ಸಕಾರಾತ್ಮಕ ಚಿಂತನೆ
ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಈಜುಗಾರ ಎಂದು ಹೆಸರಾಗಿರುವ ಮೈಕಲ್ ಫಿಲಿಪ್ಸ್ ನ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಲಂಪಿಕ್ ನಲ್ಲಿ 23 ಚಿನ್ನದ ಪದಕಗಳನ್ನು ಪಡೆದಿರುವ ವಿಶ್ವದ ಸರ್ವ ಶ್ರೇಷ್ಠ ಈಜುಗಾರನಾಗಲು
ಆತ ಸಾಕಷ್ಟು ಬೆವರಿಳಿಸಿದ್ದು ನಿಜ… ಆತನ ಈ ಯಶಸ್ವಿಗೆ ಆತನ ಸುಸ್ಥಿರ ಮನಸ್ಥಿತಿಯೇ ಕಾರಣವಾಗಿತ್ತು ಎಂದರೆ ತಪ್ಪಿಲ್ಲ.
ತನ್ನದೇ ಆದ ತರಬೇತಿಯ ಶೈಲಿಯನ್ನು ಹೊಂದಿದ್ದ
ಮೈಕಲ್ ಪ್ರತಿದಿನ 13 ಕಿಲೋಮೀಟರ್ನಂತೆ ವಾರದಲ್ಲಿ ಆರರಿಂದ ಏಳು ದಿನವೂ ಈಜುತ್ತಿದ್ದ. ಕಡಿಮೆ ಎಂದರೂ 80 ಸಾವಿರ ಮೀಟರ್ ದೂರವನ್ನು ಒಂದು ವಾರಕ್ಕೆ ಪೂರೈಸುವ ಆತನ ಗುರಿ ಎಂದೂ ತಪ್ಪುತಿರಲಿಲ್ಲ. ಪ್ರತಿದಿನ ಐದರಿಂದ ಆರು ಗಂಟೆಯವರೆಗೆ ಈಜುಕೊಳದಲ್ಲಿಯೇ ತನ್ನ ತರಬೇತಿಯಲ್ಲಿ ಕಳೆಯುತ್ತಿದ್ದ ಆತ ಭಾನುವಾರಗಳಲ್ಲಿ ಕೂಡ ಸಾಧ್ಯವಾದಷ್ಟು ತನ್ನ ತರಬೇತಿಯನ್ನು ತಪ್ಪಿಸುತ್ತಿರಲಿಲ್ಲ.
ಆದರೆ ಕೇವಲ ನಿರಂತರ ತರಬೇತಿ ಮಾತ್ರ ಆತನ ಯಶಸ್ಸಿಗೆ ಕಾರಣವಾಗಿರಲಿಲ್ಲ. ಪ್ರತಿದಿನ ರಾತ್ರಿ ಮಲಗುವಾಗ ಮೈಕಲ್ ತಾನು ಇದುವರೆಗೂ ಸ್ಪರ್ಧಿಸಿದ ಎಲ್ಲ ಈಜು ಸ್ಪರ್ಧೆಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಂಡು ನೆನಪುಗಳನ್ನು ತಾಜಾ ಮಾಡಿಕೊಳ್ಳುತ್ತಿದ್ದ.
ಸರಿಯಾಗಿ ನೀರಿನಲ್ಲಿ ಹಾರುವುದು, ಜನರ ಉತ್ಸಾಹ ಮತ್ತು ಗದ್ದಲ, ತೀವ್ರ ಗತಿಯಲ್ಲಿ ತನ್ನ ಕೈಕಾಲುಗಳನ್ನು ತಾನು ಚಲಿಸುತ್ತಾ ಮುಂದೆ ಸಾಗುವುದು ಮತ್ತು ನೀರಿನ ಸಾನಿಧ್ಯದ ಲ್ಲಿನ ಆನಂದವನ್ನು ಪುನಃ ಪುನಃ ಸ್ಮರಿಸಿಕೊಳ್ಳುತ್ತಿದ್ದನು.
