಮೇಲೆತ್ತಿ ಒಮ್ಮೆ ನೋಡಿ ಆಚೆ ಬದಿಯ ರಸ್ತೆ ದಾಟಿ ನನ್ನೆಡೆಗೆ ತರ‍್ಯಾಡುತ್ತಾ ಬಂದು ಕೈ ಕುಲುಕಿ
“ ಏನ ದೊಸ್ತ ! ಭಾಳ ದಿನಾ ಆಯ್ತು ಸಿಗವಲ್ಲಿ ? ನೀನಂತೂ ಸರ್ಕಾರಿ ಸಾಲಿ ಮಾಸ್ತರ ಆಗಿ ಯಾದಗಿರಿಗಿ ಹ್ವಾದ ಮ್ಯಾಲಿಂದ ನಮ್ಮನ್ನೆಲ್ಲ ಮರ‍್ತೆ ಬಿಟ್ಟಿದ್ದಿ. ಹ್ಞಾ ! ಮತ್ ಯಾವಾಗ್ ಬಂದಿದ್ದಿ ಏನ ಸಮಾಚಾರ ? ಎಷ್ಟು ಆದವು ? ” ಅಂತ ಕೇಳಿದ್ದ.
“ ಏನು ? ಎಷ್ಟಾದವು ಅಂದ್ರೆ ಮಕ್ಳಾ ? ” ಅಂತ ಕೇಳಿದೆ.
“ ಅಲ್ಲ ಪುಸ್ತಕ ” ಅಂದ.
“ ಇಲ್ಲ ಸಾಹಿತಿಗಳೆ ! ಯಾದಗಿರಿಗಿ ಹ್ವಾದ ಮ್ಯಾಲಿಂದ ಬರೆಯೊದು ಕಡಿಮೆಯಾಗಿದೆ. ಇನ್ನೂ ಯಾವ ಪುಸ್ತಕ ಪ್ರಕಟಿಸಿಲ್ಲ” ಅಂದೆ .
“ ನಾನ ನಿನಗೆ ಆವಾಗ್ಲೆ ಹೇಳಿದ್ದೆ, ಮೊದ್ಲು ಕುಡಿಯೊದನ್ನು ಸುರು ಮಾಡು ಅಂತ. ಕುಡಿದರೆ ಕವಿತೆ ತಾನಾಗೆ ಹೊರ ಬರ‍್ತದೆ ” ಅಂತ
ನಿಂತಲ್ಲೆ ಜೋಲಿ ಹೊಡೆಯುತ್ತಿದ್ದ.
ಜೋರಾದ ಗಾಳಿಗೆ ನವಣಿ ತೆನಿಯ ದಂಟು ಅಲುಗಾಡಿದಂತೆ, ಅಲುಗಾಡುತ್ತಾ ನಿಶೆಯಲ್ಲಿ ಕಾಲು ಜಾರಿ ಬಿದ್ದವನೆ ಮತ್ತೆ ಮೆಲೆದ್ದು ಸುಧಾರಿಸಿಕೊಂಡು ಮಾತಾಡತೊಡಗಿದ.
ಆತ ತನ್ನ ಎಡ ಬಗಲಲ್ಲಿ ಕನ್ನಡದ ದಿನ ಪತ್ರಿಕೆಯೊಂದು ತುಂಬ ಹೊತ್ತು ಗಟ್ಟಿಯಾಗಿ ಹಿಡಿದುಕೊಂಡಿದ್ದ . ತಾನು ಬಿದ್ದರು ಪತ್ರಿಕೆ ಬಿಡದ ಅವನ ಸಾಹಿತ್ಯ ಅಭೀಮಾನ ಮೆಚ್ಚುವಂತಹದಾಗಿತ್ತು.
“ ಅಲ್ಲಾ ! ಮಹಾರಾಯ ಏನೀದು ಬಗಲಲ್ಲಿ ? ಇದು ನೀನು ಸುದ್ಧಿ ಬರೆಯೋ ಪತ್ರಿಕೆನಾ ? ” ಅಂತ ಅದು ಹಿಡಿದೆಳೆದುಕೊಂಡೆ.
