Oplus_131072

ಸಮನ್ವಯತೆಯ ಸಮಾಜ ಕಂಡ ಶರಣರು

ಬಸವಾದಿ ಶರಣರ ವಚನಗಳಲ್ಲಿ ನಾನಾ ಮನೋಧರ್ಮವನ್ನು ಕಾಣುತ್ತೇವೆ. ಅವರ ಸಾಧನೆಯ ಮಾರ್ಗದಲ್ಲಿಯೂ ವೈವಿಧ್ಯವಿದೆ. ಆದರೆ ಪ್ರತಿಯೊಬ್ಬ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಕಾಣಬಹುದಾಗಿದೆ.ಕೆಲವರಲ್ಲಿ ವಿಚಾರ ಶಕ್ತಿ, ತರ್ಕಶಕ್ತಿ ಕಂಡುಬಂದರೆ ಇನ್ನೂ ಕೆಲವರಲ್ಲಿ ಭಾವುಕತೆ,ಆಂತರ್ಯದ ಹಂಬಲದಿಂದ ಮಿಡಿಯುವ ಪ್ರೇಮದ ಆವೇಶಗಳು ಪ್ರಧಾನವಾಗಿ ಕಂಡುಬರುತ್ತವೆ. ಅಂತರಂಗದ ಈ ಶಕ್ತಿಗಳ ಭೇದದಿಂದಲೇ ಸಾಧನೆಯಲ್ಲಿ ಜ್ಞಾನಯೋಗ,ಭಕ್ತಿಯೋಗ,ಕರ್ಮಯೋಗ ಮುಂತಾದ ಯೋಗಮಾರ್ಗಗಳು ರೂಪಿತವಾಗಿದ್ದು ಕಂಡುಬರುತ್ತದೆ.

ಸಮಾಜ ವ್ಯಕ್ತಿಗಳಿಂದ ನಿರ್ಮಿತವಾದದ್ದು ಮತ್ತು ವ್ಯಕ್ತಿ ವಿಕಾಸಕ್ಕೆ ಸಹಾಯಕವಾಗಬೇಕಾದುದು.ಶರಣರ ಸಾಮಾಜಿಕ ವಿವೇಚನೆಯಲ್ಲಿ ಪೂರ್ಣದೃಷ್ಟಿಯಿಂದ ಜೀವನವನ್ನು ನೋಡಬೇಕು. ಪೂರ್ಣದೃಷ್ಟಿಯಿಂದ ಜೀವನವನ್ನು ನೋಡಿದ ಶರಣರು ಅಂದಿನ ಸಮಾಜದಲ್ಲಿ ವ್ಯಕ್ತಿಯ ಪೂರ್ಣವಿಕಾಸಕ್ಕೆ ಅಡ್ಡಿಯಾಗಿ ನಿಂತಿರುವ ಕೃತಕ ವಿಭಜನೆಗಳನ್ನು ಕಂಡು ಸಿಡಿದು ನಿಂತಿರುವುದನ್ನು ಕಾಣುತ್ತೇವೆ.ಇವುಗಳಲ್ಲಿ ಮುಖ್ಯವಾಗಿ ವರ್ಣಭೇದ. ಚತುರ್ವರ್ಣಗಳ ಮೂಲವೇನೇ ಇರಲಿ ಅದರ ಹಿಂದಿರುವ ತತ್ವ ಎಂಥದ್ದೇ ಆಗಿರಲಿ, ಶರಣರ ಕಾಲಕ್ಕಾಗಲೇ ಈ ವರ್ಣಗಳು ವಿರೂಪ ಮಾರ್ಗವನ್ನು ಹಿಡಿದಿದ್ದವು..
ಸಮಾಜವನ್ನು ಹೋಳುಹೋಳಾಗಿ ವಿಭಜಿಸಿದ್ದವು. ಬ್ರಾಹ್ಮಣ,ಕ್ಷತ್ರೀಯ,ವೈಶ್ಯ,ಶೂದ್ರ ಎಂಬ ನಾಲ್ಕು ವರ್ಗಗಳ ಜೊತೆಗೆ “ಅಸ್ಪ್ರಶ್ಯರೆಂಬ” ಪಂಚವರ್ಣವೂ ಹಿಂದು ಧರ್ಮಕ್ಕೆ ಹಿಡಿದಿದ್ದ ಕಳಂಕವನ್ನು ಸಾರಿ ಹೇಳುತಿತ್ತು. “ಚಾತುರ್ವಣ್ಯಂಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ” ಎಂಬ ಗೀತೆಯಲ್ಲಿ ಕೃಷ್ಣ ಹೇಳಿದ ಆದರ್ಶ ಎಂದೋ ಮರೆಯಾಗಿ, ಜನ್ಮದಿಂದ ಉತ್ತಮರೆನಿಸಿಕೊಂಡವರು ಧರ್ಮವನ್ನು ತಮ್ಮ ಸ್ವಂತ ಸ್ವತ್ತನ್ನಾಗಿ ತಿಳಿದು ಸಾಮಾನ್ನ ಜನರನ್ನು ಧರ್ಮದಿಂದ ವಂಚಿತರನ್ನಾಗಿ ಮಾಡಿದ್ದರು. ಧರ್ಮ ಅನೇಕ ಸಂದರ್ಭಗಳಲ್ಲಿ ಸ್ವಾರ್ಥಸಾಧನೆಯ ಮುಖವಾಡವಾಗಿತ್ತು.
ಇದನ್ನು ತೀವ್ರವಾಗಿ ಪ್ರತಿಭಟಿಸಿ ತಮ್ಮ ಸಾಧನೆಯ ಶಕ್ತಿಯಿಂದ ಧರ್ಮದ ನಿಜಸ್ವರೂಪವನ್ನು ಉಜ್ವಲಗೊಳಿಸಿದರು ಶರಣರು.

