ಸಾಹಿತ್ಯದ ಪ್ರಕಾರಗಳು… ಹಾಗೆಂದರೇನು ?
ಸಾಹಿತ್ಯ ಸಂಗೀತ ಮತ್ತು ಕಲೆಗಳ ವಿಧಗಳನ್ನು ಪ್ರಕಾರ ಎಂದು ಕರೆಯುತ್ತೇವೆ.
ಉದಾಹರಣೆಗೆ ಸಂಗೀತದಲ್ಲಿ ಒಂದು ವಿಶೇಷವಾದ ಶೈಲಿ, ವಿಷಯ, ವಸ್ತುಗಳನ್ನು ಒಳಗೊಂಡ ವಿಧವನ್ನು ಪ್ರಕಾರ ಎಂದು ಕರೆಯುತ್ತೇವೆ.
ಭಾವಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ವಿಷಾದ ಗೀತೆ, ಯುಗಳ ಗೀತೆ ಎಂಬುದನ್ನು ಸ್ಥೂಲವಾಗಿ ಹೇಳಿದರೆ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆಗಳು, ಸುಗಮ ಸಂಗೀತ ವಾದ್ಯ ಸಂಗೀತ ಎಂದು ಮತ್ತೆ ಕೆಲ ವಿಧಗಳನ್ನು ಗುರುತಿಸುತ್ತೇವೆ.
ಅದೇ ರೀತಿ ಸಾಹಿತ್ಯದಲ್ಲಿ ಕಾವ್ಯ ನಾಟಕ, ಗದ್ಯ, ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ
ಎಂಬ ಐದು ಪ್ರಕಾರಗಳಿವೆ.
ಈ ಎಲ್ಲ ಪ್ರಕಾರಗಳಿಗೂ ಅವುಗಳದ್ದೇ ಆದ ರೀತಿಯ ಶೈಲಿಗಳಿದ್ದು ಅವು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರವನ್ನು ವಿಭಿನ್ನವಾಗಿ ಗುರುತಿಸಬಹುದು.
ಓದುಗರಿಗೂ ಕೂಡ ತಾವು ಯಾವ ಪ್ರಕಾರದ ಸಾಹಿತ್ಯವನ್ನು ಓದುತ್ತಿದ್ದೇವೆ ಎಂಬುದನ್ನು ತಿಳಿಯಲು ಇದು ಸಹಾಯಕವಾಗುವುದಲ್ಲದೆ ತಾವು ಓದುತ್ತಿರುವ ವಿಷಯದ ಅರಿವನ್ನು ಉಂಟು ಮಾಡುತ್ತದೆ. ಆ ಮೂಲಕ ಓದುಗರಿಗೆ ತಾವು ಯಾವ ವಿಷಯವನ್ನು ಆಯ್ಕೆ ಮಾಡಬೇಕೆಂಬ ಕುರಿತು ಹೆಚ್ಚಿನ ಜ್ಞಾನವನ್ನು ನೀಡುತ್ತದೆ.
ಕಾವ್ಯ…. ಎಂಬುದು ಸಾಹಿತ್ಯದ ಮುಖ್ಯವಾದ ಪ್ರಕಾರವಾಗಿದ್ದು ಎಲ್ಲ ಕಾವ್ಯಗಳು ತಮ್ಮದೇ ಆದ ವಿಶಿಷ್ಟ ಗುಣಗಳನ್ನು ಹೊಂದಿವೆ. ಕಾವ್ಯ ತನ್ನದೇ ಆದ ಲಯ ಮತ್ತು ಉಚ್ಚಾರವನ್ನು ಹೊಂದಿದ್ದು ಪ್ರತಿಯೊಂದು ಸಾಲು ವಿಶಿಷ್ಟವಾಗಿರುತ್ತದೆ.
ಕಾವ್ಯವು ಮತ್ತೆ ಮಹಾಕಾವ್ಯ, ನಿರೂಪಣೆ ಗಾಥೆ, ಪ್ರಣಯ ಕಾವ್ಯ, ನಾಟಕೀಯ ಇಲ್ಲವೇ ನೃತ್ಯ ಕಾವ್ಯ, ಮತ್ತು ಸಾಹಿತ್ಯ ಗೀತೆ ಎಂದು ವಿಭಾಗಿಸಲ್ಪಟ್ಟಿವೆ.