ಆಗ ಅವಾ “ ನಾ ಸುದ್ಧಿ ಬರೆಯೊದು ಮತ್ತೆ ಸಾಹಿತ್ಯ ಬರೆಯೋದು ಎಲ್ಲ ಬಿಟ್ಟ ಬುಟ್ಟೆ” ಅಂತ ತೊದಲು ನುಡಿಯುತ್ತಾ ನನ್ನ ಕೈಯಲ್ಲಿನ ಆ ಪತ್ರಿಕೆ ಕಸಿದುಕೊಂಡ.
“ ಯಾಕೋ ! ಪೇಪರ್ ಕಸ್ಕೊತ್ತಿ ? ನೀನು ಸುದ್ಧಿ ಬರೆಯದಿದ್ದರೇನಂತೆ ಇವತ್ತಿನ ತಾಜಾ ಸುದ್ಧಿ ಏನ ಅದಾ ತಾ ನೋಡೊಣ ” ಅಂತ ಕೇಳಿದೆ.
“ ಇಲ್ಲ, ಇಲ್ಲ ಏನೂ ಇಲ್ಲ. ನಿಜ ಹೇಳಬೇಕಂದ್ರೆ ಇವತ್ತಿನ ಕಾಲದಲ್ಲಿ ಸಾಹಿತ್ಯ ಬರೆಯೋನಿಗೆ ಬೆಲೆಯೇ ಇಲ್ಲ. ಎಲ್ಲ ದುಡ್ಡಿದ್ದವರಿಗೆ ಈ ಸಮಾಜದಲ್ಲಿ ಮಾನ ಸಮ್ಮಾನ ಇದೆ. ನಮ್ಮಂಥವರಿಗೆ ಎಷ್ಟೇ ಪ್ರತಿಭೆ ಇದ್ರೂನು ಗುರ್ತಿಸೊಲ್ಲ” ಅಂತ ನಿರಾಸೆಯಿಂದ ಕಸಿದುಕೊಂಡ ಪೇಪರ್ ಒಮ್ಮೆ ನೋಡಿ. ಮತ್ತೆ ಮುಚ್ಚಿ ಬಗಲಲ್ಲಿ ಹಿಡಿದುಕೊಂಡ.
“ ಯಾಕೆ ಏನಾಯ್ತು ? ಪೇಪರ್ ನಲ್ಲಿ ಎನ ಬಂದಿದೆ ? ಯಾಕೆ ನೋಡಿ ಹಾಗೆ ಮುಚ್ಚಿಕೊಳ್ತಾ ಇದ್ದಿ ? ತಾ ಇಲ್ಲಿ ನೋಡೊಣ ” ಅಂತ ಕೇಳಿದ್ದೆ ತಡ ಗೊಳೋ ! ಅಂತ ಅಳಲು ಸುರು ಮಾಡಿದ.
“ ಯಾಕೋ ! ಬೀರ ಅಳ್ತಾ ಇದ್ದಿ ? ನಿನ್ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಬರೆದ್ರಾ ?” ಅಂದೆ.
“ ಅದಲ್ಲ ದೊಸ್ತ, ಇಲ್ಲಿ ನೋಡು ” ಅಂತ ಪತ್ರಿಕೆಯ ೩ನೇ ಪುಟದಲ್ಲಿ ಪ್ರಕಟವಾದ ಜಿಲ್ಲಾ ವರದಿಯೊಂದು ತೊರಿಸಿದ.
ಒಮ್ಮೆ ಕಣ್ಣ ಹಾಕಿ ಸುದ್ಧಿಯ ತಲೆ ಬರಹ ಓದಿದೆ. `ಸಾಹಿತ್ಯ ಸಮ್ಮೆಳನಾಧ್ಯಕ್ಷರ ಆಯ್ಕೆ’ ಅಂತ ಅರ್ಧ ಮುಕ್ಕಾಲು ಪುಟದ ವರದಿಯ ಜತೆಗೆ ವ್ಯಕ್ತಿಯೊಬ್ಬರ ಭಾವಚಿತ್ರ ಪ್ರಕಟವಾಗಿತ್ತು. ಅವರು ಆಯ್ಕೆಯಾಗಿದಕ್ಕೆ ಶಾಸಕರು, ಸಚಿವರು, ರಾಜಕೀಯ ದುರಿಣರು, ಉದ್ಯಮಿಗಳು, ಊರ ಗ್ರಾಮದ ಮುಖಂಡರು ಮೊದಲಾದವರು ಹರ್ಷ ವ್ಯಕ್ತಪಡಿಸಿರುವ ವರದಿ ಅದಾಗಿತ್ತು.
