Oplus_131072

ಸಾಮಾನ್ಯರಲ್ಲಿ ಅಸಾಮಾನ್ಯರು, ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾ ಸ್ವಾಮಿಗಳು.

ಮಧ್ಯರಾತ್ರಿ ಕಳೆದು ಒಂದು ತಾಸಾಗಿತ್ತು.ಅಂದು ಡಂಬಳದ ಮಠದ ಆವರಣದಲ್ಲಿ ಸಾವಿರಾರು ಜನ ಸೇರಿದ್ದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಆವರಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಅನುವು ಮಾಡಿಕೊಟ್ಟ ಪುರುಷರು ಮಠದ ಹೊರ ಭಾಗದಲ್ಲಿ ಕಾಯುತ್ತಿದ್ದರು. ಮಠದ ಒಳಗೆ ಹೊರಗೆ ಎಲ್ಲೆಡೆ ನೀರವ ಮೌನ ತಾಂಡವವಾಡುತ್ತಿತ್ತು. ಪದೇ ಪದೇ ನಿಟ್ಟುಸಿರು, ಸಣ್ಣದಾಗಿ ಬಿಕ್ಕುವುದು ನಡೆದೇ ಇತ್ತು. ಎಲ್ಲರನ್ನೂ ಶೂನ್ಯ ಭಾವ ಆವರಿಸಿ ಮಂಕು ಕವಿದಿತ್ತು. ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು. ಆ ಮಠದ ಪೀಠಾಧ್ಯಕ್ಷರಾದ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಪಾರ್ಥಿವ ಶರೀರವನ್ನು ಹೊತ್ತ ಭಕ್ತ ಸಮೂಹ ಮಠವನ್ನು ಪ್ರವೇಶಿಸಲು ಎಲ್ಲರ ಕಣ್ಣಲ್ಲೂ ನೀರು, ಮೂಕ ರೋಧನೆ. ಸಂಸಾರಿಯಲ್ಲದಿದ್ದರೂ ಆ ತಂದೆಗೆ ಸಾವಿರಾರು ಲಕ್ಷಾಂತರ ಮಕ್ಕಳು ಭಕ್ತರ ರೂಪದಲ್ಲಿ. ಸ್ವಲ್ಪ ಸಮಯ ಪೂಜ್ಯರ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟ ಮಠದ ವೃಂದದವರು. ಅಂತಿಮ ನಮನದ ಬಳಿಕ ಮತ್ತೆ ಪೂಜ್ಯರ ಪಾರ್ಥಿವ ಶರೀರವನ್ನು ಹೊತ್ತ ವಾಹನ ಗದುಗಿನ ಮಠದತ್ತ ಧಾವಿಸಿದರೆ ಭಕ್ತರ ರೋದನ ಮುಗಿಲು ಮುಟ್ಟುವಂತಿತ್ತು. ಎಲ್ಲರಲ್ಲೂ ತಾಯನಗಲಿದ ಕರುವಿನಂತಹ ಆರ್ತರೋದನ. ಈ ದೃಶ್ಯವನ್ನು ನೋಡುತ್ತಿದ್ದಾಗ ನೆನಪಾಗುತ್ತಿದ್ದುದು ಒಂದೇ ರಾಜ ಹರಿಶ್ಚಂದ್ರನು ತನ್ನ ರಾಜ್ಯವನ್ನು ಬಿಟ್ಟು ಸತಿ ಸುತರೊಡನೆ ಹೊರಟು ಹೋಗುವಾಗ ಕವಿ ರಾಘವಾಂಕನು ಬರೆದ

“ಪುರದ ಪುಣ್ಯವು ಪುರುಷ ರೂಪಿಂದೆ ಪೋಗುತಿದೆ

ಎಂಬ ಮಾತು ಮನದಲ್ಲಿ ಅನುರಣಿಸುತ್ತಿತ್ತು.

ನಮ್ಮ ಪುರದ ಪುಣ್ಯವೂ ಕೂಡ ಅಜ್ಜನವರ ರೂಪದಲ್ಲಿ ಹೋಗುತ್ತಿದೆಯೋ ಎಂದು ಮನ ಮೂಕವಾಗಿತ್ತು ಇನ್ನೆಂದು ಈ ಘನ ಮಹಿಮರನ್ನುಕಾಣಲಾರೆವು ಎಂಬ ಸತ್ಯ ಮನವನ್ನು ಶೂಲದಂತೆ ಚುಚ್ಚುತ್ತಿತ್ತು. ಬಹುಶಃ ಅಗಲಿಕೆಯ ನೋವಿಗಿಂತ ದೊಡ್ಡ ಆಯುಧ ಮತ್ತಾವುದು ಇಲ್ಲ ಈ ಜಗದಲ್ಲಿ. ಈ ಘಟನೆ ನಡೆದು ಇಂದಿಗೆ ನಾಲ್ಕು ವರ್ಷಗಳು. ಈಗಲೂ ಆ ಘಟನೆಯ ನೆನಪು ಕಣ್ಣು ತುಂಬಿಸುತ್ತದೆ, ಮನವನ್ನು ಮೂಕವಾಗಿಸಿ ಗಂಟಲಲ್ಲಿ ಗದ್ಗದ ಸ್ವರ. ಅದಾವ ಜನ್ಮದ ಋಣವೋ ಆರಿಯೆ.