ನೃತ್ಯ ನಾಟಕ ಇಲ್ಲವೇ ಅಭಿನಯ ಗೀತೆ ಎಂಬ ಪ್ರಕಾರದಲ್ಲಿ ಹಾಸ್ಯ, ವೀರ,ವಿಷಾದ, ಮಧುರ ಪ್ರೇಮ ಮುಂತಾದವುಗಳನ್ನು ಒಳಗೊಂಡಿದ್ದರೆ ಇನ್ನುಳಿದ ಕೆಲವು ಪ್ರಗಾಥ ನಾಡಗೀತೆ, ಸುನೀತಗಳು, ಶೋಕ ಗೀತೆ ಮತ್ತು ಮಹಾಕಾವ್ಯಗಳ ನ್ನೊಳಗೊಂಡಿರುತ್ತವೆ.
ರಾಮಾಯಣ ಮಹಾಭಾರತದ ಕುರಿತಾದ ಕಾವ್ಯಪ್ರಸಂಗಗಳು, ನಳ-ದಮಯಂತಿ,ಕಾಳಿದಾಸ ಶಾಕುಂತಲೆಯ ಪ್ರಣಯ ಪ್ರಸಂಗಗಳು, ಜಾನಪದ ಕಲಾಪ್ರಕಾರಗಳ ಕಥೆಗಳು ನೃತ್ಯ ರೂಪಕಗಳು ಹೀಗೆ ಹತ್ತು ಹಲವು ವಿಧಗಳಲ್ಲಿ ಕಾವ್ಯ ಒಡಮೂಡುತ್ತದೆ.
ನಮ್ಮ ಕನ್ನಡ ಸಾಹಿತ್ಯದಲ್ಲಂತೂ ಮೂರು ಸಾಲಿನ ತ್ರಿಪದಿಗಳು, ನಾಲ್ಕು ಸಾಲಿನ ಚತುಷ್ಪದಿಗಳು, ಐದು ಸಾಲಿನ ಪಂಚಪದಿಗಳು, ಆರು ಸಾಲಿನ ಷಟ್ಪದಿಗಳು ಮತ್ತು ಹದಿನಾಲ್ಕು ಸಾಲಿನ ಸುನೀತಗಳು ಹೀಗೆ ಹತ್ತು ಹಲವು ವಿಧಗಳಿದ್ದು ಜಾನಪದ ಕಲಾ ಪ್ರಕಾರವೂ ಕೂಡ ಅವುಗಳಲ್ಲಿ ಒಂದಾಗಿದೆ. ಈ ಎಲ್ಲಾ ಕಾವ್ಯ ಪ್ರಕಾರಗಳಿಗೆ ಅದರದ್ದೇ ಆದ ವಿಶೇಷ ಶೈಲಿಗಳು ಮತ್ತು ವಾಕ್ಯ ರಚನೆ, ಸಾಲುಗಳು, ಗೇಯ, ಪ್ರಾಸ, ಮತ್ತು ಛಂದಸ್ಸುಗಳನ್ನು ಹೊಂದಿರುತ್ತವೆ. ಮತ್ತೆ ಕೆಲ ಕವನಗಳು ಯಾವುದೇ ರೀತಿಯ ಶೈಲಿಯನ್ನು ಒಳಗೊಳದೆ ಇದ್ದರೂ ಭಾವನಾತ್ಮಕವಾಗಿದ್ದು ಓದುಗರ ಮನ ಸೆಳೆಯುತ್ತವೆ. ಇದೆಲ್ಲದರ ಹೊರತಾಗಿಯೂ ಕಾವ್ಯವು ರೂಪಕ,ಹೋಲಿಕೆ, ಉಪಮೆ, ಉಪಮಾನ, ಉಪಮೇಯಗಳನ್ನು ಹೊಂದಿದ್ದು, ವ್ಯಾಖ್ಯಾನಗಳನ್ನು ಕೂಡ ಒಳಗೊಂಡಿದ್ದು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.