“ ಓಹೋ ! `ಸಾಹಿತ್ಯ ಸಮ್ಮೆಳನಾಧ್ಯಕ್ಷರ ಆಯ್ಕೆ’ ಈ ಸುದ್ಧಿ ಪ್ರಕಟವಾಗಿದಕ್ಕೆ ನಿನ್ಯಾಕೆ ಅಳ್ತಾ ಇದ್ದಿ ? ನೀನು ಖುಷಿ ಪಡಬೇಕು. ಅವರಿಗೆ ಕರೆದು ಸನ್ಮಾನ ಮಾಡಬೇಕು. ಅದು ಸಾಧ್ಯ ಇಲ್ಲ ಅಂದ್ರೆ ಕಾಲ್ ಮಾಡಿ ಅಭೀನಂದನೆ ತಿಳಿಸು. ಅದು ಬಿಟ್ಟು ಒಬ್ಬನೆ ಕುಡಿದು ಈ ರೀತಿ ಅಳೊದು ಅಂದ್ರೆ ನಂಗೆ ಸರಿ ಕಾಣವಲ್ದು ನೋಡು. ” ಅಂತ ಹೇಳಿದೆ. ಆಗ ಆತ
“ ನಾನು ಕುಡಿಯೊದನ್ನು ಕಲಿತಿದ್ದೇ ಇಂತಹ ಸುದ್ಧಿಗಳಿಂದ ದೊಸ್ತ, ಸಾಹಿತ್ಯ ಸಮ್ಮೆಳನಾಧ್ಯಕ್ಷರ ಆಯ್ಕೆ ಮಾಡಬೇಕಾದರೆ ಯಾರನ್ನು ಆಯ್ಕೆ ಮಾಡಬೇಕು ? ಮತ್ತೇ ಹೇಗೆ ಆಯ್ಕೆ ಮಾಡಬೇಕು ? ಇದಕ್ಕೆ ಏನಾದ್ರೂ ಮಾನದಂಡಗಳಿಲ್ಲವೇ ? ನೀನೆ ಹೇಳು ದೊಸ್ತ ನೀನೇ ಹೇಳು” ಅಂತ ಒದರತೊಡಗಿದ.
“ ಹೌದು, ಸಾಹಿತ್ಯ ಸಮ್ಮೆಳನಾಧ್ಯಕ್ಷರ ಆಯ್ಕೆ ಮಾಡಬೇಕಾದರೆ ಮೊದಲು ಆತ ಸಾಹಿತಿಯಾಗಿರಬೇಕು. ಮತ್ತು ಕನ್ನಡ ಭಾಷೆ ಮತ್ತು
ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿರಬೇಕು. ಆತ ಬರೆದ ಪುಸ್ತಕಗಳು ಸೃಜನಶೀಲತೆಯಿಂದ ಕೂಡಿರಬೇಕು. ಅನುಭಾವಿ ಬರಹಗಾರರಿಗೆ ಅವರ ಸಾಹಿತ್ಯ ಮತ್ತು ವಯಸ್ಸಿನ ಆಧಾರದ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಯಾರು ಅವರಿಗೆ ವಿರೋಧ ಮಾಡೊಲ್ಲ. ಆಗ ಆಯ್ಕೆಯಾದವರಿಗೂ ಮತ್ತು ಆಯ್ಕೆ ಮಾಡಿದ ಸಾಹಿತ್ಯ ಸಂಘದವರಿಗೂ ಇದು ಶೋಭೆ ತರುತ್ತದೆ. ಮತ್ತೆ ಸುಖಾ ಸುಮ್ಮನೆ ಸಂಪಾದನೆ, ಸಂಗ್ರಹ ಮಾಡಿ ಪುಸ್ತಕ ಪ್ರಕಟಿಸಿದವರಿಗೆ ಸಾಹಿತಿ ಅಂತ ಪರಿಗಣಿಸಬಾರದು. ಸೃಜನಶೀಲ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದವರಿಗೆ ಮಾತ್ರ ಆಯ್ಕೆ ಮಾಡಿದರೆ ಜನ ಮೆಚ್ಚಿ ಗೌರವ ಕೊಡ್ತಾರೆ. ಅಷ್ಟೇಯಲ್ಲದೆ ಸಮ್ಮೇಳನದಲ್ಲಿ ಆ ಸಾಹಿತಿ ಬರೆದ ಪುಸ್ತಕಗಳು ಮಾರಾಟ ಮಳಿಗೆಯಲ್ಲಿ ಇದ್ರೆ ಅವುಗಳನ್ನು ಕೊಂಡು ಓದಲು ಬಯಸುತ್ತಾರೆ.” ಅಂದೆ.