ಅವರು ಮಾತನಾಡಲಾರಂಭಿಸಿದರೆ ಅರ್ಧ ಶತಮಾನದ ಇತಿಹಾಸ ಕಣ್ಣ ಮುಂದೆ ಬರುತ್ತಿತ್ತು. ಅತ್ಯದ್ಭುತ ಜ್ಞಾಪಕ ಶಕ್ತಿ, ಅಸಾಮಾನ್ಯ ವಿಷಯಗಳನ್ನು ತಮ್ಮ ನೆನಪಿನ ಗಣಿಯಿಂದ ಹೆಕ್ಕಿ ಸಾಂದರ್ಭಿಕವಾಗಿ ಹೇಳುತ್ತಿದ್ದ ರೀತಿ ವಿಷಯದ ಆಳ, ಅಗಲ, ಹಿರಿಮೆ, ಗರಿಮೆಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಅವರು ಎತ್ತುತ್ತಿದ್ದ ವಿಷಯಗಳು, ಅವರ ಉದಾತ್ತ ಚಿಂತನೆಗಳನ್ನು, ಅಸಾಮಾನ್ಯ ನಿಲುವುಗಳನ್ನು, ಅಹಿಂಸಾತ್ಮಕ ಬದಲಾವಣೆಯ ಅಗಾಧತೆಯನ್ನು, ಸಾಮಾಜಿಕ ಬದಲಾವಣೆಯ ಹಿರಿದಾದ ಆಶಯಗಳನ್ನು ಒಳಗೊಂಡಿದ್ದು ಶ್ರೀಸಾಮಾನ್ಯನನ್ನು ಕೂಡ ತಲುಪುತ್ತಿದ್ದವು. ಆದ್ದರಿಂದಲೇ ಅವರು ‘ಸಾಮಾನ್ಯರ ಸ್ವಾಮೀಜಿ’ ಎಂದು ಹೆಸರಾದರು.

ಪುಟ್ಟ ಪುಟ್ಟ ಮಕ್ಕಳು ನೃತ್ಯ ಮಾಡುವುದನ್ನು, ನಲಿಯುವುದನ್ನು ಮಗುವಿನಂತೆ ಆಸ್ವಾದಿಸುತ್ತಿದ್ದ ಸ್ವಾಮಿಗಳ ಬಳಿ ಮಕ್ಕಳು ಅಷ್ಟೇ ಸಲೀಸಾಗಿ ವ್ಯವಹರಿಸುತ್ತಿದ್ದರು. ನುಡಿದಂತೆ ನಡೆಯುತ್ತಿದ್ದ ಅಜ್ಜನವರು ಯಾರ ಮನ ನೋಯಿಸದೆಯೂ ತಮ್ಮ ತಿಳುವಳಿಕೆಯ ಮಾತನ್ನು ಅವರಲ್ಲಿ ಬಿತ್ತಲು ಸಾಧ್ಯವಾಗುತ್ತಿದ್ದುದು ಅವರ ಜನಪರ ಕಾಳಜಿಗೆ ಸಾಕ್ಷಿ.
ಸಾಮಾನ್ಯ ಜನರಿಂದ ಹಿಡಿದು ಅಸಾಮಾನ್ಯ ಶ್ರೀಮಂತರವರೆಗೆ ಎಲ್ಲರನ್ನೂ ಅವ್ವ, ತಮ್ಮ, ತಂಗಿ, ಅಪ್ಪ, ತಾಯಿ ಮಗಳು ಎಂದು ಪ್ರೀತಿಯಿಂದ ಕಾಣುವ ಕಾರುಣ್ಯಮೂರ್ತಿ ನಮ್ಮ ಗದುಗಿನ ತೋಟದ ಸಿದ್ದಲಿಂಗ ಶ್ರೀಗಳು. ಪೀಠಾಧಿಕಾರಿಯಾಗಿದ್ದರೂ ನಿಷ್ಟುರವಾದಿಗಳು, ಅನ್ಯಾಯದ ವಿರುದ್ಧ ಹೋರಾಡುವವರು, ಬಸವಾನುಯಾಯಿಗಳು, ಸರ್ವಧರ್ಮ ಸಮಾನತೆಯ, ಕೋಮು ಸೌಹಾರ್ದತೆಯ ಹರಿಕಾರರು ಮಾನವತ್ವಕ್ಕೆ ಹೆಚ್ಚು ಮಹತ್ವ ನೀಡುವ ವಿಶ್ವಮಾನವ ತತ್ವವನ್ನು ಅನುಷ್ಠಾನಕ್ಕೆ ತಂದು ಅದನ್ನು ಗದುಗಿನಿಂದ ದೆಹಲಿಯವರೆಗೆ ಹರಡಿದ ಮಹಾನ್ ಚೇತನ ನಮ್ಮ ಗದುಗಿನ ಶ್ರೀಗಳು.

