ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು.
-ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ.
ಭೂಮಿ ಹುಟ್ಟಿದಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ,ಈ ಮನುಷ್ಯ ಪ್ರಾಣಿಯ ಹುಟ್ಟು ,ಬೆಳವಣಿಗೆ, ಇರುವಿಕೆ ,ಅಂದಿನ ಸ್ಥಿತಿಗತಿ ಬಗ್ಗೆ ನೋಡಿದಾಗ ಮಾನವ ಅಲೆಮಾರಿ ಜೀವನದಿಂದ ನೆಲೆ ನಿಲ್ಲಲು ಕಲಿತದ್ದು, ತನ್ನ ರಕ್ಷಣೆ ,ತನ್ನ ಅವಲಂಬಿತರ ರಕ್ಷಣೆಗಾಗಿ, ಗೂಡು, ಗುಡಿಸಲು, ಮನೆ, ಚಪ್ಪರ ಹೀಗೆ ತನ್ನ ನೆಲೆ ಕಟ್ಟಿಕೊಳ್ಳುತ್ತಾ, ಕುಟುಂಬ ಜೀವನಕ್ಕೆ ಕಾಲಿಟ್ಟು, ಹಾಗೆಯೇ ಕುಟುಂಬ, ಸಂಸಾರ ,ಮನೆ ,ಕೇರಿ ,ಊರು ,ನಾಡು ಹೀಗೆ ಬೆಳೆದು ಬಂದವು .
ಬದುಕಿನ ಮೂಲ ಸೌಲಭ್ಯಗಳನ್ನು ದೊರಕಿಸಿಕೊಳ್ಳುವ ಸಲುವಾಗಿ ಅಲ್ಲೇ ಸಿಗುವ ಮೂಲ ವಸ್ತುಗಳ ಬಳಸಿ ತಟ್ಟೆ, ಬುಟ್ಟಿ ,ಆಯುಧ ,ಸಲಕರಣೆಗಳನ್ನು ಮಾಡಿ ಬದುಕು ಸಾಗಿಸುತ್ತಾ, ಆಯಾ ಸಲಕರಣೆ ವಸ್ತುಗಳ ಮಾಡುವ ಆಧಾರದ ಮೇಲೆ ಅವರ ವೃತ್ತಿಗಳಾಗಿ ಪರಿಣಮಿಸಿದ ಬಗೆ ನಮಗೆ ತಿಳಿದ ವಿಷಯ. ಮೇದಾರ ,ಕುಂಬಾರ, ಕಂಬಾರ, ಬಡಿಗ ,ಅಕ್ಕಸಾಲಿಗ, ವೈದ್ಯ, ಪುರೋಹಿತ ಹೀಗೆ ಹೆಸರು ಬಂದವು. ಹಾಗೆಯೇ ದೇವರುಗಳು, ಧರ್ಮ, ಜಾತಿ ಹುಟ್ಟಿಕೊಂಡವು. ನಮ್ಮ ಭಾರತದ ಜನರು ಸಿಂಧೂ ನದಿಯ ದಡದಲ್ಲಿ ಪ್ರಥಮ ನಾಗರಿಕತೆ ಕಟ್ಟಿಕೊಂಡು ಬದುಕಲು ಪ್ರಾರಂಭಿಸಿದ್ದರ ಕಾರಣ ಸಿಂಧೂ, ಹೋಗಿ ಹಿಂದೂಗಳು ಎಂದು ಕರೆದರು ಎಂದು ಇತಿಹಾಸ ಹೇಳುತ್ತದೆ. ಹೀಗೆ ನಮ್ಮ ಸಮಾಜ ಸಮುದಾಯಗಳು ವಿಸ್ತೃತವಾಗುತ್ತಾ ಬೆಳೆಯುತ ನಾಗರಿಕತೆ ಬೆಳೆದಂತೆಲ್ಲ ಅನೇಕ ಧರ್ಮ, ಜಾತಿಗಳು, ಪಂಗಡಗಳು ಹುಟ್ಟಿದವು. ನನ್ನದು, ತನ್ನದು ಅವರು ,ಇವರು ಬೆಳೆಯುತ್ತಾ ನಮ್ಮ ಸಮಾಜ ಜೀವನ ಬೆಳೆಯತೊಡಗಿತು .ನಾವೆಲ್ಲ ಒಂದೇ ಎಂಬ ಸೂತ್ರ ಗೊತ್ತಿದ್ದರೂ ಅವರವರ ಇರುವಿಕೆ ರೂಢಿ ,ನೀತಿ ,ನಿಯಮಗಳಿಗನುಗುಣವಾಗಿ, ಮೇಲು -,ಕೇಳು, ಉಚ್ಚ -ನೀಚ ಎಂಬ ಮನೋಭಾವನೆ ಹುಟ್ಟಿಕೊಂಡಿತು.