“ ಇದು ಖರೆ ! ಆದ್ರೆ ಈ ಪತ್ರಿಕೆಯಲ್ಲಿ ಸುದ್ಧಿಯಾದ ವ್ಯಕ್ತಿ ಸಾಹಿತಿನೆ ಅಲ್ಲ . ಆದ್ರೂ ಈ ಸಲ ಜಿಲ್ಲೆಯ ಎಲ್ಲ ಹಿರಿ-ಕಿರಿಯ ಸಾಹಿತಿಗಳನ್ನು
ಹಿಂದಿಕ್ಕಿ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇದು ನಿಜವಾದ ಸಾಹಿತಿಗಳಿಗೆ ಅವಮಾನ
ಯಾ ಥೂ ! ” ನಿಶೆಯಲ್ಲಿ ಕ್ಯಾಖರಿಸಿ ಉಗುಳಿದ.
“ಹೌದಾ ! ಇಲ್ಲಿ ಕೊಡು” ಅಂತ ಅವನ ಕೈಯಲ್ಲಿನ ಪತ್ರಿಕೆ ಓದಿದೆ. ನಿಜ ಗೊತ್ತಾಯ್ತು . ಸಾಹಿತ್ಯ ಸಮ್ಮೆಳನಕ್ಕೆ
ಸಾಹಿತಿಯಲ್ಲದವರನ್ನು ಆಯ್ಕೆ ಮಾಡಿದ್ದು ಸರಿ ಎನಿಸಲಿಲ್ಲ.
“ ಸಾಹಿತ್ಯ ಸಂಘದ ಅಧ್ಯಕ್ಷ ಹನಾ ಅಲ್ಲ ! ಆ ದರ್ವೇಶಿ ನನ್ ಮಗ ಬೇಕೂ ಅಂತಲೇ ಹೀಗೆ ಮಾಡಿದ್ದಾನೆ” ಅಂತ ಬೀರ ಕುಡಿದ ನಿಶೆಯಲ್ಲಿ ವಟ್ಟಗುಟ್ಟತೊಡಗಿದ.
ಕಳೆದ ವರ್ಷ ನಡೆದ ಸಾಹಿತ್ಯ ಸಮ್ಮೇಳನದ ಆಯ್ಕೆಯಲ್ಲಿಯು ಸಹ ಬೀರನಿಗೆ ಹೆಚ್ಚು ಪುಸ್ತಕ ಬರೆದಿಲ್ಲವೆಂಬ ಕಾರಣಕ್ಕಾಗಿ ಬೇರೆ ಜಿಲ್ಲೆಯ ಸಾಹಿತಿಯೊಬ್ಬನ ಹೆಂಡ್ತಿಗೆ ಸಮ್ಮೆಳನಾಧ್ಯಕ್ಷೆಯಾಗಿ ಆಯ್ಕೆ ಮಾಡಿ ಇವನ ಹೆಸರು ಕೈ ಬಿಡಲಾಗಿತ್ತು .ಆದ್ದರಿಂದ ಈ ಸಲವಾದರು ಖಂಡಿತ ಆಯ್ಕೆ ಮಾಡ್ತಾರೆ ಅಂತ ಆಸೆ ಇಟ್ಟುಕೊಂಡ ಬೀರನಿಗೆ ನಿರಾಸೆ ಮಾಡಿದರು. ಆಗ ಆತ ಕಂಠಪೂರ್ತಿ ಕುಡಿದು ಒಳಗಿನ ನೋವನ್ನೆಲ್ಲ ನನ್ನೊಂದಿಗೆ ಹಂಚಿಕೊಳ್ತಾ ಇದ್ದ. ನಾನು ಕೆಲ ವಿಷಯ ಹೆಂಡ್ತಿಗೆ ಹೇಳದೆ ಸ್ನೇಹಿತರಿಗೆ ಹೇಳಿದರೆ ಮನಸ್ಸು ಹಗುರವಾಗುತ್ತದೆ. ಹೇಳಲಿ ಅಂತ ಅವನ ಮಾತಿಗೆ ತಲೆದೂಗಿಸಿದೆ. ಆತ ನಿಶೆ ಹೆಚ್ಚಾದಂತೆ ಮಾತು ಜೋರು ಮಾಡಿದ.
