ಸಂಶಯದ ಸುಳಿ.
ಸಂಶಯದ ಸುಳಿಯಲ್ಲಿ ನೀ ಸಿಲುಕಿ
ಒಲಿದ ಸೌಭಾಗ್ಯ ಕೈಚೆಲ್ಲಿ
ಕಳೆದು ಕೊಂಡೆನೆಂದು ಕೆದಕಿ ಕೆದಕಿ
ಹುಡುಕಿದರೆ ಮರಳಿ ಸಿಗುವುದೆಲ್ಲಿ.
ಗತಿಸಿದ ಕಾಲ ಮರಳಿ ಬಾರದಿಲ್ಲಿ
ಹೆಣಗಬೇಕು ನೀನೊಬ್ಬನೇ ಭವಿಷ್ಯದಲ್ಲಿ
ಸತ್ಯ ಹುಡುಕಿದರೆ ಸಿಗದು ಸರಳ
ನಿನ್ನ ಬದುಕು ನಿನಗಾಗಿ ಅರಿವಿರಲಿ .
ಕಾಣದ್ದು ಕಂಡಂತೆ ಹೇಳುವ ಜನರಿಲ್ಲಿ
ಸರಿ ತಪ್ಪುಗಳ ಅರಿವು ಅವರಿಗಿನ್ನೆಲ್ಲಿ
ಬಿದ್ದರೆ ಖುಷಿ ಪಡುವವರ ಎದುರಿಸದೆ
ಅನುಮಾನದ ಪರದೆ ಸರಿಯುವುದಿನ್ನೆಲ್ಲಿ.
ಒಬ್ಬರ ಏಳಿಗೆ ಕುಕ್ಕುವುದು ಕಣ್ಣಲ್ಲಿ
ಸಹಿಸದ ಜನರೇ ಆಡಿಕೊಳ್ಳುವರಿಲ್ಲಿ
ಚಾಡಿ ಹೇಳಿಕೆ ಅಲಕ್ಷಿಸಿ ನಡೆಯದಿದ್ದರೆ
ನೆಮ್ಮದಿಯ ಬದುಕು ನಿನಗೆಲ್ಲಿ.
ಚುಚ್ಚು ಮಾತುಗಳು ಎಲ್ಲೆಂದರಲ್ಲಿ
ಜೀವಂತ ಕೊಲ್ಲುವರಲ್ಲ ಮಾತು ಮಾತಲ್ಲಿ
ಕನವರಿಸಿ ಕುಸಿಯದಿರು ಭಯದಿ ನೆಲಕೆ
ಸತ್ತರೆ ಕಳಂಕ ಕಳೆಯುವುದೇನಿಲ್ಲಿ.
ಸಾರವಿರದ ಸಾವಿರ ಹುಸಿ ಮಾತುಗಳಿಲ್ಲಿ
ಕೇಳಿಯೂ ಕೇಳದಂತಿರಬೇಕು ನೀನಿಲ್ಲಿ
ತಲೆಯಲ್ಲಿ ಹೊಕ್ಕು ನೂರಾರು ಯೋಚನೆಗಳು
ಕೇಡಾದರೆ ಬಂದು ಸಂತೈಸುವರಾರಿಲ್ಲಿ.
ಸತ್ಯ ಹೇಳುವೆ ಕಿವಿಗೊಟ್ಟು ಕೇಳಿಲ್ಲಿ
ಸಂಶಯದ ರೋಗಕ್ಕೆ ಮದ್ದಿನ್ನೆಲ್ಲಿ
ಗೊಂದಲಗಳ ಬಿಟ್ಟಾಕಿ ನಿರಾಳತೆ ಹೊಂದು
ಮಹಾರಾಜ ನೀನೇ ಈ ಲೋಕದಲ್ಲಿ .
ಡಾ.ಮಹೇಂದ್ರ ಕುರ್ಡಿ.