ಉದಾಹರಣೆಗೆ ಹಿಟ್ಟು ಚೆಲ್ಲಿದಂತಹ ಬೆಳದಿಂಗಳು,
ಕಮಲದಂತಹ ಕಣ್ಣುಳ್ಳವಳು ಕಮಲಾಕ್ಷಿ, ಮೀನಿನಂತಹ ಕಣ್ಣುಳ್ಳವಳು ಮೀನಾಕ್ಷಿ ಇತ್ಯಾದಿ.
ನಾಟಕ…. ಪ್ರೇಕ್ಷಕರ ಎದುರು ಆಡಿ ತೋರಿಸಬಹುದಾದ ನಟನೆಯ ಒಂದು ವಿಧಾನದ ಲೇಖನ ಪ್ರಕಾರವನ್ನು ನಾಟಕ ಎಂದು ಕರೆಯಬಹುದು. ಇಲ್ಲಿ ಬರೆದಿರುವ ಎಲ್ಲ ಪಾತ್ರಗಳ ಮಾತುಗಳು ಸಂಭಾಷಣೆಯ ರೂಪದಲ್ಲಿದ್ದು ವೇದಿಕೆಯ ಮೇಲೆ ಅಭಿನಯಿಸುವ ಮೂಲಕ ಇವುಗಳನ್ನು ಪ್ರದರ್ಶಿಸಬಹುದಾದ ಪ್ರಭಾವಶಾಲಿ ಮಾಧ್ಯಮ ನಾಟಕ. ನಾಟಕಗಳಲ್ಲಿ ಹಾಸ್ಯ ರಸ,ವೀರ ರಸ ಮತ್ತು ದುಃಖಗಳನ್ನು ಒಳಗೊಂಡ ನಾಟಕಗಳಿದ್ದು ಇಂಗ್ಲಿಷಿನ ಖ್ಯಾತ ನಾಟಕಕಾರ ವಿಲಿಯಂ ಷೇಕ್ಸ ಪಿಯರನನ್ನು ‘ಇಂಗ್ಲೀಷ್ ನಾಟಕ ಸಾಹಿತ್ಯದ ಪಿತಾಮಹ’ ಎಂದು ಕರೆದಿದ್ದಾರೆ.
ರೋಮಿಯೋ ಜೂಲಿಯೆಟ್, ಹ್ಯಾಮ್ಲೆಟ್ ನಂತಹ ನಾಟಕಗಳು ವಿಶ್ವ ಪ್ರಸಿದ್ಧವಾಗಿವೆ.
ನಮ್ಮ ಭಾರತೀಯ ಪರಂಪರೆಯಲ್ಲಂತೂ ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ
ಮಹಾಕಾವ್ಯಗಳ ನೃತ್ಯ ರೂಪಕಗಳು, ರಾಧಾಕೃಷ್ಣರ ನೃತ್ಯ ಗೀತೆಗಳು, ಜಾನಪದ ಕಥನ ಕಾವ್ಯಗಳು ಹೀಗೆ ಹತ್ತು ಹಲವು ವಿಧಗಳು ಚಾಲ್ತಿಯಲ್ಲಿವೆ. ದೊಡ್ಡಾಟ, ಸಣ್ಣಾಟ,ಬಯಲಾಟ, ಯಕ್ಷಗಾನದಂತಹ ವಿವಿಧ ಪ್ರದರ್ಶನ ಪ್ರಕಾರಗಳು ಕರ್ನಾಟಕ ರಾಜ್ಯದ ಆಯಾ ಭಾಗಗಳಲ್ಲಿ ಪ್ರಚಲಿತವಾಗಿವೆ.