“ ದೊಸ್ತ ! ನಾನು ಈ ಊರ ಮಣ್ಣಿನಲ್ಲಿ ಹುಟ್ಟಿದರು ನನಗೆ ಬೆಲೆ ಸಿಗ್ತಾ ಇಲ್ಲ. ಇಲ್ನೋಡು ಎಲ್ಲಿಂದಲೋ ಬಂದ ಧೂಳಿಗೆ ಇಲ್ಲಿ ಬೆಲೆ ಇದೆ ” ಅಂತ ಪತ್ರಿಕೆಯ ವರದಿ ನೋಡಿ ಅಲ್ಲಿ ಪ್ರಕಟವಾದ ಫೋಟೋಗೆ ದುರುಗುಟ್ಟಿ ಹಲ್ಲು ಅರೆಯುತ್ತಾ ಹೇಳಿದ.
“ ದೊಸ್ತ ! ಪ್ರತಿ ವರ್ಷ ಪುಸ್ತಕ ಪ್ರಕಟಿಸಿಲ್ಲ ಅಂತ ನನ್ನನ್ನು ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಪರಿಗಣಿಸುತ್ತಿರಲಿಲ್ಲ. ಈ ಸಲ ನಾನು ಒಮ್ಮೆ ಹತ್ತು ಪುಸ್ತಕ ಪ್ರಕಟಿಸಿದ್ದಿನಿ ಆದರೂ ನನ್ನ ಆಯ್ಕೆ ಮಾಡಲಿಲ್ಲ . ಅಂದ್ರೆ ನಾನು ಇಷ್ಟು ಪುಸ್ತಕ ಪ್ರಕಟಿಸಿದ್ದೆ ತಪ್ಪಾಯ್ತೇ ? ‘ ಅಂತ ಮತ್ತೆ ಅಳತೊಡಗಿದ.
“ ಛೇ ! ಛೇ ! ಇದು ತುಂಬ ಅನ್ಯಾಯ ನಿನಗೆ ಬೇಕೂ ಅಂತಲೇ ಹೀಗೆ ಮಾಡ್ತಿದ್ದಾರೆ. ಬೀರ ನೀನು ಬರೆಯಬೇಕು.
ಯಾವುದೇ ಸಮ್ಮೇಳನ ಪ್ರಶಸ್ತಿ ಪುರಸ್ಕಾರಕ್ಕೆ ಆಸೆ ಪಡಬೇಡ. ಸುಮ್ಮನೆ ಬರಿತಾ ಹೋಗು. ಒಂದಲ್ಲ ಒಂದ ಸಲ ಅವರೆ ನಿನಗೆ ಕರೆದು ಸತ್ಕರಿಸ್ತಾರೆ.”