ಕೊಲ್ಲುವವನೇ ಮಾದಿಗ ಹೊಲಸು ತಿಂಬುವವನೇ ಹೊಲೆಯ ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೆಲ್ಲ ಕುಲಜರು” ಎಂಬ ಬಸವಣ್ಣನವರ ಮಾತು ಶರಣರ ವಿಚಾರವಾದಕ್ಕೆ ಕಿರೀಟಪ್ರಾಯವಾಗಿದೆ.

ಮನುಷ್ಯನ ಯೋಗ್ಯತೆಯನ್ನು ನಿರ್ಧರಿಸುವುದು ಅವನ ಹುಟ್ಟಿನಿಂದಲ್ಲ!! ಅವನ ಆಚಾರ-ವಿಚಾರಗಳಿಂದ, ಗುಣಕರ್ಮಗಳಿಂದ ಎಂದು ಬಸವಣ್ಣನವರು ಘೋಷಿಸಿದರು.

ದೇವರ ದಾಸಿಮಯ್ಯನು..

ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತೇ ?
ಒಡೆಯರ ಪ್ರಾಣಕ್ಕೆ ಇದ್ದಿತ್ತೇ ಯಜ್ಞೋಪವಿತ ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲಿ ಹಿಡಿಗೋಲ ?
ನೀ ತೊಡಕಿಕ್ಕಿದ ತೊಡಕನೀ ಲೋಕದಜಡರೆತ್ತ ಬಲ್ಲರೈ ರಾಮನಾಥ.
ದೇಹದ ಒಳಗಿರುವ ಚೈತನ್ಯಕ್ಕೆ ಸ್ತ್ರೀಪುರುಷರೆಂಬ ಭೇದವಾಗಲಿ, ಒಡೆಯ-ಸೇವಕರೆಂಬ ಭಿನ್ನತೆಯಾಗಲೀ ಇಲ್ಲವೆಂದಿದ್ದಾನೆ.

ಮಾದಾರ ಚನ್ನಯ್ಯ ಹೀಗೆ ಹೇಳಿದ್ದಾನೆ.