ಗದ್ಯಗಳು… ಕಾವ್ಯದಿಂದ ಸಂಪೂರ್ಣ ವಿಭಿನ್ನವಾಗಿರುವ ಸಮರ್ಪಕ ವಾಕ್ಯಗಳಿಂದ ಕೂಡಿದ, ಪ್ಯಾರಾಗಳನ್ನು ಹೊಂದಿರುವ ಗದ್ಯಗಳಲ್ಲಿ ಕಥೆ, ನಾಟಕ, ವ್ಯಕ್ತಿ ಚಿತ್ರಣ,ವೈಚಾರಿಕ ಬರಹ, ಲೇಖನಗಳು, ಹಾಸ್ಯ, ಹರಟೆಗಳು, ರಸಾಯನಗಳು, ಪ್ರವಾಸ ಲೇಖನ, ಪೌರಾಣಿಕ ಕಥೆಗಳು, ಕಾದಂಬರಿಗಳು ಹೀಗೆ ಹತ್ತು ಹಲವು ವಿಧಗಳನ್ನು ನಾವು ಕಾಣಬಹುದು. ಸಣ್ಣ ಕಥೆಗಳು ಕಾದಂಬರಿಗಳು ನೈಜ ಕಥೆಗಳು ಮತ್ತು ಅವುಗಳಲ್ಲಿ ಹಲವು ವಿಧಗಳನ್ನು ನಾವು ಇಲ್ಲಿ ಕಾಣಬಹುದು ಗದ್ದೆಗಳಲ್ಲಿ ಪ್ರಬಂಧ, ನಿಬಂಧ, ಭಾಷಣ, ಉಪದೇಶಗಳು, ವಾಖ್ಯಾನಗಳು ಹೀಗೆ ಹತ್ತು ಹಲವು ವಿಧಗಳನ್ನು ನಾವು ಗದ್ಯಸಾಹಿತ್ಯದಲ್ಲಿ ನಾವು ಕಾಣುತ್ತೇವೆ.
ಕಾಲ್ಪನಿಕ
ನಾವೇ ಊಹಿಸಿಕೊಂಡು ಬರೆಯುವ ಲೇಖನಗಳನ್ನು ಕಾಲ್ಪನಿಕ ಎಂದು ಕರೆಯುತ್ತೇವೆ.
ಈ ಪ್ರಕಾರದಲ್ಲಿ ನೈಜ, ಅರೆ ನೈಜ ಮತ್ತು ನೈಜವಲ್ಲದ ಕಲ್ಪನೆಗಳು ಎಂಬ ಮೂರು ವಿಧಗಳಿವೆ. ಸಾಮಾನ್ಯವಾಗಿ ಹೆಸರೇ ಹೇಳುವಂತೆ ಕಾಲ್ಪನಿಕ ಪ್ರಕಾರದಲ್ಲಿ ನೈಜತೆ ಇರುವುದಿಲ್ಲ. ಬರಹಗಾರನ ಊಹೆಯು ಪ್ರಮುಖ ಪಾತ್ರ ವಹಿಸುವ ಕಾಲ್ಪನಿಕ ಕಥೆಗಳಲ್ಲಿ ವ್ಯಕ್ತಿಯೋರ್ವ ಅರೆ ಕ್ಷಣದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರಬಲ್ಲ, ಮಂಗಳನಲ್ಲಿ ಮನೆ ಮಾಡಿ ಜೀವಿಸಿದ್ದಾನೆ, ಹಲವಾರು ಶತಮಾನಗಳ ಹಿಂದೆ ಇಲ್ಲವೇ ಮುಂದೆ ಸುತ್ತಾಡಿ ಬರುತ್ತಾನೆ ಎಂಬ ಕಲ್ಪನೆಗೂ ಅವಕಾಶ ಇರುತ್ತದೆ ಎಂದರೆ ಕಾಲ್ಪನಿಕ ಶಕ್ತಿಯ ಅಗಾಧತೆಯ ಆಳ, ಅಗಲ, ಹಿರಿಮೆ ಗರಿಮೆಗಳ ಹರಹು ಅರ್ಥವಾಗಬಹುದು. ಲೇಖಕರು ತಮ್ಮ ಕಾಲ್ಪನಿಕ ಶಕ್ತಿಯನ್ನು ಉಪಯೋಗಿಸಿ ಸಾಂಕೇತಿಕ ಭಾಷೆಯ ಮೂಲಕ ಓದುಗರ ಕಲ್ಪನಾ ಶಕ್ತಿಗೆ ಸವಾಲೊಡ್ಡಬಹುದು, ಮನಸ್ಸನ್ನು ತಟ್ಟಬಹುದು.