ಸಮಾಜ ಹತ್ತು ಹಲವು ಸಮಸ್ಯೆಗಳಿಂದ ಬಳಲತೊಡಗಿತು. ಮಾನವೀಯತೆಯನ್ನೇ ಮರೆತು ಮನುಷ್ಯ ಮನುಷ್ಯರು, ಮನುಷ್ಯರನ್ನೇ ಕೊಲೆ, ಸುಲಿಗೆ, ಅತ್ಯಾಚಾರ ,ಅನಾಚಾರ ಇವೆಲ್ಲ ನಡೆದು ಹೊತ್ತಿ ಉರಿಯತೊಡಗಿದವು.
ಜಾತಿ- ಧರ್ಮದ ಬೆಂಕಿ ಎಲ್ಲಾ ಇಂದು ಸುಡುವಂತಾಯಿತು . ಅದೇ ದೇಹ, ಅದೇ ಭೂಮಿ, ಕುಡಿವ ನೀರೊಂದೇ ಉಸಿರಾಡೋ ಗಾಳಿಯೊಂದೇ ಇದ್ದರೂ ಭೇದ -ಭಾವ ಎಲ್ಲರ ಕೊಲ್ಲುತ್ತಿದೆ .ಇಂತಹ ಸಮಾಜಕ್ಕೆ ನೂರಾರು ಕಾರಣಗಳು ಇರಬಹುದು . ಎಲ್ಲರೊಟ್ಟಿಗೆ ಹುಟ್ಟಿ ಬೆಳೆದ ಈ ಸಮಾಜ ಹೀಗಾಗಲು ಕಾರಣ ಮನುಷ್ಯರಲ್ಲಿರುವ ದುರಾಸೆ ,ದುರಾಲೋಚನೆ ಅತಿಯಾದ ಸ್ವಾರ್ಥ ಕಾರಣ ಇರಬಹುದು. ಆದರೆ ಇದಕ್ಕೆಲ್ಲ ಪರಿಹಾರ ಒಂದೇ ಸಮಾನತೆ, ಸಮ ಸಮಾಜ ನಿರ್ಮಾಣ. ಕುಡಿವ ಜಲ, ಸುಡುವ ಅಗ್ನಿ ಉಸಿರಾಡುವ ಗಾಳಿ ಒಂದೇ ಇರುವಾಗ ಭೇದವೆಲ್ಲಿಯದು ಎಂಬ ಭಾವ ಮೂಡಲು ಸಮಾನ ಅವಕಾಶಗಳು, ಸಮಾನ ಮಾನ ಸನ್ಮಾನಗಳು, ಸಮಾನ ದಂಡಗಳು ,ಸಮಾನ ಸ್ಥಿತಿಗತಿಗಳು ಬೇಕೇ ಬೇಕು.
ಪ್ರತಿಯೊಬ್ಬರ ಮನದಲ್ಲಿ ನಾವೆಲ್ಲ ಒಂದೇ ಎಂಬ ಭಾವ ಅರಳಬೇಕು. ಕೇವಲ ಬಾಯಲ್ಲಿ ಎಲ್ಲರೂ ಮನುಜರೆಲ್ಲ ಒಂದೇ . ಒಂದೇ ಒಂದೇ ಎಂದು ಕೂಗಾಡಿದರೆ ಸಾಲದು ಲಿಖಿತವಾಗಿ ಬರೆಯುವ ಜಾತಿ ಧರ್ಮಗಳು ಅಳಿಯಬೇಕು .ನಾವೆಲ್ಲ ಭಾರತೀಯರು ,ಭಾರತೀಯ ಹೆಣ್ಣು ಗಂಡೆಂಬ ಜಾತಿಗಳೆರಡೆ ನಾವು ಒಂದೇ ಮಣ್ಣ ಮಕ್ಕಳೆಂಬ ಭಾವ ಮೂಡಬೇಕು.ಎಲ್ಲರೊಡಗೂಡಿ ಬದುಕು ಸಾಗಿಸುವಂತ ಹಾಗಬೇಕು . ಹೀಗಾದಾಗ ಮಾತ್ರ ಬಸವ, ಬುದ್ಧ ,ಗಾಂಧಿ ಕಂಡಂತಹ ರಾಮರಾಜ್ಯ ನಮ್ಮದಾದೀತು.