“ ಏನ ಸತ್ಕರಿಸ್ತಾರೆ ? ಏಳೆಂಟು ವರ್ಷಗಳ ಹಿಂದೆ ನನಗೆ ಹೊಬಳಿ ಸಾಹಿತ್ಯ ಸಮ್ಮೆಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲ ತಯಾರಿಯಾದ ಮೇಲೆ ಕೊನೆಯ ಗಳಿಗೆಯಲ್ಲಿ ಸಮ್ಮೇಳನನೆ ರದ್ದು ಮಾಡಿದ್ದು ನೆನಪಿಲ್ಲವೇ ? ಮುಂದೆ ತಾಲೂಕಾ ಸಮ್ಮೆಳನ ಅಧ್ಯಕ್ಷನಾಗಿ ಆಯ್ಕೆ ಮಾಡ್ತಿನಿ ಅಂತ ಹೇಳಿದ ಆ ಅಧ್ಯಕ್ಷ ಈ ರೀತಿ ಮೋಸ ಮಾಡೊದಾ ? ” ಅಂತ ಮತ್ತೆ ಅಳುವುದನ್ನು ಮುಂದುವರೆಸಿದ.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸಾಹಿತ್ಯವನ್ನು ಪೋಷಿಸಿ ಬೆಳೆಸುತ್ತಿದ್ದರು.ಪಂಪ ರನ್ನ.ಜನ್ನ.ಪೊನ್ನ. ನಾಗವರ್ಮ ಮೊದಲಾದವರು ಆಶ್ರಯ ಕವಿಗಳಾಗಿದ್ದರು. ಅವರಿಗೆ ರಾಜರು ಆಶ್ರಯ ನೀಡಿ ಅವರ ಸಾಹಿತ್ಯವನ್ನು ಪ್ರೊತ್ಸಾಹಿಸುತ್ತಿದ್ದರು. ಆದ್ದರಿಂದ ಆ ಕಾಲದಲ್ಲಿ ಗಟ್ಟಿ ಸಾಹಿತ್ಯ ಹೊರ ಬಂದಿತ್ತು ಎನಿಸುತ್ತದೆ. ಹಾಗಾಗಿ ಇಂದಿನ ಕಾಲದ ರಾಜಕಾರಣಿಗಳು ಮತ್ತು ಮಠಾಧೀಶರು ಸಾಹಿತಿಗಳಿಗೆ ಪೋಷಿಸಿ ಪ್ರೊತ್ಸಹ ನೀಡಬೇಕಾಗಿದೆ. ಅದು ಬಿಟ್ಟು ಅವರೇ ಆ ಕುರ್ಚಿಯ ಮೇಲೆ ಕುಳಿತು ಮೆರವಣಿಗೆ ತೆಕ್ಕೊಂಡ್ರೆ ಭಾವನಾತ್ಮಕವಾಗಿ ಬರೆಯುವ ಸಾಹಿತಿಗಳಿಗೆ ತುಂಬ ನೋವಾಗುತ್ತದೆ. ಮತ್ತು ಸಾಹಿತಿಗಳನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಬೆಲಿ ಬೆಳೆಯನ್ನು ರಕ್ಷಿಸಬೇಕು ಆದರೆ ಬೆಲಿಯೇ ಬೆಳೆ ಮೆಯ್ದರೆ ಹೇಗೆ ? ಮಠಾಧೀಶರು, ರಾಜಕಾರಣಿಗಳು ಸಾಹಿತ್ಯವನ್ನು ರಚಿಸಲು ಕವಿಗಳಿಗೆ ಪ್ರೊತ್ಸಾಹ ನೀಡಬೇಕು. ಅದು ಬಿಟ್ಟು ಅವರೆ
ಸಾಹಿತಿಗಳೆಂಬ ಹಮ್ಮು-ಬಿಮ್ಮಿನಲ್ಲಿ ಸಮ್ಮೆಳನಾಧ್ಯಕ್ಷರಾಗಿ ಮೆರವಣಿಗೆ ಮಾಡಿಕೊಂಡರೆ ಹೇಗೆ ? ಇರ‍್ಲಿ ! ಅವ್ರು ಪುಸ್ತಕ ಬರೆದು ಸೃಜನಶೀಲ ಸಾಹಿತಿಗಳಾಗಿದ್ದರೆ ಪರವಾಗಿಲ್ಲ. ಎಲ್ಲರ ಒಮ್ಮತದಿಂದ ಆಯ್ಕೆಯಾಗಲಿ. ಆದರೆ ಜನಗಳ ವಿರೋಧದ ಮಧ್ಯೆಯು ಸಮ್ಮೆಳನಾಧ್ಯಕ್ಷರಾಗಿ ಮೆರವಣಿಗೆ ಮಾಡಿಕೊಳ್ಳುವುದು ಸರಿಯೇ ? ಸಹಾಯ ಮಾಡಿದ್ದಿನಿ’ ಅಂತ ಸರ್ವಾಧ್ಯಕ್ಷರಾದರೆ ಬರೆಯುವವನ ಪೆನ್ನು ಕಸಿದುಕೊಂಡಂತಾಗುತ್ತದೆ.