ಕಾವ್ಯದಂತಲ್ಲದೆ ಗದ್ಯವೂ ತನ್ನದೇ ಆದ ಸಾಹಿತ್ಯ ಮತ್ತು ವ್ಯಾಕರಣದ ರಚನೆಯನ್ನು ಹೊಂದಿದ್ದು ಸರಿಯಾದ ವಾಕ್ಯ ರಚನೆ ಗದ್ಯದ ಶೈಲಿ ಆಗಿರುತ್ತದೆ.
ನಮ್ಮ ದೈನಂದಿನ ಜೀವನದ ಅದ್ಭುತ ಕಲ್ಪನಾ ಶಕ್ತಿಯ ಕಾಲ್ಪನಿಕ ಕಥೆಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು ಕಥಾ ಹಂದರ, ನಿರೂಪಣೆ, ಮುನ್ಸೂಚನೆ, ಕ್ರಿಯಾತ್ಮಕತೆ ಅಂತಿಮ ದೃಶ್ಯ ಮತ್ತು ಪರಿಹಾರಗಳನ್ನು ಒಳಗೊಂಡಿರುತ್ತದೆ.
ಕಾಲ್ಪನಿಕವಲ್ಲದ ಪ್ರಕಾರವನ್ನು ಅಕಾಲ್ಪನಿಕ ಅಥವಾ ನಾನ್ ಫಿಕ್ಷನ್ ಎಂದು ಕರೆಯುವ ಈ ಪ್ರಕಾರದಲ್ಲಿ ಪ್ರಬಂಧ, ಸಂಶೋಧನಾ ಲೇಖನ, ವೈಜ್ಞಾನಿಕ ಬರಹ, ಸಾಂಕೇತಿಕ ವಿಷಯಗಳನ್ನು ಒಳಗೊಂಡ ಲೇಖನ ಎಂದು ಹಲವಾರು ವಿಭಾಗಗಳಲ್ಲಿ ಬರೆಯಬಹುದು. ಇದು ಕೂಡ ಗದ್ಯದ ಒಂದು ಪ್ರಕಾರವಾಗಿದ್ದು ನಾನ್ ಫಿಕ್ಷನ್ನಲ್ಲಿಯೂ ಕೂಡ ಕಥೆಯನ್ನು ಹೇಳಬಹುದು. ಕಥೆಗಳು ಆತ್ಮ ಕತೆಗಳು, ಮಾಹಿತಿಗಳನ್ನು ನೀಡುವ ಕಾಲ್ಪನಿಕವಲ್ಲದ ಈ ಪ್ರಕಾರದಲ್ಲಿ ಆತ್ಮಕಥೆಗಳು ಡೈರಿಗಳು, ನೆನಪುಗಳು, ಪ್ರಬಂಧಗಳು, ರಹಸ್ಯ ಪ್ರಣಯ ಮತ್ತು ಅದ್ಭುತ ವಿಷಯಗಳು ಹೀಗೆ ನಾನ್ ಪಿಕ್ಸನ್ ಕೂಡ ವಿಪುಲ ಸಾಹಿತ್ಯದ ಭಂಡಾರವೇ ಆಗಿವೆ.
ಸಾಹಿತ್ಯ ಪ್ರಕಾರಗಳ ಕಾರ್ಯ… ಸಾಹಿತ್ಯದ ವಿವಿಧ ಪ್ರಕಾರಗಳು ತಮ್ಮದೇ ಆದ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಕಾಲ್ಪನಿಕ ಮತ್ತು ನಾಟಕೀಯ ಶೈಲಿಗಳು ತಮ್ಮ ಸಂಭಾಷಣ ಶೈಲಿಯಿಂದ ವಿದ್ಯಾರ್ಥಿಗಳಲ್ಲಿ ಸಂವಹನ ಕಲೆಯ ಜಾಣ್ಮೆಯನ್ನು ಬೆಳೆಸುತ್ತವೆ. ಕಾವ್ಯ ಶೈಲಿಯು ಕವಿಯ ಕಲ್ಪನಾ ಶಕ್ತಿ ಮತ್ತು ಓದುಗರ ಭಾವನಾ ಶಕ್ತಿಯನ್ನು
ಏಕಕಾಲದಲ್ಲಿ ಉತ್ತೇಜಿಸುತ್ತದೆ.