ಇದರ ಜೊತೆಗೆ ಈಜುವಾಗ ತಾನು ಧರಿಸಿದ ಗಾಗಲ್ಸ್ ಗಳಲ್ಲಿ ನೀರು ತುಂಬಿಕೊಳ್ಳುವುದು, ಸರಿಯಾಗಿ ಹಾರಲು ಸಾಧ್ಯ ವಾಗದ ಸಂದರ್ಭ ಮತ್ತು ಆ ಸಮಯದಲ್ಲಿ ತನ್ನ ಈಜುವ ಗತಿಯಲ್ಲಿನ ವ್ಯತ್ಯಾಸಗಳನ್ನು ಕೂಡ ಆತ ಕಣ್ಣ ಮುಂದೆ ತಂದುಕೊಳ್ಳುತ್ತಿದ್ದ.
ವೈಜ್ಞಾನಿಕ ಮಾಹಿತಿಯ ಪ್ರಕಾರ ನಮ್ಮ ಮೆದುಳಿಗೆ ಕಲ್ಪನೆ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸದಿಲ್ಲ.ನಾವು ಏನನ್ನು ಕಲ್ಪಿಸಿಕೊಳ್ಳುತ್ತವೆಯೋ ಅದನ್ನು ನಮ್ಮ ಮೆದುಳು ನಿಜ ಎಂದು ಗ್ರಹಿಸುತ್ತದೆ. ಈ ರೀತಿಯ ನಿರಂತರವಾದ ಅಭ್ಯಾಸವನ್ನು ನಾವು ನಮ್ಮ ಕೋಣೆಯಲ್ಲಿ ಇದ್ದುಕೊಂಡೇ ಮಾಡುವ ಮೂಲಕ ನಮ್ಮ ಸಕಾರಾತ್ಮಕ ಕಲ್ಪನಾ ಶಕ್ತಿಯನ್ನು ಕ್ರಿಯಾಶೀಲವಾಗಿಸಿ ನಮ್ಮ ನರವ್ಯೂಹವನ್ನು ಚಟುವಟಿಕೆ ಯಲ್ಲಿರಿಸಿಕೊಳ್ಳಬಹುದು.
ಈ ರೀತಿಯ ನಿರಂತರ ಪ್ರಕ್ರಿಯೆಯಿಂದ ನಮ್ಮ -ಮನಸ್ಸಿನ ಆತಂಕ ಮತ್ತು ಉದ್ವೇಗಗಳು ಕಡಿಮೆಯಾಗುವುದು.
ಪ್ರದರ್ಶನದಲ್ಲಿ ಹೆಚ್ಚಿನ ಪ್ರಗತಿ ಸಾಧನೆ ಸ್ನಾಯುಗಳ ಬಲವರ್ಧನೆಯ ನೆನಪುಗಳನ್ನು ಪದೇ ಪದೇ ನೆನಪು ಮಾಡಿಕೊಳ್ಳುವ ಮೂಲಕ ಮಾನಸಿಕವಾಗಿ ಸಕಾರಾತ್ಮಕತೆಯನ್ನು ಅನುಭವಿಸುವುದು.
ಚೀನಾ ದೇಶದ ಬೀಜಿಂಗ್ ನಲ್ಲಿ ನಡೆದ 2018ರ ಒಲಂಪಿಕ್ ಪಂದ್ಯಾವಳಿಗಳಲ್ಲಿ ಎರಡು ನೂರು ಮೀಟರ್ ಬಟರ ಫ್ಲೈ ಈಜು ಪಂದ್ಯಾವಳಿಯಲ್ಲಿ ಅರ್ಧದಾರಿ ತಲುಪುವಷ್ಟರಲ್ಲಿ ಮೈಕೆಲ್ನ ಗಾಗಲ್ಸ್ ಗಳಲ್ಲಿ ನೀರು ತುಂಬಿಕೊಂಡಿತ್ತು. ಬಹಳಷ್ಟು ಬಾರಿ ಇದು ಈಜುಗಾರರಲ್ಲಿ ಹೃದಯ ಬಡಿತವನ್ನು ಹೆಚ್ಚಿಸಿ ಧೈರ್ಯವನ್ನು ಕುಂದಿಸುತ್ತದೆ. ಆದರೆ ಮೈಕಲ್ ಎದೆ ಗುಂದಲಿಲ್ಲ. ತನ್ನೆಲ್ಲ ಧೈರ್ಯವನ್ನು ಒಗ್ಗೂಡಿಸಿಕೊಂಡು ಆತನು ಈ ಹಿಂದೆ ಈಜುವಾಗ ಎಷ್ಟು ಬಾರಿ ಕೈ ಪಡೆದು ಮುಂದೆ ಚಲಿಸುತ್ತಿದ್ದೇನೆ ಎಂಬುದನ್ನು ಮನಸ್ಸಿನಲ್ಲಿ ಪರಿಕಲ್ಪನೆ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಿ ಈಗಲೂ ಕೂಡ ಮಾನಸಿಕವಾಗಿ ತನ್ನ ಆಟದ ಕುರಿತು ಕಲ್ಪನೆ ಮಾಡಿಕೊಂಡಿದ್ದ ಪರಿಣಾಮವಾಗಿ ಆತ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮಂಚೂಣಿಯಲ್ಲಿದ್ದು ಚಿನ್ನದ ಪದಕವನ್ನು ಗಳಿಸಿದ್ದ.