ಇತ್ತಿಚಿನ ಕೆಲ ಸಾಹಿತ್ಯ ಸಮ್ಮೆಳನಗಳು ಕೂಡ ಅರ್ಥ ಕಳೆದುಕೊಳ್ಳುತ್ತಿವೆ. ಸಭೆ ಸಮಾರಂಭ ಉಪನ್ಯಾಸ ನಡೆಯುವ ಕಾರ್ಯಕ್ರಮಗಳೆಲ್ಲ `ಸಾಹಿತ್ಯ ಸಮ್ಮೆಳನ’ ಎಂಬ ಅನ್ವರ್ಥನಾಮ ಪಡೆದುಕೊಳ್ಳುತ್ತಿವೆ. ಕೆಲ ಖಾಸಗಿ ಸಂಘ, ಸಂಸ್ಥೆಯವರು ಸಂಸ್ಕçತಿ ಇಲಾಖೆ, ಗಡಿ ಪ್ರಾಧಿಕಾರ ಮೊದಲಾದ ಸರ್ಕಾರಿ ಅನುದಾನ ಬಳಕೆ ಮಾಡಿಕೊಂಡು ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಸಾಹಿತ್ಯ ಸಭೆ, ಕವಿಗೋಷ್ಠಿ, ಉಪನ್ಯಾಸದಂತಹ ಕಾರ್ಯಕ್ರಮಗಳಿಗೆ ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದ `ಸಾಹಿತ್ಯ ಸಮ್ಮೇಳನ’ ಅಂತ ವೈಭವಿಕರಿಸಿ ಬೇರೆ ಜಿಲ್ಲೆಯವರನ್ನು ಈ ಪ್ರದೇಶದಲ್ಲಿ ತಂದು ಸಮ್ಮೆಳನಾಧ್ಯಕ್ಷರನ್ನಾಗಿ ಮಾಡುವುದು ಕೆಟ್ಟ ಚಾಳಿ ಬಹುದಿನಗಳಿಂದ ನಡೆದು ಬರುತ್ತಿದೆ. ಮತ್ತೆ ಕೆಲವರು ದೊಡ್ಡ ದೊಡ್ಡ ಹೆಸರಿನ
ಪ್ರಶಸ್ತಿ ಪುರಸ್ಕಾರ ನೀಡಿ ದಾನ ಚಿಂತಾಮಣಿಯಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಸಾಹಿತಿಗಳಲ್ಲಿ ಬಣ,ಜಾತಿ,ಧರ್ಮದ ರಾಜಕೀಯ ಸುರುವಾದಗಿದ್ದರಿಂದ ಸಾಹಿತಿ ಮತ್ತು ಸಾಹಿತ್ಯ ಸಮ್ಮೆಳನಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ನಡೆಯುವ ಸಮ್ಮೆಳನಗಳ ಕವಿಗೊಷ್ಠಿಗಳಲ್ಲಿ ಭಾಗವಹಿಸಲು ಸಾಹಿತಿಗಳಲ್ಲದವರ ಹೆಸರು ಸಿಫಾರಸ್ಸು ಮಾಡಿ ಕಳಿಸುತ್ತಿದ್ದರು. ಈಗ ಅದೇ ಚಾಳಿ ಮುಂದುವರೆದಿದೆ. ಅಂದ್ರೆ ಸಾಹಿತಿ ಅಲ್ಲದವರನ್ನೆ ಅಲ್ಲಲ್ಲಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮೆರವಣಿಗೆ ಮಾಡಲಾಗುತ್ತಿದೆ. ಆಗ ಸುಮ್ಮನಾಗಿದಕ್ಕೆ ಈಗ ಈ ಸ್ಥಿತಿ ಬಂದೊದಗಿದೆ.