ಕಾಲ್ಪನಿಕ ವಲ್ಲದ ಕೃತಿಗಳು ಓದುಗರ ಗ್ರಹಣ ಶಕ್ತಿಯನ್ನು ಮತ್ತು ತಿಳುವಳಿಕೆಯ ಶಕ್ತಿಯನ್ನು ಹೆಚ್ಚಿಸುತ್ತವೆ.
ಸಾಹಿತ್ಯದ ಪ್ರಕಾರಗಳು ಮುಖ್ಯವಾಗಿ ಬರಹಗಾರರು ಮತ್ತು ಓದುಗರ ನಡುವೆ ಒಂದು ತಂತುವಿನಂತೆ ಕಾರ್ಯನಿರ್ವಹಿಸುತ್ತವೆ.ಇಂದಿಗೂ ಕೂಡ ಸಾಮಾಜಿಕ ಜಾಲತಾಣಗಳ,ಕಣ್ಮನ ಸೆಳೆಯುವ ಚಾನೆಲ್ಗಳ ವಿವಿಧ ಕಾರ್ಯಕ್ರಮಗಳ ನಡುವೆ ಪುಸ್ತಕಗಳು, ಪತ್ರಿಕೆಗಳು ತಮ್ಮ ಮುಂಚಿನ ಹೊಳಪನ್ನು ಕಳೆದುಕೊಂಡಿದ್ದರೂ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರುವುದು ಸಾಹಿತ್ಯದಲ್ಲಿರುವ ಶಕ್ತಿಯಿಂದಲೇ ಎಂದರೆ ತಪ್ಪಿಲ್ಲ.
ಒಂದಿಡೀ ಜನಾಂಗದ ಕುರಿತು ನಾವು ಅರಿಯಲು ಸಾಧ್ಯವಾಗುವುದು, ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಹಿತ್ಯ ಒಂದು ಮಾಧ್ಯಮವಾಗಿ ಇಂದಿಗೂ ನೆಲೆ ನಿಲ್ಲಲು ಕಾರಣ ಸಾಹಿತ್ಯದಲ್ಲಿರುವ ಅಂತಃಶಕ್ತಿಯ ಸೆಲೆ ಬತ್ತಿಲ್ಲ ಎಂಬುದಕ್ಕೆ ಸಾಕ್ಷಿ.
ಜಗತ್ತಿನಾದ್ಯಂತ ಸಾಹಿತ್ಯದ ವಿವಿಧ ಪ್ರಕಾರದ ಕೋಟ್ಯಂತರ ಪುಸ್ತಕಗಳು ಮತ್ತೆ ಮತ್ತೆ ಮುದ್ರಣಗೊಳ್ಳುತ್ತಲೇ ಇರುವುದು ನಮ್ಮ ಜನರಲ್ಲಿನ ಸಾಹಿತ್ಯದ ಅಭಿರುಚಿಯಿಂದ…
ಸಾಹಿತ್ಯ ಎಂಬ ಚಿನ್ನದ ಹೊಳಪು ಮಾಸಿದೆ ಆದರೆ ಅದರ ಬೆಲೆ ಮಾತ್ರ ಎಂದು ಕಡಿಮೆಯಾಗುವುದಿಲ್ಲ.
ಸಾಹಿತ್ಯ ಎಂಬುದು 24 ಕ್ಯಾರೆಟ್ ಅಪರಂಜಿ ಚಿನ್ನ ಎಂದು ಹೆಮ್ಮೆಯಿಂದ ಸಾರೋಣ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.