ನಡೆ ನುಡಿ ಸಿದ್ಧಾಂತವಾದಲ್ಲಿ ಕುಲಹೊಲೆಯಿಲ್ಲ:
ನುಡಿಲೇಸು ನಡೆಯಧಮವಾದಲ್ಲಿ ಅದೇ ಬಿಡುಗಡೆ, ಇಲ್ಲದ ಹೊಲೆ,ಕಳವು ಪರದಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆಯುತ್ತ ಮತ್ತೆ ಕುಲಜರೆಂಬ ಒಡಲುಂಟೇ..?
ಆಚಾರವೇ ಕುಲ, ಅನಾಚಾರವೇ ಹೊಲೆ,
ಇಂತೀ..ಉಭಯ ತಿಳಿದು ಅರಿಯಬೇಕು, ಕಯುಳಿಗತ್ತಿ ಆಡಿಗೂಂಟಿ ಕಡೆಯಾಗಬೇಡ,
ಅರಿ ನಿಜಾತ್ಮರಾಮನಾ… 
ಆಚಾರವೇ ಕುಲ, ಅನಾಚಾರವೇ ಹೊಲೆ..
ಎಂದು ಶರಣರು ಘೋಷಿಸಿದುದು ಮಾತ್ರವಲ್ಲದೇ ಅದರಂತೆ ವ್ಯವಹಾರದಲ್ಲಿ ಆಚರಿಸಿಯೂ ತೋರಿಸಿದರು..

ಸುಮಾರು 800 ವರ್ಷಗಳ ಹಿಂದಿನ ಸಮಾಜದಲ್ಲಿ ಇದರ ಪರಿಣಾಮವನ್ನು ಊಹಿಸಿಕೊಳ್ಳಬಹುದು. ಶರಣರು ತತ್ವದಲ್ಲಿ ಮಾತ್ರ ಪ್ರತಿಪಾದಿಸಿ ಸುಮ್ಮನಿದ್ದಿದ್ದರೆ ವಿರೋಧ ಶಕ್ತಿಗಳು ಇವರನ್ನು ನಿರ್ಲಕ್ಷಿಸುತ್ತಿದ್ದವೋ ಏನೋ ? ಆದರೆ ಅವರು ನುಡಿದಂತೆ ನಡೆದರು.
” ಉತ್ತಮ ವರ್ಣದವರು ಯಾರನ್ನು ಬಹಳ ದೂರದಲ್ಲಿಟ್ಟಿದ್ದರೋ..ಅಂಥವರನ್ನು ಬಸವೇಶ್ವರರು ತಮ್ಮ ಅನುಭವ ಮಂಟಪಕ್ಕೆ ಸೇರಿಸಿದರು. ಧರ್ಮದಲ್ಲಿ ಅವರಿಗೂ ಸಮಾನ ಅವಕಾಶವನ್ನು ಕೊಟ್ಟರು..

ಸೆಟ್ಟಿಯೆಂಬೆನೆ ಸಿರಿಯಾಳನ ?
ಮಡಿವಾಳನೆಂಬೆನೆ ಮಾಚಯ್ಯನ ?
ಡೋಹಾರನೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚನ್ನಯ್ಯನ ?
ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯ. !!
ಎಂದು ತನಗಿಂತಲೂ ಅವರು ಭಕ್ತಿಯಲ್ಲಿ ಹೆಚ್ಚು ಎಂದು ಹೊಗಳಿ ಪುರಸ್ಕರಿಸಿದ.
ಇದರ ಫಲವಾಗಿ ಉಗ್ರವಾದ ವಿರೋಧಶಕ್ತಿಗಳನ್ನು ಬಸವಣ್ಣನವರು ಎದುರಿಸಬೇಕಾಯಿತು. ಮಂತ್ರಿ ಪದವಿಯಂಥಹ ದೊಡ್ಡ ಅಧಿಕಾರವೇನೋ ಇದ್ದರೂ..ಮಾದಿಗರ ಹರಳಯ್ಯ ಮತ್ತು ಬ್ರಾಹ್ಮಣರ ಮಧುವಯ್ಯ ಇವರಲ್ಲಿ ಬಾಂಧವ್ಯವನ್ನು ಬೆಳೆಸುವಷ್ಟರ ಮಟ್ಟಿಗೆ ಹೋದಾಗ ವಿರೋಧಿಗಳ ಕೈ ಮೇಲಾಯಿತು.
ವರ್ಣಸಂಕರ” ವಾಯಿತೆಂದು ರಾಜನಲ್ಲಿ ದೂರಿಟ್ಟರು.