ಸ್ನೇಹಿತರೇ,ಇದು ನಮ್ಮ ಬದುಕಿಗೂ ಅನ್ವಯಿಸುತ್ತದೆ.ಸದಾ ಮನದಲ್ಲಿ ಕೆಟ್ಟ ವಿಚಾರಗಳನ್ನು ಮೂಡಿಸಿಕೊಂಡು ಏನಾದರೂ ಆಗಿಬಿಡಬಹುದು ಎಂದು ಆತಂಕ ಪಡುವ ಸಾಕಷ್ಟು ಜನರನ್ನು ನಾವು ಬದುಕಿನಲ್ಲಿ ಕಾಣುತ್ತೇವೆ. ಈ ಹಿಂದೆ ನಮ್ಮ ಹಿರಿಯರು ಅಬದ್ಧವಾದ ಮಾತುಗಳನ್ನು ಆಡಿದಾಗ ‘ಒಳಿತು ಎನ್ನು’ ಎಂದು ಬೈಯುತ್ತಿದ್ದರು. ಹಿಂದಿ ಮಾತನಾಡುವ ಜನರು ‘ಶುಭ ಶುಭ ಬೋಲೋ’ ಎಂದು ಹೇಳುತ್ತಾರೆ. ಒಳ್ಳೆಯದನ್ನೇ ಮಾತಾಡು, ಒಳ್ಳೆಯದನ್ನೇ ಯೋಚಿಸು ಒಳ್ಳೆಯದನ್ನೇ ಕೇಳು ಎಂಬ ಮಾತನ್ನು ಸನಾತನ ಕಾಲದಿಂದ ಕೇಳುತ್ತಾ ಬಂದಿದ್ದೇವೆ. ಒಳ್ಳೆಯ ಮಾತನ್ನು ಆಡುವುದರಿಂದ ದೊಡ್ಡ ದುರ್ಘಟನೆಗಳು ತೊಂದರೆಗಳು ಬರುವುದಿಲ್ಲ ಎಂದಲ್ಲ, ಕೆಟ್ಟ ವಿಚಾರಗಳು ಮನಸ್ಸನ್ನು ಕೆಡಿಸಿ ಹಾಳು ಮಾಡುತ್ತವೆ. ಹಾಳಾದ ಮನಸ್ಥಿತಿಯಲ್ಲಿ ಅವಘಡಗಳು ಸಂಭವಿಸುವುದು ಸಹಜ.
ಮನಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ… ಸಕಾರಾತ್ಮಕತೆಯು ನಮ್ಮ ತನುಮನಗಳಲ್ಲಿ ಧನಾತ್ಮಕ ಶಕ್ತಿಯನ್ನು ಸಂಚಯಿಸಿ ಹುರುಪನ್ನು, ಉತ್ಸಾಹವನ್ನು ತುಂಬುತ್ತದೆ. ಸಕಾರಾತ್ಮಕ ತೆಯು ನಮ್ಮನ್ನು ಅರಿವಿನ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ.