ಪಟ್ಟಾಧಿಕಾರವಾದ ನಂತರ ಸಂಕಷ್ಟದಲ್ಲಿಯೇ ಮಠವನ್ನು ನಡೆಸಬೇಕಾದಂತ ಪರಿಸ್ಥಿತಿಯಲ್ಲಿ ಶ್ರೀಗಳು ಎದೆಗುಂದಲಿಲ್ಲ. ಬಾಡಿಗೆ ಕಾರಿನಲ್ಲಿ ಹೋಗಲು ಹಣವಿಲ್ಲ, ಬಸ್ಸಿನಲ್ಲಿ ಹೋಗಲು ಮಠದ ಜಗದ್ಗುರುಗಳು ಬೇರೆ… ಆದರೆ ಶ್ರೀಗಳು ಮಠದಲ್ಲಿ ಇದ್ದ ಎಲ್ಲಾ ಮಕ್ಕಳನ್ನು ಹುರಿದುಂಬಿಸಿ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಡಂಬಳ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಹೋಗಿ, ಅಲ್ಲಿ ಮಠಕ್ಕೆ ಸಂಬಂಧಿಸಿದ ನೂರಾರು ಎಕರೆ ಜಮೀನು, ಹಾಳು ಬಿದ್ದುದನ್ನು ನೋಡಿ, ಮಠದ ಜಮೀನನ್ನು ತಾವೇ ಮಕ್ಕಳೊಂದಿಗೆ ಸೇರಿ ಹಸನು ಮಾಡಿ ಬಾವಿಯನ್ನು ತೋಡಿ ಬಂಗಾರದಂತಹ ಬೆಳೆ ಬೆಳೆದು ಮಠದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದರು. ಕೊಟ್ಟಿಗೆಯಲ್ಲಿನ ದನದ ಸಗಣಿ ಬಳಿದು ಕಸ ಗುಡಿಸುವುದರಿಂದ ಹಿಡಿದು ದನಕ್ಕೆ ಆಹಾರ ಮತ್ತು ಮಕ್ಕಳಿಗೆ ಅಡುಗೆ ತಯಾರಿಯವರೆಗೆ ಎಲ್ಲಾ ಕಾಯಕವನ್ನು ಎಷ್ಟೋ ಬಾರಿ ಸ್ವತಃ ತಾವೇ ನಿರ್ವಹಿಸುತ್ತಿದ್ದರು. ತಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಮಕ್ಕಳ ಕಾಲಿನಲ್ಲಿನ ಮುಳ್ಳುಗಳನ್ನು ಆ ಮಕ್ಕಳಿಗೆ ಅರಿವಿಲ್ಲದೆ ರಾತ್ರಿ ಮಲಗಿದಾಗ ದೀಪದ ಬೆಳಕಿನಲ್ಲಿ ತೆಗೆಯುತ್ತಿದ್ದರು. ಮಠಕ್ಕೆ ಬಂದ ಯಾವ ಆಲಕ್ಷಿತರನ್ನು, ಕಡು ಬಡವರನ್ನು ಬರಿಗೈಯಲ್ಲಿ ಕಳುಹಿಸದೆ ಅವರು ಕೊಟ್ಟುದ್ದಕ್ಕೆ ಪ್ರತಿಯಾಗಿ ಸಿದ್ದಲಿಂಗೇಶನ ಪ್ರಸಾದವೆಂದು ತುಸು ಹೆಚ್ಚೇ ಕೊಟ್ಟು ಕಳುಹಿಸುತ್ತಿದ್ದರು.