ಇದಕ್ಕೆಲ್ಲ ಅನೇಕ ಕಾರಣಗಳು ಇರಬಹುದು. ಮುಖಂಡರು, ಬಲಶಾಲಿಗಳು, ಅತಿ ಬುದ್ಧಿವಂತರು ,ಅತಿ ದಡ್ಡರು, ತಮ್ಮ ತಮ್ಮ ಲಾಭಕ್ಕಾಗಿ ಸಮಾಜವನ್ನು ಒಡೆಯುತ್ತಿರುವುದು ನಮಗೆ ಕಂಡರೂ ಕಾಣದಂತೆ ಕುರುಡರಾಗಿ ಕಚ್ಚಾಡುತ್ತಾ ದ್ವೇಷ ನೋಡುತ್ತಾ ಪ್ರಜ್ಞಾವಂತ ಸಮಾಜ ನಿರ್ಮಾಣದ ಕನಸು ಹೊತ್ತವರು ಮೌನರಾಗಿದ್ದಾರೆ. ಎಲ್ಲವೂ ಮೂಕ ಮೌನ . ಎಲ್ಲೆಲ್ಲೂ ಮೂಕರೋದನೆ ಕೇಳಿಸದಂತಿದೆ ಯಾರ ಕಿವಿಗಳಿಗೂ.
ಸಾಧಕಗಳು: ಸಮಾನ ನಾಗರಿಕ ಸಂಹಿತೆಯಿಂದ ಎಲ್ಲರೂ ನೆಮ್ಮದಿಯಿಂದ ಬದುಕಬಹುದೆಂಬುದು ದಿಟವಾದ ಮಾತು. ಎಲ್ಲ ಭೇದ ಮರೆತು ನೆಮ್ಮದಿಂದಿರಬಹುದು, ನಮ್ಮಲ್ಲಿ ಬೇರೂರಿರುವ ಜಾತಿ, ಮತ, ಧರ್ಮಗಳ ಬೀಜ ಯಾರನ್ನೂ ಬೇರೆ ಮಾಡದಂತೆ ಹಿಡಿದಿಡುತ್ತದೆ. ಸಮಾನತೆ ಎಲ್ಲರಲ್ಲೂ ಎಲ್ಲೆಲ್ಲೂ ಬರಬೇಕು .ಎಲ್ಲರೂ ಮೊದಮೊದಲು ಒಪ್ಪದೇ ಇರಬಹುದು, ಆದರೆ ಮುಂದೊಮ್ಮೆ ಅವರಿಗೆ ಅರ್ಥವಾಗುವುದು ಸಮಾನ ನಾಗರಿಕ ಸಂಹಿತೆ, ಸಮಾಜದ ಸೌಂದರ್ಯ ಸೌಖ್ಯ ಹೆಚ್ಚಿಸಿ ನೆಮ್ಮದಿ ನೆಲೆಸುವುದೆಂದು. ಎಲ್ಲ ಒಂದೆಂಬ ಭಾವ ಅರಳಿ ಪರಿಮಳಿಸಬಹುದು, ಅವರವರ ಬುದ್ಧಿಮತ್ತೆಯ ಮೇಲೆ ಅವರವರ ಕೆಲಸ ಕಾರ್ಯಗಳು ಹಂಚಿಕೆಯಾಗಲಿ, ಬಲಾಬಲಗಳ ಕುಸ್ತಿ ಕಡಿಮೆಯಾಗಲಿ, ಒಳ್ಳೆ ಮನದ ಬಲದಿಂದ ಸಮಾಜ ಸದೃಢತೆಯ ಕೆಲಸಗಳು ನಡೆಯುತ್ತವೆ, ಸಮಾನ ನಾಗರಿಕ ಸಂಹಿತೆಯಿಂದ ಒಳ ಜಗಳ ಮೇಲು-ಕೀಳು, ಹೆಚ್ಚು ಕಡಿಮೆ, ಜಾತಿ ಪಂಗಡಗಳ ಕಿತ್ತಾಟ ಹೋಗಿ ಅಭಿವೃದ್ಧಿಯತ್ತ ಎಲ್ಲಾ ಸಾಗುವಂತಾಗುತ್ತದೆ . ಸಮಾನ ನಾಗರಿಕ ಸಂಹಿತೆ ಜಾರಿಯಾದರೆ ಮಾತ್ರ ದೇಶದುನ್ನತಿ .