ರಾಜ ಬಿಜ್ಜಳ “ಧರ್ಮಸಂರಕ್ಷಣೆ” ಗಾಗಿ ಹರಳಯ್ಯ ಮಧುವಯ್ಯರನ್ನು ಆನೆಯ ಕಾಲಿಗೆ ಕಟ್ಟಿ ಎಳೆಸುವ ಉಗ್ರ ಶಿಕ್ಷೆ ವಿಧಿಸಿದ. ಕಲ್ಕಾಣವೆಲ್ಲ ಈ ಕ್ರಾಂತಿಯಿಂದ ತಲ್ಲಣಗೊಂಡಿತು.

ಅಂದು ಬಸವೇಶ್ವರರು ತೋರಿದ ಈ ಸಾಹಸದಿಂದ ಇಂದು ಸಂಪ್ರದಾಯವಾದಿಗಳ ಎದೆ ನಡುಗಬಹುದು.ಆದರೆ ಇಂದಿನ ಗಾಂಧಿಯುಗದಲ್ಲಿರುವ ನಾವು ಅಂಥಹ ಘಟನೆಯನ್ನು ಅರಗಿಸಿಕೊಳ್ಳಬಲ್ಲೆವು. ಆದರೆ ಅಂದಿನ ಸಮಾಜ ಅದನ್ನು ತಡೆಯಲಾರದೆ ಹೋಯಿತು.
ಬಸವಣ್ಣನವರು ತಮ್ಮ ಕಾಲಕ್ಕಿಂತ 800 ವರ್ಷಗಳು ಮುಂದಿದ್ದವರೆಂದು ಹೇಳಬಹುದು.ಅಂದಿನ ಅವರ ವರ್ತನೆ ಇಂದು ಮಾನ್ಯವಾಗುತ್ತದೆ. ಅಸ್ಪ್ರಶ್ಯತೆಯ ನಿವಾರಣೆ ಮತ್ತು ವರ್ಣಭೇದದ ನಿರಾಕರಣೆಯಲ್ಲಿ ಬಸವೇಶ್ವರರು ಮತ್ತು ಇತರೆ ಶರಣರು ನಡೆದು ತೋರಿಸಿದ ಮಾರ್ಗ ಇಂದು ಮಾರ್ಗದರ್ಶನವಾಗುತ್ತದೆ.

ಜೀವನ ಸಂಗ್ರಾಮದಲ್ಲಿ ಬದುಕುವದಕ್ಕಾಗಿ ವ್ಯಕ್ತಿ ಯಾವುದೇ ಉದ್ಯೋಗವನ್ನು ಕೈಗೊಂಡಿರಲಿ ಅವನಿಗೆ ತನ್ನ ವಿಕಾಸಕ್ಕೆ ಪೂರ್ಣ ಪ್ರಮಾಣದ ಅವಕಾಶ ಸಿಗಬೇಕು. ಅವನು ಕೈಗೊಂಡ ಉದ್ಯೋಗ ಅವನ ಸಾಧನೆಗೆ ಅಡ್ಡಿ ಆಗಬಾರದು.ಮೇಲು ಕೀಳೆಂಬುದು ಉದ್ಯೋಗದಲ್ಲಿಲ್ಲ.ಅದನ್ನು ನಿರ್ವಹಿಸುವ ಮನೋಧರ್ಮದಲ್ಲಿದೆ.
ಉದ್ಯೋಗಗಳು “ಕಾಯಕ“ಗಳಾಗಿ ಪರಿಣಮಿಸಿದಾಗ ಅವು ಸಾಧನೆಗೆ ಅಡ್ಡಿಯಾಗುವುದಿಲ್ಲವೆಂದು ಶರಣರು ಸಾರಿದರು.