ಹೆಣ್ಣು ಮಕ್ಕಳ ಮೂಢನಂಬಿಕೆ, ಅಜ್ಞಾನವನ್ನು ಹೀಯಾಳಿಸದೆ ಸೂಕ್ಷ್ಮವಾಗಿ ಅವರಿಗೆ ತಿಳುವಳಿಕೆ ಹೇಳಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದರು. ಶ್ರೀಗಳ ಕನ್ನಡ ಪ್ರೀತಿ, ಪರಿಸರ ಕಾಳಜಿ, ಶೈಕ್ಷಣಿಕ ಮತ್ತು ಸಾಮಾಜಿಕ ಜಾಗೃತಿ, ಜನರ ಆರೋಗ್ಯದೆಡೆಗಿನ ಚಿಂತನೆ, ಪುಸ್ತಕ ಪ್ರೇಮ ಅವರನ್ನು ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ತನ್ಮೂಲಕ ಹಲವಾರು ಪ್ರತಿಭೆಗಳನ್ನು ಗುರುತಿಸಲು ಸಹಾಯ ಮಾಡಿದ್ದು ಶ್ರೀಗಳು. ಪುಸ್ತಕದ ಸ್ವಾಮೀಜಿ, ನುಡಿದಂತೆ ನಡೆವ ಘನ ಮಹಿಮ, ಕೋಮು ಸೌಹಾರ್ದತೆಯ ಹರಿಕಾರ ಎಂದು ಅವರನ್ನು ಕರೆದುದರಲ್ಲಿ ಆಶ್ಚರ್ಯವೇನಿಲ್ಲ.

ಮಠದ ಕಾಯಕಲ್ಪದ ನಂತರ ಶ್ರೀಗಳ ಚಿತ್ತ ಪುಸ್ತಕ ಪ್ರಕಟಣೆಯತ್ತ ಹರಿಯಿತು. ‘ಲಿಂಗಾಯತ ಪುಣ್ಯ ಪುರುಷರ ಮಾಲಿಕೆ’ಯನ್ನು ಆರಂಭಿಸಿದ ಶ್ರೀಗಳು ಪುಸ್ತಕ ಪ್ರಕಟಣೆಗೆ ಆರಿಸಿಕೊಂಡ ಮಾರ್ಗ.. ಮನೆ ಮನೆಯಿಂದ ಪ್ರತಿ ದಿನವೂ ಐದರಿಂದ 20 ಪೈಸೆಯವರೆಗೆ ಕಂತಿ ಭಿಕ್ಷದ ಜೊತೆಗೆ ಹಣ ಸಂಗ್ರಹಣೆ… ಆದರೆ ಇಲ್ಲಿಯೂ ಕೂಡ ಯಾರಿಂದಲೂ ಒತ್ತಾಯವಾಗಿ ಹಣವನ್ನು ಸಂಗ್ರಹಿಸುವಂತಿಲ್ಲ ಪರಿಣಾಮ ಇಂದು ನೂರಾರು ಪುಸ್ತಕಗಳು ತೋಂಟದಾರ್ಯ ಮಠ ಮತ್ತು ಲಿಂಗಾಯತ ಅಧ್ಯಯನ ಸಂಸ್ಥೆಯ ವತಿಯಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರ ಕೈಗೆಟುಕುವಂತೆ ದೊರೆತವು. ಶರಣ ಸಾಹಿತ್ಯದ ಮೇರು ಸಂಪಾದಕರಾದ ಸಾಹಿತಿ ಎಮ್.ಎಮ್ ಕಲ್ಬುರ್ಗಿಯವರ ಮರಣದ ನಂತರ ಇಂದು ಪುನರ್ ನಾಮಕರಣಗೊಂಡು
‘ಡಾ. ಎಂ ಎಂ ಕಲ್ಬುರ್ಗಿ ಅಧ್ಯಯನ ಸಂಸ್ಥೆ‘ ಎಂಬ ಹೆಸರಿನಲ್ಲಿ ಈ ಸಂಸ್ಥೆಯು ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆಯನ್ನು ಪ್ರಕಟಿಸುತ್ತಾ ಬಂದಿದೆ. ಹಲವಾರು ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಸಾಧಕರ ಕುರಿತು ಜನಸಾಮಾನ್ಯರಿಗೆ ಪುಸ್ತಕ ರೂಪದಲ್ಲಿ ದೊರೆಯುವಂತೆ ಮಾಡಿದ್ದು ಶ್ರೀಗಳ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿ. ಅವರು ಯಾರಿಗೂ  ಅಧಿಕಾರವಾಣಿಯಿಂದ ಹೀಗೆ ಮಾಡಬೇಕು ಎಂದು ಹೇಳಲಿಲ್ಲ ಬದಲಾಗಿ ತಮ್ಮೊಂದಿಗಿರುವವರನ್ನು ತಮ್ಮ ಮಹಾಮಣಿಹದಲ್ಲಿ ಪಾಲುದಾರರನ್ನಾಗಿಸಿದರು. ಸಿದ್ದರಾಮ  ಜಯಂತಿಯನ್ನು ನೆಪ ಮಾತ್ರಕ್ಕೆ ಆಚರಿಸುತ್ತಿದ್ದ ಸಮಾಜದ ನಡೆಯನ್ನು ಸುಧಾರಿಸಲು ಆ ಸಮಾಜದ ಜನರನ್ನು ಶ್ರೀಮಠಕ್ಕೆ ಕರೆದು ಅವರಿಗೆ ಉಣಬಡಿಸಿ ಅವರ ಎಂಜಲೆಲೆಯನ್ನು ತಾವೇ ಎತ್ತುವ ಮೂಲಕ ಸಮಾಜದ ಎಲ್ಲರಲ್ಲೂ ನಾವೆಲ್ಲ ಒಂದು.. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂದು ಸಾರಿದವರು ತೋಂಟದ ಸಿದ್ದಲಿಂಗ ಶ್ರೀಗಳು.