ಉದಾಹರಣೆಗೆ “ಇಂದೇಕೋ ನನ್ನ ಆರೋಗ್ಯ ಸರಿಯಿಲ್ಲ ನಾನು ವಾಹನವನ್ನು ಚಲಾಯಿಸಿದರೆ ಅದನ್ನು ನಿಯಂತ್ರಣ ಮಾಡಲು ನನಗೆ ಸಾಧ್ಯವಾಗುತ್ತದೆಯೇ? ಎಂದು ಚಿಂತಿಸುವ ಮನುಷ್ಯ ರಸ್ತೆಯಲ್ಲಿ ಹೋಗುವಾಗ ತನ್ನ ನಕಾರಾತ್ಮಕ ಚಿಂತನೆಗಳಿಂದ ತಡಬಡಾಯಿಸಬಹುದು. ವಾಹನದ ಮೇಲಿನ ನಿಯಂತ್ರಣ ತಪ್ಪಿ ಹೋಗಬಹುದು ಅವಘಡ ಸಂಭವಿಸಲೂಬಹುದು.
ಮರದ ಮೇಲೆ ಹತ್ತಿ ಕುಳಿತ ಮಗುವನ್ನು ಬಿದ್ದು ಬಿಡುವೆ ಹುಷಾರು ಎಂದು ತಾಯಿ ಹೇಳಿದಾಗ ಮಗು ಬೀಳುವುದನ್ನು ಕಲ್ಪಿಸಿಕೊಂಡರೆ, ಗಟ್ಟಿಯಾಗಿ ಹಿಡಿದುಕೋ ಎಂದು ಹೇಳಿದ ಮತ್ತೊಬ್ಬ ತಾಯಿಯ ಮಗು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಇದನ್ನೇ ನಮ್ಮ ಹಿರಿಯರು ‘ಜೈಸಾ ಮನ್ ವೈಸಾ ಅನ್ನ’ ಎಂದು ಹೇಳುತ್ತಾರೆ. ಮನೆಯಲ್ಲಿ ಅಡುಗೆ ಮಾಡುವಾಗ ತಾಯಂದಿರ ಮನಸ್ಸು ಪ್ರಶಾಂತವಾಗಿ, ಪ್ರಫುಲ್ಲಿತವಾಗಿರಬೇಕು. ಪ್ರೀತಿಪೂರ್ವಕವಾಗಿ ಮಾಡಿದ ಅಡುಗೆ ತನ್ನದೇ ಆದ ಸ್ವಾದಿಷ್ಟ ರುಚಿಯನ್ನು ಪಡೆದುಕೊಂಡರೆ, ಅಯ್ಯೋ ಮಾಡಬೇಕಲ್ಲ! ಎಂಬ ಭಾವದಿಂದ ಮಾಡಿದ ಅಡುಗೆ ಅದೆಷ್ಟೇ ಮಸಾಲೆ ಪದಾರ್ಥಗಳನ್ನು ಹಾಕಿ ಮಾಡಿದರೂ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ.
ತಾಯಿ ತನ್ನ ಮಗು ಇನ್ನಷ್ಟು ಹೆಚ್ಚು ತಿನ್ನಲಿ ಎಂಬ ಆಸೆಯಿಂದ ತುಸು ದೊಡ್ಡ ಗಾತ್ರದ ರೊಟ್ಟಿಯನ್ನು ಮಾಡಿದರೆ ಅಡುಗೆ ಕೆಲಸದಾಕೆ ಅದೆಷ್ಟು ತಿಂತಾರಪ್ಪ, ಮತ್ತೆ ಮಾಡಬೇಕಲ್ಲ ಎಂಬ ಬೇಸರದ ಭಾವದಿಂದ ಮಾಡುತ್ತಾಳೆ. ಹೆಚ್ಚು ಆಹಾರವನ್ನು ಸೇವಿಸಿದರೆ ಆಕೆಗೆ ಕೆಲಸ ಹೆಚ್ಚಾಗುತ್ತದೆಯಲ್ಲವೇ?
ಇದನ್ನೆಲ್ಲಾ ಮನಗಂಡೇ ನಮ್ಮ ಹಿರಿಯರು ‘ಮನಸ್ಸೇ ಮಹಾದೇವ’ ಎಂದು ಹೇಳಿರಬೇಕು… ಅಲ್ಲವೇ ಸ್ನೇಹಿತರೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.