ಉದಯೋನ್ಮಖ ಬರಹಗಾರರು ಕವಿತೆ ಬರೆಯುತ್ತಿದ್ದಾರೆ. ಗದ್ಯವನ್ನೆ ಸರಿಯಾಗಿ ಬರೆಯಲು ಬಾರದವರು ಇಂದು ಚಿಕ್ಕ ಚಿಕ್ಕ ನಾಲ್ಕು ಸಾಲುಗಳಲ್ಲಿ ಬರೆದ ಅಕ್ಷರಗಳೆಲ್ಲ ಕವಿತೆ ಎನ್ನುತ್ತಾರೆ. ಮನಸ್ಸಿಗೆ ತೋಚಿದಂತೆ ತಲೆ ಬುಡ ಒಂದೂ ತಾಳೆಯಾಗದೆ ಗೀಚಿ `ಕವನ ಸಂಕಲನ’ ಬಿಡುಗಡೆ ಮಾಡುತ್ತಾರೆ. ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಪೆನ್ನು ಹಿಡಿದವರೆಲ್ಲ ಸಾಹಿತಿಗಳೆಂಬ ಫೋಜು ಕೊಡ್ತಿದ್ದಾರೆ. ಫೇಸ್ ಬುಕ್,ವಾಟ್ಸಪ, ಟ್ವಿಟ್ಟರನಲ್ಲಿ ಯಾರದೋ ಹೆಣ್ಣು ಮಗಳ ವೆಬ್ ಪೋಟೊ ಕದ್ದು ಅದರ ಕೆಳಗಿನ ಅಶ್ಲೀಲ ಸಾಲುಗಳೆಲ್ಲ ಇಂದು ಕವಿತೆಗಳಾಗಿ ಗೋಚರಿಸುತ್ತಿವೆ. ಅವಕ್ಕೆ ಲೈಕು, ಕಾಮೆಂಟ್ಸು ಬೇರೆ ಕೇಡು. ಈ ಜನರಿಗೆ ಬುದ್ಧಿ ಇಲ್ಲ. ಯಾಕೆಂದ್ರೆ ಅವರಿಗೆ ಸಾಹಿತ್ಯದ ಪೂರ್ಣ ಪರಿಜ್ಞಾನವಿಲ್ಲ. ಬರೆದವರೆ ಇಲ್ಲಿ ಸಾಹಿತಿಗಳು .ತಪ್ಪು ತಪ್ಪು ಬರೆದು ಪುಸ್ತಕ ಬೇರೆ ಪ್ರಕಟಿಸುತ್ತಾರೆ. ಆ ಪುಸ್ತಕದ ಬೆನ್ನುಡಿಗೆ ಪೆನ್ನು ಹಿಡಿದ ಪೋಟೊ ತುಂಬ ಸುಂದರವಾಗಿರುತ್ತದೆ. ಬರವಣಿಗೆಯ ಗಂಧ ಗಾಳಿ ಗೊತ್ತಿಲ್ಲದವರೆಲ್ಲ ಇಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಹಳೆ ತಲೆಮಾರಿನ ನನ್ನಂಥ ಸಾಹಿತಿಗಳಿಗೆ ಬೆಲೆ ಇಲ್ಲದಂತಾಗಿದೆ.” ಅಂತ ಬೀರ ಹತಾಸೆಗೊಂಡು ನಿಲ್ಲಲು ಆಗದೆ ಕುಡಿದ ಅಮಲಿನ ನಿಷೆಯಲ್ಲಿ ತರ‍್ಯಾಡುತ್ತಾ ಒಮ್ಮೆಲೆ ಕುಸಿದು ಬಿದ್ದು ಮೇಲೆಳಲು ಆಗದೆ ಬಿದ್ದಲ್ಲೆ ನೆಲ ಗುದ್ದತೊಡಗಿದ.
– ಮಚ್ಚೇಂದ್ರ ಪಿ.ಅಣಕಲ್*.