ಮೇಲ್ಜಾತಿಯ ಹೆಣ್ಣು ಮಕ್ಕಳ ಮೈಮೇಲೆ ದೇವರು ಬರುವುದಿಲ್ಲ. ಕೇವಲ ಕೆಳ ಜಾತಿಯ ಹೆಣ್ಣು ಮಕ್ಕಳು ಮಾತ್ರ ದೇವದಾಸಿ ಪದ್ಧತಿಯನ್ನು ಆಚರಿಸುವ ಹಿಂದಿನ ಮಸಲತ್ತನ್ನು ಆ ಮಹಿಳೆಯರಿಗೆ, ಆ ಸಮಾಜದವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ ಶ್ರೀಗಳು, ಅವರನ್ನು ಸಮಾಜಮುಖಿಯಾಗಿ ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ಕಾರ್ಯನಿರ್ವಹಿಸುವಲ್ಲಿ ಸಹಾಯ ಮಾಡಿ ತಮ್ಮ ಕಾರ್ಯದಲ್ಲಿ ಯಶವನ್ನು ಕಂಡರು.
ಶಿಕ್ಷಣ ಮನುಷ್ಯನ ಜೀವನದಲ್ಲಿ ವಹಿಸಬಹುದಾದ ಪಾತ್ರದ ಅರಿವಿದ್ದ ಶ್ರೀಗಳು ಜಗದ್ಗುರು ತೋಂಟದಾರ್ಯ ಶೈಕ್ಷಣಿಕ ಸಂಸ್ಥೆಯ ಅಡಿಯಲ್ಲಿ ಹಲವಾರು ಶಾಲೆಗಳನ್ನು ಕಾಲೇಜುಗಳನ್ನು, ಇಂಜಿನಿಯರಿಂಗ್ ಕಾಲೇಜ್ಗಳನ್ನೂ ಸ್ಥಾಪಿಸಿದರು. ಮನುಷ್ಯನ ಜ್ಞಾನ ವಿಕಾಸಕ್ಕೆ ಶಿಕ್ಷಣದ ಮಹತ್ತರ ಕಾಣಿಕೆಯನ್ನು ಮನಗಂಡ ಅವರು ವೃತ್ತಿಪರ ಶಿಕ್ಷಣಗಳತ್ತ ಒಲವು ತೋರಿದರು. ಉದ್ಯೋಗದ ಜೊತೆ ಜೊತೆಗೆ ಶಿಕ್ಷಣ ಮುಂದುವರಿಸುವವರಿಗೆ ದಾರಿ ತೋರಿದರು.

ಮನುಷ್ಯರಲ್ಲಿರುವ ಮೇಲು-ಕೀಳು, ಉತ್ತಮ- ಅಧಮ, ಸಿರಿತನ-ಬಡತನ ಎಂಬೆಲ್ಲ ಬೇಧ ಭಾವವನ್ನು ಅಳಿಸಿ ಹಾಕುವ ಶಕ್ತಿ ಸಾಮರ್ಥ್ಯ ಇರುವುದು ಶಿಕ್ಷಣಕ್ಕೆ ಎಂಬುದು ಸ್ವಾಮಿಗಳ ಭಾವವಾಗಿತ್ತು.
ನಮಗಿಂದು ಬೇಕಾಗಿರುವುದು ಮನುಷ್ಯತ್ವವೇ ಹೊರತು ಮಂದಿರ, ಮಸೀದಿ, ಚರ್ಚುಗಳಲ್ಲ ಎಲ್ಲಾ ಧರ್ಮದ ತಿರುಳು ಒಂದೇ. ಧರ್ಮದ ಹೆಸರಿನಲ್ಲಿ ಮುಖವಾಡ ಹಾಕಿಕೊಂಡು ಬರುವ ಜನರನ್ನು ನಂಬಿ ಮನುಷತ್ವವನ್ನು ಮರೆಯಬಾರದು. ನಿನ್ನ ಧರ್ಮವನ್ನು ಪಾಲಿಸು ಬೇರೊಂದು ಧರ್ಮವನ್ನು ಗೌರವಿಸು ಎಂಬುದು ಅವರ ತತ್ವವಾಗಿತ್ತು. ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ಚಿಂತನೆ ಅವರ ಮಾತುಗಳಲ್ಲಿ ಹಲವಾರು ಬಾರಿ ವ್ಯಕ್ತವಾಗುತ್ತಿತ್ತು. ರಂಜಾನಿನ ಮಾಸ ದಲ್ಲಿ ತೋಂಟದಾರ್ಯ ಮಠದ ಸೋಮವಾರದ ಶಿವಾನುಭವಕ್ಕೆ ಅನ್ನದಾಸೋಹದ ವ್ಯವಸ್ಥೆಯನ್ನು ಮುಸಲ್ಮಾನ ಬಂಧುಗಳು ಮಾಡುತ್ತಿದ್ದರು. ಶ್ರೀಗಳು ಕೂಡ ಅಷ್ಟೇ.. ಎಲ್ಲ ಧರ್ಮಿಯರೊಂದಿಗೆ ಅಷ್ಟೇ ಪ್ರೀತಿಯಿಂದ, ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು.
ಎಷ್ಟೋ ಬಾರಿ ಹಸಿದ ಮನುಷ್ಯನಿಗೆ ಹೊಟ್ಟೆ ತುಂಬಿಸಲಾಗದ ಧರ್ಮ ಅದಾವ ಧರ್ಮ ಎಂಬ ಸಾತ್ವಿಕ ಸಿಟ್ಟನ್ನು ಕೂಡ ಅವರು ಹೊಂದಿದ್ದರು.

ಅಂತೆಯೇ ಅವರನ್ನು ‘ಕೋಮು ಸೌಹಾರ್ದತೆಯ ಹರಿಕಾರ ‘ಎಂದು 2001ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿತ್ತು.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಮಾನ್ಯತೆ ಸಿಗಬೇಕು ಎಂಬ ಶ್ರೀಯುತ ವಿನಾಯಕ ಕೃಷ್ಣ ಗೋಕಾಕರ ವರದಿಯ ಜಾರಿಗೆಗಾಗಿ ಮೊಟ್ಟಮೊದಲು ದನಿಯೆತ್ತಿದವರು ಜಗದ್ಗುರು ತೋಂಟದ ಸಿದ್ದಲಿಂಗ ಶ್ರೀಗಳು. ಸುಮಾರು ನಾಲ್ಕು ತಿಂಗಳುಗಳ ಕಾಲ ನಡೆದ ಗೋಕಾಕ್ ವರದಿ ಜಾರಿಯ ಸಮಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ಕನ್ನಡ ನಾಡು ನುಡಿಯ ರಕ್ಷಣೆಗಾಗಿ ತೊಡಗಿಸಿಕೊಂಡ ಅದ್ವಿತೀಯ ಸ್ವಾಮೀಜಿ ನಮ್ಮ ಜಗದ್ಗುರುಗಳು.

ಅಂತಿಮವಾಗಿ ಹಲವಾರು ಶರತ್ತುಗಳನ್ನೊಳಗೊಂಡ ಗೋಕಾಕ್ ವರದಿ ಜಾರಿಯಾದಾಗ ಸಂತಸ ಪಟ್ಟವರು ಶ್ರೀಗಳು. ಕನ್ನಡ ತಾಯಿ ನಮ್ಮ ಹಡೆದ ತಾಯಿ ಎಂದ ಶ್ರೀಗಳು ಭಾರತದ ಸಂವಿಧಾನಕ್ಕೂ, ತನ್ಮೂಲಕ ಭಾರತ ದೇಶಕ್ಕೂ ಅಷ್ಟೇ ಗೌರವ ನೀಡಿದವರು. ತಾವು ಕೂಡ ಈ ದೇಶದ ಒಬ್ಬ ಪ್ರಜೆ ಎಂಬುದನ್ನು ಹಲವಾರು ಬಾರಿ ನಿರೂಪಿಸಿದವರು. ನಾಡು-ನುಡಿಯ ಪ್ರಶ್ನೆ ಬಂದಾಗ ಜಗದ್ಗುರುಗಳಾಗಿಯೂ ಕೂಡ ಹೋರಾಟಕ್ಕೆ ಮುಂದಾದವರು.

ಕಪ್ಪತ್ತ ಗುಡ್ಡದಲ್ಲಿ ಕೊರಿಯಾ ಮೂಲದ ಪೋಸ್ಕೋ ಕಂಪನಿಯು ತನ್ನ ಉಕ್ಕು ಮತ್ತು ಗಣಿಗಾರಿಕೆಯ ಸ್ಥಾವರವನ್ನು ಸ್ಥಾಪಿಸಲು ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳಲು ಶ್ರೀಗಳು ಮೊತ್ತ ಮೊದಲು ಹೋರಾಟಕ್ಕೆ ನಾಂದಿ ಹಾಡಿದರು. ಕಪ್ಪತ್ತಗುಡ್ಡವು ಔಷಧೀಯ ಸಸ್ಯಗಳ ಆಗರ ಇಲ್ಲಿ ಉಕ್ಕು ಮತ್ತು ಗಣಿಗಾರಿಕೆಯ ಸ್ಥಾವರವನ್ನು ಸ್ಥಾಪಿಸಿದರೆ ಇದು ಮತ್ತೊಂದು ಸಂಡೂರು ಆಗುತ್ತದೆ, ಇಲ್ಲಿನ ಪರಿಸರ ವಿನಾಶವಾಗುತ್ತದೆ ಹಲವಾರು ಔಷಧೀಯ ಸಸ್ಯಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತವೆ ಎಂದು ರೈತರಿಗೆ ತಿಳಿಹೇಳಿ, ಜನರನ್ನು ಹುರಿದುಂಬಿಸಿ ಅತಿ ದೊಡ್ಡ ಜನಾಂದೋಳನಕ್ಕೆ ಸಜ್ಜಾಗಿಸಿ ಉಗ್ರ ಪ್ರತಿಭಟನೆ ಮಾಡಿ ಜನಜಾಗೃತಿ ಮೂಡಿಸಿದವರು ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು.

ಅಂತಿಮವಾಗಿ ಶ್ರೀಗಳ ಹೋರಾಟಕ್ಕೆ ಮಣಿದ ಕರ್ನಾಟಕ ಸರ್ಕಾರವು ತನ್ನ ಪರವಾನಿಗೆಯನ್ನು ಹಿಂತೆಗೆದುಕೊಂಡಿತು.
ಕಳಸ ಬಂಡೂರಿ ಉಪವಾಸ ಸತ್ಯಾಗ್ರಹದಲ್ಲಿಯೂ ಕೂಡ ಪೂಜ್ಯರು ಪಾಲ್ಗೊಂಡಿದ್ದು ಹೋರಾಟಗಾರರ ನೈತಿಕ ಸ್ತೈರ್ಯವನ್ನು ಹೆಚ್ಚಿಸಿದ್ದರು. ಅಣ್ಣಾ ಹಜಾರೆ ಯವರ ಭ್ರಷ್ಟಾಚಾರ ನಿರ್ಮೂಲನ ಹೋರಾಟಕ್ಕೆ ಕೂಡ ಶ್ರೀಗಳು ತಮ್ಮ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದರು
ಸಮಾಜದ ಎಲ್ಲಾ ಜನರು ಸೇರಿ, ಹಬ್ಬದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತಹ ಡಂಬಳದ ರೊಟ್ಟಿ ಜಾತ್ರೆ ಸರ್ವಧರ್ಮ ಸಮನ್ವಯಕ್ಕೆ ಮಾದರಿ. ಈ ಜಾತ್ರೆಯಲ್ಲಿ ಶ್ರೀಗಳು ಸ್ವತಹ ತಾವೇ ನಿಂತು ಎಲ್ಲರಿಗೂ ದಾಸೋಹದ ವ್ಯವಸ್ಥೆಯನ್ನು ಮಾಡುವರು. ತಾವೇ ಪ್ರೀತಿಯಿಂದ ಎಲ್ಲರಿಗೂ ಉಣ ಬಡಿಸುವರು.
ಬಸವಾದಿ ಪ್ರಮಥರ ಕಾಯಕ ತತ್ವ, ದಾಸೋಹ ತತ್ವ ಸಿದ್ದಾಂತಗಳನ್ನು ತನ್ನದಾಗಿಸಿಕೊಂಡು ಅದರಂತೆಯೇ ನಡೆದ ಶ್ರೀಗಳಿಗೆ 2009 ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಕೊಡ ಮಾಡಿತು.

ಶ್ರೀಗಳು ಮಠದ ಏಳಿಗೆಗಾಗಿ ಶ್ರಮಿಸಿದರು, ಮಠದ ಜೊತೆ ಜೊತೆಗೆ ಸಾಹಿತ್ಯ, ಸಂಗೀತ, ವಚನ ಸಾಹಿತ್ಯ, ಸಂಸ್ಕೃತಿ, ನಾಟಕ, ಕನ್ನಡ ನಾಡು-ನುಡಿ ಗಳ ಏಳಿಗೆಗಾಗಿ, ಪರಿಸರ ರಕ್ಷಣೆಗಾಗಿ ಸದಾ ತಮ್ಮನ್ನು ತೊಡಗಿಸಿಕೊಂಡ ಶ್ರೀಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯ 1994 ರಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿತು. ಅಂತೆಯೇ 1995ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಮಹಾನವಮಿ ಹಬ್ಬದ ದಿನ ‘ಮರಣವೇ ಮಹಾನವಮಿ’ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಶ್ರೀಗಳು ಮನುಷ್ಯ ಬದುಕಿನಲ್ಲಿ ಯಾವುದನ್ನು ವ್ಯಯ ಮಾಡಬಾರದು, ಯಾವುದಕ್ಕಾಗಿ ಹೋರಾಡಬೇಕು, ಯಾವುದನ್ನು ಗೌರವಿಸಬೇಕು, ಪ್ರೀತಿಸಬೇಕು, ಯಾವುದನ್ನು ದ್ವೇಷಿಸಬೇಕು ಎಂಬ ಕುರಿತು ಹಿತ ನುಡಿಗಳನ್ನು ನುಡಿದರು. ಅಂತಿಮವಾಗಿ ಅಂದು ಅವರು ತಮ್ಮ ಭಾಷಣದಲ್ಲಿ ಹೇಳಿದ ವಿಷಯ ನಾವು ಸಾವು, ದುಃಖ ಮತ್ತು ಸೋಲುಗಳಿಗೆ ಯಾವತ್ತೂ ಸಿದ್ಧರಾಗಿರಬೇಕು ಎಂದು. ಜಾತಿ, ಮತ, ಪಂಥ, ಹೆಣ್ಣು-ಗಂಡು ಮಡಿ-ಮೈಲಿಗೆ ಮುಂತಾದ ಸೀಮೆಗಳನ್ನು ಉಲ್ಲಂಘಿಸಿ ನಾವು ಸಮತೆ, ಮಾನವತೆ ಎಂಬ ಬಂಗಾರವನ್ನು ತರಬೇಕು ಎಂದು ಶ್ರೀಗಳು ಹೇಳಿದರು. ಹೀಗೆ ಹೇಳಿದ ಶ್ರೀಗಳು ಮರುದಿನವೇ ನಮ್ಮನ್ನೆಲ್ಲ ಬಿಟ್ಟು ಕಾಲನ ಕರೆಗೆ ಓಗೊಟ್ಟು ಮರದ ಮೇಲಿನ ಹಕ್ಕಿ ತನ್ನ ರೆಕ್ಕೆ ಬಿಚ್ಚಿ ಹಾರಿ ಹೋದಷ್ಟೆ ಸಲೀಸಾಗಿ ಹೊರಟು ಬಿಟ್ಟರು.

ಶ್ರೀಗಳು ಭೌತಿಕವಾಗಿ ನಮ್ಮನ್ನಗಲಿ ಹೊರಟು ಹೋದರೂ ನಮ್ಮ ಮನಗಳಲ್ಲಿ ಎಂದಿಗೂ ಜೀವಿಸಿರುತ್ತಾರೆ. ಜೀವಿಸಿರಲೇಬೇಕು ಕೂಡ. ಹಾಗೆ ಜೀವಿಸಿರಲು ನಾವು ಮಾಡಬೇಕಾಗಿರುವುದು ಇಷ್ಟೇ ಅವರ ಎಲ್ಲಾ ಕೊನೆಯ ಆಶಯಗಳನ್ನು ಅನುಷ್ಠಾನಕ್ಕೆ ತರುವುದು. ಭ್ರಾತೃತ್ವದ, ಪ್ರೀತಿಯ ಸೌಹಾರ್ದತೆಯ ಮಾನವೀಯತೆಯ ಬದುಕು ನಮ್ಮದಾಗಿಸಿಕೊಂಡು, ಕಾಯಕ ತತ್ವವನ್ನು ಅಳವಡಿಸಿಕೊಂಡು, ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತರುವ ಮೂಲಕ ಶ್ರೀಗಳನ್ನು ಎಂದೆಂದೂ ನಮ್ಮ ಜೀವನದಲ್ಲಿ ಅಮರವಾಗಿ ಸೋಣ. ಅವರು ತೋರಿಸಿದ ದಾರಿಯಲ್ಲಿ ನಡೆಯೋಣ. ತನ್ಮೂಲಕ ಅವರ ಕಲ್ಪನೆಯ ಬಸವಾದಿ ಶರಣರು ತೋರಿದ ಮಾನವ ಧರ್ಮದ ಬೆಳಕಿನಲ್ಲಿ ಬೆಳಗೋಣ ಎಂಬ ಆಶಯದೊಂದಿಗೆ.

       – ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

ಲೇಖಕಿಯರ ಪರಿಚಯ:

ವೀಣಾ ಹೇಮಂತ್ ಗೌಡ ಪಾಟೀಲ್.

ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ ಚೈತನ್ಯ ‘ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯ ಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಇವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