ನಾಗರಿಕತೆಯ ಉನ್ನತಿ ಸಾಧ್ಯ. .ಪ್ರಗತಿಯ ಗಾಳಿ ಬೀಸಬಹುದು. ಧರ್ಮವೊಂದೇ ಮಾನವ ಧರ್ಮ, ಪ್ರೀತಿಯದೊಂದೆ ಮನುಜನ ಹೃದಯ ಪ್ರೀತಿ, ಒಳ ಮನದ ಪ್ರೀತಿ ಎಂದು ಎಲ್ಲರಿಗೂ ಅರಿವಾಗಬೇಕು. ಜಗ ನಲಿಯಬೇಕೆಂದರೆ ಸಮಾನ ನಾಗರಿಕ ಸಂಹಿತೆ ಬೇಕೇ ಬೇಕು. ಭೇದಭಾವ ಅಳಿದು ಒಂದೆಂಬ ಭಾವ ಮೂಡಿ ಒಬ್ಬರನ್ನೊಬ್ಬರು ಅಪ್ಪಿ ಬಾಳಲು ಬೇಕು ಈ ಸಮಾಜದಲ್ಲಿ ಸಮಾನ ಸಂಹಿತೆ.. ನಮ್ಮ ಹಿರಿಯರು ಸಮಾಜ ಸುಧಾರಕರು ದೇಶಕ್ಕಾಗಿ ಜೀವತೆತ್ತವರ ಕನಸುಗಳು ಸಾಕಾರ ಮಾಡಬೇಕೆಂದರೆ ಸಮಾಜದಲ್ಲಿ ನೆಮ್ಮದಿ ನೆಲೆಸಬೇಕೆಂದರೆ, ಪ್ರಗತಿಯೊಂದೇ ನಮ್ಮ ಗುರಿಯಾಗಬೇಕೆಂದರೆ , ನನ್ನೊಂದಿಗೆ ಇತರರ ನೆಮ್ಮದಿ, ಅದರೊಂದಿಗೆ ಸಮಾಜದ ನೆಮ್ಮದಿ ಎಂದಾಗಬೇಕೆಂದರೆ , ಸಮ ಸಮಾಜದ ಕನಸು ನನಸಾಗಬೇಕೆಂದರೆ ,ಬೇಕು ಸಮಾನ ನಾಗರಿಕ ಸಂಹಿತೆ. ಪ್ರತಿಯೊಬ್ಬ ನಾಗರಿಕನ ನೆಮ್ಮದಿಯಲ್ಲಿ ಜಗದ ನೆಮ್ಮದಿ ಇದೆ .ಯಾರ ನೆಮ್ಮದಿ ಹಾಳಾಗಬಾರದೆಂದರೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕಿದೆ .ಮುಂದೊಂದು ದಿನ ಎಲ್ಲರೂ ನಾನು ಭಾರತೀಯ, ನಾವೆಲ್ಲರೂ ಮನುಷ್ಯರು, ಎಲ್ಲರೂ ಒಂದೇ ಎಂಬ ಭಾವ ಮೂಡಿ ನಲಿವಿನ ನಂದನ ಭಾರತ ಆಗಬೇಕೆಂದರೆ, ಈ ಭೂಮಿ ನಲಿಯಬೇಕೆಂದರೆ ಬೇಕು ಈ ಸಮಾನ ನಾಗರಿಕ ಸಂಹಿತೆ.