ಸಮಾಜ ಸ್ವಯಂ ಪೂರ್ಣವಾಗಬೇಕಾದರೆ ಮತ್ತು ಸುಖಃಮಯವಾಗಬೇಕಾದರೆ ಎಲ್ಲರೂ ತಮ್ಮ ತಮ್ಮ ಉದ್ಯೋಗಗಳನ್ನು ಮಾಡಬೇಕು. ಕಾಯಕದ ಮಹತ್ವವನ್ನು ಅರಿಯಯಬೇಕೆಂದು ಶರಣರು ಒತ್ತಿ ಹೇಳಿದ್ದಾರೆ.
ನುಲಿಯ ಚಂದಯ್ಯ, ಮಡಿವಾಳ ಮಾಚಯ್ಯ, ಮೇದಾರ ಕೇತಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ತುರುಗಾಹಿ ರಾಮಣ್ಣ, ಸುಂಕದ ಬಕ್ಕಣ್ಣ, ಮಾದಾರ ಚನ್ನಯ್ಯ, ತಳವಾರ ಕಾಮಿದೇವ, ಗಾಣದ ಕನ್ನಪ್ಪ, ವೈದ್ಯ ಸಂಗಣ್ಣ, ಸೂಜಿಕಾಯಕದ ರಾಮಿತಂದೆ, ಬಾಚಿಕಾಯಕದ ಬಸಪ್ಪ, ಕೊಟ್ಟಣದ ರೇಮವ್ವ, ಮೋಳಿಗೆ ಮಾರಯ್ಯ, ಢೋಹರ ಕಕ್ಕಯ್ಯ ಮುಂತಾದವರನ್ನು ನೋಡಬಹುದು.ಇವರ ಹೆಸರಿನ ಹಿಂದಿರುವ ಪದಗಳೇ ಅವರು ಕೈಗೊಂಡ ಕಾಯಕವನ್ನು ಸೂಚಿಸುತ್ತವೆ.

ಜಾತಿ ಭೇದಗಳಿಂದ ಹರಿದು ಹಂಚಿಹೋಗದೆ, ಸಹಜೀವನ ಮಾರ್ಗದಿಂದ ಕೂಡಿದ ಸಮನ್ವಯದ ಸಮಾಜವನ್ನು ಅಂದಿನ ಶರಣರು ಕಂಡರು. ಬಡವ ಬಲ್ಲಿದನೆಂಬ ಭೇದವಿಲ್ಲದೆ ,ಸ್ತ್ರೀ ಪುರುಷರೆಂಬ ತಾರತಮ್ಯವಿಲ್ಲದೇ ಎಲ್ಲರೂ ಜೀವನದ ಗುರಿಯನ್ನು ಕಂಡುಕೊಳ್ಳುವ ಸಮಾಜ, ಸರ್ವರೂ ಉದಯವಾಗುವ ಸಮಾಜ, ಅದುವೇ ಪೂರ್ಣ ಸಮಾಜ..ಎಂದು ಶರಣರು ಸಾರಿದರು ಅದನ್ನು ಸಾದಿಸಿ ತೋರಿಸಿದರು.

ವೀರಂತರೆಡ್ಡಿ ಜಂಪಾ. ಮಾಜಿ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ಹುಮನಾಬಾದ.
ಬೀದರ ೫೮೫೩೩೦.

( ಈ ಲೇಖನವು 14-5-2021 ರಲ್ಲಿ 888 ನೇ ಬಸವ ಜಯಂತಿಯಂದು ಗಣಕರಂಗ ಸಾಹಿತ್ಯ ಸಂಸ್ಥೆ ಧಾರವಾಡ ಅವರು ಏರ್ಪಡಿಸಿದ್ದ ರಾಜ್ಯ ಮಟ್ಟದ ವಾಟ್ಸಪ್ ಆನ್ಲೈನ್ ಲೇಖನ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನ ಪಡೆದಿದೆ.)

One thought on “ಸಮನ್ವಯತೆಯ ಸಮಾಜ ಕಂಡ ಶರಣರು”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