ಬಾಧಕಗಳು: ಈ ಸಮಾನ ನಾಗರಿಕ ಸಹಿತೆಯಿಂದ ಹಲವರಿಗೆ ಸಿಟ್ಟು ಕೋಪ ಬರಬಹುದು ಜಗಳ ಕಚ್ಚಾಟಗಳು ನಡೆಯಬಹುದು,, ಹಲವರು ಹೋರಾಟಕ್ಕೆ ನಿಲ್ಲಬಹುದು ಆದರೆ ಇವನ್ನೆಲ್ಲ ಸಮಾಧಾನದಿಂದ ಬಿಡಿಸುವ ತಾಳ್ಮೆ ಎಲ್ಲರಲಿ ಬೇಕು ಪ್ರಜ್ಞಾವಂತರ ಮೇಲೆ ಹಲ್ಲೆಗಳು ನಡೆಯಬಹುದು, ಆ ಕ್ಷಣಕ್ಕೆ ಆ ಸಂದರ್ಭದಲ್ಲಿ ಇದು ಸರಿ ಇಲ್ಲ ಎಂಬ ವಿಚಾರ ಹೊಳೆಯಬಹುದು ,ಕೆಲವರಿಗೆ ಅನ್ಯಾಯವು ಆಗಬಹುದು, ಕೆಲವರು ತುಳಿತಕ್ಕೊಳಗಾಗ ಬಹುದು, ಆದರೆ ಅದು ಅನ್ಯಾಯವಲ್ಲವೆಂದು ಮನವರಿಕೆ ಮಾಡಿಸುವ ವೈಚಾರಿಕತೆ ಬೆಳೆಸಬೇಕು. ಭೂಮಿ ಹುಟ್ಟಿ ದಂದಿನಿಂದ ಬೆಳೆದು ಬಂದ ರೀತಿ ನೀತಿಗಳ ಕೆಡಿಸುತ್ತಿದ್ದಾರೆ ಎನ್ನಬಹುದು. ಕಟ್ಟಾವಾದಿಗಳು ವಿರೋಧಿಗಳಾಗಬಹುದು. ಮೇಲ್ಪಂತಿಯವರು ರೊಚ್ಚಿಗೇಳಬಹುದು. ಜಾತಿ, ಮತ, ಪಂಥ, ಧರ್ಮಗಳಲ್ಲಿ ಕ್ಷೋಭೆ ತಲೆದೋರಬಹುದು. ಹಲವರು ಒಪ್ಪದೇ ಇರಬಹುದು, ಒಂದು ಹಂತದವರೆಗೆ ಪರಿಸ್ಥಿತಿ ಬಿಗಡಾಯಿಸಬಹುದು, ದೇಶ ಅಸ್ಥಿರ ಪರಿಸ್ಥಿತಿ ಎದುರಿಸುವಂತೆ ಆಗಲೂಐಬಹುದು. ಆದರೆ ಸಮಾಜದ ನೆಮ್ಮದಿ, ದೇಶದ ಅಭಿವೃದ್ಧಿ ,ಎಲ್ಲ ಮನಗಳಿಗೆ ನೆಮ್ಮದಿ ಸೌಖ್ಯ ಒಡಮೂಡಲು ಪ್ರಗತಿ ಸಾಧಿಸಲು ಸಮಾನ ನಾಗರಿಕ ಸಂಹಿತೆ ಬೇಕೇ ಬೇಕು ಎಂಬ ಆಶಯ ನನ್ನದು. ಮಳೆ ಸುರಿದು ಸಮೃದ್ಧ ಬೆಳೆಯುವ ಪ್ರಕೃತಿ ನಗಲು, ಹಸಿರು ತೂಗಲು, ನದಿ ಹಳ್ಳಕೊಳ್ಳ ಸ್ವಚ್ಛಂದವಾಗಿ ಹರಿದು ಮನ ತಣಿಸಬೇಕೆಂದರೆ, ಕಾರ್ಮೋಡ ಕವಿದು ಗುಡುಗು ಸಿಡಿಲು ಬಡಿದು ಭಯ ಹುಟ್ಟಿಸಿಯೇ ಮಳೆ ಸುರಿಯಬೇಕಲ್ಲವೇ? ಹಾಗೆ, ಕತ್ತಲು ಕಳೆದು ಬೆಳಕು ಕಾಣಲು ರಾತ್ರಿಯನ್ನು ಕಳೆಯಬೇಕಲ್ಲವೇ? ನಾವೆಲ್ಲರೂ ಕಟಿಭದ್ದರಾಗಿ ನಿರ್ಮಾಣ ನಮ್ಮ ಹಿರಿಯರ ಸಮಾಜ ಸುಧಾರಕರ ಆಸೆ ಪೂರೈಸೋಣ.
– ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ.